ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕು ಬಿಟ್ಲು ನನ್ನ ಮೈನಾ... ಚಲ್ ಮೇರೆ ಲೂನಾ!

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

ಲೆಕ್ಚರ್ ಬರಲಿಲ್ಲಾ ಅಂತಾ ಮಧ್ಯಾನ್ಹದ ಕ್ಲಾಸಸ್ ಎಲ್ಲಾ ಕ್ಯಾನ್ಸೆಲ್ ಆಗಿದ್ದಾಗ, ಏನು ಮಾಡೋದು ಅಂತ ತಿಳಿಯದೆ ಮಧ್ಯಾನ್ಹದ ರಣ ಬಿಸಿಲಲ್ಲೇ ಮನೆಗೆ ಹೊಂಟಿದ್ದೆ. ಇಂಜಿನಿಯರ್ ಕಾಲೇಜ್ ಹಾಸ್ಟೆಲ್ ನಲ್ಲೆ ಇರ್ತೀನಿ ಅಂದ್ರೆ, ಬೇಡ ಮಗ... ಅಷ್ಟೊಂದು ಕಾಸೆಲ್ಲಾ ಇಲ್ಲ, ಅದು ಬೇರೆ ಹಾಸ್ಟೆಲ್ ನಲ್ಲಿ ರಾಗಿಂಗ್, ಕೆಟ್ಟು ಹುಡುಗರ ಸಹವಾಸ... ಕಾಲೇಜ್ ನಮ್ಮ ಹಳ್ಳಿಯಿಂದ ಬರೀ 6 ಕಿ.ಮೀ ಇದೆ. ದಿನಾ ಹೋಗಿ ಬಾ. ಇತ್ತ ಮನೆಕಡೆ, ಹೊಲದ ಕಡೇನೂ ನೋಡ್ಕೋಳ್ಳಾಕೆ ಚೊಲೊ ಆಗ್ತಾತೆ ಅಂತ ಅಂದ ಅಪ್ಪನ ನುಡಿಗೆ.. ಎದುರಾಡದೆ ದಿನನಿತ್ಯ ಮಾಡುತ್ತಿದ್ದೆ ಕಾಲೇಜ್ಗೆ ಸವಾರಿ.

ಹೈಸ್ಕೂಲ್ ನಲ್ಲಿ ಬರೀ ಸೈಕಲ್ ಹೊಡೆದಿದ್ದ ನಂಗೆ, ಇಂಜಿನಿಯರ್ ಕಾಲೇಜ್ ಸೇರಿದ ಮೇಲೆ ಸಿಕ್ಕಿತ್ತು ಸೆಕೆಂಡ್ ಹ್ಯಾಂಡ್ ಲೂನಾ ಓಡಾಡಲಿಕ್ಕೆ.. ಅದು ಕಾಡಿ ಬೇಡಿ! ಪಕ್ಕದ ಮನೆಯ ಮುನಿಯಪ್ಪ ಹೊಸ ಹೀರೋ ಹೋಂಡಾ ಬೈಕ್ ತಗೊಂಡಾಗ ಮಾರಿದ್ದ ಈ ಹಳೆ ಲೂನಾನಾ. ಸಿಕ್ಕೆದ್ದೇ ಶಿವ ಅನ್ನೋ ಹಾಗೆ ಅದರಲ್ಲೇ ಹೋಗಿಬರುತ್ತಿದ್ದೆ ದಿನಾ ಕಾಲೇಜ್ಗೆ. ಒಬ್ಬರು ಕುಂತ್ರೆ ಹೋಗ್ತೀನಿ, ಇಬ್ಬರಾದರೆ ಇಲ್ಲೇ ನಿಲ್ತೀನಿ ಅನ್ನೋ ಸ್ಥಿತಿಯಲ್ಲಿತ್ತು ನನ್ನ ಈ ಲೂನಾ.

