ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕಳನ್ನು ಹಾಡಿಹೊಗಳಿದ ಅರಸ್ ಮತ್ತು ಮನು ಬಳಿಗಾರ್

By * ವರದಿ : ಪುಷ್ಪಪಾದ
|
Google Oneindia Kannada News

AKKA theme song launch
ನ್ಯೂ ಜೆರ್ಸಿಯ ಬೃಂದಾವನದ ಆಶ್ರಯದಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ನಡೆಸಲಾಗುತ್ತಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಪ್ರಸಿದ್ಧ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ವಿಶೇಷವಾಗಿ ರಚಿಸಿರುವ ಎರಡು ಗೀತೆಗಳ ಸಿ.ಡಿ. ಧ್ವನಿಮುದ್ರಣವನ್ನು ಬಿಡುಗಡೆ ಮಾಡಲಾಯ್ತು.

ಗುರುವಾರ ಜುಲೈ 8ರಂದು ನ್ಯೂ ಜೆರ್ಸಿಯ ಎಡಿಸನ್‌ನಲ್ಲಿರುವ ಶ್ರೀ ಕೃಷ್ಣ ವೃಂದಾವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಹಾಗು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಜಯರಾಮರಾಜೇ ಅರಸ್, ಐಎಎಸ್ ಅವರು ಸಿ.ಡಿ.ಯನ್ನು ಬಿಡುಗಡೆ ಮಾಡಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಅವರು ಎರಡೂ ಕವಿತೆಗಳನ್ನು ಸಭಿಕರಿಗೆ ಪಠಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅರಸ್ ಅವರು "ಅಮೆರಿಕಾದಲ್ಲಿದ್ದು ಕನ್ನಡ ಭಾಷೆ ಹಾಗು ನಾಡಿನ ಬಗ್ಗೆ ನಿಮಗಿರುವ ಅಭಿಮಾನ, ವಿಶ್ವಾಸ, ಉತ್ಸಾಹ ಕಂಡು ಒಂದು "ಮಿನಿ ಕನ್ನಡ ನಾಡನ್ನೇ" ಅಮೆರಿಕದಲ್ಲಿ ಸ್ಥಾಪಿಸಿರುವ ಭಾವನೆ ನಮಗಾಗಿದೆ" ಎಂದು ಸಂತೋಷ ವ್ಯಕ್ತಪಡಿಸಿದರು.

ಮೊಟ್ಟ ಮೊದಲ ಬಾರಿಗೆ ಅಕ್ಕ ಸಮ್ಮೇಳನದ ಮುನ್ನವೇ ಕಾರ್ಯಕಾರಿ ಸಮಿತಿಯ ಜೊತೆ ಸಮ್ಮೇಳನ ನಡೆಯುವ ಸ್ಥಳದಲ್ಲೇ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು ತಮಗೆ ಸಂತೋಷವಾಗಿದೆ ಹಾಗೂ ಕರ್ನಾಟಕ ಸರ್ಕಾರ ಈ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದು, ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಒಂದು ಅತ್ಯಂತ ಯಶಸ್ವಿ ಸಮ್ಮೇಳನ ಆಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅರಸ್ ಅವರು ಅಭಿಪ್ರಾಯಪಟ್ಟರು.

ಡಾ. ಎಚ್ಚೆಸ್ವಿ ಅವರ ಸಾಹಿತ್ಯ, ಸುನೀತ ಅನಂತಸ್ವಾಮಿಯವರ ರಾಗ ಸಂಯೋಜನೆ, ಬಿ.ವಿ. ಶ್ರೀನಿವಾಸ್ ರವರ ಸಂಯೋಜನೆಯಲ್ಲಿ ಕರ್ನಾಟಕದ ಗಾನ ಕೋಗಿಲೆಗಳಾದ ಬಿ. ಜಯಶ್ರೀ, ಮಂಗಳ ರವಿ, ಕುಮಾರಿ ನಂದಿನಿ ರಾವ್, ಶಂಕರ್ ಶಾನ್ ಭಾಗ್ ಹಾಗು ಉದಯ್ ಅಂಕೋಲ ಅವರ ಸುಶ್ರಾವ್ಯ ಧ್ವನಿಗಳಲ್ಲಿ ಆಶಯ ಗೀತೆಯ ಸಿಡಿಗಳು ಅತ್ಯಂತ ಮನೋಹರವಾಗಿ ಮೂಡಿಬಂದಿವೆ.

