ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ದಾಖಲೆ ನೊಂದಾವಣೆ

By Shami
|
Google Oneindia Kannada News

Akka Sammelana 2010, New Jersey
ಅಮೆರಿಕಾದ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಕೂಟದ ಆಶ್ರಯದಲ್ಲಿ ಇದೇ ಸೆಪ್ಟೆಂಬರ್ ನಲ್ಲಿ ನಡೆಸಲಾಗುತ್ತಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆ.28ರೊಳಗೆ "ಅರ್ಲಿ ಬರ್ಡ್" ರಿಯಾಯಿತಿ ದರದಲ್ಲಿ ನೊಂದಾಯಿಸಿಕೊಳ್ಳಬೇಕೆಂಬ ಅಕ್ಕ ಕರೆಗೆ ಓಗೊಟ್ಟ ಎಲ್ಲ 2,226 ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು.

ಅಮೇರಿಕದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲದಿದ್ದರೂ, ಅಕ್ಕ ಸಮ್ಮೇಳನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನೊಂದಾವಣೆ ಪ್ರಾರಂಭವಾದ 2 ತಿಂಗಳ ಒಳಗೆ 2,000ಕ್ಕೂ ಹೆಚ್ಚಿನ ನೋಂದಾವಣೆ ಆಗಿರುವುದು ಒಂದು ಹೊಸ ದಾಖಲೆ. ಅಕ್ಕ ಹಾಗೂ ಬೃಂದಾವನ ಸಂಸ್ಥೆಗಳು ಒಂದು ಅತ್ಯುತ್ತಮ ವಿಶ್ವ ಸಮ್ಮೇಳನವನ್ನು ನಡೆಸುತ್ತದೆ ಎಂಬ ಭರವಸೆ ಇಟ್ಟು ಬಲುಬೇಗ ನೊಂದಾವಣೆ ಮಾಡಿ ಸಮ್ಮೇಳನಕ್ಕೆ ಪ್ರೋತ್ಸಾಹ ಸೂಚಿಸಿರುವ ಕನ್ನಡ ಬಂಧುಗಳಿಗೆ ಮತ್ತೊಮ್ಮೆ ಧನ್ಯವಾದಗಳು.

ಸಮ್ಮೇಳನಕ್ಕೆ ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲ ಕನ್ನಡಿಗರಿಗೆ ಹಾಗೂ ಮುಂದಿನ ದಿನಗಳಲ್ಲಿ ನೊಂದಾವಣೆಗೆ ಸಿದ್ಧವಾಗಿರುವ ಕನ್ನಡ ಪ್ರತಿನಿಧಿಗಳಿಗೆ ಅರ್ಥಪೂರ್ಣ ಮತ್ತು ಆನಂದದಾಯಕ ಮೂರು ದಿನಗಳ ಕನ್ನಡ ಹಬ್ಬ ಕಟ್ಟಿಕೊಡಲು ಸಮ್ಮೇಳನ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಸಮ್ಮೇಳನವನ್ನು ಸ್ಮರಣೀಯವಾಗಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದಾರೆ.

ಇದಕ್ಕೆ ಸಾಕ್ಷಿಯೋ ಎಂಬಂತೆ ಇದ್ದುದು ಫೆಬ್ರವರಿ 27ರಂದು ಸಮ್ಮೇಳನ ನಡೆಯುವ "ರಾರಿಟನ್ ಸೆಂಟರ್"ನಲ್ಲಿ ಅಕ್ಕ ಪದಾಧಿಕಾರಿಗಳೊಡಗೂಡಿ ಸಮ್ಮೇಳನ ಸಮಿತಿಗಳು ನಡೆಸಿದ ಸಮಾಲೋಚನಾ ಸಭೆ. ಕನೆಕ್ಟಿಕಟ್, ನ್ಯೂಯಾರ್ಕ್, ಪೆನ್ಸಿಲ್ಲ್ವೇನಿಯ ಹಾಗು ನ್ಯೂ ಜೆರ್ಸಿಯಿಂದ ಆಗಮಿಸಿದ್ದ ಎಲ್ಲ 37 ಸಮಿತಿಗಳ ಚೇರ್ / ಕೊ ಚೇರ್ ಹಾಗು ಸ್ವಯಂಸೇವಕರು ಸುಮಾರು 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆತು ವಿಚಾರ ವಿನಿಮಯ ಮಾಡಿಕೊಂಡರು.

ವಿಶೇಷ ಪೂಜೆ, ಯತಿವರ್ಯರ ಆಶೀರ್ವಾದ : ಆಯಾ ಸಮಿತಿಗಳು ಮುಗಿಸಿರುವ / ನಡೆಸುತ್ತಿರುವ ಕಾರ್ಯ ಕಲಾಪಗಳ ಬಗ್ಗೆ ಸಂಕ್ಷಿಪ್ತವಾದ ಪರಿಚಯ ಮಾಡಿಕೊಂಡರು. ತದನಂತರ ಹತ್ತಿರದ ಶ್ರೀ ಕೃಷ್ಣ ವೃಂದಾವನದಲ್ಲಿ ಆರನೇ ಅಕ್ಕ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ದೂರವಾಣಿ ಮೂಲಕ ಆಶೀರ್ವಚನವನ್ನೂ ಪಡೆದುಕೊಳ್ಳಲಾಯಿತು.

