ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಉಳಿಸಬೇಕೆಂದರೆ ಮಕ್ಕಳನ್ನು ಉದ್ಯಮಿಗಳನ್ನಾಗಿಸಿ : ಎಸ್ಎಲ್ ಭೈರಪ್ಪ

“ಬೆಂಗಳೂರು ಕನ್ನಡಿಗರ ಕೆಟ್ಟ ಛಾಳಿ ಬಿಡಿ. ಕನ್ನಡಿಗರನ್ನು ಭೇಟಿ ಮಾಡಿದಾಗ ಕನ್ನಡದಲ್ಲೇ ಮಾತನಾಡಿ. ” ಎಂದು ಭೈರಪ್ಪನವರು ಬೆಂಗಳೂರು ಕನ್ನಡಿಗರ ಕಿವಿಹಿಂಡಿದರು, ಸಿಂಗಪುರದ ಕನ್ನಡಿಗರಿಗೆ ಎಸ್ಎಲ್ ಭೈರಪ್ಪನವರು ಕಿವಿಮಾತು ಹೇಳಿದರು.

By ಸಿಂಗಪುರ ಸುದ್ದಿವಾಹಿನಿ
|
Google Oneindia Kannada News

ಸಿಂಗಪುರ, ಅಕ್ಟೋಬರ್ 30 : "ಕನ್ನಡಿಗರು ಒಂದು ಜನಾಂಗವಾಗಿ ಬೆಳೆಯಬೇಕಾದರೆ, ನಮ್ಮ ಭಾಷೆ ಸಂಸ್ಕೃತಿ ಉಳಿಯಬೇಕಾದರೆ, ಮುಂದಿನ ಪೀಳಿಗೆಯವರನ್ನು ವಾಣಿಜ್ಯೋದ್ಯಮಿಗಳಾಗಿ ಬೆಳೆಯಿಸಿ. ಆಗ ಕನ್ನಡಿಗರಿಗೆ ಹಣವೂ ಬರುತ್ತದೆ, ಕನ್ನಡತನವೂ ಉಳಿಯುತ್ತದೆ" ಎಂದು ಡಾ. ಎಸ್ಎಲ್ ಭೈರಪ್ಪ ಸಿಂಗನ್ನಡಿಗರಿಗೆ ಕಿವಿಮಾತು ಹೇಳಿದ್ದಾರೆ.

ಸಿಂಗಪುರದಲ್ಲಿ ನಡೆಯುತ್ತಿರುವ ಎರಡು ದಿನಗಳ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಸರಸ್ವತಿ ಸಮ್ಮಾನ ಪುರಸ್ಕೃತ ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪನವರು ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನುದ್ದೇಶಿಸಿ ಶನಿವಾರ ಮಾತನಾಡಿ, ಕನ್ನಡತನದ ಪಾಠ ಮಾಡಿದರು.

ಲಂಡನ್ನಿನ ಗುಜರಾತಿ ಜನಾಂಗದ ಉದ್ಯೋಗಪರತೆಗಳ ಉದಾಹರಣೆ ಕೊಟ್ಟ ಭೈರಪ್ಪನವರು, ಇದರಿಂದಾಗಿ ಮೂರನೇ ತಲೆಮಾರಿನ ಗುಜರಾತಿಗಳು ಕೂಡ ಲಂಡನ್ನಿನಲ್ಲಿ ಎರಡು ಗುಜರಾತಿ ದಿನಪತ್ರಿಕೆ ಪ್ರಕಟಿಸುವಷ್ಟು ಭಾಷೆಯ ಜೀವಂತಿಕೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು. [ಎಸ್ಎಲ್ ಭೈರಪ್ಪನವರಿಗೆ ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ]

Speak to your kids in Kannada language : SL Bhyrappa to Singapore Kannadigas

ವಾಣಿಜ್ಯದ ಕಾರಣದಿಂದಾಗಿ ಆ ಜನಾಂಗ ತನ್ನ ಮಾತೃಭೂಮಿಯೊಡನೆ ಕೊಂಡಿಯನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ, ಇದರಿಂದಾಗೆಯೇ ಅವರ ಭಾಷೆಯೂ ಜೀವಂತವಾಗಿದೆ. ಸಿಂಗನ್ನಡಿಗರು ದಿನಪತ್ರಿಕೆ ಮಾಡುವ, ಟಿವಿ ಚಾನೆಲ್ ನಡೆಸುವ ಆಲೋಚನೆ ಮಾಡಬೇಕೆಂದರು.

