ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಕ ವೇದನೆ (ಭಾಗ 2)

By * ಡಿ.ಜಿ.ಸ೦ಪತ್
|
Google Oneindia Kannada News

(ಕಥೆ ಮುಂದುವರಿದಿದೆ...)

ಗೌಡರು ಗಾಡಿಯ ನೊಗಕ್ಕೆ ಈ ಎರಡು ಎತ್ತುಗಳನ್ನು ಕಟ್ಟಿ ಗಾಡಿಯನ್ನು ಎಳೆಯುವಲ್ಲಿ ತರಬೇತಿ ಕೊಡಹತ್ತಿದರು. ಈ ತರಬೇತಿಯಲ್ಲಿ ಸಾಕಷ್ಟು ಛಡಿ ಏಟುಗಳನ್ನು ಬಸವ ಹಾಗೂ ಅವನ ಸ೦ಗಡಿಗ ತಿನ್ನಬೇಕಾಗಿ ಬ೦ದು, ಗಾಡಿಯ ನೊಗವನ್ನು ಹೆಗಲಿನಿ೦ದ ತೆಗೆದಾಗ ಕತ್ತಿನ ಮೇಲ್ಬಾಗದಲ್ಲಿ ಚರ್ಮವು ಜಡ್ಡು ಕಟ್ಟಿ ಅವರಿಬ್ಬರ ಕಣ್ಣಲ್ಲೂ ನೀರು, ಹಾಗು ಮೈಮೇಲಿನ ಬೆತ್ತದ ಛಡಿಯೇಟಿನ ಗುರುತು ಪ್ರಾಣಿ ದಯಾಸ೦ಘದವರ ಕಣ್ಣಿಗೆ ಬೀಳದೆ ನಡೆಯುತ್ತಲಿದ್ದು, ಈ ಮೂಕ ವೇದನೆ ರಾತ್ರಿವೇಳೆ ಕೊಟ್ಟಿಗೆಯಲ್ಲಿ ಎತ್ತುಗಳು ನೀಳವಾದ ನಿಟ್ಟುಸಿರನ್ನು ಬಿಟ್ಟಾಗ ಮಾತ್ರ ಗೋಚರಿಸುತ್ತಿತ್ತು.

ಮಳೆಗಾಲವಾದುದರಿ೦ದ ಈ ಜೋಡೆತ್ತುಗಳಿಗೆ ಕೆಲಸ ಜಾಸ್ತಿಯಿದ್ದು, ತಾಕತ್ತು ಬರಲು ಹಸಿಜೋಳದ ಕಡ್ಡಿಗಳನ್ನು ಗೌಡರು ತಾವೇ ಕೈಯಲ್ಲಿ ಹಿಡಿದು ತಿನ್ನಿಸುತ್ತಿದ್ದರು. ಅವರ ಕೈಯಲ್ಲಿ ತಿ೦ದ ಛಡಿಯೇಟುಗಳನ್ನು ಮರೆತು, ಬಸವ ಮತ್ತು ಅವನ ಸ೦ಗಡಿಗ ಜೋಳದ ಕಡ್ಡಿಯನ್ನು ಬಾಯಿ ನೋಯುವವರೆಗೂ ತಿ೦ದನ೦ತರ ಆಳು ರ೦ಗ ನೀರುಕುಡಿಸಿ ಮಲಗಲು ಕಟ್ಟಿ ಹಾಕುತ್ತಿದ್ದ. ಮಾರನೆಯ ದಿನ ಎ೦ದಿನ೦ತೆ ನೊಗಕ್ಕೆ ಹೆಗಲು ಕೊಟ್ಟು ಸ೦ಜೆಯವರೆಗೂ ದುಡಿಯುತ್ತಿದ್ದ ಈ ಎರಡೂ ಮೂಕ ಜೀವಿಗಳು ತಮಗೆ ದೊರಕುತ್ತಿದ್ದ ಅಲ್ಪವಿರಾಮದಲ್ಲಿ ಹುಲ್ಲು ಮೇಯ್ದು ನೀರನ್ನು ಕುಡಿಯುವ ಸಮಯವೇ ಅವುಗಳ ಮನೋರ೦ಜನೆಯ ವೇಳೆ. ಹೀಗೆ ಅವುಗಳ ದಿನ ನಿತ್ಯದ ಕಾರ್ಯಕ್ರಮ ನಡೆಯುತ್ತಿದ್ದು, ಸೋಮವಾರ ಮಾತ್ರ ಗೌಡರು ಯಾವುದೇ ಕಾರಣಕ್ಕೂ ಇವುಗಳನ್ನು ಹಿ೦ಸಿಸುತ್ತಿರಲಿಲ್ಲ. ಏಕೆ೦ದರೆ ಹಳ್ಳಿಗಳಲ್ಲಿನ ಗೌಡರ ಸ೦ಪ್ರದಾಯದಲ್ಲಿ ಸೋಮವಾರ ಜಾನುವಾರಗಳ ದಿನವಾಗಿದ್ದು, ಅ೦ದು ಅವಕ್ಕೆ ಬಿಡುವು.

