ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರಣ್ಯ ಕನ್ನಡಕೂಟದಲ್ಲಿ ಸುಗ್ಗಿ ಹಬ್ಬದ ಸಡಗರ

By ತ್ರಿವೇಣಿ
|
Google Oneindia Kannada News

'ಸಂಕ್ರಾಂತಿ ಹಬ್ಬ- ಸುಗ್ಗಿಯ ಸಡಗರ' ವಿದ್ಯಾರಣ್ಯ ಕನ್ನಡಕೂಟವು 2015 ಸಾಲಿನ ಮೊದಲನೆಯ ಕಾರ್ಯಕ್ರಮ. ಜನವರಿ 25ರಂದು ಲೆಮಾಂಟಿನ 'ಸಮರಥಿ' ಸಭಾಂಗಣದಲ್ಲಿ ಇದನ್ನು ಆಡಳಿತ ವಹಿಸಿಕೊಳ್ಳುತ್ತಿರುವ ಹೊಸ ಕಾರ್ಯಕಾರಿ ಸಮಿತಿಯು ಇದನ್ನು ಸಂಭ್ರಮದಿಂದ ಅಚರಿಸಿತು. ಈ ಕಾರ್ಯಕ್ರಮಕ್ಕೆಂದೇ ಪ್ರಸಾದ್ ಆಚಾರ್ಯ, ಪ್ರಜ್ವಲ್ ಆಚಾರ್ಯ, ಅನಿತಾ ಕಿಶೋರ್ ಮತ್ತು ಅಪರ್ಣ ದೇಶಪಾಂಡೆಯವರು ಸಿದ್ಧಪಡಿಸಿದ್ದ ಸಂಕ್ರಾಂತಿಯ ಅಧಿನಾಯಕ ಸೂರ್ಯನನ್ನು ಹೊತ್ತ ವೇದಿಕೆ ಮನಸೆಳೆಯುವಂತಿತ್ತು. ಹೆಚ್ಚಿಟ್ಟ ಮಾವಿನಹಣ್ಣಿನ ಬಣ್ಣದ ಉದಯ ರವಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದ. ಗಣೇಶಪೂಜೆಯೊಂದಿಗೆ ಬೆಳಗ್ಗೆ ಹನ್ನೊಂದು ಘಂಟೆಗೆ ಪ್ರಾರಂಭವಾಯಿತು.

ಪೂಜೆ ನೋಡುತ್ತಾ ಭಕ್ತಿಯಲ್ಲಿ ಮೈಮರೆತಿದ್ದವರನ್ನು 'ಎಲ್ಲರೂ 'ಗುಪ್ತ ಭೋಜನ ಗೃಹ'ಕ್ಕೆ ಬೇಗನೆ ಬನ್ನಿ, ಹಬ್ಬದೂಟ ಸಿದ್ಧವಾಗಿದೆ!' ಎಂದು ಕಾರ್ಯಕರ್ತರು ಅಹ್ವಾನಿಸುತ್ತಿದ್ದರು. ಭೋಜನ ಸಭಾಂಗಣದಲ್ಲಿ 'ಆಹಾರ ಸಮಿತಿ'ಯ ಮುಖ್ಯಸ್ಥರಾದ ಸುಜಾತ ದತ್ತ ಅವರ ನೇತೃತ್ವದಲ್ಲಿ ಅವರ ಸಮಿತಿಯ ಸದಸ್ಯರು ಮೇಜಿನ ಮೇಲೆ ಸಿಹಿ-ಖಾರ ಹುಗ್ಗಿ, ವಡೆ, ಕೋಸಂಬರಿ, ಮೊಸರನ್ನ ಇನ್ನಿತರ ಖಾದ್ಯಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ, ನಗೆಮುಖದಿಂದ ಸದಸ್ಯರನ್ನು ಸ್ವಾಗತಿಸುತ್ತಿದ್ದರು. ಸಂಕ್ರಾಂತಿಯ ವಿಶೇಷ ಭೋಜನ ಹಿತವಾಗಿತ್ತು. 'ಮಾತಾಡುವ ಗೊಂಬೆ' ಕಾರ್ಯಕ್ರಮ ನಡೆಸಿಕೊಡಲು ಅದಾಗಲೇ ಅಲ್ಲಿಗೆ ಬಂದಿದ್ದ ಇಂದುಶ್ರೀ ರವೀಂದ್ರ ಅವರು ಎಲ್ಲರೊಂದಿಗೆ ನಗುನಗುತ್ತಾ ಹರಟುತ್ತಾ ಮೊಬೈಲಿನಿಂದ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾ ಹಬ್ಬದೂಟದ ಸಿಹಿ ಹೆಚ್ಚಿಸುತ್ತಿದ್ದರು.

