ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನದ ಮರೆಯಲಾಗದ ಆ ಕ್ಷಣ

By Staff
|
Google Oneindia Kannada News

Vrinda and Sharada Byanna welcoming B.S. Yeddyurappaನಾವೇ ಆಹ್ವಾನಿಸಿದ ಕರ್ನಾಟಕದ ಮುಖ್ಯ ಅತಿಥಿಯನ್ನು ಭಾರತೀಯ ಸಂಸ್ಕೃತಿಯ ರೀತಿ ರಿವಾಜುಗಳಿಗೆ ಅನುಸಾರವಾಗಿ ಸ್ವಾಗತಿಸಬೇಕಾದುದು ನಮ್ಮ ಧರ್ಮ. ಅಕ್ಕ ವಿಶ್ವ ಸಮ್ಮೇಳನಕ್ಕೆ ಅಮೆರಿಕಾಗೆ ತೆರಳಿದ್ದ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಮಾನ ನಿಲ್ದಾಣದಲ್ಲೇ ಪೂರ್ಣಕುಂಭ ಸ್ವಾಗತವನ್ನು ಕೋರುವುದೇ ಶ್ರೇಷ್ಠ ಎಂದು ಭಾವಿಸಿದ್ದು ವಿದ್ಯಾರಣ್ಯ ಕನ್ನಡ ಕೂಟದ ಹಿರಿಯ ಮುತ್ತೈದೆ ಶಾರದಾ ಬೈಯಣ್ಣ ಅವರು ಮಾತ್ರ. ಮರೆಯಬಾರದ ಒಂದು ಕೃತಾರ್ಥಕ ಕ್ಷಣಕ್ಕಾಗಿ ಅವರು ಪಟ್ಟ ಸಂಭ್ರಮ ಮತ್ತು ಬವಣೆಯನ್ನು ಅವರ ಮಾತುಗಳಲ್ಲೇ ಕೇಳಿ- ಸಂಪಾದಕ.

ಲೇಖನ : ಯಲಹಂಕದ ಶಾರದಾ ಬೈಯಣ್ಣ, ಶಿಕಾಗೋ

ನೆನಪುಗಳು ಹಿಂದೋಡುತ್ತಿವೆ. ನಾನು ಶಿಕಾಗೋ ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷಿಣಿಯಾಗಿದ್ದಾಗ 1987ನೇ ಇಸವಿ ಮೇ ತಿಂಗಳಿನಲ್ಲಿ ಕೂಟದ ಇತಿಹಾಸದಲ್ಲೇ ನಡೆಯದೇ ಇದ್ದ ಪ್ರಪ್ರಥಮ ಚಾರಿತ್ರಿಕ ಆಚರಣೆಯಾದ 'ಮಧ್ಯವಲಯ ಕನ್ನಡಿಗರ ಸಮ್ಮಿಲನ' ಕಾರ್ಯಕ್ರಮವನ್ನು ನಾವು ಮಾಡಿ ಆಗ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಸ್ಮರಣ ಸಂಚಿಕೆಯನ್ನು ಅವರಿಂದ ಬಿಡುಗಡೆ ಮಾಡಿಸಿದ್ದೆವು.

