ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರಕ್ಕೆ ಕಳೆತಂದ ಸಿಂಗಾರ ಉತ್ಸವ 2014

By ರೇಖಾ ಹೆಗಡೆ ಬಾಳೇಸರ
|
Google Oneindia Kannada News

ಏಪ್ರಿಲ್ ಮಾಸ ಬಂತೆಂದರೆ ಸಿಂಗಪುರ ಕನ್ನಡಿಗರ ಮನೆಗಳಲ್ಲಿ ನೃತ್ಯ, ಗಾಯನ, ನಾಟಕ ತಾಲೀಮಿನ ತಕಧಿಮಿ... ತುರುಸಿನ ತಯಾರಿ. ಇವೆಲ್ಲ ತಾಲೀಮು, ತಯಾರಿಗಳಿಗೆ ವೇದಿಕೆಯಾಗುವುದು ಮಾಸಾಂತ್ಯದಲ್ಲಿ ನಡೆಯುವ 'ಸಿಂಗಾರೋತ್ಸವ' ಕಾರ್ಯಕ್ರಮ. ಪ್ರತಿ ವರ್ಷದಂತೆಯೇ ಈ ಸಲವೂ ಈ ಕಾರ್ಯಕ್ರಮ ಏಪ್ರಿಲ್ 26ರಂದು ಇಲ್ಲಿನ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಿಂಗಪುರ ಕನ್ನಡಿಗರ... ಮುಖ್ಯವಾಗಿ ಕನ್ನಡ ಕುಡಿಗಳ ಪ್ರತಿಭೆಗೆ ಕನ್ನಡಿ ಹಿಡಿಯಿತು.

ಈ ಬಾರಿ 'ಅಂದು-ಇಂದು-ಮುಂದು' ಎಂಬ ಧ್ಯೇಯ/ಘೋಷದಡಿ ಮೂಡಿ ಬಂದ ಕಾರ್ಯಕ್ರಮ, ವಿದುಷಿ ಭಾಗ್ಯಮೂರ್ತಿ ಅವರ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಹಿಂದಿನ ಕಾಲದ ವೇಷಭೂಷಣ, ನಂಬಿಕೆ-ನಡೆ ನುಡಿಗಳಿಗೆ ಸಾಕ್ಷಿಯಾದ 'ಅಂದು' ವಿಭಾಗದಲ್ಲಿ ಒಂದೆಡೆ ದುರ್ಯೋಧನನ ಅಹಂಕಾರ ಅಬ್ಬರಿಸಿದರೆ, ಇನ್ನೊಂದೆಡೆ ಹಳ್ಳಿಯಂಚಿನ ಹುತ್ತಕ್ಕೆ ಪೂಜೆ ಸಲ್ಲಿಸಿ ನರ್ತಿಸಿದ ಹೆಂಗಳೆಯರು 'ಪಂಚಮಿ ಹಬ್ಬ'ಕ್ಕೆ ಕರೆಯಲು ಇನ್ನೂ ಬರದ ಅಣ್ಣನಿಗಾಗಿ ಹಂಬಲಿಸಿದರು. [ಸಿಂಗಪುರದ ಕೋಗಿಲೆ ಭಾಗ್ಯ ಮೂರ್ತಿ]

Singarotsava 2014 celebrated in Singapore

ಬಣ್ಣದ ಪ್ಯಾಂಟು-ಹೂಗಳ ಶರ್ಟ್ ತೊಟ್ಟ ನಾಯಕ 'ಮೈ ನೇಮ್ ಈಸ್ ಚಿಟ್ಟೆಸ್ವಾಮಿ' ಎನ್ನುತ್ತ ರೆಟ್ರೋ ಅವತಾರದ ನಾಯಕಿಯನ್ನು ಪಟಾಯಿಸಲು ಯತ್ನಿಸಿದರೆ, ಪಟ್ಟಾಪಟ್ಟೆ ಅಂಗಿ-ಪಂಚೆ ತೊಟ್ಟ ತುಡುಗರು ಲಂಗ-ಪೋಲಕ ತೊಟ್ಟ ಹುಡುಗಿಯರ ಹಿಂದೆ 'ನಮ್ಮೂರ ಸಂತೇಲಿ...'ಎನ್ನುತ್ತ ಸುತ್ತಾಡಿದರು. ಪಟ್ಟೆ ಸೀರೆಯುಟ್ಟ ಕನ್ನಡದ ಹುಡುಗಿಯರು 'ಗಿಲಿ ಗಿಲಿ ಗಿಲಕ್' ತಾಳಕ್ಕೆ ಹೆಜ್ಜೆ ಹಾಕಿದರೆ, 'ಕೋಳಿಕೆ ರಂಗ', 'ಕಾಳಿಂಗ-ಕೃಷ್ಣ' ವೇದಿಕೆಯಲ್ಲಿ ಮಿಂಚಿದರು.

