ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಗಿಲೆ ಮತ್ತು ನವಿಲುಗಳಿಗೆ ಅಕ್ಕ ಆಹ್ವಾನ

By Shami
|
Google Oneindia Kannada News

ಬೃಂದಾವನದ ಆಶ್ರಯದಲ್ಲಿ ಸೆಪ್ಟೆಂಬರ್ 3, 4, 5ರಂದು ನ್ಯೂಜೆರ್ಸಿಯಲ್ಲಿ ನಡೆಸಲಾಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಈ ಬಾರಿ ಸಮ್ಮೇಳನಕ್ಕೆ ಬರುವ ಎಲ್ಲಾ 'ಕೋಗಿಲೆಗಳಿಗೆ' ಹಾಡಿನ ಸ್ಪರ್ಧೆಯನ್ನೂ (ಅಕ್ಕ ಐಡಲ್) ಹಾಗು ಪ್ರಪ್ರಥಮ ಬಾರಿಗೆ 'ನಲಿಯುವ ನವಿಲುಗಳಿಗೆ' ಸಮೂಹ ನೃತ್ಯ ಸ್ಪರ್ಧೆಯನ್ನು (ಡ್ಯಾನ್ಸ್ 'ಅಕ್ಕ' ಡ್ಯಾನ್ಸ್) ನಡೆಸುತ್ತಿರುವುದು ಈ ಸಮ್ಮೇಳನದ ವಿಶೇಷ.

ಹಾಡು ಹಕ್ಕಿಗಳಿಗೆ ಈ ಬಾರಿ ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದೆ . 13ರಿಂದ 19 ವಯಸ್ಸಿನವರಿಗೆ 'ಟೀನ್ ಅಕ್ಕ ಐಡಲ್' ಸ್ಪರ್ಧೆ, 20 ವರ್ಷದಿಂದ ಮೇಲ್ಪಟ್ಟವರಿಗೆ 'ಅಕ್ಕ ಐಡಲ್' ಸ್ಪರ್ಧೆ. ಸ್ಪರ್ಧೆಯಲ್ಲಿ ಕೇವಲ ಕನ್ನಡ ಭಾಷೆಯ ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆ ಹಾಗು ದೇವರನಾಮಗಳನ್ನು ಹಾಡಲು ಅವಕಾಶ.

ಸಮ್ಮೇಳನಕ್ಕೆ ನೋಂದಾಯಿಸಿರುವ ಎಲ್ಲಾ 'ಕೋಗಿಲೆಗಳು' ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನಿಮ್ಮ ಸ್ಥಳೀಯ ಕನ್ನಡ ಕೂಟದ ಮೂಲಕ ಬರಬಹುದು, ಇಲ್ಲದಿದ್ದರೆ ಒಂದು ಚಿತ್ರಗೀತೆ ಹಾಗು ಭಾವಗೀತೆಯನ್ನು ನಿಮ್ಮ ಧ್ವನಿಯಲ್ಲಿ ಹಾಡಿ 'ಆಡಿಶನ್' ಸುತ್ತಿಗೆ ನಮಗೆ ಕಳುಹಿಸಬಹುದು. ಒಂದು ಕನ್ನಡ ಸಿನಿಮ ಹಾಡನ್ನು 'ಟ್ರಾಕ್' ಜೊತೆ (ಕೆರೆಯೋಕೆ) ಮತ್ತು ಒಂದು ಭಾವಗೀತೆ ಅಥವ ದೇವರನಾಮ ಅಥವ ಜಾನಪದ ಗೀತೆ 'ಟ್ರಾಕ್' ಇಲ್ಲದೆ ಹಾಡಿ ಕಳಿಸಬೇಕು. ಇದೇ ನಿಯಮ ಸ್ಪರ್ಧೆಗೂ ಅನ್ವಯಿಸುತ್ತೆ. ಸ್ಪರ್ಧೆಗೆ ಹೆಸರನ್ನು ನೋಂದಾಯಿಸಲು ಜೂನ್ 30, 2010 ಕೊನೆಯ ದಿವಸ. ಹೆಚ್ಚಿನ ವಿವರಗಳಿಗೆ ಹಾಗು ಸ್ಪರ್ಧೆಯ ಎಲ್ಲ ನಿಯಮಗಳಿಗೆ 'ಅಕ್ಕ' ವೆಬ್ ಸೈಟಿಗೆ ಭೇಟಿಕೊಡಿ.

ನೃತ್ಯಗಾತಿಯರು ಹಾಗು ನೃತ್ಯಗಾರರಿಗೂ ಕೂಡ 'ಡ್ಯಾನ್ಸ್ ಅಕ್ಕ ಡ್ಯಾನ್ಸ್' ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದೆ. 8ರಿಂದ 14 ವರ್ಷದ ಮಕ್ಕಳಿಗೆ 'ಜೂನಿಯರ್'ವಿಭಾಗದಲ್ಲೂ, 15 ವರ್ಷದ ಮೇಲ್ಪಟ್ಟವರಿಗೆ 'ಸೀನಿಯರ್' ವಿಭಾಗದಲ್ಲೂ ಸ್ಪರ್ಧೆಯನ್ನು ನಡೆಸಲಾಗುವುದು. ಅಕ್ಕ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಸಮೂಹ ನೃತ್ಯ ಸ್ಪರ್ಧೆ ಅತ್ಯಂತ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ.

