• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ವಸಂತ ಸಾಹಿತ್ಯೋತ್ಸವ'

By ವಿ.ಕೆ.ಕೆ ಸಾಹಿತ್ಯೋತ್ಸವ ಸಮಿತಿ
|

ಮೇ 10, 2014ರಂದು ಚಿಕಾಗೊ ನಗರದ ಕನ್ನಡಿಗರ ಮನದಲ್ಲಿ ಏನೋ ಹೊಸ ಸಂಭ್ರಮ. ದಾಖಲೆಗಳನ್ನು ಮುರಿದ ಕಡುಶೀತದ ಚಳಿಗಾಲ ಮುಗಿದು ವಸಂತ ಕಾಲಿಟ್ಟಿದ್ದಕ್ಕೂ ಹೌದು, ಅದನ್ನೂ ಮೀರಿ ವಸಂತದಲ್ಲಿ ಅರಳಿ ನಿಂತ ಹೂಗಳ ಪರಿಮಳವನ್ನೂ ನಾಚಿಸುವಂತೆ ಹೊಮ್ಮಿರುವ ಕನ್ನಡ ಕಸ್ತೂರಿಯ ಪರಿಮಳಕ್ಕೂ ಹೌದು. ಅಂದು ಸ್ಥಳೀಯ ವಿದ್ಯಾರಣ್ಯ ಕನ್ನಡ ಕೂಟ ಆಯೋಜಿಸಿದ ‘ವಸಂತ ಸಾಹಿತ್ಯೋತ್ಸವ' ಡೇರಿಯನ್ ಬಡಾವಣೆಯಲ್ಲಿರುವ ‘ಇಂಡಿಯನ್ ಪ್ರೈರಿ ಪಬ್ಲಿಕ್ ಲೈಬ್ರರಿ'ಯಲ್ಲಿ ಅದ್ದೂರಿಯಾಗಿ ನಡೆಯಿತು.

ನಳಿನಿ ಮೈಯ ಹಾಗೂ ತ್ರಿವೇಣಿ ಶ್ರೀನಿವಾಸ ರಾವ್ ಅವರ ಸಾರಥ್ಯದಲ್ಲಿ ಆಚರಿಸಿದ ಈ ವರ್ಷದ ಸಾಹಿತ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಅಂಕಣಕಾರ ಶ್ರೀವತ್ಸ ಜೋಶಿಯವರು ವಾಷಿಂಗ್ಟನ್ ಡಿ.ಸಿ.ಯಿಂದ ಆಗಮಿಸಿದ್ದರು. ‘ಸಿರಿಗನ್ನಡ ಶಾಲೆ' ಎಂಬ ಸ್ಥಳೀಯ ಕನ್ನಡ ಶಾಲೆಯ ವಿದ್ಯಾರ್ಥಿಗಳು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಯಿತು.

ಅಧ್ಯಕ್ಷ ಶ್ರೀಶ ಜಯ ಸೀತಾರಾಮ ಅವರು ಸ್ವಾಗತ ಭಾಷಣದಲ್ಲಿ "ಭಾಷೆ ಎಂಬುದು ನಮ್ಮಿಂದ ಏನನ್ನೂ ಬೇಡುವುದಿಲ್ಲ. ಆದರೆ ಭಾಷೆಗೆ ಸಲ್ಲಬೇಕಾದ ಗೌರವ, ಪ್ರೀತಿ, ಸಮಯ, ಪರಿಶ್ರಮವನ್ನು ನೀಡದಿದ್ದರೆ ಕಳೆದುಕೊಳ್ಳುವವರು ನಾವೇ. ನಮ್ಮ ಪೂರ್ವಜರು ಬಳುವಳಿಯಾಗಿ ಕೊಟ್ಟ ಶ್ರೀಮಂತ ಸಾಹಿತ್ಯ ಭಂಡಾರವನ್ನು, ಪರಂಪರಾಗತವಾಗಿ ಬಂದ ಸಾಂಸ್ಕೃತಿಕ ಸಾನ್ನಿಧ್ಯವನ್ನು ಕಳೆದುಕೊಂಡು ತಬ್ಬಲಿಗಳಾಗುತ್ತೇವೆ" ಎಂದರು.

