ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ಯುಗಾದಿ ಸಂಭ್ರಮ, ಜಿಎಸ್ಎಸ್ ನುಡಿನಮನ

By ಸುದರ್ಶನ
|
Google Oneindia Kannada News

2014ರ ಏಪ್ರಿಲ್ 26ನೆಯ ತಾರೀಖಿನಂದು, ಲಂಡನ್ ನಗರದ "ಕಾಂಕಾರ್ಡ್ ಕ್ಲಬ್ಬಿನ" ಸಭಾಂಗಣದಲ್ಲಿ, ಯುನೈಟೆಡ್ ಕಿಂಗ್ಡಮ್ಮಿನ ಕನ್ನಡಿಗರೆಲ್ಲರೂ ಒಂದೇ ಸೂರಿನಡಿ ಸೇರಿ, ಚಾಂದ್ರಮಾನ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇದರ ಜೊತೆಯಲ್ಲೇ, ಕನ್ನಡದ ಹೆಮ್ಮೆಯ ರಾಷ್ಟ್ರಕವಿ ದಿವಂಗತ ಜಿ.ಎಸ್.ಶಿವರುದ್ರಪ್ಪನವರಿಗೆ ನುಡಿನಮನ ಸಲ್ಲಿಸಿದ ಪರಿ ಅವಿಸ್ಮರಣಿಯ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನನ್ನದಾಗಿತ್ತು. ನನಗಾದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಶನಿವಾರದ ಮಧ್ಯಾಹ್ನದ ಭೋಜನದ ನಂತರ ಪ್ರಾರಂಭವಾಗಿ, ತಡರಾತ್ರಿಯವರೆಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಪ್ರತಿ ಸಲದಂತೆ, ಈ ಸಾರಿ ಕಾರ್ಯಕ್ರಮವನ್ನು ಎರಡು ದಿನಗಳಿಗೆ ವಿಭಜಿಸದೆ, ಒಂದೇ ದಿನ ನಡೆಸಿದ್ದು, ಅತಿಥಿಗಳ ದೃಷ್ಟಿಯಿಂದಲೂ ಅನುಕೂಲಕರ ಬದಲಾವಣೆಯಾಗಿ ಕಂಡು ಬಂತು. ದೂರದೂರದಿಂದ ಬಂದವರಿಗೆ, ತಮ್ಮ ಗೂಡಿಗೆ ಮರಳಿ, ಭಾನುವಾರದಂದು ವಿಶ್ರಮಿಸಿ, ಪುನಃ ಸೋಮವಾರ ಕೆಲಸಕ್ಕೆ ತೆರಳಲು ಸಹಕಾರಿಯಾಯಿತು.


ಊಟ, ತಿಂಡಿ, ಕಾಫಿ ಮತ್ತು ಚಹಾಗಳ ವ್ಯವಸ್ಥೆ ಬಹಳ ಚೆನ್ನಾಗಿತ್ತು. ರುಚಿ-ಶುಚಿ ಹಾಗೂ ಗುಣಮಟ್ಟಗಳ ವಿಷಯದಲ್ಲಿ ಯಾವುದೇ ಕೊಂಕು ನನಗೆ ಕಾಣಲಿಲ್ಲ. ಆಯೋಜಕರು ಹಾಗೂ ಸ್ವಯಂಸೇವಕರು ಹಸನ್ಮುಖಿಗಳಾಗಿ, ತಮ್ಮ ನಡೆ-ನುಡಿಗಳಲ್ಲಿ, ಅವರ ಅಂತರ್ಯದಲ್ಲಿ ನಡೆದಿರಬಹುದಾದ ದುಗುಡಗಳನ್ನು ತೋರಗೊಡದೆ, ಸ್ನೇಹಪರರಾಗಿ ಸಂವಹಿಸಿದ್ದು ಅಂದಿನ ಊಟ-ತಿಂಡಿಗಳಿಗೆ ವಿಭಿನ್ನ ಸೊಗಡನ್ನು ಬೆರೆಸಿದ್ದರೆ ಆಶ್ಚರ್ಯವಿಲ್ಲ! ಇನ್ನು ಸಭಾಂಗಣ, ಶಬ್ದತಂತ್ರವ್ಯೂಹದ ಆಯೋಜನೆ ಎಲ್ಲವೂ ಅತ್ಯುತ್ತಮವಾಗಿತ್ತು.

