ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮಣ್ಣಿಗೆ ಕನ್ನಡನಾಡಿನ ಗೊಬ್ಬರ

By * ಶಾಮ್
|
Google Oneindia Kannada News

Manu Baligar interview by Sham
ಬೆಂಗಳೂರು, ಆ. 25 : "ತಾನು ನಂಬಿದ ಧ್ಯೇಯ ಮತ್ತು ಉದ್ದೇಶಗಳಿಗೆ ಸಂಸ್ಥೆ ಬದ್ದವಾಗಿರಬೇಕು. ಸಂಸ್ಥೆಯ ನಾನಾ ವಿಭಾಗಗಳಲ್ಲಿ ದುಡಿಯುವ ಅದರ ಸ್ವಯಂಸೇವಕರು ಮತ್ತು ಆಯಕಟ್ಟಿನ ಸ್ಥಾನಗಳಲ್ಲಿ ಕೆಲಸ ಮಾಡುವ ಮುಂದಾಳುಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅಷ್ಟೇ ಸಾಕು. ಒಟ್ಟಾರೆ ಯಶಸ್ಸಿನ ಗುಟ್ಟು ಅಲ್ಲೇ ಇರ್ತದೆ. ಈ ನೀತಿಯನ್ನು ಸಡಿಲಗೊಳಿಸಿ ಕ್ಷಣಕ್ಷಣಕ್ಕೂ ಅಯಾಚಿತವಾಗಿ ಬರುವ ಸಲಹೆಗಳನ್ನು ಅಳವಡಿಸಿಕೊಳ್ಳುತ್ತಲೇ ಸಾಗಿದರೆ ಗೋಜಲುಗೋಜಲಾಗುವುದು ನಿಸ್ಸಂಶಯ."

ಹೀಗೆಂದು ಹೇಳಿದವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್. ಸೆಪ್ಟೆಂಬರ್ 3ರಿಂದ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಮಂಗಳವಾರ ಅವರು ಬೆಂಗಳೂರಿನಲ್ಲಿ ದಟ್ಸ್ ಕನ್ನಡದೊಂದಿಗೆ ಮಾತನಾಡುತ್ತಾ ಮೇಲಿನಂತೆ ಅಭಿಪ್ರಾಯಪಟ್ಟರು. ಅಕ್ಕ ಸಮ್ಮೇಳನಕ್ಕೆ ರಾಜ್ಯ ಸರಕಾರದ ವತಿಯಿಂದ ಅಮೆರಿಕಾಗೆ ತೆರಳುತ್ತಿರುವ ಸುಮಾರು 55 ಮಂದಿ ಕವಿ, ಕಲಾವಿದರು ಮತ್ತು ಅಧಿಕಾರಿಗಳ ತಂಡದ ನೇತೃತ್ವ ವಹಿಸಿರುವ ಅವರು ಸಮ್ಮೇಳನದ ಆಶಯ ಮತ್ತು ಕರ್ನಾಟಕ ಸರಕಾರದ ಸಹಭಾಗಿತ್ವವನ್ನು ಕುರಿತಂತೆ ಸುದೀರ್ಘವಾಗಿ ಮಾತನಾಡಿದರು.

