ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸಮ್ಮೇಳನಗಳು ಏಕೆ? ಹೇಗೆ?

By * ಎಂ.ಆರ್. ದತ್ತಾತ್ರಿ, ಲಾಸ್ ಏಂಜಲಿಸ್
|
Google Oneindia Kannada News

M.R Dattathri
ಜುಲೈ ಮೊದಲವಾರದ ದೀರ್ಘ ವಾರಂತ್ಯದಲ್ಲಿ 'ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್ -ಚಿಕ್ಕರೂಪದಲ್ಲಿ ನಾವಿಕ - ಸಮ್ಮೇಳನವನ್ನು ಮುಗಿಸಿ ಸೆಪ್ಟೆಂಬರ್‌ನ ಲೇಬರ್ ಡೇ ಲಾಂಗ್ ವೀಕೆಂಡ್‌ನಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಅಮೆರಿಕದ ಕನ್ನಡ ಸಮುದಾಯ ಸಿದ್ದವಾಗುತ್ತಿದೆ. ಒಂದು ರೀತಿಯಲ್ಲಿ ಹಬ್ಬಗಳನ್ನು ಎದುರು ನೋಡುವ ಸಡಗರ.

ನಾವಿಕ ಬೇಕೋ ಬೇಡವೋ, ಕೆಲವರ ಸ್ವಹಿತಾಸಕ್ತಿಯೋ ಸಮುದಾಯದ ಹಿತಾಸಕ್ತಿಯೋ, ಅಕ್ಕ ಎನ್ನುವ ಒಂದು ಒಕ್ಕೂಟ ಆಗಲೇ ಇರುವಾಗ ಮತ್ತೊಂದರ ಅವಶ್ಯಕತೆ ಇದೆಯೇ ಎನ್ನುವ ಎಲ್ಲಾ ಅನುಮಾನ ಮತ್ತು ಪ್ರಶ್ನೆಗಳ ಜೊತೆ ಜೊತೆಯಲ್ಲೇ ಪ್ರಾರಂಭವಾಗಿ ತನ್ನ ಮೊದಲ ಸಮಾವೇಶವನ್ನು ಮುಗಿಸಿದೆ. ಎರಡನೇ ಮಗು ಬೇಕೋ ಬೇಡವೋ ಎನ್ನುವ ದಂಪತಿಗಳ ಜಿಜ್ಞಾಸೆಯ ನಡುವೆಯೇ ಮಗು ಜನಿಸಿದಂತೆ. ನಾವಿಕ ಸಮ್ಮೇಳನದಲ್ಲಿ ಭಾಗವಹಿಸಿದ ಜನರಿಗೆ ಈ ಅಕ್ಕ-ನಾವಿಕ' ಪ್ರಶ್ನೆಗಳು ಕಾಡಿದಂತೆ ಕಾಣಲಿಲ್ಲ.

ಆಪ್ತವಲಯಗಳಲ್ಲಿ ನಾವಿಕದ ಹುಟ್ಟಿನ ಬಗ್ಗೆ ಮುಂಚೂಣಿಯಲ್ಲಿದ್ದವರು ವಿವರಣೆಗಳನ್ನು ನೀಡುತ್ತಿದ್ದರಾದರೂ ಸಮಾರಂಭದ ಸಡಗರದ ಮಧ್ಯೆ ಪ್ರಶ್ನೆ ಮತ್ತು ಉತ್ತರಗಳೆರಡಕ್ಕೂ ಮಹತ್ವವಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ. ಅದಕ್ಕೆ ಒಂದು ಮುಖ್ಯ ಕಾರಣವಿದೆ. ನಾವಿಕ ಸಮ್ಮೇಳನ ನಡೆದದ್ದು ಅಮೆರಿಕೆಯ ಪಶ್ಚಿಮ ಕರಾವಳಿ ನಗರ ಲಾಸ್ ಏಂಜಲಿಸ್‌ನಲ್ಲಿ.

ಲಾಸ್ ಏಂಜಲಿಸ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೋಗಳಂತಹ ಮುಖ್ಯ ನಗರಗಳನ್ನು ಹೊತ್ತ ಕ್ಯಾಲಿಫೋರ್ನಿಯಾ ರಾಜ್ಯ ಅಮೆರಿಕದಲ್ಲಿ ಅತಿಹೆಚ್ಚು ಕನ್ನಡಿಗರ ನೆಲೆಯಾದರೂ ಇಲ್ಲಿ ಈವರೆಗೆ ಈ ಮಟ್ಟದ ಕನ್ನಡಿಗರ ಸಮಾವೇಶವಾಗಿರಲಿಲ್ಲ. ಅಮೆರಿಕದಲ್ಲಿ ಸಮ್ಮೇಳನಗಳನ್ನು ನಡೆಸುವಾಗ ಎದುರಾಗುವ ಮುಖ್ಯ ಸಮಸ್ಯೆ ಎಂದರೆ ದೇಶದ ಭೌಗೋಳಿಕ ವಿಸ್ತೀರ್ಣ. ಪೂರ್ವ ಕರಾವಳಿಯ ನಗರಗಳಲ್ಲಿ ಹಮ್ಮಿಕೊಂಡರೆ ಪಶ್ಚಿಮ ತೀರದಿಂದ ಬರುವವರಿಗೆ ವಿಪರೀತ ದೂರವಾಗುತ್ತದೆ ಹಾಗೆಯೇ ಪಶ್ಚಿಮ ಭಾಗದಲ್ಲಿ ಸಮ್ಮೇಳನವನ್ನು ನಡೆಸುವಾಗ ಅದು ಪೂರ್ವ ತೀರದಿಂದ ಬರುವವರಿಗೆ ಅನಾನುಕೂಲವಾಗಿರುತ್ತದೆ.

