• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಯಶೋಗಾಥೆ

By ಸುರೇಶ ಭಟ್ಟ, ಸಿಂಗಪುರ
|

ಕನ್ನಡ ಸಂಘ ಸಿಂಗಪುರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಅಕ್ಟೊಬರ್ 29 ಹಾಗು 30ರಂದು ನಡೆದ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ ಅದ್ದೂರಿಯಿಂದ ಆರಂಭವಾಗಿ ಸಂತಸ, ಸಂಭ್ರಮ, ಸಂತೃಪ್ತಿಯೊಂದಿಗೆ ಸಮಾರೋಪಗೊಂಡಿತು.

ಕರ್ನಾಟಕದಿಂದ ಬಂದಂತಹ 125ಕ್ಕೂ ಹೆಚ್ಚು ಕಲಾವಿದರು, 175ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು, ಗಣ್ಯರು ಹಾಗೂ 850ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಪ್ರೇಕ್ಷಕರ ಸಮ್ಮುಖದಲ್ಲಿ "ಸಿಂಗಾರಕನ್ನಡ ಸಂಸ್ಕೃತಿ ಸಮ್ಮೇಳನ" ತನ್ನತನವನ್ನು ಮೆರೆದು ಎಲ್ಲರ ಮನದಲ್ಲಿ ಅವಿಸ್ಮರಣೀಯ ಕ್ಷಣಗಳನ್ನು ಮೂಡಿಸಿತ್ತು. ಪ್ರೇಕ್ಷಕರ, ಪ್ರಾಯೋಜಕರ, ಕಲಾವಿದರ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರಿಗೂ ತೃಪ್ತಿ ತಂದ ಈ ಮೆಗಾ ಕಾರ್ಯಕ್ರಮದ ಯಶೋಗಾಥೆಯ ರಹಸ್ಯವೇನೆಂದು ತಿಳಿಸುವ ಕಿರು ಪ್ರಯತ್ನ ಈ ಲೇಖನ!

ದೊಡ್ಡ ಕನಸು, ಸೂಕ್ತ ಪ್ರಾಶಸ್ತ್ಯ

ಆಂಗ್ಲಭಾಷೆಯಲ್ಲಿ "Hope for the best, prepare for the worst and take whatever comes" ಎಂಬ ನುಡಿಗಟ್ಟೊಂದಿದೆ. ಆದರೆ ಸಂಘ ಅತ್ಯುತ್ತಮವಾದುದನ್ನು ಕೇವಲ ಬಯಸಲಿಲ್ಲ, ಎರಡು ದಿನಗಳ ಅವಧಿಯ, ಅತ್ಯುತ್ತಮವಾದ ಕಾರ್ಯಕ್ರಮವನ್ನು ಆಯೋಜಿಸುವ, ನೀಡುವ ಧ್ಯೇಯೋದ್ದೇಶವನ್ನಿಟ್ಟುಕೊಂಡು ಅದಕ್ಕೆ ಬೇಕಾದ ಪ್ರಯತ್ನಗಳನ್ನು ತುಂಬುಮನಸ್ಸಿನಿಂದ ಮಾಡಿತು. ಇದಕ್ಕೆ ಮೊಟ್ಟಮೊದಲು ಬೇಕಾದದ್ದು "ದೊಡ್ಡ ಕನಸು" ಕಾಣುವ ಕಾರ್ಯಕಾರಿ ಸಮಿತಿ ಮತ್ತು ಅದರ ನಾಯಕತ್ವ.

ಇಂಥದೊಂದು ಕಾರ್ಯಕ್ರಮಕ್ಕೆ ಕನಿಷ್ಠ ಒಂದು ವರ್ಷದ ಅವಧಿಯ ಯೋಜನೆ ಹಾಗೂ ಪರಿಶ್ರಮ ಬೇಕು. ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಈ ಮೆಗಾ ಕಾರ್ಯಕ್ರಮವನ್ನು ತಡವಾಗಿ ಪ್ರಾರಂಭಿಸಿದರೂ ಒಮ್ಮೆ ಶುರು ಮಾಡಿದ ಮೇಲೆ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಗಮನ ನೀಡಲಾಯಿತು. ಸಮ್ಮೇಳನದ ಸಮೀಪದಲ್ಲಿ 3 ತಿಂಗಳ ಕಾಲ ಬೇರೇನೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದೆಂಬ ನಿರ್ಣಯವು ಎಲ್ಲರ ಪರಿಶ್ರಮನ್ನೂ ಈ ಕಾರ್ಯಕ್ರಮಕ್ಕೆ ಮೀಸಲಿಡಲು ಸಹಕಾರಿಯಾಯಿತು.