"ಈ ಹಿಂದೆ ಜರುಗಿದ ಎರಡು ಅಕ್ಕ ಸಮ್ಮೇಳನಗಳಲ್ಲಿ ನಾನು ಭಾಗವಹಿಸಿದ್ದೇನೆ. ಅನಿವಾಸಿ ಕನ್ನಡಿಗರ ಮಾತೃಭಾಷಾ ಪ್ರೇಮ ಮತ್ತು ಕನ್ನಡೋತ್ಸಾಹಗಳನ್ನು ಕಂಡು ಬೆರಗಾದವರಲ್ಲಿ ನಾನೂ ಒಬ್ಬ. ದಶಕಗಳ ಹಿಂದೆ ವಲಸೆ ಹೋದರೂ ಅನೇಕ ಕನ್ನಡಿಗರ ಕಣ್ಣುಗಳಲ್ಲಿ ಕನ್ನಡದ ಬಿಂಬಗಳು ಸ್ಥಾಯಿಯಾಗಿರುವುದನ್ನು ಕಂಡು ಪುಳಕಿತನಾಗಿದ್ದೇನೆ. ಸಮ್ಮೇಳನ ಅರ್ಥಪೂರ್ಣವಾಗುವ ದಿಶೆಯಲ್ಲಿ ಕರ್ನಾಟಕ ಸರಕಾರದ ವತಿಯಿಂದ ಶುಭ ಹಾರೈಕೆಗಳು ಹಾಗೂ ನಮ್ಮ ಕಲಾವಿದರ ವೃತ್ತಿ ನೈಪುಣ್ಯ ಪ್ರತಿಯೊಬ್ಬ ಅಮೆರಿಕನ್ನಡಿಗನನ್ನೂ ಸಾಂಸೃತಿಕವಾಗಿ ಬೆರಗುಗೊಳಿಸುತ್ತದೆ ಎಂಬ ಭರವಸೆ ನನಗಿದೆ. ಹಿಂದೆ ನಡೆದ ಸಮ್ಮೇಳನಗಳ ಓರೆಕೋರೆಗಳನ್ನು ತಿದ್ದಿಕೊಂಡು ಇನ್ನಷ್ಟು ಆತ್ಮ ವಿಶ್ವಾಸದಿಂದ ಅಕ್ಕ ಆಯೋಜಕರು ಕನ್ನಡ ಸಮ್ಮೇಳನದ ಗೆಜ್ಜೆ ಕಟ್ಟಿಕೊಳ್ಳುತ್ತಾರೆ" ಎಂಬ ಆಶಾಭಾವನೆಯನ್ನು ಬಳಿಗಾರ್ ವ್ಯಕ್ತಪಡಿಸಿದರು.

ವಿದೇಶೀ ನೆಲದಲ್ಲಿ ಜರಗುವ ಕನ್ನಡ ಸಂಭ್ರಮಗಳನ್ನು ಪ್ರೋತ್ಸಾಹಿಸುವುದರಲ್ಲಿ ಸರಕಾರ ಯಾವತ್ತೂ ಹಿಂದೆ ಬಿದ್ದಿಲ್ಲ. ಅಕ್ಕದ ಈ ಸಮ್ಮೇಳನಕ್ಕಾಗಿ ಸರಕಾರ 40ರಿಂದ 45 ಲಕ್ಷ ರು.ಗಳವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ. ಇದಲ್ಲದೆ ಪಾನೀಯ ನಿಗಮ, ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ವಾರ್ತಾ ಮತ್ತು ಪ್ರಚಾರ ಇಲಾಖೆಗಳಲ್ಲದೆ ಇನ್ನೂ ಕೆಲವು ಸರಕಾರಿ ಸಂಸ್ಥೆಗಳು ಸಮ್ಮೇಳನಕ್ಕೆ ಯಥೋಚಿತ ಕಾಣಿಕೆಗಳನ್ನು ಕೊಡಲು ಮುಂದಾಗಿವೆ ಎಂದೂ ಕೇಳಿಪಟ್ಟಿದ್ದೇನೆ. ಜತೆಗೆ, ಹತ್ತಿರ ಹತ್ತಿರ 60 ಮಂದಿ ಕಲಾವಿದರು ಅಮೆರಿಕಾಗೆ ಹೋಗಿ ಬರುವ ಖರ್ಚು ವೆಚ್ಚಗಳನ್ನು ಸರಕಾರ ಭರಿಸುತ್ತದೆ. ಒಟ್ಟಾರೆ ಒಂದು ಕೋಟಿ ರುಪಾಯಿಗಳಷ್ಟು ಧನ ವ್ಯಯ ರಾಜ್ಯದಿಂದ ಸಮರ್ಪಣೆ ಆಗುತ್ತದೆ ಎಂದು ಮನು ಬಳಿಗಾರ್ ವಿವರಿಸಿದರು.

