• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಅನುರಣಿಸಿದ ಹಾಸ್ಯ, ಕಾವ್ಯ, ಗಾಯನ

By ರೇಖಾ ಹೆಗಡೆ ಬಾಳೇಸರ
|

'ಹಾಸ್ಯ, ಕಾವ್ಯ, ಗಾಯನ'- ಕಳೆದ ವಾರಾಂತ್ಯದಲ್ಲಿ ಸಿಂಗಪುರದ ಕನ್ನಡಿಗರನ್ನು ಸೆರೆ ಹಿಡಿದಿಟ್ಟ ಮೂರು ಮಾಯಾ ಶಬ್ದಗಳಿವು. ಬದಲಿಯಾಗಿ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಹಾಗೂ ಎಚ್. ಡುಂಡಿರಾಜ್ ಅವರ ಹೆಸರನ್ನೂ ಬಳಸಬಹುದೇನೋ! ಏಕೆಂದರೆ ತಮ್ಮ ಅದ್ಭುತವಾದ ಮಾತು, ಹಾಸ್ಯ, ಕವಿತೆ, ಚುಟುಕಗಳ ಮೂಲಕ ಅಂದು ಎಲ್ಲರ ಮನದಲ್ಲಿ ಮಣೆ ಹಾಕಿ ಕುಂತವರು ಕನ್ನಡದ ಈ ಮೂವರು ಹೆಸರಾಂತ ಕವಿ, ಬರಹಗಾರರು.

ಕನ್ನಡ ಸಂಘ (ಸಿಂಗಪುರ)ದ ಆಶ್ರಯದಲ್ಲಿ ನವೆಂಬರ್ 9ರಂದು ಇಲ್ಲಿನ ಸ್ಪ್ರಿಂಗ್ ಸಭಾಂಗಣದಲ್ಲಿ ನಡೆದ 'ಭಾವ-ಸುಧೆ' ಕಾರ್ಯಕ್ರಮ, ಈ ಮೂವರು ಕವಿಗಳ ಕಾವ್ಯ, ಮಾತುಗಳನ್ನು ಆಲಿಸುವ, ಅವರ ಜೊತೆ ಮಾತುಕತೆ ನಡೆಸುವ ಅಪೂರ್ವ ಅವಕಾಶವನ್ನು ಸಿಂಗನ್ನಡಿಗರಿಗೆ ಒದಗಿಸಿತ್ತು. ಸಂಘ ಪ್ರತಿವರ್ಷ ನವೆಂಬರಿನಲ್ಲಿ ನಡೆಸುವ ದೀಪೋತ್ಸವ-ರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮಕ್ಕೆ 'ಉಪಾಸನಾ' ಮೋಹನ್, ಪಂಚಮ್ ಹಳಿಬಂಡಿ ಹಾಗೂ ಕೆ.ಎಸ್. ಸುರೇಖಾ ಅವರ ಸುಶ್ರಾವ್ಯ ಸುಗಮ ಸಂಗೀತ ಗಾಯನ ವಿಶೇಷ ಮೆರುಗನ್ನು ನೀಡಿತ್ತು.

ಸಮಾರಂಭದಲ್ಲಿ ಸಿಂಗನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ 'ತುಂಟ ಕವಿ' ಬಿ.ಆರ್. ಲಕ್ಷ್ಮಣರಾವ್ ಅವರು, ತಮ್ಮ ಕವಿತೆಗಳ ಮೂಲಕ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು. ತಮ್ಮ ಕವಿತೆಗಳಿಗೆ ಪೂರಕವಾಗಿ ಇರುವ ಡುಂಡಿರಾಜ್ ಕವನಗಳನ್ನೂ ಉದಾಹರಿಸಿದ ಅವರು ಈ ಮೂಲಕ ತಮ್ಮಿಬ್ಬರ ಕಾವ್ಯ-ಸ್ನೇಹದ ಪರಿಚಯ ಮಾಡಿಕೊಟ್ಟರು. ನಂತರ ಮಾತನಾಡಿದ ಡುಂಡಿರಾಜ್ ಅವರು ಕೂಡ ತಮ್ಮ ಕವಿತೆಗಳ, ಅವುಗಳ ಹಿಂದಿನ ಕತೆ ಬಗ್ಗೆ, ಕವಿತೆ ಬರೆಯುವುದರಿಂದ ಏನೇನು (ಲಾಭ-ನಷ್ಟ) ಆಗುತ್ತಿದೆ ಎನ್ನುವ ಬಗ್ಗೆ ಅವರ ಹೆಸರಿಗೆ ಪರ್ಯಾಯವಾಗಿರುವಂಥ ಹನಿಗವನಗಳ ಮೂಲಕ ಉದಾಹರಣೆ ನೀಡಿದರು. ಅವರ ಮಾತಿಗೆ ಕೇಳುಗರು ನಕ್ಕು, ನಕ್ಕು ಹಗುರಾದರು.