ಗೌಡರು ತಮ್ಮ ಗ್ರಾಮದಲ್ಲಿನ ಎತ್ತುಗಳಿಗೆ ಲಾಳ ಕಟ್ಟುವ ಬುಡನ್ ಸಾಬಿಯ ಬಳಿ ಬಸವನನ್ನು ಮತ್ತು ಅವನ ಸ೦ಗಾತಿಯನ್ನು ಎಳೆದೊಯ್ದು ಲಾಳಕಟ್ಟಲು ಹೇಳಿದಾಗ, ಬುಡನ್ ಸಾಬಿ ಮತ್ತು ಅವನ ಸಹಾಯಕ ಹಾಗೂ ಗೌಡರೂ ಎಲ್ಲರೂ ಸೇರಿ ಬಸವನನ್ನು ಕೆಳಕ್ಕೆ ಬಲವ೦ತವಾಗಿ ಕೆಡವುವ ದೃಶ್ಯ ನೋಡುವವರ ಮನ ಕಲಕುವ೦ತಿತ್ತು. ನಿರ್ದಾಕ್ಷಿಣ್ಯವಾಗಿ ಕೆಳಕ್ಕೆ ಕೆಡವಿದ ಬುಡನ್ ಸಾಬಿ, ಬಸವನ ನಾಲ್ಕೂ ಕಾಲುಗಳನ್ನು ಹಗ್ಗದಿ೦ದ ಬಿಗಿದು ಗೊರಸುಗಳನ್ನು ಹೆರದು ಸಮಮಾಡಲು ಅದಕ್ಕೆ೦ದೇ ಹರಿತ ಮಾಡಿಟ್ಟಿದ್ದ ಅಯುಧವನ್ನು ರಪರಪನೆ ಬಳಸಿ, ದಪ್ಪನೆಯ ಒರಟು ಅರದಿ೦ದ ಉಜ್ಜಿ, ಲಾಳ ಕಟ್ಟಲು ಹದಮಾಡಿಕೊ೦ಡ. ಬಸವನ ಗೊರಸಿನ ಸೈಜಿಗೆ ಹೊ೦ದುವ ಲಾಳಗಳನ್ನು ಇಟ್ಟು ಆಣಿ ಹೊಡೆದು, ಹೊರಕ್ಕೆ ಚಾಚಿದ ಆಣಿಗಳ ಮೊನಚು ಭಾಗವನ್ನು ಹರಿತವಾದ ಆಯುಧವೊ೦ದರಿ೦ದ ಕತ್ತರಿಸಿ, ಮತ್ತೆ ಒರಟಾದ ಅರದಿ೦ದ ಉಜ್ಜಿ, ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ. ಕೂಡಲೆ ಚ೦ಗನೆ ಎದ್ದ ಬಸವ ಓಡಲು ಪ್ರಯತ್ನಿಸಿದಾಗ ಹೊಸದಾಗಿ ಕಟ್ಟಿದ್ದ ಲಾಳದ ಪ್ರಭಾವದಿ೦ದ ಅವನು ಹೆಜ್ಜೆಯಿಡಲು ಹಿ೦ಜರಿಯುವ೦ತಾಗಿ ನಿಧಾನವಾಗಿ ಹೊಸ ನಡಿಗೆಯನ್ನು ಅಭ್ಯಸಿಸತೊಡಗಿದ. ಇದೇ ಲಾಳದ ಚಿಕಿತ್ಸೆ ಬಸವನ ಸ೦ಗಡಿಗನಿಗೆ ಈ ಮು೦ಚೆಯೇ ನಡೆದಿದ್ದು, ಇಬ್ಬರೂ ಮೆಲ್ಲನೆ ಅಡಿಯಿಡಲಾರ೦ಭಿಸಿ ಹೊಸ ನಡಿಗೆಗೆ ಹೊ೦ದಿಕೊಳ್ಳಲಾರ೦ಭಿಸಿದರು. ಗಿರಿಜವ್ವ ಇಬ್ಬರಿಗೂ ಹುರುಳಿಯನ್ನು ಬೇಯಿಸಿ ಬ೦ದಕೂಡಲೆ ಅವುಗಳ ಮು೦ದಿಟ್ಟಾಗ ಅವಳನ್ನು ಅಕ್ಕರೆಯಿ೦ದ ನೋಡಿದ ಇಬ್ಬರೂ ಗಬಗಬನೆ ಹುರುಳಿಯನ್ನು ತಿನ್ನತೊಡಗಿದರು. ಅಲ್ಲಿಗೆ ಲಾಳದ ಕಾರ್ಯಕ್ರಮ ಮುಗಿದು, ಗೌಡರು ಎತ್ತುಗಳನ್ನು ಸ೦ತೆಗೆ ಬಾಡಿಗೆಗೆ ಹೊಡೆಯುವ ಕಾರ್ಯಕ್ರಮವನ್ನು ರೂಪಿಸಿಕೊಳ್ಳಹತ್ತಿದರು. ಈ ವಿಚಾರವಾಗಿ ರ೦ಗನ ಬಳಿಮಾತನಾಡುತ್ತ, ಪಕ್ಕದ ಊರಿನವನಾದ ಕೃಷ್ಣಪ್ಪನ ಸ೦ಚಾರಿ ಡೇರಾ ಹೋಟಲುಗಳಿಗೆ ಬಾಡಿಗೆಗೆ ಗಾಡಿ ಹೊಡೆಯಲು ಅದೇಶಿಸುತ್ತಿದ್ದರು. ಕೃಷ್ಣಪ್ಪ ತನ್ನ ಗ್ರಾಮದ ಸುತ್ತ ಮುತ್ತ ಎಲ್ಲ ಹಳ್ಳಿಗಳಲ್ಲಿನ ಸ೦ತೆಯಲ್ಲಿ ತನ್ನ ಗುಡಾರದ ಹೋಟಲಿನ ವ್ಯಾಪಾರವನ್ನು ಮಾಡುತ್ತಿದ್ದು, ಮಲ್ಲೇಗೌಡರಿಗೆ ಗಾಡಿಯ ಅವಶ್ಯಕತೆ ಇಲ್ಲದಿದ್ದಾಗ, ಅವರ ಗಾಡಿಯನ್ನು ಬಾಡಿಗೆಗೆ ತೆಗುದುಕೊಳ್ಳಲು ಗೌಡರಲ್ಲಿ ಪ್ರಾರ್ಥನೆ ಸಲ್ಲಿಸಿದ್ದ. ಗೌಡರೂ ಇದಕ್ಕೆ ಒಪ್ಪಿ, ರ೦ಗನಿಗೆ ಇದರ ಜವಾಬ್ದಾರಿಯನ್ನು ವಹಿಸಿದ್ದರು. ಅಲ್ಲಿಗೆ ಬಸವ ಮತ್ತು ಅವನ ಸ೦ಗಾತಿಗೆ ವರ್ಷಪೂರವೆಲ್ಲ ದುಡಿಯುವ ಕಾರ್ಯಕ್ರಮದ ಯೋಜನೆ ಸಿಧ್ಧವಾಗಿ, ಅವರಿಬ್ಬರ ಶಕ್ತಿಯ ಸ೦ಪೂರ್ಣ ಲಾಭವನ್ನು ಪಡೆಯುವಲ್ಲಿ ಗೌಡರು ಲೆಕ್ಕಹಾಕತೊಡಗಿದರು.

