• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಾಣಂತನ ಯಾರಿಗೆ ಬೇಕಿತ್ತು!

By * ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ
|

ಶತಪಥ ಹಾಕಿದರು ರಾಯರು; ಕೂಗಾಡಿದರು. ಹೆಂಡತಿಯನ್ನು ಕುರಿತು ಹೇಳಿದರು, "ನೀನೇ ಕಾರಣ ಇದಕ್ಕೆ. ನೀವಿಬ್ಬರೂ ಏನೋ ಪಿತೂರಿ ಹೂಡಿದ್ದೀರಿ". ಹೆಂಡತಿ ಉಮಾ ಮಾತಾಡಲಿಲ್ಲ, ಎಂದಿನಂತೆ ಮೌನ.

"ಇನ್ನು ಇಪ್ಪತ್ತೈದು ಸಾವಿರ ಸಾಕಾಗಿತ್ತು. ಎಂತೆಂಥ ಮನೆ ಇದ್ದುವು! ಯಾವುದಾದರೂ ಒಂದರ ಮೇಲೆ ಡಿಪಾಸಿಟ್ ಹಾಕಬಹುದಾಗಿತ್ತು. ಇವಳು ನೋಡಿದರೆ ಈಗ ಸರಿಯಾಗಿ ಏನೂ ಹೇಳೋದಿಲ್ಲ. ನನಗಂತೂ ಒಂದಾದರೂ ಈಮೈಲ್ ಇಲ್ಲ, ಒಂದಾದರೂ ಫೋನ್‌ಕಾಲ್‌ ಇಲ್ಲ."

"ಹೇಳಿದಾಳಲ್ಲಾ, ಸದ್ಯಕ್ಕೆ ಅವಳು ಕೆಲಸ ಮಾಡ್ತಾ ಇಲ್ಲ. ಸ್ವಲ್ಪ ರೆಸ್ಟ್ ಬೇಕೂ ಅಂತ".

"ಮೂರು ನಾಕು ತಿಂಗಳಿಂದ ಕೆಲಸ ಇಲ್ಲದೆ ಲಂಡನ್ನಲ್ಲಿ ಏಕೆ ಇರಬೇಕು? ತೆಪ್ಪಗೆ ಇಲ್ಲಿ ಬಂದು ಯವುದಾದರೂ ಒಳ್ಳೇ ಕೆಲಸಕ್ಕೆ ಸೇರೋದಲ್ಲವಾ?"

ವಿಷಯ ಇಷ್ಟೆ. ಸೀತಾರಾಮ ರಾಯರು ಸುಮಾರು ಮೂವತ್ತೈದು ವರ್ಷಗಳಿಂದ ಸಿಡ್ನಿಯಲ್ಲಿ ನೆಲೆಸಿ, ಸಾಕಷ್ಟು ಸಂಪಾದಿಸಿ, ದಿಕ್ಕು ದಿಕ್ಕುಗಳಲ್ಲೂ ಮನೆಗಳನ್ನು ಕೊಂಡಿದ್ದಾರೆ. ಅವರ ಅಚಲ ನಂಬಿಕೆ ಎಂದರೆ ಹತ್ತು ಸೆಂಟು ಉಳಿದರೂ ಅದನ್ನು ಇಟ್ಟಿಗೆ, ಗಾರೆಯ ಮೇಲೆ ಬಂಡವಾಳ ಹೂಡಬೇಕು. ಕೈಯಲ್ಲಿ, ಬ್ಯಾಂಕಿನಲ್ಲಿ ಇಡಬಾರದು.

