ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡ ಸಮ್ಮೇಳನ ಆಯೋಜಕರುಗಳ ದೃಷ್ಟಿಕೋನ

By Shami
|
Google Oneindia Kannada News

ಅಮೆರಿಕಾ ನೆಲದಲ್ಲಿ ಕನ್ನಡ ಭಾಷಿಕರ ಸಮ್ಮೇಳನಗಳನ್ನು ಆಯೋಜಿಸುವವರ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಕನ್ನಡ ಸಂಸ್ಕೃತಿ ಮತ್ತು ಸಮುದಾಯದ ಬಗ್ಗೆ ಅತಿ ಉತ್ಸಾಹವಿರುವವರು ಮಾತ್ರವೇ ವಿದೇಶೀ ನೆಲದಲ್ಲಿ ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಸಾಧ್ಯ.

ನಮ್ಮ ಸಂಸ್ಕೃತಿಯ ಪರಿಚಯವಿಲ್ಲದ ನಾಡಿನಲ್ಲಿ ಇಂತಹ ಸಮ್ಮೇಳನಗಳಿಗೆ ಅನೇಕ ಚಿತ್ರವಿಚಿತ್ರ ಸಮಸ್ಯೆಗಳು ಎದುರಾಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಅಮೆರಿಕದ ಒತ್ತಡ ಜೀವನದಲ್ಲಿ ಇಂತಹದ್ದಕ್ಕೆ ಸಮಯವನ್ನು ಹೊಂದಿಸುವುದು ಒಂದು ಸಾಹಸವೇ ಸರಿ.

ಈ ಉತ್ಸಾಹದ ಭರದಲ್ಲಿ ಮತ್ತು ಹೆಚ್ಚುಹೆಚ್ಚು ಜನರನ್ನು ಸಮ್ಮೇಳನಕ್ಕೆ ಆಕರ್ಷಿಸಲು ಭಾರತದಿಂದ ಕರೆಸುವ ಕಲಾವಿದರ ಮತ್ತು ರಾಜಕಾರಣಿಗಳ ಪಟ್ಟಿ ಸ್ವಲ್ಪ ಜಾಸ್ತಿಯೇ ಆಗುತ್ತದೇನೋ (ನಾವಿಕ ಸಮ್ಮೇಳನಕ್ಕೆ ಹೆಚ್ಚು ರಾಜಕಾರಣಿಗಳು ಬರಲಿಲ್ಲ ಆದರೆ ಹೋದಸಲದ ಅಕ್ಕ ಸಮ್ಮೇಳನಕ್ಕೆ ಬಂದಿದ್ದರು).


ಈ ವಿಷಯದಲ್ಲಿ ಕರ್ನಾಟಕ ಸರಕಾರದ ಪಾತ್ರವೂ ಬಹಳವಿದೆ. ವಿಪರೀತ ಕಾರ್ಯಕ್ರಮಗಳನ್ನು ನಡೆಸಲು ಹೋಗಿ ಸಮಯದ ಒತ್ತಡದಲ್ಲಿ ಕಷ್ಟಪಡುವುದಕ್ಕಿಂತಾ ಹಿತಮಿತವಾಗಿ ಕೆಲವೇ ಕಾರ್ಯಕ್ರಮಗಳಿದ್ದರೆ ಚೆನ್ನ. ಇಂತಹ ಸಮ್ಮೇಳನಗಳಿಗೆ ಎಷ್ಟು ಕಲಾವಿದರು ಬರಬೇಕು ಮತ್ತು ಯಾರು ಯಾರು ಬರಬೇಕು ಎನ್ನುವ ವಿಚಾರದಲ್ಲಿ ಅಕ್ಕ ಮತ್ತು ನಾವಿಕದಂತಹ ಸಂಸ್ಥೆಗಳು ಕರ್ನಾಟಕ ಸರಕಾರದೊಂದಿಗೆ ನೇರ ಮತ್ತು ಪ್ರಾಮಾಣಿಕ ಮಾತುಕತೆಯನ್ನು ನಡೆಸಬೇಕು.

ನಾನು ಈ ಮೊದಲು ತಿಳಿಸಿದಂತೆ ಸಮ್ಮೇಳನಕ್ಕೆ ಬರುವವರು ಬರೇ ಕಾರ್ಯಕ್ರಮಗಳಿಗಲ್ಲ ಇನ್ನೂ ಅನೇಕ ಕಾರಣಗಳಿಗಾಗಿ ಬರುತ್ತಾರೆ. ನಾವಿಕ ಸಮ್ಮೇಳನದಲ್ಲಿ ಸಮಯ ಪರಿಪಾಲನೆಯ ವಿಚಾರ ದೊಡ್ಡ ಇರುಸುಮುರುಸಾಗಿ ಹೊರಹೊಮ್ಮಿತು.

