ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆಯಲ್ಲಿ ಸೈ ಎನ್ನಿಸಿದ ಕನ್ನಡಿಗ ವಾಸುದೇವ ಅಡಿಗ

By * ಎಸ್ಕೆ. ಶಾಮಸುಂದರ
|
Google Oneindia Kannada News

Vasudeva Adiga
ಬೆಂಗಳೂರಿನ ಶಂಕರಪುರಂ ಬಡಾವಣೆ ರಂಗರಾವ್ ರಸ್ತೆಯಲ್ಲಿರುವ ಬ್ರಾಹ್ಮಣರ ಫಲಾಹಾರ ಮಂದಿರದ ಹೆಸರನ್ನು ನೀವು ಕೇಳಿರಬಹುದು. ಆಕಾರದಲ್ಲಿ ಕಿರಿಯದಾದರೂ ಈ ಹೋಟೆಲು ರುಚಿಯ ದೃಷ್ಟಿಯಿಂದ ಸಮಗ್ರ. ಮೃದುವಾದ ಇಡ್ಲಿ, ನೀರು ಚಟ್ನಿ, ಗರಿಯಾದ ಉದ್ದಿನವಡೆ, ಖಾರಾಭಾತ್ ಮತ್ತು ನಿಜವಾದ ಕಾಫಿ ಪೂರೈಸುವುದರಲ್ಲಿ ಈ ಪುಟ್ಟ ಹೋಟೆಲ್ ಎತ್ತಿದ ಕೈ.

ಈ ಹೋಟೆಲನ್ನು 70ರ ದಶಕದಲ್ಲಿ ಆರಂಭಿಸಿದವರು ಎಂಟಿಆರ್ ಅಡುಗೆ ಮನೆಯಲ್ಲಿ ಪಳಗಿದ್ದ ಶಂಕರನಾರಾಯಣ ಮೂಲದ ದಿವಂಗತ ನಾಗೇಶ ಅಡಿಗರು. ನಾಗೇಶ ಅಡಿಗರ ನಾಲಕ್ಕನೇ ಮಗನೇ ವಾಸುದೇವ ಅಡಿಗ. ದರ್ಶಿನಿ ಹೋಟೆಲ್ ಸಂಸ್ಕೃತಿಯನ್ನು ಉನ್ನತ ವಾಣಿಜ್ಯ ನೆಲೆಗಳಿಗೆ ವಿಸ್ತರಿಸಿ ಸೈ ಎನಿಸಿಕೊಂಡ ಕನ್ನಡಿಗ. ಸ್ನೇಹ ವಲಯಗಳಲ್ಲಿ ವಾಸು ಎಂದೇ ಜನಪ್ರಿಯರಾದ ಅವರು ಓದಿದ್ದು ಬಿಇ. ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದನಂತರ ಅಮೆರಿಕಾದಲ್ಲಿ ಉದ್ಯೋಗ ಮಾಡುವ ಕನಸು ಇಟ್ಟುಕೊಂಡಿದ್ದರು.

ಆ ಕನಸು ಅವರಿಗೆ ಕೂಡಿ ಬರಲೇ ಇಲ್ಲ. ಕೊನೆಗೆ ಹೋಟೆಲು ಉದ್ಯಮದಲ್ಲಿ ತೊಡಗುವ ಕುಟುಂಬ ವೃತ್ತಿಯೇ ಒಲಿದು ಅದನ್ನೇ ಉದ್ಯೋಗ ಕ್ಷೇತ್ರ ಮಾಡಿಕೊಂಡ ಯುವಕ. ಸದ್ಯ ಜಯನಗರದಲ್ಲಿ, ಬನ್ನೇರುಘಟ್ಟ ರಸ್ತೆಯಲ್ಲಿ, ವಿಜಯಾಕಾಲೇಜ್ ಕಾಂಪೌಂಡಿನಲ್ಲಿ ಮತ್ತು ಕೆಂಪೇಗೌಡ ರಸ್ತೆಯಲ್ಲಿ ಅವರ ಅಡಿಗಾಸ್ ರೆಫ್ರೆಷ್ ಮೆಂಟ್ಸ್ ಮಳಿಗೆಗಳು ಭರ್ಜರಿ ವ್ಯಾಪಾರ ಮಾಡುತ್ತಿವೆ.

ಅಮರನಾಥ್ ಗೌಡರು ಸಮ್ಮೇಳನದಲ್ಲಿ ವಾಸು ಅಡಿಗರ ಅಡುಗೆ ಕಾರ್ಯಕ್ರಮಗಳನ್ನು ಪ್ರಕಟಿಸುತ್ತಿರುವಾಗ ಅಲ್ಲೇ ಕುಳಿತಿದ್ದ ವಾಸುದೇವ ಅಡಿಗ ಮಧ್ಯ ಪ್ರವೇಶಿಸಿ ಮಾತನಾಡಿದರು. ಅಮೆರಿಕಾದಲ್ಲಿ ಎಂಟಲ್ಲ ಹತ್ತು ಸಾವಿರ ಜನಕ್ಕೆ ಅಡುಗೆ ಮಾಡಲು ತಾವು ಸಿದ್ಧ ಆದರೆ ತಮ್ಮ ಅಡುಗೆ ತಂಡದ 25 ಮಂದಿಗೆ ಪಾಸ್ಪೋರ್ಟ್ ಮತ್ತು ವೀಸಾ ಸಿಕ್ಕರೆ ಮಾತ್ರ ಈ ಯೋಜನೆ ಸಾಕಾರವಾಗುತ್ತದೆ ಎಂದರು. 'ವೀಸಾ ಪಾಸ್ಪೋರ್ಟ್ ಯೋಚನೆ ಬಿಡಿ, ಅಮೆರಿಕಾಗೆ ಬಂದಾಗ ಏನು ಮಾಡುತ್ತೀರಿ ಎನ್ನುವ ಬಗ್ಗೆ ವಿವರಿಸಿ' ಎನ್ನುವುದು ಅಮರನಾಥ್ ಗೌಡರ ಪ್ರಶ್ನೆಯಾಗಿತ್ತು.

