ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತದಾನ

By * ಸುಧೀರ್, ಗ್ರೆನೋಬಲ್, ಫ್ರಾನ್ಸ್
|
Google Oneindia Kannada News

Blood donation : A Kannada short story by Sudhir
ತನ್ನ ಕೆಲಸದಲ್ಲಿ ಮಗ್ನನಾಗಿದ್ದ ಗಗನ್‌ನನ್ನು ಮಿಂಚಿನಂತೆ ಬಂದ ಒಂದು ಇ-ಅಂಚೆ ಅವನ ಗಮನ ಸೆಳೆಯಿತು. ಗಣಕ ಯಂತ್ರವನ್ನೇ ದಿಟ್ಟಿಸಿ ನೋಡುತ್ತಿದ್ದ ಗಗನ್ ದೀರ್ಘ ಉಸಿರೆಳೆದು, ಕುರ್ಚಿಗೆ ಒರೆಗಿ ಆ ಇ-ಅಂಚೆಯನ್ನು ತೆರೆದ. ಎಂಥ ಕೆಲಸವೇ ಇರಲಿ ಯಾವುದಾದರೂ ಇ-ಅಂಚೆ ಬಂತೆಂದರೆ ಕುತೂಹಲ. ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೇ ನಿಲ್ಲಿಸಿ, ಬರುವ ಬಹಳಷ್ಟು ನಿರುಪಯೋಗಿ ಇ-ಅಂಚೆಯನ್ನು ಓದಿ ಖುಷಿಪಟ್ಟು ಇನ್ನಷ್ಟು ಓದುಗರಿಗೆ ಕಳುಹಿಸಲು ಸಂಭ್ರಮ. ಇದು ಕೆಲಸದ ಮಧ್ಯೆ ಒಂದು ಸಣ್ಣ ವಿಶ್ರಾಂತಿ ಅಥವಾ ವಿಶ್ರಾಂತಿ ಮಧ್ಯೆ ಕೆಲಸವೆನ್ನಬಹುದು.

ಇಂದು ಶುಕ್ರವಾರ. ವಾರಾಂತ್ಯ ಶುರುವಾಗುವುದೇ ಶುಕ್ರವಾರದಿಂದ. ಗೆಳೆಯರೊಡನೆ ಹರಟೆ, ಯಾವುದಾದರೊಂದು ಪಬ್‌ನಲ್ಲಿ ಕುಡಿತ, ನಂತರ ಊಟ, ಜ್ಞಾನವಿದ್ದರೆ ಒಂದು ಸಿನೆಮ, ಇಲ್ಲ ತನ್ನ ಕೊಠಡಿಯಲ್ಲಿ ಶಯನ. ಮತ್ತೆ ಶನಿವಾರ ಹಿಂದಿನ ದಿನದ ಕುಡಿತದ ತಲೆಭಾರವನ್ನ ಹೋಗಲಾಡಿಸಲು ಎಂ.ಜಿ.ರಸ್ತೆ ಅಥವಾ ಬ್ರಿಗೇಡ್ ರಸ್ತೆಯಲ್ಲಿ (ಕಲುಷಿತ) ವಾಯು ವಿಹಾರ ಹಾಗೂ ನಯನ ವಿಹಾರ ಮತ್ತೆ ಸ್ವಲ್ಪ ಕುಡಿತ. ಆದಿತ್ಯವಾರ ಎಲ್ಲಕ್ಕೂ ವಿರಾಮ. ಇದು ಮದುವೆಯಾಗದ ತಕ್ಕಮಟ್ಟಿಗೆ ಸಂಪಾದಿಸುವ ಬೆಂಗಳೂರಿನ ಗಣಕತಂತ್ರಜ್ಞನ ವಾರಾಂತ್ಯದ ಕಾರ್ಯಕ್ರಮ.

ಬೆಳಗ್ಗಿನಿಂದ ಇಂದಿನ ಕರ್ಯಕ್ರಮದ ಬಗ್ಗೆ ತನ್ನ ಗೆಳೆಯರಿಂದ ಯಾವ ಅಂಚೆಯಾಗಲೀ ಅಥವಾ ದೂರವಾಣಿಯಾಗಲೀ ಬಂದಿಲ್ಲದ ಕಾರಣ, ಈಗತಾನೆ ಬಂದ ಅಂಚೆಯನ್ನು ಭರದಿಂದ ತೆರೆದು ಓದಿದ. ಅದು ತನ್ನ ಕಂಪನಿಯವರೇ ಕಳುಹಿಸಿದ್ದ ರಕ್ತದಾನದ ವಿವರದ ಅಂಚೆ. ಮುಂದಿನ ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ ರೋಟರಿ ಕ್ಲಬ್‌ನ ಆಶ್ರಯದಲ್ಲಿ ಇಲ್ಲಿನ ಉದ್ಯೋಗಿಗಳಿಗೆ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ ಮತ್ತು ಅದಕ್ಕೆ ಬೇಕಾದ ನಿಯಮಗಳು. ಎಂದೂ ರಕ್ತದಾನ ಮಾಡದ ಗಗನ್, ಈಗ ಈ ಸತ್ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಆಶೆ ಮೂಡಿತು. ಏನಾದರಾಗಲಿ ಈ ಬಾರಿ ರಕ್ತದಾನ ಮಾಡಲೇಬೇಕೆಂಬ ಸಂಕಲ್ಪ ಮಾಡಿದ.

