• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಣಂತನ : ಕಥೆಯ ಎರಡನೇ ಭಾಗ

By * ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ
|

(ಬಾಣಂತನ : ಕಥೆ ಮುಂದುವರಿದಿದೆ...)

ಹತ್ತಾರು ಯೋಚನೆ ಉಮಾಗೆ, "ಏನಿರಬಹುದು? ಏಕೆ ಇಷ್ಟು ಆತುರವಾಗಿ ಕರೆಸಿಕೊಳ್ಳುತ್ತಿದ್ದಾಳೆ? ಇಷ್ಟು ವರ್ಷ ಬಾಯಿ ಮಾತಿಗೂ ಬಾ ಅಂತ ಹೇಳಿಲ್ಲ!" ಶನಿವಾರ ಬಂತು. ರಾಯರು ಮಡದಿಯನ್ನು ಏರ್‌ಪೋರ್ಟಿಗೆ ಕರೆದೊಯ್ದರು, ಬೀಳ್ಕೊಡುತ್ತಾ ಹೇಳಿದರು, "ತಕ್ಷಣ ಫೋನ್ ಮಾಡು. ಬೇಕು ಅನಿಸಿದರೆ ಕರೆದುಕೊಂಡು ಬಂದು ಬಿಡು. ಅವಳು ಒದ್ದಾಡಿಕೊಂಡು ಅಲ್ಲಿರೋದು ಬೇಡ. ಇಲ್ಲಿ ಏನು ಕಡಿಮೆ ಆಗಿದೆ?"

ಸಿಡ್ನಿ ಲಂಡನ್ ಹತ್ತಿರದ ಊರುಗಳೇ? ಮೊದಲು ಸಿಂಗಪೂರನ್ನು ತಲಪಬೇಕು. ಅದಕ್ಕೆ ಏಳು ಗಂಟೆಗಳ ವಿಮಾನಯಾನ, ಮತ್ತೆ ಅಲ್ಲಿಂದ ಲಂಡನ್ನಿಗೆ ಹದಿಮೂರು ಗಂಟೆಗಳು. ಮಧ್ಯೆ ಸಿಂಗಪೂರದಲ್ಲಿ ನಾಲ್ಕಾರು ಗಂಟೆ ಕಾಯುವುದು ಬೇರೆ. ಹೀಗಾಗಿ ಅದು ಒಂದು ಇಡೀ ದಿನದ ಪ್ರಯಾಣ. ವಿಮಾನದಲ್ಲಿ ಕುಳಿತು ಉಮಾ ಗಗನ ಸಖಿಗೆ ತಮ್ಮನ್ನು ಯಾವ ಕಾರಣಕ್ಕೂ ಎಬ್ಬಿಸುವುದು ಬೇಡ. ಆಹಾರ ಪಾನೀಯಗಳ ಅಗತ್ಯವಿಲ್ಲವೆಂದು ಹೇಳಿದರು. ಕಿಟಕಿಯ ಮಗ್ಗುಲಿನ ಸೀಟಿನಲ್ಲಿ ಕುಳಿತು ನಿದ್ದೆ ಮಾಡಲೆತ್ನಿಸಿದರು. ನಿದ್ದೆ ಬರಲಿಲ್ಲ.

