ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ ಸಮ್ಮೇಳನ ಉದ್ಘಾಟನೆಗೆ ಬಿಎಸ್ ವೈ

By Shami
|
Google Oneindia Kannada News

ಬೆಂಗಳೂರು, ಏ. 28 : ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ನಡೆಸಲು ಉದ್ದೇಶಿಸಲಾಗಿರುವ 'ನಾವಿಕ' ವಿಶ್ವ ಕನ್ನಡ ಸಮ್ಮೇಳನವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. 2010 ಜುಲೈ 2ರಿಂದ 4ರವರೆಗೆ ನಡೆಯುವ ನಾವಿಕದ ಮೊದಲ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದಲ್ಲದೆ ಜಾಗತಿಕ ಕನ್ನಡಿಗರ ಸಮಾವೇಶದಲ್ಲಿ ಅವರು ಆಶಯ ಭಾಷಣವನ್ನೂ ಮಾಡಲಿದ್ದಾರೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ. ಶ್ರೀ ಅಯ್ಯಂಗಾರ್ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮೂರು ದಿನಗಳ ಸಮ್ಮೇಳನದಲ್ಲಿ ಕನಿಷ್ಠ ಮೂರು ಸಾವಿರ ಅಮೆರಿಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ವಿಶ್ವ ಕನ್ನಡಿಗರ ಈ ಜಾಗತಿಕ ಸಂಭ್ರಮಕ್ಕೆ ಮೂರು ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಕವಿ, ಕಲಾವಿದ, ಸಾಹಿತಿ, ನಾಟಕಕಾರರು, ಚಿತ್ರ ತಾರೆಯರು, ಹಾಡುಗಾರರು ಸೇರಿದಂತೆ ಒಟ್ಟಾರೆ 200 ಪ್ರತಿನಿಧಿಗಳು ಕರ್ನಾಟಕದಿಂದ ಸಮ್ಮೇಳನದ ತಾಣ ದಕ್ಷಿಣ ಕ್ಯಾಲಿಫೋರ್ನಿಯಾಗೆ ಆಗಮಿಸಲಿದ್ದಾರೆಂದು ಅವರು ಹೇಳಿದರು.

ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಎಂಡಿ ಪಲ್ಲವಿ, ಪಂಡಿತ್ ಪ್ರಕಾಶ್ ಸೊಂಟಕ್ಕೆ, ಪ್ರವೀಣ್ ಗೋಡ್ಖಿಂಡಿ, ಇಂದುಶ್ರೀ ಅವರುಗಳಿಂದ ಸಾಂಸ್ಕೃತಿಕ ಮನೋಲ್ಲಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ವ್ಯವಸ್ಥೆಯಾಗಿರುವ ಚಿತ್ರೋತ್ಸವ ಮತ್ತು ನಾಟಕೋತ್ಸವಕ್ಕೆ ಟಿ.ಎಸ್. ನಾಗಾಭರಣ ಮತ್ತು ಅವರ 40 ಮಂದಿ ಕಲಾವಿದರ ತಂಡ ಅಮೆರಿಕಾಗೆ ಬರಲಿದೆ ಎಂದು ಅಯ್ಯಂಗಾರ್ ತಿಳಿಸಿದರು.