ಅರೋರಾದಲ್ಲಿರುವ ಶ್ರೀ ಬಾಲಾಜಿ ದೇವಾಲಯದ ಮುಖ್ಯ ದ್ವಾರಕ್ಕೆ ಅವರು ಆಗಮಿಸುತ್ತಿದ್ದಂತೆ ಪುರೋಹಿತರ ವೇದ ಘೋಷ ಪಠನೆಯೊಂದಿಗೆ ಪೂರ್ಣ ಕುಂಭಗಳ ಸಮೇತ ನಾವು ಸ್ವಾಗತಿಸಿ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಕರೆದೊಯ್ದಿದ್ದೆವು. ದಕ್ಷಿಣ ಭಾರತದ ಕರುನಾಡ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಪರಿಪೂರ್ಣ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿರುವ ಯಡಿಯೂರಪ್ಪನವರು ನಮ್ಮೆಲ್ಲರ ಹೆಮ್ಮೆಯ ವಿದ್ಯಾರಣ್ಯ ಕನ್ನಡ ಕೂಟದ ಆತಿಥ್ಯದಲ್ಲಿ ಎರಡು ವಾರಗಳ ಹಿಂದೆ ಷಿಕಾಗೋದಲ್ಲಿ ನಡೆದ ಐದನೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ'ವನ್ನು ಉದ್ಘಾಟಿಸಲು ಆಗಸ್ಟ್ 28ನೇ ತಾರೀಖು ಗುರುವಾರ ಶಿಕಾಗೋ ಒಹೇರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ನನ್ನ ಕಿವಿಗೆ ಬಿದ್ದಿತ್ತು. ಅವರನ್ನೂ ನಮ್ಮ ಹಿಂದೂ ಸಂಪ್ರದಾಯದಂತೆ ಸ್ವಾಗತಿಸುವುದೇ ಶ್ರೇಷ್ಠ ಎಂದು ಹಿಂದಿನ ದಿನ ಬೆಳಿಗ್ಗೆಯಷ್ಟೇ ನನಗೆ ಹೊಳೆಯಿತು. ತತ್ ಕ್ಷಣ ಅಕ್ಕ ಸಮ್ಮೇಳನದ ಸಂಚಾಲಕರೊಬ್ಬರನ್ನು ಸಂಪರ್ಕ ಮಾಡಿ ಬೆಳ್ಳಿ ಕಳಸ, ಬೆಳ್ಳಿ ತೆಂಗಿನಕಾಯಿ, ನಾದಸ್ವರದ ಧ್ವನಿ ಸುರುಳಿ, ನನ್ನಲ್ಲಿದ್ದ ಹೊಸ ಶ್ರೀಗಂಧದ ಹಾರ ಮತ್ತು ಹೊಸ ಶಾಲು ಸಮೇತ ವಿಮಾನ ನಿಲ್ದಾಣಕ್ಕೆ ನಾನು ಬಂದು ಮುಖ್ಯಮಂತ್ರಿಯವರಿಗೆ ಸ್ವಾಗತ ಬಯಸುವ ಇಚ್ಛೆಯನ್ನು ತೋಡಿಕೊಂಡೆ. ನನ್ನ ಇಚ್ಛೆಯನ್ನು ಪುಷ್ಟೀಕರಿಸಿದ ಅವರು ನನ್ನೊಡನೆ ಇನ್ನೂ ಕೆಲವು ಹೆಂಗಳೆಯರನ್ನು ಕರೆತರಲು ಸೂಚಿಸಿದರು.

ಅಮೇರಿಕಾದ ಅತ್ಯಂತ ದೊಡ್ಡ ನಗರಗಳಲ್ಲೊಂದಾದ ಷಿಕಾಗೋದಲ್ಲಿ ನನ್ನ ಕನ್ನಡ ಗೆಳತಿಯರೆಲ್ಲ ಸುಮಾರು ಹತ್ತರಿಂದ ನಲವತ್ತು ಮೈಲಿಗಳ ದೂರದಲ್ಲಿ ವಾಸಿಸುತ್ತಿದ್ದರಿಂದ ಅವರಲ್ಲಿ ನಮ್ಮ ಮನೆಗೆ ಸಮೀಪದಲ್ಲಿರುವ ಕೆಲವೇ ಗೆಳತಿಯರ ಸಂಪರ್ಕ ಮಾಡಿ ಅವರಲ್ಲಿ ಯಾರಾದರೂ ಯಡಿಯೂರಪ್ಪನವರನ್ನು ಸ್ವಾಗತಿಸಲು ನನ್ನೊಡನೆ ವಿಮಾನ ನಿಲ್ದಾಣಕ್ಕೆ ಬರಲಾಗುವುದೇ ಎಂದು ವಿಚಾರಿಸಿದೆ. ಅವರಲ್ಲಿ ಕೆಲವರು ಅಕ್ಕ ಸಮ್ಮೇಳನದ ಕಾರ್ಯಕಾರೀ ಸಮಿತಿಯಲ್ಲಿದ್ದುದರಿಂದ, ಮತ್ತೆ ಕೆಲವರು ಅದೇ ದಿನ ಸಂಜೆ ಐದು ಗಂಟೆಗೆ ರೋಸ್‌ಮಾಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೃತ್ಯ, ಹಾಡುಗಾರಿಕೆಯ ಅಭ್ಯಾಸದಲ್ಲಿ ಭಾಗವಹಿಸಬೇಕಾಗಿದ್ದುದರಿಂದ, ಇನ್ನೂ ಕೆಲವರು ತಾವು ಕೆಲಸ ಮಾಡುತ್ತಿದ್ದ ಕಛೇರಿಗಳಲ್ಲಿ ನಿಗದಿಯ ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೊರಡಲು ಪೂರ್ವಭಾವಿ ಅನುಮತಿ ಪಡೆದಿರಲಿಲ್ಲವಾದ್ದರಿಂದ ಯಾರೂ ನನ್ನೊಂದಿಗೆ ಬರಲಾಗುವುದಿಲ್ಲವೆಂದು ಗೊತ್ತಾದಾಗ ನನಗೆ ಸ್ವಲ್ಪ ನಿರಾಸೆ ಆಗಿತ್ತೆಂದೇ ಹೇಳಬಹುದು.

