• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೀಡಾಸಂಚಯ ಮತ್ತು ಹೋಳಿ ಆಚರಿಸಿದ ಕುವೈತ್ ಕನ್ನಡ ಕೂಟ

|

ಕುವೈತ್ ಕನ್ನಡ ಕೂಟದ ವರ್ಷದ ಎರಡನೇ ಕಾರ್ಯಕ್ರಮವಾಗಿ ಹೊರಾಂಗಣ ವಿಹಾರ, ಆಟೋಟ ಮತ್ತು ಹೋಳಿಯ ಸಂಭ್ರಮದ ಆಚರಣೆ "ಕ್ರೀಡಾಸಂಚಯ" ಕುವೈತ್ ಹೊರವಲಯದ ವಾಫ್ರ ತೋಟದ ಮನೆಯಂಗಳದಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು.

ಸಾಲ್ಮಿಯಾ ಮತ್ತು ಮಂಗಾಫ್ ಗಳಿಂದ ಎರಡು ಬಸ್ ಮತ್ತು ತಮ್ಮದೇ ಖಾಸಗಿ ವಾಹನಗಳಲ್ಲಿ ಸವಾರಿ ಹೊರಟ ಕೂಟದ ಸದಸ್ಯರು ಮತ್ತು ಅವರ ಪರಿವಾರದ ಸಂಭ್ರಮದ ಆಚರಣೆ ಪ್ರಾರಂಭವಾಗಿ ರಾತ್ರಿ ಮತ್ತೆತಮ್ಮ ತಮ್ಮ ಗೂಡು ಸೇರುವವರೆಗೂ ನಡೆದೇ ಇತ್ತು.

ಕ್ರೀಡಾಸಂಚಯಕ್ಕೆ ಉತ್ತಮ ಪ್ರಚಾರಕೊಟ್ಟ ಜಯಲಕ್ಷ್ಮಿ ಕಾರ್ಕಳರ ಮುಂದಾಳತ್ವದ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಸಮಿತಿಯ ವೀಡಿಯೋ-ಆಹ್ವಾನ "ಕ್ರೀಡಾಸಂಚಯ"ದ ಬಗ್ಗೆ ಎಲ್ಲರನ್ನೂ ಮತ್ತೆ ಮತ್ತೆ ನೆನಪಿಸಿತ್ತು.

ವಾಫ್ರಾ ತೋಟದಮನೆಯಂಗಳ ವಿಶಾಲ ಆಟದ ಮೈದಾನಗಳನ್ನೂ "ಸಾಲೆಹ್" ಅಥವಾ ಸಭಾಂಗಣವನ್ನೂ ಹೊಂದಿದ್ದು ದಿನದ ಕಾರ್ಯಕ್ರಮಗಳಿಗೆ ಒಳ್ಳೆಯ ತಾಣವಾಗಿತ್ತು. ತಲುಪಿದೊಡನೆ ಉಪಾಹಾರ ಮತ್ತು ಚಹಾ/ಕಾಫಿ ಪೇಯಗಳು ವಿತರಿತವಾದರೆ, ಅಲ್-ಮುಲ್ಲಾ ಎಕ್ಸ್ ಚೇಂಜ್ ರವರ ಕೊಡುಗೆಯಾದ ಪ್ರಾಯೋಜಿತ ಕ್ರೀಡಾ ಟೊಪ್ಪಿ ಎಲ್ಲರ ತಲೆಯನ್ನಲಂಕರಿಸಿ ಕ್ರೀಡಾಕೂಟಕ್ಕೆ ವಿಶೇಷ ಮೆರಗನ್ನು ನೀಡಿತು.