ಚಲ್ ಮೇರೆ ಲೂನಾ ಅಂತಾ ಹೇಳಿ ಆ ಮಟ ಮಟ ಮಧ್ಯಾಹ್ನದಲ್ಲೇ ಮನೆ ಕಡೆ ಹೊರಟಿದ್ದೆ. ಅದು ನಿಧಾನವಾಗಿ ಹೋಗೋದ್ಕೂ, ನೆತ್ತಿ ಮೇಲೆ ಸುಡೋ ಬಿಸಿಲಿಗೂ ಬಾಯಾರಿಕೆ ಜೊತೆ ತಲೆ ಬೇರೆ ಕೆಟ್ಟಿತ್ತು. ಇನ್ನೇನು ನಮ್ಮ ಹಳ್ಳಿ 2 ಕಿ.ಮೀ ದೂರ ಇದೆ ಅನ್ನೋವಾಗ ಎದುರುಗಡೆಯಿಂದ ತನ್ನ ಹೊಸ ಹೀರೋ ಹೋಂಡಾ ಬೈಕಲ್ಲಿ ಬರುತ್ತಿದ್ದ ಮುನಿಯಪ್ಪ, ಹಾಗೇ ಸ್ಲೋ ಮಾಡಿ.. "ಏನಪ್ಪಾ ನಾಗೇಶ, ಕಾಲೇಜ್ ಇಷ್ಟು ಬೇಗ ಬಿಡ್ತಾ? ಚೆನ್ನಾಗಿದೆಯಾ ನನ್ನ ಮೈನಾ.. ಅಲ್ಲಲ್ಲಾ ನನ್ನ ಲೂನಾ" ಅಂತಾ ತನ್ನ ತೊದಲು ನುಡಿಯಲ್ಲೇ ಕೇಳಿದಾಗ... ಸುಮ್ನೆ ತಲೆಯಾಡಿಸಿದ್ದೆ ಹೂಂ ಅಂತಾ! [ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]

I met my Myna, chal meri Luna

ಹಳ್ಳಿ ಹತ್ರ ಬಂದಂಗೆ ಅಲ್ಲಲ್ಲೇ ಮರಗಳ ನೆರಳಲ್ಲೇ ನಿಂತ ದನ ಕರುಗಳು, ಕೆಸರ ಗುಂಡಿಯಲ್ಲೇ ಮೇಯುತ್ತಾ ತಣ್ಣಗೆ ಮಲಗಿದ್ದ ಎಮ್ಮೆಗಳು.. ಇವೆಲ್ಲ ನೋಡ್ತಾ ನಿಧಾನವಾಗಿ ಸವಾರಿ ಮಾಡಬೇಕಾದರೆ ಬೊವ್ ಬೊವ್ ಅಂತಾ ಓಡಿ ಬಂದ ಬೀದಿ ನಾಯಿಗೆ "ಹೇ ಹಚ್ಚಾ" ಅಂತಾ ಜೋರಾಗಿ ಕೂಗಿ ಓಡಿಸಿ... ಹುಸ್ಸ್ ಅಂತಾ ಹೋಗ್ತಾ ಇದ್ದಾಗ... ಯಾರೋ ಸುಯ್ಯ್ ಅಂತ ಪಕ್ಕದಲ್ಲೇ ಹೋದಾಗ ಬೀಸಿದ ಬಲವಾದ ಗಾಳಿಗೆ ಲುನಾನೆ ಪಕ್ಕಕೆ ಜರುಗಿತ್ತು. ಯಾರಪ್ಪ ಅದು ಅಂತಾ ನೋಡಿದರೆ ಯಾರೋ ಹೆಣ್ಣು ಮಗಳು.. ಕೈನೆಟಿಕ್ ಹೋಂಡಾ ದಲ್ಲಿ ಒಳ್ಳೆ ರೇಸ್ ಹೋದಂಗೆ ಬಳಿ ಪಾಸ್ ಆಗ್ತಾ, ಹೊ ಹೊಅಂತಾ ಕೇಕೆ ಹಾಕುತ್ತಾ ಹೋಗಿದ್ದ ನೋಡಿ... ಪಕ್ಕಕೆ ಜರುಗಿದ್ದ ಲೂನಾನ ಗಟ್ಟಿಯಾಗಿ ಹಿಡಿದುಕೊಂಡು.. ಕೂಗಿದ್ದೇ "ಏ ಎಮ್ಮೆ ...ಏ ಬಫೆಲೋ ಬಫೆಲೋ (ಕನ್ನಡ ಅರ್ಥ ಅಗ್ತಾತೋ ಇಲ್ಲೋ ಅವಳಿಗೆ) ಅಂತಾ!

