ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ: ನಾದಮಯ, ವಿನೋದಮಯ, ಕನ್ನಡಮಯ!

By * ಶ್ರೀವತ್ಸ ಜೋಶಿ
|
Google Oneindia Kannada News

Bird's-eye view of Navika Sammelana
ಪಕ್ಷಿನೋಟ ಬೀರುವುದು ಅಂತೇವಲ್ಲ, ಇದು ಅಂಥದೇ. ಈ ಅಂಕಣ ಪ್ರಕಟವಾಗುವ ವೇಳೆಗೆ ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿ ಕನ್ನಡ ನುಡಿಹಬ್ಬದ ಕಳೆ ಏರತೊಡಗಿರುತ್ತದೆ. ನಾವಿಕ' (ನಾವೆಲ್ಲ ವಿಶ್ವಕನ್ನಡಿಗರು ಎಂಬ ವಿಶಾಲ ಮನೋಭಾವದಿಂದ ಅಮೆರಿಕದಲ್ಲಿ ಹುಟ್ಟಿಕೊಂಡಿರುವ ಹೊಸದೊಂದು ಕನ್ನಡ ಸಂಘಟನೆ) ತನ್ನ ಪ್ರಪ್ರಥಮ ಶಿಖರ ಸಮಾವೇಶಕ್ಕೆ ಓನಾಮ ಹಾಡಿ ಆಗಿರುತ್ತದೆ.

ಶುಕ್ರವಾರ ಜುಲೈ 2ರ ಸಂಜೆಯಿಂದ ರವಿವಾರ ಜುಲೈ 4ರವರೆಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ನಾನೂ ಪಾಲ್ಗೊಳ್ಳುತ್ತಿದ್ದೇನೆ; ಆದರೆ ಸಮ್ಮೇಳನ ಸ್ಥಳದಿಂದ ನೇರ ವರದಿಯ ರೂಪದಲ್ಲಿ ಬರೆಯಬಹುದಾಗಿದ್ದ ಈ ಅಂಕಣವನ್ನು ಒಂದು ಪಕ್ಷಿನೋಟವಾಗಿಯಷ್ಟೇ ಪ್ರಸ್ತುತಪಡಿಸುವ ಅನಿವಾರ್ಯತೆ. ಕಾರಣ ಅಮೆರಿಕದ ಸಮಯ ಶುಕ್ರವಾರ ಸಂಜೆಯೊಳಗೆ (ಆಗ ಭಾರತದಲ್ಲಿ ಶನಿವಾರ) ನಾನು ಅಂಕಣವನ್ನು ಪತ್ರಿಕೆಗೆ ಕಳಿಸಬೇಕಾಗುತ್ತದೆ, ಅಷ್ಟೇ ಅಲ್ಲ ಲಾಸ್ ಏಂಜಲೀಸ್ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರುವುದರಿಂದ ಭಾರತದ ಸಮಯಕ್ಕಿಂತ ಹನ್ನೆರಡೂವರೆ ಗಂಟೆಗಳಷ್ಟು ಹಿಂದೆ. ಮತ್ತೆ, ಪಕ್ಷಿನೋಟ' ಎನ್ನುವುದಕ್ಕೆ ನನ್ನಲ್ಲಿ ಮತ್ತೊಂದು ಸಮರ್ಥನೆಯೂ ಇದೆ. ಈ ಲೇಖನವನ್ನು ನಾನು ಶುಕ್ರವಾರದಂದು ವಾಷಿಂಗ್ಟನ್ ನಿಂದ ಲಾಸ್ ಏಂಜಲೀಸ್‌ಗೆ ವಿಮಾನದಲ್ಲಿ ಐದು ಗಂಟೆಗಳ ಪ್ರಯಾಣ ಮಾಡುತ್ತಿರುವಾಗ ಲ್ಯಾಪ್‌ಟಾಪ್ ನಲ್ಲಿ ಟೈಪಿಸುತ್ತಿರುವುದಾಗಿದೆ. ಅಲ್ಲಿಗೆ ತಲುಪಿದ ಕೂಡಲೇ ಇ-ಮೇಲ್‌ನಲ್ಲಿ ರವಾನಿಸಬೇಕು. ಮೂವತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತು ಬರೆಯುತ್ತಿರುವುದರಿಂದ ಇದು ನಿಜಕ್ಕೂ ಪಕ್ಷಿನೋಟವೇ.