ಸ್ವಯಂಸೇವಕರ ಬಲ, ಸ್ವಾತಂತ್ರ್ಯದ ಫಲ

If you want to walk fast, walk alone. But if you want to walk far, walk together - Ratan Tata

ಎಂಥ ಸಮಂಜಸವಾದ, ಅನುಭವದ ಮಾತು ಟಾಟಾ ಅವರದ್ದು! ಲಾಭಕ್ಕಲ್ಲದ, ಸಮುದಾಯ ಸೇವೆಗಾಗಿ ಹುಟ್ಟಿಕೊಂಡ ಸಾಂಸ್ಕೃತಿಕ ಸಂಸ್ಥೆ ಕನ್ನಡ ಸಂಘ (ಸಿಂಗಪುರ)ವು ಆಯೋಜಿಸಿದ ಈ ಕಾರ್ಯಕ್ರಮದ ಯಶಸ್ಸಿಗೂ ಅದೇ ಕಾರಣ. ಕೇವಲ 11 ಮಂದಿ ಚುನಾಯಿತ ಸದಸ್ಯರಿಂದ ಇಂಥದೊಂದು ಬೃಹತ್ ಕಾರ್ಯಕ್ರಮದ ಆಯೋಜನೆ ಹಾಗೂ ಕಾರ್ಯಗತಗೊಳಿಸುವುದು ಅಸಾಧ್ಯವೆಂಬ ಅರಿವಿದ್ದ ಕಾರ್ಯಕಾರಿ ಸಮಿತಿಯು ಆರಂಭದ ಹಂತದಲ್ಲೇ ವಿವಿಧ ಉಪಸಮಿತಿಗಳನ್ನು ರಚಿಸಿತು.

ಸ್ವಯಂಸೇವಕರ ಆಸಕ್ತಿಗನುಗುಣವಾಗಿ ಉಪಸಮಿತಿಗಳ ಮುಂದಾಳತ್ವವನ್ನು ವಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಪ್ರಚಾರ, ಸಾಹಿತ್ಯ/ಸುದ್ದಿ, ಪ್ರಾಯೋಜಕತ್ವ, ಸಭಾಂಗಣದ ಅಲಂಕಾರ, ಊಟೋಪಚಾರ / ಅತಿಥಿ-ಸತ್ಕಾರ, ಟಿಕೆಟಿಂಗ್, ಲೆಕ್ಕಪತ್ರ, ಲಾಜಿಸ್ಟಿಕ್ಸ್, ಸಂಪರ್ಕ-ಸಾಧನ (ಈಮೈಲ್), ಮಕ್ಕಳ ಮನರಂಜನೆ, ಆಡಿಯೋ, ವಿಡಿಯೋ ಮತ್ತು ಲೈಟಿಂಗಿನ ತಾಂತ್ರಿಕ ನಿರ್ವಹಣೆ, ಕಾರ್ಯಕ್ರಮದ ಚಿತ್ರೀಕರಣ (ಫೋಟೋ ಮತ್ತು ವಿಡಿಯೋ), ಕಲಾವಿದರ-ಪ್ರಾಯೋಜಕರ-ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ, ಊಟ ಮತ್ತು ಉಪಹಾರದ ವ್ಯವಸ್ಥೆ ಮತ್ತು ವಿತರಣೆ; ಸಭಾಂಗಣದ ಅಲಂಕಾರ; ಪದಕ-ಪಾರಿತೋಷಕಗಳು; ಭಿತ್ತಿಚಿತ್ರಗಳು-ಬ್ಯಾನರುಗಳು-ಪ್ರಚಾರ; ಕಲಾವಿದರಿಗೆ ವಸತಿ, ವಿಮಾನದ ಟಿಕೆಟ್, ವೀಸಾ, ಆದರಾತಿಥ್ಯ ಹೀಗೆ ವಿವಿಧ ಕಾರ್ಯಗಳಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಅಷ್ಟೇ ಅಲ್ಲ, ಸಂಘದ ಕಾರ್ಯಕಾರಿ ಸಮಿತಿಯು "ನಾವು ಹೇಳುತ್ತೇವೆ, (ನಾವು ಹೇಳಿದ್ದಷ್ಟು) ನೀವು ಮಾಡಿ" ಎನ್ನುವ ಧೋರಣೆಯ ಬದಲು "ಇದು ನಮ್ಮೆಲ್ಲರ ಕಾರ್ಯಕ್ರಮ. ನಾವೆಲ್ಲರೂ ಕೂಡಿ ಏನು ಮಾಡಬಹುದೆಂದು ಆಲೋಚಿಸೋಣ" ಎಂಬ ನಿಲುವು ತಾಳಿತು. ಸಾಧಾರಣವಾಗಿ ಇತರೆ ಭಾಷಿಗರಿಗೆ ಹೋಲಿಸಿದರೆ ಹೆಮ್ಮೆ, ಅಭಿಮಾನ ತುಸು ಕಮ್ಮಿ ಎನಿಸುವ; "ನೀವು ಮಾಡಿ, ನಾವು ನೋಡುವೆವು" ಎಂಬ ಮನೋಭಾವದವರೆನಿಸುವ ಕನ್ನಡಿಗರು, ಸಿಂಗನ್ನಡಿಗರು ಅಗತ್ಯ-ಅವಕಾಶ ಬಂದಾಗ ತಾವೇನು ಮಾಡಬಲ್ಲರೆಂದು ತೋರಿಸಿಕೊಟ್ಟರು. ಕನ್ನಡ ಸಂಘ (ಸಿಂಗಪುರ)ದ 20ನೇ ವಾರ್ಷಿಕೋತ್ಸವ ಸ್ಮರಣೀಯವಾಗಿರಬೇಕೆಂಬ ಕನಸು ಹೊತ್ತು, ಸ್ವಯಂಸೇವಕರು ಬೇಕೆಂದು ಕರೆಗೊಟ್ಟು, ಅವರಿಗೆ "ಯಶಸ್ವೀ ಕಾರ್ಯಕ್ರಮ"ದ ಗುರಿ ಹಾಗೂ ಅದಕ್ಕೆ ತಕ್ಕಂತೆ ನೀಡಿದ ಸ್ವಾತಂತ್ರ್ಯದ ಫಲವೇ 125ಕ್ಕೂ ಹೆಚ್ಚು ಸ್ವಯಂಸೇವಕರ ಪರಿಶ್ರಮದ ಯಶಸ್ವೀ ಸಮ್ಮೇಳನ.