ಫುಲ್ ಸ್ಪೀಡ್ ನಲ್ಲಿ ಇದ್ದ ಕೈನೆಟಿಕ್ ಹೋಂಡಾನ ಸ್ಲೋ ಡೌನ್ ಮಾಡಿ "ಯು ಡಾಂಕಿ, ಈಡಿಯಟ್, ಸ್ಟುಪಿಡ್ ಮಂಕಿ" ತಸ್ಸ್ ಪುಸ್ ಅಂತಾ ಇಂಗ್ಲಿಷ್ನಲ್ಲೇ, ನನ್ನೆಡೆ ನೋಡ್ತಾನೆ ಬಯ್ದು ಮತ್ತೆ ಜೋರಾಗಿ ಓಡಿಸಿದ್ದಳು ತನ್ನ ಗಾಡಿಯ. ಅಯ್ಯೋ ಶಿವನೆ ಅಂತಾ ನಾ ಅನ್ನೋದರಲ್ಲೇ, ಧಡ್ ಅಂತಾ ಕೇಳಿಬಂದ ಶಬ್ದಕ್ಕೆ ನೋಡಿದರೆ... ಅದೇ ಹುಡುಗಿ ಪಕ್ಕದ ಕೆಸರಿನ ಮಡುವಿನಿಂದ ನಿಧಾನವಾಗಿ ಬರುತ್ತಿದ್ದ ಎಮ್ಮೆಗೆ ತನ್ನ ಗಾಡಿ ಗುದ್ದಿಸಿ ದಬಕ್ಕಂತ ಆ ಗಾಡಿ ಜೊತೆ ತಾನೂ ಬಿದ್ದಿದ್ದಳು ಅದೇ ಕೆಸರಿನ ಮಡುವಿನಲ್ಲಿ.

ಲೂನಾನ ಅಲ್ಲೇ ಪಕ್ಕಕೆ ಹಂಗೆ ಒರಗಿಸಿ ಓಡಿದ್ದೆ ಅವಳ ಬಳಿ. ಓಹ್ ಮೈ ಗಾಡ್, ನನ್ನ ವೈಟ್ ಡ್ರೆಸ್ ಎಲ್ಲಾ ಹಾಳಾಗೋಯ್ತು... ಎಲ್ಲಾ ನಿನ್ನಿಂದಲೇ ಅಂತಾ ಅಳುತ್ತಲೇ ನನ್ನ ಮೇಲೇ ಅಪವಾದ ಹೊರಿಸಿದಾಗ... ಹೇಳಿದ್ದೆ.. "ಮೇಡಂ... ನಿಮಗೆ ಎಮ್ಮೆ (ಬಫ್ಫೆಲೋ) ಅಡ್ಡ ಬರ್ತಾ ಇದೆ ಅಂತಾ ಹೇಳಿದ್ದು ನಾನು.. ನೀವು ನೋಡಿದ್ರೆ ತಪ್ಪು ತಿಳ್ಕೊಂಡು ನಂಗೇ ಬಯ್ತಿರಲ್ಲ... ಒಳ್ಳೇದು ಮಾಡೋಕೆ ಹೋದೋರಿಗೆ ಇದು ಕಾಲ ಅಲ್ಲ ಅಂತಾರಲ್ಲ, ಆ ಥರ ಆಯಿತು ನನ್ನ ಸ್ಥಿತಿ... ಇರ್ಲಿ ಬನ್ನಿ ಹೊರಗಡೆ, ಅಂತಾ ಹೇಳಿ ಕೈ ಚಾಚಿದ್ದೆ.. ಅವಳನ್ನು ಆ ಕೆಸರಿನ ಮಡುವಿನಿಂದ ಮೇಲೆತ್ತಲು. (ಬಯ್ಕೊಳ್ಳುತ್ತಾ ಮನದಲ್ಲೇ.. "ಹೆಂಗಸರು ಅರ್ಥನೇ ಮಾಡ್ಕೊಳ್ಳಲ್ಲಲ್ವಾ ಯಾವತ್ತೂ, ಗಂಡಸರು ಏನು ಹೇಳ್ತಾ ಇದಾರೆ ಅಂತಾ? ಛೇ")

ಒಳ್ಳೆ ಸುಂದರವಾದ ಮುಖ ಲಕ್ಷಣ, ಸಿಟ್ಟಿಂದನೋ ಅಥ್ವಾ ಮೈಯೆಲ್ಲಾ ಕೆಸರಾಗಿದ್ದಕ್ಕೋ ಆಗಿದ್ದ ಕೆಂಪಾದ ಮೂಗು, ಕೆಸರ ನೀರಲ್ಲಿ ಒದ್ದೆಯಾಗಿದ್ದ ಹರೆಯದ ತುಂಬು ದೇಹ ಕಂಡು, ಅವಳ ಕೈ ಹಿಡಿದು ಎತ್ತಿದಾಗ ನನ್ನ ಕೈಗಳೇ ಕಂಪಿಸುತ್ತಿದ್ದವು ಜೊತೆಗೆ ಹೃದಯದ ಡಬ್ ಡಬ್ ಸೌಂಡ್ ಜೋರಾಗಿತ್ತು!