ಧಾರ್ಮಿಕ(ಪೂಜೆ), ಬೇವು-ಬೆಲ್ಲದ ವಿತರಣೆ ಸಮಾರಂಭದ ಮೂಲ ಉದ್ದೇಶವನ್ನು ಪೂರೈಸಿದರೆ, ಔಪಚಾರಿಕ ಸ್ವಾಗತ ಭಾಷಣ, ಅಧ್ಯಕ್ಷರ, ಮುಖ್ಯ ಅತಿಥಿಗಳ ಭಾಷಣಗಳು, ಸಂಕ್ಷಿಪ್ತವಾಗಿಯೂ, ವಿಷಯ-ಸಮೃದ್ಧಿಯಿಂದಲೂ ಕೂಡಿ ಕೇಳುಗರ ಗಮನಸೆಳೆಯುವಲ್ಲಿ ಸಫಲವಾಯಿತು. ಮುಖ್ಯ ಅತಿಥಿ ಡಾ ನಂದಕುಮಾರ್ ಅವರ ಭಾಷಣ ಸ್ಫುಟವಾಗಿ, ಶುದ್ಧ ಕನ್ನಡದಿಂದ ತುಂಬಿದ್ದು ಆನಂದವನ್ನುಂಟು ಮಾಡಿತು.

ಎಲ್ಲರೂ ಅವರಂತೆ ನುಡಿದರೆ, ಕನ್ನಡ ಎಷ್ಟು ಸುಂದರವಾಗಿ ನಳನಳಿಸಬಹುದೆಂಬ ಊಹೆಯೇ ಉಲ್ಲಾಸದಾಯಕ. ಆದರೆ ಉಳಿದ ಭಾಷಣಕಾರರು ಈ ನಿಟ್ಟಿನಲ್ಲಿ ಬದ್ಧತೆ ತೋರಲಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಕಹಿಯಾದರೂ ಸತ್ಯ. ಕನ್ನಡದ ಬಗೆಗೆ ಇರುವ ನಮ್ಮ ಅಭಿಮಾನ, ಕಾಳಜಿ ನಮ್ಮ ನಡೆ-ನುಡಿಗಳಲ್ಲಿ ವ್ಯಕ್ತವಾಗದ ಹೊರತು, ಆ ಭಾವನೆಗಳಿಗೆ ನಿಜವಾದ ಶಕ್ತಿ ಇರಲಾರದೆಂದು ನನ್ನ ನಂಬಿಕೆ.

Ugadi and GSS namana by Kannada Balaga UK, London

ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಸುಂದರವಾಗಿ ಮೂಡಿ ಬಂದವು. ಸಹೃದಯೀ, ಸಜ್ಜನ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ನುಡಿ-ನಮನ, ತನ್ನ ಪ್ರಸ್ತುತೆಯಿಂದಲೂ, ಪ್ರಾಮುಖ್ಯತೆಯಿಂದಲೂ ಹಾಗೂ ಪ್ರೌಢಿಮೆಯಿಂದಲೂ, ಸರ್ವರ ಮನ್ನಣೆ ಗಳಿಸಿದ ಕಾರ್ಯಕ್ರಮವಾಗಿ ಮೂಡಿ ಬಂದಿತು. ನಮ್ಮನ್ನು ಅಗಲಿದರೆಂಬ ಬೇವಿನ ಕಹಿ ನೆನಪಿನ ಜೊತೆಜೊತೆಗೇ, ಅವರು ನಮಗಾಗಿ ಬಿಟ್ಟು ಹೋದ ಗೀತೆಗಳನ್ನು ಅನುರಣಿಸಿ ಬೆಲ್ಲದ ಸವಿಯನ್ನು ಉಣಿಸಿದ ಜಿ.ಎಸ್.ಶಿವಪ್ರಸಾದ್ ಹಾಗೂ ಉಮಾ ವೆಂಕಟೇಶ್ ನಿರೂಪಕರಾಗಿ, ಸಂಗೀತಾ ರಾಜೀವ್, ಸಾಗರ್ ಗುರುರಾಜ್, ರಮ್ಯಾ ರಮೇಶ್, ಪಲ್ಲವಿ ಜೋಷಿ ಮತ್ತು ಸುಮನಾ ದೃವ ಮೊದಲಾದವರು ಗಾಯಕರಾಗಿ, ವಾದಕರಾಗಿ ಅಭಿನಂದನೀಯರು.