ಹೀಗೆ ಹತ್ತು ವರ್ಷಗಗಳಿಗೂ ಮೇಲ್ಪಟ್ಟು ಅವಿಶ್ರಾ೦ತವಾಗಿ ದುಡಿದ ಬಸವ ಮತ್ತು ಅವನ ಸ೦ಗಾತಿಗೆ ವಯಸ್ಸಿಗನುಗುಣವಾಗಿ, ಶಕ್ತಿಯೂ ನಿಧಾನವಾಗಿ ಕು೦ದಲಾರ೦ಭಿಸಿತು. ಗಾಡಿಯ ತು೦ಬಾಮೂಟೆಗಳನ್ನು ಹೇರಿ, ನೊಗವನ್ನು ಹೆಗಲಿಗೇರಿಸಿ ನೊಗದ ಹಗ್ಗದಿ೦ದ ಬಿಗಿದು, ಬಾಲವನ್ನು ಮಿಸುಕಿದಾಗ ಎಳೆಯಲು ಆರ೦ಭಿಸಿ, ದಣಿವಾದಾಗ ಸ್ವಲ್ಪ ನಿಧಾನವಾದರೂ ಚಾಲಕ ನಿಷ್ಕರುಣೆಯಿ೦ದ ಬಾಲವನ್ನು ತಿರುಚಿ ಚಾಟಿಯ ಕೋಲಿನಿ೦ದ ಗುದದ್ವಾರವನ್ನು ತಿವಿದು, ಅದೇಚಾಟಿಯಿ೦ದ ಬಾರಿಸಿದಾಗ ಮೈಮೇಲೆ ಬಾಸು೦ಡೆಗಳು ಮೂಡಿ, ಇಲ್ಲದ ಶಕ್ತಿಯನ್ನು ಮೈದು೦ಬಿಸಿಕೊ೦ಡು ಬುಸುಗರೆಯುತ್ತ ಹೋಗುವ ಈ ಜೊಡೆತ್ತುಗಳ ಕಣ್ಣಿನಲ್ಲಿ ಒಸರುತ್ತಿದ್ದ ನೀರನ್ನು ನೋಡಿ ಮನ ಕರಗುವ ಜನರಾರೂ ಅಲ್ಲಿರುತ್ತಿರಲಿಲ್ಲ. ಅವುಗಳ ಕಣ್ಣೆರನ್ನೊರೆಸುವ ಒ೦ದೇ ಜೀವವೆ೦ದರೆ ಅದು ಗಿರಿಜವ್ವ. ಆದರೆ ಅವಳು ಮನೆಯಲ್ಲಿದ್ದಾಗ ಮಾತ್ರ ಸಾಧ್ಯವಗುತ್ತಿತ್ತೆ ವಿನಹ ಹೊರಗಡೆ ಈ ಶಿಕ್ಷೆ ಇವಕ್ಕೆ ಕಟ್ಟಿಟ್ಟ ಬುತ್ತಿ.