ಸದ್ಯಕ್ಕೆ ಏನು ಪೆಟ್ಟಾಗಿರಲಿಲ್ಲ ಅವಳಿಗೆ, ಅವಳ ಗಾಡಿ, ಆ ಎಮ್ಮೆಗೂ ಸಹಾ! ಅವಳ ಜೊತೆ ಅವಳ ಗಾಡಿನೂ ಎತ್ತಿ, ನಾನೇ ಸ್ಟಾರ್ಟ್ ಮಾಡಿ ಕೊಟ್ಟಿದ್ದೆ... ಸ್ಟುಪಿಡ್ ಬಫ್ಫೆಲೋ ಅಂತಾ ಬಯ್ತಾನೆ ಹೋಗೇ ಬಿಟ್ಟಿದ್ದಳು, ಥ್ಯಾಂಕ್ಸ್ - ಬೈ ಅಂತಾನು ಹೇಳದೆ! [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

ರಾತ್ರಿಯೆಲ್ಲ ಅದೇ ಧ್ಯಾನ... ಲೇ ನಾಗೇಶ, ಅದೇನೋ ಒಳ್ಳೆ ಎಮ್ಮೆ ಮೆಲುಕು ಹಾಕ್ದಂಗೆ ನಿಧಾನವಾಗಿ ತಿನ್ಲೋ ಬೇಡೋ ಅನ್ನೋಂಗೆ ತಿಂತಾ, ಏನು ಯೋಚನೆ ಮಾಡ್ತಾ ಇದ್ದೀಯ? ಅಂತಾ ಜೋರಾಗಿ ಅಮ್ಮ ಕೇಳ್ದಾಗ... ಒಮ್ಮೆಲೇ ತಲೆ ಕೊಡವಿ ಗಬ ಗಬ ತಿಂದು ಹಾಸಿಗೆ ಮೇಲೆ ಮಲಗಿ.. ನೋಡಿದರೆ ಆಗಲೇ ರಾತ್ರಿ ಹನ್ನೆರಡು ಹೊಡೆದಿತ್ತು!

ಒಂದು ವಾರ ಆದಮೇಲೆ ಅದೆಲ್ಲಾ ಮರ್ತೆ ಹೋಗಿತ್ತು... ಎಲೆಕ್ಟಾನಿಕ್ಸ್ ಲ್ಯಾಬ್ ಮುಗಿಸಿ.. ಔಟ್ ಪುಟ್ ಬರ್ಲಿಲ್ವಲ್ಲ ಛೇ! ಅಂತಾ ಅನ್ಕೊಳ್ತಾನೆ ಲೂನಾ ಸ್ಟಾರ್ಟ್ ಮಾಡೋವಾಗ... "ಹಾಯ್... ಬುಫ್ಫೆಲೋ ಬಾಯ್" ಅಂತಾ ಯಾರೋ ಕರ್ದಂಗೆ ಕೇಳಿಸಿದಾಗ ತಿರುಗಿ ನೋಡಿದರೆ... ಅವಳೇ! "ಹಾಯ್, ಎಮ್ಮೆ ಗರ್ಲ್".. ಅಂತ ನಂಗೇ ಗೊತ್ತಿಲ್ದಂಗೆ ನನ್ನ ಬಾಯಿಂದ ಬಂದಾಗ, ಮತ್ತೆ ಎಲ್ಲಿ ಬಯ್ತಾಳೋ ಅಂದು ಕೊಳ್ತಿರುವಾಗ, ಅವಳೇ ಕಿಸಕ್ಕಂತ ನಕ್ಕು ಸರಕ್ಕಂತ ಕೊಟ್ಟಿದ್ದಳು ಕೈ... ಥ್ಯಾಂಕ್ಸ್ ಹೇಳಲಿಕ್ಕೆ :)

"ಐ ಯಂ ಮೈನಾ!" ಅಂತಾ ಸುಶ್ರಾವ್ಯವಾಗಿ ಅವಳ್ಹೇಳಿದಾಗ.. ನಾ ನಾಗೇಶ್ ಅಂತಾ ಹೇಳಿ, ಹಿಡಿದಿದ್ದೆ ಮೈನಾ ಕೊಟ್ಟ ಕೈನಾ!

