ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ಏಂಜಲೀಸ್ ಬೀದಿಗಳಲ್ಲಿ ಕನ್ನಡ ರಥಯಾತ್ರೆ

By * ಶ್ರೀವತ್ಸ ಜೋಶಿ ಮತ್ತು ಎಸ್ಕೆ ಶಾಮಸುಂದರ
|
Google Oneindia Kannada News

Navika Meravanige
ಉತ್ತರ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಜುಲೈ 4ರ ಭಾನುವಾರ ಇಬ್ಬಗೆಯ ಸಂಭ್ರಮ. ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರೀಯ ಹಬ್ಬ ಮತ್ತು 'ನಾವಿಕ' ವಿಶ್ವ ಕನ್ನಡ ಸಮ್ಮೇಳನದ ಮೂರನೆ ದಿನ ಅನಾವರಣಗೊಂಡ ಮನಮೋಹಕ ಮೆರವಣಿಗೆ.

ಕನ್ನಡ ಸಂಸ್ಕೃತಿ, ಭಾಷೆ ಮತ್ತು ಪ್ರಾದೇಶಿಕ ವೈವಿಧ್ಯಗಳನ್ನು ಸ್ತಬ್ಧಚಿತ್ರಗಳಲ್ಲಿ ಒಡಮೂಡಿಸಿದ ಅತ್ಯಾಕರ್ಷಕ ಕಾರ್ಯಕ್ರಮ. ಮುಂಚೂಣಿಯಲ್ಲಿ 'ನಾವಿಕ' ಸಂಸ್ಥೆಯ ಬ್ಯಾನರ್. ನಾದಸ್ವರದ ಅಲೆಗಳು. ದೈವಿಕ ಭಾವನೆಯನ್ನು ಉದ್ದೀಪನಗೊಳಿಸುವ ಪಲ್ಲಕಿ ಉತ್ಸವ, ಋತ್ವಿಜರಿಂದ ವೇದಘೋಷಗಳು. ಕಲಶ ಮಂಗಲದ್ರವ್ಯಗಳನ್ನು ಹಿಡಿದ ಸುಮಂಗಲೆಯರ ಸಾಲು.

ಬೆಂಗಳೂರು ಕರಗ, ಕೊಡಗಿನ ವೈಭವ, ನಂದಿಧ್ವಜ ಕುಣಿತ. ಕಂಸಾಳೆ ನೃತ್ಯ ಕಂಡು ಹುರುಪಿನಿಂದ ತಾಳ ಹಾಕಿದ ನಟ ಶಿವಣ್ಣ. ಮೈಸೂರು ಒಡೆಯರು, ಕೃಷ್ಣದೇವರಾಯ ಮುಂತಾಗಿ ಕರ್ನಾಟಕವನ್ನಾಳಿದ ಮಹಾನ್ ಪುರುಷರ ವೇಷ ಧರಿಸಿದ ಅಮೆರಿಕನ್ನಡಿಗರ ಪಾದಯಾತ್ರೆ.

ನಾವಿಕ ಸಮ್ಮೇಳನದ ಫೋಟೋ ಗ್ಯಾಲರಿ

ಜತೆಯಲ್ಲೇ ಸಂಗೀತ ಪಿತಾಮಹ ಕನಕ-ಪುರಂದರರ ವೇಷ ಧರಿಸಿ ನಾಮಸಂಕೀರ್ತನೆ. ಮಹಿಳೆಯರಿಂದ ಕೋಲಾಟ, ಕನ್ನಡ ನಾಡಿನ ವೈಭವ ಚರಿತೆ ಸಾರುವ ದೃಶ್ಯ ಸಮೂಹಗಳು. ಇವೆಲ್ಲವಕ್ಕೆ ಕಲಶವಿಟ್ಟಂತೆ ಕನ್ನಡ ಕಲಿಯುತ್ತಿರುವ ಚಿಣ್ಣರ ಪುಟ್ಟ ಹೆಜ್ಜೆಗಳು.

ನಾವಿಕ ಸಂಸ್ಥೆಯ ಮೊಟ್ಟಮೊದಲ ವಿಶ್ವ ಕನ್ನಡಿಗರ ಸಮ್ಮೇಳನದ ಸಮಾರೋಪದಂದು ಹಲವು ಬಗೆಯ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳು ಸಾಕಾರಗೊಂಡವು. ಸಿದ್ಧಲಿಂಗ ಪಟ್ಟಣಶೆಟ್ಟಿ, ನಲ್ಲೂರು ಪ್ರಸಾದ್ ಮತ್ತು ಅರವಿಂದ ಮಾಲಗತ್ತಿ ಅವರೊಂದಿಗೆ ಸಾಹಿತ್ಯ ಕಾಲಕ್ಷೇಪ.