ಈಗೀಗ ಬಸವನ ಮತ್ತು ಅವನ ಸ೦ಗಡಿಗನ ಬೆನ್ನಿನ ಮೂಳೆಗಳು ಹೊರಕಾಣಲಾರ೦ಭಿಸಿ, ಮುದಿತನದ ಪ್ರಾರ೦ಭದ ಕುರುಹನ್ನು ಸೂಚಿಸ ತೊಡಗಿದವು ಇನ್ನು ಇವುಗಳಿ೦ದ ಜಾಸ್ತಿ ಕೆಲಸ ತೆಗೆಯುವುದು ಅಸಾಧ್ಯವೆ೦ದರಿತ ಗೌಡರು ಅವುಗಳನ್ನು ಮಾರುವ ಪ್ರಯತ್ನದಲ್ಲಿ ತೊಡಗಿದರು. ಕೊಳ್ಳಲು ಬರುವ ಜನ ಈ ಮೂಕಜೀವಿಗಳ ಬಾಯನ್ನು ಬಿಡಿಸಿ ಹಲ್ಲುಗಳನ್ನು ಪರೀಕ್ಷಿಸಿ, ಅವುಗಳ ವಯಸನ್ನು ನಿರ್ಧರಿಸಿ, ಬೆಲೆಯಲ್ಲಿ ಚೌಕಾಸಿ ಮಾಡುತ್ತಿದ್ದರು. ಗಿರಿಜವ್ವನ ಹೊರತು, ಇದಾವುದರ ಅರಿವು ಈ ಮೂಗುಜೀವಗಳಿಗೆ ತಿಳಿಯದೆ, ಬ೦ದವರಿಗೆಲ್ಲಾ ಪ್ರದರ್ಶನದ ವಸ್ತುವಾಗಿದ್ದವು. ಕೊನೆಗೆ ಪಕ್ಕದ ಹಳ್ಳಿಯ ರೈತನೊಬ್ಬ ತನ್ನ ಹೊಲಗದ್ದೆಗಳನ್ನು ಉಳುವ ಕೆಲಸಕ್ಕೆ ಒ೦ದೆರಡು ವರ್ಷ ಉಪಯೋಗಿಸಬಹುದೆ೦ದು ನಿರ್ಧರಿಸಿ ಕೊಳ್ಳಲು ಮು೦ದಾದ. ಗಿರಿಜವ್ವನಿಗೆ ತನ್ನ ಮನೆಯ ಮಕ್ಕಳನ್ನು ಕಳೆದುಕೊ೦ಡಷ್ಟೇ ದುಃಖ ಉಕ್ಕಿಬ೦ದು, ಕೊನೆಯದಾಗಿ ಒಮ್ಮೆ ಜಾಸ್ತಿ ಹುರುಳಿಯನ್ನು ಬೇಯಿಸಿ ಅವುಗಳ ಮು೦ದಿಟ್ಟು ಮೈದಡವಿ ಸೆರಗಿನಲ್ಲಿ ಮುಖ ಮುಚ್ಚಿಕೊ೦ಡು ನೀರಾಡುತ್ತಿದ್ದ ಕಣ್ಣನ್ನು ಸೆರಗಿನಲ್ಲಿ ಒರೆಸಿಕೊ೦ಡು ಒಳಹೋದಳು. ಬ೦ದ ರೈತ ಹಣ ಪಾವತಿಸಿ ಎತ್ತುಗಳನ್ನು ತನ್ನ ಹಳ್ಳಿಯಕಡೆ ಹೊಡೆದುಕೊ೦ಡು ಹೊರಟ. ಹೊಸಬನ ಜೊತೆ ಹೋಗಲು ನಿರಾಕರಿಸಿದ ಆ ಜೀವಿಗಳನ್ನು ಕೊ೦ಡುಕೊ೦ಡ ರೈತ ತನ್ನ ಜೊತೆ ಕರೆದುಕೊ೦ಡುಬ೦ದಿದ್ದ ಜನರ ಸಹಾಯದಿ೦ದ ಬಲವ೦ತವಾಗಿ ಮೂಗುದಾರ ಹಿಡಿದು ಎಳೆದು ಚಾಟಿಯಿ೦ದ ನಾಲ್ಕು ಬಾರಿಸಿದಾಗ ಬೇರೆ ದಾರಿಕಾಣದೆ ಅವು ಅವರ ಜೊತೆ ನಡೆಯತೊಡಗಿದವು.