ಅಕ್ಕ ಸಂಸ್ಥೆ ನೇರವಾಗಿ 50 ಮಂದಿ ಕಲಾವಿದರಿಗೆ ಆಮಂತ್ರಣ ನೀಡಿದೆ. ಅವರಲ್ಲಿ ಬಹುತೇಕ ಎಲ್ಲರಿಗೂ ವಿಸಾ ಸಿಕ್ಕಿದೆ ಎಂದೂ ತಿಳಿದಿದ್ದೇನೆ. ಸಂತೋಷ. ಆದರೆ, ಸರಕಾರದ ಪಟ್ಟಿಯಲ್ಲಿದ್ದ ಒಟ್ಟು 70 ಹೆಸರುಗಳಲ್ಲಿ 16 ಮಂದಿಗೆ ವಿಸಾ ಗೋತಾ ಆಗಿದೆ. ಇದೊಂದು ಹಿನ್ನಡೆ. ಚಿಟ್ಟಾಣಿ ಯಕ್ಷಗಾನದಲ್ಲಿ ತಂಡದಲ್ಲಿ ಮೂವರು ಕಲಾವಿದರಿದ್ದಾರೆ. ಒಬ್ಬರಿಗೆ ವಿಸಾ ಮಂಜೂರಾಗಿದ್ದರೆ ಇನ್ನಿಬ್ಬರಿಗೆ ಇಲ್ಲ ಎನ್ನುವಂಥ ವರದಿ ಬಂದಿದೆ. ಇಂಥ ಆಕಸ್ಮಿಕಗಳನ್ನು ದಾಟಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆ ಕಟ್ಟಬೇಕಾಗಿರುವುದು ಸಮ್ಮೇಳನ ಸಮಿತಿಯ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು ಮನು.


ಇತ್ತೀಚೆಗೆ ಬೃಂದಾವನ ಕನ್ನಡ ಕೂಟಕ್ಕೆ ತಾವು ಭೇಟಿಕೊಟ್ಟ ಸಂದರ್ಭವನ್ನು ಬಳಿಗಾರ್ ಸ್ಮರಿಸಿಕೊಂಡರು. ಅಕ್ಕದ ಆಶಯ ಗೀತೆಯ ವಿಡಿಯೋ ಬಿಡುಗಡೆಯನ್ನು ಮಾಡಿದವರೂ ಅವರೇ. ಬಳಿಗಾರ್ ಮತ್ತು ಕನ್ನಡ ಇಲಾಖೆಯ ಕಾರ್ಯದರ್ಶಿ ಜಯಚಾಮರಾಜೇ ಅರಸ್ ಜತೆಯಾಗಿ ಅಕ್ಕ ಸಮ್ಮೇಳನದ ಸಂಯೋಜನಾಧಿಕಾರಿಗಳಾದ ಪ್ರಸನ್ನ ಕುಮಾರ್, ಮಧು ರಂಗಯ್ಯ, ಶಂಕರ್ ಶೆಟ್ಟಿ ಮತ್ತು ಬೃಂದಾವನದ ಅಧ್ಯಕ್ಷೆ ಉಷಾ ಕುಮಾರ್ ಅವರುಗಳೊಂದಿಗೆ ಬರಲಿರುವ ಸಮ್ಮೇಳನದ ರೂಪರೇಷೆಗಳನ್ನು ಸ್ಥೂಲವಾಗಿ ಚರ್ಚಿಸಿದುದನ್ನು ವಿವರಿಸಿದರು.

