ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕದಲ್ಲಿ ಸ್ವಿಚ್ಚೇವು ಕನ್ನಡದ ದೀಪ!

By * ವಸಂತ ನಾಡಿಗೇರ, ಲಾಸ್ ಏಂಜಲೀಸ್
|
Google Oneindia Kannada News

Innovative style of lighting lamp
ನಾವಿಕ ಸಮಾವೇಶದ ಎರಡನೇ ದಿನ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದವು. ಮೊದಲ ದಿನ ಇದ್ದ, ಏನೋ ಕಳೆದುಕೊಂಡ ಭಾವನೆ ಎರಡನೇ ದಿನ ಇರಲಿಲ್ಲ. ಹಾಗೆಂದು ವ್ಯವಸ್ಥೆ ಸುಧಾರಿಸಿತ್ತು ಎಂದಲ್ಲ. ಆದರೆ ಈ ವ್ಯವಸ್ಥೆಗೆ ಹೊಂದಿಕೊಂಡು ಹೋಗುವುದನ್ನು ಎಲ್ಲರೂ ಕಲಿತುಕೊಂಡಂತೆ ಕಾಣುತ್ತಿತ್ತು. ನಾವಿಕನಿಲ್ಲವೆಂದು ಕೊರಗದೆ ತಾವೇ ನಾವಿಕರಾಗಿ ದಡ ಮುಟ್ಟಿದರು.

ಅಮೆರಿಕದಲ್ಲಿ ನಡೆಯುತ್ತಿರುವ ಕನ್ನಡದ ರಥೋತ್ಸವದಲ್ಲಿ ತೇರೆಳೆಯುವ ಕಾರ್‍ಯದಲ್ಲಿ ತಾವೂ ಭಾಗಿಯಾಗಲು ದೂರದ ಭಾರತದಿಂದ ಉತ್ಸಾಹದಿಂದ ಆಗಮಿಸಿದ ಸರಕಾರದ ಪ್ರತಿನಿಧಿಗಳಿಗೆ ಹಾಗೂ ಇತರರಿಗೆ ತೋರಿದ ಕೊಂಚ ತಣ್ಣನೆಯ ಪ್ರತಿಕ್ರಿಯೆಯಿಂದ ಮೊದಲು ಗಲಿಬಿಲಿ ಹಾಗೂ ಬೇಸರ ಮೂಡಿಸಿದ್ದು ನಿಜ. ಇದು ಸಮಾವೇಶದ ಉದ್ಘಾಟನಾ ಸಮಾವೇದಲ್ಲಿ ಎದ್ದು ಕಂಡಿತು.

ಐದೇ ನಿಮಿಷದಲ್ಲಿ ಭಾಷಣ ಮುಗಿಸುವಂತೆ ಸ್ಪೀಕರ್'ಗೇ ರೂಲಿಂಗ್ ನೀಡಿದ್ದರಿಂದ ಬೆದರಿದ ಹರಿಣಿಯಂತಾದ ಮುಖ್ಯ ಅತಿಥಿಗಳು ಭಾಷಣ ಒಪ್ಪಿಸಿ ಬರುವ ಶಾಸ್ತ್ರ ಮಾಡಬೇಕಾಯಿತು. ಹಾಗೆಂದು ಇದನ್ನೇ ದೊಡ್ಡದು ಮಾಡದೆ ಎಲ್ಲರೂ ಸ್ವಭಾವಜನ್ಯ ಹೃದಯ ವೈಶಾಲ್ಯ ಮೆರೆದಿದ್ದರಿಂದ ಮುಂದಿನ ಎಲ್ಲ ಕಾರ್‍ಯಕ್ರಮಗಳೂ ಸಾಂಗವಾಗಿ ನೆರವೇರಿದವು.

