ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯುವೆನೆ ನಿನ್ನ, ವಸುಂಧರೆಗೆ ಎರಡು ಬಗೆದವನನ್ನ

By Staff
|
Google Oneindia Kannada News

ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಮಳಿಗೆಯ ಮೇಲೆ ದುಷ್ಕರ್ಮಿಗಳು ರಣಹದ್ದಿನ ರೀತಿ ಎರಗುವುದರ ಮೂಲಕ ಒಂದು ನಾಗರಿಕತೆಯನ್ನೇ ಧ್ವಂಸಗೆಡವಲು ಯತ್ನಿಸಿದ ಕತೆ ನಿಮಗೆ ಗೊತ್ತು. ಆ ದುರಂತದ ಹಿಂದಿನ ಕೈವಾಡ, ಮನೆಹಾಳ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ನಾಯಕ ಬಿನ್ ಲ್ಯಾಡನ್ ಸೋಮವಾರ ಬೆಳಗ್ಗೆ ಪಾಕಿಸ್ತಾನದಲ್ಲಿ ಕೊಲೆಯಾಗಿದ್ದಾನೆ. ಅಮೆರಿಕದ ದೇಶಪ್ರೇಮಿ ಸೈನಿಕರು ಅವನ ಭಂಡ ಬಾಳಿಗೆ ಇತಿಶ್ರೀ ಹಾಡಿದ್ದಾರೆ. ನೊಂದವರ ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿಯನ್ನು ನಿಮಗೆ ಒಪ್ಪಿಸುವುದರ ಜತೆಗೆ, 9/11 ರ ಕರಾಳ ಘಟನೆಯ ನಂತರ ನಮ್ಮಲ್ಲಿ ಪ್ರಕಟವಾದ ಒಂದು ಕವನವನ್ನು ಇಂದು ಪುನಃ ಸಾದರಪಡಿಸುತ್ತಿದ್ದೇವೆ. ಓದಿ. ಕವಿ, ಎಂ. ಎಸ್. ನಟರಾಜ, ಮೇರಿಲ್ಯಾಂಡ್ ಅಮೆರಿಕ - ಒನ್ಇಂಡಿಯಾ ಕನ್ನಡ.

09-11-2001-wtc-tell-tale-poetry-ms-nataraj

ಅಯ್ಯೋ ಕುಸಿಯಿತೆ ಸಿರಿಕೇಂದ್ರ

ಅಂದು

ಸೆಪ್ಟೆಂಬರ್ ಹನ್ನೊಂದು
ಎರಡು ಸಾವಿರದೊಂದು
ಸಾವಿರದ ದಿನವೆಂದು?
ಹಠಾತ್ತನೆ ಒಂದೆಡೆ
ಸಾವಿರ-ಸಾವಿರ ಸಾವು ಬರಲೆಂದು
ಬರೆದವರು ಯಾರು?
ಬಗೆದವರು ಯಾರು ?
ಹೀಗೆ ಎರಡು ಬಗೆದವರು ಯಾರು ?

ಉಹ್ಞೂ
ಆಗಿರಲಿಲ್ಲ ಹಿಂದೆಂದೂ
ಆಗದಿರಲಿ ಮುಂದೆಂದೂ
ಓ ಅನಾಥ ಬಂಧು !
(ನೀನೆ ತಾನೆ ದೀನಬಂಧು
ನನಗೂ, ಅವನಿಗೂ, ಎಲ್ಲರಿಗೂ ?)

ಅಂದು
ಮಂಗಳವಾರ
ಎಂದಿನ ಹಾಗೇ ಅಂದು-
ಎಂದುಕೊಂಡಿದ್ದೆವಲ್ಲ !
ಎಲ್ಲಿಯ ಮಂಗಳ?
ಅದು ಯಮನಂಗಳ
ಆದದ್ದೆಲ್ಲ
ಶುದ್ಧ ಅಮಂಗಳ

ಬೆಳಗಿನಲೋ
ಅದು ಯೂಪಸ್ತಂಭ
ಇರುಳಿನಲೋ
ಅದು ದೀಪಸ್ತಂಭ
ಸೌಧಶಿಲ್ಪದ ಗಟ್ಟಿ
ತಳಗಟ್ಟಿನಿಂದೆದ್ದ
ಬಿಂಬ-ಪ್ರತಿಬಿಂಬ
ಗಗನಚುಂಬಿಗಳ
ಚಚ್ಚೌಕ ಗುಂಭ
ಯಾರೂ ಕಾಣದ
ಜೋಡೀಜಂಭ