ದೂರ ಪ್ರಯಾಣದ ಕಿರಿಕಿರಿಯ ಜೊತೆಗೆ ಪ್ರಯಾಣದ ಖರ್ಚುವೆಚ್ಚಗಳೂ ಹೆಚ್ಚಾಗಿ ನಿಲ್ಲುತ್ತವೆ. ಹಾಗಾಗಿ ಸಹಜವಾಗಿಯೇ ಸಮ್ಮೇಳನದಲ್ಲಿ ಭಾಗವಹಿಸುವವರಲ್ಲಿ ಸುತ್ತಮುತ್ತಲ ಪ್ರದೇಶಗಳಿಂದ ಡ್ರೈವ್ ಮಾಡಿಕೊಂಡು ಬಂದವರು ಬಹುಸಂಖ್ಯೆಯಲ್ಲಿರುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಪಶ್ಚಿಮತೀರದ ಕನ್ನಡಿಗರಿಗೆ ನಾವಿಕ ಸಮಾವೇಶ ವಿಶೇಷವಾಗಿದ್ದಿತು. ಪೂರ್ವ ತೀರದ ನ್ಯೂಜರ್ಸಿಯಲ್ಲಿ ನಡೆಯುವ ಅಕ್ಕ ಸಮ್ಮೇಳನ ಅಲ್ಲಿನ ಕನ್ನಡಿಗರಿಗೆ ಇದೇ ಬಗೆಯ ಸಂಭ್ರಮವನ್ನು ತರುತ್ತದೆ ಎನ್ನುವುದರಲ್ಲಿ ನನಗೆ ಸಂದೇಹಗಳಿಲ್ಲ.

ನೀವೇನಾದರೂ ಎದುರು ಸಿಕ್ಕಿ 'ನಾವಿಕ ಸಮ್ಮೇಳನ ಹೇಗಾಯ್ತು ಮಾರಾಯ್ರೇ?' ಎಂದು ನನ್ನನ್ನು ಪ್ರಶ್ನಿಸಿದರೆ ಹಾಗು ನಿಮಗೂ ನನಗೂ ದೊಡ್ಡ ಉತ್ತರದ ವ್ಯವಧಾನವಿಲ್ಲದಿದ್ದರೆ 'ಚೆನ್ನಾಗಿ ಆಯಿತು' ಎಂದಷ್ಟೇ ಹೇಳಿ ಮುಂದೆ ಓಡುತ್ತೇನೆ. ಆದರೆ ನಮ್ಮಿಬ್ಬರಿಗೂ ನಿಂತು ಮಾತನಾಡುವಷ್ಟು ಪುರುಸೊತ್ತಿದ್ದಾಗ ನಿಮ್ಮ ಪ್ರಶ್ನೆಗೆ ನನ್ನ ಮರುಪ್ರಶ್ನೆ ಬರುತ್ತದೆ. 'ಯಾರ ದೃಷ್ಟಿಕೋನದಲ್ಲಿ ಹೇಳಬೇಕು?'. ಈ ಪ್ರಶ್ನೆ ಏಕೆ ಮುಖ್ಯವಾಗುತ್ತದೆ ಎಂದರೆ ಅಮೆರಿಕದ ಸಮ್ಮೇಳನಗಳ ವಿಷಯದಲ್ಲಿ (ನಾವಿಕ ಮತ್ತು ಅಕ್ಕ ಸೇರಿದಂತೆ) ಮುಖ್ಯವಾಗಿ ಮೂರು ದೃಷ್ಟಿಕೋನಗಳಿವೆ.

ಒಂದು, ಭಾಗವಹಿಸುವ ಜನರದ್ದು. ಎರಡು, ಭಾರತದಿಂದ ಆಗಮಿಸುವ ಅತಿಥಿಗಳದ್ದು. ಮತ್ತು ಮೂರನೆಯದು, ಸಮ್ಮೇಳನದ ಆಯೋಜಕರದ್ದು. ಯಾವುದೇ ಸಮಾರಂಭಗಳಿಗೂ ವಿಭಿನ್ನ ದೃಷ್ಟಿಕೋನಗಳಿರುವುದು ನಿಜವಾದರೂ ಅಮೆರಿಕದ ಸಮ್ಮೇಳನಗಳ ವಿಷಯದಲ್ಲಿ ಇವು ಹೆಚ್ಚಿನ ಭಿನ್ನತೆಯನ್ನು ಪಡೆದುಕೊಳ್ಳುತ್ತವೆ.

