ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್

By ವರದಿ : ಎಸ್ಕೆ. ಶಾಮ ಸುಂದರ
|
Google Oneindia Kannada News

Obama may miss it but BSY wontಬೆಂಗಳೂರು, ಜು.7 : ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ (ಆ.29ರಿಂದ 31) ಅಮೆರಿಕಾದ ಚಿಕಾಗೋದಲ್ಲಿ ನಡೆಯುವ ಐದನೆಯ ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ) ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸಮ್ಮೇಳನದ ಸಾರಥ್ಯ ವಹಿಸಲಿದೆ.

ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸುತ್ತಿರುವುದು ಅನಿವಾಸಿ ಕನ್ನಡಿಗರಿಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡಿದೆ ಎಂದು 5ನೇ ವಿಶ್ವಕನ್ನಡ ಸಮ್ಮೇಳನದ ಸಂಚಾಲಕರಾದ ಶಿವಮೂರ್ತಿ ಕೀಲಾರ ಸೋಮವಾರ (ಜು.7) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿನಾಯ್ ಪ್ರಾಂತ್ಯದ ಡೆಮಕ್ರಾಟಿಕ್ ಸೆನೇಟರ್ ಹಾಗೂ ಅಮೆರಿಕಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬರಾಕ್ ಒಬಾಮಾ ಅವರನ್ನು ಕೂಡ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಆದರೆ, ಆಗಸ್ಟ್-ನವಂಬರ್ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿರುವ ಕಾರಣ ಒಬಾಮಾ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಇಲಿನಾಯ್ ಪ್ರಾಂತೀಯ ಅಧಿಕಾರಿಗಳು ಕನ್ನಡ ಉತ್ಸವಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದ್ದಾರೆ ಎಂದು 'ಅಕ್ಕ' ಪದಾಧಿಕಾರಿಗಳು ಹೇಳಿದರು.

ವ್ಯಾಪಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಂಡಿ ಸಿಟಿ(ಶಿಕಾಗೊ) ಹಾಗೂ ಸಿಲಿಕಾನ್ ಸಿಟಿ(ಬೆಂಗಳೂರು) ನಡುವೆ ವಿನಿಮಯ ಮಾಡಿಕೊಳ್ಳಲು ಇಲ್ಲಿನಾಯ್ಸ್ ಸರ್ಕಾರ ಶೀಘ್ರದಲ್ಲಿ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಲಿದೆ. ಈ ಕುರಿತ ಒಪ್ಪಂದಕ್ಕೆ ಶೀಘ್ರದಲ್ಲೇ ಅಂಕಿತ ಬೀಳಲಿದೆ ಎಂದು ಕೀಲಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಅಕ್ಕ' ಅಧ್ಯಕ್ಷ ರಮೇಶ್ ಗೌಡ, 'ಅಕ್ಕ' ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಮರನಾಥ್ ಗೌಡ, 5ನೇ ವಿಶ್ವಕನ್ನಡ ಸಮ್ಮೇಳನದ ಭಾರತ ಸಂಚಾಲಕ ಎಂ.ಕೃಷ್ಣ ಮೂರ್ತಿ, ಹಣಕಾಸು ಸಮಿತಿ ಅಧ್ಯಕ್ಷ ಸಂಪತ್ ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ಯಾವುದೇ ಲಾಭಾಪೇಕ್ಷೆ ಇಲ್ಲದ ಅಪ್ಪಟ ಸಾಂಸ್ಕೃತಿಕ ಸಂಘನೆಯಾಗಿದ್ದು ಅಮೆರಿಕಾ ಮತ್ತು ಕೆನಡದಲ್ಲಿ ನೆಲೆಸಿರುವ ಕನ್ನಡಿಗರನ್ನು ಪ್ರತಿನಿಧಿಸುತ್ತದೆ. ಅಕ್ಕ ಈಗ 10ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದೆ. ಪ್ರಸ್ತುತ 32 ಕನ್ನಡ ಸಂಘಗಳು ಹಾಗೂ ಅಮೆರಿಕ, ಕೆನಡದ 70,000ಕ್ಕೂ ಅಧಿಕ ಕನ್ನಡಿಗರು 'ಅಕ್ಕ' ಬಳಗದಲ್ಲಿದ್ದಾರೆ ಎಂದು ಅವರು ಶಿವಮೂರ್ತಿ ವಿವರಿಸಿದರು.