ಜಿ.ಎಸ್.ಎಸ್ ಅವರ ಕಾವ್ಯ ಮತ್ತು ಅಭಿವ್ಯಕ್ತಿ ಕುರಿತಾದ ವಿವಿಧ ಆಯಾಮಗಳನ್ನು, ಪ್ರಶ್ನೆ-ಉತ್ತರಗಳ ರೂಪದಲ್ಲಿ ನಿರೂಪಿಸಿ, ಅದಕ್ಕೆ ಹೊಂದುವ ಭಾವಗೀತೆಗಳನ್ನು ಜೋಡಿಸಿ ಪ್ರಸ್ತುತ ಪಡಿಸಿದ್ದು ನನಗೊಂದು ಹೊಸ ಅನುಭವವೆನಿಸಿ ಚೈತನ್ಯದಾಯಕವಾಗಿತ್ತು. ಇಲ್ಲೊಂದು ಮಾತನ್ನು ಹೇಳಲೇಬೇಕು. ಹಾಡಿದ ಎಲ್ಲಾ ಗೀತೆಗಳು ಈಗಾಗಲೆ ಜನಪ್ರಿಯವಾದಂಥವು. ಜನರಿಗೆ ಪರಿಚಿತವಿರದ ಜಿ.ಎಸ್.ಎಸ್ ಕವನಗಳಿಗೆ ರಾಗ ಸಂಯೋಜಿಸಿ ಹಾಡಿಸಿದ್ದರೆ, ಅವರ ಋಣವನ್ನು ಇನ್ನಷ್ಟು ತೀರಿಸಿದಂತಾಗುತ್ತಿತ್ತೇನೋ?

ಉಳಿದ ಎಲ್ಲಾ ಕಾರ್ಯಕ್ರಮಗಳು ಶಾಸ್ತ್ರೀಯ, ಲಘುಸಂಗೀತ, ಚಿತ್ರಸಂಗೀತಗಳಿಂದೊಡಗೂಡಿ ಶೋತೃವರ್ಗವನ್ನು ರಂಜಿಸಿದವು. ಎಲ್ಲರ ಮುಖದಲ್ಲೂ ಸಂತಸ ತೇಲುತ್ತಿದ್ದದ್ದು ಅದಕ್ಕೆ ಸಾಕ್ಷಿಯಾಗಿತ್ತು. ಇವೆಲ್ಲದರ ಮಧ್ಯೆ ವ್ಯಾವಹಾರಿಕ ಜಗತ್ತು ತನ್ನ ಅಸ್ತಿತ್ವ ತೋರಿಸದೆ ಇರಲಿಲ್ಲ. ಪ್ರಾಯೋಜಕರು, ಆಯೋಜಕರು ಮತ್ತು ಸಭಿಕರು ಎಲ್ಲರೂ ತಮ್ಮ ತಮ್ಮ ಮನೋಭಿರುಚಿಗಳಿಗನುಸಾರವಾಗಿ, ವ್ಯಾಪಾರ ನಡೆಸಿದ್ದು, ಅವುಗಳ ಪ್ರಯೋಜನ ಪಡೆದು ಕೊಂಡರೆಂಬುದರಲ್ಲಿ ಸಂದೇಹವಿಲ್ಲ.

