ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಘು ದೀಕ್ಷಿತ್ ಹಾಡು ಕೇಳುತ ಕುಣಿಯಿರಿ ನಿರಂತರ

By Rajendra
|
Google Oneindia Kannada News

Raghu Dixit live in concert at AKKA WKC 2010
"ಅಕ್ಕ" ಪೂಜೆಗೆ ಬಂದೆ ಮಾದೇಶ್ವರ
ನೀವು ನೋಡಲು ಬನ್ನಿ ಸೆಪ್ಟೆಂಬರ
ಕಲೆಯ ಸೇವೆಗೆ ಬರುವೆ ಮಾದೇಶ್ವರ
ಹಾಡನು ಕೇಳುತ ಕುಣಿಯಿರಿ ನಿರಂತರ

ಇದೇನಪ್ಪ ಅಂತ ಅಂದುಕೊಂಡಿರ! ನ್ಯೂಜೆರ್ಸಿಯ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ 6ನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಅಚ್ಚ ಕನ್ನಡದ ಪ್ರತಿಭೆ ರಘು ದೀಕ್ಷಿತ್ ಹಾಗು ಸಂಗಡಿಗರಿಂದ "ಸಂಗೀತ ಸಂಜೆ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ರಘು ದೀಕ್ಷಿತ್ ರವರ ಜೊತೆಯಲ್ಲಿ ಅವರ ಐದು ಮಂದಿ "ಬ್ಯಾಂಡ್" ಹಾಗು ಕರ್ನಾಟಕದ ಹಲವಾರು ಪ್ರಖ್ಯಾತ ಗಾಯಕ / ಗಾಯಕಿಯರು ಕೂಡ ದನಿ ಸೇರಿಸುವುದರಿಂದ ಇದೊಂದು "ಮರೆಯಲಾಗದ ಸುಂದರ ಸಂಗೀತ ಸಂಜೆ" ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಇಷ್ಟೆಲ್ಲಾ ರಂಜಿಸಲು ಮುಂದಾಗಿರುವ ಕರ್ನಾಟಕದ ಎ ಆರ್ ರೆಹಮಾನ್ ಎಂದೇ ಖ್ಯಾತರಾಗಿರುವ ರಘು ದೀಕ್ಷಿತ್ ಬಗ್ಗೆ ಒಂದಿಷ್ಟು ಹೇಳದಿದ್ದರೆ ಹೇಗೆ? ಮೈಸೂರು ಮೂಲದವರಾದ ರಘು ದೀಕ್ಷಿತ್ ಹುಟ್ಟಾ ಕಲಾವಿದ. ಗಿಟಾರ್ ವಾದಕ, ಗಾಯಕ, ಸಂಯೋಜಕ, ಗೀತ ರಚನೆಕಾರ, ಸಂಗೀತ ನಿರ್ದೇಶಕ ಹೀಗೆ ರಘು ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ರಘು ಬಗ್ಗೆ ಹೇಳಲೇಬೇಕಾದ ಮಾತೊಂದಿದೆ. ಅಂತರಾಗ್ನಿ ಎಂಬ ಬ್ಯಾಂಡ್ ಕಟ್ಟಿದ ರಘು ಬಳಿಕ ಅದನ್ನು 'ರಘು ದೀಕ್ಷಿತ್ ಪ್ರಾಜೆಕ್ಟ್' ಎಂದಾಯಿತು. ಈ ಪ್ರಾಜೆಕ್ಟ್ ನ ಮೂಲಕ ದೇಶದಾದ್ಯಂತ 250ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿದ ಖ್ಯಾತಿ ಅವರದು. ಯುಕೆ, ಕೊರಿಯಾ, ಜಪಾನ್, ರಷ್ಯಾ, ಹಾಂಗ್ ಕಾಂಗ್ ಹೀಗೆ ದೇಶವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸುವ ಮೂಲಕ ಕನ್ನಡದ ಕಂಪನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸಿದರು.

ತಮ್ಮ ಚೊಚ್ಚಲ ಸಂಗೀತ ನಿರ್ದೇಶನದಲ್ಲಿ ಬಂದ 'ಸೈಕೋ' ಚಿತ್ರ ಹೊಸ ದಾಖಲೆ ನಿರ್ಮಿಸಿತು. ಬಳಿಕ ಹಿಂದಿಯ 'ಕ್ವಿಕ್ ಗನ್ ಮುರುಗನ್' ಚಿತ್ರ ಅಷ್ಟಾಗಿ ಹೆಸರು ಮಾಡಲಿಲ್ಲ.'ಜಸ್ಟ್ ಮಾತ್ ಮಾತಲ್ಲಿ' ಸಂಗೀತ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸಫಲವಾಯಿತು. ರಘು ಸಂಗೀತ ನಿರ್ದೇಶನದ 'ಸೂಪರ್ ಮ್ಯಾನ್' ತೆರೆಕಾಣಬೇಕಾಗಿದೆ.

