• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಥ ಕನ್ನಡಿಗ ಇನ್ನಿಲ್ಲ ಎಂದರೆ ನಂಬುವುದಕ್ಕಾಗಲ್ಲ

By ಶ್ರೀವತ್ಸ ಜೋಶಿ
|

ತುತ್ತೂರಿ ಊದದೆ, ತಮಟೆ ಹೊಡೆಯದೇ, ಸದ್ದಿಲ್ಲದೆ ಸೇವಾನಿರತರಾಗಿರುವವರು ಈಗಿನ ಕಾಲದಲ್ಲಿ ವಿರಳಾತಿ ವಿರಳ. ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಸಂಜೀವ ಮನಗೋಳಿ ಎಂಬುವ ಸಜ್ಜನ ಕನ್ನಡಿಗ ಸ್ನೇಹಿತರಿದ್ದರು, ಅಂತಹ ವಿರಳರ ಪೈಕಿ ಅವರೊಬ್ಬರು. ಇದೀಗ ಆ ಸಜ್ಜನ ಜೀವವನ್ನೂ ದೇವರು ತನ್ನಲ್ಲಿಗೆ ಕರಕೊಂಡರು. ವಿಧಿ ಅಂದ್ರೆ ಹಾಗೇ ಅಲ್ವಾ.

ನಾನು ಸಂಜೀವ ಮನಗೋಳಿಯವರನ್ನು ಮೊದಲು ಭೇಟಿಯಾದದ್ದು ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ, ಇಲ್ಲಿನ ‘ಕಾವೇರಿ' ಕನ್ನಡ ಸಂಘದ ಚಟುವಟಿಕೆಗಳಲ್ಲಿ. ತಣ್ಣನೆಯ ಸ್ವಭಾವದ, ಮೃದುಮನಸ್ಸಿನ ವ್ಯಕ್ತಿ ಅವರು ಅಂತ ಮೊದಲ ಭೇಟಿಯಲ್ಲೇ ನನಗೆ ಅರಿವಾಯ್ತು. ಆದರೆ ಕನ್ನಡದ ಕೆಲಸಗಳಿಗೆ ಅವರಲ್ಲಿ ಅದಮ್ಯ ಶಕ್ತಿಯಿತ್ತು, ಅಷ್ಟೇ ಉತ್ಸಾಹವೂ ಇತ್ತು. ಕಾವೇರಿ ಕನ್ನಡ ಸಂಘದಲ್ಲಿ ಮೊತ್ತಮೊದಲ ಬಾರಿ ವಿದ್ಯುನ್ಮಾನ ವಾರ್ತಾಪತ್ರ ತಯಾರಿಸಿ ಬಿತ್ತರಿಸಿದವರು ಅವರು. ಆದರೆ ಸಂಘದ ಪದಾಧಿಕಾರಿಯಾಗಿ ಪೊಳ್ಳುಪ್ರತಿಷ್ಠೆ ಮೆರೆಯುವುದು, ವೇದಿಕೆ ಏರಿ ಭಾಷಣ ಕೊರೆಯುವುದು ಇವೆಲ್ಲ ಅವರ ಜಾಯಮಾನವಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು ಇರುವವರು.

2006ರಲ್ಲಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಬಾಲ್ಟಿಮೋರ್‌ನಲ್ಲಿ ನಡೆದ ನಾಲ್ಕನೇ ‘ಅಕ್ಕ' ವಿಶ್ವಕನ್ನಡ ಸಮ್ಮೇಳನ ನಡೆದಾಗ ಸ್ಮರಣಸಂಚಿಕೆಗಳ ಸಂಪಾದಕತ್ವ ವಹಿಸಿ ಅಚ್ಚುಕಟ್ಟಾಗಿ ಎಲ್ಲ ಕೆಲಸಗಳನ್ನೂ ನಿಭಾಯಿಸಿದವರು ಸಂಜೀವ ಮನಗೋಳಿ. ಆಗಲೂ ಅಷ್ಟೇ, ಅವರು ಸಂಪೂರ್ಣ ತೊಡಗಿಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದರೇ ಹೊರತು ಮೈಕ್ ಮುಂದೆ ಮೆರೆಯಲಿಲ್ಲ ಮೈಮರೆಯಲಿಲ್ಲ.

ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಕನ್ನಡಿಗರ ಮಕ್ಕಳಿಗೆ 'ಕನ್ನಡ ಕಲಿಯೋಣ' ತರಗತಿಗಳು ಆರಂಭವಾದಾಗ ಅದರಲ್ಲಿ ಸ್ವಯಂಸೇವಕನಾಗಿ ದುಡಿದರು. ಮಕ್ಕಳಿಗೆ ಪಾಠ ಮಾಡಿದರು. ಪ್ರತಿ ಸಲ ಕರ್ನಾಟಕಕ್ಕೆ ಹೋಗಿ ಬರುವಾಗ ಇಲ್ಲಿನ ಮಕ್ಕಳಿಗೋಸ್ಕರ ಕನ್ನಡ ಪುಸ್ತಕಗಳನ್ನು, ಚಾರ್ಟ್‍ಗಳನ್ನು, ಕಲಿಕೆಯ ಇತರ ಸಾಮಗ್ರಿಗಳನ್ನು ತರುತ್ತಿದ್ದರು. ಅಮೆರಿಕದಲ್ಲಿ ಹುಟ್ಟಿಬೆಳೆದ ಮಕ್ಕಳಿಗೆ ಕನ್ನಡ ಕಲಿಕೆಯನ್ನು ಆಕರ್ಷಕವಾಗಿಸುವುದು ಹೇಗೆ ಎಂದು ಹೊಸಹೊಸ ವಿಧಾನಗಳನ್ನು ತಾವೇ ರೂಪಿಸಿದರು. ಚಿನ್ಮಯ ಮಿಷನ್‌ನವರು ಕನ್ನಡ ತರಗತಿಗಳನ್ನು ಆರಂಭಿಸಿದಾಗ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದವರೂ ಸಂಜೀವ ಮನಗೋಳಿಯವರೇ. ಇದನ್ನೆಲ್ಲ ಅವರು ಸಾಫ್ಟ್‌ವೇರ್ ಎಂಜಿನಿಯರ್ ವೃತ್ತಿಯ ಜೊತೆಜೊತೆಗೇ ತಾಯ್ನಾಡು ತಾಯ್ನುಡಿಯ ಬಗೆಗಿನ ಅಭಿಮಾನದಿಂದ ಮಾಡಿದರು.

ಮೊನ್ನೆ ಶುಕ್ರವಾರ ಬೆಳಿಗ್ಗೆ ಕಾವೇರಿ ಕನ್ನಡ ಸಂಘದ ಸದಸ್ಯರಿಗೆಲ್ಲ ಒಂದು ಮಿಂಚಂಚೆ ಬಂತು. ಅದು ಹೊತ್ತುತಂದ ಸುದ್ದಿ, ಹಿಂದಿನ ದಿನ ಅಂದರೆ ಗುರುವಾರ 25 ಜೂನ್ ಸಂಜೆ ಏಳುಕಾಲರ ಹೊತ್ತಿಗೆ ಸಂಜೀವ ಮನಗೋಳಿಯವರು ಕೊನೆಯುಸಿರೆಳೆದರು ಎಂಬ ಕೆಟ್ಟ ಸುದ್ದಿ. ಐವತ್ತೆಂದರೆ ಸಾಯುವ ವಯಸ್ಸೇನಲ್ಲ. ಅವರು ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸುತ್ತಿದ್ದರು ಎಂದು ನಮಗೆಲ್ಲ ಗೊತ್ತಾದದ್ದು ಆಗಲೇ! ಅಂದರೆ, ನಲಿವುಗಳನ್ನು/ಸಾಧನೆಗಳನ್ನು ಹೇಳ್ಕೊಳ್ಳದೇ ಇದ್ದದ್ದಷ್ಟೇ ಸಂಜೀವರ ಶ್ರೇಷ್ಠತೆಯಲ್ಲ, ಅವರು ತನ್ನ ವೈಯಕ್ತಿಕ ನೋವನ್ನೂ ಯಾರ ಬಳಿಯೂ ಹೇಳ್ಕೊಳ್ಳಲಿಲ್ಲ! ಯಾರಿರ್ತಾರೆ ಹೇಳಿ ಅಂಥ ಪುಣ್ಯಾತ್ಮರು ಈ ಕಾಲದಲ್ಲಿ?

ಪತ್ನಿ ಸುಚೇತಾ ಮನಗೋಳಿ, ಹೈಸ್ಕೂಲ್‌‌ನಲ್ಲಿ ಓದುತ್ತಿರುವ ಇಬ್ಬರು ಹೆಣ್ಮಕ್ಕಳು ಕೃತ್ತಿಕಾ ಹಾಗೂ ನಮ್ರತಾ. ಅದೆಂತಹ ಆಘಾತ ಪಾಪ ಆ ಕುಟುಂಬಕ್ಕೆ, ಬಂಧುವರ್ಗಕ್ಕೆ ಮತ್ತು ಅಪಾರ ಸ್ನೇಹವಲಯಕ್ಕೆ. ಭಗವಂತ ಎಲ್ಲರಲ್ಲೂ ಸ್ಥೈರ್ಯ ತುಂಬಲಿ, ಸಂಜೀವ ಮನಗೋಳಿಯವರ ಆದರ್ಶವನ್ನು ನಮ್ಮೆಲ್ಲರಲ್ಲೂ ಅಷ್ಟಿಷ್ಟಾದರೂ ಮೂಡಿಸಿ ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಲಿ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ನಮ್ಮೆಲ್ಲರ ಪ್ರಾರ್ಥನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sanjeev Managoli (50), battled with cancer valiantly, served Kaveri in various capacities, the notable one being his editorship of Kaveri Newsletters and Coordinator Souvenir Committee AKKA 2006. He was a humble, affable, and caring individual. A loving tribute To Sanjeev by Srivathsa Joshi, Washington DC, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more