ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಬ್ಬನಿದ್ದ ಅಪ್ಪ.. ಪುಟ್ಟ ತುಟಿಯೊಂದು ಕೆನ್ನೆಗೆ ಮುತ್ತಿಕ್ಕಿತ್ತು

By ಹೊಳೆ ನರಸೀಪುರ ಮ೦ಜುನಾಥ
|
Google Oneindia Kannada News

ಅವನು ಭಾನುವಾರದ ನಸುಕಿನ ಚುಮು ಚುಮು ಚಳಿಗೆ ರಗ್ಗನ್ನು ಇನ್ನಷ್ಟು ಗಾಢವಾಗಿ ಹೊದ್ದು ಮಲಗಿದ್ದ. ವಾರವೆಲ್ಲಾ ದುಡಿದು ದಣಿದ ದೇಹಕ್ಕೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿತ್ತು, ಶನಿವಾರ ರಾತ್ರಿಯ ಎರಡು ಪೆಗ್ ವಿಸ್ಕಿ, ಖಾರ ಹೆಚ್ಚಾಗಿದ್ದ ಹುರಿದ ಕೋಳಿ ಕಾಲು, ಪತ್ನಿಯೊಡನೆ ಸುಮಧುರ ಸರಸ ಸಂಭಾಷಣೆ ಅವನಿಗೆ ವಿಚಿತ್ರ ಮತ್ತೇರಿಸಿ ಗಾಢ ನಿದ್ರೆಗೆ ತಳ್ಳಿದ್ದವು.

ಬೆಳಗ್ಗಿನ ಚಳಿಗೆ ಅವನು ಮಗ್ಗುಲು ಬದಲಿಸಿ ರಗ್ಗೆಳೆದು ಇನ್ನಷ್ಟು ನಿದ್ದೆಗೆ ಯತ್ನಿಸುವಾಗಲೇ ಪುಟ್ಟ ತುಟಿಯೊಂದು ಕೆನ್ನೆಗೆ ಮುತ್ತಿಕ್ಕಿತ್ತು. ಆ ಪುಟ್ಟ ಜೀವದ ಬಿಸಿಯುಸಿರು ಇವನ ಮುಖಕ್ಕೆ ರಾಚುತ್ತಿದ್ದಂತೆ ನಿದ್ದೆಯ ಭಾರದಿಂದ ಬಿಡಲಾಗದ ಕಣ್ಣುಗಳನ್ನು ಕೊಂಚ ತೆರೆದು ನೋಡಿದ. ಆರು ವರ್ಷದ ಪುಟ್ಟ ಮಗ ತನ್ನೆದೆಯ ಮೇಲೆ ಮಲಗಿ, ತನ್ನ ಪುಟ್ಟ ಕೈಗಳಿಂದ ಅವನನ್ನು ತಬ್ಬಿ ಹಿಡಿದು ಕೆನ್ನೆಗೆ, ಗಲ್ಲಕ್ಕೆ ಸಿಹಿಮುತ್ತು ನೀಡುತ್ತಾ ನಿದ್ದೆಯಿಂದ ಎಬ್ಬಿಸಲು ಪ್ರಯತ್ನಿಸುತ್ತಿದ್ದ.

ಅವನನ್ನು ಹಾಗೆಯೇ ತಬ್ಬಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗಬೇಕು ಸುಮ್ನಿರೋ ಮಗಾ ಎಂದು ಮತ್ತೆ ಮಲಗಲು ಯತ್ನಿಸುತ್ತಿದ್ದ. ಆದರೆ ತನ್ನ ಹಠ ಬಿಡದ ಪುಟ್ಟ ಮಗ ತನ್ನ ಸಿಹಿ ಮುತ್ತುಗಳಿಂದಲೇ ಅವನನ್ನು ಎಬ್ಬಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದ!

