ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪರಿಸುವಂತೆ ಮಾಡಿದ ವಿದ್ಯಾರಣ್ಯದ ಯುಗಾದಿ ಹಬ್ಬ

By ತ್ರಿವೇಣಿ
|
Google Oneindia Kannada News

ವಿದ್ಯಾರಣ್ಯ ಕನ್ನಡಕೂಟವು 'ಮನ್ಮಥ' ಸಂವತ್ಸರದ ಮೊದಲ ಹಬ್ಬವಾದ 'ಯುಗಾದಿ' ಹಬ್ಬವನ್ನು ಏ.4ರಂದು ಸಂಭ್ರಮದಿಂದ ಆಚರಿಸಿತು. 'ಸಮಾರಥಿ' ಸಭಾಂಗಣದ ಒಳಹೊಕ್ಕರೆ, 'ಯುಗಾದಿ'ಯ ಸೊಗಡನ್ನು ಮೆರೆಸುವಂತೆ ವೇದಿಕೆಯು ಸುಂದರವಾಗಿ ಅಲಂಕಾರಗೊಂಡಿತ್ತು. ನೀಲಾಕಾಶದ ಹಿನ್ನೆಲೆಯಲ್ಲೊಂದು ಹಳ್ಳಿಯ ಮನೆ, ಅದರ ಮುಂದೆ ಕೈಮುಗಿದು ನಿಂತಿರುವ ಹೆಣ್ಣುಮಗಳು ಯುಗಾದಿಯ ಸಂತಸವನ್ನು ಸವಿಯಲು ಎಲ್ಲರನ್ನೂ ಆಹ್ವಾನಿಸುವಂತಿತ್ತು.

ಪ್ರಸಾದ್, ಪ್ರಜ್ವಲ್, ಅನಿತಾ ಕಿಶೋರ್, ಅಪರ್ಣಾ ಅವರು ಈ ವೇದಿಕೆಯನ್ನು ಆಸಕ್ತಿಯಿಂದ ಸಿಂಗರಿಸಿದ್ದರು. ಈ ಹಿಂದಿನ ಕಾರ್ಯಕ್ರಮ 'ಸಂಕ್ರಾಂತಿ'ಯಲ್ಲಿ ಸಮಯಪಾಲನೆಗೆ ಪ್ರಾಶಸ್ತ್ಯ ಕೊಟ್ಟಿದ್ದಂತೆ ಈ ಸಲವೂ ನಿಗದಿತ ಸಮಯಕ್ಕೆ ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರಣ್ಯದ ಅಧ್ಯಕ್ಷ ರಾಮರಾವ್ ಅವರು ಪತ್ನಿ ಚಿತ್ರರಾವ್ ಅವರೊಂದಿಗೆ ಪೂಜೆಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದರು. 'ಗಣೇಶ-ಶಿವ-ದುರ್ಗ' ದೇಗುಲದ ಅರ್ಚಕರಾದ ಧರ್ಮರಾವ್ ಅವರು ಪೂಜೆಯನ್ನು ನಡೆಸಿಕೊಟ್ಟರು.

Vidyaranya Kannada Koota celebrates Ugadi festival

ಸಣ್ಣಮಕ್ಕಳಿಂದ ಭಗವದ್ಗೀತೆ ಪಠನದೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ದೊರೆಯಿತು. ಪ್ರಾರ್ಥನಾ ಪ್ರಶಾಂತ್ ಅವರಿಂದ ಪ್ರಾರ್ಥನೆಯಾಯಿತು. ಭಾರತ, ಅಮೆರಿಕ ದೇಶಗಳ ರಾಷ್ತ್ರಗೀತೆ, ನಾಡಗೀತೆಗಳು ಸುಂದರವಾಗಿ ಮೂಡಿಬಂದವು. ಅಧ್ಯಕ್ಷ ರಾಮರಾವ್ ಅವರು ಸರ್ವರನ್ನೂ ಸಭೆಗೆ ಸ್ವಾಗತಿಸಿದರು. 'ಯುಗಾದಿ ಎಂದರೇನು? ಹಬ್ಬದ ವಿಶೇಷವೇನು?' ಇವುಗಳನ್ನು ತಿಳಿಸುವ 'ಯುಗಾದಿ ವಿವರ' ಕಾರ್ಯಕ್ರಮವನ್ನು ವಿದ್ಯಾರಣ್ಯದ ಕಿರಿಯ ಸದಸ್ಯರು ನಡೆಸಿಕೊಟ್ಟರು.