"ಅಕ್ಕಾ ನಿನಗೆ ಇದು ತಕ್ಕ ಹಾಡು ಕೇಳಕ್ಕ" ಹಾಗು "ಅಲ್ಲಿ ಹುಟ್ಟಿದರು; ಇಲ್ಲಿ ಮುಟ್ಟಿದರು; ಎದೆಯ ಒಳಗೆ ಅದೇ ಕನ್ನಡ" ಎಂಬ ಎರಡು ಕವಿತೆಗಳನ್ನು ಮನು ಬಳಿಗಾರ್ ಅವರು ಪಠಿಸಿದ ನಂತರ ಜಯರಾಮರಾಜೇ ಅರಸ್ ಅವರು ಹಾಡಿನ ಸಿಡಿಯನ್ನು ಬಿಡುಗಡೆ ಮಾಡಿದರು. ಈ ಹಾಡಿನ ಧ್ವನಿಮುದ್ರಣವನ್ನು ಬೆಂಗಳೂರಿನ ಅರವಿಂದ ಸ್ಟುಡಿಯೋಸ್ ನಲ್ಲಿ ಸೌಂಡ್ ಇಂಜಿನಿಯರ್ ಓಂಕಾರ್ ರವರ ಸಹಯೋಗದಿಂದ ಶ್ರೀನಿವಾಸ ಕಪ್ಪಣ್ಣ ಅವರ ಮಾರ್ಗದರ್ಶನದಲ್ಲಿ ಮಾಡಲಾಯ್ತು.

ಧ್ಯೇಯ ಗೀತೆ ಮತ್ತು ಆಶಯ ಗೀತೆ ಬಿಡುಗಡೆ ಫೋಟೋ ಗ್ಯಾಲರಿ

ಮನು ಬಳಿಗಾರ್ ಭಾಷಣ : ಈ ಸಂದರ್ಭದಲ್ಲಿ ಅತ್ಯಂತ ಭಾವಪೂರ್ಣವಾಗಿ ಮಾತನಾಡಿದ ಮನು ಬಳಿಗಾರ್ ಅವರು ಅಕ್ಕ ಸಮ್ಮೇಳನದ ಬಗ್ಗೆ ಕರ್ನಾಟಕದಲ್ಲಿ ಅಪಾರ ಗೌರವ ಹಾಗು ಅಭಿಮಾನ ಇದ್ದು "ಅಕ್ಕ"ಳಿಗೆ ಒಳ್ಳೆ ಬ್ರಾಂಡ್ ಇಮೇಜ್ ಇದೆ ಎಂದರು. ಅಕ್ಕ ಸಮ್ಮೇಳನಕ್ಕೆ 3, 4 ತಿಂಗಳ ಮುಂಚೆಯೆ ಸುಮಾರು 3 ಸಾವಿರ ಕಲಾವಿದರು ಭಾಗವಹಿಸುವ ಅವಕಾಶಕ್ಕೆ ಕನ್ನಡ ಹಾಗು ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸುತ್ತಾರೆ, ಅವರ ಪೈಕಿ ಖ್ಯಾತನಾಮರನ್ನು ನಾವು ಆಯ್ಕೆ ಮಾಡಿ ಕಳಿಸುತ್ತೇವೆ. ಅವರೆಲ್ಲರನ್ನು ಆದರ ಪೂರ್ವಕವಾಗಿ ನೋಡಿಕೊಳ್ಳಿ ಎಂದು ವಿನಂತಿಸಿಕೊಂಡರಲ್ಲದೆ ತಮ್ಮ ಇಲಾಖೆಯಿಂದ ಒಳ್ಳೆಯ ಹಾಗು ಹೆಚ್ಚಿನ ಸಂಖ್ಯೆಯ ಕಲಾವಿದರನ್ನು ಕಳಿಸಿಕೊಡುವ ಭರವಸೆ ನೀಡಿದರು.