ಮೊದಲು ಲಾಸ್ ಏಂಜಲೀಸ್ ಬಗ್ಗೆ ಸ್ವಲ್ಪ ವಿವರಣೆ. ಅಮೆರಿಕದಲ್ಲಿ ನ್ಯೂಯಾರ್ಕ್ ನಂತರ ಅತಿ ದೊಡ್ಡ ನಗರ ಲಾಸ್ ಏಂಜಲೀಸ್. ಇದು ಪೆಸಿಫಿಕ್ ಸಾಗರ ತೀರದಲ್ಲಿ ಕ್ಯಾಲಿಫೋರ್ನಿಯಾ ಸಂಸ್ಥಾನದಲ್ಲಿದೆ. ಸಿನಿಮಾ ಉದ್ಯಮದ ವಿಶ್ವರಾಜಧಾನಿ ಹಾಲಿವುಡ್' ಇರುವುದು ಅಲ್ಲೇ. ಸಿನಿಮಾ ತಂತ್ರಜ್ಞಾನದ ಅಮರಾವತಿ ಎನಿಸಿರುವ ಯೂನಿವರ್ಸಲ್ ಸ್ಟುಡಿಯೋಸ್' ಇರುವುದೂ ಅಲ್ಲೇ. ಡಿಸ್ನಿಲ್ಯಾಂಡ್' ಮನರಂಜನೆಯ ಥೀಮ್‌ಪಾರ್ಕ್ ಕೂಡ ಅಲ್ಲೇ. ಇನ್ನೊಂದು ಮಜಾ ಹೇಳ್ತೇನೆ. ಹೀಗೆ ಅಲ್ಲೇ ಅಲ್ಲೇ ಅಂತ ಬರೆಯುವಾಗ ತತ್‌ಕ್ಷಣಕ್ಕೆ ಹೊಳೆದದ್ದು. ಲಾಸ್ ಏಂಜಲೀಸ್ ನಗರದ ಒರಿಜಿನಲ್ ಹೆಸರು ಏನಿತ್ತು ಗೊತ್ತೇ? El Pueblo de Nuestra Scnora La Reina de los Angeles del Rio de Parciuncula ಎಂದು! ಹೌದು, ಹದಿನಾಲ್ಕು ಪದಗಳ ಒಂದು ವಾಕ್ಯ! ಸ್ಪಾನಿಷ್ ಭಾಷೆಯಲ್ಲಿ ಅದರ ಅರ್ಥ ಪೊರ್ಸಿಂಕುಲಾ ನದಿಯ ತೀರದಲ್ಲಿ ಇರುವ ಅಪ್ಸರೆಯರ ರಾಣಿಯ ಊರು" ಎಂದು. ಆ ಹೆಸರು ತುಂಬಾ ಉದ್ದವಾಯಿತೆಂದು ಕಾಲ ಕ್ರಮೇಣ ಲಾಸ್ ಏಂಜಲೀಸ್' ಎಂಬ ಹೆಸರು ಬಂತು. ಅದೂ ಉದ್ದವಾಯ್ತು ಎನ್ನುವವರು ಜಸ್ಟ್ ಎಲ್‌ಎ' ಎನ್ನುತ್ತಾರೆ. ನಾನಿಲ್ಲಿ ಶ್ಲೇಷೆ(ಪನ್)ಗೋಸ್ಕರ ಎಲ್ಲೇ ಅಥವಾ ಅಲ್ಲೇ ಅಂತೇನೆ. ಎಲ್ಲಾದರೂ ಇರು ಎಲ್ಲೇ'ಯಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಅಂತೇನೆ. ಈಗ ನಾವಿಕ' ಸಮ್ಮೇಳನದಿಂದಾಗಿ ಎಲ್ಲೇ'ಲೀ ನೋಡಲೀ... ಕನ್ನಡವನೆ ಕಾಣುವೆ... ಅಂತೇನೆ!

