ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ೦ತ ಕಥೆಯಾದ ಸಾಮ್ರಾಜ್ಞಿ- ಆಸ್ಟ್ರಿಯಾದ ರಾಣಿ ಎಲಿಸಾಬೆತ್

By ಜಯಶ್ರೀ ದೇಶಪಾಂಡೆ
|
Google Oneindia Kannada News

ಅವಳು ಅಪ್ರತಿಮ ಸು೦ದರಿ! ಪ್ರಮಾಣಬದ್ಧ ಶರೀರದೊ೦ದಿಗೆ ಮೊಳಕಾಲುಗಳನ್ನು ದಾಟಿ ಇಳಿಯುತ್ತಿದ್ದ ಅವಳ ಕಡುಗ೦ದು ಬಣ್ಣದ ದಟ್ಟ ಕೂದಲರಾಶಿ ಆ ಸೌಂದರ್ಯಕ್ಕೆ ಮೆರುಗನ್ನು ಹೆಚ್ಚಿಸಿತ್ತು.

ನೋಡಿದವರು ಬೆರಗಾಗುವ೦ಥ ಆಕರ್ಷಕ ವ್ಯಕ್ತಿತ್ವದ ಎಲಿಸಾಬೆತ್ ಆಸ್ಟ್ರಿಯ ದೇಶದ ಇತಿಹಾಸದಲ್ಲೇ ಅತ್ಯ೦ತ ಹೆಚ್ಚು ಜನಜನಿತಳಾದ ಸಾಮ್ರಾಜ್ಞಿ. ಇದೆಲ್ಲವೂ ಅವಳ ಬದುಕಿನ ಒ೦ದು ಮುಖ್ಯ ಅ೦ಶವಾಗಿದ್ದರೆ ಆ೦ತರ್ಯದಲ್ಲಿ ದು:ಖಿತಳಾಗಿ ಮಾನಸಿಕವಾಗಿ ಜರ್ಝರಿತಳಾದ ಅವಳ ನೋವುಗಳು ಜೀವನದ ನಶ್ವರತೆಯ ಮುಖವಾಗಿ ತೋರಿಬರುತ್ತವೆ.

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದ ಹ್ಯಾಬ್ಸ್ ಬರ್ಗ್ ಅರಮನೆಯನ್ನು ಸುತ್ತಾಡುತ್ತಿರುವಾಗ ರಾಣಿ ಎಲಿಸಾಬೆತ್ ಳ ದುರ೦ತ ಜೀವನ ಕಥಾನಕ ಹೆಜ್ಜೆ ಹೆಜ್ಜೆಗೂ ಅಲ್ಲಿನ ಭಾವಚಿತ್ರಗಳಲ್ಲಿ, ಮೂರ್ತಿಗಳಲ್ಲಿ , ಅಲ್ಲಿರುವ ಅವಳ ಅಸ೦ಖ್ಯ ವೈಯುಕ್ತಿಕ ವಸ್ತುಗಳಲ್ಲಿ, ಮಲಗುವ ಕೋಣೆಯಲ್ಲಿ ತನ್ನನ್ನೇ ಚಿತ್ರೀಕರಿಸಿಕೊಳ್ಳುತ್ತದೆ. ಒ೦ದು ಪಾರ್ಶ್ವದಲ್ಲಿ ನಿಲ್ಲಿಸಿರುವ ಅವಳ ಪೂರ್ಣ ಪ್ರಮಾಣದ ಮೂರ್ತಿ ತನ್ನ ಕಥನವನ್ನು ಮೌನವಾಗಿಯೇ ಉಸುರುತ್ತಿರುವ೦ತೆನಿಸುತ್ತದೆ.

ಆಸ್ಟ್ರಿಯಾದ ಸಾಮ್ರಾಟ ಒ೦ದನೆಯ ಫ್ರಾಂಜ್ ಜೋಸೆಫ್ ನ ಮಡದಿಯಾಗಿ ತನ್ನ ಹದಿನಾರನೆಯ ವರ್ಷಕ್ಕೆ ಸಾಮ್ರಾಜ್ಞಿ ಎನಿಸಿಕೊ೦ಡ ಎಲಿಸಾಬೆತ್ ಹ೦ಗರಿ , ಬೊಹೇಮಿಯ ಮತ್ತು ಕ್ರೋಯೇಶಿಯಾ ದೇಶಗಳಿಗೂ ಮಹಾರಾಣಿಯಾದಳು.

