ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಯ ದಿನ ಕೊನೆಯಾಗದ ಹರ್ಷ

By * ವಸಂತ ನಾಡಿಗೇರ, ಲಾಸ್ ಏಂಜಲೀಸ್
|
Google Oneindia Kannada News

Navika 2010 Closing Ceremony
ಅಮೆರಿಕದಾದ್ಯಂತ ಜುಲೈ 4 ರಂದು ಸ್ವಾತಂತ್ರ್ಯೋತ್ಸವದ ದಿನ ಕಾಕತಾಳೀಯವಾಗಿ ಇಲ್ಲಿರುವ ಅಮೆರಿಕನ್ನಡರಿಗೂ ಸಂಭ್ರಮ - ಸಡಗರದ ದಿವಸ. ಕಾರಣ ಇಲ್ಲಿ ನಡೆಯುತ್ತಿರುವ ನಾವಿಕ ಸಮ್ಮೇಳನ ಅಂತಿಮ ದಿನ.

ಮೊದಲೆರಡು ದಿನಗಳಲ್ಲಿ ಕಂಡು ಬಂದ ಗೊಂದಲ-ಗಲಿಬಿಲಿಯನ್ನು ನಿವಾರಿಸಿದ ಪರಿಣಾಮವೋ ಅಥವಾ ಅದಕ್ಕೆ ಎಲ್ಲರೂ ಹೊಂದಿಕೊಂಡಿದುದರ ಫಲವೋ ಏನೊ. ಅಂತೂ ಕೊನೆಯ ದಿನ ಸಾಕಷ್ಟು ಮೌಲಿಕವಾಗಿದ್ದಂತೂ ನಿಜ. ಸ್ಥಳೀಯರಲ್ಲಿ ಸ್ವಾತಂತ್ರ್ಯ ದಿನದ ಸಡಗರ ಏನೂ ಕಂಡು
ಬರಲಿಲ್ಲ.

ಗ್ಯಾಲರಿ: ನಾವಿಕ ಸಮ್ಮೇಳನದ ವರ್ಣರಂಚಿತ ಚಿತ್ರಗಳು

ಆದರೆ ಇಲ್ಲಿನ ಕನ್ನಡಿಗರು ಮಾತ್ರ ಮೆರವಣಿಗೆ ನಡೆಸಿ ಸಂತಸಪಟ್ಟರು. ಬೆಳಗ್ಗೆ ನಡೆದ ಈ ಶೋಭಾಯಾತ್ರೆ ಎಲ್ಲರ ಮನಸೂರೆಗೊಂಡಿತು. ಮುಖ್ಯ ವೇದಿಕೆಯಲ್ಲಂತೂ ಸಹಜವಾಗಿ ಹಲವು ಪ್ರಮುಖ ಕಾರ್ಯಕ್ರಮಗಳು ನಡೆದವು. ಆದರೆ ಪರ್ಯಾಯ ವೇದಿಕೆಯಲ್ಲಿ ನಡೆದ ಬಹುತೇಕ ಎಲ್ಲ ಕಾರ್ಯಕ್ರಮಗಳೂ ಅದಕ್ಕೆ ಜಿದ್ದಿಗೆ ಬಿದ್ದಂತೆ ಉತ್ತಮವಾಗಿ ನಡೆದವು.

ಅಮೆರಿಕದಲ್ಲಿ ನೆಲೆ ನಿಂತವರು ರಚಿಸುವ ಕೃತಿಗಳ ಆಳ- ಅಗಲ, ವಿಸ್ತಾರದ ಬಗ್ಗೆ ಗಂಭೀರ ಚರ್ಚೆ, ವಿಮರ್ಶೆ ನಡೆಸಿದರೆ ಅದೇ ಒಂದು ಸಾಹಿತ್ಯ ಪ್ರಕಾರವಾಗಬಲ್ಲದು ಎಂಬುದನ್ನು ಅರವಿಂದ ಮಾಲಗತ್ತಿಯವರು ವಿಶದವಾಗಿ ವಿವರಿಸಿದರು. ಆದರೆ ಈ ವೇದಿಕೆಯ ಕಲಾಪದ ಹೈಲೈಟ್ ಎಂದರೆ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರು ನಡೆಸಿಕೊಟ್ಟ ಸಂವಾದ.

