• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವಿಕ ಸಮ್ಮೇಳನ : ನನ್ನ ಅನಿಸಿಕೆಗಳು

By * ಶ್ರೀನಿವಾಸ ಭಟ್, ಲಾಸ್ ಏಂಜಲಿಸ್
|

Navika conference review
ನಾವಿಕದ ಅಧ್ಯಕ್ಷ ಶ್ರೀಧರ ಅಯ್ಯಂಗಾರರಿಗೆ ಧನ್ಯವಾದಗಳು. ಎರಡು ಕಾರಣಗಳಿಗಾಗಿ: ಮೊದಲನೆಯದಾಗಿ ಆರು ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಸಮ್ಮೇಳನದ ದಿನ, ಸ್ಥಳ ನಿರ್ಧರಿಸಿ ಕಾರ್ಯಕ್ರಮ ಸಾಂಗವಾಗಿಸಿದ ಇವರ ಕಾರ್ಯತತ್ಪರತೆ ಮತ್ತು ಮುಂದಾಳುತನ ಅದಕ್ಕಿಂತ ಹೆಚ್ಚಾಗಿ ವಿರುದ್ಧ ದಿಕ್ಕುಗಳಲ್ಲಿ ಚಿಂತಿಸುವ ಹಲವರನ್ನು ಒಂದುಗೂಡಿಸಿದ ಚಾಣಾಕ್ಷತನಕ್ಕೆ. ಎರಡನೆಯದಾಗಿ, ದಿನ ನಿತ್ಯದ ತಮ್ಮ ವೃತ್ತಿಯಲ್ಲಿ ಮಾಡುವ ಹೃದಯ ಚಿಕಿತ್ಸೆಯಂತೆಯೇ ಒಂದು ದೊಡ್ಡ ಸಮ್ಮೇಳನವನ್ನೂ ಸಹ ಮಾಡಬಹುದೆಂದು ಎಲ್ಲರಿಗೂ ತೋರಿಸಿಕೊಟ್ಟದ್ದಕ್ಕಾಗಿ!

ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ನಾನು ಮಾಡುವವನಲ್ಲ. ಹುಳಿ ದ್ರಾಕ್ಷಿಯ ಅನುಭವವಲ್ಲ, Monday Night Quarter ಸಹ ಇದಲ್ಲ. ಅತಿ ಸನಿಹದಿಂದ ಭಾಗವಹಿಸಿ, ಎಳ್ಳಷ್ಟು ಸಹಾಯಹಸ್ತ ನೀಡಿ, ಇದರಿಂದ ಕಿಂಚಿತ್ತಾದರು ಒಳಿತಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ. ಮುಂಬರುವ ಅಕ್ಕ ಸಮ್ಮೇಳನಕ್ಕೂ ನನ್ನ ಅನಿಸಿಕೆಗಳು ಮುಖ್ಯವಾಗುವುದಾದರೆ ಸಂತೋಷ.

ಶ್ರೀ ಅಯ್ಯಂಗಾರರು ಸಮ್ಮೇಳನದಲ್ಲಿ ಭಾಗಿಯಾದ ಕರ್ನಾಟಕ ಸರಕಾರದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ನಾವಿಕದ ಪದಾಧಿಕಾರಿಗಳಿಗೆ, ಪರದೆಯ ಹಿಂದೆ ದುಡಿದವರಿಗೆ, ಶ್ರಮವಹಿಸಿದ ಸ್ವಂಯಂಸೇವಕರಿಗೆ, ಕರ್ನಾಟಕದಿಂದ ಬಂದ ಹೆಸರಾಂತ ಕಲಾವಿದರುಗಳಿಗೆ, ಸ್ಥಳೀಯ ಕೂಟದ ಕಲಾವಿದರುಗಳಿಗೆ, ಮೇಲಾಗಿ 175 ಡಾಲರುಗಳನ್ನು ತೆತ್ತು ಬಂದ ಪ್ರೇಕ್ಷಕರಿಗೂ ಮರೆಯಲಾರದ ಪಾಠ ಕಲಿಸಿದರು. ಇದನ್ನು ಮನದಟ್ಟು ಮಾಡುವ ಹೊಣೆ ನನಗಿಂತ ಹೆಚ್ಚಾಗಿ ಈ ಮೇಳವನ್ನು ವೀಕ್ಷಿಸಲು ಬಂದ ಹಿರಿಯ ಪತ್ರಿಕೋದ್ಯಮಿಗಳ ಹಾಗೂ ಚಿಂತಕರ ಮೇಲಿದೆ. ಈ ದಿಸೆಯಲ್ಲಿ ನನ್ನ ಕೆಲವು ಅನಿಸಿಕೆಗಳು:

* ಸರಕಾರದ ವತಿಯಿಂದ ಬರುವ ಕಲಾವಿದರು ಇಲ್ಲಿಗೆ ಬರುವ ಮೊದಲೇ ತಮಗೆ ಅನುವುಮಾಡಿಕೊಟ್ಟ ಪ್ರದರ್ಶನದ ಸಮಯ, ನಿಗದಿ ಮಾಡಿದ ಅವಧಿ, ದೊರೆಯುವ ಸಂಭಾವನೆ ಮತ್ತು ಅವಕಾಶಗಳನ್ನು ಅರಿತಿರುವುದು ಕ್ಷೇಮ. ಇಲ್ಲವಾದಲ್ಲಿ ಕಾರ್ಯಕ್ರಮ ಸಮಿತಿಯವರು 30 ನಿಮಿಷಗಳೆಂದು ತಯಾರಿ ನಡೆಸಿ, ಕಲಾಕಾರರು ಮೂರು ಗಂಟೆಯೆಂದೆಣಿಸಿ, ವ್ಯವಸ್ಥಾಪಕರನ್ನು ವೃಥಾ ಕಷ್ಟಕ್ಕೀಡುಮಾಡಬೇಕಾದ ಪರಿಸ್ಥಿತಿ ಹಾಗೂ ಅತಿ ನಿರೀಕ್ಷೆಯಿಂದ ಬಂದ ನನ್ನಂತಹ ಪ್ರೇಕ್ಷಕರನ್ನು ನಿರಾಸೆಗೊಳಿಸುವುದನ್ನು ತಪ್ಪಿಸಬಹುದು.

* ತಾಯಿನಾಡಿನ ಹೆಸರಾಂತ ಕಲಾವಿದರನ್ನು ನೋಡಲೋಸುಗ ಬಣ್ಣಬಣ್ಣವಾಗಿ ಕಳುಹಿಸುವ ಈಮೈಲ್ ಗಳಿಗೆ ಮಾರುಹೋಗಿ ಕೊನೆಯಲ್ಲಿ ಹಿತ್ತಲಗಿಡವನ್ನೇ ಅರೆದುಕುಡಿಯುವ, ಅಷ್ಟೇನೂ ತಯಾರಿಕೂಡಾ ನಡೆಸದ (ಯಾವೊಂದು ಅಳತೆಗೋಲೂ ಇಲ್ಲದ) ಸದಾಕಾಲ ಇಲ್ಲಿನ ಕನ್ನಡ ಕೂಟಗಳಲ್ಲಿ ಬಿಟ್ಟಿಯಾಗಿ ನೋಡಬಹುದಾದ ಸಾಮಾನ್ಯ ಮಟ್ಟದ ಕಾರ್ಯಕ್ರಮಗಳನ್ನೇ ನೋಡಿ ನಿರಾಶರಾಗಬೇಕಾಗುತ್ತದೆ. ಮುಖ್ಯ ಸಭಾಂಗಣದಲ್ಲಿ, ಪ್ರಾಮುಖ್ಯವೇಳೆಯಲ್ಲಿ ನಿಗದಿಪಡಿಸಿದ ಕಾರ್ಯಕ್ರಮಗಳ ರೂಪ ರೇಷೆಗಳು ಹಾಗೂ, ಅಂತ್ಯದಲ್ಲಿ ಓಡಿಸಿದ ವಂದನಾರ್ಪಣೆ Cultural committeeಯಲ್ಲಿರುವವರ ಹೆಸರುಗಳನ್ನು ನೋಡಿ ಬಂದ ನನಗೆ ಸ್ವಲ್ಪ ನಿರಾಸೆಯೇ ಆಗಿತ್ತು.