ಆದದ್ದೇನೋ ನಿಜ ಆದರೆ ಅವಳ ಎಳೆಯ ವಯಸ್ಸು ಮತ್ತು ಮನಸ್ಸುಗಳು ಇ೦ಥ ರಾಜಕೀಯದ ಗುರುತರ ಭಾರ ಹೊರಲು ಸಿದ್ಧವಾಗಿರಲಿಲ್ಲ,.ಅವಳಿಗೆ ಈ ಮದುವೆಯೇ ಇಷ್ಟವಿರಲಿಲ್ಲ. ಸಾಮ್ರಾಟ ಫ್ರಾಜ್ ಜೋಸೆಫ್ ಅವಳ ಇಷ್ಟದ ಆಯ್ಕೆಯೂ ಆಗಿರಲಿಲ್ಲ.

ಆದರೆ ಆಸ್ಟ್ರಿಯಾದ ರಾಜಮನೆತನದಲ್ಲಿ ಬಹು ಪ್ರಬಲಳಾಗಿದ್ದ ಇವಳ ಅತ್ತೆ ಸೋಫೀ (ಸಾಮ್ರಾಟನ ತಾಯಿ )ಇವಳನ್ನು ತನ್ನ ರಾಜಕೀಯ ದಾಳವಾಗಿ ಬಳಸಿಕೊ೦ಡಳು. ಇವಳು ಹೆತ್ತ ಮಕ್ಕಳನ್ನು ತಾನೇ ಬೆಳೆಸುತ್ತ ಶಿಶು ಪಾಲನೆಯ ಸುಖದಿ೦ದ ಎಲಿಸಾಬೆತ್ ಳನ್ನು ವ೦ಚಿತಳನ್ನಾಗಿಸಿದವಳೂ ಅವಳೇ.

ಎಳೆವಯಸ್ಸಿನ ಎಲಿಸಾಬೆತ್ ಳ ಮನಸ್ಸಿನ ಓಟ, ಯೋಚನಾಧಾಟಿ , ಆಸಕ್ತಿಗಳು ಸ೦ಪೂರ್ಣ ಭಿನ್ನವಾಗಿದ್ದುವು. ಬವೇರಿಯದ ರಾಜನ ಮಗಳಾಗಿ ಹುಟ್ಟಿದ ಎಲಿಸಾಬೆತ್ 'ಸಿಸ್ಸಿ' ಎ೦ದೇ ಜನಪ್ರಿಯಳಾಗಿದ್ದಳು. ಮಹಾರಾಣಿಯಾಗಿದ್ದರೂ, ಎಲಿಸಾಬೆತ್ ದುರಂತ ಸಾವನ್ನಪ್ಪಿದಳು. ಕುತೂಹಲ ಕಥನ ಮುಂದೆ ಓದಿ..

ಅವಳದು ಭಾವನಾತ್ಮಕ ಮನಸ್ಸು

ಅವಳದು ಭಾವನಾತ್ಮಕ ಮನಸ್ಸು

ಅವಳದು ಭಾವನಾತ್ಮಕ ಮನಸ್ಸು, ಕರುಣೆ, ಮೃದುತ್ವ, ಆರ್ದ್ರತೆಗಳು ತು೦ಬಿಕೊ೦ಡಿದ್ದ ಸೂಕ್ಷ್ಮತೆ. ಕಾವ್ಯಾತ್ಮಕವಾಗಿ, ತಾತ್ವಿಕವಾಗಿ ಆಲೋಚಿಸಬಲ್ಲ ಎಲಿಸಾಬೆತ್ ತನ್ನ ಪತಿ ಫ್ರಾನ್ಜ್ ಮತ್ತು ಅವನ ತಾಯಿ ಸೋಫೀಯರೊ೦ದಿಗೆ ಎ೦ದಿಗೂ ಮಾನಸಿಕವಾಗಿ ಹೊ೦ದಿಕೊಳ್ಳದೇ ಹೋದಳು. ಅಸ್ವಸ್ಥ, ಅತೃಪ್ತ ದಾ೦ಪತ್ಯದಲ್ಲಿಯೂ ಮೊದಲಿನ ಎರಡು ಹೆಣ್ಣು ಮಕ್ಕಳ ಜನನದ ಅನ೦ತರ ಗ೦ಡು ಮಗನನ್ನು ಹೆತ್ತು ಕೊಡಲೇಬೇಕಾದ ಒತ್ತಡಕ್ಕೆ ಸಿಲುಕಿ ಇನ್ನು ಹೆಚ್ಚು ಮಾನಸಿಕ ನೋವುಗಳನ್ನು ಉ೦ಡಳು.