ಅಮೆರಿಕಾದ "ಅಕ್ಕ" ಕರ್ನಾಟಕದ "ತಂಗಿ" ಸಮಾನ ಹಾಗು ಅಮೇರಿಕಾದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಇರುವ ಕಾಳಜಿ, ಅಭಿಮಾನ ಕಂಡು ಅಕ್ಕ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳನ್ನು ಪ್ರಶಂಸಿದರು. ಸುಮಾರು 2000 ವರ್ಷ ಪುರಾತನದ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಸೊಗಡನ್ನು 15 ನಿಮಿಷಗಳಲ್ಲಿ ತುಂಬಾ ಅಚ್ಚುಕಟ್ಟಾಗಿ ವಿವರಿಸುತ್ತ ಬಸವಣ್ಣನವರ ಒಂದು ವಚನದಲ್ಲಿ ಹೇಳುವಂತೆ "ನಿಮ್ಮ ಬೇರು ಕರ್ನಾಟಕದಲ್ಲಿದ್ದು ಅದಕ್ಕೆ ಪೋಷಕಾಂಶ ಹಾಕಿ ಬೇರನ್ನು ಗಟ್ಟಿ ಮಾಡುವ ಕೆಲಸವನ್ನು ಅಕ್ಕ ಸಂಸ್ಥೆ ಮಾಡುತ್ತಿದೆ" ಎಂದು ತಿಳಿಸಿದರು.

"ನೀವುಗಳು ಎಲ್ಲೇ ಇದ್ದರು ನಿಮ್ಮ ಬೇರುಗಳು ಮಾತ್ರ ನಮ್ಮ ಕರ್ನಾಟಕದಲ್ಲೇ ಇರಲಿ, ನಿಮ್ಮೊಡನೆ ಇದ್ದ ಈ ಮೂರು ದಿನಗಳು ಅತ್ಯಂತ ಸ್ನೇಹಪೂರ್ವಕವಾಗಿತ್ತು, ಇದೇ ಸ್ನೇಹ ಆತ್ಮೀಯತೆಯನ್ನು ನಾವು ಸಮ್ಮೇಳನಕ್ಕೆ ಕರ್ನಾಟಕದಿಂದ ಕಳುಹಿಸುವ ಎಲ್ಲಾ ಕಲಾವಿದರಿಗೂ ತೋರಿಸಿ" ಎಂದು ಬಳಿಗಾರ್ ವಿನಂತಿಸಿಕೊಂಡಾಗ, ಅಲ್ಲಿ ನೆರೆದಿದ್ದ ನೂರಕ್ಕು ಹೆಚ್ಚಿನ ಕನ್ನಡಿಗರೆಲ್ಲ ಕರತಾಡನ ಮಾಡುವ ಮೂಲಕ ಗೌರವ ಸೂಚಿಸಿದರು.

ಅಕ್ಕ ಸಮ್ಮೇಳನದ ಕಾರ್ಯಕ್ರಮ ನಿರೂಪಣೆ (ಎಮ್.ಸಿ) ಸಮಿತಿಯ ಚೇರ್ ವೀಣಾ ಮೋಹನ್‌ರವರು ಸ್ವಾಗತ ಕೋರಿದರು, ಬೃಂದಾವನ ಸಂಸ್ಥೆಯ ಅಧ್ಯಕ್ಷೆ ಉಷಾ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಡಾ. ರಾಮ್ ಬೆಂಗಳೂರ್ ಹಾಗು ಸಮ್ಮೇಳನದ ಸಂಚಾಲಕರಲ್ಲಿ ಒಬ್ಬರಾದ ಮಧು ರ‍ಂಗಯ್ಯನವರು, ಅತಿಥಿಗಳಿಗೆ ಪುಷ್ಪಗುಚ್ಛಗಳೊಂದಿಗೆ ಫಲಕಗಳನ್ನು ನೀಡಿ ಗೌರವಿಸಿದರು.

ಸಮ್ಮೇಳನದ ಮತ್ತೊಬ್ಬ ಸಂಚಾಲಕರಾದ ಪ್ರಸನ್ನ ಕುಮಾರ್ ರವರು "ಸುಮಧುರ ಸ್ನೇಹ ಸಮ್ಮಿಲನ ನಮ್ಮೀ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಸಮ್ಮೇಳನದ ಕಾರ್ಯಕಾರಿ ಸಮಿತಿ ಹಾಗು ಎಲ್ಲ ಕನ್ನಡಿಗರ ಪರವಾಗಿ ಸಮ್ಮೇಳನಕ್ಕೆ ಆಗಮಿಸುವ ಕರ್ನಾಟಕದ ಎಲ್ಲಾ ಗಣ್ಯರು, ಕಲಾವಿದರು ಹಾಗೂ ಎಲ್ಲ ಅತಿಥಿಗಳನ್ನು ಅತ್ಯಂತ ಆದರಾಭಿಮಾನಗಳಿಂದ ಸತ್ಕರಿಸುವುದಾಗಿ" ಭರವಸೆ ನೀಡಿದರು.