ಗಗನ್ ಇಂಜಿನಿಯರಿಂಗನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರಿಗೆ ಕೆಲಸಕ್ಕಾಗಿ ಬಂದವನು. ತೆಳ್ಳನೆಯ ಮೈಕಟ್ಟು, ಕಣ್ಣೆರಡು ಸಾಲದೆಂದು ಅವುಗಳಿಗೆ ಕನ್ನಡಕದ ಇನ್ನೆರಡು ಗಾಜು, ಗೋಧಿ ಮೈ ಬಣ್ಣ, ಕ್ರಾಪ್ ಮಾಡಿಸಿದ್ದ ಕೂದಲು. ಪ್ರಪಂಚದ ಉನ್ನತ ಕಂಪನಿಯೊಂದರಲ್ಲಿ ತಕ್ಕ ಮಟ್ಟಿನ ಸಂಬಳದಲ್ಲಿ ಕೆಲಸ ಮಾಡುತ್ತಿದ್ದವನು. ಅವನ ಗೆಳೆಯ ಕೃಷ್ಣನ ಸಹಾಯದಿಂದ ಮಲ್ಲೇಶ್ವರದಲ್ಲಿ ಒಂದು ಬಾಡಿಗೆಯ ಕೊಠಡಿ ಹುಡುಕಿ ಅದರಲ್ಲಿ ವಾಸ. ಹೈದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಊರಿಗೆ ಹೋಗುವುದು ಮನೆಯವರನ್ನು ನೋಡಿ, ಬಾಲ್ಯ ಸ್ನೇಹಿತರನ್ನು ಭೇಟಿಯಿತ್ತು, ಬಟ್ಟೆಯನ್ನು ಒಗೆಸಿಕೊಂಡು, ಅಮ್ಮ ಮಾಡಿದ ಅಡಿಗೆಯನ್ನು ಚೆನ್ನಾಗಿ ತಿಂದು ವಾಪಸ್ ಬೆಂಗಳೂರಿಗೆ ಬರುವುದು. ಅಲ್ಲಿಯೇ ಒಂದು ಮನೆಯನ್ನು ಮಾಡಿ ಅಪ್ಪ-ಅಮ್ಮನನ್ನು ಕರೆಸಿಕೊಳ್ಳುವ ಯೋಚನೆಯಿತ್ತಾದರೂ ಅದು ಕಾರ್ಯಗತಗೊಂಡಿರಲಿಲ್ಲ. ಎರಡು ವಾರದಿಂದ ಊರಿಗೂ ಹೋಗಿಲ್ಲ, ಇತ್ತ ವಾರಾಂತ್ಯದ ಕಾರ್ಯಕ್ರಮದ ಸುದ್ದಿಯೂ ಇಲ್ಲ. ಒಂದು ಮನಸ್ಸು ಊರಿಗೆ ಹೋಗಿ ಬರುವ ಎಂದು. ಆದರೆ ಆಫೀಸಿನ ಕೆಲಸದ ಕಾರಣ ಶನಿವಾರ ಅಥವಾ ಭಾನುವಾರ ಕೂಡ ಹೋಗಬೇಕಾಗಬಹುದು. ಅದಕ್ಕೆ ಇನ್ನೊಂದು ಮನಸ್ಸು ಇಲ್ಲೇ ಉಳಿದುಕೊಂಡೂ ಕೆಲಸ ಮುಗಿಸುವ ಎಂದು.

ಕಡೆಗೂ ತನ್ನ ಸ್ನೇಹಿತ ಪ್ರಶಾಂತನಿಂದ ದೂರವಾಣಿ ಕರೆ ಬಂದಿತು. 'ಹಲೋ ಮಗಾ, ಏನ್ ಮಾಡ್ತಿದೀಯ ಇವತ್ತು' ಅಂತ ಪ್ರಶಾಂತ ಪ್ರಶಾಂತವಾಗಿ ವಿಚಾರಿಸಿದ. ಅದಕ್ಕೆ ಗಗನ್, 'ಏನು ಪ್ಲಾನ್ ಇಲ್ಲಾ ಕಣೋ' ಅಂತ ಉತ್ತರಿಸಿದ. 'ರಾತ್ರಿ ನಂದಿನಿಗೆ ಹೋಗಿ ಆಂಧ್ರ ಊಟ ಮಾಡಣ?' ಅಂತ ಮರು ಪ್ರಶ್ನಿಸಿದ. ಗಗನ್‌ಗೆ ಗೊತ್ತಿತ್ತು, ನಂದಿನಿ ಆಂಧ್ರ ಊಟ ಅನ್ನೋದು ಒಂದು ನೆಪ. ಅಲ್ಲಿಗೆ ಹೋದ ಮೇಲೆ, ಅಲ್ಲಿನ ಮಂದ ಬೆಳಕಿನ ವಾತಾವರಣದಲ್ಲಿ ಒಂದೇ ಒಂದು ಕಿಂಗ್ ಫಿಷರ್‌ನಿಂದ ರಾತ್ರಿ ಶುರು. ಅದರ ಜೊತೆಗೆ ಕಡ್ಲೆಕಾಯಿ ಮಸಾಲ, ಫ್ರೆಂಚ್ ಫ್ರೈಸ್ ನಂತರ ಕಡೆಯಲ್ಲಿ ಆಂಧ್ರದ ಅನ್ನ, ಪಪ್ಪು, ತುಪ್ಪ ಅಂತ ಊಟ. ಕಾವೇರಿ ಥಿಯೇಟರ್ ಹತ್ರ ಇರೋ ನಂದಿನಿಗೆ ಹೋಗಣ ಎಂದ ಗಗನ್. ಏಕೆಂದರೆ ಅವನ ರೂಂಗೆ ಅದು ಹತ್ತಿರವಿತ್ತು. ಸರಿ. ಕೃಷ್ಣ, ಸಂತೋಷ್‌ಗೂ ಹೇಳ್ತಿನಿ. 7.30ಕ್ಕೆ ನಿನ್ನ ರೂಂಗೆ ಬರ್‍ತಿನಿ. ಅಲ್ಲಿಂದ ಹೋಗಣ, ಅಂತ ಪ್ರಶಾಂತ ತಿಳಿಸಿದ. ಓಕೆ ಅಂತ ಗಗನ್ ಸಂವಾದವನ್ನು ಮುಗಿಸಿದ.