ಅಮೆರಿಕದಲ್ಲಿ ಆಗಾಗ ನಡೆಯುವ ಇಂತಹ ಬೃಹತ್ ಸಮ್ಮೇಳನಗಳು ನನಗೇನೂ ಹೊಸತಲ್ಲ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿ ನಾಲ್ಕೈದಾದರೂ ಸಮ್ಮೇಳನಗಳನ್ನು ಕಂಡಿದ್ದೇನೆ. 2006ರಲ್ಲಿ ನಮ್ಮ ವಾಷಿಂಗ್ಟನ್‌ಗೆ ಹತ್ತಿರದ ಬಾಲ್ಟಿಮೋರ್‌ನಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. ಹಾಗೆನೋಡಿದರೆ ಇದೂ ಒಂದು ಅನಿವಾಸಿ ಕನ್ನಡಿಗರ ಟಿಪಿಕಲ್ ಜಾತ್ರೆ' ಎನ್ನಬಹುದಿತ್ತು. ಆದರೆ ನಾವಿಕ'ದಲ್ಲಿ ಏನೋ ಒಂದು ವಿಶಿಷ್ಟತೆ, ಅನನ್ಯತೆ ಇದೆಯಂತ ನಾನು ನಿರೀಕ್ಷಿಸಿದ್ದೇನೆ. ಮುಖ್ಯವಾಗಿ, ಒತ್ತಾಯದ ಆಮಂತ್ರಣ ಮಾಡಿಕೊಂಡು ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಇಲ್ಲಿಗೆ ವಕ್ಕರಿಸುತ್ತಿಲ್ಲ. ಅದೇ ದೊಡ್ಡದೊಂದು ಸಮಾಧಾನ. ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಕೂಡ ಆಕರ್ಷಕವಾಗಿಯೇ ಇದೆ. ಕಲಾವಿದರ/ಪ್ರಸ್ತುತಿಗಳ ಆಯ್ಕೆಗೆ ಸಂಘಟಕರು ಯಾವ ಮಾನದಂಡ ತಗೊಂಡಿದ್ದಾರೋ ಗೊತ್ತಿಲ್ಲ (ನನಗದು ಬೇಕೂ ಇಲ್ಲ) ಆದರೆ ನನ್ನಿಷ್ಟದ ಸುಮಾರಷ್ಟು ಕಲಾವಿದರು ಕರ್ನಾಟಕದಿಂದ ಬರುತ್ತಿದ್ದಾರೆ. ಅವರೆಲ್ಲರ ಕಲಾ ಪ್ರದರ್ಶನಗಳನ್ನು ಪ್ರತ್ಯಕ್ಷ ಸವಿಯುವುದಕ್ಕೆ ನಾನು ಕಾತರನಾಗಿದ್ದೇನೆ.

ಮೊಟ್ಟಮೊದಲಾಗಿ ಸಮ್ಮೇಳನದ ಶುಭಾರಂಭ ನಾದಸ್ವರ ವಾದನದಿಂದ ಆಗುತ್ತದೆಯಂತೆ. ಅದೇನು ಮಹಾ ಅನಿಸಬಹುದು ನಿಮಗೆ. ಆದರೆ ಅಮೆರಿಕದಲ್ಲಿ, ಮೂರು ಸಾವಿರ ಜನ ಹಿಡಿಸುವ ಭವ್ಯ ಆಡಿಟೋರಿಯಂನಲ್ಲಿ, ಎಲ್ಲಿ ನೋಡಿದರೂ ರೇಷ್ಮೆಸೀರೆ ಸಿಲ್ಕ್‌ಧೋತಿ ಜುಬ್ಬಾ-ಮೈಸೂರುಪೇಟ ಸಾಲಂಕೃತ ಕನ್ನಡಿಗರೇ ಸಂಭ್ರಮದಿಂದ ಓಡಾಡಿಕೊಂಡಿರುವಾಗ, ಮಲ್ಲಿಗೆ ಶ್ರೀಗಂಧ ಕಸ್ತೂರಿಗಳ ಸುವಾಸನೆಯೇ ಹರಡಿರುವಾಗ, ಬಗೆಬಗೆ ಭಕ್ಷ್ಯಪರ ಮಾನ್ನಗಳ ಭೋಜನವಿರುವಾಗ, ಅಲ್ಲಿ ಲೈವ್' ನಾದಸ್ವರ ಕೂಡ ಕೇಳಿಬಂದರೆ ಆ ವಾತಾವರಣ ವರ್ಣಿಸಲಸದಳ ಅನಿಸುತ್ತದೆ, ಎಟ್‌ಲೀಸ್ಟ್ ನನಗಂತೂ. ಚಿಕ್ಕವನಿದ್ದಾಗಿನಿಂದಲೂ ನನಗೆ ಹಬ್ಬ ಉತ್ಸವ ಮದುವೆ-ಮುಂಜಿ ಫಂಕ್ಷನ್‌ಗಳಲ್ಲಿ ವಾದ್ಯ ನುಡಿಸುವವರು' ಅಂದರೆ ಒಂದು ವಿಶೇಷ ಆಕರ್ಷಣೆ. ಕ್ಯಾಸೆಟ್ ಅಥವಾ ಸಿ.