ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜೆರ್ಸಿಯಲ್ಲಿ ಕೊಂಡದಕುಳಿ ತಂಡದ ಯಕ್ಷವೈಭವ

By ಉದಯ ಹೆಗಡೆ, ನ್ಯೂಜೆರ್ಸಿ
|
Google Oneindia Kannada News

ಅಮೆರಿಕದಂಥ ದೇಶದಲ್ಲಿ ಬೆಳೆಯುತ್ತಿರುವ ಎರಡನೇ ತಲೆಮಾರಿನ ಭಾರತೀಯ ಮೂಲದ ಚಿಣ್ಣರಿಗೆ ಪೌರಾಣಿಕ ಕಥೆಗಳು ಟಿವಿಯಂಥ ವಿದ್ಯುನ್ಮಾನಗಳ ಮೂಲಕ ಪರಿಚಯವಷ್ಟೆ. ಭಾರತೀಯ ಮೂಲದ ಅನಿವಾಸಿಗಳಿಗೂ ಭಾಗವತ ಪುರಾಣದ ಕಂಸನ ಕಥೆ ತುಸು ಅಪರಿಚಿತವೇ.

ದುಷ್ಟ ಕಂಸನ ವಂಶವಾಹಿನಿಯಲ್ಲಿ ದಾನವ ಗುಣಗಳ ಮೂಲವಿರುವುದು ದ್ರುಮಿಲನೆಂಬ ಶಪಿತ ಗಂಧರ್ವನಿಂದ. ಶಾಪವಿಮೋಚನೆಯ ಉದ್ದೇಶದಿಂದ ಅಸುರ ದ್ರುಮಿಲ ವೇಷಮರೆಸಿ ರುಚಿಮತಿಯನ್ನು ರಮಿಸುತ್ತಾನೆ. ವಸಂತ ಮಾಸದಲ್ಲಿ ಸಂತಾನ ಪ್ರಾಪ್ತಿಗಾಗಿ ಪತಿಯ ನಿರೀಕ್ಷಣೆಯಲ್ಲಿದ್ದ ರುಚಿಮತಿ ದ್ರುಮಿಲನನ್ನು ಪತಿಯೆಂದು ಭ್ರಮಿಸಿ ಮೋಸ ಹೋಗುತ್ತಾಳೆ. ನಿಜವನರಿತ ಉಗ್ರಸೇನ ಪತ್ನಿಯ ಸಂಹಾರಕ್ಕೆ ಮುಂದಾಗುವಾಗ ಪ್ರತ್ಯಕ್ಷವಾಗುವ ನಾರದ ಮುನಿ ಭಗವತ್ ಸಂಕಲ್ಪದ ರಹಸ್ಯ ತಿಳಿಸಿ ಪರಿಸ್ಥಿತಿಯನ್ನು ಉಪಶಮನಗೊಳಿಸುತ್ತಾನೆ.

ಮಹಾಭಾರತದ ಸತ್ವವಿರುವುದು ಲೌಕಿಕವಾಗಿಯೂ ಪ್ರಸ್ತುತವೆನಿಸುವ ಈ ಉಪಕಥೆಗಳಲ್ಲಿ. ನ್ಯೂಜೆರ್ಸಿಯ ಕೃಷ್ಣ ಮಠದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ತಂಡ ಅಕ್ಟೋಬರ್ 27, 2013ರಂದು ರಾಜ ಉಗ್ರಸೇನ ಎಂಬ ಪ್ರಸಂಗದ ಮೂಲಕ ಈ ಕಥಾನಕವನ್ನು ಅಭಿನಯಿಸಿದರು.