ಕೆಲವೇ ನುರಿತ ತಾಂತ್ರಿಕ ಸಿಬ್ಬಂದಿಯ ಹೊರತಾಗಿ ಈ ಕಾರ್ಯಕ್ರಮಕ್ಕೆ ಬೇಕಾದ ಬಹುತೇಕ ಕೆಲಸ-ಕಾರ್ಯಗಳನ್ನು ಅಯೋಜಿಸಿ, ನಿರ್ವಹಿಸಿದ್ದು ಸಂಘದ ಸ್ವಯಂಸೇವಕರು. ಎರಡು ದಿನಗಳ ಈ ಕಾರ್ಯಕ್ರಮದ ಪೂರ್ವದ ಪ್ರಚಾರ, ಕಾರ್ಯಕ್ರಮದ ಸಾಕ್ಷ್ಯ ವರದಿ ಹಾಗೂ ಕಲಾವಿದರೊಂದಿಗೆ, ಪ್ರಯೋಜಕರೊಂದಿಗೆ ಸಂದರ್ಶನವನ್ನು ಆಯೋಜಿಸಿ ಯಶಸ್ವಿಯಾಗಿ ನಿರ್ವಹಿಸಿದವರು ನಮ್ಮ ಸಿಂಗಪುರದ ಯುವ ಹಾಗೂ ಪ್ರಾಪ್ತ ವಯಸ್ಕರ ಸಮ್ಮಿಶ್ರಿತ "ಸುದ್ದಿವಾಹಿನಿ" ತಂಡ.

ಒಂದೇ ಗುರಿ - ಭಿನ್ನಾಭಿಪ್ರಾಯಗಳಿಲ್ಲದೆ ಕಾರ್ಯ ನಿರ್ವಹಿಸಿದ ಮೂರು ತಲೆಮಾರು!