ಇದಲ್ಲದೆ ಸ್ಥಳೀಯ ಕಲಾವಿದರಿಂದ ರಂಗ ನಾವಿಕ, ನಾವಿಕ ವಿಶ್ವ ಕನ್ನಡ ಸುಂದರಿ, ಸ್ವರ ನಾವಿಕ ಮುಂತಾದ ಸಾಂಸ್ಕೃತಿಕ , ಸ್ಪರ್ಧಾತ್ಮಕ ಕಾರ್ಯಕ್ರಮಗಳು ಸಜ್ಜಾಗಿವೆ. ಉತ್ತರ ಕ್ಯಾಲಿಫೋರ್ನಿಯಾದ ಪ್ರಸಿದ್ಧ ತಂಡ 'ರಾಗ'ದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವಿರುತ್ತದೆ. 'ಕಾವ್ಯಧಾರೆ' ಎಂಬ ಕವಿತೆಗೆ ಮೀಸಲಾದ ಕಾರ್ಯಕ್ರಮ ಸಾಹಿತ್ಯ ವಿಭಾಗದ ವಿಶೇಷ ಆಕರ್ಷಣೆಯಾಗಿರುತ್ತದೆ. ಕರ್ನಾಟಕದ ಮೂವರು ಕವಿಗಳು ಹಾಗೂ ಅಮೆರಿಕಾದ ಮೂವರು ಕವಿಗಳು ನಡೆಸಿಕೊಡುವ 45 ನಿಮಿಷಗಳ ಟೆಲಿ ಕಾನ್ಫರೆನ್ಸ್ ಲೈವ್ ಕಾರ್ಯಕ್ರಮ ಇದಾಗಿರುತ್ತದೆ.

ಯುಆರ್ ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮತ್ತು ವೈಜಿ ಸಿದ್ದರಾಮಯ್ಯ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು ಅಮೆರಿಕಾ ಕವಿಗಳ ಹೆಸರುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದೆಂದು ಸಮ್ಮೇಳನ ಅಧ್ಯಕ್ಷರು ಹೇಳಿದರು. ಕರ್ನಾಟಕಕ್ಕೆ ವಿದೇಶೀ ಬಂಡವಾಳ ಆಕರ್ಷಿಸುವ ಮತ್ತು ಉದ್ಯಮ ಕ್ಷೇತ್ರಗಳನ್ನು ಗುರುತಿಸುವ ವಾಣಿಜ್ಯ ಮೇಳವೂ ವ್ಯವಸ್ಥೆಯಾಗಿದ್ದು ಇದರ ರೂಪು ರೇಷೆಯನ್ನು ಎನ್ಆರ್ಐ ಸೆಲ್ ನ ಮುಖ್ಯಸ್ಥ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅನಾವರಣಗೊಳಿಸಲಿದ್ದಾರೆ.

ಸಮ್ಮಳನಕ್ಕೆ ಕರ್ನಾಟಕ ರಾಜ್ಯ ಸರಕಾರದಿಂದ ಪ್ರೋತ್ಸಾಹ ರೂಪದಲ್ಲಿ ನೆರವು ಹರಿದು ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಯ್ಯಂಗಾರ್, ಸಮ್ಮೇಳನ ಸಮಿತಿ ತನ್ನ ಬಿನ್ನಹವನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದೆ. ಹಣಕಾಸಿನ ನೆರವು ಬಿಡುಗಡೆ ಮಾಡುವುದು ಅಥವಾ ಬಿಡುಗಡೆ ಮಾಡದಿರುವುದು ಮಾನ್ಯ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.

ಲಾಸ್ ಏಂಜಲಿಸ್ ನ ಪ್ರಸಿದ್ಧ ಪಸಡೋನ ಸಮ್ಮೇಳನ ಸಭಾಂಗಣದಲ್ಲಿ ಜರುಗುವ ಕನ್ನಡ ಸಮಾವೇಶದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿರುತ್ತವೆ. ಸೀರೆ, ಆಭರಣ, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಮತ್ತು ಹಳೆಯ ವಿದ್ಯಾರ್ಥಿ ಸಮ್ಮಿಳನಗಳನ್ನೂ ಮುತುವರ್ಜಿಯಿಂದ ವ್ಯವಸ್ಥೆಗೊಳಿಸಲಾಗಿದೆ ಎಂದು ಶ್ರೀ ಅಯ್ಯಂಗಾರ್ ನುಡಿದರು.

ನಾವಿಕದಲ್ಲಿ ಮೆರವಣಿಗೆ ಊಟ ಪ್ರವಾಸ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X