ನಾವಿಕ ಸಮ್ಮೇಳನ ಫೋಟೋಗಳು

ಉದ್ಘಾಟನಾ ಕಾರ್‍ಯಕ್ರಮ ನಡೆದ ಮುಖ್ಯ ಸಭಾಂಗಣ ನಾವಿಕ'ರಂಗ ಮಂದಿರವು ಪಾರಂಪರಿಕ ಸೌಂದರ್‍ಯದಿಂದ ಕೂಡಿದ ಪುರಾತನ ಕಟ್ಟಡ. ಈ ಬೃಹತ್, ಭವ್ಯ ಸಭಾ ಕೇಂದ್ರಕ್ಕೆ ಕುಸುರಿ ಕಲೆಯ ಪ್ರಸಾಧನ ಬಹಳ ಚೆನ್ನಾಗಿ ಒಪ್ಪಿದೆ. ಕಾರ್‍ಯಕ್ರಮ ಉದ್ಘಾಟನೆ ಕಾಲಕ್ಕೆ ಹಚ್ಚೇವು ಕನ್ನಡದ ದೀಪ' ಗೀತೆ ಸಂಪ್ರದಾಯದಂತೆ ಮೂಡಿ ಬರುತ್ತಿದ್ದಂತೆ ಪುಟಾಣಿಗಳು ಎಲ್ಲ ಅತಿಥಿಗಳ ಕೈಗೂ ಒಂದೊಂದು ಹಣತೆಯನ್ನು ಕೊಟ್ಟವು. ಹಣತೆಯನ್ನು ಹಚ್ಚುವ ಕೆಲಸವನ್ನು ಅತಿಥಿಗಳೇ ಮಾಡಬೇಕಿತ್ತು. ಆದರೆ ಅಲ್ಲಿ ಬೆಂಕಿ ಕಡ್ಡಿಯಾಗಲೀ, ಮೇಣಬತ್ತಿಯಾಗಲೀ ಇರಲಿಲ್ಲ. ಎಲ್ಲರೂ ಗೊಂದಲಕ್ಕೆ ಒಳಗಾಗುವ ಮೊದಲೇ ನಾವಿಕದ ಅಧ್ಯಕ್ಷರು, ದೀಪದ ಕೆಳಗೆ ಸ್ವಿಚ್ಚಿದೆ; ಅದನ್ನು ಅದುಮಿದರೆ ಸಾಕು ಎಂದು ಹೇಳಿದ್ದೇ ತಡ ಹಣತೆ ಬೆಳಗತೊಡಗಿದವು. ಲಾಸ್ ಏಂಜಲೀಸ್ ನಗರದಲ್ಲಿ ಯಾರೂ ಬೆಂಕಿ ಹಚ್ಚುವ' ಕೆಲಸ ಮಾಡುವಂತಿಲ್ಲ ಎಂಬ ನಿಯಮ ಇರುವ ಕಾರಣ ಈ ಹೊಸ ಆವಿಷ್ಕಾರ ಎಷ್ಟಾದರೂ ಇದು ತಂತ್ರಜ್ಞರ ತವರು ತಾನೆ? ಇಷ್ಟೆಲ್ಲ ಆಗುತ್ತಿರುವಂತೆ ಸಭಿಕರ ಸಾಲಿನಿಂದ ಕೇಳಿ ಬಂದ ಉದ್ಗಾರ ಸ್ವಿಚ್ಚೇವು ಕನ್ನಡದ ದೀಪ' ಎಂದು ಹಾಡುವುದು ಸೂಕ್ತ!

ಅದೇ ಸಭಾಂಗಣದಲ್ಲಿ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು ವೈಜಯಂತಿ ಕಾಶಿ ತಂಡದವರಿಂದ ನೃತ್ಯ, ಸುಮಾ ಸುಧೀಂದ್ರರ ವೀಣಾ ವಾದನ, ಸ್ಥಳೀಯ ಕಲಾವಿದರಿಂದ ಎರಡು ನಾಟಕಗಳು. ಪುಷ್ಕಳ ಭೋಜನದ ಬಳಿಕ ಮತ್ತೊಂದು ಸುತ್ತಿನ ಕಾರ್‍ಯಕ್ರಮಗಳು.

ಈ ಅವಧಿಯ ಮತ್ತೊಂದು ಉತ್ತಮ ಕಾರ್‍ಯಕ್ರಮ ಎಂದರೆ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ರಾಶಿ ಚಕ್ರ' ಏಕ ವ್ಯಕ್ತಿ ಹಾಸ್ಯ ಪ್ರಸಂಗಗಳು. ದ್ವಾದಶ ರಾಶಿಯವರ ಗುಣಸ್ವಭಾವಗಳು ನವಿರು ಹಾಸ್ಯದ ಮೂಲಕ, ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಅವರು ಪ್ರಸ್ತುತಪಡಿಸುತ್ತಿದ್ದಂತೆ ಕಿಕ್ಕಿರಿದು ನೆರೆದಿದ್ದ ಸಭಿಕರು ನಗೆಗಡಲಲ್ಲಿ ತೇಲಿದರು. ಯಶವಂತ್ ಅವರ ಹಾಸ್ಯಪ್ರಜ್ಞೆಗೆ ಭಲೇ ಎಂದರು. ಪ್ರತಿಭೆಗೆ ಭೇಷ್ ಎಂದರು. ಅಂತೂ, ಆಲ್ ದಿ ಬೆಸ್ಟ್ ಹೇಳಿಸಿಕೊಂಡು ಹೋಗಿದ್ದ ಈ ಕಲಾವಂತ, 45 ನಿಮಿಷದ ಕಾರ್‍ಯಕ್ರಮ ಮುಗಿಸಿದಾಗ ಎಲ್ಲರೂ ಅಂದುಕೊಂಡಿದ್ದು ಸಹಿ ರೀ ಸಹಿ'.

ಗಮನ ಸೆಳೆದ ಮತ್ತೊಂದು ಕಾರ್‍ಯಕ್ರಮ ಎಂದರೆ ಮಂಟಪ ಉಪಾಧ್ಯಾಯರ ಯಕ್ಷಗಾನ. ಆಗ್ರಹಪೂರ್ವಕ ಆಹ್ವಾನಕ್ಕೆ ಮಣಿದು ಇಲ್ಲಿಗೆ ಆಗಮಿಸಿರುವ ಈ ಸೂಕ್ಷ್ಮ ಮನಸ್ಸಿನ, ಸಂಭಾವಿತ ಪ್ರತಿಭಾವಂತ ಕಲಾವಿದ ಇಲ್ಲಿನ ವ್ಯವಸ್ಥೆ ಕಂಡು ಪೆಚ್ಚಾಗಿದ್ದು ಸುಳ್ಳಲ್ಲ. ಆದರೆ ವಾಸ್ತವವನ್ನು ಅರಿತು ಸುಧಾರಿಸಿಕೊಂಡ ಅವರು ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಧೋರಣೆಗೆ ಶರಣಾಗಿದ್ದರು. ಇದೆಲ್ಲದರ ನಡುವೆಯೂ ಅವರ ಯಕ್ಷಗಾನ ಪ್ರದರ್ಶನ ಮನಸೂರೆಗೊಂಡಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X