ಅಕ್ಕ ಸಮ್ಮೇಳನಕ್ಕೆಂದು ನನ್ನ ಎರಡನೆಯ ಅತ್ತಿಗೆ ಪೂರ್ಣಿಮಾ ಅದೇ ದಿನ ಬಾಸ್ಟನ್‌ನಿಂದ ಬೆಳಿಗ್ಗೆ ಹತ್ತೂವರೆ ಗಂಟೆಗೆ ಓಹೇರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರಿಂದ ಅವರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಒಂದು ಬಾರಿ ಹೋಗಿದ್ದೇ ಅಲ್ಲದೆ ಬೆಂಗಳೂರಿನಿಂದ ಸುಗಮ ಸಂಗೀತ ಗಾಯಕಿ ವೃಂದಾ ಎಸ್. ರಾವ್ ಅವರು ನಮ್ಮ ಅತಿಥಿಗಳಾಗಿ ಆಗಮಿಸಿದಾಗ ಮಧಾಹ್ನ ಎರಡನೇ ಬಾರಿ ಓಹೇರ್ ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ನಮ್ಮ ಮನೆಗೆ ಕರೆತರಬೇಕಾಯಿತು. ಮುಖ್ಯ ಮಂತ್ರಿಗಳನ್ನು ಸ್ವಾಗತಿಸಲು ನನ್ನವರನ್ನೇ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗೋಣವೆಂದುಕೊಂಡರೆ ಅಕ್ಕ ಸಮ್ಮೇಳನಕ್ಕೆಂದು ಕ್ಯಾಲಿಫೋರ್ನಿಯಾದಿಂದ ಆರೂಮುಕ್ಕಾಲು ಗಂಟೆಗೆ ಮಿಡ್‌ವೇ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ನನ್ನ ಹಿರಿಯ ಅತ್ತಿಗೆ ಶಾಂತ ಅವರನ್ನು ಕರೆತರಲು ನನ್ನವರು ಅಲ್ಲಿಗೆ ಹೋಗಲೇಬೇಕಿತ್ತು. ಸಂದರ್ಭ ಹೀಗಿರುವಾಗ ನನ್ನನ್ನು ಅವರು ಓಹೇರ್‍ಗೆ ಕರೆದುಕೊಂಡು ಹೋಗಲು ಹೇಗೆ ಸಾಧ್ಯ?