ಅನಿವಾಸಿ ಕನ್ನಡಿಗರ ದೃಷ್ಟಿಕೋನ :
ಅಮೆರಿಕದ ಸಮ್ಮೇಳನಗಳು ಕನ್ನಡ ಸಮ್ಮೇಳನಕ್ಕಿಂತಲೂ ಹೆಚ್ಚಾಗಿ ಕನ್ನಡಿಗರ ಸಮ್ಮಿಲನ.' ಎಂದು ದಟ್ಸ್‌ಕನ್ನಡ ಡಾಟ್ ಕಾಮ್‌ನ ಸಂಪಾದಕರಾದ ಶಾಮಸುಂದರ್ ಒಂದು ಆತ್ಮೀಯ ಸಂದರ್ಭದಲ್ಲಿ ನುಡಿದಿದ್ದರು. ಬರುವವರಲ್ಲಿ ಬಹಳಷ್ಟು ಮಂದಿ ತಮ್ಮ ಸ್ನೇಹಿತರು ಮತ್ತು ನೆಂಟರಿಷ್ಟರನ್ನು ಭೇಟಿ ಮಾಡಲೆಂದು ಬರುವವರು. ಸಿಯಾಟಲ್ ನಗರದಲ್ಲಿರುವ ತಂಗಿ ಮತ್ತು ಸ್ಯಾನ್‌ಫ್ರಾನ್ಸಿಸ್ಕೋನಲ್ಲಿರುವ ಅಣ್ಣ ಸಂಸಾರ ಸಮೇತ ಮೂರು ದಿನ ಬೆರೆತು ಕಳೆಯಲು ಲಾಸ್ ಏಂಜಲಿಸ್‌ನಲ್ಲಿ ನಡೆಯುವ ಸಮ್ಮೇಳನ ಒಂದು ಒಳ್ಳೆಯ ಅವಕಾಶವಲ್ಲದೆ ಮತ್ತಿನ್ನೇನು? ಈ ಬಂಧು ಮಿತ್ರರ ಮಿಲನದಿಂದ ಸಮ್ಮೇಳನಕ್ಕೆ ಒಂದು ರೀತಿಯಲ್ಲಿ ಮದುವೆಮನೆಯ ಕಳೆ ಕಟ್ಟಿಬಿಡುತ್ತದೆ.

ರೇಷ್ಮೇಸೀರೆಯುಟ್ಟು ನಲಿಯುವ, ಜೊತೆಯಾಗಿ ಕುಳಿತು ಹಾಸ್ಯದ ಮಾತುಗಳ ನಡುವೆ ಊಟ ತಿಂಡಿ ಮಾಡುವ ಮತ್ತು ಕುರ್ಚಿಗಳನ್ನು ದುಂಡಗೆ ಜೋಡಿಸಿಕೊಂಡು ಕುಳಿತು ರಸವತ್ತಾಗಿ ಹರಟೆಕೊಚ್ಚುವ ಮದುವೆಮನೆಯ ಸಂಭ್ರಮ. ಈ ನಲಿವು ಅಮೆರಿಕನ್ನಡಿಗರಿಗೆ ಈ ತರಹದ ಸಮಾರಂಭಗಳಲ್ಲದೆ ಮತ್ತೆಲ್ಲಿ ಸಿಗಬೇಕು ಹೇಳಿ? ಯಕ್ಷಗಾನದ ಭಾಗವತರು ಪೂತನೀಸಂಹಾರದ ರಸವತ್ತಾದ ಘಟ್ಟದಲ್ಲಿರುವಾಗ ಮುಂದಿನ ಸಾಲಿನಲ್ಲಿ ಇಬ್ಬರು ಹೆಂಗಸರು ಸಂಧಿಸಿ ಮುಖ ಅರಳಿಸಿಕೊಂಡು 'ಯಾವಾಗ್ ಬಂದ್ಯೇ ವಾಸಂತೀ? ನೀನು ಎಲ್‌ಎ ಬಿಟ್ಟ್‌ಮೇಲೆ ಮತ್ತೆ ನೋಡ್ಲೇಇಲ್ವಲೇ?' ಎಂದು ಆತ್ಮೀಯವಾಗಿ ತಬ್ಬಿಕೊಂಡರೆ ಆಗ ನೀವು ಸ್ನೇಹಿತೆಯರು ಒಂದಾದ ಆ ಅಮೃತ ಘಳಿಗೆಗಾಗಿ ಸಂತೋಷಿಸುತ್ತೀರೋ ಅಥವಾ ಭಾಗವತರ ಪ್ರಸಂಗಕ್ಕಾದ ಅಧಿಕಪ್ರಸಂಗ' ಎಂದು ದುಃಖಿಸುತ್ತೀರೋ? ಮದುವೆ ಮನೆಯ ಸಂಗೀತಗೋಷ್ಠಿಯನ್ನು ಕೂತು ಕೇಳಲು ವರನ ಅಕ್ಕನಿಗೆಲ್ಲಿ ಸಂಯಮವಿರುತ್ತದೆ?