ಪ್ರಶಾಂತ್, ಕೃಷ್ಣ, ಸಂತೋಷ್, ಗಗನ್ ಆಪ್ತ ಮಿತ್ರರು. ಪ್ರಶಾಂತ್ ಮತ್ತು ಕೃಷ್ಣ ಬೆಂಗಳೂರಿನವರೆ. ಸಂತೋಷ್, ಗಗನ್‌ನಂತೆ ಬೆಂಗಳೂರಿಗೆ ಕೆಲಸಕ್ಕಾಗಿ ಬಂದವನು. ಈ ನಾಲ್ವರು ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದವರು ಮತ್ತು ಬೆಂಗಳೂರಿನಲ್ಲಿ ಬೇರೆ-ಬೇರೆ ಕಡೆ ಕೆಲಸ ಮಾಡುತ್ತಿದ್ದವರು ಮತ್ತು ಅವಿವಾಹಿತರು. ಗಣಕಯಂತ್ರದಲ್ಲಿ ಗಂಟೆ ಇನ್ನು ಮೂರೂವರೆ ತೋರಿಸುತಿತ್ತು. ಆರು ಗಂಟೆಗೆ ಆಫೀಸ್ ಬಿಟ್ಟರೆ ಸಾಕು ಎಂದು ನಿರ್ಧರಿಸಿ ಮತ್ತೆ ಗಣಕಯಂತ್ರದಲ್ಲಿ ಮುಳುಗಿಹೋದ. ಸುಮಾರು ಐದುವರೆಗೆ ಮತ್ತೆ ಪ್ರಶಾಂತನ ದೂರವಾಣಿ ಕರೆ ಬಂದಿತು - ಕೃಷ್ಣ ಮತ್ತು ಸಂತೋಷ್ ಬರುವುದಿಲ್ಲವೆಂದು. ಏಕೆ ಎಂದು ವಿಚಾರಿಸಲು, ಕೃಷ್ಣನಿಗೆ ಅಮೆರಿಕದವರ ಜೊತೆ ಮೀಟಿಂಗ್ ಇದ್ದು, ಅದು ಸುಮಾರು ಹತ್ತುವರೆಗೆ ಮುಗಿಯಬಹುದು. ಇನ್ನು ಸಂತೋಷ್‌ಗೆ ಇವತ್ತು ಒಂದು ಡೆಲಿವರಬಲ್ ಇದ್ದು, ಎಷ್ಟು ಹೊತ್ತಾಗತ್ತೋ ಗೊತ್ತಿಲ್ಲ. ಕೃಷ್ಣ ಮತ್ತು ಸಂತೋಷ್ ನಾಳೆ ಹೋಗೋಣವೆಂದರೆ, ಪ್ರಶಾಂತನಿಗೆ ನಾಳೆ ಕಸಿನ್ ಮನೆಯಲ್ಲಿ ಒಂದು ಪ್ರೊಗ್ರಾಂ. ಅದಕ್ಕೆ ಇವತ್ತು ನಾವಿಬ್ಬರೇ ಹೋಗೋಣವೆಂದು ಪ್ರಶಾಂತ ತಿಳಿಸಿದ. ಗಗನ್, ಕೃಷ್ಣ ಮತ್ತು ಸಂತೋಷ್‌ಗೆ ಕರೆ ಮಾಡಿದಕ್ಕೆ ನಾಳೆ ಅವರ ಜೊತೆಯೂ ಹೋಗುವುದೆಂದು ತೀರ್ಮಾನವಾಯಿತು.

