ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿದು ಹೈರಾಣಾದ ದೇಹ ಹಾಗೂ ಮನಸ್ಸಿಗೆ ಭಾನುವಾರದ ಬೆಳಗು

By ಹೊಳೆ ನರಸೀಪುರ ಮ೦ಜುನಾಥ
|
Google Oneindia Kannada News

ಅಲ್ಲಿಂದ ಅನ್ವರನ ಮಾಂಸದ ಅಂಗಡಿಗೆ ಬಂದು ತನಗೂ ಪತ್ನಿಗೂ ಇಷ್ಟವಾದ ಮಟನ್ ಖೈಮಾ ಒಂದು ಕೆಜಿ ಕಟ್ಟಿಸಿಕೊಂಡು ತರಕಾರಿ ಅಂಗಡಿಯ ರತ್ನಮ್ಮಜ್ಜಿಯ ಬಳಿ ಸೌತೆಕಾಯಿ, ಕ್ಯಾರೆಟ್, ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನಾ, ಹಸಿಮೆಣಸಿನಕಾಯಿ, ನಿಂಬೆಹಣ್ಣು ಖರೀದಿಸಿದ್ದ.

ಜೊತೆಗೆ ಅವಳ ಅಂಗಡಿಯ ಪಕ್ಕದಲ್ಲಿದ್ದ ಚೆಲುವಿಯ ಹೂವಿನಂಗಡಿಯಲ್ಲಿ ಪತ್ನಿಗಾಗಿ ಒಂದು ಮಾರು ಮಲ್ಲಿಗೆ ಹಾಗೂ ಕನಕಾಂಬರ ಖರೀದಿಸಿದ್ದ. ಎಲ್ಲವನ್ನೂ ಬ್ಯಾಗುಗಳಲ್ಲಿ ತುಂಬಿಕೊಂಡು ಹೊರಟಾಗ ಮಗಳು ಗಾಯತ್ರಿ ಬ್ಯಾಂಗಲ್ ಸ್ಟೋರ್ಸ್ ತೋರಿಸಿ ಅಲ್ಲಿಗೆ ಹೋಗೋಣ ಅಂದಿದ್ದಳು. ಅಲ್ಲಿ ಅವಳಿಗೆ ಬೇಕಾದ ಟೇಪು, ಪೆನ್ನು, ಪೆನ್ಸಿಲ್, ಬಣ್ಣದ ಕ್ರೆಯಾನ್ಸ್, ಮಗನಿಗೆ ಬಣ್ಣದ ಸೀಮೆ ಸುಣ್ಣ ಎಲ್ಲಾ ಕೊಡಿಸಿದ್ದ. ಎಲ್ಲವನ್ನೂ ಮುಗಿಸಿ ಮತ್ತೆ ಮನೆ ಕಡೆಗೆ ಹೊರಡುವಾಗ ಸಾಕಷ್ಟು ಸಮಯವಾಗಿತ್ತು.

ಮನೆಯ ಬಳಿಗೆ ಬಂದು ಬೈಕು ನಿಲ್ಲಿಸುತ್ತಿದ್ದಂತೆ ಬ್ಯಾಗುಗಳನ್ನು ತೆಗೆದುಕೊಳ್ಳಲು ಮಡದಿ ಬಂದರೆ ಮಾಂಸದ ವಾಸನೆ ಹಿಡಿದ ಟಾಮಿ ಎಲ್ಲಿಯೂ ನಿಲ್ಲದೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿತ್ತು. ಮನೆಯೊಳಗೆ ಬಂದ ನಂತರ ಮಡದಿ ಅಡಿಗೆಗೆ ಶುರು ಹಚ್ಚಿಕೊಂಡರೆ ಇವನು ತರಕಾರಿಗಳನ್ನೆಲ್ಲ ಒಪ್ಪವಾಗಿ ಹಚ್ಚಿ ಕೊಡುತ್ತಿದ್ದ.