ಮಕ್ಕಳಿಂದ ಸ್ವಾಗತ ಗೀತ-ನೃತ್ಯ ಎಲ್ಲರ ಮನೋಲ್ಲಾಸಕ್ಕೆ ಉತ್ತಮ ಪ್ರಾರಂಭ ನೀಡಿದರೆ, ಕ್ರೀಡಾ ಸಮಿತಿಯ ಮತ್ತು ಕ್ರೀಡಾ ಗೃಹನಾಯಕಿಯರ ಮುಂದಾಳತ್ವ ಕೂಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ ಶಶಿಕಿರಣ್ ಪ್ರಭು, ಉಪಾಧ್ಯಕ್ಷರಾದ ಪ್ರಭು ಆಚಾರ್, ಕಾರ್ಯದರ್ಶಿಗಳಾದ ರವಿ ಕಿರಣ್ ಮತ್ತು ಖಜಾಂಚಿಗಳಾದ ರಮೇಶ್ ನಾಯಕ್ ರವರನ್ನು ಕ್ರೀಡಾ ಜ್ಯೋತಿಯನ್ನು ಬೆಳಗುವಂತೆ ಆಹ್ವಾನಿಸಿತು.

ಜ್ಯೋತಿ ಬೆಳಗಿ ಮಾತನಾಡಿದ ಡಾ ಶಶಿಕಿರಣ್, ಕನ್ನಡ ಕೂಟ ಸದಾಸಕ್ರಿಯ ಮತ್ತು ಪ್ರತಿಭಾಪೂರ್ಣ ಚೈತನ್ಯ ಚಿಲುಮೆ ಎಂದರು. ವರ್ಣರಂಜಿತ ಕ್ರೀಡಾವಸ್ತ್ರ ಧರಿಸಿ ಕ್ರೀಡಾರಂಗದಲ್ಲಿ ಸೆಣಸಾಡಲು ಸ್ನೇಹಮಯ ಪೈಪೋಟಿಗೆ ಸನ್ನದರಾಗಿರುವುದು ಎಲ್ಲರನ್ನೂ ಉಲ್ಲಸಿತರಾಗಿಸುತ್ತದೆ ಎಂದರು.

ವಿವಿಧ ಕ್ರೀಡಾ ಸ್ಪರ್ಧೆಗಳ ಸ್ಥೂಲ ಪರಿಚಯವನ್ನು ಕ್ರೀಡಾ ಸಮಿತಿಯ ಸಂಚಾಲಕ ಗಿರೀಶ್ ಶೆಣೈ ಮಾಡಿಕೊಟ್ಟರು. ಆಟೋಟಗಳನ್ನು ಸಮಿತಿಯ ಸದಾ ಹಸನ್ಮುಖಿ ಸಕ್ರಿಯ ಸದಸ್ಯರಾದ ಅನಿಲ್ ಪ್ರಭು, ಹರೀಶ್ ನಾಯಕ್, ಕಾರ್ತಿಕ್ ಗೌಡ, ಸುರೇಶ್ ಕುಂದರ್, ಚಂದ್ರಶೇಖರ್, ಪ್ರಮೋದ್ ರಾವ್ ಅಚ್ಚು ಕಟ್ಟಾಗಿ ನಿರ್ವಹಿಸಿದರೆ, ಕ್ರೀಡಾ ಮತ್ತು ಚಟುವಟಿಕೆಗಳ ಗೃಹನಾಯಕಿಯರಾದ ಡಾ, ಪ್ರೀತಿ ಶೆಟ್ಟಿ, ಶೈಲಜಾ ಹೊಂಬಾಳೆ, ಸೌರಭ ವಿಕ್ರಂ ಹಾಗೂ ಜ್ಯೋತಿ ಮಿಟ್ಟಪಲ್ಲಿ ತಮ್ಮ ತಮ್ಮ ತಂಡವನ್ನು ಹುರಿದುಂಬಿಸುತ್ತಾ ಕ್ರೀಡಾ ಭಾವವನ್ನು ಮೆರೆದರು.