ಏಳುವರೆಗೆ ಸರಿಯಾಗಿ ಗಗನ್ ಮತ್ತು ಪ್ರಶಾಂತ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟು ನಂದಿನಿಯನ್ನು ತಲುಪಿದರು. ಒಳಗೆ ಬಂದು ಕುಳಿತು, ಪ್ರಶಾಂತ್ ಮಾಣಿಯ ಹತ್ತಿರ ಎರಡು ಕಿಂಗ್ ಫಿಷರ್ ಎಂದು ಹೇಳಿದ. ಅದಕ್ಕೆ ಗಗನ್, ಇಲ್ಲ. ಒಂದು ಕಿಂಗ್ ಫಿಷರ್, ಒಂದು ಫ್ರೂಟ್ ಪಂಚ್, ಎಂದು ಹೇಳಿದ. ಆಶ್ಚರ್ಯಚಕಿತನಾದ ಪ್ರಶಾಂತ್, ಯಾಕೋ ಮಗಾ, ಕುಡಿಯಲ್ವಾ ಇವತ್ತು, ಎಂದು ಕೇಳಿದ. ಇಲ್ಲ. ಆಫೀಸ್‌ನಲ್ಲಿ ವೆನ್ಸಡೆ ಬ್ಲಡ್ ಡೊನೇಷನ್ ಕ್ಯಾಂಪ್ ಇದೆ. ನಾನು ಬ್ಲಡ್ ಡೊನೇಟ್ ಮಾಡ್ಬೇಕಂದುಕೊಂಡಿದಿನಿ. ಸೊ ವೆನ್ಸಡೆ ತನಕ ನೊ ಆಲ್ಕೊಹಾಲ್ ಎಂದು ಉತ್ತರಿಸಿದ. ಸರಿ ಮಾಣಿ ಬಿಯರ್ ಮತ್ತು ಹಣ್ಣಿನ ರಸ ತರಲು ಹೊರಟ. ನೀನು ಬ್ಲಡ್ ಡೊನೇಟ್ ಮಾಡ್ತಿಯಾ? ಎಂದು ಮತ್ತೆ ಪ್ರಶ್ನಿಸಿದ. ಅಂದ್ಕೊಂಡಿದಿನಿ, ಆಫೀಸಿನಲ್ಲೇ ರೋಟರಿ ಕ್ಲಬ್‌ನಿಂದ ಫ್ರೀ ಬ್ಲಡ್ ಡೊನೇಷನ್ ಕ್ಯಾಂಪ್ ಅಂತ ಇವತ್ತು ಇ-ಮೇಲ್ ಬಂತು ಎಂದು ಮತ್ತದೇ ಉತ್ತರ ನೀಡಿದ ಗಗನ್. ಗುಡ್. ವರ್ಷಕ್ಕೊಂದ್ಸರಿ ಬ್ಲಡ್ ಡೊನೇಟ್ ಮಾಡ್ಬೇಕು. ಫ್ರೆಷ್ ಆಗಿ ಮತ್ತೆ ಬರತ್ತೆ. ಅದು ಹೆಲ್ತಿ ಅಂತ ಪ್ರಶಾಂತ ಗಗನ್‌ನನ್ನು ಪ್ರೋತ್ಸಾಹಿಸಿದನು.

ಪ್ರಶಾಂತ ಬಹಳಷ್ಟು ಬಾರಿ ರಕ್ತದಾನ ಮಾಡಿದವನು. ಅವನಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿರತ್ತೆ, ಮೇಲಾಗಿ ಇದು ತನ್ನ ಮೊದಲ ರಕ್ತದಾನ. ಹಾಗಾಗಿ ಅದರ ವಿಚಾರಗಳನ್ನು ಇವನ ಹತ್ತಿರ ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಗಗನ್, ಬ್ಲಡ್ ಡೊನೇಷನ್‌ನಲ್ಲಿ ಏನೇನು ಮಾಡ್ತಾರೋ? ನನಗೆ ಅದರದು ಏನು ಗೊತ್ತಿಲ್ಲ! ಅಂತ ಕುತೂಹಲದಿಂದ ವಿಚಾರಿಸಿದ.

ಅಷ್ಟು ಹೊತ್ತಿಗೆ ಇಬ್ಬರ ಪಾನಿಯಗಳು ಬಂದಿತ್ತು ಹಾಗೆ ಮಾತಿಗೆ ಒಂದು ವಸ್ತುವು ದೊರಕಿತ್ತು. ಬುಧವಾರದ ತನಕ ಚೆನ್ನಾಗಿ ನೀರು-ಜೂಸ್ ಕುಡಿ, ಚೆನ್ನಾಗಿ ಹಣ್ಣು-ತರಕಾರಿ ತಿನ್ನು, ಅಲ್ಲಿ ಬರೀ ಒಂದು ಬಾಟಲ್ ರಕ್ತ ತೆಗೆದುಕೊಳ್ತಾರೆ, ನಂತರ ಒಂದು ಲೋಟ ಜೂಸ್, ಬಿಸ್ಕತ್ತು ಕೊಡ್ತಾರೆ, ಕಡೆಯಲ್ಲಿ ಒಂದು ಸರ್ಟಿಫಿಕೇಟ್ ಕೊಡ್ತಾರೆ - ಹೀಗೆ ಒಂದೊಂದಾಗಿ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ಕೊಡತೊಡಗಿದ.