"ಏನೂ ಅಂತ ನನ್ನನ್ನ ಕರೆಸಿಕೊಂಡಿದ್ದಾಳೆ ಇವಳು? ಏನು ಕಷ್ಟಾನೋ ಏನೋ!" ಸಹಜವಾಗಿ ಆಕೆಗೆ ಅನ್ನಿಸಿತು, "ಇದರ ಬದಲು, ಮದುವೆ ಮಾಡಿಕೊಂಡು, ಬಸುರಾಗಿ ನನ್ನನ್ನ ಬಾಣಂತನಕ್ಕೆ ಕರೆದಿದ್ದರೆ ಎಷ್ಟು ಸಂತೋಷದಿಂದ ಹೋಗುತ್ತಿದ್ದೆ! ಇದೇನಾಗಿದೆಯೋ ಈಗ ಇವಳಿಗೆ." ಇದೇ ಯೋಚನೆಯಲ್ಲಿ ಏಳು ಗಂಟೆ ಕಳೆದವು. ವಿಮಾನ ಸಿಂಗಪೂರಿನಲ್ಲಿ ಇಳಿಯಿತು. ಮನಸ್ಸಿನಲ್ಲಿ ಗಾಬರಿ ಇಲ್ಲದೇ ಹೋಗಿದ್ದರೆ ಸಿಂಗಪೂರಿನ ಕತೆಯೇ ಬೇರೆಯಾಗುತ್ತಿತ್ತು. ಅಲ್ಲಿನ ಟ್ರಾನ್ಸಿಟ್ ಲೌಂಜಿನಲ್ಲಿರುವ ಪ್ರತಿಯೊಂದು ಅಂಗಡಿಯನ್ನೂ ತಲಾಶ್ ಮಾಡುತ್ತಿದ್ದರು ಆಕೆ, ಚಿನ್ನ ಬೆಳ್ಳಿ ಅಂಗಡಿ, ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಬಟ್ಟೆ ಅಂಗಡಿಗಳು, ಪರ್‌ಫ್ಯೂಮುಗಳ ಅಂಗಡಿಗಳು ಹೀಗೆ. ಇರುವ ನಾಲ್ಕಾರು ಗಂಟೆಗಳು ಸಾಕಾಗುತ್ತಿರಲಿಲ್ಲ. ಇಂದು ಹಾಗಲ್ಲ. ಅರ್ಧ ಗಂಟೆ ಕಳೆಯುವುದೂ ಕಷ್ಟ. ಹಸಿವು ತಲೆದೋರಿತು. ಕೂಡಲೆ ಅಲ್ಲಿಯೇ ಇದ್ದ ಕಾವೇರಿ ರೆಸ್ಟೊರೆಂಟಿಗೆ ಹೋಗಿ ಇಡ್ಲಿ, ಸಾಂಬಾರ್ ತಿಂದದ್ದಾಯಿತು. ಬೋರ್ಡಿಂಗ್ ಗೇಟಿನ ಬಳಿ ಬಂದು ಮತ್ತೆ ನಿದ್ದೆ ತರಿಸಿಕೊಳ್ಳುವ ಯತ್ನವಾಯಿತು. ನಿದ್ದೆ ಬಾರದು, ಚಿಂತೆ ಹೋಗದು, "ಏಕೆ ಕರೆಸಿಕೊಂಡಿದ್ದಾಳೆ? ಕೇಳಿದರೆ ಸರಿಯಾಗಿ ಮಾತನಾಡುವುದೂ ಇಲ್ಲ."

ವಿಮಾನ ಮೇಲೇರಿ ಲಂಡನ್ನಿನತ್ತ ಸಾಗಿತು, ಚಿಂತೆ ಮುಂದುವರೆದಿತ್ತು. ಸ್ವಲ್ಪ ನಿದ್ದೆಯೂ ಬಂದಿತ್ತು. ಮಗಳನ್ನು ನೋಡುವ ಕಾತರ ಬೇರೆ. ನೋಡಿ ಹಲವಾರು ವರ್ಷಗಳಾಗಿದ್ದವು. ಅಂತೂ ಲಂಡನ್ ತಲಪಿ ಆಯಿತು. ವಿಮಾನ ಹೀತ್ರೂ ನಿಲ್ದಾಣದಲ್ಲಿ ಕೆಳಗಿಳಿಯಿತು. ಮೊದಲ ಹೆಜ್ಜೆ ಪಾಸ್‌ಪೋರ್ಟ್ ನಿಯಂತ್ರಣ. ನೂರಾರು ಜನರ ಕ್ಯೂ. ನಿಂತು ತಮ್ಮ ಸರದಿ ಬರುವ ಹೊತ್ತಿಗೆ ಒಂದು ಗಂಟೆಯೇ ಆಯಿತು. ನಿಯಂತ್ರಾಣಾಧಿಕಾರಿ ಓರ್ವ ಭಾರತೀಯ ಮಹಿಳೆ. ಉಮಾ ಮುಂದಿಟ್ಟ ಆಸ್ಟ್ರೇಲಿಯಾ ಪಾಸ್‌ಪೋರ್ಟ್ ಮತ್ತು ಟಿಕೆಟ್ ನೋಡಿ "ಎಷ್ಟು ದಿವಸ ಇರುತ್ತೀರಾ ಲಂಡನಿನ್ನಲ್ಲಿ?"

"ಎರಡು ತಿಂಗಳು"

"ಅಷ್ಟು ದಿವಸ ಇದ್ದು ಏನು ಮಾಡುತ್ತೀರಾ?"

ಈ ಪ್ರಶ್ನೆಯನ್ನು ಉಮಾ ನಿರೀಕ್ಷಿಸಿರಲಿಲ್ಲ. ಏನೋ ಹೇಳಿ ಜಾರಿಕೊಳ್ಳುವ ಉದ್ದೇಶದಿಂದ ಹೇಳಿದರು.

"ಮಗಳ ಬಾಣಂತನ"

"ಹಾಗೋ? ಬಹಳ ಸಂತೋಷ" ಎಂದು ಠಸ್ಸೆ ಒತ್ತಿ ಪ್ರವೇಶಾಪ್ಪಣೆ ನೀಡಿದಳು.

