• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ 'ಪುರಂದರ ನಮನ'ದಲ್ಲಿ ಹರಿದ ಭಕ್ತಿ ಸುಧೆ

By ಅರ್ಚನಾ ಪ್ರಕಾಶ್
|

ಸಿಂಗಪೂರಿನ ಸಂಗೀತ ದೇಗುಲವೆಂದೇ ಕರೆಯಲ್ಪಡುವ SIFASನ ಪ್ರಾಂಗಣದಲ್ಲಿ ಸಂಭ್ರಮ, ಹಬ್ಬದ ವಾತಾವರಣ. ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಹಾಗೂ ಕನಕದಾಸರ ಚಿತ್ರಗಳನ್ನು ಹೂವಿನಿಂದ ಅಲಂಕರಿಸಿ ಎದುರಿಗೆ ಬಣ್ಣದ ರಂಗೋಲಿ ಇಡುವುದು ಒಂದೆಡೆಯಾದರೆ ಪಕ್ಕ ವಾದ್ಯಗಳನ್ನು ಶ್ರುತಿ ಮಾಡುವುದು ಇನ್ನೊಂದೆಡೆ, ದಾಸರ ಕೃತಿಗಳನ್ನು ಹಾಡಲು ಧನ್ಯತಾ ಭಾವದಿಂದ ಕುಳಿತ ಅಭಿಜ್ಞರು ಮತ್ತೊಂದೆಡೆ. ಒಟ್ಟಿನಲ್ಲಿ ಸಭಾ ಭವನದಲ್ಲಿ ಎತ್ತ ನೋಡಿದರೂ ಸಂಗೀತದ ಸಡಗರ.

ಕನ್ನಡ ಸಂಘ (ಸಿಂಗಪುರ) ಹಾಗೂ SIFAS (Singapore Indian Fine Arts Society) ಸಹಯೋಗದಲ್ಲಿ ಆಯೋಜಿಸಿದ್ದ 'ಶ್ರೀ ಪುರಂದರ ನಮನ 2016' ಕಾರ್ಯಕ್ರಮವು ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷ ವಿಜಯರಂಗ ಪ್ರಸಾದ್, SIFASನ ಮುಖ್ಯ ಕಾರ್ಯ ನಿರ್ವಾಹಕ ಕೃಷ್ಣ ಕುಮಾರ್, ಉಪಾಧ್ಯಕ್ಷೆ ಅನುಜ ವೆಂಕಟೇಶ್, ಡಾ. ಭಾಗ್ಯ ಮೂರ್ತಿ ಮತ್ತು ಉಸ್ತಾದ್ ಫೈಯಾಜ್ ಖಾನ್ ಅವರು ದೀಪ ಬೆಳಗಿಸುವ ಮೂಲಕ ಶುಭಾರಂಭವಾಯಿತು. [ಪಿಳ್ಳಾರಿ ಗೀತೆಗಳಲ್ಲಿ ಮೊದಲನೆಯದು ಲಂಬೋದರ]

ಗಾನ ಕೋಗಿಲೆ ಡಾ. ಭಾಗ್ಯ ಮೂರ್ತಿ ಅವರ ನೇತೃತ್ವದಲ್ಲಿ ಅವರ ಶಿಷ್ಯರು ಮತ್ತು ಸಿಂಗಪೂರಿನ ಪ್ರಮುಖ ಸಂಗೀತ ವಿದುಷಿಗಳಿಂದ ಶ್ರೀ ಪುರಂದರ ದಾಸರ ಮತ್ತು ಕನಕ ದಾಸರ ಕೃತಿಗಳ ಸಮೂಹಗಾಯನ. ಶಾಸ್ತ್ರೀಯವಾಗಿ ಸರಳೆ ವರಸೆಯಿಂದ ಗಾನವನ್ನು ಪ್ರಾರಂಭಿಸಿ, ಪಿಳ್ಳಾರಿ ಗೀತೆಗಳು ನಂತರ ಭಕ್ತಿಯೋಗದಲ್ಲಿ ದಾಸರು ದೇವರ ವಿವಿಧ ರೂಪಗಳನ್ನು ಹಾಡಿ ಹೊಗಳಿದ ರಾಮ.. ರಾಮ, ಕ್ಷೀರಾಬ್ಧಿ ಕನ್ನಿಕೆ, ನಾರಸಿಂಹನ ಪಾದ, ಶಿವದರುಶನ ನಮಗಾಯಿತು. ಎನಗೂ ಆಣೇ ರಂಗ, ವೆಂಕಟಾಚಲ ನಿಲಯಮ್... ಕೃತಿಗಳನ್ನು ಸಮ ಚಿತ್ತ, ಸಮ ಭಾವದಿಂದ ಒಂದೇ ದನಿಯಾಗಿ ಹಾಡಿ ಜನರ ಮೆಚ್ಚುಗೆ ಗಳಿಸಿದರು.

