ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಂಡಿಸಿಟಿ' ಶಿಕಾಗೋದಲ್ಲಿ 'ಅಕ್ಕ' ವಿಶ್ವಕನ್ನಡ ಸಮ್ಮೇಳನ

By ವರದಿ : ಪ್ರಸಾದ ನಾಯಿಕ
|
Google Oneindia Kannada News

Rosemont Convention Centerಬೆಂಗಳೂರು, ಜೂ. 3 : ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದಾದ್ಯಂತ ಬಿಂಬಿಸುವ ಉದ್ದೇಶದಿಂದ 5ನೇ 'ಅಕ್ಕ'(ಅಮೆರಿಕ ಕನ್ನಡ ಕೂಟಗಳ ಆಗರ) ವಿಶ್ವ ಕನ್ನಡ ಸಮ್ಮೇಳನ ವಿದ್ಯಾರಣ್ಯ ಕನ್ನಡ ಕೂಟದ ಆಶ್ರಯದಲ್ಲಿ ಆಗಸ್ಟ್ 29, 30 ಮತ್ತು 31ರಂದು ಅಮೆರಿಕಾದ 'ವಿಂಡಿಸಿಟಿ' ಎಂದೇ ಖ್ಯಾತವಾಗಿರುವ ಶಿಕಾಗೋದಲ್ಲಿ ನಡೆಯಲಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ, ಸಾವಿರಾರು ವಿಶ್ವ ಕನ್ನಡಿಗರ ಸಮ್ಮುಖದಲ್ಲಿ ಜರುಗುವ ಈ ಸಮ್ಮೇಳನದ ಬಗ್ಗೆ ವಿವರ ನೀಡಲು ಅಕ್ಕ ಪದಾಧಿಕಾರಿಗಳು ಮತ್ತು ಸಮ್ಮೇಳನದ ಸಂಚಾಲಕರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಜೂನ್ 3ರಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು.

ಎರಡು ವರುಷಗಳ ಹಿಂದೆ 2006ರಲ್ಲಿ ಬಾಲ್ಟಿಮೋರ್‌ನಲ್ಲಿ 4ನೇ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. ಅಮೆರಿಕ ಮತ್ತು ಕೆನಡಾದ 35 ಕನ್ನಡ ಕೂಟಗಳ ಆಗರವಾಗಿರುವ ಅಕ್ಕ ಮತ್ತು ಅಮೆರಿಕಾದಲ್ಲೇ ಹಳೆಯ ಕನ್ನಡ ಕೂಟವಾಗಿರುವ ಇಲಿನಾಯ್‌ನ ವಿದ್ಯಾರಣ್ಯ ಕನ್ನಡ ಕೂಟ ಈ ಸಮ್ಮೇಳನವನ್ನು ಅದ್ಧೂರಿಯಿಂದ ನಡೆಸಲು ಸರ್ವ ಸಿದ್ಧತೆ ನಡೆಸಿದೆ. ಸಮ್ಮೇಳನದಲ್ಲಿ 4ರಿಂದ 5 ಸಾವಿರ ಜನ ವಿಶ್ವದ ಎಲ್ಲೆಡೆಯಿಂದ ಭಾಗವಹಿಸಲಿದ್ದಾರೆ. ಎರಡೂವರೆ ಸಾವಿರ ಜನ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ ಎಂದು ಸಮ್ಮೇಳನದ ಮೂವರು ಸಂಚಾಲಕರಲ್ಲಿ ಒಬ್ಬರಾಗಿರುವ ಮೋಕ್ಷಗುಂಡಂ ಜಯರಾಂ ಅವರು ತಿಳಿಸಿದರು. ವಿದ್ಯಾರಣ್ಯ ಕನ್ನಡ ಕೂಟದ ಹಿಂದಿನ ಅಧ್ಯಕ್ಷೆ ವಾಸಂತಿ ಗೌಡ ಮತ್ತು ಶಿವಮೂರ್ತಿ ಕಿಲಾರಾ ಅವರು ಇನ್ನಿಬ್ಬರು ಸಂಚಾಲಕರು.

ಪ್ರತಿ ಸಮ್ಮೇಳನದಲ್ಲೂ ಸಾಹಿತ್ಯ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ಒಟ್ಟಾರೆಯಾಗಿ ಸಮ್ಮೇಳನದ ಆಶಯವನ್ನು ಬಿಂಬಿಸುವ ಥೀಮ್ ಇಟ್ಟುಕೊಂಡು ಸಮ್ಮೇಳನ ನಡೆಸಲಾಗುತ್ತದೆ. ಈ ಬಾರಿ ಸಾವಿರಾರು ವರ್ಷಗಳ ಕನ್ನಡ ನಾಡಿನ ಭವ್ಯ ಪರಂಪರೆ, ಇತಿಹಾಸವನ್ನು ವಿಶ್ವದಾದ್ಯಂತ ಸಾರುವ 'ವಿಶ್ವ ಕನ್ನಡಿಗರ ಪರಂಪರೆ ಮತ್ತು ಪ್ರದರ್ಶನ' ವಿಷಯವನ್ನು ಕೇಂದ್ರಬಿಂದುವಾಗಿ ಇಟ್ಟುಕೊಳ್ಳಲಾಗಿದೆ ಎಂದು ಜಯರಾಂ ಹೇಳಿದರು.