ಉಮಾ ತಮ್ಮ ಸೂಟ್ ಕೇಸ್ ತೆಗೆದುಕೊಂಡು ಟ್ರೈನಿನತ್ತ ನಡೆದರು. ಎಲ್ಲೆಲ್ಲೂ ಭಾರತೀಯ ಮುಖಗಳೇ ಅಲ್ಲಿ. ಕೇಳಿದ ತಕ್ಷಣ ದಾರಿ ತೋರಿಸಿದರು. ಟ್ರೈನಿನಲ್ಲಿ ಕುಳಿತಾಯಿತು. ಅಲ್ಲಿಂದ ಪ್ಯಾಡಿಂಗ್ಟನ್ ಸ್ಟೇಶನ್ನಿಗೆ ಪ್ರಯಾಣ, ಕೇವಲ ಇಪ್ಪತ್ತು ನಿಮಿಷ. ಮಗಳನ್ನು ನೋಡುವ ಸಡಗರ, ಏಕೆ ಕರೆಸಿಕೊಂಡಿದ್ದಾಳೋ ಚಿಂತೆ. ಪ್ಯಾಡಿಂಗ್ಟನ್‌ನಲ್ಲಿ ಟ್ರೈನ್ ನಿಂತಿತು. ಉಮಾ ಹೊರಬಂದು ಮಗಳು ಹೇಳಿದ್ದ ದಿಕ್ಕಿನಲ್ಲಿ ನಡೆಯಲಾರಂಭಿಸಿದರು. "ಇಂಜಿನ್‌ ಕಡೆ ನಡೆದುಕೊಂಡು ಬಾ, ಅಲ್ಲೇ ಇರುತ್ತೇನೆ" ಎಂದಿದ್ದಳು ಮಗಳು. ಸಾವಿರಾರು ಜನ ಅಲ್ಲಿ. ಸುತ್ತಾ ನೋಡಿಕೊಂಡು, ತನ್ನ ಸೂಟ್‌ಕೇಸ್ ಎಳೆದುಕೊಂಡು ನಡೆದರು ಉಮಾ. "ಎಲ್ಲೋ ಕಾಣಿಸ್ತಾ ಇಲ್ಲ" ಎಂದುಕೊಂಡರು. ಆದರೆ ಅಲ್ಲಿದ್ದ ಟೈ ಅಂಗಡಿಯ ಹತ್ತಿರ ಯಾರೋ ಕುಳಿತು ಕೈ ಆಡಿಸಿದ್ದು ಗೊತ್ತಾಯಿತು. ಅವಳೇ ಇರಬಹುದಾ ಎಂದುಕೊಂಡು ಅತ್ತ ಸಾಗಿದರು.

ಹೌದು, ಅದು ತಾರಾ. ಆದರೆ ಕುಳಿತಿದ್ದಾಳೆ, ತನ್ನನ್ನು ನೋಡಿದ ತಕ್ಷಣ ನಿಂತವಳು ಮತ್ತೆ ಕುಳಿತುಬಿಟ್ಟಳು. ಉಮಾ ಸರಸರ ಆತ್ತ ಚಲಿಸಿದರು. ನೊಡಿದ ತಕ್ಷಣ ಅವಾಕ್ಕಾಗಿ ನಿಂತರು. ತಾರಾ ಹೊಟ್ಟೆ ಮುಂದೆ ಬಂದಿದೆ. ಯಾವ ಸಂಶಯವೂ ಇಲ್ಲ, ಅವಳು ಗರ್ಭಿಣಿ. ಮಾತು ಹೊರಡದೆ ಉಮಾ "ಏನೇ ಇದು? " ಎಂಬ ಸಹ್ನೆಮಾಡಿ ಅವಳ ಹೊಟ್ಟೆಯತ್ತ ಬೆರಳು ಮಾಡಿದರು.

"ಅದೆಲ್ಲಾ ಆಮೇಲೆ, ಪ್ರಯಾಣ ಹೇಗಿತ್ತು? ತೊಂದರೆ ಆಗಲಿಲ್ಲವಾ?"

"ತೊಂದರೇನೂ ಇಲ್ಲ, ಏನೂ ಇಲ್ಲ. ನಿನ್ನ ವಿಚಾರ ಹೇಳು. ಏನಿದು ಅವತಾರ?"

"ಅದೆಲ್ಲಾ ಇಲ್ಲಿ ಬೇಡ. ಮನೇಲಿ ಮಾತಾಡೋಣ."

ತಾಯಿಗೆ ರೊಷ ಉಕ್ಕುತ್ತಿತ್ತು, "ಇದೇನು ಮಾಡಿಕೊಂಡಿದ್ದಾಳೆ ಇವಳು? ಯಾರೋ? ಏನು ಕತೇನೋ!" ಕಷ್ಟ ಪಟ್ಟು ಸುಮ್ಮನಿದ್ದು ಮಗಳ ಜತೆ ಟ್ಯಾಕ್ಸಿಯಲ್ಲಿ ಮನೆಗೆ ಬಂದರು. ಚಿಕ್ಕದಾಗಿದ್ದರೂ ಎಲ್ಲಾ ಅನುಕೂಲವಿದ್ದಂತಿತ್ತು ಮನೆಯಲ್ಲಿ. ಎಲ್ಲಾದರೂ ಪುರುಷ ಸಂಬಂಧವಾದ ವಸ್ತು ಸಿಗುತ್ತದೆಯೋ ನೋಡಿದರು, ಮನೆಯಲ್ಲಿ ಅಂಥದ್ದು ಏನೂ ಕಾಣಲಿಲ್ಲ. ಮಗಳು ಉಪಚಾರ ಮಾಡಿದಳು "ಸ್ನಾನ, ಕಾಫಿ ಎಲ್ಲಾ ಮುಗಿಸಿ ರೆಸ್ಟ್ ತೊಗೋ ಅಮ್ಮ." ತಾಯಿಗೆ ಸಮಾಧಾನವಿಲ್ಲ.