Vidyaranya Kannada Kuta celebrates Sankranti

ಹಬ್ಬದೂಟದ ನಂತರ, ಸಾಂಸ್ಕೃತಿಯ ಸಮಿತಿಯ ಸದಸ್ಯರಾದ ಅನುಪಮ ಮಂಗಳವೇಢೆ ಮತ್ತು ರಮೇಶ್ ರಂಗಶಾಮ್ ಅವರ ಅರಳು ಹುರಿದಂತಹ ನವಿರು ಮಾತಿನ ನಿರೂಪಣೆಯೊಂದಿಗೆ ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಈ ಬಾರಿಯ ಸಮಿತಿಯು, ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸಿ, ನಿಗದಿತ ಸಮಯಕ್ಕೆ ಮುಗಿಸುವ ಮೂಲಕ ಸಭಾಂಗಣಕ್ಕೆ ತೆರುವ ಹೆಚ್ಚುವರಿ ಹಣವನ್ನು ಉಳಿಸಲು ನಿರ್ಧರಿಸಿದ್ದರಿಂದ ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ, ಆಕಾಶ್ ಕೃಷ್ಣನ್ ಅವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಅಮೆರಿಕ, ಭಾರತದ ರಾಷ್ಟ್ರಗೀತೆ ಮತ್ತು 'ಜೈ ಭಾರತ ಜನನಿಯ ತನುಜಾತೆ' ನಾಡಗೀತೆಗಳನ್ನು ಮಿಹಿಕಾ ಅಯ್ಯರ್, ಶೈಲಜಾ ಅಯ್ಯರ್ ಮತ್ತು ಪರಿಮಳ ಪ್ರಸಾದ್ ಅವರು ಹಾಡಿದರು. ನಂತರ 'ಸುಗ್ಗಿಯ ಕುಣಿತ'ಕ್ಕೆ ಹೆಜ್ಜೆ ಹಾಕಿದ ಮಕ್ಕಳು ದಿಯಾ ಹುಗಾರ್, ಸಿಯಾ ಹುಗಾರ್, ಮಯೂರಿ ಹುಲ್ಲೂರ್, ರಿಯಾ ಕುಮಾರ್, ಮುಕ್ತ ಪಾಟೀಲ್, ಈಶ ಪಾಟೀಲ್, ದಿಶ ಥಾವನೆ. ಚೈತ್ರಾ ಕಿಶೋರ್ ಈ ನೃತ್ಯವನ್ನು ಸಂಯೋಜಿಸಿದ್ದರು.

ನಂತರ ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷರಾದ ರಾಮರಾವ್ ಅವರು ಕೆಲವೇ ನಿಮಿಷಗಳ ಚಿಕ್ಕ-ಚೊಕ್ಕ ಭಾಷಣದ ಮೂಲಕ ತಮ್ಮ ಸಮಿತಿಯು ಪ್ರಸಕ್ತ ವರ್ಷದಲ್ಲಿ ನಡೆಸಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಎಲ್ಲರನ್ನೂ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ನಂತರದ 'ಒಡಿಸ್ಸಿ ನೃತ್ಯ'ದಲ್ಲಿ ನಿಯತ ಮಧುಕರ್ ವಸಂತದ ಸೊಬಗು-ಬೆಡಗನ್ನು ತೆರೆದಿಟ್ಟರು.

Vidyaranya Kannada Kuta celebrates Sankranti

'ವಿಕೆಕೆ ಪ್ರತಿಭಾ ಶೋಧ' ಕಾರ್ಯಕ್ರಮ!