ಹಾಡು, ನೃತ್ಯಗಳ ಪ್ರದರ್ಶನವನ್ನು ಮುಂದುವರೆಸಿದ 'ಇಂದು' ವಿಭಾಗ, ಬಣ್ಣ ಬಣ್ಣದ ಪಕ್ಕ ಹೊತ್ತ ಪುಟಾಣಿ ಪಾತರಗಿತ್ತಿಗಳ ಹೂದೋಟವಾಯಿತು... ಕುಣಿವ ಖೋಡಿಗಳಾದ 'ಡಾನ್ಸ್ ಮೇನಿಯಾಕ್ಸ್'ಗಳ ಉತ್ಸಾಹಕ್ಕೆ ಚಿಲುಮೆಯಾಯಿತು. 'ನೀನ್ಯಾಕೋ ನಿನ್ನ ಹಂಗ್ಯಾಕೋ', 'ರಾಗಿ ತಂದೀರಾ' ಹಾಡುಗಳ ಮೂಲಕ ಭಕ್ತಿರಸ ಹರಿದರೆ, ಅದೇ ವೇಳೆ ಭಾವಗೀತೆ, ಚಲನಚಿತ್ರಗೀತೆಗಳೂ ಜನರ ಮನ ತಣಿಸಿದವು.

'ಮುಂದು' ವಿಭಾಗದಲ್ಲಿ 'ಚಿನ್ನದ ರಾಜ ಬಾರೋ' ವಾದ್ಯ ಸಂಗೀತದಲ್ಲಿ ಮೂಡಿಬಂದ ಫ್ಯೂಷನ್ ನೃತ್ಯ, ಹದಿ ಹರೆಯದ ಹುಮ್ಮಸ್ಸು ಚಿಮ್ಮುವ 'ಟೀನೇಜ್ ಟೀನೇಜ್' ನೃತ್ಯಗಳಿದ್ದು ಒಂದು ತೂಕವಾದರೆ, ಕನ್ನಡದ ಕಂಪು ಸಾರುವ 'ಕಂಸಾಳೆ ನೃತ್ಯ'ದ್ದು ಇನ್ನೊಂದು ತೂಕ! ಮಧುರವಾಗಿ ಮೂಡಿ ಬಂದ 'ಆರಾಧಿಸುವೆ ಮದನಾರಿ' ಮನ ಮುದಗೊಳಿಸಿದರೆ, ಜಾದೂ ಪ್ರದರ್ಶನ ಮೋಡಿ ಮಾಡಿತು.


'ಮದುವೆಗೆ ಏನ್ ಅಡುಗೆ ಮಾಡೋಣ' ಪ್ರಹಸನ್ ಪ್ರೇಕ್ಷಕರ ತುಟಿಯಲ್ಲಿ ನಗು ಮೂಡಿಸಿದರೆ ಅದೇ ವೇಳೆ ರುಚಿ ರುಚಿ ತಿಂಡಿತೀರ್ಥ ನೆನಪಿಸಿ ಬಾಯಲ್ಲಿ ನೀರು ತರಿಸಿತು. ಕನ್ನಡ ಸಂಘ ಏಪ್ರಿಲ್ ಮೊದಲರ್ಧದಲ್ಲಿ ಏರ್ಪಡಿಸಿದ್ದ 'ಸಿಂಗಾರ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ'ಯ ವಿಜೇತರಿಗೆ ಇದೇ ವೇಳೆ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಅಂಶ ಕನ್ನಡ ಸಂಘ ಕೊಡ ಮಾಡುವ 'ಸಿಂಗಾರ ಆಜೀವ ಸಾಧನ ಪುರಸ್ಕಾರ'ದ ವಿತರಣೆ ಆಗಿತ್ತು. ಸಂಘದ ಏಳ್ಗೆಗೆ ಅನನ್ಯ ಕೊಡುಗೆ ನೀಡಿದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಸ್. ವಿಜಯಕುಮಾರ್ ಅವರು ಈ ಬಾರಿಯ ಪ್ರಶಸ್ತಿಗೆ ಭಾಜನರಾಗಿದ್ದು, ಸಂಸ್ಥಾಪಕ ಅಧ್ಯಕ್ಷರಾದ ಎ.ಎನ್.ರಾವ್ ಹಾಗೂ ಹಾಲಿ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರು ವಿಜಯಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಪರೂಪದ ಸೇವೆ ಸಲ್ಲಿಸಿದ್ದ, ವಿಜಯಕುಮಾರ್ ಪತ್ನಿ ಸಂಧ್ಯಾ ವಿಜಯಕುಮಾರ್ ಅವರಿಗೂ ಸನ್ಮಾನ ಮಾಡಲಾಯಿತು.

ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರ 'ಸಿಂಗಾರೋತ್ಸವ'ದಲ್ಲಿ ಪಾಲ್ಗೊಂಡ ಸಭಿಕರನ್ನುದ್ದೇಶಿ ಸ್ವಾಗತ ಭಾಷಣ ಮಾಡಿದರೆ, ಉಪಾಧ್ಯಕ್ಷೆ ಕವಿತಾ ರಾಘವೇಂದ್ರ ಅವರು ಆಭಾರ ಮನ್ನಣೆ ಮಾಡಿದರು. ಚಿಣ್ಣರ ಚಿಲಿಪಿಲಿ, ಉತ್ಸಾಹ, ಪ್ರತಿಭೆಗಳ ಸಮ್ಮಿಳನದಿಂದ ಅದ್ಭುತವಾಗಿ ಮೂಡಿಬಂದ 'ಕಿಂದರಿಜೋಗಿ' ನೃತ್ಯ ರೂಪಕದೊಂದಿಗೆ ಸಿಂಗಪುರ ಕನ್ನಡಿಗರ 'ಸ್ಪ್ರಿಂಗ್' (ವಸಂತ) ಉತ್ಸವಕ್ಕೆ ತೆರೆ ಬಿದ್ದಿತು.

ಸ್ಥಳೀಯ ಪ್ರತಿಭಾ ಪ್ರದರ್ಶನದಿಂದ ಕಣ್ಮನ ಮುದ ಪಡೆದ ಸಿಂಗನ್ನಡಿಗರು ಸಂತೃಪ್ತಿಯ ನಗೆ ಹೊತ್ತು ಮನೆಗೆ ಮರಳಿದರು.ಅನೇಕಾನೇಕ ಸ್ವಯಂಸೇವಕರ ಸಹಾಯದಲ್ಲಿ ಸರಾಗವಾಗಿ ನಡೆದ ಈ ಉತ್ಸವಕ್ಕೆ ಸಂಘದ ಉಪಾಧ್ಯಕ್ಷರಾದ ಕವಿತಾ ರಾಘವೇಂದ್ರ, ವಿನಿತ ಐತಾಳ್ ಹಾಗೂ ಸಂಧ್ಯಾ ರಾಮಪ್ರಸಾದ್ ಅವರ ಸೂಕ್ತ ಮುಂದಾಳತ್ವದಲ್ಲಿ ಕನ್ನಡ ಸಂಘದ ಕಾರ್ಯಕ್ರಮವು ಪ್ರೇಕ್ಷಕರ ನೆನಪಿನಾಳದಲ್ಲಿ ಆದ ಛಾಪನ್ನು ಮೂಡಿಸುವುದರಲ್ಲಿ ಸಫಲವಾಯಿತು. (ಛಾಯಗ್ರಹಣ - ಸುಧೀಂದ್ರ ಹಾಗೂ ವೆಂಕಟೇಶ್ ಎಚ್.ಆರ್)

English summary
Singarotsava 2014 was celebrated in Singapore on 26th April by Kannadigas. Former president of Kannada Sangha Singapore Vijaykumar was felicitated for his contribution. With lot of cultural activities the function was huge success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X