ಬಂಧು ಮಿತ್ರರನ್ನು ಭೇಟಿ ಮಾಡುವುದರಿಂದ ಹಿಡಿದು ಮದುವೆಯ ವಯಸ್ಸಿಗೆ ಬಂದ ಮಕ್ಕಳಿಗೆ ಸಂಬಂಧಗಳನ್ನು ಹುಡುಕುವ ಲೆಕ್ಕಾಚಾರದ ತನಕ ನಾನಾ ಕಾರಣಗಳಿಗೆ ಮತ್ತು ಸಂಭ್ರಮಗಳಿಗೆ ಅಮೆರಿಕದ ಕನ್ನಡಿಗರು ಒಂದು ಕಡೆ ಸೇರುತ್ತಾರೆ. ಅವರ ದೃಷ್ಟಿಯಲ್ಲಿ ಸಮ್ಮೇಳನ ಯಶಸ್ವಿಯಾಗುವುದು ಅವರ ಈ ಮಿಲನವು ಯಶಸ್ವಿಯಾದಾಗಲೇ.

ಭಾರತ ಕಲಾವಿದರ ದೃಷ್ಟಿಕೋನ: ಕರ್ನಾಟಕದಿಂದ ಬರುವ ಪ್ರತಿಭಾನ್ವಿತ ಕಲಾವಿದರ ಪ್ರದರ್ಶನಗಳನ್ನು ಅಮೆರಿಕದ ಕನ್ನಡಿಗರು ಮನಸಾರೆ ಮೆಚ್ಚುತ್ತಾರೆ ಎನ್ನುವುದರಲ್ಲಿ ಯಾವ ಸಂದೇಹವಿಲ್ಲ. ಆದರೆ ಕಲಾವಿದರನ್ನು ಗುರುತಿಸುವ' ಬಗ್ಗೆ ಕರ್ನಾಟಕದ ಕನ್ನಡಿಗರಿಗೆ ಹೋಲಿಸಿದರೆ ಅಮೆರಿಕದ ಕನ್ನಡಿಗರು ಸ್ವಲ್ಪ ಭಿನ್ನ. ಕರ್ನಾಟಕದಿಂದ ಬರುವ ಕಲಾವಿದರೇ, ಸಮಾರಂಭದ ಹಾಲಿನಲ್ಲಿ ಎದುರಾಗುವ ಯಾರಾದರೂ ನಿಮ್ಮನ್ನು "ಯಾರು ನೀವು?'' ಎಂದು ಕೇಳಿದರೆ ಖಂಡಿತಾ ಬೇಜಾರು ಮಾಡಿಕೊಳ್ಳಬೇಡಿ. ಅದು ಕೇಳುವವರ ಅಹಂಕಾರದ ಅಥವಾ ನಿರ್ಲಕ್ಷ್ಯದ ಪ್ರಶ್ನೆಯಾಗದೆ ಅವರು ವಲಸೆಯ ಪ್ರವಾಹದಲ್ಲಿ ಯಾವ ಹಂತದಲ್ಲಿದ್ದಾರೆ ಎನ್ನುವಲ್ಲಿಯ ಪ್ರಶ್ನೆಯಾಗುತ್ತದೆ.

"ರಾಜ್‌ಕುಮಾರ್ ಮಗ ಬಂದಾನಂತಲ್ಲಾ, ಎಲ್ಲೀ ಅಂವಾ'' ಎಂದು ಶಿವರಾಜಕುಮಾರ್ ಎದುರಿಗೇ ಅವರನ್ನು ಹುಡುಕುತ್ತಿದ್ದ ಒಬ್ಬ ಹಿರಿಯ ಅಚ್ಛ ಕನ್ನಡಿಗರನ್ನು ನಾನು ಕಂಡೆ. ರಾಜಕುಮಾರ್ ತನಕ ಅರಬ್ಬೀಸಮುದ್ರಕ್ಕೆ ಹತ್ತಿರವಾಗಿದ್ದ ಅವರ ಜೀವನ ಪ್ರವಾಹ ಶಿವರಾಜಕುಮಾರರ ಕಾಲಕ್ಕೆ ಪೆಸಿಫಿಕ್ ಸಾಗರಕ್ಕೆ ಹತ್ತಿರವಾಗಿದೆ. ವೇದಿಕೆಯ ಮೇಲಿರುವವರನ್ನು 'ಮುಖ್ಯಮಂತ್ರಿ ಚಂದ್ರು' ಎಂದು ಪರಿಚಯ ಮಾಡಿಕೊಟ್ಟಾಗ "ನಾನು ಮುಖ್ಯಮಂತ್ರಿಗಳ ಫೋಟೋ ನೋಡಿದೀನ್ರೀ. ಇವರಲ್ಲ ಅವರು.'' ಎಂದು ಏನೋ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವ ಅನುಮಾನದಲ್ಲಿ ನೋಡುವ ಸಭಿಕರು ನಿಮ್ಮ ಪಕ್ಕದಲ್ಲೇ ಕುಳಿತಿದ್ದರೆ ಆಶ್ಚರ್ಯ ಪಡಬೇಡಿ.