ಇದು ಎಲ್ಲರೂ ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದ ಕಾರ್ಯಕ್ರಮ. ಈ ಕಾರ್ಯಕ್ರಮದ ಹಿಂದೆ ಸಾಂಸ್ಕೃತಿಕ ಸಮಿತಿಯ ಬಹುದಿನಗಳ ಪರಿಶ್ರಮವಿತ್ತು. ಸ್ಪರ್ಧಿಗಳಿಂದ ಮೊದಲೇ ಸಿಡಿ, ಡಿವಿಡಿಗಳನ್ನು ಆಹ್ವಾನಿಸಿ, ಅದರಲ್ಲಿ ಆಯ್ಕೆಯಾದವರಿಗೆ ಈಗಾಗಲೇ ವಿವಿಧ ಹಂತಗಳಲ್ಲಿ ಸ್ಪರ್ಧೆಗಳು ನಡೆದು ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ ಈ ದಿನ ಸಭಿಕರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದರು.

ತೀರ್ಪುಗಾರರಾದ ಸರಸ್ವತಿ ರಂಗನಾಥನ್, ರಾಜಾಶಂಕರ್ ಕಣಗಲಘಟ್ಟ, ಶೈಲಜ ಅಯ್ಯರ್ ಅವರು ಉಪಸ್ಥಿತರಿದ್ದುದೇ ಅಲ್ಲದೆ, ಎಲ್ಲಾ ಸದಸ್ಯರಿಗೂ ಮತ ಪತ್ರಗಳನ್ನು ಒದಗಿಸಿ, ಪ್ರತಿಭೆಗಳನ್ನು ಆರಿಸುವ ಅವಕಾಶ ಕಲ್ಪಿಸಲಾಗಿತ್ತು. ಅಂತಿಮ ಹಂತ ತಲುಪಿದ ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಮೀರಿಸುವಂತೆ ತಮ್ಮಲ್ಲಿದ್ದ ಗಾಯನ, ನೃತ್ಯ, ಮ್ಯಾಜಿಕ್, ವಿವಿಧ ವಾದ್ಯಸಂಗೀತಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ತೀರ್ಪುಗಾರರು ನೀಡಿದ್ದ ಅಂಕಗಳು ಮತ್ತು ಸದಸ್ಯರು ಚಲಾಯಿಸಿದ್ದ ಮತಗಳನ್ನು ಆಧರಿಸಿ, ಕಿರಿಯರ ವಿಭಾಗದಲ್ಲಿ 'ಸೋಹಂ ಕಜೆ', ಯುವ ವಿಭಾಗದಲ್ಲಿ ಅನುಪಮಾ ಉದಯಕುಮಾರ್, ಹಿರಿಯರ ವಿಭಾಗದಲ್ಲಿ 'ಭಾಗ್ಯಶ್ರೀ ನಾಡ್ಗಿರ್' ಬಹುಮಾನ ಗಳಿಸಿದರು. ಇದೊಂದು ಯಶಸ್ವಿ ಕಾರ್ಯಕ್ರಮ ಮತ್ತು ಅಚ್ಚುಕಟ್ಟಾಗಿ ರೂಪಿಸಿದ್ದ ಕಾರ್ಯಕ್ರಮವೆಂದು ಸದಸ್ಯರಿಂದ ಮೆಚ್ಚುಗೆ ಗಳಿಸಿಸಿಕೊಂಡಿತು. ಈ ಕಾರ್ಯಕ್ರಮ ಪ್ರತಿವರ್ಷ ನಡೆಸುವುದರಿಂದ ನಮ್ಮ ನಡುವೆಯೇ ಇರುವ ಹಲವು ಹತ್ತು ಪ್ರತಿಭೆಗಳು ಬೆಳಕಿಗೆ ಬರಲು ಸಹಾಯ ಮಾಡಿದಂತಾಗುತ್ತದೆ.