ಡಿ ಪ್ಲೇಯರ್ ಹಾಕಿ ಎಷ್ಟು ದೊಡ್ಡ ಸೌಂಡ್ ಸಿಸ್ಟಂ ವ್ಯವಸ್ಥೆ ಬೇಕಿದ್ರೆ ಮಾಡಿ, ಲೈವ್ ನಾದಸ್ವರ ಕೇಳುವ ಅನುಭವದ ಸ್ವಲ್ಪಂಶವೂ ಅದರಲ್ಲಿ ಸಿಗದು. ನಾವಿಕ'ದಲ್ಲಿ ಲೈವ್ ನಾದಸ್ವರ ಕೇಳಲು ಸಿಗುತ್ತದೆ ಎಂದು ನನಗೆ ಹಿಗ್ಗು. ಅಂದಹಾಗೆ ನಾದಸ್ವರ ಕಲಾವಿದರು ಚಂದ್ರಶೇಖರ್ ಮತ್ತು ತಂಡ, ಕರ್ನಾಟಕ ಸರಕಾರದ ಸಹಯೋಗದಿಂದ ಭಾಗವಹಿಸುತ್ತಿರುವುದಂತೆ.

ನಾದಸ್ವರದಷ್ಟೇ ರೋಮಾಂಚನ ಕೊಳಲಿನಿಂದಲೂ. ಸಂಗೀತದ ಅರಿವು ಅಷ್ಟೇನಿಲ್ಲದಿದ್ದರೂ ನಾನೊಬ್ಬ ಕರ್ನಾಟಕ ಶಾಸ್ತ್ರೀಯ ಸಂಗೀತರಸಿಕ. ಕೊಳಲುವಾದನ ಕೇಳುವಾಗ ನಾನು ಮೈಮರೆಯುತ್ತೇನೆ. ನನ್ನ ನೆಚ್ಚಿನ ಪ್ರವೀಣ್ ಗೋಡಖಿಂಡಿ ಕೊಳಲು ನುಡಿಸಲೆಂದೇ ನಾವಿಕ'ಕ್ಕೆ ಬರುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಪ್ರವೀಣ್ ಗೋಡಖಿಂಡಿ, ಅವರ ತಂದೆ ವೆಂಕಟೇಶ ಗೋಡಖಿಂಡಿ ಮತ್ತು ಪ್ರವೀಣ್ ಪುತ್ರ ಷಡ್ಜ ಗೋಡಖಿಂಡಿ- ಹೀಗೆ ಮೂರು ತಲೆಮಾರಿನ ಕೊಳಲು ವಾದಕರ ಸಂಯುಕ್ತ ಸಂಗೀತಕಛೇರಿ ಇರಬೇಕಿತ್ತು. ಆದರೆ ಪ್ರವೀಣ್ ತಂದೆತಾಯಿಗಳಿಗೆ ವೀಸಾ ನಿರಾಕರಣೆಯಾಯ್ತೆಂದು ಕೇಳಿಬಂದಿದೆ. ಹಾಗಾಗಿ ಬಹುಶಃ ಪ್ರವೀಣ್ ಮತ್ತು ಷಡ್ಜ ಮಾತ್ರ ಬರುತ್ತಿದ್ದಾರೆಯೇ ಅಥವಾ ಪ್ರವೀಣ್ ಒಬ್ಬರೇ ಬರುತ್ತಿದ್ದಾರೆಯೇ ಅಲ್ಲಿಗೆ (ಎಲ್ಲೇ'ಗೆ) ಹೋದ ಮೇಲಷ್ಟೇ ಗೊತ್ತಾಗುತ್ತದೆ. ಅಂತೂ ಮುರಳೀಗಾನ ಅಮೃತಪಾನಕ್ಕೆ ಸಂಚಕಾರವಿಲ್ಲ. ಇನ್ನೂ ಕೆಲವು ಸಂಗೀತ ಕಲಾವಿದರ ಹೆಸರುಗಳು ಕಾರ್ಯಕ್ರಮ ಪಟ್ಟಿಯಲ್ಲಿವೆ. ವೀಣಾವಾದಕಿ ಡಾ. ಸುಮಾ ಸುಧೀಂದ್ರ, ಹಿಂದೂಸ್ಥಾನಿ ಸಂಗೀತಗಾರ ಪ್ರಕಾಶ್ ಸೋನ್‌ಟಕ್ಕೆ, ಸುಗಮಸಂಗೀತಗಾರ್ತಿ ಎಂ.ಡಿ. ಪಲ್ಲವಿ, ಆಕಾಶವಾಣಿಯ ಕೋಗಿಲೆ' ಎಚ್.ಆರ್.ಲೀಲಾವತಿ, ಜನಪದ ಗಾಯಕರಾದ ಬಾಣಂದೂರು ಕೆಂಪಯ್ಯ, ಕಿಕ್ಕೇರಿ ಕೃಷ್ಣಮೂರ್ತಿ ವಗೈರಾ ವಗೈರಾ. ಒಟ್ಟಿನಲ್ಲಿ ನಾದಮಯ' ಎಂದು ನಾನು ಊಹಿಸಿರುವುದು ಸರಿಯೇ ಆಗಬಹುದು.

