ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್ ಹವ್ಯಕ ಸಮ್ಮೇಳನಕ್ಕೆ ಪಲ್ಲಕಿಯ ಮೆರುಗು!

By ವಾಷಿಂಗ್ಟನ್ ಪ್ರತಿನಿಧಿಯಿಂದ ವಿಶೇಷ ವರದಿ
|
Google Oneindia Kannada News

ಒಂದು ಸಮುದಾಯದ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಆಕರ್ಷಕವಾಗಿಸಬಹುದು, ಸಮುದಾಯದ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಳ್ಳುತ್ತಲೇ ಹೊಸತನಕ್ಕೆ ಹೇಗೆ ಒಡ್ಡಿಕೊಳ್ಳುವ ಸನ್ನಿವೇಶದಲ್ಲಿ ಯಾವ ರೀತಿ ಅರ್ಥಪೂರ್ಣವಾಗಿಸಬಹುದು ಎಂದು ಅರಿಯಬೇಕಿದ್ದರೆ ವಾಷಿಂಗ್ಟನ್ ಡಿಸಿಯಲ್ಲಿ ಮುಂದಿನ ವಾರಾಂತ್ಯ (ಜುಲೈ 3,4,5) ನಡೆಯಲಿರುವ ಹವ್ಯಕ ಸಮ್ಮೇಳನ ಒಂದು ಉದಾಹರಣೆಯಾಗಿ ನಿಲ್ಲಬಲ್ಲದು. ಈ ಹಿಂದಿನ 15 ಸಮ್ಮೇಳನಗಳಿಗಿಂತ ಭರ್ಜರಿಯಾಗಿ ತಯಾರಿಗಳು ನಡೆದಿವೆ, ಸಮ್ಮೇಳನದ ಎರಡು ದಿನಗಳಲ್ಲಿ ಆ ಸಂಭ್ರಮಕ್ಕೆ ಇನ್ನಷ್ಟು ರಂಗೇರಲಿದೆ.

ಅಮೆರಿಕದಲ್ಲಿ ಈ ರೀತಿಯ 'ಸಮುದಾಯ ಸಮ್ಮಿಲನಗಳು', ವಿಶೇಷವಾಗಿ ಜುಲೈ 4ರ (ಅಮೆರಿಕ ಸ್ವಾತಂತ್ರ್ಯದಿನ) ಆಸುಪಾಸಿನಲ್ಲಿ ರಜಾದಿನಗಳಿರುವುದರಿಂದ ಬೇರೆಬೇರೆ ಸಮುದಾಯಗಳವು ಬೇರೆಬೇರೆ ನಗರಗಳಲ್ಲಿ ನಡೆಯುತ್ತವೆ. ಇವುಗಳ ಮುಖ್ಯ ಉದ್ದೇಶ ನೆಟ್‌ವರ್ಕಿಂಗ್, ಅದರಲ್ಲೂ ಪ್ರಧಾನವಾಗಿ ವಧೂ-ವರ ಅನ್ವೇಷಣೆ.

ಆದರೆ ಹವ್ಯಕ ಸಮ್ಮೇಳನದ ಸಂಚಾಲಕತ್ವದ ಹೊಣೆ ಹೊತ್ತ ಶಿವು ಭಟ್ ಅವರದು ಕೊಂಚ ವಿಭಿನ್ನ ದೃಷ್ಟಿ. ಬರೀ ಸ್ನೇಹಸೌಹಾರ್ದ ಭೇಟಿ, ಹರಟೆ, ವಧೂ-ವರ ಸಂಬಂಧ ಕೂಡಿಬರುತ್ತವಾ ಎಂಬ ಮಾತುಕತೆ- ಇವಿಷ್ಟೇ ಸಾಲದು. ನಮ್ಮ ಸಂಸ್ಕೃತಿಯಲ್ಲಿನ ಆಚರಣೆಗಳೇನು, ಅವುಗಳ ಅರ್ಥವೇನು, ಅವುಗಳಲ್ಲಿ ಯಾವುದನ್ನು ನಾವು ಇನ್ನೂ ಮುಂದುವರಿಸಬೇಕು, ಯಾವುದನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿ ಅಳವಡಿಸಿಕೊಳ್ಳಬೇಕು ಮುಂತಾದ ಚಿಂತನೆಗಳೂ ಅವರ ಸಮ್ಮೇಳನದ ಎಜೆಂಡಾದಲ್ಲಿ ಇವೆ. [ಹವ್ಯಕ ಬ್ರಾಹ್ಮಣ ಬದುಕು ಮತ್ತು ವಿವಾಹ ಪದ್ಧತಿ]