ಐಐಟಿ ಪ್ರೇಮ ಸಮ್ಮಿಲನ

ಸಭಿಕರಿಂದ ಭಾರಿ ಮೆಚ್ಚುಗೆ, ಚಪ್ಪಾಳೆ ಗಿಟ್ಟಿಸಿದ ನೃತ್ಯ ಕಾರ್ಯಕ್ರಮ. ಶಿಕಾಗೋದ ಐಐಟಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಿನಿಮಾ ಗೀತೆಗಳನ್ನು ಆಧರಿಸಿದ ನೃತ್ಯ. ಆರಿಸಿಕೊಂಡಿದ್ದ ಹಳೆ-ಹೊಸ ಕನ್ನಡ ಚಿತ್ರಗೀತೆಗಳಿಗೆ ಉತ್ತಮ ನೃತ್ಯ ಸಂಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ ಕಲಾವಿದರು ನಿಶಾ ಗೋವಿಂದ್, ಕರಣಮ್ ಮಧು ಗಮಯ, ನಿಕಿತ್ ವಿಜಯ್ ಚಂದಾಪುರ್, ಪ್ರಶಾಂತ್ ಪಿ. ನಾಯಕ್, ಪಾಟೀಲ್ ಚೈತನ್ಯ ಕುಮಾರ್, ಅಕ್ಷಯ್ ಗಂಜಿ. ಈ ನೃತ್ಯವನ್ನು ನಿಶಾ ಗೋವಿಂದ್ ಮತ್ತು ಪಾಟೀಲ್ ಚೈತನ್ಯ ಕುಮಾರ್ ಸಂಯೋಜಿಸಿದ್ದರು.

Vidyaranya Kannada Kuta celebrates Sankranti

ನಕ್ಕುನಲಿಸಿದ ಮಾತಾಡುವ ಗೊಂಬೆ

ಭಾರತದಿಂದ ಆಗಮಿಸಿದ್ದ ಅತಿಥಿ ಕಲಾವಿದೆ ಇಂದುಶ್ರೀ ರವೀಂದ್ರ ಅವರು 'ಮಾತಾಡುವ ಗೊಂಬೆ' ಕಾರ್ಯಕ್ರಮವಂತೂ ಸಭಾಂಗಣದಲ್ಲಿದ್ದ ಎಲ್ಲರನ್ನೂ ನಕ್ಕು ನಲಿಸಿದ ಸೂಪರ್ ಹಿಟ್ ಕಾರ್ಯಕ್ರಮ. ಇಂದುಶ್ರೀಯವರ ನವಿರು ಹಾಸ್ಯದ ಮಾತುಗಳು, ಸಭಿಕರನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತ. ಅಜ್ಜಿ-ತಾತ-ಡಿಂಕು ಗೊಂಬೆಗಳ ಚೂಟಿ ಚುರುಕಿನ ಸಂಭಾಷಣೆಗಳು, ಸಭಿಕರ ಪ್ರಶ್ನೆಗಳಿಗೆ ಒಂದಿಷ್ಟೂ ತಡವರಿಸದೆ ಚಕ್ಕೆಂದು ಉತ್ತರಿಸುವ ಸಮಯಪ್ರಜ್ಞೆಯನ್ನು ಮೆಚ್ಚದವರಿಲ್ಲ. ಈ ಗೊಂಬೆಗಳಿಗೋ ಮೋದಿಯಿಂದ ಒಬಾಮನವರೆಗೆ ಎಲ್ಲರೂ ಗೊತ್ತು, ಎಲ್ಲವೂ ಗೊತ್ತು! [ಎಳ್ಳುಬೆಲ್ಲ ಬೀರಲಿಕ್ಕೆ ಬರುತ್ತಿದ್ದಾನೆ ಇಂದುಶ್ರೀಯ ಡಿಂಕು]