ಹೋದಸಲದ ಅಕ್ಕ ಸಮ್ಮೇಳನದಲ್ಲಿ ನಡೆದ ಘಟನೆಯೊಂದನ್ನು ಶ್ರೀನಿವಾಸ ಕಪ್ಪಣ್ಣನವರು ಹೇಳುತ್ತಿದ್ದರು. ಅವರ ಬಳಿಗೆ ಬಂದ ಹಿರಿಯ ಕನ್ನಡತಿಯೊಬ್ಬರು ದೂರದಲ್ಲಿ ಬಿಳಿಯ ಸಫಾರಿಯಲ್ಲಿ ನಿಂತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತೋರಿಸುತ್ತ "ಅವರ್ಯಾರು? ಏನು ಮಾಡ್ಕೊಂಡಿದ್ದಾರೆ?'' ಎಂದು ಕೇಳಿದ್ದರಂತೆ. ವಲಸೆಯ ಪ್ರವಾಹದಲ್ಲಿ ಒಂದು ದೂರವನ್ನು ದಾಟಿದವರಿಗೆ ಸಹಜವಾಗಿ ಕರ್ನಾಟಕದ ಮುಖ್ಯಮಂತ್ರಿಗಳಿಗಿಂತ ಕ್ಯಾಲಿಫೋರ್ನಿಯಾದ ಗೌವರ್ನರ್ ಹೆಚ್ಚು ಹತ್ತಿರವಾಗಿರುತ್ತಾರೆ. ಮುಂಬಯಿಗೆ ವಲಸೆ ಹೋದ ಕನ್ನಡಿಗರು ಕಾಲಾಂತರದಲ್ಲಿ ಅಲ್ಲಿಯವರೇ ಆಗುವುದಿಲ್ಲವೇ, ಹಾಗೆ. ದೋಣಿ ಮುಂದೆ ಸಾಗಿದಂತೆಲ್ಲಾ ಬಿಟ್ಟುಬಂದ ತೀರ ಮಸುಕಾಗುತ್ತಾ ದೂರವಾಗುತ್ತದೆ. ಇದು ವಲಸೆಯ ಕಟುಸತ್ಯವಲ್ಲವೇ?

ಎಲ್ಲರೂ ಹಾಗಲ್ಲ :ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ನಡೆಯುವ ಕಾರ್ಯಕ್ರಮಗಳಿಗೆ ಹಾತೊರೆದು ಬರುವ ಅಮೆರಿಕನ್ನಡಿಗರೂ ಇದ್ದಾರೆ. ವರ್ಷಕ್ಕೆ ಎರಡು ಕನ್ನಡ ಪುಸ್ತಕಗಳನ್ನು ಪ್ರಕಟಿಸುವ, ಕನ್ನಡ ಸಾಹಿತ್ಯ ಮತ್ತು ಲಲಿತಕಲೆಗಳನ್ನು ಗಂಭೀರವಾಗಿ ಅಭ್ಯಾಸಿಸುವ ಕನ್ನಡಿಗರನ್ನೂ ನೀವು ಕಾಣುತ್ತೀರಿ. ಸೊನ್ನೆಯಿಂದ ನೂರರ ತನಕದ ದೊಡ್ಡ ಸ್ಕೇಲಿನ ಮೇಲೆ ಚದುರಿಹೋದ ಪರಿವಾರವಿದು.

'ಸರ್ವರಿಗೂ ಸ್ವಾಗತ' ಎನ್ನುವ ಬ್ಯಾನರ್‌ನಲ್ಲಿ ಅರ್ಕಾವತ್ತನ್ನು ಓದಲು ಐದು ನಿಮಿಷ ತಿಣುಕಾಡಿ ಹತಾಶರಾಗಿ ಕಣ್ಣು ಕಿರಿದಾಗಿಸಿಕೊಂಡು ತಮ್ಮ ಬಾಲ್ಯದ ಕನ್ನಡ ಮೇಷ್ಟರನ್ನು ನೆನೆಯುತ್ತಾ ನಿಲ್ಲುವ ಕನ್ನಡಿಗನ ಜೊತೆಯಲ್ಲೇ ನಿಮ್ಮ ಪತ್ರಿಕೆಯಲ್ಲಿ ಬಹಳಷ್ಟು ಕಾಗುಣಿತದ ತಪ್ಪುಗಳು ಉಳಿದುಬಿಡುತ್ತವಲ್ಲಾ' ಎಂದು ಕನ್ನಡದ ಪ್ರತಿಷ್ಠಿತ ದಿನಪತ್ರಿಕೆಯ ಸಂಪಾದಕರನ್ನು ಛೇಡಿಸುವ ಕನ್ನಡತಿಯೂ ಸಿಗುತ್ತಾಳೆ.

ಈ ರೀತಿಯ ಅತಿ ವಿಭಿನ್ನ ಸ್ತರಗಳಲ್ಲಿರುವ ಪ್ರೇಕ್ಷಕವರ್ಗವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕಲೆಯನ್ನು ಮುಟ್ಟಿಸಬಲ್ಲಿರಾದರೆ ನಿಮಗೆ ಅಭಿಮಾನದ ಸುರಿಮಳೆಯಾಗುತ್ತದೆ. ನಾವಿಕ ಸಮ್ಮೇಳನಕ್ಕೆ ಬಂದಿದ್ದ ಕನ್ನಡದ ಹಿರಿಯ ಲೇಖಕ ಸಿದ್ದಲಿಂಗ ಪಟ್ಟಣಶೆಟ್ಟಿಯವರು "ಕಾವ್ಯ-ವಿಮರ್ಶೆ ಅಂತ ನಾನೊಬ್ನೇ ಮಾತಾಡೋದು ಬ್ಯಾಡ್ರೀ. ನಿಮಗೇನಾದ್ರೂ ಕೇಳುವಂತದ್ದು ಇದ್ರೆ ಕೇಳಿ ಸುಮ್ಮನೆ ಹರಟೆ ಹೊಡೆಯೋಣ.'' ಎಂದು ಅನೌಪಚಾರಿಕವಾಗಿ ಮಾತನಾಡಿ ಮಕ್ಕಳಿಗೆ ಹೇಗೆ ಕಥೆ ಹೇಳಬೇಕು, ನಮ್ಮ ಪುರಾಣದ ಕಲ್ಪನೆಗಳನ್ನು ಹೇಗೆ ಮುಟ್ಟಿಸಬೇಕು ಎಂದೆಲ್ಲಾ ಪ್ರಶ್ನೆಗಳಿಗೆ ಸಹನೆಯಿಂದ ಮತ್ತು ರಸವತ್ತಾಗಿ ಉತ್ತರಿಸಿದ್ದು ಸಭಿಕರ ಮನಸ್ಸನ್ನು ಆಳದಲ್ಲಿ ಮುಟ್ಟಿತು.