ಬೆಂಗಳೂರು ಕನ್ನಡಿಗರ ಕಿವಿ ಹಿಂಡಿದ ಭೈರಪ್ಪ

"ಬೆಂಗಳೂರು ಕನ್ನಡಿಗರ ಕೆಟ್ಟ ಛಾಳಿ ಬಿಡಿ. ಕನ್ನಡಿಗರನ್ನು ಭೇಟಿ ಮಾಡಿದಾಗ ಕನ್ನಡದಲ್ಲೇ ಮಾತನಾಡಿ. ನಿಮ್ಮಲ್ಲಿಯೂ ಹಲವಾರು ಜನರು ಬೆಂಗಳೂರಿನಿಂದ ಬಂದಿರಬಹುದು." ಎಂದು ಭೈರಪ್ಪನವರು ಬೆಂಗಳೂರು ಕನ್ನಡಿಗರ ಕಿವಿಹಿಂಡಿದರು, ಸಿಂಗಪುರದ ಕನ್ನಡಿಗರಿಗೆ ಕಿವಿಮಾತು ಹೇಳಿದರು.

ಸಿಂಗಪುರದ ಕನ್ನಡಿಗರು ತೋರಿದ ಅಭಿಮಾನಕ್ಕೆ ಋಣಿಯೆಂದ ಭೈರಪ್ಪನವರು ಹಲವಾರು ವಿರೋಧಗಳ ನಡುವೆ ನಾನು ಲೇಖಕನಾಗಿ ಬೆಳೆಯುವುದಕ್ಕೆ ಕನ್ನಡಿಗರಷ್ಟೇ ಅಲ್ಲ, ನನ್ನ ಭಾರತೀಯ ಇತರೆ ಭಾಷಿಕ ಓದುಗರೂ ಕಾರಣ ಎಂದರು. [ಈರ ಮಾರ ಆಡುವ ಕನ್ನಡದಲ್ಲಿದೆ ಶ್ರೀಮಂತಿಕೆ : ಕೃಷ್ಣೇಗೌಡ]

"ನನ್ನ ಮಾಧ್ಯಮ ಸೃಜನಾತ್ಮಕ ಬರಹ"

ಬಹಳ ಹಿಂದೆ ಒಳ್ಳೆಯ ಭಾಷಣಕಾರನಾಗಿದ್ದೆ. ಆದರೆ ಭಾಷಣ ಮಾಡಿದಷ್ಟೂ ನನ್ನ ಲೇಖನ ಸಾಯುತ್ತದೆ ಎಂಬುದನ್ನು ಕಂಡುಕೊಂಡೆ. ಹೀಗಾಗಿ ಪ್ರಯತ್ನ ಪೂರ್ವಕವಾಗಿ ಭಾಷಣ ಮಾಡುವ ಅವಕಾಶಗಳನ್ನು ತಪ್ಪಿಸುತ್ತೇನೆ ಎಂದು ತಿಳಿಸಿದರು.

ಭಾಷಣವೆಂದರೆ ಜನರನ್ನು ಮೆಚ್ಚಿಸಬೇಕಾಗುತ್ತದೆ. ಭಾಷಣ ಮಾಡಿದಷ್ಟೂ ನಮ್ಮ ಬೌದ್ಧಿಕ ಬದ್ದತೆ ಹೆಚ್ಚಾಗುತ್ತಾ ಹೋಗುತ್ತದೆ. ಜೊತೆಯಲ್ಲಿಯೇ ನಮ್ಮ ಬರವಣಿಗೆಯ ಸ್ವಾತಂತ್ರ್ಯಕುಂಠಿತವಾಗುತ್ತ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನನ್ನ ಮಾಧ್ಯಮ ಸೃಜನಾತ್ಮಕ ಬರಹ, ಭಾಷಣವಲ್ಲ. ನನಗೂ ನನ್ನ ಓದುಗರಿಗೂ ಇರುವ ಸಂಬಂಧವೆಂದರೆ ಸಂವಾದ. ನಾಳೆ ನನ್ನ ಸಾಹಿತ್ಯದ ಬಗ್ಗೆ ಪ್ರಶ್ನೋತ್ತರಕ್ಕಾಗಿ ಕಾತರದಿಂದ ಎದುರುನೋಡುತ್ತಿದ್ದೇನೆ ಎಂದರು.

English summary
Singara Kannada Sahitya Sammelana : Note laureate SL Bhyrappa has urged Kannadigas in Singapore to speak to their kids in mother tongue Kannada language only. He also urged not to imitate Bengaluru Kannadigas who tend to use lot of English while speaking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X