Joyful family and Sunday outing, Article by H Manjunatha - Part 1

ಅಷ್ಟರಲ್ಲಿ ಅಡಿಗೆ ಮನೆಯಿಂದ ಬಿಸಿ ಬಿಸಿ ಕಾಫಿಯ ಲೋಟ ಹಿಡಿದು ಬಂದ ಅವನ ಮಡದಿ ಅವನು ಹೊದ್ದಿದ್ದ ರಗ್ಗನ್ನು ಕಿತ್ತೆಸೆದು ರೀ ಏಳಿ ಮ್ಯಾಲೆ, ಎಷ್ಟೊತ್ತು ಮಲಗೋದು, ವಾರವೆಲ್ಲಾ ಕೆಲಸ ಕೆಲಸ ಅಂತೀರಿ, ಭಾನುವಾರ ಒಂದು ದಿನವಾದ್ರೂ ಮಕ್ಕಳ ಜೊತೆಗೆ ಮಾತಾಡ್ತಾ ಇರೋದಿಕ್ಕೆ ಆಗೋದಿಲ್ವಾ ಅಂತ ರಾಗ ಎಳೆದಿದ್ದಳು.

ಹತ್ತು ವರ್ಷದ ಅವನ ಮಗಳು ಮಂಚದ ಕಾಲ ಬದಿಯಲ್ಲಿ ಕುಳಿತು ,ಅಪ್ಪ ಎದ್ದೇಳಪ್ಪಾ, ಮಾರ್ಕೆಟ್ಟಿಗೆ ಹೋಗೋಣ, ಟೈಮಾಗುತ್ತೆ ಎದ್ದೇಳಪ್ಪಾ ಎಂದು ಇವನನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಲು ಯತ್ನಿಸುತ್ತಿದ್ದಳು. ಕೊನೆಗೂ ಅವರ ಕಾಟ ತಡೆಯಲಾಗದೆ ಅವನು ಮೈ ಕೊಡವಿ ಎದ್ದ!

ಬಚ್ಚಲಿಗೆ ಹೋಗಿ ಬಾಯಿ ಮುಕ್ಕಳಿಸಿ ಉಗಿದು, ಅಡಿಗೆ ಮನೆಗೆ ಬಂದು ಒಂದು ಚೊಂಬು ನೀರನ್ನು ಗಟಗಟನೆ ಕುಡಿದು ಹಾಲಿನಲ್ಲಿದ್ದ ದಿವಾನ್ ಕಾಟ್ ಮೇಲೆ ಕುಳಿತು, ಕಾಫಿ ಕುಡಿಯುತ್ತಾ ಅಂದಿನ ವೃತ್ತ ಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದ. ಮಗ ಹಾಗೂ ಮಗಳು ಅವನ ಎಡಬಲದಲ್ಲಿ ಆಸೀನರಾಗಿ ಅವನು ಕಾಫಿ ಕುಡಿದು ಮುಗಿಸುವುದನ್ನೇ ಕಾತರದಿಂದ ಕಾಯುತ್ತಿದ್ದರು .

ವಾರೆಗಣ್ಣಿನಲ್ಲಿ ಅವರಿಬ್ಬರನ್ನೂ ನೋಡುತ್ತಲೇ ಪತ್ರಿಕೆ ಓದಿ ಮುಗಿದರೂ ಇನ್ನೂ ಓದುತ್ತಿರುವವನಂತೆ ನಟಿಸುತ್ತಿದ್ದ. ಅಪ್ಪ ಬೇಗ ಪತ್ರಿಕೆ ಓದಿ ಮುಗಿಸಿ ಎದ್ದು ಮಾರ್ಕೆಟ್ಟಿಗೆ ಹೊರಡಲಿಲ್ಲವಲ್ಲಾ ಎಂದು ಮಕ್ಕಳಿಬ್ಬರೂ ಚಡಪಡಿಸುತ್ತಿದ್ದರು. ಅಪ್ಪ ಮಕ್ಕಳ ಈ ಆಟವನ್ನು ನೋಡುತ್ತಾ ಅಡಿಗೆ ಮನೆ ಬಾಗಿಲಲ್ಲಿ ನಿಂತು ನೋಡುತ್ತಿದ್ದ ಅವನ ಪತ್ನಿ ಒಳಗೊಳಗೇ ನಗುತ್ತಿದ್ದಳು.