'ಕನ್ನಡ ಕಾವ್ಯದ ನವ್ಯೋತ್ತರ ಬೆಳವಣಿಗೆಗಳೇನು' ಎನ್ನುವ ಪ್ರಶ್ನೆಗಿಂತಾ 'ರಾವಣನಿಗೆ ಹತ್ತು ತಲೆಗಳಿತ್ತು ಎನ್ನುವುದನ್ನು ಹಾಸ್ಯಾಸ್ಪದವಾಗದಂತೆ ನಮ್ಮ ಮಗುವಿನ ಕಲ್ಪನೆಗೆ ಮುಟ್ಟಿಸುವುದು ಹೇಗೆ' ಎನ್ನುವುದು ಆ ಸಭೆಯಲ್ಲಿ ಗಹನವಾದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗಳನ್ನು ಕೇಳಲು ಕನ್ನಡದ ಹಿರಿಯ ಸಾಹಿತಿಗಳನ್ನು ಕರೆಸಬೇಕೇ ಎಂದು ಯಾರಾದರೂ ನನ್ನನ್ನು ಕೇಳಿದರೆ ಯಾಕಾಗಬಾರದು?' ಎಂದು ನಾನು ಅವರಿಗೆ ಮರು ಪ್ರಶ್ನೆಯೊಂದನ್ನು ಹಾಕುತ್ತೇನೆ. ಹಾಗೆಂದಂತೆ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಕಾವ್ಯವನ್ನೂ ಮಾತನಾಡಿದರು, ಆಸಕ್ತರೊಂದಿಗೆ.

ಸಮ್ಮೇಳನಗಳ ಆಯೋಜಕರ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಲೇಬೇಕು. ಕನ್ನಡ ಸಂಸ್ಕೃತಿ ಮತ್ತು ಸಮುದಾಯದ ಬಗ್ಗೆ ಅತಿ ಉತ್ಸಾಹವಿರುವವರು ಮಾತ್ರವೇ ವಿದೇಶೀ ನೆಲದಲ್ಲಿ ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಸಾಧ್ಯ. ನಮ್ಮ ಸಂಸ್ಕೃತಿಯ ಪರಿಚಯವಿಲ್ಲದ ನಾಡಿನಲ್ಲಿ ಇಂತಹ ಸಮ್ಮೇಳನಗಳಿಗೆ ಅನೇಕ ಚಿತ್ರವಿಚಿತ್ರ ಸಮಸ್ಯೆಗಳು ಎದುರಾಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಅಮೆರಿಕದ ಒತ್ತಡ ಜೀವನದಲ್ಲಿ ಇಂತಹದ್ದಕ್ಕೆ ಸಮಯವನ್ನು ಹೊಂದಿಸುವುದು ಒಂದು ಸಾಹಸವೇ ಸರಿ.

ಹಿತ ಮಿತ :
ಈ ಉತ್ಸಾಹದ ಭರದಲ್ಲಿ ಮತ್ತು ಹೆಚ್ಚುಹೆಚ್ಚು ಜನರನ್ನು ಸಮ್ಮೇಳನಕ್ಕೆ ಆಕರ್ಷಿಸಲು ಭಾರತದಿಂದ ಕರೆಸುವ ಕಲಾವಿದರ ಮತ್ತು ರಾಜಕಾರಣಿಗಳ ಪಟ್ಟಿ ಸ್ವಲ್ಪ ಜಾಸ್ತಿಯೇ ಆಗುತ್ತದೇನೋ (ನಾವಿಕ ಸಮ್ಮೇಳನಕ್ಕೆ ಹೆಚ್ಚು ರಾಜಕಾರಣಿಗಳು ಬರಲಿಲ್ಲ ಆದರೆ ಹೋದಸಲದ ಅಕ್ಕ ಸಮ್ಮೇಳನಕ್ಕೆ ಬಂದಿದ್ದರು). ಈ ವಿಷಯದಲ್ಲಿ ಕರ್ನಾಟಕ ಸರಕಾರದ ಪಾತ್ರವೂ ಬಹಳವಿದೆ. ವಿಪರೀತ ಕಾರ್ಯಕ್ರಮಗಳನ್ನು ನಡೆಸಲು ಹೋಗಿ ಸಮಯದ ಒತ್ತಡದಲ್ಲಿ ಕಷ್ಟಪಡುವುದಕ್ಕಿಂತಾ ಹಿತಮಿತವಾಗಿ ಕೆಲವೇ ಕಾರ್ಯಕ್ರಮಗಳಿದ್ದರೆ ಚೆನ್ನ.