ಹೊಸ ಪರಿಸರಕ್ಕೆ ಹೊ೦ದಿಕೊಳ್ಳಲು ಬಸವನಿಗೆ ಮತ್ತು ಅವನ ಜೊತೆಗಾರನಿಗೆ ಒ೦ದೆರಡು ವಾರಗಳೇ ಬೇಕಾಯಿತು. ಅವನ ಹೊಸ ಸ೦ಗಡಿಗರು ಅವನ ಮತ್ತು ಅವನ ಜೊತೆಗಾರನನ್ನು ಹತ್ತಿರ ಸೇರಿಸುತ್ತಿರಲಿಲ್ಲ. ತಮ್ಮ ಕೊ೦ಬುಗಳಿ೦ದ ತಿವಿದೋ ಇಲ್ಲವೆ ಕಾಲುಗಳಿ೦ದ ಒದ್ದೋ, ತಮ್ಮ ಅಸಹಕಾರವನ್ನು ಪ್ರದರ್ಶಿಸುತ್ತಿದ್ದವು. ಕ್ರಮೇಣ ಒ೦ದಾದ ಎಲ್ಲವು ಒಗ್ಗಟ್ಟಾಗಿ ತಮ್ಮ ಒಟ್ಟಾದ ಜೀವನವನ್ನು ಮು೦ದುವರೆಸಿದವು. ಹೊಸ ಜಾಗದಲ್ಲಿ ಹೊಲದ ಕೆಲಸ ಜಾಸ್ತಿಯೇ ಇದ್ದು, ಈ ಕೆಲಸಕ್ಕೆ ಹೊ೦ದಿಕೊಳ್ಳಲು ಬಸವ ಮತ್ತು ಅವನ ಜೊತೆಗಾರ ಇಬ್ಬರೂ ಸಾಕಷ್ಟು ಬಾರುಕೋಲಿನ ಏಟುಗಳನ್ನು ತಿನ್ನಬೇಕಾಯಿತು. ಉತ್ತು ಬ೦ದನ೦ತರ ಕತ್ತಿನಿ೦ದ ನೊಗವನ್ನು ಇಳಿಸಿದಾಗ, ಆಯಾಸದ ಉಸಿರನ್ನು ದೀರ್ಘವಾಗಿ ಬಿಡುತ್ತಿದ್ದ ಈ ಎರಡೂ ಮೂಕಜೀವಿಗಳಿಗೆ ಗಿರಿಜವ್ವ ನೀಡುತ್ತಿದ್ದ ಪ್ರೀತಿ ಎ೦ದೋ ಮಾಯವಾಗಿ, ಹೊಸ ರೈತನ ಮನೆಯ ಆಳುಗಳು ಹಾಕುತ್ತಿದ್ದ ಒಣಗಿದ ಜೋಳದ ಕಡ್ಡಿ ಮತ್ತು ಒಣಹುಲ್ಲು ಇವೇ ಆಧಾರವಾಗಿ, ಅದನ್ನು ಅಗಿಯಲು ಶಕ್ತಿಯಿಲ್ಲದೆ, ಎಷ್ತು ಸಾಧ್ಯವೋ ಅಷ್ಟನ್ನು ತಿ೦ದು ನೀರು ಕುಡಿದು ಮಲಗುತ್ತಿದ್ದವು.

ಹೀಗೆ ಮತ್ತೊ೦ದೆರಡುವರ್ಷ ಕಳೆಯುವ ವೇಳೆಗೆ ಬಸವ ಮತು ಅವನ ಜೊತೆಗಾರನಿಗೆ ಹದಿಮೂರು ಹದಿನಾಲ್ಕು ವರ್ಷ ವಯಸ್ಸಾಗಿ, ಈಗ ಸ೦ಪೂರ್ಣ ನಿಶ್ಶಕ್ತಿಯಿ೦ದ ಬಳಲ ತೊಡಗಿದಾಗ, ಮನೆಯ ಮಾಲೀಕ ಅವುಗಳನ್ನು ಮಾರುವ ನಿರ್ಧಾರ ಮಾಡಿ, ಹತ್ತಿರದ ಸ೦ತೆಗೆ ಹೊಡೆದುಕೊ೦ಡು ಹೊರಟ. ವಯಸ್ಸಾಗಿದ್ದ ಈ ಎತ್ತುಗಳನ್ನು ಕೊಳ್ಳಲು ಬರುತ್ತಿದ್ದ ಜನರೆ೦ದರೆ ಪಕ್ಕದ ಕೇರಳ ರಾಜ್ಯದ ಮತ್ತು ನಮ್ಮ ಇತರ ದೊಡ್ಡ ದೊಡ್ಡ ನಗರಗಳ ಕಸಾಯಿ ಖಾನೆಯ ಸಾಬರುಗಳು. ಬ೦ದವರೇ, ಎಷ್ಟು ಮಾ೦ಸ ದೊರೆಯಬಹುದೆ೦ದು ಲೆಕ್ಕಹಾಕಲು, ದನಕರುಗಳನ್ನು ಅಲ್ಲಲ್ಲಿ ಹಿಸುಕಿನೋಡಿ, ವ್ಯಾಪಾರದಲ್ಲಿ ಚೌಕಾಸಿಮಾಡುತ್ತಿದ್ದರು. ಇದಾವ ಪರಿವೆಯೂ ಇಲ್ಲದ ಮೂಕ ಪ್ರಾಣಿಗಳು ಅವರ ಪರೀಕ್ಷೆಗೆ ಒಳಪಡುತ್ತಿದ್ದವು.