ಮಿನುಮಿನುಗುವ, ಅಂದಚಂದದ ಉಡುಗೆಗಳನ್ನು ಧರಿಸಿದ ಪುಟ್ಟ ಮಕ್ಕಳು ತಪಾಂಗುಚಿ, ಹಂಸ ಹಂಸ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಶೈಲಜಾ ಅಯ್ಯರ್ ನಿರ್ದೇಶನದಲ್ಲಿ, 'ಯುಗಾದಿಯ ತಂಪು' ಎಂಬ ಕಾರ್ಯಕ್ರಮದಲ್ಲಿ ವಿದ್ಯಾರಣ್ಯದ ಸದಸ್ಯೆಯರು ಭಾವಗೀತೆಗಳನ್ನು ಹಾಡಿದರು. ನಂತರ 'ಕೋಲಾಟ' ನೃತ್ಯವಿತ್ತು. ವಿದ್ಯಾರಣ್ಯದ ಹಿರಿಯ ಸದಸ್ಯೆಯಾದ ಶಾರದಾ ಬೈಯಣ್ಣ ಅವರು ಅಪರ್ಣಾ ದೇಶಪಾಂಡೆಯವರೊಂದಿಗೆ ಈ ನೃತ್ಯವನ್ನು ಸಂಯೋಜಿಸಿದ್ದರು. ಅನೂಷ ಅಡ್ಕೋಳಿಯವರಿಂದ 'ಮೆಲ್ಲಮೆಲ್ಲನೆ ಬಂದನೆ' ಎಂಬ ನೃತ್ಯ ಪ್ರದರ್ಶನವಿತ್ತು.

ಇದೆಲ್ಲದರ ನಂತರವಿದ್ದಿದ್ದು ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ 'ಹಾಡೋಣು ಬಾ, ಕುಣಿಯೋಣು ಬಾ' ಕಾರ್ಯಕ್ರಮ. ಮೂವತ್ನಾಲ್ಕು ಹಿರಿಯ-ಕಿರಿಯ ಸದಸ್ಯರು ಸೇರಿ ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕಾಗಿ ತಿಂಗಳುಗಳಿಂದ ತಯಾರಿ ನಡೆದಿತ್ತು. ಸಿಡಿಗಳನ್ನು ಹಾಕಿ, ಮೂಲಗಾಯಕರು ಹಾಡಿರುವ ಹಾಡುಗಳಿಗೆ ನರ್ತಿಸುವ ಬದಲು ವಿದ್ಯಾರಣ್ಯದ ಗಾಯಕ-ಗಾಯಕಿಯರೇ ಕಾರಿಯೊಕಿಯೊಂದಿಗೆ ಹಾಡುವ ಹಾಡುಗಳಿಗೆ ಸದಸ್ಯರು ನರ್ತಿಸುವ ಕಾರ್ಯಕ್ರಮವಿದು. ಇದಕ್ಕಾಗಿ ಕನ್ನಡದ ಕೆಲವು ಜನಪ್ರಿಯ ಚಿತ್ರಗೀತೆಗಳನ್ನು ಆಯ್ದುಕೊಳ್ಳಲಾಗಿತ್ತು. ಸಂಯೋಜಕರು, ಹಾಡಿದವರು, ನರ್ತಿಸಿದವರೆಲ್ಲರ ಶ್ರಮವನ್ನು ಸಾರ್ಥಕಪಡಿಸಿದ ಕಾರ್ಯಕ್ರಮ.

Vidyaranya Kannada Koota celebrates Ugadi festival

ಅತಿ ಹೆಚ್ಚು ಚಪ್ಪಾಳೆಗಳು! ಪ್ರತಿ ನೃತ್ಯಕ್ಕೂ 'ಒನ್ಸ್ ಮೋರ್' ಎಂಬ ಒತ್ತಾಯ, ಶಿಳ್ಳೆ, ಕೇಕೆ, ನಗುವಿನೊಂದಿಗೆ ಇಡೀ ಸಭಾಂಗಣವನ್ನು ಮೂವತ್ತು ನಿಮಿಷಗಳ ಕಾಲ ಹಿಡಿದಿಟ್ಟ ಈ ಕಾರ್ಯಕ್ರಮದಲ್ಲಿ ಮೂವತ್ತನಾಲ್ಕು ಕಲಾವಿದರು, ಗಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಆಯೋಜಿಸಿದ ಸಾಂಸ್ಕೃತಿಕ ಸಮಿತಿಯವರಿಗೂ, ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೂ, ಕಲಾವಿದರಿಗೂ ಹಾರ್ದಿಕ ಅಭಿನಂದನೆಗಳು!