ಅವರ ಮತ್ತು ಉಮಾಳ ಮಗಳು ತಾರಾ, ಬುದ್ಧಿವಂತೆ, ಲಕ್ಷಣವಾಗಿಯೂ ಇದ್ದಳು. ಮನೆಯಲ್ಲಿ ಮೂರು ಜನ, ಮೂರು ದಾರಿ! ರಾಯರು ಜಗ್ಗದ ಮನುಷ್ಯ, ತಾವು ಹೇಳಿದಂತೆಯೇ ಮನೆಯಲ್ಲಿ ಎಲ್ಲಾ ಆಗಬೇಕು, ಹೆಂಡತಿ ಮಗಳು ಹೇಳುವುದನ್ನು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ ಆತ. ಮನೆ ಹೇಗಿರಬೇಕು? ಮನೆಗೆ ಏನು ಸಾಮಾನು ತರಬೇಕು? ತಂದ ದಿನಸಿ ಮತ್ತಿತರ ಸಾಮಾನುಗಳು ಹೇಗೇಗೆ ಖರ್ಚಾದವು? ಮನೆಗೆ ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು? ಕರೆದರೆ ಅವತ್ತು ಏನು ಅಡುಗೆ ಮಾಡಬೇಕು ಎನ್ನುವುದರಿಂದ ಹಿಡಿದು ಮಗಳು ಏನು ಓದಬೇಕು, ಹೆಂಡತಿ ಕೆಲಸ ಮಾಡಬೇಕೆ ಬೇಡವೇ, ಮಾಡಿದರೆ ಯಾವ ಕೆಲಸ ಮಾಡಬೇಕು, ತಂದ ಹಣವನ್ನು ಹೇಗೆ ಖರ್ಚು ಮಾಡಬೇಕು ಇವೆಲ್ಲದರ ನಿಯಂತ್ರಣ ಅವರದ್ದು. ಒಂದು ಮಾತಿನಲ್ಲಿ ಹೇಳಬೇಕಾದರೆ ಉಳಿದವರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಯಾರಾದರೂ ಎದುರು ಮಾತಾಡಿದರೆ ಕೂಗಿ, ಕಿರುಚಿ ತಮ್ಮ ನಿರ್ಧಾರವನ್ನು ಜಾರಿಗೆ ತರುತ್ತಿದ್ದರು. ಇಂತಹ ಗಂಡನ ಕೈಹಿಡಿದ ಮೇಲೆ ತನ್ನ ಆಸೆ, ಆಕಾಂಶೆಗಳನ್ನು ಬದಿಗಿಟ್ಟು, ಇವರನ್ನು ಆದಷ್ಟೂ ಕಡಿಮೆ ಕೂಗಿಸುತ್ತಿದ್ದ ಹೆಂಡತಿ ಉಮಾ. ತಂದೆಯ ವರ್ತನೆಯಿಂದ ಬೇಸತ್ತಿದ್ದ ಮಗಳು ತಾರಾ.

ಮಗಳು ಶಾಲಾಭ್ಯಾಸ ಮುಗಿಸಿದಳು; ಒಳ್ಳೆಯ ಮಾರ್ಕ್ಸ್ ಬರಲಿಲ್ಲ. ರಾಯರು ಅವಳು ಲಾ ಓದಲಿ ಎಂದು ತೀರ್ಮಾನಿಸಿದ್ದರು. ಸಿಡ್ನಿಯಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಅವಳಿಗೆ ಲಾ ಓದಲು ಸೀಟು ಸಿಗುತ್ತಿರಲಿಲ್ಲ. ರಾಯರು ಅವಳನ್ನು ಬ್ರಿಸ್ಬೇನಿಗೆ ಕಳುಹಿಸಿ ಅಲ್ಲಿ ಓದಿಸುವ ತೀರ್ಮಾನ ತೆಗೆದುಕೊಂಡರು, "ತಾರಾ ಲಾ ಓದಲೇ ಬೇಕು. ಈಗ ಲಾಯರುಗಳಿಗೆ ಸಂಪಾದನೆ ಬಹಳ. ಮಿಕ್ಕ ಓದುಗಳು ಪ್ರಯೋಜನವಿಲ್ಲ". ಉಮಾಗೆ ಇದು ಒಪ್ಪಿಗೆ ಆಗಲಿಲ್ಲ.