ಗಗನ್‌ಗೆ ಸೂಜಿ ಚುಚ್ಚಿಸಿಕೊಳ್ಳುವುದು ಎಂದರೆ ಸ್ವಲ್ಪ ಕಸಿವಿಸಿ. ಚಿಕ್ಕವನಿದ್ದಾಗ ಜ್ವರ ಬಂದು, ಅವರ ಊರಿನ ಆಸ್ಪತ್ರೆಯಲ್ಲಿ ವೈದ್ಯರು ಚುಚ್ಚುಮದ್ದೇನಾದರು ಬರೆದರೆ, ಏಕಪ್ಪಾ ಜ್ವರ ಬಂತು, ಮೇಲೆ ಇಂಜೆಕ್ಷನ್ ಬೇರೆ. ಈ ಡಾಕ್ಟರ್ ಹತ್ತಿರ ಮತ್ತೆ ಬರಬಾರದು. ಮಾತ್ರೆ, ಟಾನಿಕ್ ಕೊಟ್ಟಿದ್ದಿದ್ರೆ ಆಗ್ತಿರ್‍ಲಿಲ್ವ ಅಂತ ಕೋಪ-ಕಳವಳ. ಚುಚ್ಚುಮದ್ದು ಕೊಡುವಾಗ ಸಿಸ್ಟರ್ ಹೇಳಬೇಕು ಮೈ ಸಡ್ಳ ಬಿಡು ಅಂತ. ಏಕೆಂದರೆ ಉಸಿರು ಬಿಗಿ ಹಿಡಿದು ಚುಚ್ಚಿಸಿಕೊಳ್ಳುವುದು. ಸಿಸ್ಟರ್ ಹಾಗೆ ಹೇಳಿದ ಮೇಲೆ ಸದ್ಯ ಮುಗೀತಲ್ಲ ಅಂತ ನಿಟ್ಟುಸಿರು ಬಿಟ್ಟು ಬದುಕಿದೆಯ ಬಡಜೀವ ಅಂತ ಅಲ್ಲಿಂದ ಪರಾರಿಯಾಗುವುದು. ಕ್ರಮೇಣ ಈ ಭಾವನೆ ಬದಲಾಗುತ್ತಾ ಬಂದಿತ್ತು. ಈಗ ಪ್ರಶಾಂತನ ಹಿತನುಡಿಗಳು ನಾನು ರಕ್ತದಾನವನ್ನು ಖಂಡಿತವಾಗಿ ಮಾಡುವೆ ಎಂದು ಬಿಗಿಯಾಗಿ ಮನಸ್ಸಿನಲ್ಲಿ ಬೇರೂರಿದ್ದವು.

ಮಾರನೆಯ ದಿನ ಕೃಷ್ಣ ಮತ್ತು ಸಂತೋಷ್ ಜೊತೆ ಕುಳಿತು, ನಾನು ರಕ್ತದಾನ ಮಾಡಬೇಕು. ಆದ್ದರಿಂದ ಮಧುಪಾನ ಮಾಡುವುದಿಲ್ಲವೆಂದಾಗ ವಾತಾವರಣವೇ ಬೇರೆ. ಕೃಷ್ಣ ಮತ್ತು ಸಂತೋಷ್ ಆಶ್ಚರ್ಯಚಕಿತರಾಗಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮತ್ತೆ ಇವನತ್ತ ನೋಡಿ ಜೋರಾಗಿ ನಕ್ಕರು. ಸಂತೋಷ್, ಏನು ಬ್ಲಡ್ ಡೊನೇಟ್ ಮಾಡ್ತಿಯಾ? ಸೊಳ್ಳೆ ನಿನ್ನನ್ನ ಕಚಿದ್ರೆ, ನಿನ್ನತ್ರಾನೆ ರಕ್ತ ಇಲ್ಲ ಅಂತ ನಿನಗೆ ರಕ್ತ ಹಾಕೋಗತ್ತೆ. ಉಫ್ ಅಂದ್ರೆ ಹಾರೋಗೋ ಹಂಗಿದ್ಯಾ, ನಿನಗೇ ಯಾರಾದರು ಬ್ಲಡ್ ಕೊಡ್ಬೇಕು. ಅಂಥಾದ್ರಲ್ಲಿ ನೀನು ಬ್ಲಡ್ ಡೊನೇಟ್ ಮಾಡ್ತಿಯ? ಅಂತ ಹಾಸ್ಯ ಮಾಡಿದ. ಅದಕ್ಕೆ ಕೃಷ್ಣ ಮತ್ತು ಸಂತೋಷ್ ಇಬ್ಬರೂ ಜೋರಾಗಿ ನಕ್ಕರು.

ನಾನೇನು ಅಷ್ಟೊಂದು ಸಣ್ಣಗಿಲ್ಲ. ಹೆಲ್ತಿಯಾಗಿರೋರು ಯಾರು ಬೇಕಾದ್ರು ಒಂದು ಬಾಟಲ್ ಬ್ಲಡ್ ಡೊನೇಟ್ ಮಾಡಬಹುದು. ಫ್ರೆಷ್ ಆಗಿ ಮತ್ತೆ ಬ್ಲಡ್ ಬರತ್ತೆ. ಅದು ಹೆಲ್ತಿ, ಅಂತ ಸಮರ್ಥಿಸಿಕೊಂಡ ಗಗನ್. ಅದಕ್ಕೆ ಕೃಷ್ಣ ಒಂದು ಘಟನೆಯನ್ನೇ ಹೇಳತೊಡಗಿದ. ನಮ್ಮ ಆಂಟಿ ಹಾಸ್ಪಿಟಲ್‌ನಲ್ಲಿ ಯಾರೋ ಒಬ್ಬ ಸಣ್ಣಗಿರೋನು ದುಡ್ಡಿಗೋಸ್ಕರ ಬ್ಲಡ್ ಡೊನೇಟ್ ಮಾಡ್ತಿನಿ ಅಂತ ಬಂದ್ನಂತೆ. ಒಂದು ಬಾಟಲ್ ತಗೋತಿದ್ದಂತೆ ಅವನು ಅನ್ ಕಾನ್ಷಿಯಸ್ ಆಗೋದ್ನಂತೆ. ಅದಕ್ಕೆ ಹಾಸ್ಪಿಟಲ್‌ನವರು ಅವನಿಗೇ ಎರಡು ಬಾಟಲ್ ಬ್ಲಡ್ ಹಾಕಿದ ಮೇಲೆ ಜ್ಞಾನ ಬಂತಂತೆ. ಆವೇಲೆ ಅವನು ಎದ್ದು ನನಗೇನಾಯಿತು? ಯಾಕಷ್ಟೊಂದು ಬ್ಲಡ್ ತಗೊಂಡ್ರಿ, ನಾನು ಕೋರ್ಟ್‌ಗೋಗ್ತಿನಿ ಅಂತೆಲ್ಲಾ ಉಲ್ಟಾ ಅವನೇ ಗಲಾಟೆ ಮಾಡಿದ್ನಂತೆ. ಅಂತ ಹೇಳಿ ಮತ್ತೆ ಇಬ್ಬರೂ ಜೋರಾಗಿ ನಗಲಾರಂಭಿಸಿದರು. ಅದಕ್ಕೆ ಗಗನ್, ನನಗೇನಾಗಲ್ಲ. ನಾನು ಕೊಟ್ಟೇ ಕೊಡ್ತಿನಿ ಅಂತ ಅವನ ದೃಢ ನಿರ್ಧಾರವನ್ನು ತಿಳಿಸಿದನು.