ಎಲ್ಲಾ ಕಾರ್ಯಕ್ರಮಗಳ ಆಯೋಜನೆಯಲ್ಲೂ ಸಮಯಾಭಾವ ಬಹು ದೊಡ್ಡ ತೊಡಕು. ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭ ಸಾಧ್ಯ ಕೆಲಸವಲ್ಲ. ಕೆಚ್ಚು. ನಚ್ಚು, ಅಭಿಮಾನ, ಅಂತಃಕರಣ ಮತ್ತು ಸಮರ್ಪಣಾ ಭಾವಗಳಿಲ್ಲದೆ ಈ ರೀತಿಯ ಜವಾಬ್ದಾರಿಗಳನ್ನು ನಿಭಾಯಿಸಲಾಗದು. ಹಾಗಾಗಿ ಪ್ರತಿಯೊಬ್ಬ ಆಯೋಜನಾ ಮಂಡಳಿಯ ಸದಸ್ಯನೂ ಇದಕ್ಕಾಗಿ ಅಭಿನಂದನೀಯ. ವಂದನಾರ್ಪಣೆ ಈ ನಿಟ್ಟಿನಲ್ಲಿ ಬಹಳ ಹೃದಯ ಸ್ಪರ್ಶಿಯಾಗಿತ್ತು. ಇದೆಲ್ಲದರ ಜೊತೆಗೆ, ಕೆಲವು ಘನೋದ್ದೇಶಗಳ ಸಹಾಯಾರ್ಥ ಹಣವನ್ನೂ ಒಗ್ಗೂಡಿಸಲಾಯಿತು. ಒಟ್ಟರೆ ಹೇಳುವುದಾದರೆ, ಇದೊಂದು ಸ್ತುತ್ಯರ್ಹ, ಸ್ಮರಣಾರ್ಹ ಸಮಾರಂಭ.

ಕಡೆಯದಾಗಿ, ಕನ್ನಡ ಒಂದು ಪ್ರಾಂತೀಯ ಭಾಷೆ. ಅದಕ್ಕೆ ಒಂದು ಸೀಮಿತ ಸಂಖ್ಯೆಯ ಜನರು ಮಾತ್ರ ವಾರಸುದಾರರು. ಈ ರೀತಿಯ ಕಾರ್ಯಕ್ರಮಗಳು, ಎಲ್ಲಾ ಸಂಸ್ಥೆಗಳು ಸ್ಥೂಲ ರೂಪದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ; ಆದರೆ ಸೂಕ್ಷ್ಮರೂಪದಲ್ಲಿ ಭಾಷೆಯ ಬಳಕೆಯನ್ನು ಉತ್ತೇಜಿಸುವಲ್ಲಿ ಹಿಂದೆ ಬೀಳುತ್ತವೆ.

ಇಂಗ್ಲಿಷ್ ಭಾಷೆಯ ಅತಿಯಾದ ಕಲಬೆರಕೆಯಿಂದ ತತ್ತರಿಸಿರುವ ಕನ್ನಡ ಭಾಷೆಯನ್ನು, ಆದಷ್ಟು ಶುದ್ಧರೂಪದಲ್ಲಿ ಬಳಸಿ ಉಳಿಸುವ ಪ್ರಕ್ರಿಯೆ ಯಶಸ್ವಿಯಾಗಿ ಕಾರ್ಯಗತವಾದರೆ ಮಾತ್ರ, ಈ ಎಲ್ಲಾ ಶಕ್ತಿ ಸಂಚಯಕ್ಕೆ ಒಂದು ಘನ ಅರ್ಥ ಬರುತ್ತದೆ. ಭಾಷೆಯಿಂದ ಧರ್ಮ, ಮತ್ತು ಧರ್ಮದಿಂದ ಸಂಸ್ಕೃತಿ. ಭಾಷೆ, ಧರ್ಮ ಹಾಗೂ ಸಂಸ್ಕೃತಿಗಳು ಬಳಕೆಯಿಂದ ಮಾತ್ರವೇ ಉಳಿಯಬಲ್ಲವು. ಈ ನಿಟ್ಟಿನಲ್ಲಿ ನಾವುಗಳು ನಿಸ್ಪೃಹವಾದ ರೀತಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ, ಉದ್ದೇಶಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ.

English summary
Kannada Balaga UK celebrated Ugadi on 26th April in London. On the same occasion G.S. Shivarudrappa was remembered by singing his poems. The program was well organized, says the writer Sudarshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X