Skybridge connecting hotels aroundಸ್ವಾಮಿ ವಿವೇಕಾನಂದ ಅವರು ವಿಶ್ವದ ಜನತೆಯನ್ನುದ್ದೇಶಿಸಿ 1893ರಲ್ಲಿ ಭಾಷಣ ಮಾಡಿದ್ದು ಇಲ್ಲೇ. ಅಮೆರಿಕಾದ ಕನ್ವೆನ್‌ಷನ್ ಸೆಂಟರುಗಳಲ್ಲಿ ಹೆಸರುವಾಸಿಯಾಗಿರುವ ರೋಸ್‌ಮಾಂಟ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಡೆಟ್ರಾಯಿಟ್, ಮಿಲ್ವಾಕಿ, ಕೋಲಂಬಸ್, ಸೇಂಟ್ ಲೂಯಿಸ್ ಮೊದಲಾದ ನಗರಗಳಿಗೂ ಶಿಕಾಗೋ ಹತ್ತಿರವಾಗಿರುವುದರಿಂದ ಸಮ್ಮೇಳನದಲ್ಲಿ ಭಾಗವಹಿಸುವ ಅಮೆರಿಕಾದಕನ್ನಡಿಗರಿಗೆ ತುಂಬಾ ಅನುಕೂಲವಾಗಲಿದೆ. ಈ ಸಭಾಂಗಣದ ವಿಶೇಷತೆಯೆಂದರೆ, ಸುತ್ತಲಿನ ಹೊಟೇಲಿನೊಂದಿಗೆ ಇದು ಸ್ಕೈಬ್ರಿಜ್ ಮುಖಾಂತರ ಜೋಡಿಸಿಕೊಂಡಿದೆ. ಹಾಗಾಗಿ ಮಳೆ ಅಥವಾ ವಿಪರೀತ ಗಾಳಿ ಬಿಸಿದರೂ ಸಭಾಂಗಣಕ್ಕೆ ಬರಲು ತೊಂದರೆಯಾಗುವುದಿಲ್ಲ ಎಂದು ಅವರು ನುಡಿದರು.

ಮುಖ್ಯ ಸಭಾಂಗಣದ ಜೊತೆಗೆ ನಾಲ್ಕಾರು ಸಭಾಂಗಣಗಳಲ್ಲಿ ಒಂದೇ ಬಾರಿಗೆ ಸಾಹಿತ್ಯಗೋಷ್ಠಿ, ಕವನಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಚರ್ಚಾಗೋಷ್ಠಿ, ಬಿಸಿನೆಸ್ ಫೋರಂ, ಕನ್ನಡಚಿತ್ರರಂಗದ ತಾರಾಮೇಳ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ಸಾಹಿತಿ ಚಂದ್ರಶೇಖರ ಕಂಬಾರ, 'ಮುಂಗಾರು ಮಳೆ' ಖ್ಯಾತಿಯ ಜಯಂತ ಕಾಯ್ಕಿಣಿ, ಎಸ್.ಎಲ್. ಭೈರಪ್ಪ ಮೊದಲಾದವರು ಭಾಗವಹಿಸುವ ಸಾಹಿತ್ಯ ಕಾರ್ಯಕ್ರಮ ಪ್ರಮುಖ ಸಭಾಂಗಣದಲ್ಲಿಯೇ ಜರುಗಲಿದೆ. ಬಿಸಿನೆಸ್ ಫೋರಂನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮತ್ತು ಭಾರತದ ಸಂಪರ್ಕ ಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೋಡ ಅವರು ಭಾಗವಹಿಸಲಿದ್ದಾರೆ. ಡೆಕ್ಕನ್ ಏರ್‌ವೇಸ್‌ನ ಕ್ಯಾ.ಗೋಪಿನಾಥ್, ಶ್ರೀ ಸುಖಬೋಧಾನಂದ ಸ್ವಾಮೀಜಿಯವರೂ ಸಮ್ಮೇಳನಕ್ಕೆ ಶೋಭೆ ತರಲಿದ್ದಾರೆ. ಇದರ ಜೊತೆಗೆ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಸಿನಿತಾರೆಗಳ 'ಫಿಲ್ಮ್ ನೈಟ್' ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಜಯರಾಂ ವಿವರಿಸಿದರು.