ಇಂತಹ ಸಮ್ಮೇಳನಗಳಿಗೆ ಎಷ್ಟು ಕಲಾವಿದರು ಬರಬೇಕು ಮತ್ತು ಯಾರು ಯಾರು ಬರಬೇಕು ಎನ್ನುವ ವಿಚಾರದಲ್ಲಿ ಅಕ್ಕ ಮತ್ತು ನಾವಿಕದಂತಹ ಸಂಸ್ಥೆಗಳು ಕರ್ನಾಟಕ ಸರಕಾರದೊಂದಿಗೆ ನೇರ ಮತ್ತು ಪ್ರಾಮಾಣಿಕ ಮಾತುಕತೆಯನ್ನು ನಡೆಸಬೇಕು. ನಾನು ಈ ಮೊದಲು ತಿಳಿಸಿದಂತೆ ಸಮ್ಮೇಳನಕ್ಕೆ ಬರುವವರು ಬರೇ ಕಾರ್ಯಕ್ರಮಗಳಿಗಲ್ಲ ಇನ್ನೂ ಅನೇಕ ಕಾರಣಗಳಿಗಾಗಿ ಬರುತ್ತಾರೆ. ನಾವಿಕ ಸಮ್ಮೇಳನದಲ್ಲಿ ಸಮಯ ಪರಿಪಾಲನೆಯ ವಿಚಾರ ದೊಡ್ಡ ಇರುಸುಮುರುಸಾಗಿ ಹೊರಹೊಮ್ಮಿತು. ಕರ್ನಾಟಕ ಸರಕಾರದ ಪ್ರತಿನಿಧಿಗಳಿಗೆ ಮಾತನಾಡಲು ಮೂರು ನಿಮಿಷಗಳ ಸಮಯಾವಕಾಶ ಸಿಕ್ಕಿತು.

ಅತಿಹೆಚ್ಚು ಕನ್ನಡಿಗರು ಓದುವ ದಿನಪತ್ರಿಕೆಯ ಸಂಪಾದಕರೂ ಸೇರಿದಂತೆ ಅನೇಕ ಗಣ್ಯರನ್ನು ಮುಖ್ಯ ವೇದಿಕೆಗೇ ಕರೆಯಲಾಗಲಿಲ್ಲ. ಸಮಯ ಪರಿಪಾಲನೆಯ ವಿಚಾರದಲ್ಲಿ ಆಯೋಜಕರ ವರ್ತನೆ ಕಲಾವಿದರಿಗೆ, ಅದರಲ್ಲೂ ವಿಶೇಷವಾಗಿ ಭಾರತದಿಂದ ಬಂದಿದ್ದ ಕಲಾವಿದರಿಗೆ ಕಿರಿಕಿರಿಯನ್ನು ತಂದದ್ದು ವ್ಯಕ್ತವಾಗುವಷ್ಟು ಸ್ಪಷ್ಟವಿತ್ತು. ಈ ರೀತಿಯ ಕಟು ಸಮಯಪಾಲನೆಯಿಂದ ಸಮಾವೇಶದ ಕಾರ್ಯಕ್ರಮಗಳು ಬಹಳಷ್ಟು ಮಟ್ಟಿಗೆ ಯೋಜಿತ ಸಮಯದಲ್ಲೇ ಮುಗಿದವು ಎನ್ನುವುದು ನಿಜವಾದರೂ ಕಲೆ ಎನ್ನುವುದು ಹೃದಯ ಶಸ್ತ್ರಚಿಕಿತ್ಸೆಯಂತೆ ಯಂತ್ರ ನಿಖರತೆಯಿಂದ ಕೂಡಿರಬೇಕಾದ್ದಲ್ಲ ಎನ್ನುವುದನ್ನು ಆಯೋಜಕರು ಅರಿತಿದ್ದರೆ ಕಲಾವಿದರಿಗೆ ಸ್ವಲ್ಪ ಹಾಯೆನಿಸುತ್ತಿತ್ತೇನೋ. ಹಿಂದೆ ಅಕ್ಕ ಸಮ್ಮೇಳನದಲ್ಲೂ ಇದೇ ರೀತಿಯಾಗಿ"ಎರಡು ಕವಿತೆಗಳನ್ನು ಕೇಳುವಷ್ಟು ತಾಳ್ಮೆ ಇಲ್ಲದವರು ನಮ್ಮನ್ನೇಕೆ ಅಷ್ಟು ದೂರದಿಂದ ಕರೆಸುತ್ತೀರಿ? ಎಂದು ಕವಿ ನಿಸಾರ್ ಅಹಮದ್ ಸಿಡಿಮಿಡಿಗೊಳ್ಳುವಂತೆ ಮಾಡಿತ್ತು.