"ಪಾಪ ಚಿಕ್ಕ ಹುಡುಗಿ ಅವಳು, ಅಲ್ಲಿ ಹೋಗಿ ಲಾ ಓದಿ ಏನು ಮಾಡಬೇಕು? ಇಲ್ಲೇ ಇದ್ದುಕೊಂಡು ಏನಾದರೂ ಓದಿ, ಒಳ್ಳೇ ಹುಡುಗನ್ನ ಮದುವೆ ಆಗಿ ಮಕ್ಕಳು ಸಂಸಾರ ಅಂತ ಇರಬೇಕಾದ ಹುಡುಗಿ ಅವಳು. ಯಾರಿಗೆ ಬೇಕು ಇವೆಲ್ಲಾ?" ಉಮಾ ಧೈರ್ಯ ತಾಳಿ ಮಾತಾಡಿದ್ದರು, ಆದರೆ ರಾಯರು ಕೇಳಿಸಿಕೊಳ್ಳಲಿಲ್ಲ. ಎಷ್ಟೋ ರೀತಿಯಲ್ಲಿ ತಾಯಿ ಹೇಳಿದ್ದು ಸರಿಯಾಗಿತ್ತು. ತಾರಾ ಹೃದಯದಲ್ಲಿ ಒಲವು ತುಂಬಿಕೊಂಡಿದ್ದ ಹುಡುಗಿ. ಯಾರ ಮಕ್ಕಳನ್ನು ನೋಡಿದರೂ ಎತ್ತಿಕೊಂಡು ಮುತ್ತಾಡುತ್ತಿದ್ದಳು. ಅವಳಿಗೆ ಖುಶಿಯಾಗಿ, ಯಾವ ಒತ್ತಡವೂ ಇಲ್ಲದೆ ಜೀವನ ನಡೆಸಬೇಕೆಂಬ ಆಸೆ. ಈ ಅಪ್ಪ ಬಿಡುವಂತಿಲ್ಲ. ಬ್ರಿಸ್ಬೇನಿಗೆ ಹೋಗುವ ಅವಕಾಶ ಸಿಕ್ಕ ತಕ್ಷಣ ಸಿದ್ಧವಾಗಿ ಒಪ್ಪಿಕೊಂಡಳು - "ಸದ್ಯ ಈ ಅಪ್ಪನಿಂದ ದೂರ ಇರಬಹುದು". ಮನಸ್ಸಿಲ್ಲದ ಮನಸ್ಸಿನಿಂದ ತಾಯಿ ಅಪ್ಪಣೆ ಕೊಟ್ಟಿದ್ದಳು, ಅವಳಾದರೂ ನಗು ನಗುತ್ತಾ ಇರಲಿ ಎಂಬ ಕಾರಣದಿಂದ.

ತಾರಾ ಓದಿ ಲಾ ಮುಗಿಸಿದಳು, ಬ್ರಿಸ್ಬೇನಿನಲ್ಲೇ ಒಳ್ಳೆಯ ಉದ್ಯೋಗವೂ ಲಭಿಸಿತು. ಎರಡು ವರ್ಷಗಳಾದ ಮೇಲೆ ಅವಳ ಕಂಪನಿಯೇ ಅವಳನ್ನು ಲಂಡನ್ನಿನ ಕೆಲಸಕ್ಕೆ ನೇಮಿಸಿತು. ಅವಳ ಸಂಬಳ, ಲಂಡನ್ನಿನಲ್ಲಿನ ಕಾರ್ಯ, ವಾತಾವರಣ ಇವುಗಳನ್ನು ಗಮನಿಸಿ ರಾಯರೂ ಅವಳು ಅಲ್ಲಿಗೇ ಹೋಗಲಿ ಎಂದು ನಿರ್ಧರಿಸಿದರು. ಹೊರಟು ನಿಂತಳು ತಾರಾ.

ರಾಯರು ಮತ್ತೊಂದು ನಿರ್ಧಾರಕ್ಕೆ ಬಂದರು. ತಾರಾ ಲಂಡನ್ನಿನಲ್ಲಿ ತನ್ನ ಉಪಯೋಗಕ್ಕೆ ಎಷ್ಟು ಹಣ ಇಟ್ಟುಕೊಂಡರೂ ಪರವಾಗಿಲ್ಲ. ಆದರೆ ಪ್ರತಿ ತಿಂಗಳೂ ಸುಮಾರು ಎರಡು ಅಥವಾ ಮೂರು ಸಾವಿರ ಪೌಂಡುಗಳನ್ನು ಬ್ಯಾಂಕ್ ಟ್ರಾನ್ಸ್‌ಫರ್ ಮೂಲಕ ತಮಗೆ ಕಳುಹಿಸಬೇಕು. ಹೀಗೆ ಸಂಗ್ರಹವಾದ ಹಣದಿಂದ ರಾಯರು ಅವಳ ಹೆಸರಿನಲ್ಲಿ ಮನೆಯೊಂದನ್ನು ಖರೀದಿಸುವುದು. ಈ ವಿಚಾರದಿಂದ ತಾಯಿಗೆ ಸ್ವಲ್ಪವೂ ಸಮಾಧಾನವಾಗಿರಲಿಲ್ಲ.