ಸಾಂಸ್ಕೃತಿಕ ಸಮಿತಿಯ ರಮೇಶ್ ರಂಗಶ್ಯಾಮ್, ಅನುಪಮಾ ಮಂಗಳವೇಢೆ, ಅನಿತಾ ಕಿಶೋರ್, ಅಪರ್ಣಾ ದೇಶಪಾಂಡೆಯವರು ಆ ಸಂಜೆಯ ಎಲ್ಲಾ ಕಾರ್ಯಕ್ರಮಗಳನ್ನೂ ಸುಂದರವಾಗಿ ಆಯೋಜಿಸಿದ್ದರು. ರಮೇಶ್ ರಂಗಶ್ಯಾಮ್ ಮತ್ತು ಅನುಪಮಾ ಮಂಗಳವೇಢೆಯವರು ನಿರೂಪಕರಾಗಿದ್ದು, ಒಂದಿಷ್ಟೂ ಬೇಸರವಾಗದಂತೆ ಬಹಳ ಆಕರ್ಷಕವಾಗಿ ಅಂದಿನ ಎಲ್ಲಾ ಕಾರ್ಯಕ್ರಮಗಳನ್ನು ನಿರೂಪಿಸಿದರು.

ಇವೆಲ್ಲರೊಂದಿಗೆ ಪ್ರತಿಬಾರಿಯಂತೆ ವಿದ್ಯಾರಣ್ಯದ ಹೆಮ್ಮೆಯ ಸಂಚಿಕೆ 'ಸಂಗಮ'ವನ್ನು ಹಿರಿಯ ಸದಸ್ಯೆ ನಾರಾಯಣಮ್ಮ ಅವರು ಬಿಡುಗಡೆ ಮಾಡಿದರು. ಸಂಗಮ ಸಂಪಾದಕ ಸಮಿತಿಯ ಅಣ್ಣಾಪುರ್ ಶಿವಕುಮಾರ್, ರಮಣ್ ಅಪರಂಜಿ, ಎಸ್. ವಿಶ್ವನಾಥ್, ಅಪರ್ಣಾ ದೇಶಪಾಂಡೆಯರೊಂದಿಗೆ ಅಧ್ಯಕ್ಷ ರಾಮರಾವ್ ಅವರು ವೇದಿಕೆಯಲ್ಲಿದ್ದರು.

'ವಿಂಟರ್ ಒಲಿಂಪಿಯಾಡ್' ವಿದ್ಯಾರಣ್ಯವು ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಾರ್ಯಕ್ರಮ. ಪಗಡೆ, ಚೌಕಾಬಾರ, ಕೇರಂ, ಚೆಸ್, ಟೆನ್ನಿಸ್, ಬಾಡ್ಮಿಂಟನ್ ಪಂದ್ಯಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಅದ್ಯಕ್ಷ ರಾಮರಾವ್ ಮತ್ತು ಉಪಾಧ್ಯಕ್ಷ ಭೀಮರಾವ್ ಅವರು ಬಹುಮಾನ ವಿತರಿಸಿದರು.

Vidyaranya Kannada Koota celebrates Ugadi festival

'ಪಶ್ಚಾತ್ತಾಪ' - ಮಾಸ್ಟರ್ ಹಿರಣ್ಣಯ್ಯನವರ ಅತ್ಯಂತ ಜನಪ್ರಿಯ ನಾಟಕವಿದು. ಇದರ ಪ್ರತಿ ಸಂಭಾಷಣೆಯನ್ನೂ ಜನ ಇಂದಿಗೂ ನೆನೆದು ಚಪ್ಪರಿಸುತ್ತಾರೆ, ನಕ್ಕು ನಲಿಯುತ್ತಾರೆ. ಈ ನಾಟಕದಲ್ಲಿ ಸಮಾಜದಲ್ಲಿರುವ ಹುಳುಕುಗಳನ್ನು ಹಾಸ್ಯದ ಕನ್ನಡಿಯಲ್ಲಿ ತೋರಿಸುವ ಪ್ರಯತ್ನವನ್ನು ಹಿರಣ್ಣಯ್ಯನವರು ಮಾಡಿದ್ದಾರೆ. ಲಾಸ್ ಏಂಜಲಿಸಿನಿಂದ ಆಗಮಿಸಿದ್ದ 'ರಂಗಧ್ವನಿ' ಕಲಾವಿದರು ಇದನ್ನು ನಡೆಸಿಕೊಟ್ಟರು. [ಮಾಸ್ಟರ್ ಹಿರಣ್ಣಯ್ಯ ಸಂದರ್ಶನ]