ದಿನದ ಕಾರ್ಯಕ್ರಮಗಳ, ಕ್ರೀಡೆಗಳ ಮಧ್ಯೆ ಗೀತ ನೃತ್ಯ ಕಾರ್ಯಕ್ರಮಗಳ ಆಯೋಜನೆಗೆ ಕಾರಣರಾದ ಕೂಟದ ಸಾಂಸ್ಕೃತಿಕ ಪ್ರತಿಭೆಗಳಾದ ಡಾ, ಪ್ರೀತಿಶೆಟ್ಟಿ, ನಯನ ಶಣೈ ಸೌರಭ ವಿಕ್ರಮ್, ಸಂಧ್ಯಾ ಅರುಣ್ ಕುಮಾರ್, ಸ್ಫೂರ್ತಿ ಕಾಮತ್, ಮುಂತಾದವರು "ಕ್ರೀಡಾಸಂಚಯ"ದಲ್ಲಿ ವಿವಿಧತೆಯನ್ನು ಮೆರೆದರು.

ಮಕ್ಕಳ ಆಟೋಟಗಳು, ಹಿರಿಯರ ಹಗ್ಗ-ಜಗ್ಗಾಟ, ಫುಟ್ಬಾಲ್, ಮಹಿಳೆಯರ ಥ್ರೋಬಾಲ್, ಚಿಣ್ಣರ ಚೀಲದ ಜಿಗಿಯೋಟ (ಸ್ಯಾಕ್ ರೇಸ್), ಬಲೂನ್ ಗೆ ಗುರಿಯಿಡುವುದು, ತಂಡಗಳ ನಾಯಿ ಮತ್ತು ಮೂಳೆ ಪಂದ್ಯ ನೋಡುಗರಲ್ಲಿ ನಲಿವನ್ನು ಮೂಡಿಸಿದವು.

ಊಟದ ನಂತರ ಪಂದ್ಯಗಳ ಅಂತಿಮ ಸುತ್ತು ಮತ್ತು ಹೋಳಿ ಆಚರಣೆ ಎಲ್ಲರೂ ಬಣ್ಣಗಳಲ್ಲಿ ಬೆರೆತುಹೋದರು. ಕೆಲವರಂತೂ ಬಣ್ಣದ ನೀರಲ್ಲಿ ಮಿಂದು ತೃಪ್ತರಾದರು, ಗುರುತಿಸಲೂ ಆಗದಷ್ಟು ಬಣ್ಣಗಳ ಓಕುಳಿಯಾದರೂ ಕೇವಲ ಸ್ವಾಬಾವಿಕ ಬಣ್ಣಗಳನ್ನು ಬಳಸಿದ್ದು(ಹಾಗೆಯೇ ಆಗಬೇಕೆಂದು ಕಾರ್ಯಕಾರಿ ಸಮಿತಿ ಮೊದಲೇ ಸೂಚಿಸಿತ್ತು) ಮತ್ತು ನೀರಿನಿಂದ ಸುಲಭವಾಗಿ ತೊಳೆಯುವಂತಿದ್ದುದು ಕೂಟದ ಸದಸ್ಯರ ಪರಿಸರ ಮತ್ತು ಆರೋಗ್ಯ ಕಾಳಜಿಯನ್ನು ಸೂಚಿಸಿತು.

ನಂತರ ಚಹಾ/ಕಾಫಿ ಪೇಯಗಳೊಂದಿಗೆ ದಣಿವಾರಿಸಿಕೊಂಡ ಸದಸ್ಯರು ಬುದ್ಧಿಯ ಓಟಕೆ ಅಣಿಯಾದರು, ಕನ್ನಡ ಚಿತ್ರಗೀತೆಗಳ ಅಂತ್ಯಾಕ್ಷರಿ (ಗಿರ್ರೀಶ್ ಶೆಣೈ ಮತ್ತು ಪ್ರಭು ಆಚಾರ್ ನಿರ್ವಹಣೆ) ಮತ್ತು ಕರ್ನಾಟಕ ಕುರಿತ ಸಾಮಾನ್ಯ ಜ್ಞಾನದ ರಸಪ್ರಶ್ನೆ ಅನಿಲ್ ಪ್ರಭು ನಡೆಸಿದ) ಸ್ಪರ್ಧೆಗಳು ಪ್ರಾರಂಭವಾದವು.