ದಟ್ಸ್‌ಕನ್ನಡ ಡಾಟ್ ಕಾಮ್ ಮತ್ತು ವಿಜಯ ಕರ್ನಾಟಕದ ಸಂಪಾದಕರೊಂದಿಗೆ ಪ್ರಜಾವಾಣಿಯ ಹಿರಿಯ ಪತ್ರಕರ್ತ ಇ.ವಿ.ಸತ್ಯನಾರಾಯಣ ಅವರೂ ಉಪಸ್ಥಿತರಿದ್ದ ಸಭೆಯಲ್ಲಿ ಪ್ರಚಲಿತ ಕನ್ನಡ ಪತ್ರಿಕೋದ್ಯಮದ ಹಾಸುಬೀಸುಗಳ ಬಗ್ಗೆ ಬಿಚ್ಚುಮನಸ್ಸಿನ ಮಾತುಕತೆ. ಇಂದುಶ್ರೀಯಿಂದ ಮಾತನಾಡುವ ಗೊಂಬೆಗಳಾಟ, ವೈಜಯಂತಿ ಕಾಶಿಯವರಿಂದ ನೃತ್ಯ.

ಜತೆಯಲ್ಲೇ ಸ್ಥಳೀಯ ಕನ್ನಡಕೂಟಗಳ ಸದಸ್ಯರಿಂದ ವಿವಿಧ ಕಲಾಪ್ರದರ್ಶನಗಳು. ಭೋಜನಶಾಲೆಯಲ್ಲಿ ಸತತ ಮೂರನೇ ದಿನವೂ ಹಬ್ಬದೂಟದ ಘಮಘಮ. ಉತ್ತರ ಅಮೆರಿಕದ ನಾನಾ ಮೂಲೆಗಳಿಂದ, ಇಂಗ್ಲೇಂಡ್ ಸಿಂಗಾಪುರ ಮತ್ತು ಕರ್ನಾಟಕದಿಂದ ಬಂದ ಕಲಾವಿದರು, ಗಣ್ಯರು, ಅಧಿಕಾರಿಗಳು, ಪತ್ರಕರ್ತರು ಮತ್ತು ಸಮಾನ ಮನಸ್ಕರ ಸ್ನೇಹ ಸಮ್ಮಿಲನ.

ಭಾನುವಾರ ಸಂಜೆ ಸಮ್ಮೇಳನದ ಕೊನೆಯ ಕಾರ್ಯಕ್ರಮದಲ್ಲಿ ತಾರೆಗಳ ತೋಟವಾದ ಮುಖ್ಯ ಸಭಾಂಗಣ. ಶಿವರಾಜಕುಮಾರ್, ಶರ್ಮಿಳಾ ಮಾಂಡ್ರೆ, ಜೆನ್ನಿಫರ್ ಕೊತ್ವಾಲ್, ಜಯಂತಿ, ಮುಖ್ಯಮಂತ್ರಿ ಚಂದ್ರು, ಬಿ.ಸುರೇಶ, ಯಶವಂತ ಸರದೇಶಪಾಂಡೆ, ಬದರಿ ಪ್ರಸಾದ್, ಪ್ರವೀಣ ಗೋಡಖಿಂಡಿ, ಎಂ.ಡಿ.ಪಲ್ಲವಿ, ಅಜಯ್-ದಿವ್ಯಾ ಇವರೆಲ್ಲರಿಂದ ಭಾನುವಾರದ ಸಂಜೆಗೆ ವಿಶೇಷ ಮೆರುಗು. ಕನ್ನಡ ಚಲನಚಿತ್ರಗೀತೆಗಳನ್ನು ಬಹುಶಃ ಇದೇ ಮೊದಲಬಾರಿಗೆ ಮೊಳಗಿಸಿದ ಪಸಡಿನಾ ಸಭಾಂಗಣದ ಧ್ವನಿವರ್ಧಕಗಳು. ಕಣ್ಣುಕೋರೈಸುವ ಬೆಳಕಿನಲ್ಲಿ ತಾರೆಯರೊಂದಿಗೆ ಹೆಜ್ಜೆಹಾಕಿದ ಪ್ರೇಕ್ಷಕಗಡಣ.

ಭಾಗವಹಿಸಿದ ಎಲ್ಲ ಸಮ್ಮೇಳನಾರ್ಥಿಗಳಲ್ಲೂ ಸುಂದರ ನೆನಪುಗಳನ್ನು ಛಾಪಿಸಿ ಮುಕ್ತಾಯಗೊಂಡ ನಾವಿಕ' ಶಿಖರ ಸಮಾವೇಶ. ಉತ್ತರ ಅಮೆರಿಕ ಖಂಡದ ಕನ್ನಡ ವಲಯಗಳಲ್ಲಿ ಹೊಸ ಸಂಚಲನಕ್ಕೆ ಸಾಕ್ಷಿಯಾಯಿತು ಈ ಕನ್ನಡ ನುಡಿಹಬ್ಬ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X