ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌತ್ ಈಸ್ಟ್ ಇಂಗ್ಲೆಂಡ್ ಕನ್ನಡಿಗರ ಯುಗಾದಿ ಬೇವುಬೆಲ್ಲ

By ಚೈತ್ರ ಶಂಕರಾನಂದ, ಇಂಗ್ಲೆಂಡ್
|
Google Oneindia Kannada News

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕುವೆಂಪುರವರ ಹಾಡಿನಂತೆ ನಮ್ಮ ಕನ್ನಡಿಗರಿಗೆ ದೇಶ ಬಿಟ್ಟುಬಂದರೂ ಕನ್ನಡದ ಹಂಬಲ ಹೋಗುವುದಿಲ್ಲ. ಕಿವಿಗಳು ಕನ್ನಡ ಕೇಳಲು, ಬಾಯಿ ಕನ್ನಡ ಮಾತನಾಡಲು ಕಾತರಿಸುತ್ತಿರುತ್ತದೆ. ಈ ತುಡಿತವೇ ಕನ್ನಡ ಕಸ್ತೂರಿ ಗುಂಪಿನ ಜನನಕ್ಕೆ ಕಾರಣವಾಯಿತು.

ಯುನೈಟೆಡ್ ಕಿಂಗ್ಡಮ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಕನ್ನಡ ಬಳಗ, ಕನ್ನಡಿಗರು ಯುಕೆ ಮುಂತಾದ ಕನ್ನಡ ಸಂಸ್ಥೆಗಳು ಕನ್ನಡದ ಕಂಪನ್ನು ಪಸರಿಸುತ್ತಿವೆ. ಈ ಹೆಜ್ಜೆಯಲ್ಲೇ ಶುರುವಾಗಿ ಬೆಳೆದಿದ್ದು ಸೌತ್ ಈಸ್ಟ್ ಕನ್ನಡಿಗರ ಕನ್ನಡ ಕಸ್ತೂರಿ ಸಂಘ.

ಕೆಲವು ತಿಂಗಳ ಹಿಂದೆ ಗುರುತು ಪರಿಚಯವಿಲ್ಲದ ಅನೇಕ ಕನ್ನಡಿಗರು ವಾಟ್ಸಪ್ ಮೂಲಕ ಪರಿಚಯವಾದೆವು. ಚಿಕ್ಕ ಗಿಡ ಮರವಾದ ಹಾಗೆ ಈ ಗುಂಪು ಹೆಮ್ಮರವಾಗಿ ಬೆಳೆಯಿತು. ಕೆಲವು ಸ್ನೇಹಿತರ ಗುಂಪಿನೊಂದಿಗೆ ಶುರುವಾದ ಈ ಬಳಗ ಈಗ ತಮ್ಮದೇ ಆದ ಉಗಾದಿ ಕಾರ್ಯಕ್ರಮವನ್ನು ಏರ್ಪಡಿಸಿ ಯಶಸ್ವಿಯಾಗಿ ನಿರ್ವಹಿಸಿದೆ. 160ಕ್ಕೂ ಹೆಚ್ಚಿನ ಕನ್ನಡಿಗರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ. [ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ]

South East England Kannadigas celebrate Ugadi

ಶನಿವಾರ ಏಪ್ರಿಲ್ 23ನೇ ತಾರೀಕು ತಾನ್ಲಿ ಶಾಲೆಯ ಅವರಣದಲ್ಲಿ ಮಧ್ಯಾಹ್ನ 3.30ಕ್ಕೆ ಉಗಾದಿ ಹಬ್ಬದ ಕಾರ್ಯಕ್ರಮ ಶುರುವಾಯ್ತು. ಎಲ್ಲರೂ ರೇಷ್ಮೆ ಉಡುಗೆಯಲ್ಲಿ ತಯಾರಾಗಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದರು. ನಗುಮೊಗದಿಂದ ಎಲ್ಲರನ್ನು ಸ್ವಾಗತಿಸಿ ಊಟೋಪಚಾರಗಳು ಜರುಗಿತು.

ಹೇಳಿದ ಸಮಯಕ್ಕೆ ಸರಿಯಾಗಿ 5 ಗಂಟೆಗೆ ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮ ಶುರುವಾಯಿತು. ಗಣೇಶನಿಗೆ ಹಾಡಿನ, ನೃತ್ಯದ ಮೂಲಕ ನಿರ್ವಿಘ್ನವಾಗಿ ನಡೆಸೆಂದು ಬೇಡಿದೆವು. ನಮ್ಮನ್ನು ಗತಕಾಲಕ್ಕೆ ಕರೆದುಕೊಂಡು ಹೋದ ಕರ್ನಾಟಕ ವೈಭವ ಕಾರ್ಯಕ್ರಮ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತು. ಇಂದಿನ ಯುವ ಪೀಳಿಗೆಗೆ ಹಿಂದಿನ ಕನ್ನಡ ಸಾಮ್ರಾಜ್ಯಗಳ ವೈಭವವನ್ನು ಪರಿಚಯಿಸಿತು.