Wonderful Pallaki for Havyaka Sammelana in USA

ಅಂತಹ ಒಂದು ವಿಶಿಷ್ಟ ಆಕರ್ಷಣೆಯನ್ನು ಅವರು ಈಸಲದ ಸಮ್ಮೇಳನದಲ್ಲಿ ಸೇರಿಸಿದ್ದಾರೆ. ಅದೇ, "ಪಲ್ಲಕಿ ಉತ್ಸವ". ಕರ್ನಾಟಕದ ಹಳ್ಳಿ-ಪಟ್ಟಣಗಳ ಚಿಕ್ಕ ದೊಡ್ಡ ದೇವಸ್ಥಾನಗಳಲ್ಲಿ ವರ್ಷಾವಧಿ ಜಾತ್ರೆ ಅಥವಾ ಇತರ ಆಯನಗಳ ಸಂದರ್ಭದಲ್ಲಿ ಪಲ್ಲಕಿ ಉತ್ಸವ ನಡೆಯುತ್ತದಲ್ಲ, ಅದನ್ನು ಇಲ್ಲಿ ಅಮೆರಿಕದಲ್ಲಿ ಹವ್ಯಕ ಸಮ್ಮೇಳನದ ಉದ್ಘಾಟನೆಯ ಅಂಗವಾಗಿ ನಡೆಸಬೇಕು ಎಂದು ಅವರದೊಂದು ಕನಸು.

ಆದರೆ ಈ ಅಮೆರಿಕದಲ್ಲಿ ಪಲ್ಲಕಿ ಎಲ್ಲಿಂದ?

"ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು" ಎಂದು ನಾರದಮಹರ್ಷಿಗಳು ಬಾಲಕ ಧ್ರುವನಿಗೆ ಹೇಳಿದ್ದರಲ್ಲ? ಅಮೆರಿಕದಲ್ಲಿದ್ದುಕೊಂಡೇ ಅಚ್ಚುಕಟ್ಟಾಗಿ ಮರದ ಪಲ್ಲಕಿಯೊಂದನ್ನು ರಚಿಸಿ ಕೊಡುತ್ತೇನೆ ಎಂದು ಶಿವು ಭಟ್‌ಗೆ ಹವ್ಯಕ ಸಮುದಾಯದವರೇ, ವಾಷಿಂಗ್ಟನ್ ನಿವಾಸಿಯೇ ಆಗಿರುವ ಒಬ್ಬ ಪ್ರತಿಭಾನ್ವಿತ ಯುವಕ ಆಶ್ವಾಸನೆಯಿತ್ತರು. ದಿನವಿಡೀ ಸಾಫ್ಟ್‌ವೇರ್ ಕಂಪನಿ ಉದ್ಯೋಗವನ್ನು ನಿಭಾಯಿಸಿ ರಾತ್ರಿ ಹೊತ್ತು ಮತ್ತು ವಾರಾಂತ್ಯಗಳಲ್ಲಿ ಮರ ಕೆತ್ತುವ ಕೆಲಸ ಮಾಡಿ ಸುಂದರವಾದೊಂದು ಪಲ್ಲಕಿಯನ್ನು ರಚಿಸಿಯೇಬಿಟ್ಟರು! [ಹವ್ಯಕರ ಸಮ್ಮೇಳನಕ್ಕೆ ಮಮತೆಯ ಕರೆಯೋಲೆ]