ಕಳೆದ ವರ್ಷ ನಮ್ಮನ್ನಗಲಿದ ಹಿರಿಯ ಸಾಹಿತಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕವಿ ಜಿಎಸ್ ಶಿವರುದ್ರಪ್ಪ ಅವರಿಗೆ ಇಂದುಶೇಖರ್ ಅವರು, ಹಾಗೂ ಕಥೆ ಮತ್ತು ಕಾದಂಬರಿಕಾರ ಯಶವಂತ ಚಿತ್ತಾಲರಿಗೆ ಶಂಕರ್ ಹೆಗ್ಡೆ ಅವರು ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಕವನ ಪ್ರಸ್ತುತಿಯಲ್ಲಿ ಭಾಗವಹಿಸಿದ ಸ್ಥಳೀಯ ಕವಿಗಳು: ಉಷಾ ಕೊಲ್ಪೆ, ಸುಬ್ರಾಯ ಮೈಯ, ರಾಜ ಶಂಕರ್, ಅನಿಲ್ ದೇಶಪಾಂಡೆ, ನಾಗಭೂಷಣ ಮುಲ್ಕಿ, ಶ್ರೀನಿವಾಸ ಭಟ್ ಹಾಗೂ ಗಿರೀಶ್ ಆರಾಧ್ಯ. ಗದ್ಯ ಪ್ರಸ್ತುತಿಯಲ್ಲಿ ವಚನ ಸಾಹಿತ್ಯದ ಬಗ್ಗೆ ಪದ್ಮ ಶ್ರೀನಿವಾಸ್, ಮಂಕು ತಿಮ್ಮನ ಕಗ್ಗದ ಬಗ್ಗೆ ಮಂಜುನಾಥ್ ಕುಣಿಗಲ್, ನೇಮಿಚಂದ್ರ ಅವರ ಬಗ್ಗೆ ಉಮಾ ರಾವ್, ಎ.ಎನ್. ಮೂರ್ತಿ ರಾವ್ ಬಗ್ಗೆ ನೀತಾ ಧನಂಜಯ, ಗಾದೆಗಳ ಬಗ್ಗೆ ಜಿ.ಎನ್.ಆರಾಧ್ಯ ಅವರು ಮಾತನಾಡಿದರು. ತ್ರಿವೇಣಿ ರಾವ್ ಮತ್ತು ಅನುಪಮ ಮಂಗಳವೇಢೆ ಅವರು ತಾವೇ ಬರೆದ ಪ್ರಬಂಧಗಳನ್ನು ಓದಿದರು.

ನಿರಂತರವಾಗಿ ಹರಿದ ಸಾಹಿತ್ಯ ಗಂಗೆಯಲ್ಲಿ ಸಂಗೀತಕ್ಕೂ ಸ್ಥಾನವಿತ್ತು! ದಾಸ ಗೀತೆಯನ್ನು ಸುಜಾತ ದತ್ತ ಮತ್ತು ರಾಧಾ ರಾವ್ ಅವರು ಹಾಡಿದರು. ತ್ರಿವೇಣಿ ಶ್ರೀನಿವಾಸ ರಾವ್ ಅವರು ಅದಕ್ಕೆ ವ್ಯಾಖ್ಯಾನ ಮಾಡಿದರು. ಶಿವರುದ್ರಪ್ಪ ಅವರ ಕವನ "ಉಡುಗಣವೇಷ್ಟಿತ ಚಂದ್ರಸುಶೋಭಿತ"ವನ್ನು ರೋಹಿಣಿ ಉಡುಪ, ವಿಜಯ ಭಟ್, ಪ್ರತಿಭಾ ಕೋಟೆ, ಮತ್ತು ರೇಣುಕ ನಾಗರಾಜ್ ಅವರು ಹಾಡಿದರು. ಅದಕ್ಕೆ ನಳಿನಿ ಮೈಯ ಅವರು ವ್ಯಾಖ್ಯಾನ ಮಾಡಿದರು. ಕುಮಾರ ವ್ಯಾಸ ಭಾರತದ ಕೆಲವು ಪದ್ಯಗಳನ್ನು ಚಂದ್ರಿಕ ಗೋಪಾಲ್ ಅವರು ಗಮಕ ಶೈಲಿಯಲ್ಲಿ ಹಾಡಿದರೆ, ತ್ರಿವೇಣಿ ಶ್ರೀನಿವಾಸ ರಾವ್ ಅವರು ವ್ಯಾಖ್ಯಾನ ಮಾಡಿದರು.

