ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುನಾಡಲಿ ಹರಿಯಲಿ ಕಾಂಚಾಣದ ಹೊಳೆ

By * ಪಿ. ತ್ಯಾಗರಾಜ್, ಲಾಸ್‌ ಏಂಜಲೀಸ್
|
Google Oneindia Kannada News

Capt Ganesh Karnik
ಬಂಡವಾಳ ಹೂಡಿಕೆ ಮೂಲಕ ರಾಜ್ಯದ ಪ್ರಗತಿಗೆ ನೆರವಾಗುವಂತೆ ಅಮೆರಿಕ ಕನ್ನಡಿಗರಿಗೆ ಕರ್ನಾಟಕ ಸರಕಾರ ಕರೆ ನೀಡಿದೆ. ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ (ನಾವಿಕ)ದ ಪ್ರಥಮ ವಿಶ್ವ ಸಮ್ಮೇಳನ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷ ಗಣೇಶ್ ಕಾರ್ಣಿಕ್ ಶನಿವಾರ ಈ ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ವಿ.ಎಸ್. ಆಚಾರ್ಯ ಅವರ ಸಂದೇಶ ವಾಚಿಸಿದ ಚಂದ್ರು, ರಾಜ್ಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಪ್ರಗತಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡುವಂತೆ ಕೋರಿಕೆ ಸಲ್ಲಿಸಿದರು.

ಅಮೆರಿಕ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವ ನಾವಿಕ'ದ ಉದ್ದೇಶ ಹಾಗೂ ನಿರೀಕ್ಷೆಗಳ ಸಾಕಾರಕ್ಕೆ ರಾಜ್ಯ ಸರಕಾರ ಕೈಜೋಡಿಸಲಿದೆ. ನಶಿಸುತ್ತಿರುವ ಭಾಷೆಗಳ ಯಾದಿಯಲ್ಲಿ ಕನ್ನಡ ಇದೆ ಎಂಬ ಭೀತಿಯನ್ನು ಸಪ್ತ ಸಾಗರಗಳಾಚೆ ನಡೆಯುತ್ತಿರುವ ನಾವಿಕ ಸಮ್ಮೇಳನ ದೂರ ಮಾಡಿದೆ. ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ, ಕರ್ನಾಟಕ, ಹೊರ ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಲ್ಲೂ ಜೀವಂತವಾಗಿ ಇರುತ್ತದೆ ಎಂಬುದನ್ನು ದೃಢಪಡಿಸಿದೆ ಎಂದರು. ಕರ್ನಾಟಕದ ಅಭಿವೃದ್ಧಿ ಹಿನ್ನೆಲೆಯಲ್ಲಿ ನಾವಿಕ' ನಿರ್ಣಯಗಳಿಗೆ ಸರಕಾರದ ಬೆಂಬಲ ಇದೆ. ಅದರ ಅನಿಸಿಕೆ, ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತದೆ ಎಂದು ಗಣೇಶ್ ಕಾರ್ಣಿಕ್ ತಿಳಿಸಿದರು.

ದೂರ ದೇಶಗಳ ಕನ್ನಡಿಗರ ಜತೆಗಿನ ಸಂಬಂಧ ಗಟ್ಟಿಗೊಳಿಸಲು ಕರ್ನಾಟಕ ಸರಕಾರ ಅನಿವಾಸಿ ಭಾರತೀಯ ನಿವಾಸಿಗಳ ಘಟಕ ಸೃಜಿಸಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳು ಇವೆ. ಅಮೆರಿಕ ಕನ್ನಡಿಗರು ರಾಜ್ಯದ ಅಭಿವೃದ್ಧಿಗೆ ತಮ್ಮ ಜ್ಞಾನ, ಸಂಶೋಧನೆ ಅಂಶಗಳನ್ನು ವಿನಿಯೋಗಿಸಬೇಕು. ಅನುಭವವನ್ನು ಧಾರೆ ಎರೆಯಬೇಕು. ನಾವಿಕ'ದ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ ಎಂದು ಹೇಳಿದರು.

ನಾವಿಕ ಸಮ್ಮೇಳನ ಫೋಟೋಗಳು

ಇತ್ತೀಚೆಗೆ ಧಾರವಾಡದ ಹಳ್ಳಿಯೊಂದಕ್ಕೆ ಹೋಗಿದ್ದೆ. ಸುಮಾರು 680 ಮನೆಗಳ ಹಳ್ಳಿ ಅದು. ಅಲ್ಲಿನ ಶೇಕಡ 10ರಷ್ಟು ಮನೆಗಳಿಗೆ ಶೌಚಾಲಯವೇ ಇಲ್ಲ. ಆದರೆ ಬಹುತೇಕ ಮನೆಗಳಲ್ಲಿ ಮೋಟಾರ್ ಬೈಕ್, ಮೊಬೈಲ್ ಫೋನ್, ಡಿಶ್ ಆಂಟೆನಾ ಸಂಪರ್ಕ ಇದೆ. ಆದ್ಯತೆಗಳ ಬಗ್ಗೆ ಜ್ಞಾನದ ಕೊರತೆ ಇದಕ್ಕೆ ಕಾರಣ. ಇಂಥ ಅನೇಕ ಉದಾಹರಣೆಗಳು ಕರ್ನಾಟಕದ ತುಂಬಾ ಹರಡಿಕೊಂಡಿವೆ. ಹೀಗಾಗಿ ಜ್ಞಾನ ಬಂಡವಾಳ ಹೂಡಿಕೆಗೂ ಮುಂದಾಗಬೇಕು ಎಂದು ಅಮೆರಿಕದ ಕನ್ನಡಿಗರನ್ನು ಕೋರಿದರು.