Generation Gap ಎನ್ನುವುದು ನಮ್ಮೆಲ್ಲರ ಜೀವನದ ದಿನನಿತ್ಯದ ಅತಿಥಿ, ಅವಿಭಾಜ್ಯ ಅಂಗವಾಗಿದೆ. ಆದರೆ ಪ್ರಾಯಶಃ ಇದು ಕೆಲವು ವಿಷಯಗಳಲ್ಲಿ ಮಾತ್ರ. ಇನ್ನು ಕೆಲವು, ಹೃದಯಕ್ಕೆ ಸಮೀಪವಾದ ವಿಷಯಗಳಲ್ಲಿ ಎಲ್ಲ ತಲೆಮಾರಿನವರೂ ಒಂದೇ ಗುರಿಯಿಟ್ಟು, ಒಟ್ಟಿಗೆ ಕೆಲಸ ಮಾಡಲು ಸಾಧ್ಯ. ಕನ್ನಡ ಸಂಘ (ಸಿಂಗಪುರ)ವನ್ನು ಕಟ್ಟಿದಾಗ ಎದುರಿಸಿದ ಸಂಕಷ್ಟಗಳು, ಅದರ ನಿವಾರಣೆಗೆ ಪಟ್ಟ ಶ್ರಮ ಸಂಘದ ಸಂಸ್ಥಾಪಕ ಸದಸ್ಯರ ಮನದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆದಾಡುತ್ತಿದ್ದ ಈ ಮಗು ದಷ್ಟಪುಷ್ಟವಾಗಿ ಬೆಳೆದು ಇಪ್ಪತ್ತರ ಹಬ್ಬವನ್ನಾಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಸಂತಸದ ವಿಷಯ.

ಅವರು ಬೆವರು ಸುರಿಸಿ ಕಟ್ಟಿದ ಈ ಸಂಘವನ್ನು ಉಳಿಸಿ ಬೆಳೆಸಿ ಸಂಭ್ರಮದಿಂದ ಆಚರಿಸುವುದು ನಮ್ಮ ಕರ್ತವ್ಯವೆಂದು ಅವರ ಮುಂದಿನ ತಲೆಮಾರಿನ ಸಿಂಗನ್ನಡಿಗರು ಪರಿಶ್ರಮಿಸುತ್ತಿದ್ದರೆ, "ನಾವೇನು ಕಡಿಮೆ" ಎಂದು ಸೇರಿಕೊಂಡು - ಅಂತರ್ಜಾಲ, ಫೇಸ್ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ, ಫೋಟೋ, ವಿಡಿಯೊ ಮುಂತಾದ ತಂತ್ರಜ್ಞಾನಗಳೊಂದಿಗೆ ಕಾರ್ಯಕ್ರಮದ ಮೆರಗು ಹೆಚ್ಚಿಸಲು ಉತ್ಸಾಹದಿಂದ ಮುಂದಾದರು ಯುವಕರು, ಚಿಣ್ಣರು. ಹೀಗೆ ಮೂರೂ ತಲೆಮಾರಿನವರು ಒಟ್ಟಾಗಿ ಮಾಡಿದ ಸಮ್ಮೇಳನ ಯಶಸ್ವಿಯಾಗದಿರಲು ಹೇಗೆ ಸಾಧ್ಯ? ಇಂತಹ ಮೆಗಾ ಕಾರ್ಯಕ್ರಮದಲ್ಲಿ ಮನೆಮಂದಿಯೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂತೋಷದಿಂದ ಭಾಗವಹಿಸಿ, ಹಬ್ಬದ ವಾತಾವರಣ ಮೂಡಿಸಿದ್ದು ಪ್ರಾಯಶಃ ಇದೇ ಮೊದಲು!

ಕಲಾವಿದರ ಆಯ್ಕೆ, ಕಾರ್ಯಕ್ರಮಗಳ ಸುಂದರ ಪೋಣಿಕೆ

ಸಭಿಕರ ಕಲಾಭಿರುಚಿಯನ್ನು ಮನದಲ್ಲಿಟ್ಟುಕೊಂಡು, ಆವರ ಎರಡು ದಿನಗಳ ಸಮಯದ ಬೆಲೆಯನ್ನು ಮನದಲ್ಲಿಟ್ಟುಕೊಂಡು ವಿವಿಧ ಕಲಾಪ್ರಕಾರಗಳ ಉತ್ತಮ ಕಲಾವಿದರನ್ನು/ತಂಡವನ್ನು ಆಯ್ದು, ಆಹ್ವಾನಿತ ಹಾಗೂ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳನ್ನು ಸುಂದರವಾಗಿ ಪೋಣಿಸಲಾಗಿತ್ತು. ಡಾ. ಎಸ್. ಎಲ್. ಭೈರಪ್ಪ, ಪ್ರೊ. ಕೃಷ್ಣೇಗೌಡ, ಸಂಜಯ್ ಶಾಂತಾರಾಮ್, ಮಂಡ್ಯ ರಮೇಶ್ ಇಂತಹ ಕಲಾವಿದರ/ತಂಡಗಳನ್ನು ಆಯ್ಕೆ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂಶಯವೇ ಇರಲಿಲ್ಲ.