ಅದೋ ನೋಡಿ,
ಎತ್ತರಕೇರುವ ಗತ್ತು
ಹತ್ತು- ಹತ್ತು , ಮೇಲಕೆ ಹತ್ತು
ಮಹಡಿಗಳಿರುವವು ನೂರಾ ಹತ್ತು "
ಇದೆ ದೈನಂದಿನ ಮಂತ್ರ
ಸಾಗಿದೆ ಜೀವನ ಯಂತ್ರ

ಎಲೆಲೆ ಸೌಧಸಿರಿ
ಮೋಡಕೆ ಮುತ್ತಿಕ್ಕಿರುವೆ
ಮದವೇರಿ
ಸುತ್ತ ಕುಬ್ಜರ ಕಂಡು
ನಕ್ಕಿರುವ ಸೊಕ್ಕೇರಿ
ಊರ್ಧ್ವಮುಖಿಯಾಗಿರುವೆ
ಮೇಲೆ ಮೇಲೇರಿ

ನೀರಿನಾಚೆಯ ನಿತ್ಯ
ನವಜೀವರಾಶಿಯ ಸತ್ಯ
ಅತ್ತಿತ್ತಲುಗುವ
ತೂಗು ಸೇತುವೆಗಳಲಿ
ಶತಕೋಟಿ ಯಾತ್ರಿಕರ
ಸ್ವಾಗತಿಸಿ, ಬೀಳ್ಕೊಟ್ಟಿರುವೆ
ಬಿಸಿಲಿಗೆ ಒಣಗದೆ
ಗಾಳಿಗೆ ಅಲುಗದೆ
ಹಿಮಗಾಲದಿ ನಡುಗದೆ
ಕತ್ತೆತ್ತಿ ನಿಂದಿರುವೆ
ಸ್ವಾತಂತ್ರದೇವಿಯ ಇದಿರಾಗಿ
ಅವಳ ಕೈಯ್ಯ ಪಂಜಿನ
ಉರಿಗೆ ಮೈಯ್ಯೊಡ್ಡಿ
ಬಿಸಿಯಾಗಿ ಖುಷಿಯಾಗಿ
ಬಾಳಿರುವೆ

ಅಯ್ಯೋ !
ಇದೇನು ವಿಪರ್ಯಾಸ ?
ವಿಧಿಯ ವಿಕಟ ವಿಲಾಸ
ಮುಖವಿಲ್ಲದ ವೈರಿಯ ಮೋಸ
ದ್ವೇಶಾಂಧರ ಮಹದಾಕ್ರೋಶ
ವಿಷಪೂರಿತ ವಿದ್ರೋಹ ವಿಶೇಷ

ಪೂರ್ವದಿಂದ ಪಶ್ಚಿಮಕೆ ಹಾರಿ
ಮೇಲೇರಿದಂತೆ ತೋರಿ
ಮತ್ತೆ ಬದಲಿಸಿ ದಾರಿ
ದಕ್ಷಿಣಕೆ ಬರುತಿಹನು
ಯಮನ ಸಹಚಾರಿ

ಅಕೋ,
ಹಾರುವ ವಿಮಾನ ಆಗಿದೆ ಕ್ಷಿಪಣಿ
ಸ್ಫೋಟಕೆ ಸ್ಪಂದಿಸಿ ನಡುಗಿದೆ ಧರಣಿ
ಹೃದಯವ ಭೇದಿಸಿ ಹರಡಿದ ಅಗ್ನಿ
ಚಿತೆಯಲಿ ಉರಿಯುವ ಜೀವದ ಸರಣಿ

ಅಗೋ,
ಬೆಂಕಿಯುಂಡೆಯದು ಧಗ-ಧಗ
ವಿಶ್ವ ವಾಣಿಜ್ಯಕೇಂದ್ರ ಧಗ-ಧಗ
ಸಿರಿಯ ಆಧಾರ ಸ್ತಂಭ ಧಗ-ಧಗ
ದ್ವಿವಿಕ್ರಮ ಭಂಡಾರ ಧಗ-ಧಗ

ಇದು
ಕೇವಲ ಮಾಯಾಯುದ್ಧ
ನಾಗರೀಕತೆಯ ವಿರುದ್ಧ
ನ್ಯೂಯಾರ್ಕಿನ ಈ ರಣರಂಗ
ಇದ್ದಂತಿದೆ ನಾಟಕರಂಗ
ನೋಟಕರೋ ವಿಶ್ವಜನಾಂಗ
ಶಿಲ್ಪಜ್ಞರ ಕನಸಿನ ಭಂಗ
(ಬ್ರಹ್ಮಾಸ್ತ್ರಕೆ ಘಟೋತ್ಕಚ ಬಿದ್ಹಾಂಗ!?)