ಇನ್ನು, ದೃಶ್ಯವೈಭವದ ವಿಚಾರಕ್ಕೆ ಬಂದರೆ, ಖ್ಯಾತ ನೃತ್ಯಕಲಾವಿದೆ ವೈಜಯಂತಿ ಕಾಶಿ ಅವರ ಕೂಚಿಪುಡಿ ಡ್ಯಾನ್ಸ್ ಇದೆ. ಮಂಟಪ ಪ್ರಭಾಕರ ಉಪಾಧ್ಯರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಇದೆ. ಮಾತನಾಡುವ ಬೊಂಬೆ'ಗಳಿಂದ ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಯುವಕನ್ನಡತಿ ಇಂದುಶ್ರೀ ಅವರಿಂದ ಧ್ವನಿಮಾಯೆ (ವೆಂಟ್ರಿಲೊಕ್ವಿಸಂ) ಪ್ರದರ್ಶನ ಇದೆ. ಮುಖ್ಯಮಂತ್ರಿ ಚಂದ್ರು, ಬಿ.ವಿ.ರಾಜಾರಾಂ, ಯಶವಂತ ಸರದೇಶಪಾಂಡೆ ಮುಂತಾಗಿ ರಂಗಭೂಮಿ ಧುರೀಣರು ಬರುತ್ತಿರುವುದರಿಂದ ಒಳ್ಳೊಳ್ಳೆಯ ಕೆಲವು ನಾಟಕಗಳೂ ಇರುತ್ತವೆ. ಸಂಗೀತ, ನೃತ್ಯ, ನಾಟಕದ ಜತೆ ಸಿನಿಮಾರಂಗದ ಕಲಾವಿದರಿಲ್ಲದಿದ್ದರೆ ಹೇಗೆ? ಅವರೂ ಬರ್ತಿದ್ದಾರೆ. ಅಭಿನಯಶಾರದೆ ಜಯಂತಿ, ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾಂಡ್ರೆ ಮುಂತಾಗಿ ಹೆಸರುಗಳಿವೆ ಕಾರ್ಯಕ್ರಮ ಪಟ್ಟಿಯಲ್ಲಿ. ಹಾಗೆಯೇ, ಗಾಯಕರಾದ ಬದರಿಪ್ರಸಾದ್, ಅಜಯ ವಾರಿಯರ್, ದಿವ್ಯಾ ರಾಘವನ್, ಜೈ ಹೋ' ಖ್ಯಾತಿಯ ವಿಜಯಪ್ರಕಾಶ್ ಇತ್ಯಾದಿ. ಸಿನಿಮಾನಟರು ಬರುವುದು ಸಂತಸವೇ ಆದರೂ ಅವರು (ಎಲ್ಲರೂ ಅಂತಲ್ಲ) ಇಲ್ಲಿ ಬಂದಾಗ ತೋರುವ ನಖ್ರಾ'ಗಳಿಂದಾಗಿ ಇಲ್ಲಿನವರಿಗೆ ಅಷ್ಟೇನೂ ಹಿಡಿಸುವುದಿಲ್ಲ. ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಇಲ್ಲಿ ಬಂದು ನೆಲೆನಿಂತ ಕನ್ನಡಿಗರು (ಸಮ್ಮೇಳನಗಳಲ್ಲಿ ಅವರ ಸಂಖ್ಯೆಯೇ ಹೆಚ್ಚಿರುವುದು) ಇನ್ನೂ ರಾಜ್ ಕುಮಾರ್-ಲೀಲಾವತಿ-ನರಸಿಂಹರಾಜು ಗುಂಗಿನಲ್ಲೇ ಇದ್ದು ಹೊಸಬರ ಪರಿಚಯವಿಲ್ಲದಿರುವುದೂ ಕಾರಣ.