ಸಮಸ್ತ ಸಿಂಗನ್ನಡಿಗರ ಪರವಾಗಿ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ, ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ್ ಹಾಗೂ ಸಂಸ್ಥಾಪಕರಾದ ಎ.ಎನ್. ರಾವ್ ಅವರು ಕವಿಗಳಾದ ಲಕ್ಷ್ಮಣರಾವ್ ಹಾಗೂ ಡುಂಡಿರಾಜ್ ಅವರಿಗೆ ಕಿರುಗಾಣಿಕೆ ನೀಡಿ 'ಕವಿ ನಮನ' ಅರ್ಪಿಸಿದರು. ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡಮಿಯ 'ಬಾಲ ಸಾಹಿತ್ಯ ಪುರಸ್ಕಾರ' ವಿಜೇತ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ 'ಸಿಂಗಾರ ಕವಿ ರತ್ನ' ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಟೇಶಮೂರ್ತಿ ಅವರು ಕಾವ್ಯದೊಂದಿಗಿನ ತಮ್ಮ ನಂಟಿನ ಬಗೆಗೆ, ಅದು ಹೇಗೆ ಭಾವಾಭಿವ್ಯಕ್ತಿಯ ಮಾಧ್ಯಮ ಎನ್ನುವ ಬಗೆಗೆ ಸೊಗಸಾಗಿ ಮಾತನಾಡಿದರು. ಮಕ್ಕಳಲ್ಲಿ ಕನ್ನಡದ ಸಂಸ್ಕೃತಿ ಬೆಳೆಸುವ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು ಈ ನಿಟ್ಟಿನಲ್ಲಿ ಸಿಂಗಪುರ ಕನ್ನಡ ಸಮುದಾಯ ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಡುವೆ ಮೂರು ಹಂತಗಳಲ್ಲಿ 'ಸುಗಮ ಸಂಗೀತ ಗಾಯನ' ಏರ್ಪಾಡಾಗಿತ್ತು. ಅತಿಥಿ ಕವಿಗಳೂ ಸೇರಿದಂತೆ ಕನ್ನಡದ ಹಲವಾರು ಹೆಸರಾಂತ ಕವಿಗಳ ಭಾವಗೀತೆಗಳಿಗೆ 'ಉಪಾಸನಾ' ಮೋಹನ್, ಪಂಚಮ್ ಹಳಿಬಂಡಿ ಹಾಗೂ ಕೆ.ಎಸ್. ಸುರೇಖಾ ಅವರು ಜೀವದನಿ ತುಂಬಿದರು. ಮೊದಲ ಹಂತದಲ್ಲಿ ಭಾವಪೂರ್ಣ, ಗಂಭೀರ ಗೀತೆಗಳು, ಎರಡನೆಯ ಹಂತದಲ್ಲಿ ಹುಮ್ಮಸ್ಸು ಹುಟ್ಟಿಸುವ ಜನಪ್ರಿಯ ಗೀತೆಗಳು ಹಾಗೂ ಮೂರನೆಯ ಹಂತದಲ್ಲಿ ಸುಮಾರು 30ಕ್ಕೂ ಹೆಚ್ಚು ಗೀತೆಗಳ ಪಲ್ಲವಿ/ಚರಣಗಳನ್ನೊಳಗೊಂಡ ಗೀತ-ರಸಾಯನವನ್ನು ಅವರು ಕೇಳುಗರಿಗೆ ಉಣಬಡಿಸಿದರು. ಇವರಿಗೆ ರಾಜೀವ್ ಜೋಯಿಸ್ ಅವರು ಕೀಬೋರ್ಡಿನಲ್ಲಿ, ವಿ. ಯಶೋದರ (ವಾದಿ) ಅವರು ರಿದಂ ಪ್ಯಾಡಿನಲ್ಲಿ ಹಾಗೂ ಎಂ.ಸಿ. ಶ್ರೀನಿವಾಸ್ ಅವರು ತಬಲಾದಲ್ಲಿ ಸಮರ್ಪಕ ಸಾಥ್ ನೀಡಿ ಜನಮೆಚ್ಚುಗೆ ಪಡೆದರು.

