ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಮ್ಮೇಳನದಲ್ಲಿ ಎಂಡಿ ಪಲ್ಲವಿ ಸಂಗೀತಸುಧೆ

By * ಪ್ರಸಾದ ನಾಯಿಕ
|
Google Oneindia Kannada News

MD Pallavi, playback singer
ಆಡು ಮುಟ್ಟದ ಸೊಪ್ಪಿಲ್ಲ, ಕನ್ನಡದ ಕೋಗಿಲೆ ಎಂಡಿ ಪಲ್ಲವಿ ಕೈಯಾಡಿಸದ ಕಲಾಪ್ರಕಾರವೇ ಇಲ್ಲ. ಇದು ನಿಜಕ್ಕೂ ಉತ್ಪ್ರೇಕ್ಷೆಯ ಮಾತಲ್ಲ. ಹಾಡುಗಾರಿಕೆ, ನಟನೆ, ನಾಟಕ ನಿರ್ಮಾಣದಲ್ಲಿ ತೊಡಗುವಿಕೆ, ನಾಟಕ-ಸಂಗೀತ ಬೋಧನೆ, ಟಿವಿ ಕಾರ್ಯಕ್ರಮಗಳ ನಿರ್ವಹಣೆಗಳಲ್ಲಿ ಎಂಡಿ ಪಲ್ಲವಿ ತಮ್ಮತನದ ಸಹಿ ಹಾಕಿದ್ದಾರೆ.

ರಂಗಕರ್ಮಿ ಎಎಸ್ ಮೂರ್ತಿ ಅವರ ಮೊಮ್ಮಗಳಾಗಿರುವ ಪಲ್ಲವಿ ಅವರಿಗೆ ಅಭಿನಯ ರಕ್ತದಲ್ಲಿಯೇ ಹರಿದುಬಂದಿತು. ನಟನೆಯ ಜೊತೆಜೊತೆಗೆ ಸಂಗೀತ ಕೂಡ ಪಲ್ಲವಿಯಲ್ಲಿ ಅನುಪಲ್ಲವಿಸಿದೆ. ಡ್ರಮ್ಮರ್ ಅರುಣ್ ಅವರನ್ನು ಮದುವೆಯಾದನಂತರ ಇಬ್ಬರ ತಾಳಮೇಳದ ಸಂಗೀತ ಇಡೀ ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳ ಗುಂಗು ಹಿಡಿಸಿದೆ.

ಪ್ರಸ್ತುತ, ಎಂಡಿ ಪಲ್ಲವಿ ಅರುಣ್ ಅವರು ಜುಲೈ 2ರಿಂದ 4ರವರೆಗೆ ಲಾಸ್ ಏಂಜಲಿಸ್, ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಪ್ರಥಮ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುತ್ತಿದ್ದಾರೆ. ಗಂಡ ಅರುಣ್ ಮತ್ತು ಕೀಬೋರ್ಡ್ ನುಡಿಸುವ ಕೃಷ್ಣ ಉಡುಪ ಅವರು ಜೊತೆಯಾಗಲಿದ್ದಾರೆ. ಅಮೆರಿಕದ ಪಶ್ಚಿಮ ಕರಾವಳಿಯ ಕನ್ನಡಿಗರು ಪಲ್ಲವಿ, ಅರುಣ್ ಅವರ ಫ್ಯುಷನ್ ಮ್ಯುಸಿಕ್ ಮೋಡಿಗೊಳಗಾಗುವುದರಲ್ಲಿ ಸಂದೇಹವಿಲ್ಲ.