ಕೊನೆಗೆ ಮಗಳು ಧೈರ್ಯವಾಗಿ ಅವನ ಕೈಯ್ಯಲ್ಲಿದ್ದ ಪತ್ರಿಕೆಯನ್ನು ಕಿತ್ತು ಅತ್ತ ಬಿಸಾಕಿ ಏಳಪ್ಪಾ ಮೇಲೆ, ಮಾರ್ಕೆಟ್ಟಿಗೆ ಹೋಗೋಣ, ಎಷ್ಟೊತ್ತು ಕಾಯೋದು ಎಂದು ಹುಸಿಮುನಿಸಿನಿಂದ ಮುಖ ಉಬ್ಬಿಸಿದ್ದಳು. ಇನ್ನು ಮಕ್ಕಳನ್ನು ಸತಾಯಿಸುವುದು ಬೇಡವೆಂದು ಮೇಲೆದ್ದ ಅವನು ಮುಖ ತೊಳೆದು, ಬಟ್ಟೆ ಬದಲಿಸಿ ಹೊರಟ. ಬಾಗಿಲಿನ ಬಳಿಯೇ ಕುಳಿತು ಇವನು ಹೊರಗೆ ಬರುವುದನ್ನೇ ಕಾಯುತ್ತಿದ್ದ ಮುದ್ದಿನ ನಾಯಿಮರಿ ಟಾಮಿ ಇವನ ಕಾಲುಗಳನ್ನು ನೆಕ್ಕಿ ಎಗರಾಡಿ ಪ್ರೀತಿ ತೋರಿಸಿತ್ತು.

ನಿಧಾನಕ್ಕೆ ತನ್ನ ಟಿವಿಎಸ್ ಸ್ಟಾರ್ ಸಿಟಿ ಬೈಕ್ ರಸ್ತೆಗೆ ಇಳಿಸಿ ಸ್ಟಾರ್ಟ್ ಮಾಡಿದ್ದ. ಪುಟ್ಟ ಮಗ ಮುಂದೆ ಕುಳಿತರೆ ಮಗಳು ಹಿಂದೆ ಕುಳಿತಿದ್ದಳು. ಅಲ್ಲಿಂದ ಅವರ ಸವಾರಿ ಪೀಣ್ಯ ಎರಡನೇ ಹಂತದ ಮಾರ್ಕೆಟ್ಟಿಗೆ ಬಂದಿತ್ತು. ಅಬ್ದುಲ್ಲಾನ ಕೋಳಿ ಅಂಗಡಿಯಲ್ಲಿ ಒಂದೂವರೆ ಕೆಜಿಯ ಬ್ರಾಯ್ಲರ್ ಕೋಳಿಯನ್ನು, ಶುದ್ಧಗೊಳಿಸಿ ಬಿರಿಯಾನಿ ಪೀಸ್ ಹೊಡೆಯುವಂತೆ ಹೇಳಿ ಕಟ್ಟಿಸಿಕೊಂಡಿದ್ದ.

ಅದನ್ನು ಮಗ ತನ್ನ ಕೈಯ್ಯಲ್ಲಿದ್ದ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ, ಅದು ಅವನಿಗೆ ಇಷ್ಟವಾದ ಚಿಕನ್ ಬಿರಿಯಾನಿಗೆ! ಪಕ್ಕದಲ್ಲಿದ್ದ ಮುನಿರಾಜನ ಮೀನು ಅಂಗಡಿಗೆ ಬಂದು ಮಗಳಿಗೆ ಇಷ್ಟವಾದ ಒಂದು ಕೆಜಿ ಮೀನು ಖರೀದಿಸಿ ಫ್ರೈ ಪೀಸ್ ಮಾಡಿಸಿದ್ದ. ಮೀನಿನ ತುಂಡುಗಳಿದ್ದ ಕವರನ್ನು ಮಗಳು ಜಾಗರೂಕತೆಯಿಂದ ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದ್ದಳು, ಏಕೆಂದರೆ ಅದು ಅವಳ ಪಾಲು! ಮುಂದಿನ ಪುಟ ಕ್ಲಿಕ್ಕಿಸಿ

English summary
Joyful family and Sunday outing with family, An article by Holenarasipura Manjunatha - Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X