"ಮೊದಲು ನಿನ್ನ ಕತೆ ಹೇಳು. ನಿನ್ನ ಈ ಸ್ಥಿತೀಲಿ ನೋಡಿ ಯಾರಿಗೆ ಕಾಫಿ ಕುಡಿಯೋ ಮನಸ್ಸು ಬರುತ್ತೆ?" ತಾರಾ ಮಾತು ಬದಲಾಯಿಸಿ ಇನ್ನೇನೋ ಹೇಳ ಹೋದಳು. ತಾಯಿ ಮಧ್ಯೆ ಬಾಯಿಹಾಕಿ, "ಅದೆಲ್ಲಾ ಬೇಡ. ನನಗೆ ತುಂಬಾ ಭಯ ಆಗ್ತಾ ಇದೆ. ಇದೇನು ಸಮಾಚಾರ? ಯಾರು ಕಾರಣ ಇದಕ್ಕೆಲ್ಲಾ? ಎಲ್ಲಿ ಅವನು?"

"ತುಂಬಾ ಅರ್ಜೆಂಟಿನಲ್ಲಿದ್ದೀಯಾ ನೀನು. ಹೆಳ್ತೀನಿ, ಕೇಳು. ಇದಕ್ಕೆ ಯಾರೂ ಹೊರಗಿನವರು ಕಾರಣ ಅಲ್ಲ. ನಾನೇ ಕಾರಣ." ಬಗೆ ಹರಿಯದ ಸಮಸ್ಯೆ. ಉಮಾಗೆ ಏನೂ ಅರ್ಥವಾಗಲಿಲ್ಲ. ಮಗಳು ಹೇಳಿದಂತೆ ಸ್ನಾನ, ಕಾಫಿ ಮುಗಿಸಿದರು. ಪ್ರಯಾಣದ ಆಯಾಸ. ನಿದ್ದೆ ಅವರಿಸಿತು.

ತಾಯಿ ಮಗಳು ಪರಸ್ಪರ ಒಲವು ಜಾಸ್ತಿ. ಯಾವ ಮುಚ್ಚು ಮರೆ ಇಲ್ಲದೆ ಮಧ್ಯಾಹ್ನ ಮಗಳು ತನ್ನ ಕತೆಯನ್ನು ಹೇಳಿಕೊಂಡಳು. ತಾರಾಳಿಗೆ ಮಕ್ಕಳು ಎಂದರೆ ವಿಪರೀತ ಪ್ರಾಣ, ಇಬ್ಬರಿಗೂ ಗೊತ್ತಿದ್ದ ವಿಷಯ. ಲಂಡನ್ನಿಗೆ ಬಂದ ಮೇಲೆ ಮದುವೆ ಆಗುವ ಆಸೆ ಮನಸ್ಸಿನಲ್ಲಿ ಎಲ್ಲೋ ನೆಲೆಸಿತ್ತು. ಆದರೆ ತನ್ನ ತಂದೆ ಎಲ್ಲಾ ವಿಷಯಗಳಿಗೂ ತನ್ನ ಅಮ್ಮನನ್ನ ಮತ್ತು ತನ್ನನ್ನ ಕಂಟ್ರೋಲ್ ಮಾಡುತ್ತಿದ್ದದ್ದು ಅವಳಿಗೆ ಹೇಯವಾಗಿ ಕಂಡಿತು. ಗಂಡಸರ ಗೊಡವೆಯೇ ಬೇಡ ಎನ್ನಿಸಿತು ಅವಳಿಗೆ. ತನ್ನ ಬಳಿ ಹಾದು ಬಂದ ಹುಡುಗರಿಬ್ಬರನ್ನು ಗಮನಿಸಿ ನೋಡಿದ್ದಳು ತಾರಾ. ಆದರೆ ಅವರೊಡನೆ ಬಾಳು ಅಸಹ್ಯ ಎನಿಸಿತು. ಆದರೆ ಮಕ್ಕಳು ಬೇಕು. ತನ್ನ ಜತೆ ಕೆಲಸ ಮಾಡುವ ಒಂದಿಬ್ಬರ ಸಲಹೆ ಪಡೆದು ತಾರಾ ಐ ವಿ ಎಫ್ ಮೊರೆ ಹೊಕ್ಕಳು. ವಿಪರೀತ ದುಡ್ಡು ಖರ್ಚಾಯಿತು. ಒಂದು ಸೋತ ಪ್ರಯತ್ನ ಬೇರೆ! ಆದ್ದರಿಂದಲೇ ಅಪ್ಪನಿಗೆ ಮನೆ ಠೇವಣಿ ಹಣ ಕಳುಹಿಸುವುದನ್ನು ನಿಲ್ಲಿಸಿ ಬಿಟ್ಟಳು. ಅಲ್ಲದೆ ಈ ಸ್ಥಿತಿಯಲ್ಲಿ ಕಲಸ ಮಾಡುವುದು ಕಷ್ಟವಾಯಿತು. ತನ್ನ ಕಂಪನಿಯವರೇ ಸಂಬಳವಿಲ್ಲದ ರಜ ಕೊಟ್ಟಿದ್ದರು. ಮುಂದೆ ಕೆಲಸಕ್ಕೆ ಹಿಂತಿರುಗುವುದು ಸಾಧ್ಯ. ಇನ್ನೇನು ಹದಿನೈದು ದಿನಗಳಲ್ಲಿ ಹೆರಿಗೆ ಆಗುತ್ತದೆ. ಅದಕ್ಕೆಂದೇ ತಾಯಿಯನ್ನು ಕರೆಸಿಕೊಂಡಿರುವುದು. ತನ್ನ ಗೆಳತಿಯರೇ ನೆರವಾಗುವುದಾಗಿ ಹೇಳಿದ್ದರು. ಆದರೆ ತಾರಾಳಿಗೆ ತಾಯಿ ಬರಲಿ ಎನ್ನಿಸಿತು, ಅವಳಿಗೂ ಏನು ಎತ್ತ ಗೊತ್ತಾಗಬೇಕಲ್ಲ!

ಮಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ತಾಯಿಗೆ ಕೋಪ ಏರತೊಡಗಿತು. "ನಿನಗೆ ಹೇಳೋರು, ಕೇಳೋರು ಯಾರೂ ಇಲ್ಲವಾ? ನಮ್ಮನ್ನ ಒಂದು ಮಾತು ಕೇಳ ಬೇಡವಾ, ಏನು ಮಾಡೋಕ್ಕೂ ಮುಂಚೆ? ಇದೇನು ಹುಚ್ಚು ಕೆಲಸ!"

"ಕೇಳಿದ್ದರೆ ಏನು ಹೇಳುತ್ತಿದ್ದೆ ಅಮ್ಮಾ, ಯಾರನ್ನಾದರೂ ಮದುವೆ ಆಗು, ಇವೆಲ್ಲಾ ಬೇಡ, ಅಂತ ತಾನೇ?"

"ಅಲ್ಲದೇ ಏನು? ನೀನು ಮಾಡಿರೋದು ಮರ್ಯಾದಸ್ತರು ಮಾಡೋ ಕೆಲಸಾನಾ? ಮಕ್ಕಳಾಗೋ ಹಾಗಿಲ್ಲ ಅನ್ನೋ ಹೆಂಗಸರಿಗೆ ಪರವಾಗಿಲ್ಲ. ಹುಟ್ಟಿಲ್ಲ, ಬೆಳೆದಿಲ್ಲ ನಿನಗೇಕೆ ಇಂಥ ತಲೆಹರಟೆ? ಸುತ್ತಾ ಮುತ್ತಾ ಇರೋರ್ಗೆ, ಕೇಳಿದೋರ್ಗೆ ಎನು ಹೇಳಲಿ? ಹೇಗೆ ಮುಖ ತೋರಿಸಲಿ?"

"ಅದೇ ಬುಲ್ ಶಿಟ್ ಮಾತಾಡಬೇಡಮ್ಮ, ಸುತ್ತಾ ಮುತ್ತಾ ಇರೋರು ಏನಾದರೂ ಅಂದುಕೊಳ್ಲಿ. ಅವರಿಗೋಸ್ಕರ ನಾವು ಬದಕೋಕಾಗಲ್ಲ. ನನಗೋಸ್ಕರ ನಾನು ಬದುಕಿರೋದು, ನನ್ನಿಷ್ಟ ಬಂದಹಾಗೆ ಇರ್ತೀನಿ. ನಿನ್ನ ತರಹ ಇರೋದಕ್ಕೆ ನನಗೆ ಆಗೋದಿಲ್ಲ. ನೀನು ಬದುಕಿರೋದೆಲ್ಲಾ ಅಪ್ಪನಿಗೋಸ್ಕರ, ಅವರು ಹೇಳಿದ ಹಾಗೆ ಕೇಳಿಕೊಂಡು. ಮದುವೆ ಆದ ಮೇಲೆ ನಿನಗೋಸ್ಕರ ಯಾವತ್ತಾದರೂ ಬಾಳಿದ್ದೀಯಾ ನೀನು?"

ಹತ್ತು ವರ್ಷದ ಹಿಂದೆ ತಾರಾ ಇದೇ ಮಾತು ಆಡಿದ್ದರೆ ಉಮಾ ಅವಳ ಕೆನ್ನೆಗೆ ನಾಕು ಬಾರಿಸುತ್ತಿದ್ದರು. ಆದರೆ ಇಂದು ಹೆಚ್ಚಿಗೆ ಹೇಳುವ ಹಾಗಿಲ್ಲ. ತನ್ನ ಕಾಲಿನ ಮೇಲೆ ತಾನು ನಿಂತಿದ್ದಾಳೆ; ಗರ್ಭಿಣಿ ಬೇರೆ! ಮಗಳು ಹೇಳಿದ ಮಾತುಗಳನ್ನು ತತ್ವಶಃ ಒಪ್ಪಬಹುದಾಗಿತ್ತು. ಆದರೆ ಒಂದೇ ಏಟಿಗೆ ಕಾರ್ಯರೂಪಕ್ಕೆ ತಂದಿರುವುದನ್ನು ಸಹಿಸುವುದು ಕಷ್ಟ. ಅವಳೋ ತನ್ನ ಸ್ವಾತಂತ್ರ್ಯವನ್ನು ಸಾಧಿಸಹೊರಟಿದ್ದಾಳೆ. ತಾಯಿಗೋ ಇದೊಂದು ನುಂಗಲಾರದ ತುತ್ತು! ಮಗಳ ಮಗು ಒಪ್ಪಿಕೊಳ್ಳಬೇಕು, ಆದರೆ ಈ ರೀತಿ ಆದ ಮಗುವನ್ನಲ್ಲ! ಇದು ವಿಚಿತ್ರವೇ ಸರಿ, ಮಗುವಿನ ತಂದೆ ಯಾರೋ ತಾರಾಳಿಗೆ ಗೊತ್ತಿಲ್ಲ. ಅವಳು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ!

ಮತ್ತೆ ರಾತ್ರಿಯೆಲ್ಲಾ ನಿದ್ದೆ ಇಲ್ಲ ತಾಯಿಗೆ. ಅಳು ಬೇರೆ. ಇಲ್ಲಿ ಇದ್ದು ಮಗಳ ಬಾಣಂತನ ಮಾಡುವುದೇ? ತಕ್ಷಣ ಸಿಡ್ನಿಗೆ ವಾಪಸ್ ಹೋಗುವುದೇ? ಏನೇ ಆದರೂ ಮಗಳ ಸೌಖ್ಯ ಮುಖ್ಯವಲ್ಲವೇ? ಅವಳಿಗೋಸ್ಕರ ಇದ್ದು ಮಗಳ ಬಾಣಂತನ ಮಾಡಬೇಕು. ಗಂಡನಿಗೆ ಫೋನ್ ಮಾಡಿ "ತಾರಾಗೆ ಬಹಳ ನಿಶ್ಯಕ್ತಿ ಆಗಿದೆ, ಕೆಲಸ ಜಾಸ್ತಿ ಆಯಿತು ಅಂತ ಕಾಣಿಸುತ್ತೆ. ಅವಳಿಗೆ ಎರಡು ಅಥವಾ ಮೂರು ತಿಂಗಳು ರೆಸ್ಟ್ ಬೇಕು. ಅವಳು ಪುನ: ಆಫೀಸಿಗೆ ಹೋಗುವಂತಾದ ಮೇಲೆ ನಾನು ವಾಪಸ್ ಬರ್ತೀನಿ" ಎಂದು ಹೇಳಿದ್ದಾಯಿತು. ಗಂಡ ಹೆಚ್ಚು ಮಾತಾಡಲಿಲ್ಲ.

ಅಮ್ಮನಿಗಾಗಿ ಎಲ್ಲ ವಿಧವಾದ ಏರ್ಪಾಟುಗಳನ್ನೂ ಮಾಡಿದ್ದಳು ತಾರಾ. ಅಕ್ಕಿ, ಬೇಳೆ ದೊಡ್ದ ದೊಡ್ಡ ಚೀಲಗಳಲ್ಲಿ, ತರಕಾರಿ ಮತ್ತು ಹಣ್ಣು ಫ್ರಿಡ್ಜಿನ ತುಂಬಾ. ಲಂಡನ್ನಿಗೆ ಬಂದ ಮೇಲೆ ಅನ್ನ ಸಾರು ತಿಂದವಳೇ ಅಲ್ಲ ಅವಳು. ಆದರೆ ತಾಯಿ ಖುಶಿಯಾಗಿ ಇರಬೇಕು! ಅವಳಿಗಾಗಿ ಇದೆಲ್ಲಾ. ಇದಲ್ಲದೆ ಲಂಡನ್‌ನಲ್ಲಿ ಓಡಾಡಿ, ಇರುವ ಆಕರ್ಷಕ ಸ್ಥಳಗಳನ್ನು ನೋಡಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದಳು ತಾರಾ. ಅವಳ ಇಬ್ಬರು ಸ್ನೇಹಿತೆಯರು ಬಂದು ಉಮಾ ಅವರನ್ನು ಅಲ್ಲಿ ಇಲ್ಲಿ ಕರೆದೊಯ್ಯುತ್ತಿದ್ದರು. ಉಮಾ ಅಡುಗೆ ಮಾಡಿಕೊಂಡು ತಾವೊಬ್ಬರೇ ತಿನ್ನಬೇಕು. ಮಗಳು ತಿನ್ನುತ್ತಿರಲಿಲ್ಲ. ಬಹಳ ಬಲಾತ್ಕರಿಸಿದರೆ ಒಂದು ತುತ್ತು ಅನ್ನ ಸಾರು ಅಷ್ಟೆ! ತಾಯಿಗೆ ಕೋಪ.