ರಘು ಸಂಗೀತ ಎಂದರೆ ಹಲವು ಸಾಂಪ್ರದಾಯಿಕ ಹಾಗೂ ವಿದೇಶಿ ಶೈಲಿಗಳ ಸಂಗಮವಿದ್ದಂತೆ. ಅವರ ಸಾಹಿತ್ಯ ಸಹ ಅಷ್ಟೇ ಸರಳ ಹಾಗೂ ವಿರಳ. ಶ್ರೀಸಾಮನ್ಯನಿಗೆ ಹತ್ತಿರ ಎನ್ನಿಸುವ ಹಾಡುಗಳು ಅವರನ್ನು ಜನಪ್ರಿಯಗೊಳಿಸಿವೆ. ತಮ್ಮದೇ ಆದಂತಹ ವಿಶಿಷ್ಟ ಕಂಠದ ಮೂಲಕ ಅವರ ಹಾಡುಗಾರಿಕೆ ವಿಭಿನ್ನವಾಗಿ ನಿಲ್ಲುತ್ತದೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..' ಹಾಗೂ 'ನೀನೇ ಬೇಕು...' ಎಂದು ಹಾಡಲು ನಿಂತರೆ ಪ್ರೇಕ್ಷಕರು ಮೈಮರೆಯಬೇಕಷ್ಟೆ.

"ಆಟ ಊಟ ನೋಟ ಕನ್ನಡ ಒಂದನೆ ಪಾಠ" ಎಂಬಂತೆ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಈ ಮೂರಕ್ಕು ವಿಶಿಷ್ಟವಾದ ರೀತಿಯಲ್ಲಿ ಪ್ರಾಶಸ್ತ್ಯ ಕೊಡಲಾಗುತ್ತಿದೆ. ವಿನೂತನ ಶೈಲಿಯಲ್ಲಿ ನಡೆಯುವ ಕನ್ನಡ ಸಿನಿಮಾ ತಾರೆಯರ ತಾರಾಮೇಳ "ಸ್ಟಾರ್ ನೈಟ್" ಬಗೆಗಿನ ವಿಚಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಪ್ರಭಾತ ಕಲಾವಿದರ ನೃತ್ಯ, ಬಾಲಮುರಳಿಯವರ ಗಾಯನ, ಬನ್ನಂಜೆ ಅವರ ಪ್ರವಚನ, ವಿನೂತನ ತಾರಮೇಳ "ಸ್ಟಾರ್ ನೈಟ್", ಹರಿಕಥೆ, ಯಕ್ಷಗಾನ, ನಾಟಕ, ನೃತ್ಯ, ಪ್ರಹಸನ, ಸಾಹಿತ್ಯ ಸಂಕಿರಣ, ನಗೆ ಹಬ್ಬ, ಆಧ್ಯಾತ್ಮ, ಬಿಸಿನೆಸ್ಸ್ ಫೋರಮ್, ಯೂತ್ ಫೋರಮ್, ಸಿ.ಎಮ್.ಇ, ಮಿಸ್ ಅಕ್ಕ, ಫ್ಯಾಶನ್ ಶೊ, ಮ್ಯಾಜಿಕ್ ಶೊ, ವಧು-ವರರ ಅನ್ವೇಷಣೆಗೆ "ಸಿಂಗಲ್ಸ್ ಮೀಟ್", ಕಾಲೇಜಿನ ಹಳೆಯ ವಿದ್ಯಾರ್ಥಿಗಳ "ಅಲುಮ್ನೈ ಮೀಟ್", ಸಂಗೀತ ಸ್ಪರ್ಧೆ "ಅಕ್ಕ" ಐಡಲ್, ಸಮೂಹ ನೃತ್ಯ ಸ್ಪರ್ಧೆ - ಡ್ಯಾನ್ಸ್ "ಅಕ್ಕ" ಡ್ಯಾನ್ಸ್, ಅಕ್ಕ ಕ್ರಿಕೆಟ್ ಲೀಗ್..ಇವುಗಳ ಜತೆಗೆ ರಘು ದೀಕ್ಷಿತ್ ಲೈವ್ ಆರ್ಕೇಸ್ಟ್ರ ಸೇರ್ಪಡೆಯಾಗಿದೆ.

ಸೆಪ್ಟೆಂಬರ್ 3 ರಿಂದ ನಡೆಯುವ 3 ದಿವಸಗಳ ನ್ಯೂಜೆರ್ಸಿ ಅಕ್ಕ ಸಮ್ಮೇಳನಕ್ಕೆ ರಿಯಾಯಿತಿ ದರದಲ್ಲಿ ನೊಂದಾಯಿಸಿಕೊಳ್ಳಲು ಇದೇ ಜೂನ್ 30 ಕಡೆಯ ದಿನಾಂಕ. ಅಷ್ಟರೊಳಗೆ ನೊಂದಾವಣೆ ಮಾಡಿ ಆಕರ್ಷಕ ರಿಯಾಯಿತು ಲಾಭ ಪಡೆಯಿರಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಹೆಸರುಗಳನ್ನು ಈಗಲೇ ನೊಂದಾವಣೆ ಮಾಡಿಕೊಳ್ಳಿರಿ ಮತ್ತು ನಿಮ್ಮ ಸ್ನೇಹಿತ ಬಳಗಕ್ಕೂ ಈ ವಿಷಯ ತಿಳಿಸಿ. ವಂದನೆಗಳು.

ನ್ಯೂಜೆರ್ಸಿ ಅಕ್ಕ ಸಮ್ಮೇಳನ ಸಮಿತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X