Yakshagana performance by Kondadakuli team in New Jersey

ಉಗ್ರಸೇನನಾಗಿ ಕೊಂಡದಕುಳಿಯವರ ಹಾಗೂ ರುಚಿಮತಿಯಾಗಿ ನೀಲ್ಕೋಡು ಶಂಕರ ಹೆಗಡೆಯವರ ಅಭಿನಯ ಭಾವಪೂರ್ಣವಾಗಿತ್ತು. ಪತಿವೃತೆ ರುಚಿಮತಿಯ ವಿಲಾಪ, ಉಗ್ರಸೇನನ ಪ್ರತಾಪ ಹಾಗೂ ದ್ರುಮಿಲನ ಕಪಟ ಪ್ರೇಮ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿ ಬಂದವು. ಆಟ ಕಳೆಕಟ್ಟುವುದು ಸಮರ್ಥ ಹಿಮ್ಮೇಳದಿಂದ. ಕೊಳಗಿ ಕೇಶವ ಹೆಗಡೆಯವರ ಭಾಗವತಿಕೆ, ಗೋಪಾಲಕೃಷ್ಣ ಭಟ್ಟರ ಸಹಭಾಗಿತ್ವ, ಅನಂತ ಪಾಠಕರ ಮೃದಂಗ, ಲಕ್ಷ್ಮೀನಾರಾಯಣ ಸಂಪರವರ ಚಂಡೆಯ ಹಿಮ್ಮೇಳ ಅಭಿಮಾನಿಗಳನ್ನು ರಂಜಿಸಿದವು.

ಕಥಾವಸ್ತುವಿನಲ್ಲಿ ನಾರದನ ಪಾತ್ರ ಚಿಕ್ಕದಾದರೂ ಭಾರತದ ಪೌರಾಣಿಕ ನೆಲೆಗಟ್ಟನ್ನು ಹೆಣೆಯುವಲ್ಲಿ ಸೇತುವಾಗಿ ಮಾರ್ಪಡಿಸುವ ಇಂಥ ಹಲವಾರು ಸನ್ನಿವೇಶಗಳು ಮೂಲಗೃಂಥದಲ್ಲಿ ಕಾಣಸಿಗುತ್ತವೆ. ಅದೇ ರೀತಿ ಉಗ್ರಸೇನನಿಗೆ ರಹಸ್ಯ ಬಯಲು ಮಾಡುವ ಸಖಿಯ ಪಾತ್ರ ಕೂಡಾ ಕಥೆಗೆ ಪೂರಕವೇ. ಈ ವೇಷಗಳನ್ನು ಸ್ಥಳೀಯ ಹವ್ಯಾಸಿ ಕಲಾವಿದರಾದ ನವೀನ್ ಹೆಗಡೆ, ರಘು ಕಿನ್ನಿಗೋಳಿ, ಪ್ರಭಾಕರ್ ಭಟ್, ಸುಧಾಕರ ರಾವ್ ಹಾಗೂ ಪ್ರವೀಣ ನಡುತೋಟ ಸಮರ್ಥವಾಗಿ ಅಭಿನಯಿಸಿದ್ದು ಪ್ರಶಂಸನೀಯ.

ತತ್ಕಾಲಕ್ಕೆ ದೊರಕದ ವೀಸಾದಿಂದ ಕಲಾವಿದರ ಕೊರತೆ ಅನುಭವಿಸುವ ತಂಡಗಳಿಗೆ ಪೂರಕವಾಗಿ ಮೂಡುತ್ತಿರುವ ಇಂಥ ಹವ್ಯಾಸಿ ಕಲಾವಿದರ ತಂಡಗಳು ಆಸಕ್ತಿದಾಯಕ ಬೆಳವಣಿಗೆ. ಹೊರನಾಡಿನಲ್ಲಿ ಸಾಂಪ್ರದಾಯಿಕ ಪರಂಪರೆಯನ್ನು ಪ್ರೋತ್ಸಾಹಿಸುವ ಮೂಲಕ ನವಪೀಳಿಗೆಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಉಡುಪಿ ಕೃಷ್ಣ ಮಠ ಹಾಗೂ ರೂವಾರಿ ಯೋಗೀಂದ್ರ ಭಟ್ಟರ ಕೊಡುಗೆ ಗಣನೀಯ.

English summary
Yakshagaana 'Raja Ugrasena' was performed by Kondadakuli Ramachandra Hegde and team in New Jersey, USA on 27th October. Ramachandra Hegde (Ugrasena), Kinlkodu Shankar Hegde (Ruchimati) and others took the audience to Dwapara Yuga with excellent performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X