ಪ್ರಮುಖ ಸಂಗೀತಾಭಿಜ್ಞರಿಗೆ ಮತ್ತು ಪಕ್ಕವಾದ್ಯ ನುಡಿಸಿದ ಕಲಾವಿದರಿಗೆ ಕನ್ನಡ ಸಂಘ (ಸಿಂಗಪುರ)ದ ವತಿಯಿಂದ ಕಿರುಕಾಣಿಕೆ ಕೊಟ್ಟು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ, ದಾಸರ ಕೃತಿಗಳ ಗಾಯನ, ವಾದ್ಯ ಸ್ಪರ್ಧೆಗಳ ವಿಜೇತರಿಗೆ ಅಧ್ಯಕ್ಷ ವಿಜಯರಂಗ ಪ್ರಸಾದ್, ಡಾ. ಭಾಗ್ಯ ಮೂರ್ತಿ, ಸುಮ ಮೂರ್ತಿ, ಕೃಷ್ಣ ಕುಮಾರ್, ಸೋಮಶೇಖರ್ ಅವರಿಂದ ಬಹುಮಾನ ಮತ್ತು ಪ್ರಶಸ್ತಿಪತ್ರಗಳ ವಿತರಣೆ ನಡೆಯಿತು.

ಎಲ್ಲರೂ ಕಾತುರತೆಯಿಂದ ಕಾಯುತ್ತಿದ್ದ, ಭಾರತ ಶಾಸ್ತ್ರೀಯ ಸಂಗೀತದ ಎರಡು ಪ್ರಕಾರಗಳಾದ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ 'ಜುಗಲ್ ಬಂದಿ' ಪ್ರಾರಂಭವಾಗುತ್ತಿದ್ದಂತೆ ಸಭೆಯಲ್ಲಿ ಉತ್ಸುಕತೆ ತುಂಬಿದ ಮೌನ. ಕರ್ನಾಟಕ ಸಂಗೀತವು, ನಮ್ಮವರೇ ಆದ ವಿದುಷಿ ಅಶ್ವಿನಿ ಸತೀಶ್ ಅವರು ನಿರ್ವಹಿಸಿದರೆ, ಹಿಂದೂಸ್ಥಾನಿ ಸಂಗೀತ ಉಸ್ತಾದ್ ಫೈಯಾಜ್ ಖಾನ್ ಅವರಿಂದ. 'ಜುಗಲ್ ಬಂದಿ' ಕಾರ್ಯಕ್ರಮವನ್ನು ಯಮನ್ ರಾಗದಲ್ಲಿ ಪುರಂದರ ದಾಸರ 'ಗಜವದನಾ ಬೇಡುವೆ' ಹಾಡಿನಿಂದ ಉಸ್ತಾದ್ ಫೈಯಾಜ್ ಖಾನ್ ಅವರು ಪ್ರಾರಂಭಿಸಿದರು. ವಿಘ್ನನಿವಾರಕ ಗಣಪತಿಯನ್ನು ವಂದಿಸಿದ ನಂತರ ಅಶ್ವಿನಿಯವರು ಕನಕದಾಸರ "ತೊರೆದು ಜೀವಿಸಬಹುದೆ " ಕೃತಿಯನ್ನು ಮುಖಾರಿ ರಾಗದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಇದಕ್ಕೆ ಉತ್ತರವೇನೊ ಎಂಬಂತೆ ಫೈಯಾಜ್ ಖಾನ್ ಅವರು "ಹರಿ ನಿನ್ನ ಒಲುಮೆಯಾಗುವ ತನಕ..." ಕೃತಿಯನ್ನು ಸಭಿಕರು ತಲೆದೂಗುವಂತೆ ಹಾಡಿದರು.