ತಾಯಿಯ ಮಾತನ್ನು ಮೀರದ ಮಗ

ತಾಯಿಯ ಮಾತನ್ನು ಮೀರದ ಮಗ

ರಾಜಮನೆತನಗಳಲ್ಲಿ ಹಾಸು ಹೊಕ್ಕಾಗಿರುವ ಸ್ವಾರ್ಥ, ದ್ವೇಷ, ಪ್ರತಿಸ್ಪರ್ಥಿ ಹೋರಾಟಗಳ ಜ೦ಜಾಟಗಳು ಎಲಿಸಾಬೆತ್ ಳನ್ನು ರಾಜಕೀಯಕ್ಕೆ ವಿಮುಖಳನ್ನಗಿ ಮಾಡುತ್ತಿದ್ದುವು. ಅವಳನ್ನು ಮೆಚ್ಚಿ ಹಠ ಮಾಡಿ ಮದುವೆಯಾಗಿದ್ದ ಸಾಮ್ರಾಟ ಫ್ರಾನ್ಜ್ ಜೋಸೆಫ್ ತನ್ನ ತಾಯಿಯ ಮಾತನ್ನೆ೦ದೂ ಮೀರದವನಾಗಿದ್ದ. ತನ್ನ ಪತ್ನಿಯ ಮೇಲೆ ಅವನಿಗೆ ಅಪರಿಮಿತ ಪ್ರೀತಿ ಇತ್ತಾದರೂ ಮಧ್ಯಯುಗೀನ ರಾಜಮನೆತನದ ಕಟ್ಟಳೆಗಳಿ೦ದ ಅವಳನ್ನು ಮುಕ್ತಗೊಳಿಸುವುದು ಅವನಿ೦ದಲೂ ಸಾಧ್ಯವಿರಲಿಲ್ಲ. ಹೀಗಾಗಿ ಅವರಿಬ್ಬರದೂ ವಿರಸದ ದಾ೦ಪತ್ಯವಾಯಿತು.

ಕಾಯಿಲೆಯಿಂದ ಬಳಲಾರಂಭಿಸಿದ ಮಹಾರಾಣಿ

ಕಾಯಿಲೆಯಿಂದ ಬಳಲಾರಂಭಿಸಿದ ಮಹಾರಾಣಿ

ಕೆಮ್ಮು, ಮೈಗ್ರೇನ್ ಗಳ೦ಥ ಮನೋದೈಹಿಕ ಕಾಯಿಲೆಗಳಿ೦ದ ಮಹಾರಾಣಿ ನರಳತೊಡಗಿದ್ದಳು. ಆಸ್ಟ್ರಿಯಾದ ಒ೦ದು ಬಗೆಯ ಬ೦ಧಿತ ಅರಮನೆಯ ಜೀವನದಿ೦ದ ದೂರ ಪ್ರಯಾಣಿಸಿ ಹ೦ಗೆರಿಯ೦ಥ ಸ್ಥಳಗಳಿಗೆ ಹೋದಾಗ ಮಾತ್ರ ಅವಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿತ್ತು. ಹೀಗಾಗಿ ಎಲಿಸಾಬೆತ್ ತನ್ನ ಜೀವನದ ಬಹಳಷ್ಟು ವರ್ಷಗಳನ್ನು ಅನಾರೋಗ್ಯದಿ೦ದ ನರಳುತ್ತ ಪ್ರವಾಸದಲ್ಲಿ ಕಳೆದಳೆ೦ದು ಅರಮನೆಯ ಕಥೆಗಳು ಹೇಳುತ್ತವೆ.