ಬೇಡ ಮಗಾ, ನೀನು ಬ್ಲಡ್ ಕೊಡೋ ಯೋಚನೆ ಡ್ರಾಪ್ ಮಾಡು, ಇಲ್ಲಾ ಫೋನ್ ಮತ್ತು ನಮ್ಮ ನಂಬರ್ ಹತ್ರ ಇಟ್ಕೊಂಡಿರು. ಏನಾದರೂ ಆದ್ರೆ ತಕ್ಷಣ ಫೋನ್ ಮಾಡು ಅಂತ ಕೃಷ್ಣ ಹೇಳಿದಕ್ಕೆ ಸಂತೋಷ್ ಏನಾದ್ರು ಆದ್ರೆ ಅವನು ಫೋನ್ ಮಾಡಕ್ಕೆಲ್ಲಾಗತ್ತೋ? ಅಂತ ಇನ್ನಷ್ಟು ಕಿಸಿಕಿಸಿ ಅಂತ ನಗಲಾರಂಭಿಸಿದರು.

ಸಂತೋಷ್, ಅಣ್ಣಾವ್ರ ಒಂದು ಹಳೆಯ ಕನ್ನಡ ಚಿತ್ರದ ಕಥೆ ಹೇಳತೊಡಗಿದ. ಅದ್ರಲ್ಲಿ ಅಶ್ವಥ್-ಲೀಲಾವತಿ ತನ್ನ ತಮ್ಮ ರಾಜ್‌ಕುಮಾರ್‌ನ ಹೆಂಡತಿ ಜಯಂತಿಯ ಜೀವ ಉಳಿಸಲು ಲೀಲಾವತಿ ರಕ್ತ ಕೊಟ್ಳಂತೆ. ರಕ್ತ ಕೊಡುವಾಗ ಅಲ್ಲಿ ಕರೆಂಟ್ ಹೋಯ್ತಂತೆ. ಯಾವಾಗಲೋ ಲೀಲಾವತಿ ಕೈಯಿಂದ ಹೋಗಿದ್ದ ಕೊಳವೆ ಕಿತ್ತು ರಕ್ತವೆಲ್ಲಾ ಕೆಳಗೆ ಬಿದ್ದು ಕಡೆಗೆ ಲೀಲಾವತಿ ಸಾಯ್ತಾಳಂತೆ. ಏನೇನೋ ಆಗತ್ತೆ ಕಣೋ ಈ ರಕ್ತದಾನದಿಂದ ಅಂತ ಹೆದರಿಸಿದ.

ಜೀವನದಲ್ಲಿ ಎಷ್ಟೆಲ್ಲಾ ಜನರನ್ನ ನೋಡ್ತಿವಿ, ಕಾಲೆಳೆಯೋರು, ಹೆದರಿಸೋರು, ಹುರುದುಂಬಿಸೋರು. ಏನೇ ಆಗಲಿ ನಾನು ರಕ್ತ ಕೊಟ್ಟೇ ಕೊಡ್ತಿನಿ ಅಂತ ಗಗನ್ ನಿರ್ಧರಿಸಿದ್ದ. ಭಾನುವಾರ ಆಫೀಸಿಗೆ ಹೋಗಿ ಕೆಲಸ ಮುಗಿಸಿ, ರಕ್ತದಾನದ ನಿಯಮಗಳನ್ನು ಮತ್ತೊಮ್ಮೆ ನೋಡಿದ. ಮುಂದಿನ ದಿನಗಳು ಬೆಂಗಳೂರಿನಲ್ಲಿ ಎಲ್ಲಿ ಸುತ್ತಬೇಕಾದರೂ, ಕಣ್ಣಿಗೆ ಬೀಳುತ್ತಿದ್ದ ಫಲಕಗಳಲ್ಲಿ, ನೆತ್ತರಿನ ವಿಷಯದ ಫಲಕಗಳು ಗಮನ ಸೆಳೆಯುತ್ತಿದ್ದವು ರಕ್ತದಾನ ಮಹಾದಾನ, ರಕ್ತದಾನ ಜೀವದಾನ, ಏಡ್ಸ್‌ಗೆ ಕಲುಷಿತ ಸೂಜಿಯ ರಕ್ತದಾನವೂ ಒಂದು ಕಾರಣ.