ಪುರಂದರ ದಾಸರ "ಮೂರುತಿಯನು ನಿಲ್ಲಿಸೋ.." ಹಾಡನ್ನು, ಕರ್ನಾಟಕ ಶೈಲಿಯಲ್ಲಿ ಖರಹರಿಪ್ರಿಯ ರಾಗ ಹಾಗೂ ಹಿಂದೂಸ್ತಾನಿ ಶೈಲಿಯಲ್ಲಿ ಕಾಪಿ ರಾಗದಲ್ಲಿ ಸ್ವರ ವಿಸ್ತಾರ, ಆಲಾಪಗಳೊಂದಿಗೆ ಅದ್ಭುತವಾಗಿ ಹಾಡಿ ಇಬ್ಬರೂ ತಮ್ಮ ಕಲಾ ಪಾಂಡಿತ್ಯ ಮತ್ತು ಪ್ರೌಢಿಮೆಯನ್ನು ಮೆರೆದರು. ಉಸ್ತಾದ್ ಫೈಯಾಜ್ ಖಾನ್ ಅವರು "ಒಡೆಯನಾಗಿ ಮೂರು ಜಗವನೆ.." ಬಹಾರ್ ರಾಗದಲ್ಲಿಯೂ "ಬಾಗಿಲನು ತೆರೆದು ಸೇವೆಯನು.." ಲಲಿತ್ ಬತಿಯಾರ್ ರಾಗದಲ್ಲಿಯೂ ಹಾಡಿ ಜನಮನ ಗೆದ್ದರು. ವಿದುಷಿ ಅಶ್ವಿನಿ ಸತೀಶ್ ಅವರು ಪೂರ್ವಿಕಲ್ಯಾಣಿ ರಾಗದಲ್ಲಿ "ಈತನೀಗ ವಾಸುದೇವನು..." ಕೃತಿಯನ್ನು ಕಲಾಪ್ರೇಮಿಗಳು ಒನ್ಸ್ ಮೋರ್ ಎನ್ನುವಂತೆ ಹಾಡಿದರು. [ಸಿಂಗಪುರದಲ್ಲಿ ಮೇಳೈಸಿದ 'ಲಯತರಂಗ'ದ ನಾದವೈಭವ]

ಕೊನೆಯದಾಗಿ "ನೀನೆ ದಯಾಳೊ.." ಕೃತಿಯನ್ನು ಭೈರವಿ/ ಸಿಂಧು ಭೈರವಿ ರಾಗದಲ್ಲಿ ಎರಡೂ ಶೈಲಿಯಲ್ಲಿ ಇಬ್ಬರು ಸಂಗೀತಜ್ಞರು ಹಾಡಿದಾಗ ಸಭಿಕರಿಗೆ ಸಂಗೀತದಲ್ಲಿ ಮಿಂದ ಅನುಭವ. ಕಲಾರಸಿಕರನ್ನು ಸಂಗೀತಲೋಕಕ್ಕೆ ಕರೆದೊಯ್ಯಲು ಇವರಿಗೆ ಪಕ್ಕವಾದ್ಯದಲ್ಲಿ ಜೊತೆ ನೀಡಿದವರು ವಿದ್ವಾನ್ ಬಾಂಬೆ ವಿ. ಆನಂದ್(ವಯೋಲಿನ್), ಸರ್ಫ಼ರಾಜ಼್ ಖಾನ್ (ಸಾರಂಗಿ), ಉಸ್ತಾದ್ ಚಿರದೀಪ್ ಬಾನರ್ಜಿ(ತಬಲ), ವಿದ್ವಾನ್ ತ್ರಿಪುನಿತುರ ಶ್ರೀಕಾಂತ್ (ಮೃದಂಗ).

ಉತ್ತಮ ಕಾರ್ಯಕ್ರಮ ನಿರೂಪಣೆ ಜಿ.ಎಸ್. ಸ್ನೇಹಲತ ಮತ್ತು ಪ್ರೀತಿ ಗಣೇಶ್ ಅವರಿಂದಾದರೆ ವಂದನಾರ್ಪಣೆ ಮಾಡಿದವರು SIFASನ ಉಪಾಧ್ಯಕ್ಷೆ ಸರಿತ ಶ್ರೀರಾಮ್. ಕಾರ್ಯಕ್ರಮದ ಪೂರ್ಣ ಕಲ್ಪನೆ ಮತ್ತು ನಿರ್ವಹಣೆ ಕನ್ನಡ ಸಂಘ (ಸಿಂಗಪುರ)ದ ಖಜಾಂಜಿ ಸುಮನ ಹೆಬ್ಬಾರ್ ಅವರದು. ಗುರುಗಳ ತಪಸ್ಸಿಗೆ ಶಿಷ್ಯರ ಸೇವೆ ಸೇರಿದರೆ ಮಾಡಿದ ಸಂಕಲ್ಪ ಸಿದ್ಧಿಯಾಗುತ್ತದೆ ಎನ್ನುವುದಕ್ಕೆ ನಿದರ್ಶನದಂತ್ತಿದ್ದ 'ಶ್ರೀ ಪುರಂದರ ನಮನ 2016' ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ.

ವರದಿ : ಅರ್ಚನಾ ಪ್ರಕಾಶ್

ಛಾಯಚಿತ್ರ: ಗಿರೀಶ್ ಜಮದಗ್ನಿ/ಸಮಂತ್

English summary
Sri Purandara Namana 2016 was observed in Singapore by Kannada Sangha and Singapore Indian Fine Arts Society jointly. Music enthusiasts thoroughly enjoyed songs sung by Faizal Khan and Bhagya Murthy. Report by Archana Prakash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more