ಸ್ಟಾಂಡ್‌ಅಪ್ ಕಾಮೆಡಿಯ ವಿಷಯದಲ್ಲೂ ಅಮೆರಿಕನ್ನಡಿಗರ ಅಭಿರುಚಿಯನ್ನು ನಾನು ಗಮನಿಸುತ್ತ ಬಂದಿದ್ದೇನೆ. ಅವರಿಗೆ ಪ್ರೊಫೆಸರ್ ಕೃಷ್ಣೇಗೌಡರು, ಕೆ.ಪಿ. ಪುತ್ತೂರಾಯರು ತುಂಬಾ ಹಿಡಿಸುತ್ತಾರೆ; ಬೇರೆಯವರೆಲ್ಲ ಅಷ್ಟು ಕ್ಲಿಕ್ ಆಗುವುದಿಲ್ಲ. ಕೃಷ್ಣೇಗೌಡರೆಂದರೆ ನನಗೂ ತುಂಬಾ ಇಷ್ಟ. ಅವರ ಕಾಮೆಡಿಯಲ್ಲಿ ಬರೀ ಒಮ್ಮೆ ನಕ್ಕು ಮರೆಯುವ ಹಾಸ್ಯವಷ್ಟೇ ಇರುವುದಲ್ಲ, ಅದರಲ್ಲೊಂದು ಅಂತಃಸತ್ವ ಇರುತ್ತದೆ. ಆ ಹಾಸ್ಯದ ಎಳೆಗಳ ಜಾಡು ಹಿಡಿದರೆ ಅಧ್ಯಾತ್ಮವನ್ನೂ ತಲುಪಬಹುದಾದ ಒಂದು ವಿಶೇಷ ಶಕ್ತಿ ಇರುತ್ತದೆ. ನಾವಿಕ'ದಲ್ಲಿ ಕೃಷ್ಣೇಗೌಡ ಮತ್ತು ಪುತ್ತೂರಾಯ ಇಬ್ಬರೂ ಸೇರಿ ನಗೆಯ ಸುನಾಮಿ ಎಬ್ಬಿಸುವುದರಲ್ಲಿ ಸಂದೇಹವಿಲ್ಲ. ಆ ಸುನಾಮಿಗೆ ನಾವಿಕ' ಕೊಚ್ಚಿಹೋಗುವುದಿಲ್ಲ ಎಂದುಕೊಳ್ಳೋಣ.

ನಾದಮಯ ಆಯ್ತು, ವಿನೋದಮಯ ಆಯ್ತು. ಇನ್ನೂ ಏನೇನಿದೆ ನಾವಿಕ' ಹಬ್ಬದಲ್ಲಿ? ಸ್ಥಳೀಯ ಕನ್ನಡ ಕೂಟಗಳ ಸದಸ್ಯರಿಂದ ಗೀತ-ನೃತ್ಯ-ನಾಟಕ ಮುಂತಾಗಿ ವಿವಿಧ ಪ್ರದರ್ಶನಗಳು. ಚಿಗುರುಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ವರನಾವಿಕ' ಮತ್ತು ರಂಗನಾವಿಕ' ಎಂದು ಗಾಯನ/ಅಭಿನಯ ಸ್ಪರ್ಧೆಗಳು, ಕನ್ನಡ ಕಲಿ' ಶಾಲೆಯ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು. ಸಾಹಿತ್ಯ ವಿಭಾಗವೂ ಸುಮಾರಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಸಿದ್ದಲಿಂಗಯ್ಯ ಮುಂತಾದವರು ಬರುತ್ತಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಕಾವ್ಯಧಾರೆ' ಅಂತೊಂದು ಹೈಟೆಕ್ ಪ್ರಯೋಗ ಆಗುವುದಿದೆಯಂತೆ. ಅದರಲ್ಲಿ ಹಿರಿಯ ಸಾಹಿತಿಗಳಾದ ಅನಂತಮೂರ್ತಿ, ಕಂಬಾರ, ವೆಂಕಟೇಶ ಮೂರ್ತಿ ಮುಂತಾದವರು ಬೆಂಗಳೂರಿನಲ್ಲಿರುತ್ತಲೇ ಲೈವ್ ವಿಡಿಯೋ ಮೂಲಕ ಕಾವ್ಯವಾಚನ ಮಾಡುತ್ತಾರಂತೆ. ಅಮೆರಿಕನ್ನಡಿಗ ಕವಿ-ಕವಯಿತ್ರಿಯರೂ ತಂತಮ್ಮ ಕವನಗಳನ್ನೋದುತ್ತಾರಂತೆ. ನೋಡಬೇಕು ಆ ಪ್ರಯೋಗವನ್ನೊಮ್ಮೆ!