ಇನ್ನು ಕೆಲವೇ ದಿನಗಳಲ್ಲಿ ಅರುವತ್ತಾರನೇ ವರ್ಷಕ್ಕೆ ಕಾಲಿಡುತ್ತಿರುವ ನಾನೊಬ್ಬಳೇ ನನ್ನ ನಾಲ್ಕು ಚಕ್ರಗಳ ವಾಹನವನ್ನು ತಂಗುದಾಣದಲ್ಲಿ ನಿಲ್ಲಿಸಿ, ಆ ಎಲ್ಲ ಮಂಗಳ ದ್ರವ್ಯಗಳನ್ನು ಹೊತ್ತುಕೊಂಡು ವಿಮಾನ ನಿಲ್ದಾಣದ ಒಳಕ್ಕೆ ಹೋಗುವುದಂತೂ ಸತ್ಯಕ್ಕೆ ದೂರದ ಮಾತಾದ್ದರಿಂದ ತುಂಬಾ ಹತಾಶೆ ಮೂಡಿತ್ತು. ಉಳಿದಿದ್ದ ಒಂದೇ ಒಂದು ಆಶಾಕಿರಣ ಎಂದರೆ ಭಾರತದಿಂದ ಆಗತಾನೆ ಬಂದಿಳಿದ ವೃಂದಾ. ಸಪ್ತಸಾಗರಗಳನ್ನು ದಾಟಿ ಬಂದ ಪ್ರಯಾಣದಿಂದ ಅವರಲ್ಲಿನ್ನೂ ಚೈತನ್ಯ ಉಳಿದಿದ್ದರೆ ಅವರನ್ನು ನನ್ನೊಡನೆ ಓಹೇರ್‍ಗೆ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುವುದು! ಅಷ್ಟರಲ್ಲಿ ಸ್ವಯಂಸೇವೆಗೆ ಹೆಸರುವಾಸಿಯಾದ ನಮ್ಮ ವಿದ್ಯಾರಣ್ಣಿಗ ಕೆಂಪೇ ಗೌಡ ಅವರ ನೆನಪಾಗಿ ಅವರಲ್ಲಿ ನನ್ನ ಅಳಲನ್ನು ತೋಡಿಕೊಂಡು ವಿಮಾನ ನಿಲ್ದಾಣಕ್ಕೆ ಹೋಗಲು ಅವರ ಸಹಾಯವನ್ನು ಯಾಚಿಸಿದೆ.

ಅವರ ನೇತೃತ್ವದಲ್ಲಿ ಅಕ್ಕ ಸಮ್ಮೇಳನದಲ್ಲಿ ಸ್ವಯಂಸೇವೆ ಮಾಡಲು ಪಣ ತೊಟ್ಟಿದ್ದ ಹಲವಾರು ಮಂದಿ ವಿದ್ಯಾರಣ್ಣಿಗರಲ್ಲಿ ಅಶ್ವಥ್ ಬಾಗೂರ್ ಅವರು ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಮುಂದೆ ಬಂದಿದ್ದರು. ಅವರ ಧರ್ಮಪತ್ನಿ ಮಾನಸ ಅವರನ್ನು ನಮ್ಮೊಡನೆ ಕರೆದುಕೊಂಡು ಹೋಗೋಣವೆಂದರೆ ಅವರ ಮನೆಗೆ ಅಕ್ಕ ಸಮ್ಮೇಳನದಲ್ಲಿ ಮಾರಾಟ ಮಳಿಗೆ ಇಡುವ ವಾರಸುದಾರರೊಬ್ಬರು ಅತಿಥಿಯಾಗಿ ಬರುವ ಸಂದರ್ಭ ಇದ್ದುದರಿಂದ ಆಕೆ ಮನೆಯಲ್ಲೇ ಉಳಿಯಬೇಕಾದ ಪ್ರಸಂಗ ಬಂದಿತ್ತು. ವೃಂದಾ ಅವರು ಐದೂಕಾಲು ಗಂಟೆಗೆ ನಮ್ಮ ಮನೆಯೊಳಕ್ಕೆ ಕಾಲಿಡುತ್ತಿದ್ದಂತೆಯೇ ವಿಷಯ ತಿಳಿಸಿ ಅವರಿಗೆ ಇಷ್ಟವಿದ್ದಲ್ಲಿ ನನ್ನೊಡನೆ ವಿಮಾನ ನಿಲ್ದಾಣಕ್ಕೆ ಬರಲು ಆಹ್ವಾನಿಸಿ, ತಯಾರಾಗಲು ಕೇವಲ ಹದಿನೈದು ನಿಮಿಷಗಳ ಅವಧಿಯನ್ನು ಕೊಟ್ಟೆ. ಪಾಪ, ಅವರು ಪ್ರಯಾಣದ ಆಯಾಸವನ್ನೂ ಮರೆತು ತಕ್ಷಣ ತಯಾರೇನೋ ಆದರು. ಅಶ್ವಥ್ ಅವರು ಸಮಯಕ್ಕೆ ಸರಿಯಾಗಿ ನಮ್ಮ ಮನೆಗೇನೋ ಬಂದರು.