ಹೊಸ ಪ್ರಯೋಗವಾದ 'ಸ್ವರಾಮೃತ' ತಂಡದ ಲಘು ಸಂಗೀತ, ಸ್ಯಾಂಡಲ್ ವುಡ್ ಹಾಗೂ ಹಾಲಿವುಡ್ ಸಂಗೀತಗಳ ಮಿಶ್ರಣದ ಕನ್ನಡ ಹಾಡುಗಳ "ಕನ್-ಫ್ಯೂಷನ್" ಕೂಡ ಜನಮನ ಸೂರೆಗೊಂಡಿತು. ಸ್ಥಳೀಯ ಕಲಾಪ್ರಕಾರಗಳಲ್ಲಿ ವೈವಿಧ್ಯತೆ ಹಾಗೂ ಉತ್ತಮ ಗುಣಮಟ್ಟಕ್ಕಾಗಿ ನಡೆಸಿದ ಪೂರ್ವತಯಾರಿಗಳು ಫಲ ನೀಡಿದ್ದವು. ಉತ್ತಮ ಗುಣಮಟ್ಟದ ಕಾರ್ಯಕ್ರಮಕ್ಕೆ ವಿಪರೀತ ಖರ್ಚು, ದುಂದುವೆಚ್ಚ ಮಾಡಲೇಬೇಕೆಂದಿಲ್ಲವೆಂಬ ವಿಚಾರಧಾರೆ ಉಪಯುಕ್ತವಾಗಿತ್ತು.

ಆಧುನಿಕ ತಂತ್ರಜ್ಞಾನದ ಬಳಕೆ

ಆಧುನಿಕ ತಂತ್ರಜ್ಞಾನದ ಬಳಕೆಯ ನಿರ್ಧಾರ ಹಾಗೂ ಅದರ ಸಮರ್ಪಕ ಬಳಕೆ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಯಿತು. ಕನ್ನಡ ಸಂಘ (ಸಿಂಗಪುರ)ದ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ವೇದಿಕೆಯ ಹಿಂಭಾಗದಲ್ಲಿ ಬಳಸಲಾದ LED ಪ್ಯಾನೆಲ್ ಈ ಶ್ರೀಮಂತ ಕಾರ್ಯಕ್ರಮಕ್ಕೆ ಶೋಭೆ ತಂದರೆ, ಅದಕ್ಕೆ ಅಗತ್ಯವಾದ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಸಮಂಜಸವಾದ ಬಹುತೇಕ ಹಿನ್ನೆಲೆ ವಿಡಿಯೋಗಳನ್ನು ಆಯ್ದ ಅಥವಾ ಸಂಕಲನ ಮಾಡಿದ ಹೆಗ್ಗಳಿಕೆ ಸಿಂಗನ್ನಡಿಗ ಸ್ವಯಂಸೇವಕರದ್ದು!