ಆ ಅದಮ್ಯ ಉತ್ಸಾಹಿಯ ಹೆಸರು "ರಾಜ್ ಪರ್ತಾಜೆ". ಕಾಸರಗೋಡಿನಲ್ಲಿ ಹುಟ್ಟಿಬೆಳೆದು ವಿದ್ಯಾಭ್ಯಾಸದ ನಂತರ ಕಳೆದ ಕೆಲ ವರ್ಷಗಳಿಂದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಸಂಸಾರಸ್ಥ ಸಹೃದಯಿ ವ್ಯಕ್ತಿ. ಜೀವನಾಧಾರಕ್ಕೆ ಸಾಫ್ಟ್‌ವೇರ್ ವೃತ್ತಿ. ಹವ್ಯಾಸವಾಗಿ, ಗೃಹೋಪಯೋಗಿಯಾಗಿ, ಮತ್ತು ಇಂಥ ವಿಶೇಷ ಅಗತ್ಯಗಳಿಗಾಗಿ ಬಡಗಿ ಕೆಲಸ ಇವರ ಪ್ರವೃತ್ತಿ.

Wonderful Pallaki for Havyaka Sammelana in USA

ಅದ್ಭುತವಾಗಿ ನಿರ್ಮಾಣವಾಗಿರುವ ಪಲ್ಲಕಿ

ಈ ಸುಂದರ ಪಲ್ಲಕಿಯ ಮರಮಟ್ಟು, ಮತ್ತು ಅದರ ಕೆತ್ತನೆಗೆ ಬೇಕಾದ ಸಲಕರಣೆಗಳನ್ನೆಲ್ಲ ಅವರು ಇಲ್ಲಿನ "ಹೋಮ್ ಡಿಪೋ" ಡಿಪಾರ್ಟ್‌ಮೆಂಟಲ್ ಸ್ಟೋರ್‌ನಿಂದ ಖರೀದಿಸಿದ್ದು. ಕಳೆದ ಮೂರು ತಿಂಗಳುಗಳಲ್ಲಿ ಸುಮಾರು 225 ಗಂಟೆಗಳನ್ನು ಅವರು ಪಲ್ಲಕಿ ಕೆಲಸಕ್ಕೆ ವ್ಯಯಿಸಿದ್ದಾರೆ. ಕಮಾನಿನಾಕಾರದ ಕೊಂಬನ್ನು ಹೇಗೆ ರಚಿಸಬಹುದೆಂದು ತಲೆಖರ್ಚು ಮಾಡಿ ಅದ್ಭುತ ರೀತಿಯಲ್ಲಿ ಅದನ್ನು ನಿರ್ಮಿಸಿದ್ದಾರೆ.

ಸುಮಾರು ಒಂಬತ್ತು ಅಡಿ ಉದ್ದ, ಮೂರು ಅಡಿ ಎತ್ತರ, ಎರಡು ಅಡಿ ಅಗಲ. ತೂಕ ಸುಮಾರು 35 ಕಿಲೋ ಅಷ್ಟೇ. (ಬಳಸಿರುವ ಮರದಿಂದಾಗಿ). ಆದರೆ ಅತ್ಯಂತ ಆಕರ್ಷಕವಾಗಿ ಮೂಡಿಬಂದಿರುವ ಈ ಪಲ್ಲಕಿ ಕರ್ನಾಟಕದ ದೇವಸ್ಥಾನಗಳಲ್ಲಿ ಬಳಕೆಯಾಗುವ ಪಲ್ಲಕಿಗಳಿಗಿಂತ ಯಾವ ವಿಧದಲ್ಲೂ ಕಮ್ಮಿಯಿಲ್ಲ. ಹವ್ಯಕ ಸಮ್ಮೇಳನದಲ್ಲಿ ಇದನ್ನು ಹೂವುಗಳಿಂದ ಸಿಂಗರಿಸಿ, ತೂಗಾಡುವ ಝುಮುಕಿ ಲೋಲಕಗಳನ್ನೂ ಅಳವಡಿಸಿ ಒಳಗೆ ದೇವರ ವಿಗ್ರಹ ಮತ್ತು ಆದಿಶಂಕರಾಚಾರ್ಯರ ವರ್ಣಚಿತ್ರವನ್ನಿಟ್ಟು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಸಮ್ಮೇಳನ ನಡೆಯುವುದು ಇಲ್ಲಿನ ಚಿನ್ಮಯ ಮಿಷನ್ ಪ್ರಾಂಗಣದಲ್ಲಿ ಆದ್ದರಿಂದ ಸುತ್ತಮುತ್ತಲಿನ ಪರಿಸರವೂ ಅದಕ್ಕೆ ತಕ್ಕುದಾಗಿಯೇ ಇದೆ.