ಕರ್ನಾಟಕ ಸರಕಾರದ ಪ್ರತಿನಿಧಿಗಳಿಗೆ ಮಾತನಾಡಲು ಮೂರು ನಿಮಿಷಗಳ ಸಮಯಾವಕಾಶ ಸಿಕ್ಕಿತು. ಅತಿಹೆಚ್ಚು ಕನ್ನಡಿಗರು ಓದುವ ದಿನಪತ್ರಿಕೆಯ ಸಂಪಾದಕರೂ ಸೇರಿದಂತೆ ಅನೇಕ ಗಣ್ಯರನ್ನು ಮುಖ್ಯ ವೇದಿಕೆಗೇ ಕರೆಯಲಾಗಲಿಲ್ಲ. ಸಮಯ ಪರಿಪಾಲನೆಯ ವಿಚಾರದಲ್ಲಿ ಆಯೋಜಕರ ವರ್ತನೆ ಕಲಾವಿದರಿಗೆ, ಅದರಲ್ಲೂ ವಿಶೇಷವಾಗಿ ಭಾರತದಿಂದ ಬಂದಿದ್ದ ಕಲಾವಿದರಿಗೆ ಕಿರಿಕಿರಿಯನ್ನು ತಂದದ್ದು ವ್ಯಕ್ತವಾಗುವಷ್ಟು ಸ್ಪಷ್ಟವಿತ್ತು.

ಈ ರೀತಿಯ ಕಟು ಸಮಯಪಾಲನೆಯಿಂದ ಸಮಾವೇಶದ ಕಾರ್ಯಕ್ರಮಗಳು ಬಹಳಷ್ಟು ಮಟ್ಟಿಗೆ ಯೋಜಿತ ಸಮಯದಲ್ಲೇ ಮುಗಿದವು ಎನ್ನುವುದು ನಿಜವಾದರೂ ಕಲೆ ಎನ್ನುವುದು ಹೃದಯ ಶಸ್ತ್ರಚಿಕಿತ್ಸೆಯಂತೆ ಯಂತ್ರ ನಿಖರತೆಯಿಂದ ಕೂಡಿರಬೇಕಾದ್ದಲ್ಲ ಎನ್ನುವುದನ್ನು ಆಯೋಜಕರು ಅರಿತಿದ್ದರೆ ಕಲಾವಿದರಿಗೆ ಸ್ವಲ್ಪ ಹಾಯೆನಿಸುತ್ತಿತ್ತೇನೋ.

ಹಿಂದೆ ಅಕ್ಕ ಸಮ್ಮೇಳನದಲ್ಲೂ ಇದೇ ರೀತಿಯಾಗಿ "ಎರಡು ಕವಿತೆಗಳನ್ನು ಕೇಳುವಷ್ಟು ತಾಳ್ಮೆ ಇಲ್ಲದವರು ನಮ್ಮನ್ನೇಕೆ ಅಷ್ಟು ದೂರದಿಂದ ಕರೆಸುತ್ತೀರಿ?" ಎಂದು ಕವಿ ನಿಸಾರ್ ಅಹಮದ್ ಸಿಡಿಮಿಡಿಗೊಳ್ಳುವಂತೆ ಮಾಡಿತ್ತು.

ಬೇಕೋ ಬೇಡವೋ ಎನ್ನುವ ವಿಚಾರಗಳನ್ನು ಮೀರಿ ನಾವಿಕ ಬೆಳೆದದ್ದಾಗಿದೆ. ಎರಡು ಸಂಸ್ಥೆಗಳಿರುವುದು ಕಾರ್ಯಕ್ರಮವನ್ನು ನಡೆಸುವ ಮತ್ತು ಸ್ವಯಂಸೇವಕರನ್ನು ಹೊಂದಿಸಿಕೊಳ್ಳುವ ಉದ್ದೇಶದಿಂದ ಒಳ್ಳೆಯದೇ ಆಗಬಹುದೇನೋ.