ಆದರೆ ಹಲವಾರು ಗಂಟೆಗಳ ಕಾಲ ಪ್ರಯಾಣ ಮಾಡಿ ಬಂದ ವೃಂದಾ ಅವರಿಗೆ ಸ್ವಲ್ಪ ತಿಂಡಿ ಕೊಟ್ಟು ಉಪಚಾರ ಮಾಡದೆ ಅವರನ್ನು ಕರೆದುಕೊಂಡು ಹೋಗಲು ಮನಸ್ಸಾಗಲಿಲ್ಲವಾದ್ದರಿಂದ ನಾವು ಮನೆ ಬಿಟ್ಟು ಹೊರಡುವ ವೇಳೆಗೆ ಐದೂಮುಕ್ಕಾಲು ಆಗಿತ್ತು. ಆರು ಗಂಟೆಗೆ ಆಗಮಿಸುತ್ತಿದ್ದ ಬ್ರಿಟಿಷ್ ಏರ್‍ಲೈನ್ಸ್ ವಿಮಾನದಿಂದ ಮುಖ್ಯಮಂತ್ರಿಗಳು ಹೊರ ಬರುವ ಹೊತ್ತಿಗೆ ಕನಿಷ್ಟ ಪಕ್ಷ ಆರೂವರೆ ಅಗಿರುತ್ತದೆ, ಆ ವೇಳೆಗೆ ನಾವು ಅಲ್ಲಿಗೆ ಹೋಗಿರುತ್ತೇವೆಂಬ ಭರವಸೆ ನನಗಿದ್ದರೂ, ಒಂದು ವೇಳೆ ನಾವು ಹೋಗುವ ವೇಳೆಗೆ ಅವರು ಹೋಟೆಲ್‌ಗೆ ಹೋಗಿಬಿಟ್ಟಿದ್ದರೇನು ಮಾಡುವುದು ಎಂಬ ಆತಂಕವೂ ಇತ್ತು. ನಮ್ಮ ಕರ್ನಾಟಕ ಧ್ವಜದ ಸಂಕೇತವಾದ ಹಳದಿ ಬಣ್ಣದ ಧರ್ಮಾವರಂ ಸೀರೆಗೆ ಕೆಂಪು ಬಣ್ಣದ ಜರಿ ಅಂಚು ಇರುವ ಸೀರೆ ಉಟ್ಟು ನಾನು ಕೂದಲನ್ನು ಮೇಲೆತ್ತಿ ಕೊಂಡೆ ಹಾಕಿಕೊಂಡಿದ್ದೆ. ಕೈಯಲ್ಲಿ ಹಿಡಿದುಕೊಂಡಿದ್ದ ಕೆಂಪು ಮತ್ತು ಹಳದಿ ಬಟ್ಟೆಗಳಿಂದ ಚಿತ್ತಾರ ಬಿಡಿಸಿದ್ದ ಬುಟ್ಟಿಯಲ್ಲಿ ಅಕ್ಕಿ ತುಂಬಿಸಿದ ಬೆಳ್ಳಿ ತಟ್ಟೆ ಇಟ್ಟು ಅದರಲ್ಲಿ ಬಿಡಿ ಕಾಸು, ಒಣಗಿದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಏಲಕ್ಕಿಗಳೊಂದಿಗೆ ಮಿಚಿಗನ್ ಸರೋವರದ ಜಲವನ್ನು ತುಂಬಿಸಿದ ಬೆಳ್ಳಿ ಕಳಸವನ್ನು ಇಟ್ಟಿದ್ದೆ.