ನಾವಿಕ' ತನ್ನನ್ನು ಉತ್ತರ ಅಮೆರಿಕಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಬಾರದು. ಏಕೆಂದರೆ ನಾವಿಕ ತನ್ನನ್ನು ನಾವು ವಿಶ್ವ ಕನ್ನಡಿಗರು' (ನಾವಿಕ) ಎಂದು ಕರೆದುಕೊಂಡಿದೆ. ಹೀಗಾಗಿ ವಿಶ್ವದ 158 ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಜತೆ ಸಂಬಂಧದ ಕೊಂಡಿಯಾಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಸಹಸ್ರಾರು ಕಿ.ಮೀ. ದೂರದ ಲಾಸ್ ಏಂಜಲೀಸ್‌ನಲ್ಲಿ ಕನ್ನಡದ ತೇರು ಎಳೆಯುವ ಮನಸ್ಸುಗಳು ಇರುವಾಗ, ಕನ್ನಡಕ್ಕೆ ಸಾವೆಲ್ಲಿಹುದು? ಕನ್ನಡ ಅವಸಾನದ ಅಂಚಿನಲ್ಲಿದೆ ಎಂಬುದು ಕೇವಲ ಭ್ರಮೆ. ಕನ್ನಡಿಗರು ನೆಲಮೂಲ ಸಂಸ್ಕೃತಿಯ ಜನ. ಕನ್ನಡ ಸಹಸ್ರಾರು ವರ್ಷ ಬದುಕುತ್ತದೆ. ವಿಶ್ವದ ಎಲ್ಲೆಡೆ ಶಾಶ್ವತವಾಗಿ ಇರುತ್ತದೆ ಎಂಬುದಕ್ಕೆ ಈ ಸಮ್ಮೇಳನವೇ ಸಾಕ್ಷಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್, ಕನ್ನಡಿಗರು ಆಲಸಿಗಳು, ಅಲ್ಪತೃಪ್ತರು ಎಂಬುದನ್ನು ಈ ಸಮ್ಮೇಳನ ಶೃತಪಡಿಸಿದೆ ಎಂದರು. ಕನ್ನಡ ಕಾದಂಬರಿಗಳ ಸಂಕ್ಷಿಪ್ತ ಚಿತ್ರಸಂಪುಟ ಇಂಡಿಯ ಕಾಮಿಕ್ಸ್' ಬಿಡುಗಡೆ ಮಾಡಿದ ಇಲಾಖೆ ನಿರ್ದೇಶಕ ಮನು ಬಳಿಗಾರ್, ಅಲ್ಲಿ ಕರ್ನಾಟಕ, ಇಲ್ಲಿ ಅಮೆರಿಕ, ಬೆಸೆದಿರುವುದು ಎಲ್ಲರ ಸಂಪರ್ಕ, ಇದು ನಾವಿಕ' ಎಂದು ಬಣ್ಣಿಸಿದರು.

ಖ್ಯಾತ ಬರಹಗಾರ ಸಿದ್ಧಲಿಂಗ ಪಟ್ಟಣಶೆಟ್ಟಿ ಅಲೆವಾಣಿ' ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಬೆಂಗಳೂರು ವಿವಿ ಕುಲಪತಿ ಡಾ. ಪ್ರಭುದೇವ್, ಚಿತ್ರ ನಟ ಶಿವರಾಜ್‌ಕುಮಾರ್, ನಟಿ ಜಯಂತಿ, ನಾವಿಕ' ಹಂಗಾಮಿ ಅಧ್ಯಕ್ಷ ಕೇಶವಬಾಬು, ಜಿ.ಎಂ. ರಾಮಪ್ಪ ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀಧರ ಅಯ್ಯಂಗಾರ್ ಸ್ವಾಗತಿಸಿದರು. ಉಪಾಧ್ಯಕ್ಷ ವಲ್ಲೀಶ್ ಶಾಸ್ತ್ರಿ ನಿರೂಪಿಸಿದರು.

ಹಳ್ಳಿಗಾಗಿ ನೆರವು ನೀಡಿ

ಅಮೆರಿಕದಲ್ಲಿ 90,000ಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆ. ಅವರೆಲ್ಲ ಪ್ರತಿ ವರ್ಷ ನಾವಿಕ'ಕ್ಕೆ ತಲಾ ಒಂದು ಡಾಲರ್ ಕೊಟ್ಟರೂ 90 ಸಾವಿರ ಡಾಲರ್ ಸಂಗ್ರಹ ಆಗುತ್ತದೆ. ಇದನ್ನು ಕರ್ನಾಟಕದ ಹತ್ತು ಹಳ್ಳಿಗಳಲ್ಲಿ ಕುಡಿವ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯ ಕಲ್ಪಿಸುವ ಕೆಲಸಕ್ಕೆ ಬಳಸಬಹುದು. ಹತ್ತು ವರ್ಷಗಳಲ್ಲಿ ನೂರು ಹಳ್ಳಿಗಳನ್ನು ಉದ್ಧಾರ ಮಾಡಬಹುದು ಎಂದು ನಾವಿಕ' ಅಧ್ಯಕ್ಷ ಶ್ರೀಧರ್ ಅಯ್ಯಂಗಾರ್ ಅಮೆರಿಕ ಕನ್ನಡಿಗರಿಗೆ ಮನವಿ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X