ಎಲ್ಲ ಓಕೆ, ಸಮ್ಮೇಳನದಲ್ಲಿ ನಿಮ್ಮ ಪ್ರೋಗ್ರಾಂ ಏನಾದ್ರೂ ಇದ್ದರೆ ಅದರ ಬಗ್ಗೆ ಹೇಳಿಲ್ಲ ಯಾಕೆ" ಅಂತಂದ್ರಾ? ಇದೆ, ನನ್ನದೂ ಒಂದು ಚಿಕ್ಕ ಕಾರ್ಯಕ್ರಮ. ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ದಟ್ಸ್‌ಕನ್ನಡ ಡಾಟ್ ಕಾಮ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಶಾಮಸುಂದರ್ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಅವರಿಬ್ಬರ ಉಪಸ್ಥಿತಿಯಲ್ಲಿ ಅಲ್ಲೊಂದು ಕಾರ್ಯಾಗಾರ ನಡೆಸುವ ಯೋಜನೆಯಿದೆ. ಪತ್ರಿಕೆಗಳಿಗೆ ಬರೆಯುವುದು ಹೇಗೆ?' ಎನ್ನುವುದು ಅದರ ಥೀಮ್. ಆ ಕಾರ್ಯಾಗಾರದ ನಿರ್ವಹಣೆಯ ಜವಾಬ್ದಾರಿ ನನಗೆ ವಹಿಸಿದ್ದಾರೆ. ನಾನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಉಪಯುಕ್ತವೆನಿಸುವ ಕಾರ್ಯಾಗಾರ ನಡೆಸಿ ಒಂದಿಷ್ಟು ಬರಹಗಾರರ ಸುಪ್ತಪ್ರತಿಭೆಗಳನ್ನು ಹೊರತಂದರೆ ಒಳ್ಳೆಯದೇ ಅಲ್ಲವೇ? ಯಾರಿಗೆ ಗೊತ್ತು, ಮುಂದೊಂದು ದಿನ ಇದೇ ವಿಜಯ ಕರ್ನಾಟಕ ಪತ್ರಿಕೆ ವಾರಕ್ಕೊಮ್ಮೆ ಅನಿವಾಸಿ/ಅಮೆರಿಕನ್ನಡಿಗರ ಪುರವಣಿ ಆರಂಭಿಸಿದರೂ ಅಚ್ಚರಿಯಿಲ್ಲ!

ಸರಿ, ನನ್ನ ವಿಮಾನ ಲ್ಯಾಂಡಿಂಗ್‌ಗೆ ಸನ್ನಿಹಿತವಾಯ್ತು. ಇನ್ನು ಇದನ್ನು ಮುಗಿಸಬೇಕು, ಒಂದು ಸಮಯೋಚಿತ ಚುಟುಕದೊಂದಿಗೆ. ಡಿಸ್ನಿಲ್ಯಾಂಡಿನ ಮಿಕ್ಕಿಯ ಮಡಿಲಲಿ/ ಸಿಲಿಕಾನ್ ವ್ಯಾಲಿಯ ಟೆಕ್ಕಿಯ ನುಡಿಯಲಿ/ ಗಗನದಿ ತೇಲುವ ಹಕ್ಕಿಯ ಉಲಿಯಲಿ/ ಭುವಿಯಲಿ ಬೆಳೆಯುವ ಅಕ್ಕಿಯ ಸವಿಯಲಿ/ ಕನ್ನಡವೇ ಸತ್ಯ ಕನ್ನಡವೇ ನಿತ್ಯ." (ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X