* ದೂರದಿಂದ ಬಂದ ಕಲಾವಿದರಿಗೆ ಆಕಸ್ಮಾತ್ ಸಭಾಭಂಗ ಆದರೆ ಅದನ್ನು ಪ್ರತಿಭಟಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರತಿನಿಧಿಯ ಕರ್ತವ್ಯ. ಅದರಲ್ಲೂ 175 ಡಾಲರು ಕೊಟ್ಟು ಪ್ರವೇಶಮಾಡಿದವರ ಆದ್ಯ ಕರ್ತವ್ಯ. ಒಂದುವೇಳೆ ಈ ಕಲಾವಿದರ ಖರ್ಚನ್ನು ಕರ್ನಾಟಕ ಸರಕಾರವೇ ಭರಿಸಿದಲ್ಲಿ ಇದು ಅಕ್ಷಮ್ಯ ಅಪರಾಧ.

* ಅಂತ್ಯದಲ್ಲಿ ಅಂತಹ ಕಲಾವಿದರನ್ನು ಸ್ಥಳೀಯ ಕನ್ನಡ ಕೂಟಗಳೇ ಅರ್ಜೆಂಟಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಕಾಡಿ ಬೇಡಿ ಪ್ರೋತ್ಸಾಹಿಸಬೇಕಾಗುತ್ತದೆ. ಕಾರ್ಯಕ್ರಮಗಳ ನಡುವಿನಲ್ಲಿ ಮಾತ್ರ ಈ ಜಾನಪದ ಕಲಾವಿದರನ್ನು ಫಿಲ್ಲರ್ ಆಗಿ ಬಳಸುವುದನ್ನು ಮುಂದಾದರು ನಮ್ಮ ಸರಕಾರ ತಪ್ಪಿಸಬೇಕು. ಒಂದೇ ದಿನ ಒಬ್ಬಟ್ಟು, ಲಾಡು, ಪೇಣಿ, ಮೈಸೂರುಪಾಕು, ಚಿರೋಟಿ, ಜಿಲೇಬಿ, ಹಲ್ವಗಳನ್ನು ಎಷ್ಟು ತಿನ್ನಲು ಸಾಧ್ಯ? ಎಷ್ಟೇ ರುಚಿ ಇದ್ದರೂ!

* ಕರ್ನಾಟಕ ಸರ್ಕಾರ ಅನಿವಾಸಿ ಕನ್ನಡಿಗರ ಕಾರ್ಯಕ್ರಮಗಳಿಗೆ ವೆಚ್ಚ ಮಾಡುವ ಹಣವನ್ನು, ಬಹುಶಃ ತಿಂಗಳಿಗೊಂದು ಬಾರಿ ಒಂದೊಂದು ಕಲಾವಿದರ ಸಮೂಹವನ್ನು ಇಲ್ಲಿನ ಕನ್ನಡ ಕೂಟಗಳಲ್ಲಿ ಸುತ್ತುವ ವ್ಯವಸ್ತೆಯನ್ನು ಮಾಡುವಲ್ಲಿ ಉಪಯೋಗಿಸಬಹುದು. ಅಂದಮಾತ್ರಕ್ಕೆ ಅಕ್ಕ ಮತ್ತು ನಾವಿಕದಂತಹ ಸಂಭ್ರಮಗಳಿಗೆ ಯಾರನ್ನೂ ಕಳುಹಿಸಬೇಡಿ ಎನ್ನುವುದು ಖಂಡಿತಾ ನನ್ನ ವಾದವಲ್ಲ. ದೊರೆಯುವ ಸಮಯಾವಕಾಶಕ್ಕೆ ಅನುಗುಣವಾಗಿ ಹೆಸರಾಂತ ಕಲಾವಿದರನ್ನು ಕಳುಹಿಸಿ, ಗುಂಪಿನಲ್ಲಿ ಗೋವಿಂದ ಬೇಡ.

* ರಾಜಕಾರಿಣಿಗಳ ಸಂಖ್ಯೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿಟ್ಟ ನಾವಿಕ ಸಮ್ಮೇಳನದ ಎಲ್ಲ ಪದಾಧಿಕಾರಿಗಳು ಅಭಿನಂದನಾರ್ಹರು.