ಗಂಡು ಮಗುವನ್ನು ಹೆತ್ತ ಎಲಿಸಾಬೆತ್

ಗಂಡು ಮಗುವನ್ನು ಹೆತ್ತ ಎಲಿಸಾಬೆತ್

ಕೊನೆಗೂ 1858ರಲ್ಲಿ ಗ೦ಡು ಮಗನನ್ನು ಹೆತ್ತು ರಾಜ್ಯಕ್ಕೆ ಮು೦ದಿನ ಸಾಮ್ರಾಟನನ್ನು ಕೊಟ್ಟ ಎಲಿಸಾಬೆತ್ ರಾಜಕೀಯ ಕಾರ್ಯಗಳಲ್ಲಿ ತನ್ನ ಚಾಣಾಕ್ಷತೆ, ಜಾಣ್ಮೆಗಳಿ೦ದ ಸಾಮ್ರಾಟನ ಅನೇಕ ಸಮಸ್ಯೆಗಳನ್ನು ಬಗೆಹರಿಸಿದಳು. ಅವಳ ಪರಿಹಾರಗಳು ಶಾ೦ತಿಯ ದಾರಿಯನ್ನು ತೋರುತ್ತಿದ್ದವೇ ಹೊರತು ಯುದ್ಧಗಳನ್ನಲ್ಲ. ಸಕಾರಾತ್ಮಕವಾಗಿ, ದೂರದೃಷ್ಟಿಯಿ೦ದ ಆಲೋಚಿಸಬಲ್ಲ ಅವಳ ಸಲಹೆಗಳು ಆಸ್ಟ್ರಿಯಾದ ಹಿತವನ್ನು ಕಾಪಾಡುತ್ತಿದ್ದುವು. ಆದರೂ ಅತ್ತೆಯ ಕುತ೦ತ್ರಗಳಿ೦ದಾಗಿ ತನ್ನ ಮಗನನ್ನೇ ತಾನು ಬೆಳೆಸುವ ಅವಕಾಶದಿ೦ದ ವ೦ಚಿತಳಾದ ರಾಣಿ ಈ ಅನ್ಯಾಯವನ್ನು ಬಹಿರ೦ಗವಾಗಿ ಪ್ರತಿಭಟಿಸಿದ್ದಳು.

ಕುಟಿಲ ನೀತಿಯಿಂದ ದೂರ

ಕುಟಿಲ ನೀತಿಯಿಂದ ದೂರ

ಅರಮನೆಯ ಕುಟಿಲ ನೀತಿಗಳಿ೦ದ ದೂರವಾಗಿ ಇರಬಯಸುತ್ತಿದ್ದಳು. ರಾಜ್ಯದ ಹಿತವನ್ನು ಬಯಸುತ್ತಿದ್ದ ಅವಳಿ೦ದಾಗಿ 1867 ನಲ್ಲಿ ಆಸ್ಟ್ರೋ ಹ೦ಗೇರಿಯನ್ ಒಪ್ಪ೦ದ ಸಾಧ್ಯವಾಯಿತು. ಆಗ ಎಲಿಸಾಬೇತ್ ಮತ್ತು ಫ್ರಾನ್ಜ್ ಜೋಸೆಫ್ ಇಬ್ಬರನ್ನೂ ಹ೦ಗೆರಿಯ ಸಾಮ್ರಾಟ -ಸಾಮ್ರಾಜ್ಞಿಯಾಗಿ ಪಟ್ಟಾಭಿಷೇಕ ಮಾಡಲಾಯಿತು.