ಮತ್ತೊಬ್ಬ ಸಂಚಾಲಕರಾದ ಶಂಕರ್ ಸೆಟ್ಟಿ, ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಕಡಬ, ಜಂಟಿ ಕಾರ್ಯದರ್ಶಿಗಳಾದ ರಾಘವೇಂದ್ರ ಮೂರ್ತಿ, ಖಜಾಂಚಿ ಸಂತೋಷ್ ಕುಮಾರ ಕಡ್ಳೆಬೇಳೆ, ಜಂಟಿ ಖಜಾಂಚಿ ಬೆನ್ ಕಾಂತರಾಜು, ಬೃಂದಾವನದ ನಿರ್ದೇಶಕರಲ್ಲಿ ಒಬ್ಬರಾದ ಮರ್ಲಿನ್ ಮೆಂಡೋಸ ಹಾಗು ಅಕ್ಕ ಸಂಸ್ಥೆಯ ನಾಗೇಶ್ ಕೆಂಪಯ್ಯ ಅವರುಗಳು ಕರ್ನಾಟಕದಿಂದ ಆಗಮಿಸಿದ್ದ ಅತಿಥಿಗಳೊಡನೆ ಬೆರೆತು ವಿಚಾರ ವಿನಿಮಯ ಮಾಡಿಕೊಂಡರು. ತದನಂತರ ಶ್ರೀ ಕೃಷ್ಣ ವೃಂದಾವನದಲ್ಲಿ ನೆರೆದಿದ್ದ ಸಭಿಕರಿಗೆ ಮಹಾಪ್ರಸಾದವನ್ನು ವಿನಿಯೋಗಿಸಲಾಯ್ತು.

ಈ ಸಮಾರಂಭದ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ. ಧ್ಯೇಯ ಗೀತೆ ಹಾಗು ಆಶಯ ಗೀತೆಗಳ ಸಾಹಿತ್ಯಕ್ಕೆ ಇಲ್ಲಿ ಕ್ಲಿಕ್ಕಿಸಿ.

ವಿದ್ಯಾಭೂಷಣರವರ ಗಾಯನ, ಬನ್ನಂಜೆಯವರ ಪ್ರವಚನ, ಪ್ರಭಾತ್ ಕಲಾವಿದರ ನೃತ್ಯ-ನಾಟಕ, ಬಾಲಮುರಳಿಕೃಷ್ಣ ರವರ ಸಂಗೀತ ಕಛೇರಿ, ರಘು ದೀಕ್ಷಿತ್ ಲೈವ್, ಝೀ ಕನ್ನಡ ಚಲನಚಿತ್ರ ಪ್ರಶಸ್ತಿ, ಮಾನಸಿ ಪ್ರಸಾದ್ ರವರ ಕರ್ನಾಟಕ ಸಂಗೀತ, ವೆಂಕಟೇಶ್ ಕುಮಾರ ರವರ್ ಹಿಂದುಸ್ತಾನಿ ಗಾಯನ, ಪ್ರೊ. ಕೃಷ್ಣೇಗೌಡ್ರ ನಗೆಹಬ್ಬ, ಬಿ. ಜಯಶ್ರಿ ಹಾಗು ಅರುಂಧತಿ ನಾಗ್ ರವರ ರಂಗಗೀತೆಗಳು, ಕರ್ನಾಟಕದ ಊಟ ಹಾಗು ಸ್ಥಳೀಯ ಕಲಾವಿದರಿಂದ ಸಂಪೂರ್ಣ ಮನರಂಜನೆ... ಇನ್ನೇನು ಬೇಕು ಹೇಳಿ... ಇವೆಲ್ಲ ಇದ್ದರೂ ಇನ್ನು ಅಕ್ಕ ಸಮ್ಮೇಳನಕ್ಕೆ ನೋಂದಾಯಿಸದೆ ಇದ್ದ ಪಕ್ಷದಲ್ಲಿ ಕೂಡಲೇ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X