ವೀಳೆಯದೆಲೆಗೆ ಬದಲಾಗಿ ಮಾವಿನ ಎಲೆಯಂತಿದ್ದ ಎಲೆಗಳನ್ನು ಉಪಯೋಗಿಸಿ ಬೆಳ್ಳಿ ತೆಂಗಿನಕಾಯಿಯನ್ನು ಬೆಳ್ಳಿ ಕಳಸದ ಮೇಲಿಟ್ಟು ಅದರ ಸುತ್ತಲೂ ವೃತ್ತಾಕಾರದಲ್ಲಿ ಕನ್ನಡಮ್ಮನ ಧ್ವಜದ ಬಣ್ಣಗಳಾದ ಹಳದಿ ಮತ್ತು ಕೆಂಪು ಗುಲಾಬಿ ಹೂಗಳನ್ನು ಇಟ್ಟು ಅಲಂಕಾರ ಮಾಡಿದ್ದೆ. ವೃಂದ ಅವರು ಹಿಡಿದುಕೊಂಡಿದ್ದ ಕೆಂಪು ಮತ್ತು ಹಳದಿ ಬಟ್ಟೆಗಳಿಂದ ಚಿತ್ತಾರ ಬಿಡಿಸಿದ್ದ ತಟ್ಟೆಯಲ್ಲಿ ಹೊಸ ಶಾಲು, ಅದರ ಮೇಲೆ ಅದೇ ಬಣ್ಣದ ಚಿತ್ತಾರ ಬಿಡಿಸಿದ್ದ ತೆಂಗಿನಕಾಯಿಯ ಸುತ್ತಲೂ ಹೊಸ ಶ್ರೀಗಂಧದ ಹಾರವನ್ನಿಟ್ಟು ಅಲಂಕರಿಸಿದ್ದೆ. ವಾಹನದ ತಂಗು ನಿಲ್ದಾಣದಿಂದ ನಾವು ಮೂವರೂ ವಿಮಾನ ನಿಲ್ದಾಣದ ಒಳಕ್ಕೆ ಹೆಜ್ಜೆಯಿಡುತ್ತಿದ್ದಂತೆ ಸನ್ಮಾನ್ಯ ಯಡಿಯೂರಪ್ಪನವರು ಅವರ ಅನುಯಾಯಿಗಳೊಂದಿಗೆ ಹೊರಬರುತ್ತಿರುವುದನ್ನು ವೃಂದಾ ಅವರು ಗಮನಿಸಿದರು.

"ಮೇಡಂ ಅಲ್ಲಿ ನೋಡಿ, ಸಿಎಂ ಅವರು ನಿಲ್ದಾಣದಿಂದ ಹೊರಗಡೆ ಹೋಗುತ್ತಿದ್ದಾರೆ" ಎಂದು ಅವರು ನನಗೆ ಹೇಳಿದ ತಕ್ಷಣ "ವೃಂದಾ ಅವರೇ, ಕೂಡಲೇ ಹೋಗಿ ಅವರನ್ನು ಅಲ್ಲೇ ನಿಲ್ಲುವಂತೆ ಹೇಳಿ" ಎಂದು ಅವರನ್ನು ಓಡಿಸಿದೆ. ಮುಖ್ಯಮಂತ್ರಿಗಳೊಂದಿಗೆ ನಿಂತಿದ್ದ ವೃಂದಾ ಅವರ ಬಳಿಗೆ ನಾನೂ ಗಡಬಡಿಸಿಕೊಂಡು ಓಡಿ ಅತ್ಯಂತ ಸಂತೋಷದಿಂದ ಅವರಿಗೆ ನಮಸ್ಕಾರ ಮಾಡಿದಾಗ ಕನ್ನಡಿಗರ್‍ಯಾರನ್ನೂ ಕಾಣದೆ ಸಪ್ಪಗಾಗಿದ್ದ ಅವರ ಮುಖದಲ್ಲಿ ಸಂತಸದ ಹೊಳೆ ಹರಿದಿತ್ತು. "ನನ್ನ ಹೆಸರು ಶಾರದಾ ಬೈಯಣ್ಣ, ಷಿಕಾಗೋ ವಿದ್ಯಾರಣ್ಯ ಕನ್ನಡ ಕೂಟದ ಮಾಜೀ ಅಧ್ಯಕ್ಷಿಣಿ ನಾನು, ವಿದ್ಯಾರಣ್ಯ ಕನ್ನಡ ಕೂಟ ಹಾಗೂ ಅಕ್ಕ ಸಂಸ್ಥೆಯಿಂದ ನಿಮಗೆ ಸ್ವಾಗತ, ಸುಸ್ವಾಗತ" ಎಂದು ಹೇಳಿ ನನ್ನ ಧ್ವನಿಸುರುಳಿಯಲ್ಲಿ ನಾದಸ್ವರವನ್ನು ಮೊಳಗಿಸಿದೆ. ನಮ್ಮ ಬಾಲಾಜೀ ದೇವಾಲಯದ ಪುರೋಹಿತರಾದ ನಾಗೇಂದ್ರ ರಾವ್ ಅವರನ್ನು ವೇದ ಘೋಷ ಪಠನೆಗಾಗಿ ವಿಮಾನ ನಿಲ್ದಾಣಕ್ಕೆ ಬರುವಂತೆ ಆಹ್ವಾನಿಸಿದ್ದರೂ ಕಾರಣಾಂತರದಿಂದ ಅವರು ಬರಲಾಗದುದಕ್ಕೆ ವಿಷಾದವಾಗುತ್ತಿದೆ. ಬ್ರಿಟಿಷ್ ಏರ್‍ಲೈನ್ಸ್‌ನಲ್ಲಿ ಆಗಮಿಸುವ ಎಲ್ಲ ಪ್ರಯಾಣಿಕರು 'ಎ' ಬಾಗಿಲಿನ ಮೂಲಕ ಹೊರಬರುತ್ತಾರೆಂದು ವಿಮಾನ ನಿಲ್ದಾಣದ ಕಾರ್ಯಕರ್ತರು ಶ್ರುತಪಡಿಸಿದ್ದರಿಂದ ಅವರನ್ನು ಸ್ವಾಗತಿಸಲು ಹೋಗಿದ್ದ ವಿದ್ಯಾರಣ್ಣಿಗರು ಹಾಗೂ ಅಕ್ಕ ಸಂಸ್ಥೆಯ ಕಾರ್ಯಕರ್ತರೆಲ್ಲ ಆ ಬಾಗಿಲಿನ ಬಳಿ ಮುಖ್ಯಮಂತ್ರಿಗಳ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು 'ಅತ್ಯಂತ ಪ್ರಮುಖ ವ್ಯಕ್ತಿ' ಎಂಬ ಕಾರಣದಿಂದ ಪ್ರಯಾಣಿಕರ ಗುಂಪಿನ ಮಧ್ಯೆ ಅವರನ್ನು ಕಳುಹಿಸದೆ ಗೌರವಯುತವಾಗಿ 'ಬಿ' ಬಾಗಿಲಿನಲ್ಲಿ ಅವರನ್ನು ಕಳಿಸಿರುವ ಸಂಗತಿ ಕನ್ನಡಿಗರ್‍ಯಾರಿಗೂ ಗೊತ್ತಿರಲಿಲ್ಲ, ನನಗಂತೂ ಮೊದಲೇ ಅದರ ಅರಿವಿರಲಿಲ್ಲ. ಮುಖ್ಯಮಂತ್ರಿಗಳು 'ಬಿ' ಬಾಗಿಲಿನಿಂದ ಹೊರಬಂದಿದ್ದೂ, ಅದೇ ಗಳಿಗೆಯಲ್ಲಿ ನಾವು ಮೂರು ಜನ ವಿಮಾನ ನಿಲ್ದಾಣದ ಒಳಕ್ಕೆ ಹೆಜ್ಜೆ ಇಟ್ಟಿದ್ದೂ ಕಾಕತಾಳೀಯವೇ ಸರಿ.