ಬರುವ ಮಗುವಿಗೂ ಸಕಲ ಸಿದ್ಧತೆ ಆಗಿತ್ತು. ತೊಟ್ಟಿಲು, ಬೇರೆ ರೂಮು, ಅದಕ್ಕೆ ಬೇರೆಯಾದ ಹೀಟರ್, ಮಗುವಿಗೆ ಬೇಕಾಗುವ ಬೆಡ್ ಶೀಟ್, ಹೊದ್ದಿಗೆ ಇತ್ಯಾದಿ, ಇತ್ಯಾದಿ. ನೋಡಿ ಉಮಾಗೆ ಎಲ್ಲಿಲ್ಲದ ಆಶ್ಚರ್ಯ. "ಸರಿಯಾದ ರೀತಿ ಮಗುವಾಗಿದ್ದರೆ ಎಷ್ಟು ಸಂತೋಷ ಪಡುತ್ತಿದ್ದೆನೋ!" ಎನ್ನಿಸಿತು.

ಹದಿನೈದು ದಿನಕ್ಕೆ ಸರಿಯಾಗಿ, ಗಂಡು ಮಗುವಿನ ಜನನವೂ ಆಯಿತು. ತಂದೆ ಯಾರೋ ಏನೋ, ಮಗುವಂತೂ ಮುದ್ದಾಗಿ, ಗುಂಡು ಗುಂಡಾಗಿತ್ತು. ನೋಡಿ ಅಜ್ಜಿಗೆ ಹಿಗ್ಗು ಒಂದು ಕಡೆ, ದುಃಖ ಇನ್ನೊಂದು ಕಡೆ. ಸದಾ ಅಜ್ಜಿಯ ಹತ್ತಿರವೇ ಇರಬಯಸಿತು ಮಗು. ಇಟ್ಟ ಹೆಸರು ತೇಜ್. "ಪರವಾಗಿಲ್ಲ ಭಾರತೀಯ ಹೆಸರೇ", ಅಂದುಕೊಂಡರು ಅಜ್ಜಿ. ಇನ್ನು ಗಂಡನಿಗೆ ವಿಷಯ ತಿಳಿಸದೆ ವಿಧಿ ಇಲ್ಲ, ಹೇಳಲೇಬೇಕು. ಫೋನ್ ಮಾಡಿದರು ಉಮಾ. ಮಗುವಾದ ಸುದ್ದಿ ತಿಳಿಸುತ್ತಿದ್ದಂತೇ ರಾಯರು ಗುಡುಗಿದರು.

"ನೀವಿಬ್ಬರೂ ಒಳಗೊಳಗೆ ಏನೋ ಮಾಡುತ್ತಾ ಇದ್ದದ್ದು ಗೊತ್ತಿತ್ತು. ಆದರೆ ಮಾಡುತ್ತಾ ಇದ್ದದು ಇದು ಅಂತ ಈಗ ಗೊತ್ತಾಯಿತು. ಇನ್ನೂ ಏನೇನು ಕಾದಿದೆ ನಾನು ನೋಡೋದಕ್ಕೆ?" ಉಮಾ ಈಗ ಎಲ್ಲಿಲ್ಲದ ಧೈರ್ಯ ತೆಗೆದುಕೊಂಡರು, "ಹೀಗಾಗೋದಕ್ಕೆ ಕಾರಣ ನಾನಲ್ಲ. ನೀವು. ಹೆಣ್ಣು ಹುಡುಗಿ ಸುಖವಾಗಿರೋಕೆ ಬಿಡದೆ, ಲಾ ಓದು, ಲಂಡನ್‌ಗೆ ಬಂದು ಕೆಲಸ ಮಾಡು, ಮನೆ ತೊಗೋಳೋದಕ್ಕೆ ದುಡ್ಡು ಕಳಿಸು" ಅಂತ ಅವಳ ತಲೆ ತಿಂದ್ರಿ. ಅದಕ್ಕೇ ಇವೆಲ್ಲಾ ಆಗಿರೋದು."