ಸಮ್ಮೇಳನದಲ್ಲಿ ನಡೆಯಲಿರುವ ಇನ್ನಿತರ ಪ್ರಮುಖ ಕಾರ್ಯಕ್ರಮಗಳು ಕೆಳಗಿನಂತಿವೆ:

* ಖ್ಯಾತ ಹಾಡುಗಾರ ಸಿ.ಅಶ್ವತ್ಥ್ ಮತ್ತು ತಂಡದವರಿಂದ ಕನ್ನಡವೇ ಸತ್ಯ ಸಂಗೀತ ಕಾರ್ಯಕ್ರಮ.
* ಪ್ರಮುಖ ಆಕರ್ಷಣೆಯಾಗಿರುವ ತಾರಾಮೇಳದಲ್ಲಿ ಪುನೀತ್ ರಾಜಕುಮಾರ್, ಉಪೇಂದ್ರ, ರಮೇಶ್ ಅರವಿಂದ್, ನಂದಿನಿ, ನಂದಿತಾ, ಚೈತ್ರಾ ಸೇರಿದಂತೆ ಅನೇಕ ತಾರಾಮಣಿಗಳು ರಂಜಿಸಲಿದ್ದಾರೆ.
* ಗಣೇಶ್ ಕುದ್ರೋಳಿ ಅವರಿಂದ ಮ್ಯಾಜಿಕ್ ಶೋ. ಇದನ್ನು ಪ್ರಪ್ರಥಮ ಬಾರಿಗೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ.
* ಕೃಷ್ಣೇಗೌಡ, ಗುಂಡೂರಾವ್ ಮತ್ತು ಜ್ಯೂ. ಬೀಚಿ ಎಂದು ಖ್ಯಾತರಾಗಿರುವ ಪ್ರಾಣೇಶ್ ಅವರಿಂದ 'ಹಾಸ್ಯಲೋಕ'.
* ಖ್ಯಾತ ಯೋಗಪಟು ಓಂಕಾರ್ ಅವರಿಂದ ಯೋಗ ಕಾರ್ಯಕ್ರಮ.
* ಕನ್ನಡ ಕೂಟಗಳೆಲ್ಲ ಭಾಗವಹಿಸುವ 'ರಥಯಾತ್ರೆ' ಈ ಬಾರಿಯ ಮತ್ತೊಂದು ವಿಶೇಷ. ಇದರಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆ ನಡೆಯಲಿದೆ.
* ರಾಜಶೇಖರ್ ಅವರ 'ಹೊನ್ನೂರು ಜನಪದ ಗಾಯಕರು' ಗುಂಪಿನಿಂದ 'ಜನಪದ ಸಂಗೀತ'.

ಇವುಗಳೆಲ್ಲದರ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ 'ಜೀವಮಾನದ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಲಾಗಿದೆ. ಆದರೆ, ಯಾರಿಗೆ ಈ ಪ್ರಶಸ್ತಿಯನ್ನು ನೀಡುವುದೆಂದು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಅವರು ಹೇಳಿದರು.

ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಜೂನ್ 8ರಂದು ಭೇಟಿ ಮಾಡಿ ಅವರನ್ನೂ ಆಹ್ವಾನಿಸಲಾಗುವುದು ಮತ್ತು ಕರ್ನಾಟಕದಿಂದ ಕಲಾವಿದರನ್ನು ಶಿಕೋಗೋ ಸಮ್ಮೇಳನಕ್ಕೆ ಕಳುಹಿಸಲು ಕೇಳಲಾಗುವುದೆಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ 'ಅಕ್ಕ'ಳ ಭಾರತದ ಸಂಯೋಜನಾ ಸಮಿತಿಯ ಅಧ್ಯಕ್ಷರಾಗಿರುವ ಎಂ.ಕೃಷ್ಣಮೂರ್ತಿ, ರಾಘವೇಂದ್ರ ರಾಜು ಮತ್ತು ಜಗದೀಶ್ ರಂಗಸ್ವಾಮಿ ಅವರು ಭಾಗವಹಿಸಿದ್ದರು. ಮೊದಲ ನಾಲ್ಕು ವಿಶ್ವಕನ್ನಡ ಸಮ್ಮೇಳನಗಳು ಹ್ಯೂಸ್ಟನ್, ಡೆಟ್ರಾಯಿಟ್, ಒರ್ಲಾಂಡೋ ಮತ್ತು ಬಾಲ್ಟಿಮೋರ್‌ನಲ್ಲಿ ನಡೆದಿದ್ದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X