ಹೀಗೆ ದಿನಕಳೆದು, ರಕ್ತದಾನದ ದಿನ, ಬುಧವಾರ ಬಂದಿತು. ಸ್ವಚ್ಛವಾಗಿ ಅಭ್ಯಂಜನ ಮುಗಿಸಿ, ದೇಹಕ್ಕೆ ಪರಿಮಳವನ್ನು ಸಿಂಪಡಿಸಿ, ತನಗೆ ಇಷ್ಟವಾದ ಅಂಗಿಯನ್ನು ಧರಿಸಿ, ಹತ್ತಿರದ ಉಪಹಾರ ಮಂದಿರದಲ್ಲಿ ಆಹಾರ ಸೇವಿಸಿ, ಚೆನ್ನಾಗಿ ನೀರು ಕುಡಿದು, ಯುದ್ಧಕ್ಕೆ ತೆರಳುವ ಯೋಧನಂತೆ ತನ್ನ ಕುದುರೆ (ದ್ವಿಚಕ್ರವಾಹನ)ವನ್ನೇರಿ ಕಛೇರಿಗೆ ತೆರಳಿದ. ಆಫೀಸಿನಲ್ಲಿ ರಕ್ತದಾನದ ಶಿಬಿರ ಭರದಿಂದ ಶುರುವಾಗಿತ್ತು. ಬೆಳಗ್ಗೆ ಬೇಡ, ಅಪರಾಹ್ನ ಹೋಗೋಣವೆಂದುಕೊಂಡ. ಯಾರಾದರೂ ಕರೆ ಮಾಡಿ ತಲೆ ತಿನ್ನುತ್ತಾರೆ ಎಂದು ದೂರವಾಣಿಯನ್ನು ನಿಲ್ಲಿಸಿಟ್ಟ. ಗಗನ್‌ಗೆ ಎರಡು ಮನಸ್ಸು ರಕ್ತ ಕೊಡಲೋ, ಬೇಡವೋ ಎಂದು. ಆದರೂ ಇದೊಂದು ಒಳ್ಳೆಯ ಕೆಲಸ, ಯಾವುದೂ ಈ ದಾರಿಯಲ್ಲಿ ಅಡ್ಡಿಯಾಗಬಾರದೆಂದು ಊಟ ಮುಗಿಸಿ ಎರಡೂವರೆಗೆ ಆಫೀಸಿನ ರಕ್ತದಾನದ ಕೊಠಡಿಯತ್ತ ತೆರಳಿದ.

ಎರಡನೇ ಮಹಡಿಯ ಒಂದು ದೊಡ್ಡ ಮೀಟಿಂಗ್ ರೂಂನಲ್ಲಿ ಏರ್ಪಡಿಸಲಾಗಿತ್ತು. ಮೆಟ್ಟಿಲನ್ನು ಹತ್ತಿ ಒಬ್ಬನೆ ಅಲ್ಲಿಗೆ ಬಂದು ತಲುಪಿದ. ಆಸ್ಪತ್ರೆಯ ರಾಸಾಯನಿಕದ ವಾಸನೆಗಳು ಗಗನ್‌ನನ್ನು ಬರಮಾಡಿಕೊಂಡವು. ಒಳಗೆ, ಓಡಾಡುವುದಕ್ಕೆ ಜಾಗ ಬಿಟ್ಟು, ಕಬ್ಬಿಣ್ಣದ ಮಡಚುವಂತಹ ಮಂಚ, ಅದರ ಮೇಲೆ ತೆಳ್ಳನೆಯ ಪಲ್ಲಂಗ, ಅದರ ಮೇಲೆ ಆಸ್ಪತ್ರೆಯ ಬಿಳಿಯ ಹೊದಿಕೆ, ಅದರ ಮೇಲೆ ಕಂಪನಿಯ ಉದ್ಯೋಗಿಗಳು ಮಲಗಿದ್ದರು. ಅವರ ಕೈಯಿಂದ ಒಂದು ಸಣ್ಣ ಕೊಳವೆಯ ಮೂಲಕ ಕೆಳಗೆ ಇಟ್ಟಿದ್ದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ರಕ್ತವನ್ನು ಶೇಖರಿಸುತ್ತಿದ್ದರು. ಇನ್ನೊಂದೆಡೆ ಬಿಳಿ ಕೋಟು ಧರಿಸಿ ಸ್ಟೆಥಾಸ್ಕೋಪ್ ಕುತ್ತಿಗೆಗೆ ನೇತು ಹಾಕಿ ಒಂದು ಮೇಜು-ಕುರ್ಚಿಯಲ್ಲಿ ಕುಳಿತಿದ್ದ ನಾಲ್ಕು ವೈದ್ಯರು. ಇವರಲ್ಲದೆ ಮಂಚದ ಹತ್ತಿರ ಓಡಾಡುತ್ತಿದ್ದ ಸ್ವಯಂಸೇವಕರು. ಇದೆಲ್ಲಾ ನೋಡಿ ಗಗನ್ ಎದೆ ಬಡಿತ ಹೆಚ್ಚಾಗಿತ್ತು. ಏನಾದರಾಗಲಿ, ಯುದ್ಧದಲ್ಲಿ ಹೋರಾಡಿ ವಿಜಯಿಯಾಗಬೇಕು ಇಲ್ಲವೇ ವೀರ ಮರಣ ಹೊಂದಬೇಕೇಂದುಕೊಂಡು ಮುನ್ನುಗಿದ.