ಒಟ್ಟಿನಲ್ಲಿ ಪೂರ್ಣಕುಂಭ ಮತ್ತು ನಾದಸ್ವರದ ಸಮೇತ ನಮ್ಮ ಭವ್ಯ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸಾಂಪ್ರದಾಯಿಕ ಸುಸ್ವಾಗತವನ್ನು ಕೋರಿದ ಸುಮಂಗಲಿಯರಿಬ್ಬರಲ್ಲಿ ಮೂವತ್ತೇಳು ವರ್ಷಗಳಿಂದ ಅಮೇರಿಕಾ ದೇಶದಲ್ಲಿ ನೆಲೆಸಿರುವ ಅನಿವಾಸೀ ಕನ್ನಡಿಗರಲ್ಲಿ ಹಿರಿ ಮುತ್ತೈದೆ ನಾನೊಬ್ಬಳಾಗುವ, ನಿವಾಸೀ ಕನ್ನಡಿಗರಲ್ಲಿ ವೃಂದ ಅವರು ಕಿರಿಮುತ್ತೈದೆ ಆಗುವ ಈ ಸೌಭಾಗ್ಯವನ್ನು ಒದಗಿಸಿಕೊಟ್ಟ ಭಗವಂತನಿಗೆ ನನ್ನ ಅನಂತಾನಂತ ಸಾಷ್ಟಾಂಗ ಪ್ರಣಾಮಗಳು. 'ಎ' ಬಾಗಿಲಿನ ಬಳಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತಾ ನಿಂತಿದ್ದ ಅನಿವಾಸೀ ಕನ್ನಡಿಗರೆಲ್ಲ ಬಂದ ಮೇಲೆ ವಿದ್ಯಾರಣ್ಯ ಕನ್ನಡ ಕೂಟದ ಪರವಾಗಿ ನನ್ನ ಬಳಿ ಇದ್ದ ಶ್ರೀಗಂಧದ ಹಾರವನ್ನು ಸಮ್ಮೇಳನದ ಸಂಚಾಲಕರು ಮುಖ್ಯಮಂತ್ರಿಗಳ ಕೊರಳಿಗೆ ಹಾಕಿ ಸನ್ಮಾನಿಸಿದರೆ, ಒಂದು ಹಳದಿ ಬಣ್ಣದ ಗುಲಾಬಿ, ಒಂದು ಕೆಂಪು ಬಣ್ಣದ ಗುಲಾಬಿ ಹೂವನ್ನು ಅವರ ಕೈಗೆ ಕೊಟ್ಟು, ನಾನು ಶಾಲು ಹೊದಿಸಿ ಸನ್ಮಾನ ಮಾಡಿದೆ ಎಂದು ತಿಳಿಸಲು ನನಗೆ ಅತ್ಯಂತ ಹೆಮ್ಮೆಯಾಗುತ್ತಿದೆ. ಕೈಕುಲಿಕಿ ಸ್ವಾಗತಿಸುವುದು, ಇಂಗ್ಲಿಷ್ ನಲ್ಲಿ ಉಭಯಕುಶಲೋಪರಿ ಮಾಡುವುದು ಇದ್ದೇ ಇರತ್ತೆ. ಆದರೆ, ನಮ್ಮ ಭಾರತೀಯ ಸಂಸ್ಕೃತಿಯ ರೀತಿ ರಿವಾಜುಗಳನ್ನು ನಾವು ಎಷ್ಟೇ ತೊಂದರೆಯಾದರೂ ಯಾವತ್ತೂ ಕೈಬಿಡಬಾರದು. ಅದೊಂದೇ ಉದ್ದೇಶದಿಂದ ನಾನು ಆವತ್ತು ಗಡಿಬಿಡಿಯಿಂದ ಪರದಾಡಿದೆ.

ಒಂದು ವೇಳೆ ನಾವ್ಯಾರೂ ವಿಮಾನ ನಿಲ್ದಾಣದಲ್ಲಿ ಮುಖ್ಯ ಮಂತ್ರಿಗಳ ಕಣ್ಣಿಗೆ ಬೀಳದೆ ಅವರು ಸೀದಾ ಹೋಟೆಲ್‌ಗೆ ಹೊರಟು ಹೋಗಿಬಿಟ್ಟಿದ್ದಿದ್ದರೆ ಎಂತಹ ಆಭಾಸವಾಗುತ್ತಿತ್ತು ಎಂದು ನೆನೆಸಿಕೊಂಡರೆ ಈಗಲೂ ನನ್ನ ಮೈ ಜುಂ ಎನ್ನುತ್ತದೆ. ಆ ರೀತಿ ಆಗದೇ ಇರಲು ಕೆಂಪೇಗೌಡ ಹಾಗೂ ಅಶ್ವಥ್ ಅವರೇ ಕಾರಣ. ಅವರಿಬ್ಬರ ಸಹಕಾರ ಇಲ್ಲದೇ ಇದ್ದಿದ್ದರೆ ಈ ಸ್ವಾಗತಾಚರಣೆ ಖಂಡಿತ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಅವರೇ ದೇವರ ರೂಪದಲ್ಲಿ ನನ್ನ ಸಹಾಯಕ್ಕೆ ಬಂದು ಇದರ ಯಶಸ್ಸಿಗೆ ಕಾರಣ ಆಗಿದ್ದಾರಾದ್ದರಿಂದ ಅವರಿಬ್ಬರಿಗೂ ನನ್ನ ಹೃದಯಪೂರ್ವಕವಾದ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X