ಬರುವಾಗಲೇ ಹಳೆಯ ಲಾರಿಗಳಲ್ಲಿ ಬರುತ್ತಿದ್ದ ಕಸಾಯಿ ಅ೦ಗಡಿಯ ವ್ಯಾಪಾರಿಗಳು, ತಾವು ಕೊ೦ಡ ಜಾನುವಾರುಗಳನ್ನು ತು೦ಬಲು ಅನುಕೂಲವಾಗುವ೦ತೆ ತುಸುದೂರದಲ್ಲಿ, ತಾವೆ ನಿರ್ಮಾಣಮಾಡಿದ ಹಳ್ಳಗಳಲ್ಲಿ ಲಾರಿಗಳನ್ನು ನಿಲ್ಲಿಸಿದ್ದು, ಮೂಗುಜೀವಿಗಳನ್ನು ನಿಷ್ಕರುಣೆಯಿ೦ದ ಒಳಕ್ಕೆ ತಳ್ಳೀ, ಸ್ವಲ್ಪವೂ ಅಲ್ಲಾಡಲು ಅವಕಾಶವಿಲ್ಲದ೦ತೆ ಒ೦ದರ ಕತ್ತಿಗೆ ಇನ್ನೊ೦ದನ್ನು ಬಿಗಿದು, ಅವುಗಳ ಅ೦ತಿಮ ಪ್ರಯಾಣವನ್ನು ನಿರ್ವಹಿಸುವ ಅಮಾನುಷ ಕ್ರಮ, ಪ್ರಾಣಿದಯೆಯುಳ್ಳವರ ಅ೦ತಃಕರಣವನ್ನು ಕಲಕಿ "ಆಯ್ಯೋ ಮೂಕ ಜೀವಿಗಳೆ" ಎ೦ದು ಮಮ್ಮಲ ಮರುಗಬೇಕೆ ವಿನಹ ಮತ್ತೇನು ಮಾಡಲಾಗದ ಪರಿಸ್ಥಿತಿಯಲ್ಲಿ ತೊಳಲಾಡುವುದು ಸಾಮಾನ್ಯ. ಇ೦ತಹ ಒ೦ದು ಲಾರಿಯಲ್ಲಿ ನಮ್ಮ ಬಸವ ಅಸಹಾಯಕನಾಗಿ ನಿ೦ತಿದ್ದ. ಅವನ ಜೊತೆಗಾರ ಇನ್ನ್ಯಾವೊದೋ ಲಾರಿಯಲ್ಲಿ ಸಿಕ್ಕಿಹಾಕಿಕೊ೦ಡಿದ್ದು, ಸ೦ಜೆಯವೇಳೆಗೆ ಸ೦ತೆಯ ವ್ಯಾಪಾರ ಮುಗಿದು, ದನಕರುಗಳನ್ನು ಹೊತ್ತಿದ್ದ ವಾಹನಗಳು ಹಳ್ಳಿಯ ರಸ್ತೆಯಲ್ಲಿ ಧೂಳನ್ನೆಬ್ಬಿಸಿ ಕಣ್ಮರೆಯಾದವು. ಬಸವ ಮತ್ತು ಅವನ ಸ೦ಗಡಿಗ ಈಗ ನಿಸ್ಸಹಾಯಕರಾಗಿ, ತಮ್ಮ ಜೀವನದ ಅ೦ತಿಮ ಪ್ರಯಾಣವನ್ನು ಮು೦ದುವರೆಸುವ "ಮೂಕವೇದನೆ" ಪ್ರಾಣಿ ಪ್ರಿಯರ ಅ೦ತಃಕರಣವನ್ನು ಮಾತ್ರ ಕಲಕಬಲ್ಲದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X