ಪೂರ್ಣ-ಪ್ರಮಾಣದಲ್ಲಿ ಆನ್-ಲೈನ್ ಟಿಕೆಟಿಂಗ್ ಹಾಗೂ ಸೀಟ್-ಸೆಲೆಕ್ಷನ್ ವ್ಯವಸ್ಥೆಯನ್ನು ಕೂಡ ಇದೇ ಮೊದಲ ಬಾರಿಗೆ ಅಳವಡಿಸಲಾಗಿತ್ತು. ಇದು ಟಿಕೆಟ್ ಮಾರಾಟದ ಕಾರ್ಯನಿರ್ವಹಣೆಯನ್ನು ಬಹಳ ಸುಲಭಗೊಳಿಸಿತ್ತು. ಸಮ್ಮೇಳನಕ್ಕಾಗಿಯೇ ಆಕರ್ಷಕ ಅಂತರ್ಜಾಲ ತಾಣದ ರಚನೆ, ಫೇಸ್ ಬುಕ್, ಆನ್-ಲೈನ್ ಮೀಡಿಯಾ ಮುಂತಾದ ಮಾಧ್ಯಮಗಳಲ್ಲಿ ಪ್ರಚಾರ ಈ ಕಾರ್ಯಕ್ರಮವನ್ನು ಜನಪ್ರಿಯವಾಗಿಸಿತ್ತು. ಕಾರ್ಯಕ್ರಮದ ಕ್ಷಿಪ್ರ-ವರದಿ, ಪಬ್ಲಿಕ್ ಟಿವಿ ಅವರಿಂದ ಕಾರ್ಯಕ್ರಮದ ಮುಖ್ಯಾಂಶಗಳ ಪುನಃಪ್ರಸಾರ ವಿಶ್ವಕನ್ನಡಿಗರೆಲ್ಲರಿಗೂ ಸಿಂಗಾರ ಸಮ್ಮೇಳನದ ಸವಿಯನ್ನು ನೀಡಿತ್ತು. ಎರಡೂ ದಿನಗಳ ಸಮ್ಮೇಳನದ ವರದಿಯನ್ನು ಸಿಂಗಪುರದಿಂದಲೇ ವರದಿ ಮಾಡಲು ಸಾಧ್ಯವಾದದ್ದು ಒನ್ಇಂಡಿಯಾ ಕನ್ನಡದ ಆಹ್ವಾನಿತರಾದ ಪ್ರಸಾದ ನಾಯಿಕ ಅವರ ಸಹಕಾರದಿಂದ.

ಅಲಂಕಾರ

ಈ ಸಮ್ಮೇಳನಕ್ಕಾಗಿಯೇ ಸಂಘ ಆಯೋಜಿಸಿದ ಅಲಂಕರಣ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದಿತ್ತು. 16ನೇ ಅಕ್ಟೋಬರ್ 2016ರಂದು ಕರ್ನಾಟಕದ ಥರ್ಮೋಕೋಲ್ ಕುಶಲಕಲೆಯ ಶ್ರೀನಿವಾಸ ರಾಜ್ ಅರಸ್ ಅವರಿಂದ "ಸಿಂಗಾರ ಕಲಾ ಶಿಬಿರ"ವನ್ನು ಏರ್ಪಡಿಸಿತ್ತು. ಯಶಸ್ವಿಯಾಗಿ ಮೂಡಿಬಂದ ಈ ಶಿಬಿರದ ನಂತರ ಅವರು ಸಮ್ಮೇಳನದವರೆಗೆ ಹಗಲು ರಾತ್ರಿ ಶ್ರಮಿಸಿ ಬೇಲೂರು, ಹಳೇಬೀಡು ಮುಂತಾದ ಥರ್ಮೋಕೋಲ್ ವಿಗ್ರಹಗಳನ್ನು ಕೆತ್ತಿ ಅದರಿಂದ ಸಭಾಂಗಣವನ್ನು ಸುಂದರವಾಗಿ ಅಲಂಕರಿಸಿದರು. ಅದರ ಜೊತೆಗೆ ಸಂಘದ "ಅಲಂಕರಣ" ಸಮಿತಿಯು ರಂಗೋಲೆ, ಅಲಂಕಾರದ ಬ್ಯಾನರುಗಳು, ದೀಪಗಳು, ಕರ್ನಾಟಕದ ನಕಾಶೆಯ ಮೇಲೆ ಕನ್ನಡನಾಡಿನ ಪ್ರಖ್ಯಾತ ಸ್ಥಳಗಳ ಥರ್ಮೋಕೋಲ್ ಆಕೃತಿಗಳು, ಕಂಬಗಳು, ದ್ವಾರಗಳು ಹೀಗೆ ಸಭಾಂಗಣ ಮತ್ತು ಹೊರಾಂಗಣವನ್ನು ಸುಂದರವಾಗಿ ಸಿಂಗರಿಸಿ ಫೋಟೋ ತೆಗೆಯುವ ಹಾಗೂ ತೆಗೆಸಿಕೊಳ್ಳುವ ಖಯಾಲಿ ಇರುವವರಿಗೆ ಸೂಕ್ತ ಹಿನ್ನೆಲೆಯನ್ನು ಒದಗಿಸಿಕೊಟ್ಟರು.