ಅಪರಿಮಿತ ಸೌಂದರ್ಯ ಹಾಗೂ ತೆಳುವಾದ ಶರೀರ

ಅಪರಿಮಿತ ಸೌಂದರ್ಯ ಹಾಗೂ ತೆಳುವಾದ ಶರೀರ

ಇದೆಲ್ಲದರ ನಡುವೆಯೂ ತನ್ನ ಅಪರಿಮಿತ ಸೌಂದರ್ಯ ಹಾಗೂ ತೆಳುವಾದ ಶರೀರವನ್ನು ಕಾಯ್ದುಕೊಳ್ಳಲು ಎಲಿಸಾಬೆತ್ ಅತಿ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಳ೦ತೆ. ದಿನವೂ ಕುದುರೆ ಸವಾರಿ, ಗ೦ಟೆಗಳ ಕಾಲ ಕಠಿಣತಮ ವ್ಯಾಯಾಮಗಳು, ತೂಕ ಕೊ೦ಚವೇ ಏರಿದರೂ ಅದನ್ನು ಮೊದಲಿನ ಹ೦ತಕ್ಕೆ ತರಲು ಬಹು ಕಷ್ಟ ಪಡುತ್ತ ಅತೀವ ಫ್ಯಾಷನ್ ಪ್ರಿಯೆ ಆಗಿದ್ದ ಮಹಾರಾಣಿ ಅ೦ದು ಪ್ರಚಲಿತವಾಗಿದ್ದ ಎಲ್ಲ ಬಗೆಯ ಹೊಸ ಉಡುಪುಗಳನ್ನೂ ಧರಿಸುತ್ತಿದ್ದಳ೦ತೆ. ಅವಳ ಸೊ೦ಟದ ಸುತ್ತಳತೆಯನ್ನು ಕೇವಲ ಹದಿನಾರು ಇ೦ಚಿನಷ್ಟು ಕಾಪಾಡಿಕೊಳ್ಳಲು ಬಿಗಿಯಾದ ಚರ್ಮದ ಕೋರ್ಸೆಟ್ ಗಳನ್ನು ಧರಿಸುತ್ತಿದ್ದಳ೦ತೆ. ಅರಮನೆಯಲ್ಲಿ ಸ್ಥಾಪಿತವಾಗಿರುವ ಅವಳ ಮೂರ್ತಿಗಳನ್ನು ಕ೦ಡಾಗ ಇದು ನಿಜ ಎ೦ದೆನಿಸುತ್ತದೆ!

ಇ೦ಪೀರಿಯಲ್ ಅಪಾರ್ಟ್ ಮೆ೦ಟ್ಸ್

ಇ೦ಪೀರಿಯಲ್ ಅಪಾರ್ಟ್ ಮೆ೦ಟ್ಸ್

ಇ೦ಪೀರಿಯಲ್ ಅಪಾರ್ಟ್ ಮೆ೦ಟ್ಸ್ ಎ೦ದು ಹೆಸರಾಗಿರುವ ಹ್ಯಬ್ಸ್ ಬರ್ಗರ್ ಅರಮನೆಯ ಒ೦ದೊ೦ದು ಭಾಗವೂ ನೋಡಲೇಬೇಕಾದ ಆಕರ್ಷಣೆಗಳನ್ನು ಹೊ೦ದಿದೆ. ಅಲ್ಲಿನ ಭವ್ಯ ಒಳಾವರಣ, ದಿವಾನ್ ಖಾನೆಗಳು, ನ೦ಬಲಸಾಧ್ಯ ಅನಿಸುವಷ್ಟು ಪ್ರಮಾಣದ ಚಿನ್ನ, ಬೆಳ್ಳಿ, ಪಿ೦ಗಾಣಿ, ಗಾಜಿನ ಡಿನ್ನರ್ ಸೆಟ್ಟುಗಳು, ಅಲ೦ಕಾರೀ ವಸ್ತುಗಳು, ದೀಪಸ್ಥ೦ಭಗಳು, ಹೂಕು೦ಡಗಳು, ಭವ್ಯ ಪೀಠೋಪಕರಣಗಳು, ಭಾರತೀಯ , ಚೀನೀ, ಯೂರೋಪಿಯನ್ ಶೈಲಿಯ ಒಳಾಲ೦ಕರಣದ ಬೇರೆ ಬೇರೆ ಕೋಣೆಗಳು, ಮುನ್ನೂರು ವರ್ಷಗಳ ಹಿ೦ದಿನ ವಾತಾನುಕೂಲಿತ ವ್ಯವಸ್ಥೆ, ಸ್ನಾನಗೃಹಗಳು...ಒ೦ದೊ೦ದೂ ಸು೦ದರ.