"ನಾನು ನನಗೋಸ್ಕರ ದುಡ್ಡು ಕೇಳಲಿಲ್ಲ. ಅವಳು ಮುಂದೆ ಸುಖವಾಗಿರಲಿ ಅಂತ ಮನೆ ತೊಗೊಳೋ ಐಡಿಯ ಕೊಟ್ಟಿದ್ದು."

"ಅಲ್ಲಾರೀ, ನಮಗೇ ಆರೋ ಏಳೋ ಮನೆ ಇದೆ. ಕೊನೆಗೆ ಅವೆಲ್ಲಾ ಅವಳಿಗೇ ಅಲ್ಲವಾ? ಅವಳೇಕೆ ಗಂಡಸರಿಗಿಂತ ಹೆಚ್ಚಾಗಿ ಇಲ್ಲಿ ಬಂದು ದುಡೀಬೇಕು?" ರಾಯರು ಪೆಚ್ಚಾದರು, ಏನು ಹೇಳುವುದಕ್ಕೂ ಗೊತ್ತಾಗುತ್ತಿಲ್ಲ. ಫೋನನ್ನು ಕುಕ್ಕಿದರು. ರಾತ್ರಿಯೆಲ್ಲಾ ಯೋಚನೆ, ಕೋಪ - ಇವಳನ್ನು ಡಿಪಾಸಿಟ್ ಹಣ ಕೊಡು ಎಂದು ಕೇಳಿದ್ದು ನನ್ನ ತಪ್ಪಲ್ಲವೇ? ಬೆಳಿಗ್ಗೆ ಎದ್ದವರೇ ಬ್ಯಾಂಕಿಗೆ ಹೋಗಿ ಮಗಳು ಕಳುಹಿಸಿದ್ದ ಐವತ್ತು ಸಾವಿರ ಡಾಲರ್ ಮತ್ತು ಅದರ ಮೇಲಿನ ಬಡ್ಡಿ ಎಲ್ಲವನ್ನೂ ಮಗಳ ಖಾತೆಗೆ ವರ್ಗಾಯಿಸಿ ಕೈತೊಳೆದುಕೊಂಡರು.

ಇತ್ತ ಅಜ್ಜಿ ಎರಡು ತಿಂಗಳಿಗಾಗಿ ಬಂದವರು ಮೂರು ತಿಂಗಳು ಉಳಿದುಕೊಂಡು ಮಗಳು ಮತ್ತು ಮೊಮ್ಮಗನನ್ನು ನೋಡಿಕೊಂಡರು. ಮಗಳು ಮಗನನ್ನು ಮುದ್ದಾಡುವುದನ್ನು ನೋಡಿ, ನೋಡಿ ಹಿಗ್ಗಿದರು, ಆದರೂ ಮನಸ್ಸಿನಲ್ಲಿ ದುಃಖ. ಮೊಮ್ಮಗನನ್ನು ನೋಡಿ "ಕಣ್ಣೆಲ್ಲಾ ತಾರಾ ತರಹಾನೇ" ಎಂದು ಕೊಂಡಾಡುತ್ತಿದ್ದರು, ಒಮ್ಮೆಗೇ "ಮೂಗು, ಬಾಯಿ ಎಲ್ಲಾ ಯಾರ ಹಾಗೋ!" ಎನಿಸುತ್ತಿತ್ತು. ಗಂಡ ಒಮ್ಮೆಯಾದರೂ ಫೋನ್ ಮಾಡಲಿಲ್ಲ. ಮಗುವಿಗೆ ಡೇ ಕೇರ್ ಒಂದರಲ್ಲಿ ಪ್ರವೇಶವೂ ದೊರಕಿತು; ಮಗಳು ಕೆಲಸಕ್ಕೆ ವಾಪಸ್ ಹೊರಟಳು. ಇತ್ತ ಅಜ್ಜಿ ಸಿಡ್ನಿಯತ್ತ ವಿಮಾನ ಹತ್ತಿದರು. ಬೀಳ್ಕೊಡುವಾಗ ಧಾರಾಕಾರವಾಗಿ ಹರಿದಿತ್ತು ಕಣ್ಣೀರು, ಇಬ್ಬರಲ್ಲೂ! ವಿಮಾನ ಮೇಲೇರುತ್ತಿದ್ದಂತೇ ಉಮಾ ಅಂದುಕೊಂಡರು - "ಬಾಣಂತನಕ್ಕೆ ಬಂದಿದ್ದರೆ ಚೆನ್ನಾಗಿತ್ತು ಅಂದುಕೊಂಡೇ ಬಂದೆ. ಕೊನೆಗೂ ಹಾಗೇ ಆಯಿತು. ಈ ತರಹ ಮಗು, ಬಾಣಂತನ ಯಾರಿಗೆ ಬೇಕಾಗಿತ್ತೋ!" [ಬಾಣಂತನ : ಕಥೆಯ ಮೊದಲನೇ ಭಾಗ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada short story Banantana by Sydney Srinivas in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more