ವಲ್ಲೀಶ್ ಶಾಸ್ತ್ರಿ, ಸೋಮಶೇಖರ್, ಹರಿ ಹನುಮಂತು, ಎನ್. ಕೆ. ಎಂ ಪ್ರಸಾದ್, ರವಿ ಶೇಷಾದ್ರಿಯವರು ಅತಿಥಿ ಕಲಾವಿದರಾಗಿ ಆಗಮಿಸಿದ್ದರು. ವಿದ್ಯಾರಣ್ಯದ ಸದಸ್ಯರಾದ ಗಿರೀಶ್ ರಾಮಮೂರ್ತಿ ಮತ್ತು ರವಿ ಸೋಮನಹಳ್ಳಿಯವರು ಪೋಲಿಸ್ ಪೇದೆಗಳ ಪಾತ್ರದಲ್ಲಿ ಈ ನಾಟಕದಲ್ಲಿ ಪಾತ್ರವಹಿಸಿ ಭರ್ಜರಿ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ವಲ್ಲೀಶ್ ಶಾಸ್ತ್ರಿಯವರು ಮಾತಾಡುತ್ತಿದ್ದರೆ ಮಾಸ್ಟರ್ ಹಿರಣ್ಣನವರೇ ಮಾತಾಡುತ್ತಿದ್ದಾರೇನೊ ಅನ್ನಿಸುವಂತಿತ್ತು! ರಂಗ ಸಜ್ಜಿಕೆಯೂ ಅದ್ಭುತವಾಗಿದ್ದು, ನಾಟಕ ಎಲ್ಲರನ್ನೂ ಮನರಂಜಿಸಿತು. ಸಂಭಾಷಣೆಗಳಲ್ಲಿದ್ದ ಹಾಸ್ಯವನ್ನು ಜನರು ಚೆನ್ನಾಗಿ ಗ್ರಹಿಸುತ್ತಾ, ಇಷ್ಟವಾದಾಗ ಚಪ್ಪಾಳೆಗಳೊಂದಿಗೆ ಮೆಚ್ಚುಗೆ ಸೂಚಿಸುತ್ತಾ ನಾಟಕವನ್ನು ಆನಂದಿಸಿದರು. 'ರಂಗಧ್ವನಿ' ತಂಡ ನಿಸ್ಸಂಶಯವಾಗಿ, ವಿದ್ಯಾರಣ್ಣಿಗರ ಅಭಿನಂದನೆ, ಮೆಚ್ಚುಗೆಗೆ ಪಾತ್ರವಾಯಿತು. ಈ ತಂಡದ ಮತ್ತಷ್ಟು ಹೊಸ ಪ್ರಯೋಗಗಳು ಕನ್ನಡಿಗರನ್ನು ರಂಜಿಸಲಿ.

ನಂತರ ಸರ್ವ ಸದಸ್ಯರ ಸಭೆಯನ್ನು ಚುಟುಕಾಗಿ ಮುಗಿಸಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ರಮೇಶ್ ರಂಗಶ್ಯಾಮ್ ಅವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು.

ಈ ಸಭೆಯ ನಂತರ ಯುಗಾದಿಯ ಹಬ್ಬದೂಟವಿತ್ತು. ಈ ಕಾರ್ಯಕ್ರಮಕ್ಕೆಂದೇ ಬೆಂಗಳೂರಿನಿಂದ ಸೊಗಸಾದ ಹೋಳಿಗೆಯನ್ನು ತರಿಸಲಾಗಿತ್ತು. ಸ್ನೇಹಿತರೊಂದಿಗೆ ಹರಟುತ್ತಾ, ನಗುತ್ತಾ ಹಬ್ಬದೂಟವನ್ನು ಸವಿಯುವುದರೊಂದಿಗೆ ಯುಗಾದಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಬಾರಿಯ ವಿದ್ಯಾರಣ್ಯದ 'ಯುಗಾದಿ' ಹಬ್ಬವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಅಧ್ಯಕ್ಷ ರಾಮರಾಮ್ ಮತ್ತು ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು!

English summary
Vidyaranya Kannada Koota celebrated Manmatha Samvatsara Ugadi, Hindu New Year, on 4th April by distributing bevu-bella, singing songs, dancing, enacting Kannada play and ultimately by savouring delicious food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X