ಸಾಮ್ರಾಜ್ಞಿಯ ಉಡುಗೆ ತೊಡುಗೆ

ಸಾಮ್ರಾಜ್ಞಿಯ ಉಡುಗೆ ತೊಡುಗೆ

ಇನ್ನು ಸಾಮ್ರಾಜ್ಞಿಯ ಉಡುಗೆ ತೊಡುಗೆಗಳನ್ನು ಕ೦ಡು ಆಶ್ಚರ್ಯಪಡದೇ ಇರುವವರೇ ಇಲ್ಲ.ಅವಳ ನೆಲಮುಟ್ಟುವ ಕೂದಲಿನ ರಹಸ್ಯ , ಅವಳ ದೇಹದ ಆಕಾರ , ಸೌಂದರ್ಯವನ್ನು ಬಿ೦ಬಿಸುವ ನೂರಾರು ವರ್ಣಚಿತ್ರಗಳು, ರಾಜ ರಾಣಿಯರ ಖಾಸಾ ವಸ್ತುಗಳು, ಕೊಠಡಿಗಳು ಎಲ್ಲವನ್ನೂ ಬೆರಗಾಗಿ ನೋಡದವರಿಲ್ಲ. ಅವಳ ಬದುಕನ್ನು ಚಲನಚಿತ್ರಗಳು, ಟಿವಿ ಸೀರಿಯಲ್ ಗಳು ಈಗ ನಾನಾ ಬಗೆಯಲ್ಲಿ ಹಿಡಿದಿಟ್ಟು ಜನರಿಗೆ ಪ್ರದರ್ಶಿಸಿವೆ.. ಹಾಲಿವುಡ್ ನ ಪ್ರಸಿದ್ಧ ನಟ ನಟಿಯರು ಆಸಕ್ತಿಯಿ೦ದ ಎಲಿಸಾಬೆಥ್ ಳ ಪಾತ್ರ ವಹಿಸಲು ಮು೦ದಾದರ೦ತೆ!

ಅಪಾರ ದು:ಖಿಯಾಗಿದ್ದ ಮಹಾರಾಣಿ

ಅಪಾರ ದು:ಖಿಯಾಗಿದ್ದ ಮಹಾರಾಣಿ

ಆದರೂ ಇಷ್ಟೆಲ್ಲ ವರ್ಣಮಯ, ವೈಭವೋಪೇತ ಜೀವನವನ್ನು ಕ೦ಡು ಅಧಿಕಾರವನ್ನು ಅನುಭವಿಸಿದ್ದ ಸಾಮ್ರಾಜ್ಞಿ ಒಳಗೊಳಗೇ ಅಪಾರ ದು:ಖಿಯಾಗಿದ್ದಳು. ಅವಳ ವೈವಾಹಿಕ ಜೀವನ ಅವಳ ಆಯ್ಕೆಯಾಗಿರಲಿಲ್ಲ.. ಇದ್ದ ಒಬ್ಬನೇ ಮಗ ಅವಳಿರುವಾಗಲೇ ಸಾವಿಗೀಡಾಗಿದ್ದ.

ದುರಂತ ಸಾವು

ದುರಂತ ಸಾವು

ಅರವತ್ತು ವರ್ಷಗಳ ಇ೦ಥ ಬದುಕಿನ ಅನ೦ತರ ರಾಜಸತ್ತೆಯ ವಿರೋಧಿಯಾಗಿದ್ದ ಲುಇಗಿ ಲೂಶೇನಿ ಎ೦ಬ ಇಟಾಲಿಯನ್ ತಲೆತಿರುಕನೊಬ್ಬ ಅವಳನ್ನು ಚೂರಿಯಿ೦ದ ಇರಿದು ಕೊ೦ದು ಹಾಕಿದಾಗ ಯೂರೋಪಿನಲ್ಲೆಲ್ಲಾ ದು:ಖದ ಛಾಯೆ ಹರಡಿಬಿಟ್ಟಿತ್ತ೦ತೆ. ಬದುಕಿಡೀ ನೊ೦ದಿದ್ದ ಅವಳು ಕೊನೆಯಲ್ಲೂ ಕ್ರೂರ ಸಾವನ್ನೇ ಕ೦ಡ ದುರ೦ತ ಕತೆಯಿದು. ಬದುಕು ನೀಡುವ ಸುಖ-ಸಮೃದ್ಧಿ, ಅಧಿಕಾರ -ಅ೦ತಸ್ತು, ಐಶ್ವರ್ಯಗಳು ಮನಸ್ಸಿಗೆ ನೆಮ್ಮದಿ ನೀಡಲಾರವು ಎ೦ಬ ಕಟು ಸತ್ಯದ ಪ್ರತಿರೂಪವಾಗಿ ಜೀವಿಸಿ ಮರೆಯಾದವಳು ಈ ಎಲಿಸಾಬೆತ್ ಸಾಮ್ರಾಜ್ಞಿ!

English summary
A tragedy story of Empress and beauty Elisaabeth of Austria, Europe by Jayashree Deshpande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X