"ಇಲ್ಲೇ ಇದ್ದು ಯಾರನ್ನಾದರೂ ಮದುವೆ ಮಾಡಿಕೊಂಡು ಸಂಸಾರ ಮಾಡಿದರೆ ಆಗದೇ? ಏಕೆ ಹೀಗೆ ಬಾಡಿಗೆ ಎತ್ತಿನ ತರಹ ದುಡಿಯಬೇಕು? ಆಗಲೇ ಇಪ್ಪತ್ತೈದು ವರ್ಷವೂ ಆಯಿತು. ಮದುವೆ ಯೋಚನೆ ಮಾಡ ಬೇಡವೇ?"

"ಮದುವೆ ಹೇಗೋ ಆಗಿಹೋಗುತ್ತೆ. ಆದರೆ ಸಂಪಾದಿಸಿದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಬಂದಿರೋ ಅವಕಾಶ ಕಳೆದುಕೊಳ್ಳಬಾರದು!" ಇದು ರಾಯರ ವಾದ.

ಲಂಡನ್ನಿಗೆ ಹೋಗಿ ನೆಲೆಸಿದಳು ತಾರಾ. ಎಲ್ಲಾ ಹಿತಕರವಾಗಿತ್ತು. ಬೇಕಾಗಿದ್ದ ಸ್ವಾತಂತ್ರ್ಯ ದೊರೆತಿತ್ತು. ಎರಡು, ಮೂರು ವರ್ಷಗಳವರೆಗೂ ತಾರಾ ಹಣ ಕಳುಹಿಸುತ್ತಾ ಇದ್ದಳು. ಸಿಡ್ನಿಯತ್ತ ಒಮ್ಮೆಯೂ ಬರಲಿಲ್ಲ. ಬದಲಾಗಿ ಅಮೆರಿಕಾ, ಯೂರೋಪ್ ಪ್ರವಾಸಗಳನ್ನು ಕೈಗೊಂಡಳು, "ದುಡ್ಡು ಪೋಲಾಯಿತು" ಎಂದು ರಾಯರು ಗೊಣಗಿದ್ದೇ ಗೊಣಗಿದ್ದು. ರಾಯರು ಪ್ರತಿ ವಾರವೂ ಸಿಡ್ನಿಯಲ್ಲಿ ಮೇಲೇಳುತ್ತಿರುವ ಹೊಸ ಮನೆ, ಅಪಾರ್ಟ್‌ಮೆಂಟುಗಳತ್ತ ಹೋಗಿ ಬರುತ್ತಿದ್ದರು. ಬಾಲ್‌ಮೈನ್ ಎಂಬಲ್ಲಿಯ "ಪನೋರಮಾ ಪೆಂಟ್ ಹೌಸ್" ಬಹಳ ರಮಣೀಯ ಎನಿಸಿತು. ಇನ್ನೂ ಪೂರ್ತಿ ಕಟ್ಟಿ ಆಗಿರಲಿಲ್ಲ, ಆದರೆ ಇಷ್ಟವಿದ್ದವರು ಠೇವಣಿ ಇಡಬಹುದಾಗಿತ್ತು - ಎಪ್ಪತ್ತೈದು ಸಾವಿರ ಡಾಲರ್. ಈಗಾಗಲೇ ತಾರಾ ಅವರಿಗೆ ಐವತ್ತು ಸಾವಿರ ಕಳುಹಿಸಿದ್ದಳು. ಉಳಿದ ಹಣ ಬಂದು ಬಿಟ್ಟರೆ ಠೇವಣಿ ಇಡಬಹುದು ಎಂದು ರಾಯರು ಕಾದರು.

ಪರಿಸ್ಥಿತಿ ಬದಲಾಗಿತ್ತು. ಹಿಂದೆ ಪ್ರತಿ ತಿಂಗಳೂ ಚಾಚೂ ತಪ್ಪದೆ ಹಣ ಬರುತ್ತಿತ್ತು, ನಂತರ ಅದು ಅರ್ಧಕ್ಕೆ ಇಳಿಯಿತು, ಈಗ ಇಲ್ಲವೇ ಇಲ್ಲ! ರಾಯರು ಫೋನ್ ಮಾಡಿದರು, ಮಗಳು ಫೋನ್ ತೆಗೆದುಕೊಳ್ಳುತ್ತಿರಲಿಲ್ಲ. ಈ ಮೈಲ್ ಕಳುಹಿಸಿದರು, ಒಂದಲ್ಲ, ಎರಡಲ್ಲ, ಹತ್ತಾರು. ಯಾವುದಕ್ಕೂ ಉತ್ತರವಿಲ್ಲ. "ಏನಾಗಿದೆ ಇವಳಿಗೆ. ಇವಳೇನು ದುಡ್ಡು ಕಳಿಸಿ ನನ್ನ ಸಾಕಬೇಕಾಗಿಲ್ಲ. ಅವಳಿಗೇ ಇರಲಿ ಅಂತ ಅಲ್ಲವಾ ನಾನು ಇಷ್ಟು ಕಷ್ಟ ಪಡ್ತಾ ಇರೋದು?"

ರಾಯರ ಊಹೆ ತಪ್ಪಾಗಿರಲಿಲ್ಲ. ತಾರಾ ಬೇಕಂತಲೇ ಅವರಿಗೆ ಈ ಮೈಲ್ ಕಳುಹಿಸಿತ್ತಿರಲಿಲ್ಲ, ಫೋನ್ ಮಾಡುತ್ತಿರಲಿಲ್ಲ. ಆದರೆ ಅವಳು ತಾಯೊಡನೆ ವ್ಯವಹರಿಸುವುದಕ್ಕೇ ಬೆರೆ ಈಮೈಲ್, ಬೇರೆ ಫೋನ್ ಇಟ್ಟುಕೊಂಡಿದ್ದಳು. ತಂದೆಗೆ ಇವುಗಳ ಅರಿವಿಲ್ಲ. ಗಂಡ ಮನೆಯಲ್ಲಿ ಇಲ್ಲದಿರುವಾಗ ಉಮಾ ಮಗಳೊಡನೆ ಸಾಕಷ್ಟು ಮಾತಾಡುತ್ತಿದ್ದರು, ಈ ಮೈಲ್ ಪ್ರವಾಹ ಅವ್ಯಾಹತವಾಗಿತ್ತು. "ದುಡ್ಡು ಕಳಿಸೋದೂ ಬೇಡ, ಕಾಸು ಕಳಿಸೋದೂ ಬೇಡ, ಬೇಗ ಯಾರನ್ನಾದರೂ ನೋಡಿಕೊಂಡು ಮದುವೆ ಆಗು" ಎಂಬ ಸಲಹೆಯೂ ಬಂದಿತ್ತು.

ಉಮಾಗೆ ಅಂದು ಅತ್ಯಂತ ಆಶ್ಚರ್ಯ ಮತ್ತು ಹೆದರಿಕೆ ಒಟ್ಟಿಗೇ ಆದವು, ಮಗಳಿಂದ ಫೋನ್ ಕರೆ "ಅಮ್ಮಾ, ಎರಡು ತಿಂಗಳ ಮಟ್ಟಿಗಾದರೂ ಇಲ್ಲಿಗೆ ಬಾ. ಒಬ್ಬಳೇ ಇದ್ದು ಬೇಜಾರಾಗಿದೆ." ಬಗೆ ಬಗೆದು ಕೇಳಿದರೂ ಹೆಚ್ಚು ಹೇಳಲಿಲ್ಲ. ತಾಯಿಗೆ ಗಾಬರಿಯೇ ಆಯಿತು. "ಎಂಥ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೋ ಏನೋ!" ಒಮ್ಮೆಗೇ ಇಂಟರ್‌ನೆಟ್‌ನಲ್ಲಿ ಟಿಕೆಟ್ ಕೊಂಡರು, ಬರುವ ಶನಿವಾರಕ್ಕೇ ಸೀಟು ಸಿಕ್ಕಿತು. ರಾಯರಿಗೆ ವರ್ತಮಾನ ಹೇಳಿ ಆಯಿತು. "ಏನೋ ತರ್ಲೆ ಮಾಡಿಕೊಂಡಿದ್ದಾಳೆ, ಅದಕ್ಕೇ ಕೆಲಸದಲ್ಲೂ ಇಲ್ಲ, ನನಗೂ ಡಿಪಾಸಿಟ್ ಹಣ ಕಳಿಸಿಲ್ಲ. ಕೂಡಲೇ ಹೋಗಿ ಬಾ. ಅವಳು ಕಷ್ಟದಲ್ಲಿ ಇದ್ದರೆ ಜೊತೆಗೇ ಕರೆದುಕೊಂಡು ಬಂದು ಬಿಡು." [ಬಾಣಂತನ : ಕಥೆಯ ಎರಡನೇ ಭಾಗ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada short story Banantana by Sydney Srinivas in Australia. The happiness woman gets from motherhood cannot be explained in words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more