ಮಕ್ಕಳೂ ಸಾಹಿತ್ಯೋತ್ಸವದಲ್ಲಿ ಆಸ್ಥೆಯಿಂದ ಭಾಗವಹಿಸಿದ್ದರು. ಮಾನಸಿ ಮಂಗಳವೇಢೆ ತನ್ನ ತಾಯಿ ಅನುಪಮ ಅವರ ಒಂದು ಕವನವನ್ನು ವಾಚಿಸಿದಳು. ಅದಿತಿ ಗುರುದತ್ ಒಗಟುಗಳನ್ನು ಹೇಳಿದಳು. ಕೊನೆಯಲ್ಲಿ ನಡೆದ ಕಾರ್ಯಕ್ರಮ "ಹತ್ತು ವರ್ಷ ಕಾಲ ವಾರ ವಾರ ಬರವಣಿಗೆ: ನನ್ನ ಅನುಭವಗಳು" ಎಂಬ ಶೀರ್ಷಿಕೆಯ ಸಂವಾದ ಶ್ರೀವತ್ಸ ಜೋಶಿ ಅವರೊಡನೆ. ಹಲವಾರು ಸಭಿಕರು ಕೇಳಿದ ಪ್ರಶ್ನೆಗಳಿಗೆ ನಗುನಗುತ್ತಾ ಉತ್ತರಿಸಿದ ಜೋಶಿಯವರು ತಮ್ಮ ಸರಳ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದರು.

ಈ ರಸದೌತಣದ ಜೊತೆಗೇ ಮಧ್ಯಾಹ್ನ ರಸ ಭೋಜನವೂ ಇತ್ತು. ಅಲ್ಲೇ ಟೇಬಲ್ ಮೇಲೆ ಅಂದವಾಗಿ ಜೋಡಿಸಿಟ್ಟ ಕನ್ನಡ ಪುಸ್ತಕಗಳು. ಎಲ್ಲಿಂದ ಬಂದವು? ಯಾಕಾಗಿ? ಅದೇ ಪುಸ್ತಕ ಸಂತೆ. ನಿಮ್ಮ ಮನೆಯಲ್ಲಿ ಓದಿಯಾಗಿರುವ ಪುಸ್ತಕಗಳನ್ನು ಸಂತೆಗೆ ತಂದು ಹಾಕಿ ಬೇರೆ ಕನ್ನಡ ಪುಸ್ತಕಗಳನ್ನು ಕೊಂಡು ಹೋಗುವ ಸುವರ್ಣಾವಕಾಶ. ಇಲ್ಲಿ ಎಲ್ಲಿಯೂ ಹಸಿರು ನೋಟಿನ ಹಸ್ತಾಂತರವಿರಲಿಲ್ಲ. ಇದ್ದದ್ದು ಪುಸ್ತಕ ಪ್ರೀತಿ ಮಾತ್ರ.

ಅಷ್ಟರಲ್ಲೇ ಲೈಬ್ರರಿಯನ್ನು ಮುಚ್ಚುವ ಸಮಯ ಬಂದಾಗಿತ್ತು. ರಸ ನಿಮಿಷಗಳು ಸಂದಾಗಿತ್ತು. ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಾಗಿತ್ತು. ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ ಅವರ ವಂದನಾರ್ಪಣೆಯೊಂದಿಗೆ ಸಾಹಿತ್ಯೋತ್ಸವ ಮುಕ್ತಾಯವಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vidyaranya Kannada Koota in Illinois, USA celebrated Vasanta Sahityotsava on May 10, 2014. Columnist Srivathsa Joshi was the chief guest of the function attended by literary enthusiasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more