ತನ್ನ ಸರದಿ ಬಂದ ನಂತರ ಒಬ್ಬ ವೈದ್ಯರು ಗಗನ್‌ನ ತೂಕ, ಎತ್ತರ ಪರೀಕ್ಷಿಸಿದರು. ಏನಾದರೂ ಔಷಧಿ ತೆಗೆದುಕೊಳ್ಳುತ್ತಿದ್ದೀಯ, ನಿನ್ನ ರಕ್ತದ ಗುಂಪು ತಿಳಿದಿದೆಯೆ ಎಂದೆಲ್ಲಾ ವಿಚಾರಿಸಿದರು. ನಂತರ ರಕ್ತದೊತ್ತಡ ನೋಡಿ, ಅದು ಹೆಚ್ಚಾಗಿದ್ದುದ್ದರಿಂದ, ಐದು ನಿಮಿಷ ಅಲ್ಲೇ ಇದ್ದ ಬೆಂಚ್ ಮೇಲೆ ಕುಳಿತು ಕೊಳ್ಳಲು ಹೇಳಿದರು. ಮರು ಮಾತಿಲ್ಲದೆ ಗಗನ್ ಇನ್ನೀರ್ವರಿದ್ದ ಕುರ್ಚಿಯತ್ತ ನಡೆದು ಆಸೀನನಾಗಿ ಎಲ್ಲವನ್ನೂ ಗಮನಿಸತೊಡಗಿದ.

ಒಮ್ಮಿಂದೊಂಮ್ಮೆಲೆ ಅಲ್ಲೇ ರಕ್ತ ಕೊಡುತ್ತಿದ್ದ ಒಬ್ಬ ಅರ್ ರ್ ರ್ ರ್.... ಅಂತ ಸ್ವಲ್ಪ ಬಾಯಿ ತೆರೆದು ಗಂಟಲಿನಿಂದ ಕೊರಗುವಂಥ, ಅಳುವಂಥ ಶಬ್ದ ಮಾಡತೊಡಗಿದನು. ಧ್ವನಿಯಲ್ಲಿ ನೋವಿದ್ದಂತೆ ಕಾಣುತ್ತಿತ್ತು. ತಕ್ಷಣ ಅಲ್ಲಿದ್ದ ಸ್ವಯಂಸೇವಕರು, ವೈದ್ಯರು ಅವನ ಹತ್ತಿರ ಓಡಿ, ಅವನ ರಕ್ತದಾನವನ್ನು ನಿಲ್ಲಿಸಿ, ಒಂದು ಮಣೆಯ ಮೇಲೆ ಕಾಲನ್ನಿರಿಸಿ, ಅವನನ್ನು ಪರೀಕ್ಷಿಸತೊಡಗಿದರು. ಮಂಚವನ್ನು ಸ್ವಲ್ಪ ಓರೆ ಮಾಡಿ ಕೂಡಿಸಿದರು, ಹಣ್ಣಿನ ರಸವನ್ನು ಕೊಟ್ಟರು. ಆಕಾರ ನೋಡಲು ಸುಮಾರಾಗಿದ್ದ ಅವನು ತೊಂದರೆಗೀಡಾಗುವನು ಎಂಬಂತೆ ಕಾಣಿಸಿರಲಿಲ್ಲ.

ಇದೆಲ್ಲಾ ನೋಡುತ್ತಿದ್ದ ಗಗನ್‌ನ ಹೃದಯ ಮಿಡಿತ ಗಗನಕ್ಕೇರಿತ್ತು. ಅಂಥವನಿಗೆ ರಕುತ ಕೊಡಲಾಗಲಿಲ್ಲವೆಂದರೆ, ನನಗೆ ಆಗುವುದೇ ಎಂಬ ಬೃಹತ್ ಪ್ರಶ್ನೆ ಮೂಡಿತು. ಕೃಷ್ಣ ಮತ್ತು ಸಂತೋಷ್‌ರ ಮಾತುಗಳು ಅವನ ಶಿರದಲ್ಲಿ ಹರಿದಾಡಿದವು. ವೈದ್ಯರೆಲ್ಲಾ ಅಲ್ಲಿಂದ ವಾಪಸ್ ತಮ್ಮ ಕುರ್ಚಿಯತ್ತ ಬಂದ ನಂತರ ಗಗನ್‌ನನ್ನು ಕರೆದರು. ಈಗಲೂ ಗಗನ್‌ನ ರಕ್ತದೊತ್ತಡ ಇನ್ನೂ ಹೆಚ್ಚಾಗಿಯೇ ಇದ್ದಿದ್ದರಿಂದ, ವೈದ್ಯರು ಗಗನ್‌ನ ರಕ್ತವನ್ನು ತೆಗೆದುಕೊಳ್ಳುವುದಕ್ಕಾಗುವುದಿಲ್ಲವೆಂದು ಹೇಳಿ ಮತ್ತೊಮ್ಮೆ ರಕ್ತದೊತ್ತಡವನ್ನು ಬೇರೆಲ್ಲಾದರೂ ಪರೀಕ್ಷಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದರು. ರಕ್ತದಾನವೂ ಬೇಡ, ಜೀವದಾನವೂ ಬೇಡ, ನನ್ನ ಜೀವ ಉಳಿದರೆ ಸಾಕು ಎಂದು ಅಲ್ಲಿಂದ ಜಾಗ ಖಾಲಿ ಮಾಡಿ ತನ್ನ ಜಾಗಕ್ಕೆ ಬಂದು ಕೆಲಸವನ್ನಾರಂಭಿಸಿದನು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X