Joyful family and Sunday outing, Article by H Manjunatha - Part 2

ಮಗಳು ತನ್ನ ವಸ್ತುಗಳನ್ನೆಲ್ಲಾ ನೀಟಾಗಿ ಜೋಡಿಸಿಟ್ಟ ನಂತರ ಬಂದು ಅಪ್ಪನೊಡನೆ ಕುಳಿತಳು. ಈಗ ಇಬ್ಬರೂ ಸೇರಿ ತರಕಾರಿ ಸಲಾಡ್ ಮಾಡಲು ಶುರು ಹಚ್ಚಿಕೊಂಡರು. ಸೌತೆಕಾಯಿಯ ಎರಡೂ ತುದಿಗಳನ್ನು ಕತ್ತರಿಸಿ ವಿಷವನ್ನೆಲ್ಲ ತೆಗೆದು ನೀಟಾಗಿ ಇವನು ಕತ್ತರಿಸಿ ಕೊಟ್ಟರೆ ಮಗಳು ಅವನ್ನೆಲ್ಲಾ ಒಂದು ದೊಡ್ಡ ತಟ್ಟೆಯಲ್ಲಿ ಜೋಡಿಸುತ್ತಿದ್ದಳು.

ನಂತರ ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋಗಳನ್ನೂ ಸೌತೆಕಾಯಿಯೊಡನೆ ಸುಂದರವಾಗಿ ಜೋಡಿಸಿಟ್ಟು ಎರಡು ನಿಂಬೆಹಣ್ಣು ಕುಯ್ದು ರಸ ಹಿಂಡಿ , ಮೇಲೆ ಒಂದಿಷ್ಟು ಉಪ್ಪು ಮತ್ತು ಕಾಳು ಮೆಣಸಿನಪುಡಿ ಉದುರಿಸಿ ಸುಂದರ ಸಲಾಡ್ ಸಿದ್ಧಪಡಿಸಿದ್ದ. ಅವನೊಡನೆ ಕೈ ಜೋಡಿಸಿದ ಮಗಳು ಅಪ್ಪಾ, ನಾನು ದೊಡ್ಡವಳಾದ ಮೇಲೆ ಪ್ರತಿ ಭಾನುವಾರವೂ ನಿನಗೆ ಇದೇ ಥರಾ ಸಲಾಡ್ ಮಾಡಿ ಕೊಡುತ್ತೇನೆ ಎಂದು ಮುದ್ದಾಗಿ ಉಲಿದಿದ್ದಳು.

ಅವನು ಪ್ರೀತಿಯಿಂದ ಮಗಳ ತಲೆ ನೇವರಿಸಿದ್ದ. ನೀನು ದೊಡ್ಡವನಾದ ಮೇಲೆ ನನಗೆ ಏನು ಮಾಡಿ ಕೊಡ್ತಿಯೋ ಮಗನೇ ಅಂದರೆ ಆ ಪುಟ್ಟ ಮಗ ಮುಗ್ಧವಾಗಿ ನಗುತ್ತಾ ನಾನು ನಿನಗೆ ಖಾರ ಜಾಸ್ತಿ ಹಾಕಿ ಚಿಕನ್ ಬಿರಿಯಾನಿ ಮಾಡಿ ಕೊಡುತ್ತೇನೆ ಎಂದಿದ್ದ. ಅಡಿಗೆ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿದ್ದ ಮಡದಿ ಮಗನ ಮಾತು ಕೇಳಿ ಘೊಳ್ಳೆಂದು ಜೋರಾಗಿ ನಕ್ಕಿದ್ದಳು.