ಊಟ, ವಸತಿ, ಸಾರಿಗೆ ಸಮಿತಿಗಳ ಕಾರ್ಯಕ್ಷಮತೆ ಬಗೆಗೆ ತಮಗೆ ಯಾವ ಅನುಮಾನವೂ ಇಲ್ಲ. ಆದರೆ, ಅಕ್ಕ ತಾನು ನೇರವಾಗಿ ಕರೆಯಿಸಿಕೊಂಡ ಕಲಾವಿದರು ಮತ್ತು ಸರಕಾರವನ್ನು ಪ್ರತಿನಿಧಿಸುವ ಕಲಾವಿದರ ತಂಡ ನೀಡುವ ಕಾರ್ಯಕ್ರಮಗಳು ಪರಸ್ಪರ ಪೂರಕವಾಗಿರಬೇಕಾದುದರ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಒಂದಕ್ಕೊಂದು ಓವರ್ ಲ್ಯಾಪ್ ಆಗದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಾಧನೆ ಓರಣವಾಗಿ, ಒಪ್ಪವಾಗಿ ಇರಬೇಕೆನ್ನುವುದು ಬಳಿಗಾರ್ ಅವರ ಇಂಗಿತ.

ಸೆಪ್ಟೆಂಬರ್ 27ರಿಂದ ಮೊದಲುಗೊಂಡಂತೆ ಆಹ್ವಾನಿತರ ಗಣ್ಯರ ವಿವಿಧ ತಂಡಗಳ ಅಮೆರಿಕಾ ಪ್ರಯಾಣ ಆರಂಭವಾಗುತ್ತದೆ. ಮನು ಬಳಿಗಾರ್, ಮುಖ್ಯಮಂತ್ರಿ ಚಂದ್ರು, ಜಯಚಾಮರಾಜೇ ಅರಸ್, ಭಾವಿಕಟ್ಟಿ ಅವರುಗಳನ್ನೊಳಗೊಂಡ ಅಧಿಕಾರಿಗಳ ತಂಡ ಕಲಾವಿದರ ಸಮೂಹದೊಂದಿಗೆ ಸೆ. 1ರಂದು ಏರ್ ಇಂಡಿಯಾ ವಿಮಾನದಲ್ಲಿ ನ್ಯೂಯಾರ್ಕ್ ನಿಲ್ದಾಣದತ್ತ ಪ್ರಯಾಣ ಬೆಳಸುತ್ತಾರೆ.

ಇನ್ನು, ಪಕ್ಷಬೇಧವಿಲ್ಲದೆ ರಾಜಕಾರಣಿಗಳ ದೊಡ್ಡ ಹಿಂಡು ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುತ್ತಿದೆ ಎಂಬ ಸುದ್ದಿಯನ್ನು ದಟ್ಸ್ ಕನ್ನಡ ವರದಿಗಾರರು ತಂದಿದ್ದಾರೆ. ರಾಜಕಾರಣಿಗಳಲ್ಲಿ ಎಂಎಲ್ಎಗಳೂ ಎಂಎಲ್ ಸಿಗಳೂ, ಮಂತ್ರಿಗಳೂ, ನಿಗಮ ಮಂಡಳಿಗಳ ಅಧ್ಯಕ್ಷರೂ ಇರುತ್ತಾರೆ. "ವೀಸಾ ಆಗೈತಿ, ಪಕ್ಷದ ಅಧ್ಯಕ್ಷರೂ ಓಕೆ ಮಾಡ್ಯಾರ. ನಮ್ಮ ರೊಕ್ಕದಲ್ಲಿ ಕನ್ನಡ ಸಮ್ಮೇಳನ ನೋಡಲು ಲುಫ್ತಾನ್ಸಾದಲ್ಲಿ ಪ್ರಯಾಣ ಮಾಡುವುದು ಖರೆ" ಎಂದು ಉತ್ತರ ಕರ್ನಾಟಕದ ಇಬ್ಬರು ಶಾಸಕರು ಶಾಸಕರ ಭವನದ ಮೊಗಸಾಲೆಯಲ್ಲಿ ವರದಿಗಾರರಿಗೆ ಹೇಳಿದ್ದಾರೆ.

ದಟ್ಸ್ ಕನ್ನಡ ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X