ದೀಪೋತ್ಸವ-ರಾಜ್ಯೋತ್ಸವ ಕಾರ್ಯಕ್ರಮದ ಸಂಪ್ರದಾಯದಂತೆ ಸಂಘದ ಪುರಸ್ಕಾರಗಳ ವಿತರಣೆಯನ್ನು ಕೂಡ ಸಮಾರಂಭದಲ್ಲಿ ಮಾಡಲಾಯಿತು. ಸಿಂಗಪುರ ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಿದ ಕನ್ನಡಿಗರಾದ ಬಿ. ಪ್ರಭು ದೇವ ಹಾಗೂ ಎಸ್.ಕೆ. ಗುರುಪ್ರಕಾಶ್ 'ಆಜೀವ ಸಾಧನೆ ಪುರಸ್ಕಾರ' ಹಾಗೂ ಕ್ರೀಡೆ/ಶಿಕ್ಷಣ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ತೋರಿದ ಸದಸ್ಯರಾದ ಪ್ರಮಾತ್ ಕೃಷ್ಣ, ಶರಣ್ಯ ಜಮದಗ್ನಿ, ಪ್ರಜ್ವಲ್ ಶ್ರೀಕಾಂತ್, ಶ್ರೇಯಾ ಕಾನಕಾನಹಳ್ಳಿ, ವಸಂತ ಕುಲಕರ್ಣಿ ಮತ್ತು ಪ್ರಣವ್ ಚನ್ನಕೇಶವ ಅವರಿಗೆ 'ಸಿಂಗಾರ ಪುರಸ್ಕಾರ' ನೀಡಿ ಸನ್ಮಾನಿಸಲಾಯಿತು. ಸಂಘದ ಹೆಮ್ಮೆಯ 'ಸಿಂಚನ' ಮಾಸಪತ್ರಿಕೆ ಏರ್ಪಡಿಸಿದ್ದ 'ಸಿಂಚನ ಸಾಹಿತ್ಯ ಸ್ಪರ್ಧೆ'ಯ ವಿಜೇತರ ಹೆಸರುಗಳನ್ನು ಘೋಷಿಸಲಾಯಿತು. ಹಾಗೆಯೇ ಸಿಂಗನ್ನಡಿಗ ಕವಿ, ಬರಹಗಾರ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಪ್ರಮುಖ ಪ್ರಾಯೋಜಕರಾಗಿದ್ದರೆ, ಸ್ಥಳೀಯ 'ವರ್ಣ' ಚಾನೆಲ್ ಸಹಪ್ರಾಯೋಜಕತ್ವ ಒದಗಿಸಿತ್ತು. ಬೆಂಗಳೂರಿನ ಮೈತ್ರೇಯಿ ಪ್ರೊಮೋಟರ್ಸ್ ಮತ್ತು ಡೆವಲಪರ್ಸ್, ಸಿಂಗಪುರ ಹೆಲ್ತ್ ಸರ್ವೀಸಸ್ ಪ್ರೈ.ಲಿ., ಅರಿಝ್ಮಾ, ಗ್ಲೋಬಲ್ ಅಚೀವರ್ಸ್ ಎಜುಕೇಶನ್ ಸೆಂಟರ್ ಹಾಗೂ ನಕ್ಷತ್ರಿ ಆಹಾರ ಸರಬರಾಜುದಾರರು ಪ್ರಾಯೋಜನೆಗೆ ಕೈ ಜೋಡಿಸಿದ್ದರು.

ಮರುದಿನ ನವೆಂಬರ್ 10ರಂದು ಇಲ್ಲಿನ ವುಡ್ ಲ್ಯಾಂಡ್ಸ್ ಸಮುದಾಯ ಭವನದಲ್ಲಿ ನಡೆದ 'ಸದಾ ಬಹಾರ್ ನಗ್ಮೇ' ಕಾರ್ಯಕ್ರಮದಲ್ಲಿ ಪಂಚಮ್ ಹಳಿಬಂಡಿ ಹಾಗೂ ಕೆ.ಎಸ್. ಸುರೇಖಾ ಅವರು ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರಗೀತೆಗಳನ್ನು ಹಾಡಿ ಕನ್ನಡ ಹಾಗೂ ಕನ್ನಡೇತರ ಕೇಳುಗರ ಅಭಿಮಾನಕ್ಕೆ ಪಾತ್ರರಾದರು. ಕನ್ನದ ಸಂಘ (ಸಿಂಗಪುರ) ಹಾಗೂ ವುಡ್ ಲ್ಯಾಂಡ್ಸ್ ಸಿಸಿ (ಐಎಈಸಿ) ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿ ಕವಿತ್ರಯರನ್ನು ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು.

ವಾರಾಂತ್ಯಕ್ಕೆ ತೆರೆ ಬೀಳುವ ಹೊತ್ತಿಗೆ 'ಹಾಸ್ಯ, ಗೀತ, ಗಾಯನ'ಗಳ ಕಾರ್ಯಕ್ರಮ ಮುಗಿದಿದ್ದರೂ ಅವುಗಳ ಗುಂಗು ಮಾತ್ರ ಸಿಂಗನ್ನಡಿಗರ ಮನದಲ್ಲಿ ಅನುರಣಿಸುತ್ತಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reknowned Kannada writers (poets) Dr. H.S. Venkatesh Murthy, B.R. Lakshman Rao and H. Dundiraj were felicitated by Kannada Sangha Singapore. Upasana Mohan, Pancham Halibandi and K.S. Surekha enthralled the crowd with melodious singing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more