Wonderful Pallaki for Havyaka Sammelana in USA

ಅಂತೂ ಊರ ಜಾತ್ರೆ-ಉತ್ಸವವನ್ನು ಅಮೆರಿಕದಲ್ಲಿ ಮರುಕಳಿಸುವ ಶಿವು ಭಟ್ ಕನಸು ನನಸಾಗುವುದಕ್ಕೆ ರಾಜ್ ಪರ್ತಾಜೆ ಕೊಡುಗೆ ಎಲ್ಲ ವಿಧದಲ್ಲೂ ತಯಾರಾಗಿ ನಿಂತಿದೆ. ಸಮ್ಮೇಳನದ ಕ್ಷಣಗಣನೆ ಆರಂಭವಾಗಿದೆ. ಅಮೆರಿಕದ ಉದ್ದಗಲ ಹರಡಿರುವ ಹವ್ಯಕ ಕುಟುಂಬಗಳವರು ರಾಜಧಾನಿ ವಾಷಿಂಗ್ಟನ್‌ಗೆ ಪಯಣಿಸಲು ಸೂಟ್‌ಕೇಸ್ ತುಂಬಿಸುತ್ತಿದ್ದಾರೆ. ಹೆಂಗಳೆಯರು "ಯಾವ ಹೊತ್ತಿಗೆ ಯಾವ ಸೀರೆ ಉಡೋದು?" ಎಂಬ ಪ್ಲಾನ್ ಮಾಡಿ ಆಗಿದೆ.

ಕರ್ನಾಟಕದಿಂದ ಹವ್ಯಕ ಪ್ರತಿಭೆಗಳು (ಡಾ. ನಾಗರಾಜ್ ಹೆಗಡೆ- ಹಿಂದುಸ್ಥಾನಿ ವೇಣುವಾದನ; ವಿನಯ್ ಹೆಗಡೆ- ಗ್ಲೋ ಆರ್ಟ್ ಬೆಳಕಿನ ಚಿತ್ತಾರ; ಜ್ಯೂ.ಶಂಕರ್- ಗಿಲಿಗಿಲಿ ಜಾದು) ಬಂದು ಮನರಂಜಿಸಲಿದ್ದಾರೆ. ವಿಶೇಷ ಅತಿಥಿ ಸಂಗೀತಾ ಕಟ್ಟಿ ಕುಲಕರ್ಣಿಯವರಿಂದ ಸುಗಮಸಂಗೀತ ಸಹ ಇದೆ. ಟೊರೊಂಟೊದ ಹವ್ಯಕ ಸ್ನೇಹಿತರೆಲ್ಲ ಸೇರಿ 'ಶಿವ ಪಂಚಾಕ್ಷರಿ ಮಹಿಮೆ' ಯಕ್ಷಗಾನ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಅನೇಕ ಕಾರ್ಯಕ್ರಮಗಳು. ರುದ್ರಾಭಿಷೇಕ, ಪೂಜೆಪುನಸ್ಕಾರ. ಪ್ರಸಾದರೂಪದಲ್ಲಿ ರುಚಿರುಚಿಯಾದ ಭೋಜನ. ಆಮೇಲೆ ಬಾಯ್ತುಂಬಾ ಜಗಿಯಲು ಎಲೆ-ಅಡಿಕೆ!

ಹವ್ಯಕ ಎಸೋಸಿಯೇಷನ್ ಆಫ್ ಅಮೆರಿಕ, ಚುಟುಕಾಗಿ HAA (ಹಾ). ಈ ಸಮ್ಮೇಳನ ಅದನ್ನು "ಆಹಾ!" ಆಗಿಸುತ್ತದೆ. [ಗಂಡು ಜಾತಿಯ ಮೇಲೆ ಹೆಣ್ಣಿನ ಸೇಡಿನ ನಂಜು]

English summary
Havyaka Sammelana has been organized to showcase havyaka culture during independence day holidays in America. The event by Havyaka Kannadigas will take place on July 3, 4, 5 in Washington DC, USA. This write-up mainly highlights the 'pallaki' which is 100% 'MADE IN USA' by an enthusiast havyaka youth ‘Raj Parthaje’. Report from special correspondent in Washington DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X