ಅದಕ್ಕೆ ಉತ್ತರಿಸಿದ ವಾಸು, ಬೆಂಗಳೂರು ಶೈಲಿಯ ತಿಂಡಿಗಳು, ಕರಾವಳಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕೆಲವು ಉತ್ತರ ಭಾರತೀಯ ತಿನಿಸಿಗಳನ್ನು ತಾವು ಸಮ್ಮೇಳನದಲ್ಲಿ ಸಾದರಪಡಿಸುವ ಇಚ್ಛೆ ಹೊಂದಿರುವುದಾಗಿ ಹೇಳಿದರು. ಅಂತೂ ಐಪಾಡ್, ಐಫೋನು ಹಿಡಿದುಕೊಂಡು ಅಮೆರಿಕಾಗೆ ಹೊರಡುವವರ ಸಾಲಿನಲ್ಲಿ ಸೌಟು ಕುರ್ಪಿ ಹಿಡಿದು ವಿಮಾನ ಹತ್ತಿ ಜೆಎಫ್ ಕೆ ನಿಲ್ದಾಣದಲ್ಲಿ ಇಳಿಯುವ ಒಬ್ಬ ಕನ್ನಡ ಉದ್ಯಮಿಯನ್ನು ನೋಡುವ ಕಾಲಬಂದಂತಾಯಿತು. ಅಕ್ಕ ಸಮ್ಮೇಳನ ಸಮಿತಿಯ ಇರಾದೆ ಮತ್ತು ವಾಸು ಅವರ ಕನಸು ಕೂಡಿ ನನಸಾದರೆ ರಾರಿಟನ್ ಸಭಾಂಗಣದ ಪಾಕಶಾಲೆಯಿಂದ ತುಪ್ಪದ ಪಾಕ ಮತ್ತು ಕರಿಬೇವು ಸೊಪ್ಪಿನ ಒಗ್ಗರಣೆ ಪರಿಮಳ ನಿಮ್ಮ ಮೂಗಿಗೆ ತಟ್ಟುವುದು ನಿಶ್ಚಿತ.

ಸುದ್ದಿಗೋಷ್ಠಿ ಮುಗಿದ ನಂತರ ದಟ್ಸ್ ಕನ್ನಡದೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದ ಅಡಿಗರು, ತಾವು ಕಳೆದ ಜೂನ್ ನಲ್ಲಿ ನ್ಯೂ ಜೆರ್ಸಿಗೆ ಹತ್ತು ದಿವಸಗಳ ಭೇಟಿ ಕೊಟ್ಟಿದ್ದನ್ನು ನೆನಪಿಸಿಕೊಂಡರು. ರಾರಿಟನ್ ಅಡುಗೆ ಶಾಲೆಯಲ್ಲಿ ಪಾತ್ರೆ ಪಡಗ ಮತ್ತು ವಿದ್ಯುತ್ ಚಾಲಿತ ಅಡುಗೆ ಇಂಜಿನ್ನುಗಳ ಕಾರ್ಯ ನಿರ್ವವಣೆಯ ಸರ್ವೆಯನ್ನು ಅವರು ಮಾಡಿಕೊಂಡು ಬಂದಿದ್ದಾರೆ. ಅವರ ತಂಡ ಮಾಡುವುದು ಅಡುಗೆ ಮಾತ್ರ, ಆದರೆ ಬಡಿಸುವ ಕೆಲಸಕ್ಕಾಗಿ ಅಮೆರಿಕಾದ ಜೈಕೋ ಕಂಪನಿಯೊಂದಿಗೆ ಒಡಬಂಡಿಕೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಿಂದ ಸಸ್ಯಾಹಾರಿ ಪಾಕಪ್ರವೀಣರು ಅಮೆರಿಕಾಗೆ ಬರುತ್ತಿದ್ದಾರೆ ಎಂಬ ಸುದ್ದಿ ಓದಿ ಮಾಂಸಾಹಾರಿಗಳು ನಿರಾಶರಾಗಬೇಕಿಲ್ಲ. ಪಕ್ಕದ ಸಾಲಿನ ಟ್ರೇಗಳಲ್ಲಿ ಚಿಕನ್ ಕರಿ, ಕಬಾಬ್ ಗಳು ಇರುತ್ತವೆ. ಆಸಕ್ತರು ಆ ಕಡೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬಹುದು.

ಅಕ್ಕ ಸಮ್ಮೇಳನದಲ್ಲಿ ಅಡಿಗಾಸ್ ಅಡುಗೆಅಕ್ಕ ಸಮ್ಮೇಳನದಲ್ಲಿ ಅಡಿಗಾಸ್ ಅಡುಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X