ಬೇಕೋ ಬೇಡವೋ ಎನ್ನುವ ವಿಚಾರಗಳನ್ನು ಮೀರಿ ನಾವಿಕ ಬೆಳೆದದ್ದಾಗಿದೆ. ಎರಡು ಸಂಸ್ಥೆಗಳಿರುವುದು ಕಾರ್ಯಕ್ರಮವನ್ನು ನಡೆಸುವ ಮತ್ತು ಸ್ವಯಂಸೇವಕರನ್ನು ಹೊಂದಿಸಿಕೊಳ್ಳುವ ಉದ್ದೇಶದಿಂದ ಒಳ್ಳೆಯದೇ ಆಗಬಹುದೇನೋ. ನಾವಿಕ ಮತ್ತು ಅಕ್ಕ ಸಂಸ್ಥೆಗಳು ಆಸ್ತಿಗಾಗಿ ವ್ಯಾಜ್ಯ ಮಾಡಿಕೊಂಡ ಅಣ್ಣ ತಮ್ಮಂದಿರಂತೆ ಮುಖ ತಿರುಗಿಸಿ ಕುಳಿತರೆ ಯಾರಿಗೂ ಹಿತವಿಲ್ಲ. ಈ ವರ್ಷದಲ್ಲಿ ಆಗುತ್ತಿರುವಂತೆ ಜುಲೈನಲ್ಲಿ ನಾವಿಕ ಸಮ್ಮೇಳನ ಮತ್ತು ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನಗಳು ನಡೆದರೆ ಭಾಗವಹಿಸುವವರಿಗೆ ಬಹಳ ಕಷ್ಟವಾಗುತ್ತದೆ.

ಅಕ್ಕ ಮತ್ತು ನಾವಿಕ ಸಂಸ್ಥೆಗಳು ಮಾತನಾಡಿಕೊಂಡು ಪರ್ಯಾಯ ವರ್ಷಗಳಲ್ಲಿ (ಒಂದು ವರ್ಷ ಅಕ್ಕ ಒಂದು ವರ್ಷ ನಾವಿಕ, ಹಾಗೆ) ಸಮ್ಮೇಳನವನ್ನು ನಡೆಸಿದರೆ ಭಾಗವಹಿಸುವ ಅಮೆರಿಕದ ಕನ್ನಡಿಗರು ಮತ್ತು ಭಾರತದ ಕಲಾವಿದರಿಗೆ ಅನುಕೂಲವಾಗುತ್ತದೆ ಹಾಗು ಈಗಿನಂತೆ ಎರಡುವರ್ಷಗಳಿಗೊಮ್ಮೆಯಲ್ಲದೆ ಪ್ರತಿವರ್ಷವೂ ಸಮ್ಮೇಳನವನ್ನು ನಡೆಸಿದಂತಾಗುತ್ತದೆ. ಸಮ್ಮೇಳನದ ಸ್ಥಳವನ್ನು ಕೂಡ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ನ್ಯಾಯ ಒದಗಿಸುವಂತೆ ಬದಲಿಸುತ್ತಿರಬೇಕು.

"ಅಮೆರಿಕದಿಂದ ಕಲಾವಿದರ ತಂಡವೊಂದು ಕರ್ನಾಟಕಕ್ಕೆ ಬಂದು ಪ್ರದರ್ಶನವನ್ನೇಕೆ ಇಟ್ಟುಕೊಳ್ಳಬಾರದು?'' ಎಂದು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಲಹೆಯನ್ನು ನೀಡಿದಾಗ ಮೊದಲು ಅದೊಂದು ಹಾಸ್ಯದಂತೆ ನನಗೆ ಕಂಡಿತು. ಆದರೆ ನಂತರ ಯೋಚಿಸಿದಂತೆಲ್ಲಾ ಹೌದಲ್ಲವೇ ಅದರಲ್ಲಿ ಅರ್ಥವಿದೆಯಲ್ಲಾ ಎನ್ನಿಸಿತು.

ಅಮೆರಿಕದಲ್ಲಿರುವ ತಮ್ಮನಿಗೆ ಭಾರತದ ಅಕ್ಕನ ಧ್ವನಿ ಎಷ್ಟು ಮುಖ್ಯವಾಗುತ್ತದೋ ಭಾರತದ ಅಕ್ಕನಿಗೂ ತಮ್ಮನ ಧ್ವನಿ ಅಷ್ಟೇ ಮುಖ್ಯವಾಗುತ್ತದೆ. ಎಂದೋ ಮನೆಬಿಟ್ಟು ಹೋದ ತಮ್ಮ ಇಂದು ನಡುಮನೆಯ ಚಾಪೆಯ ಮೇಲೆ ಕುಳಿತು ಹಾಡು ಹೇಳಿದಂತೆ. ಕಲೆಯನ್ನು ಮೀರಿದ ಭಾವವದು. ಯಶವಂತ ಸರದೇಶಪಾಂಡೆ ಮತ್ತು ಎಂ.ಡಿ.ಪಲ್ಲವಿಯವರನ್ನು ಅಮೆರಿಕ ಕಂಡಂತೆ ಅಮೆರಿಕದ ವಲ್ಲೀಶ ಶಾಸ್ತ್ರಿ ಮತ್ತು ಅಲಮೇಲು ಐಯ್ಯಂಗಾರರನ್ನು ಕರ್ನಾಟಕವೂ ಕಾಣಲಿ. ಯಾಕಾಗಬಾರದು?

ಲೇಖಕರ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X