ಇನ್ನೆಲ್ಲಿದೆ
ಊರ್ಧ್ವಮುಖಿಯ ಸೊಕ್ಕು?
ತಗ್ಗಿ ಬಗ್ಗಿ ಹಿಂಡಿ
ಹಿಪ್ಪೆಯಾಗಿದೆ ಉಕ್ಕು
ಆಶಾಸೌಧದ ಹೊಳೆಯುವ
ಕನ್ನಡಿ
ಸಿಡಿದು ಚೂರಾಗಿದೆ ವೈರಿಯ
ಕಾಲಡಿ
ಇನ್ನೆಲ್ಲಿದೆ ವಾಣಿಜ್ಯಕೆ
ಏರುವ ಹಕ್ಕು ?
ಕುಸಿದಿಹ ಕಟ್ಟೆಗೆ
ದೇವರೆ ದಿಕ್ಕು !

ನೂರಹತ್ತು ಮತ್ತಿಳಿಸುವ ಇಳಿತ
ಪುಡಿ-ಪುಡಿ ಗಾಜಿನ ಸೀಳುವ ಸಿಡಿತ
ಬೆಂಕಿಗೆ ಬೆದರಿ ಜಿಗಿದರು ಹಲರು
ಜಿಗಿತಕೆ ಬೆದರಿ ಬೆಂದರು ಕೆಲರು
ದಿಕ್ಕೇ ತೋಚದೆ ನಡುಗುತಿದ್ದರೂ
ಇಳಿದೋಡುತ ಉಳಿದರು ಬಹುಜನರು
ಪ್ರಾಣವ ಉಳಿಸಲು ಹೊರಟರು ಭಟರು
ಬಲಿದಾನವ ಮಾಡಿದ ಧೀರರು ದಿಟರು
ವೀರಸ್ವರ್ಗವನು ಪಡೆದವರವರು
ಅಗ್ನಿಶಾಮಕದ ಪಡೆಯವರವರು

ಮುಗ್ಧರ ಕೊಲ್ಲುವ ಧರ್ಮಾಂಧರಿಗೆ
ಸ್ವರ್ಗವ ತೋರ್ವನೆ ಅಲ್ಲಾ ?
ಉಗ್ರರ ನಾಶದ ನಾಂದಿಯ ಹಾಡನು
ಹಾಡಲು ಬನ್ನಿರಿ ಎಲ್ಲಾ

ಗಡಿ ಇಲ್ಲದ ನಾಡಿನ ಅಲೆಮಾರಿ
ಮುಖವಿಲ್ಲದ ದೇಹದ ಎಲೆ ವೈರಿ
ಹಿಂಸೆಯ ಬೋಧಿಪ ಚಿತ್ತ ವಿಕಾರಿ
ನೀ ರೌರವ ನರಕದ ಸಂಚಾರಿ"

ಕುಸಿದಿಹ ಸೌಧವ ಕಟ್ಟುವ ಬನ್ನಿ
ಹಸಿದಿಹ ವೈರವ ಮೆಟ್ಟುವ ಬನ್ನಿ
ಉರಿಯುವ ಬೆಂಕಿಯ ಆರಿಸ ಬನ್ನಿ
ಹರಿಯುವ ರಕ್ತವ ನಿಲ್ಲಿಸ ಬನ್ನಿ
ಧರ್ಮದ ಗ್ಲಾನಿಯ ರೋಧಿಸ ಬನ್ನಿ
ಅಧರ್ಮ ಮಾರ್ಗವ ಶಿಕ್ಷಿಸ ಬನ್ನಿ "

ಇದು,
ಮೂರನೇ ಮಹಾಯುದ್ಧ
ಇದರಲಿ ಉಗ್ರನು ಬಿದ್ದ
ಶಾಂತಿಯ ದೂತನು ಎದ್ದ
ಧರ್ಮಾಂಧರ ನಾಶವು ಶತಸಿದ್ಧ !
(ಸೆಪ್ಟೆಂಬರ್ 11, 2001, ಮಂಗಳವಾರದಂದು ನಡೆದ ಭೀಕರ ಘಟನೆ ದೂರದರ್ಶನದಲ್ಲಿ ವಿಶದಾದ್ಯಂತ ಬಿತ್ತರಿಸಲ್ಪಟ್ಟಿದೆ. ಆ ದುರಂತವೇ ಈ ಕವನಕ್ಕೆ ಕಾರಣ.)

English summary
9/11, down the memory lane. Kannada poem rendition by MS Nataraja of the tragic event aimed at sabotaging the stability of USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X