ಶಾಂತಲೆ, ಜಕ್ಕಣರಿಂದ ಶುರುವಾಗಿ ಕೃಷ್ಣ ದೇವರಾಯ, ತೆನಾಲಿರಾಮ, ಮದಕರಿ ನಾಯಕ, ಓಬವ್ವ, ಕಿತ್ತೂರ ಚೆನ್ನಮ್ಮ, ಕುವೆಂಪು, ಡಾಕ್ಟರ್ ರಾಜಕುಮಾರ್, ಕನ್ನಡ ಕ್ರಿಕೆಟ್ ಕಲಿಗಳಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿಶ್ವ ಸುಂದರಿ ಐಶ್ವರ್ಯ ರೈ ಎಲ್ಲರನ್ನೂ ಪರಿಚಯಿಸಿತು. [ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಕೆಂಟ್ ಕಿಲಾಡಿಗಳು ತಂಡದಿಂದ ಯೋಗಾಸನದ ಉತ್ತಮ ಪ್ರದರ್ಶನವಿತ್ತು. ಸುಶ್ರಾವ್ಯವಾದ ಭಾವಗೀತೆಗಳಾದ ಜೋಗದಸಿರಿ, ತುಂಬು ತಿಂಗಳಿನ, ದೀಪವು ನಿನ್ನದೇ ಹಾಡುಗಳನ್ನು, ಹೊಸ ಹಳೇ ಚಿತ್ರ ಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಎಲ್ಲರ ಮನ ರಂಜಿಸಿದರು. ಇದರ ಜೊತೆ, ಪುಟ್ಟ ಮಕ್ಕಳು ಬಣ್ಣದ ತಗಡಿನ ತುತ್ತೂರಿ ಹಾಡಿಗೆ ನೃತ್ಯ, ಕೃಷ್ಣ ನೀ ಬೇಗನೆ ಬಾರೋ ಫ್ಯೂಷನ್ ಹಾಡು, ಶ್ಲೋಕ ಹೇಳುವ ಮೂಲಕ ರಂಜಿಸಿದರು.

ಮಕ್ಕಳು ಹಾಗು ದೊಡ್ಡವರು ಘಲ್ಲು ಘಲ್ಲೆನುತಾ ಗೆಜ್ಜೆ, ಕೋಡಗನ ಕೋಳಿ ನುಂಗಿತ್ತಾ, ಚೆಲುವಯ್ಯ ಚೆಲುವೋ ಹಾಡಿಗೆ ಕೋಲಾಟ, ಹೊಸ ಚಿತ್ರ ಗೀತೆಗಳಿಗೆ ಹೆಜ್ಜೆಹಾಕಿದರು. ಇದೆಲ್ಲದರ ಜೊತೆಗೆ ದಂಪತಿಗಳ ಚಿತ್ರಮಂಜರಿ ಕಾರ್ಯಕ್ರಮಕ್ಕೆ ಕಳೆಕಟ್ಟಿತು. ಚಿಕ್ಕಮಕ್ಕಳಿಗಾಗಿ ಜಾದೂ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಎಲ್ಲ ಕಾರ್ಯಕ್ರಮಗಳ ನೆನಪನ್ನು ಸೆರೆ ಹಿಡಿಯಲು ಛಾಯಾ ಚಿತ್ರ ಹಾಗು ವೀಡಿಯೊ ರೆಕಾರ್ಡಿಂಗ್ ನಡೆಯಿತು.

ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ 7.30ಕ್ಕೆ ಮುಗಿಯಿತು. ನಂತರ ರುಚಿಕರ ಊಟ. ಇನ್ನೊಂದು ಆಶ್ಚರ್ಯ ನಮಗಾಗಿ ಕಾದಿತ್ತು. ಅದೇ ಕನ್ನಡ ಡಿಸ್ಕೋ! ಬಹಳ ಆಸಕ್ತಿ ವಹಿಸಿ ನಮಗಾಗಿ ಕುಣಿದು ನಲಿಯಲು ಅನೇಕ ಗೀತೆಗಳು ತಯ್ಯಾರಾಗಿತ್ತು. ಬಣ್ಣಬಣ್ಣದ ದೀಪಗಳಿದ್ದವು. ರಾತ್ರಿ 11ರವರೆಗೆ ಡಿಸ್ಕೋ ಡಾನ್ಸ್ ನಡೆಯಿತು.

ಸೌತ್ ಈಸ್ಟ್ ಇಂಗ್ಲೆಂಡ್ ನ ಎಲ್ಲ ಕನ್ನಡಿಗರೂ ಸೇರಿ ಇದೇ ರೀತಿ ಪ್ರತಿ ವರ್ಷ ಆಚರಿಸೋಣ ಎಂದು ನಿರ್ಧಾರ ಮಾಡಿದ್ದಾರೆ. ಇಂತಹ ಅವಿಸ್ಮರಣೀಯ ಸಂಜೆಯನ್ನು ನಡೆಸಿ ಕೊಟ್ಟ ಎಲ್ಲಾ ಕಾರ್ಯಕರ್ತರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.

English summary
South East England Kannadigas celebrated Ugadi in a grand fashion on 23rd April. Kannada Kasturi Sangha, which started with WhatsApp group has grown into a big organization. Hundreds of Kannadigas gathered, exchanged bevu bella, entertained and had sumptuous meals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X