ನಾವಿಕ ಮತ್ತು ಅಕ್ಕ ಸಂಸ್ಥೆಗಳು ಆಸ್ತಿಗಾಗಿ ವ್ಯಾಜ್ಯ ಮಾಡಿಕೊಂಡ ಅಣ್ಣ ತಮ್ಮಂದಿರಂತೆ ಮುಖ ತಿರುಗಿಸಿ ಕುಳಿತರೆ ಯಾರಿಗೂ ಹಿತವಿಲ್ಲ. ಈ ವರ್ಷದಲ್ಲಿ ಆಗುತ್ತಿರುವಂತೆ ಜುಲೈನಲ್ಲಿ ನಾವಿಕ ಸಮ್ಮೇಳನ ಮತ್ತು ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನಗಳು ನಡೆದರೆ ಭಾಗವಹಿಸುವವರಿಗೆ ಬಹಳ ಬಹಳ ಕಷ್ಟವಾಗುತ್ತದೆ.

ಅಕ್ಕ ಮತ್ತು ನಾವಿಕ ಸಂಸ್ಥೆಗಳು ಮಾತನಾಡಿಕೊಂಡು ಪರ್ಯಾಯ ವರ್ಷಗಳಲ್ಲಿ (ಒಂದು ವರ್ಷ ಅಕ್ಕ ಒಂದು ವರ್ಷ ನಾವಿಕ, ಹಾಗೆ) ಸಮ್ಮೇಳನವನ್ನು ನಡೆಸಿದರೆ ಭಾಗವಹಿಸುವ ಅಮೆರಿಕದ ಕನ್ನಡಿಗರು ಮತ್ತು ಭಾರತದ ಕಲಾವಿದರಿಗೆ ಅನುಕೂಲವಾಗುತ್ತದೆ ಹಾಗು ಈಗಿನಂತೆ ಎರಡುವರ್ಷಗಳಿಗೊಮ್ಮೆಯಲ್ಲದೆ ಪ್ರತಿವರ್ಷವೂ ಸಮ್ಮೇಳನವನ್ನು ನಡೆಸಿದಂತಾಗುತ್ತದೆ. ಸಮ್ಮೇಳನದ ಸ್ಥಳವನ್ನು ಕೂಡ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಭೌಗೋಳಿಕ ನ್ಯಾಯ ಒದಗಿಸುವಂತೆ ಬದಲಿಸುತ್ತಿರಬೇಕು.

"ಅಮೆರಿಕದಿಂದ ಕಲಾವಿದರ ತಂಡವೊಂದು ಕರ್ನಾಟಕಕ್ಕೆ ಬಂದು ಪ್ರದರ್ಶನವನ್ನೇಕೆ ಇಟ್ಟುಕೊಳ್ಳಬಾರದು?" ಎಂದು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಲಹೆಯನ್ನು ನೀಡಿದಾಗ ಮೊದಲು ಅದೊಂದು ಹಾಸ್ಯದಂತೆ ನನಗೆ ಕಂಡಿತು. ಆದರೆ ನಂತರ ಯೋಚಿಸಿದಂತೆಲ್ಲಾ ಹೌದಲ್ಲವೇ ಅದರಲ್ಲಿ ಅರ್ಥವಿದೆಯಲ್ಲಾ ಎನ್ನಿಸಿತು.

ಅಮೆರಿಕದಲ್ಲಿರುವ ತಮ್ಮನಿಗೆ ಭಾರತದ ಅಕ್ಕನ ಧ್ವನಿ ಎಷ್ಟು ಮುಖ್ಯವಾಗುತ್ತದೋ ಭಾರತದ ಅಕ್ಕನಿಗೂ ತಮ್ಮನ ಧ್ವನಿ ಅಷ್ಟೇ ಮುಖ್ಯವಾಗುತ್ತದೆ. ಎಂದೋ ಮನೆಬಿಟ್ಟು ಹೋದ ತಮ್ಮ ಇಂದು ನಡುಮನೆಯ ಚಾಪೆಯ ಮೇಲೆ ಕುಳಿತು ಹಾಡು ಹೇಳಿದಂತೆ.

ಕಲೆಯನ್ನು ಮೀರಿದ ಭಾವವದು. ಯಶವಂತ ಸರದೇಶಪಾಂಡೆ ಮತ್ತು ಎಂ.ಡಿ.ಪಲ್ಲವಿಯವರನ್ನು ಅಮೆರಿಕ ಕಂಡಂತೆ ಅಮೆರಿಕದ ವಲ್ಲೀಶ ಶಾಸ್ತ್ರಿ ಮತ್ತು ಅಲಮೇಲು ಐಯ್ಯಂಗಾರರನ್ನು ಕರ್ನಾಟಕವೂ ಕಾಣಲಿ. ಯಾಕಾಗಬಾರದು?

English summary
Aims and objectives of Kannada conventions in North America: Different strokes by Dattatri Ramanna in Irvine, LA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X