ಹೃದಯಕ್ಕೆ ಹತ್ತಿರವಾದ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ ಅವರು ಇಡೀ ಸಂವಾದದ ಆಯಾಮವನ್ನು ಎತ್ತರಕ್ಕೆ ಕೊಂಡೊಯ್ದರು. ಮುಖ್ಯ ವೇದಿಕೆಯಲ್ಲಿ ಒಂದೇ ದಿನ 6 ನಾಟಕಗಳು ಪ್ರದರ್ಶನಗೊಂಡವು.

ಈ ಪೈಕಿ ವಲ್ಲೀಶ ಶಾಸ್ತ್ರಿ ಮತ್ತು ತಂಡ ಅಭಿನಯಿಸಿದ ತಿರುಗೇಟು ನಾಟಕವು ಗಮನಸೆಳೆಯಿತು. ವೈಜಯಂತಿ ಕಾಶಿ ಮತ್ತು ತಂಡದವರು ಪ್ರಸ್ತುತಪಡಿಸಿದ ನೃತ್ಯರೂಪಕ ಅದ್ಭುತ, ಅಮೋಘವಾಗಿತ್ತು.

ಕಿಕ್ಕೇರಿ ಕೃಷ್ಣಮೂರ್ತಿ, ಜೆನ್ನಿ, ಪ್ರಕಾಶ್ ಸೊಂಟಕ್ಕೆ ಅವರ ಸಂಗೀತ ಸುಧೆಯನ್ನೂ ಎಲ್ಲರೂ ಸವಿದರು. ಇದರ ಮಧ್ಯೆ ಅಧಿಕಾರ ಹಸ್ತಾಂತರ, ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವಂದನಾರ್ಪಣೆ ಕಾರ್ಯಕ್ರಮಗಳು ನಡೆದವು.

ಬಳಿಕ ದಿನದ ಕಾರ್ಯಕ್ರಮದ ಹೈಲೈಟ್ ಎಂದರೆ ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾಂಡ್ರೆ ಮೊದಲಾದವರು ಭಾಗವಹಿಸಿದ್ದ ಸಂಗೀತ ಕಾರ್ಯಕ್ರಮ. ಒಟ್ಟಾರೆ ನಾವಿಕ ಸಮ್ಮೇಳನದ ಮೂರೂ ದಿನಗಳ ಕಲಾಪ ಅದ್ಭುತ ಎನ್ನುವಂತೆ ನಡೆಯಲಿಲ್ಲವಾದರೂ ಅಲ್ಲೊಂದು ಕನ್ನಡದ ಕಲರವ ಕೇಳಿ ಬಂದಿದ್ದಂತೂ ಹೌದು. ಅಷ್ಟರಮಟ್ಟಿಗೆ ಇದೊಂದು ಯಶಸ್ವಿ ಪ್ರಯತ್ನ.

ಆದರೆ ಕಲಾವಿದರ ಉಪೇಕ್ಷೆ, ಸಂಘಟನೆ, ವ್ಯವಸ್ಥೆಯ ಕೊರತೆ ಒಂದು ಕಪ್ಪು ಚುಕ್ಕೆಯಾಗಿ ಉಳಿದುಹೋಯಿತು. ಇನ್ನೊಂದಿಷ್ಟು ಪ್ರೀತಿ, ಆತ್ಮೀಯತೆ, ಶಿಸ್ತು, ಸೌಜನ್ಯ ಬೆರೆತಿದ್ದರೆ ಅದು ಸ್ಮರಣೀಯ ಎನಿಸುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X