ಏನಿಲ್ಲಿ? ಅಂತಾ ಕೇಳಿದಾಗ, ನಾನು ಇದೇ ಕಾಲೇಜ್ನಲ್ಲಿ ಓದೋದು... ಕಂಪ್ಯೂಟರ್ ಸೆಕ್ಷನ್, ಫಸ್ಟ್ ಇಯರ್ ಅಂತಾ ಹೇಳಿದ್ದಳು. ಧೈರ್ಯ ಮಾಡಿ, ಕಾಫಿ? ಅಂತಾ ಕೇಳ್ದಾಗ, ನೋ ಲೆಟ್ಸ್ ಹ್ಯಾವ್ ಐಸ್ ಕ್ರೀಂ ಅಂತಾ ಕೂಲಾಗಿ ಅವಳಂದಾಗ... ಬಿಸಿಲಿಗೋ ಅಥವಾ ಅವಳ ಕೈ ಸ್ಪರ್ಶಕ್ಕೋ ಸೆಕೆಯಾದಂತೆ ಆಗಿ ತುಸು ಬೆವೆತಿದ್ದ ನಾನು... ಶೂರ್ ಅಂತ ಹೇಳಿ... ಎದುರಿಗಿದ್ದ ಐಸ್ ಕ್ರೀಂ ಪಾರ್ಲರ್ ಕಡೆ ನಡೆದಿದ್ದೆ ಮೈನಾ ಜೊತೆ, ಬಿಟ್ಟು ಅಲ್ಲೇ ನನ್ನ ಲೂನಾ!

"ಸಿಕ್ಕು ಬಿಟ್ಲು ಮೈನಾ... ಚಲ್ ಮೇರೆ ಲೂನಾ" ಅಂತ ಅಂದು.. ಕಿಕ್ ಮಾಡಿದಾಗ ಒಂದೇ ಕಿಕ್ ಗೆ ಸ್ಟಾರ್ಟ್ ಆಗಿತ್ತು ಎಂದೂ ಆಗದ್ದು ನನ್ನೀ ಲೂನಾ! ಮಾರ್ಗ ಮಧ್ಯದಲ್ಲೇ ಅವಳು ಬಿದ್ದ ಜಾಗದ ಬಳಿ ಬಂದಾಗ, ಅದೇ ಕೆಸರಿನ ಮಡುವಿನಲ್ಲಿ ಆರಾಮಾಗಿ ಮಲಗಿ, ಬಾಯಲ್ಲಿದ್ದ ಮೇವನ್ನು ನಿಧಾನವಾಗಿ ಮೆಲುಕು ಹಾಕುತ್ತಿದ್ದ ಆ ಎಮ್ಮೆಗೆ ಒಮ್ಮೆ ಥ್ಯಾಂಕ್ಸ್ ಹೇಳಿ ಅದರ ಮೈದಡವಿ ಮನೆ ಸೇರಿದ್ದೆ! [ವಿಚಿತ್ರ ಪ್ರೇಮಿಯ ವಿಶಿಷ್ಟ ವಿಭಿನ್ನ ದುರಂತಮಯ ಕಥೆ!]

ಎದುರು ಸಿಕ್ಕಾಗಲೆಲ್ಲ ಕಾಲೇಜ್ ಬಳಿ..

ಅವಳಿಗೆ ನಾ ಎಮ್ಮೆ ಅಂದ್ರೆ ..
ನೀನು ಕೋಣ ಹೋಗೋ, ಅಂತಾ ಅವಳು ನಗುತ್ತಾ ..
ಸಿನೆಮಾಗೆ ಹೋಗೋಣ ನಡೀ
ಅನ್ನೋವರೆಗೂ ಬೆಳೆದಿದೆ ನಮ್ಮಿಬ್ಬರ ಸಲಿಗೆ...!

ಅದ್ರು ಜೊತೆ ಸರಿಯಾಗೇ
ಮಾಡ್ತಿದೀನಿ, ನನ್ನ ಕಾಲೇಜ್ ಕಲಿಕೆ ...!

So ಡೋಂಟ್ ವರಿ ;)

ಈಗ, ನೀವು ಏನು ಇಡಬೇಡಿ ಫಿಟ್ಟಿಂಗ್
ನಮ್ಮ ಅಪ್ಪನ ಬಳಿ...ಪ್ಲೀಸ್...! ):

English summary
A Kannada short story by Nagaraj Maheshwarappa, Connecticut, USA. A simple love story of a couple who met accidentally and became friend unknowingly. It is left to the imagination of readers what happens next.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X