'ಏನೇ ಕೇಳು, ಉತ್ತರ ಕೊಡುವೆ ನಿನಗೆ ನಾನೀಗ'- ಎಂದು ಸಭಿಕರು ಎಸೆಯುತ್ತಿದ್ದ ಪ್ರಶ್ನೆಗಳಿಗೆ ಥಟ್ಟೆಂದು ಉತ್ತರಿಸಿ ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತಿದ್ದವು. ವೈಯಾರದಿಂದ ನುಲಿಯುತ್ತಿದ್ದ 'ಶಕ್ಕು' ಗೊಂಬೆಯಂತೂ, ಅತ್ತಿಂದಿತ್ತ ಫೋಟೊ ತೆಗೆಯುತ್ತಾ ಓಡಾಡುತ್ತಿದ್ದ ಫೋಟೋಗ್ರಾಫರ್ ಶ್ರೀನಿಯವರನ್ನು ಉದ್ದೇಶಿಸಿ, 'ರೀ, ನಿಮಗೆ ಚೆನ್ನಾಗಿ ಜ಼ೂಮ್ ಮಾಡಕ್ಕೆ ಬರತ್ತಾ? ಹಾಗಾದ್ರೆ ವಿಧಾನಸೌಧಕ್ಕೆ ಹೋಗ್ರಿ! ಎಂದಾಗ ಸಭಾಂಗಣದಲ್ಲಿ ನಗುವಿನ ಸುನಾಮಿ. ಈ ರೀತಿ ಸಿಡಿದು ಸೂರೆಯಾದ ನಗೆ ಚಟಾಕಿಗಳಿಗೆ, ಹಾಸ್ಯ ಪಟಾಕಿಗಳಿಗೆ ಲೆಕ್ಕವಿಲ್ಲ. ವೇದಿಕೆಯ ಮುಂದೆ ಸಾಲುಗಟ್ಟಿ ಕುಳಿತಿದ್ದ ಮಕ್ಕಳೂ ಅಜ್ಜಿ, ತಾತ ಗೊಂಬೆಗಳಿಗೆ ನಾ ಮುಂದು ತಾ ಮುಂದು ಎಂದು ಆಸಕ್ತಿಕರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಿರಿಯರಿಗೂ ಕಿರಿಯರಿಗೂ ಇಷ್ಟವಾದ ಕಾರ್ಯಕ್ರಮವಿದು.

Vidyaranya Kannada Kuta celebrates Sankranti

'ವಿಕೆಕೆ ಪ್ರತಿಭಾಶೋಧ'ದಲ್ಲಿ ಆಯ್ಕೆಯಾದ ಪ್ರತಿಭೆಗಳಿಗೆ ಮತ್ತು ಸಕ್ಕರೆ ಅಚ್ಚು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ವಿಂಟರ್ ಒಲಿಂಪಿಯಾಡ್ ಪ್ರಕಟಣೆಗಳ ನಂತರ ಕನ್ನಡಕೂಟದ ಕಾರ್ಯದರ್ಶಿ ವಿನೇಶ್ ಅಂಬೇಕರ್ ಅವರ ವಂದನಾರ್ಪಣೆಯೊಂದಿಗೆ ಈ ವರ್ಷದ ಸಂಕ್ರಾಂತಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಕಾರ್ಯಕ್ರಮಗಳ ನಡುವೆ ಅನಗತ್ಯ ವಿರಾಮಗಳಿಲ್ಲ, ಪರದೆ ಮುಚ್ಚಿ ತೆಗೆಯುವ ಸರ್ಕಸ್ಸುಗಳಿಲ್ಲ, ಅತ್ಯುತ್ತಮ ಸಮಯ ನಿರ್ವಹಣೆ ಈ ಕಾರ್ಯಕ್ರಮದ ವಿಶೇಷ. ಕಾರ್ಯಕಾರಿ ಸಮಿತಿಯು ಆಸಕ್ತಿವಹಿಸಿ, ವ್ಯವಸ್ಥಿತವಾಗಿ ರೂಪಿಸಿದ್ದ ಈ ಸಂಕ್ರಾಂತಿ ಕಾರ್ಯಕ್ರಮದಂತೆ ಕನ್ನಡಕೂಟದ ಮುಂದಿನ ಎಲ್ಲಾ ಚಟುವಟಿಕೆಗಳೂ ನಡೆಯುವಂತಾಗಲೆಂದು ಆಶಿಸೋಣ.
English summary
Vidyaranya Kannada Kuta, Illinois, USA celebrated Sankranti on 25th January. Ventriloquist Indushree Raveendra's humor filled act was the highlight of the program. Various competitions, cultural activities were conducted on the occasion. A report by Triveni Srinivas Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X