* ಬಿಡುವಿಲ್ಲದಿದ್ದರೂ, ಬಿಡುವು ಮಾಡಿಕೊಂಡು ಆಮಂತ್ರಣದ ಕರೆಗೆ ಓಗೊಟ್ಟು ಶ್ರೀಸಾಮಾನ್ಯರಂತೆ ಬಂದು ಶ್ರೀಸಾಮಾನ್ಯರಂತೆ ಇದ್ದು ನಮ್ಮೆಲ್ಲರೊಳಗೊಂದಾಗಿದ್ದ ಗಣ್ಯರು ನಿಜಕ್ಕೂ ಮಾದರಿ ಕನ್ನಡಿಗರು ಎನಿಸಿದರು. ಇಲ್ಲಿಯವರೇ ಆದ, ಆಗಿದ್ದ ಜನಾರ್ಧನ ಸ್ವಾಮಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸುಧಾಕರ ರಾವ್ ಮತ್ತಿತರ ನಡೆನುಡಿ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು.

* ಸಾಹಿತ್ಯಕ್ಕೆ ಸಂಬಂಧಪಟ್ಟ ಚರ್ಚಾಗೋಷ್ಠಿಗಳು ನಿರೀಕ್ಷೆಗೂ ಮೀರಿ ಪ್ರೇಕ್ಷಕರನ್ನು ಆಕರ್ಷಿಸಿದ್ದವು. ಇಂತಹ ಕಾರ್ಯಕ್ರಮಗಳು ನಿಜವಾಗಿಯೂ ಒಂದು ಅಥವಾ ಎರಡು ಕನ್ನಡ ಕೂಟಗಳು ಸೇರಿ ಮಾಡಬಹುದಾದ ಕೆಲಸವಲ್ಲ. ಈ ದಿಸೆಯಲ್ಲಿ ಅಕ್ಕ, ನಾವಿಕದಂತಹ ಸಂಸ್ಥೆಗಳಿಗೆ ಒಳ್ಳೆಯ ಅವಕಾಶ ಇದೆ, ಅದರಲ್ಲೂ ಸ್ಥಳೀಯ ಬರಹಗಾರರನ್ನು ಉತ್ತೇಜಿಸಿದಲ್ಲಿ.

* ಕರ್ನಾಟಕದಿಂದ ಬಂದ ಹೆಸರಾಂತ ಪತ್ರಿಕೋದ್ಯಮಿಗಳ ಅತಿ ಮುಖ್ಯವಾದ ಹೊಣೆ ಇಲ್ಲಿನ ಹಾಗೂ ಕರ್ಣಾಟಕದ ಜನತೆಗೆ ಯಾವೊಂದೂ ಭಾವೋದ್ರೇಕಗಳಿಗೂ ಒಳಗಾಗದೆ (ನನ್ನಂತೆ!) ಇಂತಹ ಸಮಾರಂಭಗಳಿಗೆ ಕರ್ನಾಟಕ ಸರಕಾರ ವಿನಿಯೋಗಿಸುವ ಸಾರ್ವಜನಿಕ ಹಣದ ವಿವರವನ್ನು ಒದಗಿಸುವುದು, ಹಾಗು ಸಾಧ್ಯವಾದಷ್ಟು ಆ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳುವುದು, ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ರೂಪಿಸುವಲ್ಲಿ ಸಕ್ರಿಯ ಹಾಗೂ ಸಮಯೋಚಿತ ಸಲಹೆಗಳನ್ನು ನೀಡುವುದು.

* ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಮ್ಮ ಕರ್ನಾಟಕ ಸರಕಾರ ಮಾಡುತ್ತಿರುವ ಹಣದ ಹಾಗು ಕಲಾವಿದರ ಸೇವೆಯನ್ನು ಉಪಯೋಗಿಸಿಕೊಳ್ಳುವುದು ಇಲ್ಲಿ ನೆಲಸಿರುವ ಎಲ್ಲ ಕನ್ನಡಿಗರ ಜವಾಬ್ದಾರಿ ಮತ್ತು ಕನ್ನಡ ಕೂಟಗಳ ನೈತಿಕ ಹೊಣೆ. ಇಲ್ಲವಾದಲ್ಲಿ ಕೆಲವೇ ವ್ಯಕ್ತಿಗಳು, ಕರ್ಣಾಟಕದ ರಾಜಕೀಯದಂತೆ ವೈಯುಕ್ತಿಕ ಮತ್ತು ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಳೆಸಿಕೊಂಡು ಸರಕಾರಿ ಹಣವನ್ನು ಪೋಲುಮಾಡುವ ಸಂತೆಗಳಾಗುವುದರಲ್ಲಿ ಸಂದೇಹವೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X