ಅರುಣ್ ಅವರು ಅರ್ಧ ಶತಕದ ಹತ್ತಿರ ಸಾಗರೋಲ್ಲಂಘನ ಮಾಡಿದ್ದರೆ ಪಲ್ಲವರಿಯವರಿಗೆ ಇದು ಅಮೆರಿಕಾಕ್ಕೆ ಎರಡನೇ ಭೇಟಿ. ನಾವಿಕದಲ್ಲಿ ಸಂಗೀತಸುಧೆ ಹರಿಸಲಿರುವ ಪಲ್ಲವಿಯವರು ದಟ್ಸ್ ಕನ್ನಡ ಜೊತೆ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಪ್ರಶಸ್ತಿ-ಪುರಸ್ಕಾರ : ಅವರಿಗೆ ಖ್ಯಾತಿ ತಂದು ಕೊಟ್ಟದ್ದು ಸೂರಿ ನಿರ್ದೇಶನದ, ದುನಿಯಾ ಚಿತ್ರದ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದ, ವಿ ಮನೋಹರ್ ಸಂಗೀತ ನೀಡಿದ್ದ 'ನೋಡಯ್ಯ ಕ್ವಾಟೆ ಲಿಂಗವೆ' ಹಾಡು. ಜೀವ ತುಂಬಿ ಹಾಡಿದ್ದಕ್ಕೆ ಎಂಡಿ ಪಲ್ಲವಿ ಅವರಿಗೆ 2006-07ನೇ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಜ್ಯ ಪ್ರಶಸ್ತಿಯೂ ಹುಡುಕಿಕೊಂಡು ಬಂದಿತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರದ 'ಈ ಲೋಕವೆ ದೇವರು ಮಾಡಿರೋ ಬಾರು' ಹಾಡು ಚಿತ್ರರಸಿಕರನ್ನು ಮತ್ತಿನಲ್ಲಿ ತೇಲಾಡಿಸಿತ್ತು.

ನಟನೆಯಲ್ಲೂ ಸೈ ಎಂದಿರುವ ಪಲ್ಲವಿ ಟಿಎನ್ ಸೀತಾರಾಂ ಅವರು ಮಾಯಾಮೃಗ, ಮುಕ್ತ ಮುಕ್ತ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಗರ್ವ ಧಾರಾವಾಹಿಯ ನಟನೆಗೆ ಆರ್ಯಭಟ ಅತ್ಯುತ್ತಮ ನಟಿ ಪ್ರಶಸ್ತಿ ಅವರ ಮುಡಿಗೇರಿತು. ಗಿರೀಶ್ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್'ನಲ್ಲಿ ಪಲ್ಲವಿ ಅಭಿನಯ ಚಾತುರ್ಯ ತೋರಿದ್ದರು.

ಮಕ್ಕಳ ಸಂಗೀತ ಗಂಧವನ್ನು ಕಂಡುಹಿಡಿಯುವ ಜೀ ಕನ್ನಡ ಸರಿಗಮ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ನಿರೂಪಕಿಯಾಗಿ ಮತ್ತು ಗುಣಗಾನ, ಹಿರಿಯರಿಗೆ ನಮನ ಕಾರ್ಯಕ್ರಮದ ನಿರೂಪಕಿಯಾಗಿಯೂ ಎಂಡಿ ಪಲ್ಲವಿ ಅರುಣ್ ಪ್ರತಿಭೆ ಮೆರೆದಿದ್ದಾರೆ. ಅರುಣ್ ಜತೆಗೂಡಿ ಕಟ್ಟಿರುವ ಸಮುದ್ರ ಸಂಸ್ಥೆಯ ಮುಖಾಂತರ ಪಲ್ಲವಿಯವರು ಬಿಡುವಿಲ್ಲದೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಬಿಡುವಿಲ್ಲದ ಸಮಯದಲ್ಲಿ ಅನುವು ಮಾಡಿಕೊಂಡು ಕನ್ನಡ, ಇಂಗ್ಲಿಷ್ ನಾಟಕವೊಂದರಲ್ಲಿ ಕೂಡ ಅವರು ತಾಲೀಮು ನಡೆಸುತ್ತಿದ್ದಾರೆ ಹಿಂದೂಸ್ತಾನ ಸಂಗೀತ ಪ್ರವೀಣೆ ಪಲ್ಲವಿ. ಅವರಿಗೆ ದಟ್ಸ್ ಕನ್ನಡ ವತಿಯಿಂದ ಶುಭಹಾರೈಕೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X