ಪ್ರತಿಯೊಂದು ತಂಡದವರು ಒಂದು ಕನ್ನಡ ಸಿನಿಮ ಹಾಡಿಗೆ ಅಥವ ಒಂದು ಕನ್ನಡ ಜಾನಪದ ಹಾಡಿಗೆ ನೃತ್ಯ ಮಾಡಬಹುದು. ಒಂದೇ ತಂಡ, ಸಿನಿಮಾ ಹಾಡಿನ ನೃತ್ಯ ಹಾಗು ಜಾನಪದ ಹಾಡಿನ ನೃತ್ಯ, ಇವೆರಡರಲ್ಲೂ ಭಾಗವಹಿಸಬಹುದು. ಪ್ರತಿಯೊಂದು ತಂಡದಲ್ಲೂ ಕನಿಷ್ಟ 6 ಮಂದಿ ಇರಲೇಬೇಕು. ನಿಮ್ಮ ತಂಡಕ್ಕೆ ಸೂಕ್ತವಾದ (ಅಷ್ಟೇ ಪ್ರಾಸಬದ್ಧವಾದ ಹಾಗು ರೋಚಕವಾದ) ಹೆಸರನ್ನು ನೀವೇ ನಾಮಕರಣ ಮಾಡಿಕೊಳ್ಳಬಹುದು (ಉದಾಹಾರಣೆಗೆ... ನ್ಯೂಜೆರ್ಸಿ ನವಿಲುಗಳು, ತ್ರಿವೇಣಿ ತಿಲೋತ್ತಮೆಯರು, ಮಂದಾರದ ಮೇನಕೆಯರು, ವಿದ್ಯಾರಣ್ಯದ ವಿವೇಕಿಗಳು, ಸಂಪಿಗೆ ಸುರಾಂಗನೆಯರು, ಲಾಸ್ ಏಂಜಲಿಸ್ ಲಲನಾಮಣಿಗಳು ..ಅಥವ ಕನ್ಸಾಸಿನ ಕೆಂಭೂತಗಳು !...ಆಯ್ಕೆ ನಿಮ್ಮದು). ಸ್ಪರ್ಧೆಗೆ ತಂಡಗಳು ಅರ್ಜಿಯನ್ನು ಸಲ್ಲಿಸಲು ಜುಲೈ 15, 2010 ಕೊನೆಯ ದಿವಸ. ಹೆಚ್ಚಿನ ವಿವರಗಳಿಗೆ ಹಾಗು ಸ್ಪರ್ಧೆಯ ಎಲ್ಲ ನಿಯಮಗಳಿಗೆ ಅಕ್ಕ ವೆಬ್ ಸೈಟಿಗೆ ಭೇಟಿಕೊಡಿ.

ಮೇಲೆ ತಿಳಿಸಿದ ಸಂಗೀತ, ನೃತ್ಯ ಸ್ಪರ್ಧೆಗಳಲ್ಲದೆ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರ ಬಗ್ಗೆ ಎಲ್ಲ ಕನ್ನಡ ಕೂಟಗಳಿಗೂ ಈಗಾಗಲೆ ಆಹ್ವಾನ ಪತ್ರ ಕಳಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ (ಮೇಲೆ ಸೂಚಿಸಿದ ಸ್ಪರ್ಧೆಯ ಹೊರತಾಗಿ) ಅರ್ಜಿಯನ್ನು ಕಳಿಸಲು ಕೊನೆಯ ದಿವಸ ಜೂನ್ 1, 2010. ಏಪ್ರಿಲ್ 25ರೊಳಗೆ ರಿಯಾಯಿತಿ ದರದಲ್ಲಿ ನೊಂದಾಯಿಸಬಹುದು. ಹೆಚ್ಚಿನ ವಿವರಗಳಿಗೆ ಹಾಗು ಎಲ್ಲಾ ನಿಯಮಗಳಿಗೆ ಅಕ್ಕ ವೆಬ್ ಸೈಟಿಗೆ ಭೇಟಿಕೊಡಿ.

ಅಕ್ಕ ಐಡಲ್ ಹಾಗು ಡ್ಯಾನ್ಸ್ ಅಕ್ಕ ಡ್ಯಾನ್ಸ್ ಸ್ಪರ್ಧೆಯ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳು ಇರುವುದಲ್ಲದೆ, ಮುಖ್ಯ ಸಭಾಂಗಣದಲ್ಲಿ 5000 ಜನರ ಮುಂದೆ ಹಾಡುವ, ನಾಟ್ಯ ಮಾಡುವ ಅವಕಾಶ ಕೂಡ ಕಲ್ಪಿಸಲಾಗುವುದು.

ಸಮ್ಮೇಳನಕ್ಕೆ ನೋಂದಾಯಿಸಿದ್ದಿರ? ಹಾಗಿದ್ದರೆ, ಇನ್ನೇಕೆ ತಡ. ಇಂದೇ ಸ್ಪರ್ಧೆಗಳಿಗೆ ನೋಂದಾಯಿಸಿ. ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮಗಳಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಸಮ್ಮೇಳನಕ್ಕೆ ಇನ್ನೂ ನೋಂದಾಯಿಸಿಲ್ಲವ? ಹಾಗಿದ್ದರೆ ಈ ಕೂಡಲೆ ನೋಂದಾಯಿಸಿ. ಸಮ್ಮೇಳನಕ್ಕೆ ನೋಂದಾಯಿಸಲು ಅಕ್ಕ ವೆಬ್ ಸೈಟಿಗೆ ಭೇಟಿಕೊಡಿ. ಅಂದಹಾಗೆ, ಮೇ 2, ಭಾನುವಾರದಂದು ಬೃಂದಾವನ ಸಂಘದಲ್ಲಿ ಯುಗಾದಿ ಹಬ್ಬಾಚರಣೆ. ವಿವರಗಳಿಗೆ ಭೇಟಿಕೊಡಿ.

ಧನ್ಯವಾದಗಳು,

ಸಮ್ಮೇಳನ ಕಾರ್ಯಕಾರಿ ಸಮಿತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X