ಅಷ್ಟರಲ್ಲಿ ಘಮ ಘಮಿಸುವ ಚಿಕನ್ ಬಿರಿಯಾನಿ ಸಿದ್ಧವಾಗಿತ್ತು. ಹಣೆಯಲ್ಲಿ ಮೂಡಿದ್ದ ಬೆವರಿನ ಬಿಂದುಗಳನ್ನು ಒರೆಸಿಕೊಳ್ಳುತ್ತಾ ಮಡದಿ ನಾಲ್ಕು ತಟ್ಟೆಗಳಲ್ಲಿ ಬಿರಿಯಾನಿ ಹಾಕಿ ಹಾಲಿನಲ್ಲಿ ತಂದಿಟ್ಟಿದ್ದಳು, ಮಧ್ಯದಲ್ಲಿ ತರಕಾರಿ ಸಲಾಡ್ ತಟ್ಟೆ , ಜೊತೆಗೆ ಮೊಸರು ಬಜ್ಜಿ, ಹಬೆಯಾಡುತ್ತಿದ್ದ ಬಿರಿಯಾನಿ ಸ್ವಲ್ಪ ತಣ್ಣಗಾಗಲೆಂದು ಜೋರಾಗಿ ಫ್ಯಾನ್ ತಿರುಗಿಸಿದ್ದಳು.

ನಾಲ್ವರೂ ಒಟ್ಟಿಗೆ ಕುಳಿತು ಬಿರಿಯಾನಿ ಭಕ್ಷಣೆಗೆ ತೊಡಗಿದ್ದರು, ಮಕ್ಕಳ ತುಂಟಾಟ, ಮಡದಿಯ ಪ್ರೀತಿಯ ನುಡಿಗಳು, ನಾಲಿಗೆಗೆ ಹಿತವಾದ ಅಡಿಗೆ, ಮನಸ್ಸಿಗೆ ಹಿತವಾದ ವಾತಾವರಣ ಅವನಿಗೆ ತಾನು ಸ್ವರ್ಗದಲ್ಲಿಯೇ ಇದ್ದೇನೇನೋ ಎನ್ನುವಂಥ ಅನುಭವವನ್ನು ಉಂಟು ಮಾಡಿತ್ತು.

ವಾರವೆಲ್ಲಾ ದುಡಿದು ಹೈರಾಣಾದ ದೇಹ ಹಾಗೂ ಮನಸ್ಸಿಗೆ ಭಾನುವಾರದ ಬೆಳಗು ನಿಜಕ್ಕೂ ಚೇತೋಹಾರಿಯಾಗಿತ್ತು. ಬಿರಿಯಾನಿ ಹಾಗೂ ಕೋಳಿ ಮಾಂಸದ ವಾಸನೆ ಹಿಡಿದ ನಾಯಿಮರಿ ಟಾಮಿ ಬಾಗಿಲಲ್ಲೇ ಕುಳಿತು ಒಂದೇ ಸಮನೆ ಚಡಪಡಿಸುತ್ತಿತ್ತು.

ಏನೇ ಮಾಡಿದರೂ ಬಾಗಿಲು ದಾಟಿ ಒಳಕ್ಕೆ ಬಾರದ ಆ ಮುದ್ದು ನಾಯಿಗೆ ಎಲ್ಲರೂ ತಿಂದು ಆದ ನಂತರ ಉಳಿದ ಮೂಳೆಯ ತುಂಡುಗಳ ಜೊತೆಗೆ ತಣ್ಣಗಾಗಿದ್ದ ಬಿರಿಯಾನಿಯನ್ನು ಅದಕ್ಕೆಂದೇ ಮೀಸಲಾಗಿಟ್ಟಿದ್ದ ತಟ್ಟೆಯಲ್ಲಿ ಹಾಕಿ ಅದರ ತಲೆ ನೇವರಿಸಿದ್ದ. ಸಾವಕಾಶವಾಗಿ ಬಿರಿಯಾನಿ ತಿಂದ ಟಾಮಿ ಸ್ವಲ್ಪ ನೀರು ಕುಡಿದು ಇವನ ಜೊತೆಗೆ ಆಟವಾಡಲು ತೊಡಗಿತ್ತು. ಮುಂದಿನ ಪುಟ ಕ್ಲಿಕ್ಕಿಸಿ

English summary
Joyful family and Sunday outing with family, An article by Holenarasipura Manjunatha - Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X