ಇದಕ್ಕೂ ಮುನ್ನ 'ಅಕ್ಕ' 4 ಬಾರಿ ವಿಶ್ವಕನ್ನಡ ಸಮ್ಮೇಳನಗಳನ್ನು ಅಮೆರಿಕಾದಾದ್ಯಂತ ಆಯೋಜಿಸಿ (2000ದಲ್ಲಿ ಹೂಸ್ಟನ್, 2002ರಲ್ಲಿ ಡೆಟ್ರಾಯ್ಟ್, 2004ರಲ್ಲಿ ಆರ್ಲ್ಯಾಂಡೊ, 2006ರಲ್ಲಿ ಬಾಲ್ಟಿಮೋರ್) ಚದುರಿ ಹೋಗಿರುವ ಕನ್ನಡಿಗರನ್ನು ಒಂದೇ ಸೂರಿನಡಿ ಸಂಘಟಿಸಿತ್ತು. ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕನ್ನಡಿಗರ ಸಮ್ಮೇಳನ ಹಳೆಯ ಗೆಳೆಯರನ್ನು, ಸಹಪಾಟಿಗಳನ್ನು ಒಟ್ಟಿಗೆ ಕರೆತರುತ್ತಿದೆ. 'ಅಕ್ಕ' ಸಮ್ಮೇಳನದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕದ ಮಾಧ್ಯಮ ಆಗಿಂದಾಗ್ಗೆ ವರದಿ ಮಾಡುತ್ತಲೇ ಇದೆ.

ಸ್ಯಾಮ್ ಪಿಟ್ರೋಡಾ, ಕ್ಯಾಪ್ಟನ್ ಗೋಪಿನಾಥ್, ಕಾದಂಬರಿಕಾರ ಎಸ್.ಎಲ್.ಬೈರಪ್ಪ ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಿ ಸಭಿಕರನ್ನು ರಂಜಿಸಲಿದ್ದಾರೆ. ನಟರಾದ ಉಪೇಂದ್ರ ಮತ್ತವರ ಪತ್ನಿ ಪ್ರಿಯಾಂಕ, ಪುನೀತ್ ರಾಜ್‌ಕುಮಾರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲಾ, ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮೇಳನದ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದರ ಹಾಗೂ ಲೇಖಕರ ತಂಡವನ್ನು ಕರ್ನಾಟಕ ಸರ್ಕಾರ ಕಳುಹಿಸಲಿದೆ. ಯಡಿಯೂರಪ್ಪ ಸಂಪುಟ ಸಚಿವರು ಹಾಗೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರು 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಲು ತುಂಬಾ ಉತ್ಸಾಹದಲ್ಲಿದ್ದಾರೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಾರಿಗೆ ಸಚಿವ ಆರ್.ಅಶೋಕ್, ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಮುಖ್ಯಮಂತ್ರಿಗಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಶಾಸಕರಾದ ಡಾ.ಸುಧಾಕರ್(ಕಾಂಗ್ರೆಸ್, ಚಿಂತಾಮಣಿ), ಕೃಷ್ಣ ಬೈರೇಗೌಡ (ಕಾಂಗ್ರೆಸ್, ಬ್ಯಾಟರಾಯನಪುರ), ಸಿ.ಎಸ್.ಪುಟ್ಟೇಗೌಡ (ಜೆಡಿಎಸ್, ಚೆನ್ನರಾಯಪಟ್ಟಣ), ಮುನಿರಾಜು (ಬಿಜೆಪಿ, ದಾಸರಹಳ್ಳಿ), ಡಿ.ಬಿ.ಜಯಚಂದ್ರ (ಕಾಂಗ್ರೆಸ್, ಸಿರಾ), ಝಮೀರ್ ಅಹಮದ್ (ಜೆಡಿಎಸ್, ಚಾಮರಾಜಪೇಟೆ), ಬಾಲಕೃಷ್ಣ (ಜೆಡಿಎಸ್, ಮಾಗಡಿ), ಪುಟ್ಟರಾಜು (ಜೆಡಿಎಸ್, ಮೇಲುಕೋಟೆ) ಹಾಗೂ ಚೆಲುವರಾಯ ಸ್ವಾಮಿ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಕೀಲಾರ ವಿವರ ನೀಡಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X