ಚಿತ್ರಗೀತೆಗಳ ಆಧಾರಿತ ಸ್ಪರ್ಧೆಯಲ್ಲಿ ನಾಲ್ಕೂ ತಂಡಗಳ ತೀವ್ರ ಸ್ಪರ್ಧೆಯಲ್ಲಿ ಮೂರು ತಂಡಗಳು (ಕಾವೇರಿ, ನೇತ್ರಾವತಿ ಮತ್ತು ಹೇಮಾವತಿ) ಮೊದಲ ಸ್ಥಾನ ಹಂಚಿಕೊಂಡರೆ ಒಂದು ಪ್ರಶ್ನೆಯಲ್ಲಿ ಎಡವಿದ ಶರಾವತಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆ ಕೊರತೆಯನ್ನು ಶರಾವತಿ ತಂಡ ಕರ್ನಾಟಕ ಕುರಿತ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ನೇತ್ರಾವತಿಯೊಂದಿಗೆ ಜಂಟಿ ವಿಜೇತ ತಂಡವಾಗುವ ಮೂಲಕ ನೀಗಿಸಿಕೊಂಡಿತು.

ಕೂಟದ ಕಾರ್ಯಕಾರಿ ಸಮಿತಿ ಬಹುಮಾನ ವಿತರಣೆ ಮಾಡಿತು, ವಿತರಣೆಯನ್ನು ಕೂಟದ ಉಪಾಧ್ಯಕ್ಷರ ಮಾತೃಶ್ರೀಯವರು ಮತ್ತು ಕೂಟದ ಮತ್ತೊಬ್ಬ ಸದಸ್ಯರ ತಾಯಿಯವರು ನಡೆಸಿಕೊಟ್ಟದ್ದು ವಿಶೇಷ. ದಿನದ ತುಂಬು ಚಟುವಟಿಕೆಗಳ "ಕ್ರೀಡಾಸಂಚಯ"ದ ಪ್ರಾಯೋಜಕರಾದ ಅಲ್-ಮುಲ್ಲ ಎಕ್ಸ್ ಚೇಂಜ್, ಆರೆಮೆನ್ಕೋ, ಬಾರ್ಕೋಡ್ ಮತ್ತು ಆಯುರ್ಯೋಗ ಸಂಸ್ಥೆಗಳಿಗೆ ಕೂಟದ ವತಿಯಿಂದ ಉಪಾಧ್ಯಕ್ಷ ಪ್ರಭು ಆಚಾರ್ ಧನ್ಯವಾದ ಸಲ್ಲಿಸಿದರು.

ಇಡೀ ದಿನದ ಉಪಾಹಾರ ಊಟಾದಿಗಳಿಂದ ಚಹಾ/ಕಾಫಿ/ ತಿಂಡಿಗಳನ್ನು ರುಚಿಕಟ್ಟಾಗಿ ಉಣಬಡಿಸಿದ ಶ್ರೇಯ ಓರಿಯಂಟಲ್ ರೆಸ್ಟಾರೆಂಟ್ ನವರದ್ದಾಗಿತ್ತು. ಖಜಾಂಚಿ ರಮೇಶ್ ನಾಯಕ್ ಕೂಟದ ಎಲ್ಲ ಸ್ವಯಂಸೇವಕ ಮಿತ್ರರಿಗೂ ಸಮಿತಿಗಳ ಎಲ್ಲಾ ಸದಸ್ಯರಿಗೂ ಕಾರ್ಯಕ್ರಮದ ಯಶಸ್ವೀ ಆಯೋಜನೆಗೆ ಸಹಕರಿಸಿದ್ದಕ್ಕಾಗಿ ಧನ್ಯವಾದ ಸೂಚಿಸಿದರು. ರಾತ್ರಿಯ ಊಟದೊಂದಿಗೆ ಕೂಟದ ಸದಸ್ಯರನ್ನು ಹೊತ್ತ ಬಸ್ ಮತ್ತಿತರ ವಾಹನಗಳು ತಮ್ಮ ಗಮ್ಯದತ್ತ ಹೊರಡುವುದರೊಂದಿಗೆ "ಕ್ರೀಡಾಸಂಚಯ" ಮುಕ್ತಾಯಗೊಂಡಿತು.

English summary
Sports and holi, the festival of colors, celebrate in Kuwait Kannada Koota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X