ಪ್ರಾಯೋಜಕತ್ವ; ಪ್ರಾಯೋಜಕರಿಗಾಗಿ ಮತ್ತು ಸಭಿಕರಿಗಾಗಿ ಆಯೋಜಿಸಿದ ಆಕರ್ಷಣೆಗಳು

ಆರ್ಥಿಕ ಮುಗ್ಗಟ್ಟಿರುವ ಸಮಯದಲ್ಲಿ ಹಿಂಜರಿಯದೆ ಪ್ರಾಯೋಜಕರನ್ನು ಹುಡುಕಿ, ಅವರ ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು, ಅವರ ಅಗತ್ಯ ಹಾಗೂ ಈ ಕಾರ್ಯಕ್ರಮಕ್ಕೆ ಬೇಕಾದ ಧನಸಹಾಯವನ್ನು ಆಯೋಜಿಸಿದ ಪ್ರಾಯೋಜಕತ್ವ ಉಪಸಮಿತಿಯ ಶ್ರಮ ನಿಜಕ್ಕೂ ಶ್ಲಾಘನೀಯ. ಈ ವ್ಯವಸ್ಥೆ ಇರದಿದ್ದರೆ ಈ ಬೃಹತ್ ಕಾರ್ಯಕ್ರಮದ ಖರ್ಚು-ವೆಚ್ಚಗಳನ್ನು ಸರಿದೂಗಿಸುವುದು ಅಸಾಧ್ಯವಾಗಿತ್ತು.

ಸಂಘವು ಪ್ರವೇಶಾಂಗಣದಲ್ಲಿ ಆಯೋಜಿಸಿದ "ಈ ಕಾರ್ಯಕ್ರಮದ ಗೋಲ್ಡ್ ಮತ್ತು ಸಿಲ್ವರ್ ಪ್ರಾಯೋಜಕರು ಮತ್ತು ಸಭಿಕರ ನಡುವಣ ವಿಚಾರ ವಿನಿಮಯ" ಎಲ್ಲರ ಮೆಚ್ಚುಗೆ ಪಡೆಯಿತು. ಪ್ರಾಯೋಜಕರ ಮಳಿಗೆಗೆ ಭೇಟಿ ನೀಡಿದ ಸಿಂಗನ್ನಡಿಗರಿಗೆ ಅದೃಷ್ಟದ ಚೀಟಿ - ಆಕರ್ಷಕ ಬಹುಮಾನಗಳು, ಸೈನ್-ಅಪ್ ಉಚಿತ ಉಡುಗೊರೆಗಳು, "ಸಮ್ಮೇಳನಕ್ಕೊಂದು ಸಂದೇಶ" ಎಂಬ ರಚನಾತ್ಮಕ ಚಿತ್ರಸುರುಳಿ ಸಂದೇಶ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಈ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಉಚಿತವಾಗಿ ವಿತರಿಸಿದ ಹೋಳಿಗೆ, ಮೈಸೂರುಪಾಕ್ ಮತ್ತು ಐಸ್ ಕ್ರೀಮುಗಳು ಸಭಿಕರ ಕಣ್ಣು ಕಿವಿಗಳಿಗಷ್ಟೇ ಅಲ್ಲ, ನಾಲಿಗೆಗೂ ಸಂತೃಪ್ತಿ ನೀಡಿತ್ತು.

ಊಟ-ಉಪಹಾರದ ಉತ್ತಮ ವ್ಯವಸ್ಥೆ

ಎರಡು ದಿನಗಳ ಕಾರ್ಯಕ್ರಮ; ಯಾರು ಯಾವಾಗ ಬರುತ್ತಾರೋ, ಊಟ-ತಿಂಡಿಗಳನ್ನು ಕೊಂಡುಕೊಳ್ಳುತ್ತಾರೋ ಇಲ್ಲವೋ, ಕಲಾವಿದರ-ಸಭಿಕರ ಅಭಿರುಚಿಗಳೇನೋ, ವ್ಯವಸ್ಥೆ ಮಾಡಿದ ಊಟ-ಉಪಹಾರ ಕಡಿಮೆ/ಅಧಿಕವಾದಿತೋ ಎಂಬ ಹತ್ತು-ಹಲವಾರು ಅನಿಶ್ಚಿತತೆಗಳಿದ್ದರೂ ಸಕಾಲಕ್ಕೆ ವಿವಿಧ ರೀತಿಯ ಊಟ-ಉಪಹಾರದ ಉತ್ತಮ ವ್ಯವಸ್ಥೆ ಮಾಡಿ, ವಿತರಣೆ ಮಾಡಿದ ಊಟ-ಉಪಹಾರದ ಉಪಸಮಿತಿಯ ಪರಿಶ್ರಮ ಶ್ಲಾಘನೀಯ. ದೀಪಾವಳಿ ಹಬ್ಬವನ್ನು ಸಿಂಗನ್ನಡಿಗರ ಸಮೂಹದ ಜೊತೆ ಆಚರಿಸುವಲ್ಲಿ ಹಬ್ಬದೂಟದ ಸವಿ-ಸಿಹಿ ತನ್ನದೇ ಆದ ಪಾತ್ರ ವಹಿಸಿತ್ತು!