ಈ ಒಂದು ದಾಖಲೆ ನೋಂದಾವಣೆಗೆ ಸಹಕರಿಸಿದ ಎಲ್ಲಾ ಚೇರ್, ಕೊ ಚೇರ್ ಗಳಿಗೂ, ಅಕ್ಕ ಪದಾಧಿಕಾರಿಗಳಿಗೂ, ಬೃಂದಾವನದ ಪದಾಧಿಕಾರಿಗಳಿಗೂ, ಎಲ್ಲ ಕನ್ನಡ ಕೂಟದ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯವರಿಗೂ ಹಾಗೂ ಸಮ್ಮೇಳನದ ಸುದ್ದಿ ಚಿತ್ರಗಳನ್ನು ಕನ್ನಡದಲ್ಲಿ ಬಿಂಬಿಸಿದ ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ನಮ್ಮ ವಂದನೆಗಳು ಸಲ್ಲುತ್ತವೆ.

ಇನ್ನೂ ಹೆಚ್ಚಿನ ನೊಂದಾವಣೆಗೆ ಕನ್ನಡ ಸಮುದಾಯದ ಸಹಕಾರ ಸಿಗುವುದು ಎಂಬ ಭರವಸೆ ಸಮ್ಮೇಳನ ಸಮಿತಿಗೆ ಇದೆ. ಕಾರ್ಯಕ್ರಮಗಳಿಗೆ ಪ್ರಾಯೋಜಕರುಗಳನ್ನು, ಸಮ್ಮೇಳನಕ್ಕೆ ದಾನಿಗಳನ್ನು, ಸ್ಮರಣ ಸಂಚಿಕೆಗೆ ಜಾಹಿರಾತುಗಳನ್ನು ಹಾಗೂ ಸಮ್ಮೇಳನದ ವಸ್ತು ಪ್ರದರ್ಶನಕ್ಕೆ ವಾಣಿಜ್ಯ ಮಳಿಗೆಗಳನ್ನು ತರುವುದರಲ್ಲೂ ಕೂಡ ಕನ್ನಡ ಸೇವಕರ ಸಹಕಾರ ಅತ್ಯಗತ್ಯ. ನಿಮ್ಮ ಸಹಕಾರ ಹೀಗೇ ಮುಂದುವರೆಯಲಿ ಎಂದು ಅಕ್ಕ, ಬೃಂದಾವನ ಕನ್ನಡ ಕೂಡ ಆಶಿಸುತ್ತದೆ.

ಸಂಗೀತ, ನೃತ್ಯ, ನಾಟಕ, ಹಾಸ್ಯ ವಿಡಂಬಣೆ, ಫ್ಯಾಷನ್ ಶೋ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, "ಅಕ್ಕ ಐಡಲ್", "ಮಿಸ್ ಅಕ್ಕ", "ಕೂಟ ನೃತ್ಯ", "ಅಕ್ಕ ಕ್ರಿಕೆಟ್ ಲೀಗ್", "ಸಣ್ಣ ಕಥೆಗಳ ಸ್ಪರ್ಧೆ"ಯಂತಹ ಸ್ಪರ್ಧೆಗಳಲ್ಲಿ ಎಲ್ಲ ಕನ್ನಡ ಕೂಟಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದನ್ನು ನಾವು ಕಾಣಬಯಸುತ್ತೇವೆ.

ಸ್ಮರಣ ಸಂಚಿಕೆಯಲ್ಲಿ ನಿಮ್ಮ ಲೇಖನಗಳನ್ನು ನಾವು ಓದಬಯಸುತ್ತೇವೆ. ಕರ್ನಾಟಕದ ಕಲಾವಿದರಿಂದ ಅತ್ತ್ಯುತ್ತಮವಾದ ಮನರಂಜನೆ ಕಾರ್ಯಕ್ರಮದ ಸಲುವಾಗಿ ಹಲವಾರು ಕಲಾವಿದರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕರ್ನಾಟಕದ ತಿಂಡಿ, ಊಟಗಳನ್ನು ನಿಮಗೆ ಉಣಬಡಿಸಲು ಕೇಟರರ್ ಗಳ ಜೊತೆ ಸುದೀರ್ಘವಾಗಿ ಚರ್ಚೆ ಸಾಗಿದೆ.

ಒಟ್ಟಾರೆ ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಅಕ್ಕ ಆರನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಕಲ ಕನ್ನಡಿಗರಿಗೂ ಸವಿಯಾದ ಮಾತು, ಸಿಹಿಯಾದ ಊಟ, ಸೊಗಸಾದ ನೋಟ, ಸದಾ ಕಾಲ ನೆನಪಿಡುವಂಥಹ ಕನ್ನಡ ಹಬ್ಬಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗೆ ಅಕ್ಕ ವೆಬ್ಸೈಟ್ ಹಾಗು ದಟ್ಸ್ ಕನ್ನಡ ನೋಡುತ್ತಿರಿ. ಧನ್ಯವಾದಗಳು.

ತಮ್ಮ ವಿಶ್ವಾಸಿ, ಸಮ್ಮೇಳನ ಕಾರ್ಯಕಾರಿ ಸಮಿತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X