ಯಶಸ್ವೀ ಕಾರ್ಯಕ್ರಮಕ್ಕೆ ಪೂರಕವಾದ ಇನ್ನಿತರ ಅಂಶಗಳು

* ಪ್ರೇಕ್ಷಕರು, ಪ್ರಾಯೋಜಕರು, ಕಲಾವಿದರು, ಸಂಘ ಹೀಗೆ ಎಲ್ಲರ ಅಗತ್ಯಗಳನ್ನೂ ಅರಿತು ಅದಕ್ಕೆ ತಕ್ಕದಾಗಿ ಮೂಡಿದ ಉತ್ತಮವಾದ ಯೋಜನೆ, ಪರ್ಯಾಯ ಯೋಜನೆಗಳು

* ಸಂಘದ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನಕ್ಕೆ ಸಂಘದ ಸದಸ್ಯರ, ಸ್ವಯಂಸೇವಕರ, ಹಿತೈಷಿಗಳ ಸಂಪೂರ್ಣ ಬೆಂಬಲ

* ಸಮ್ಮೇಳನಕ್ಕೂ ಮೊದಲು ಮತ್ತು ಸಮ್ಮೇಳನದಲ್ಲಿ ಆಯೋಜಿಸಿದ ವಿವಿಧ ಶಿಬಿರಗಳು, ಸ್ಪರ್ಧೆಗಳು; ಎಲ್ಲ ವಯೋಮಾನದವರನ್ನೂ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮತ್ತು ಅದಕ್ಕನುಗುಣವಾಗಿ ಎರಡು ದಿನ ಸಭಾಂಗಣದೊಳಗೆ ಮತ್ತು ಹೊರಗೆ ಆಯೋಜಿಸಿದ ವಿವಿಧ ಕಾರ್ಯಕ್ರಮಗಳು

* ವಾಸ್ತವ ಪರಿಸ್ಥಿತಿಯ ಅರಿವು, ವಿಶ್ವಮಟ್ಟದಲ್ಲಿ ಇತರ ಸಂಘ-ಸಂಸ್ಥೆಗಳು ಆಯೋಜಿಸಿದ ಇಂತಹ ಸಮ್ಮೇಳನಗಳ ಬಗ್ಗೆ ಬಂದ ಪ್ರತಿಕ್ರಿಯೆಯಿಂದ ಕಲಿತ ಪಾಠಗಳು

* ಕಾರ್ಯಕ್ರಮಗಳ ವೈವಿಧ್ಯತೆ; ಸ್ಥಳೀಯ ಮತ್ತು ಆಹ್ವಾನಿತ ಕಲಾವಿದರ ಕಾರ್ಯಕ್ರಮಗಳ ಸೂಕ್ತಮಟ್ಟದ ಮಿಶ್ರಣ

* ಕಡಿಮೆ/ ರಿಯಾಯತಿ ದರದಲ್ಲಿ ಟಿಕೆಟ್

* ಉತ್ತಮ ಗುಣಮಟ್ಟದ ಆಡಿಯೋ, ವಿಡಿಯೋ

* ನಕಾರಾತ್ಮಕ ವಿಚಾರ / ವ್ಯಕ್ತಿಗಳಿಂದ ಸಾಧ್ಯವಾದಷ್ಟೂ ದೂರವಿರುವ ಪ್ರಯತ್ನ

* ಕರ್ನಾಟಕದಿಂದ ಬಂದ ಜಾನಪದ ಕಲಾವಿದರು ಈ ಕಾರ್ಯಕ್ರಮಕ್ಕೆ ನೀಡಿದ ಸೊಬಗು - ಜಾನಪದ ಮೆರವಣಿಗೆಯ ಮೆರುಗು

ವರದಿ: ಕನ್ನಡ ಸಂಘ (ಸಿಂಗಪುರ)

English summary
Suresha Bhatta, vice president of Kannada Sangha Singapore shares the success story behind Singara Sammelana conducted in 2016 October. He also thanked all those who worked relentlessly to make the 20th anniversary of Sangha a grant success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more