ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಸಭಾಂಗಣದಾಚೆ

By ಸುರೇಶ ಭಟ್ಟ, ಸಿಂಗಪುರ
|
Google Oneindia Kannada News

ಕನ್ನಡ ಸಂಘ ಸಿಂಗಪುರದ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಎರಡು ದಿನಗಳ ಕನ್ನಡ ಹಬ್ಬದಲ್ಲಿ ಸ್ಥಳೀಯ ಹಾಗೂ ಆಹ್ವಾನಿತ ಕಲಾವಿದರ ಮನಮೋಹಕ ಕಾರ್ಯಕ್ರಮಗಳ ಸುರಿಮಳೆ ಸಭಿಕರನ್ನು ಸಂಭ್ರಮದಲ್ಲಿ ತೋಯಿಸಿತು. ಈ ಬಗ್ಗೆ ಪ್ರತ್ಯಕ್ಷ ವರದಿಗಳನ್ನೂ ನೀವಾಗಲೇ ಓದಿದ್ದೀರಿ. ಆದರೆ ಸಭಾಂಗಣದಿಂದಾಚೆ ನಡೆದದ್ದೇನೆಂದು ನೋಡೋಣ ಬನ್ನಿ!

ಕನ್ನಡ ಸಂಘ (ಸಿಂಗಪುರ) ಆಯೋಜಿಸುವ ಕಾರ್ಯಕ್ರಮಗಳು ಕುಟುಂಬ ಸ್ನೇಹಿ (family friendly) ಎಂದೇ ಪ್ರಸಿದ್ಧಿ. ಸಂಘವು ಸಮ್ಮೇಳನದಲ್ಲೂ ಕೂಡ ಈ ಪರಿಪಾಠವನ್ನು ಮುಂದುವರೆಸಿ, ಒಂದು ಹೆಜ್ಜೆ ಮುಂದಕ್ಕೆ ಒಯ್ದಿತ್ತು. ಸಭಾಂಗಣದಲ್ಲಿ ಹಿರಿಯರಿಗಾಗಿ ವಿವಿಧ ರೀತಿಯ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಪ್ರವೇಶಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಆಟ-ಚಟುವಟಿಕೆಗಳ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳಿಗೆ ಸುಗ್ಗಿ ಸಡಗರ
ಪ್ರವೇಶಾಂಗಣದಲ್ಲಿ ಎರಡೂ ದಿನಗಳು ಮಕ್ಕಳಿಗಾಗಿ ಏರ್ಪಡಿಸಿದ ಸ್ಥಳದಲ್ಲೇ ಚಿತ್ರ ಬಿಡಿಸುವ, ಸ್ಮಾರ್ಟ್ ಫೋನ್ ಫೋಟೋಗ್ರಫಿ, ವಿವಿಧ ವೇಷಭೂಷಣ ಸ್ಪರ್ಧೆಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು ಮಕ್ಕಳಿಗೆ ಎರಡು ದಿನಗಳ ಹಬ್ಬ-ರಜೆಯ ವಾತಾವರಣ ಕಲ್ಪಿಸಿದಂತಾಗಿತ್ತು. ನಮ್ಮ ಸಾಂಪ್ರದಾಯಿಕ ಆಟಗಳಾದ (traditional games) ಅಳಿ ಗುಳಿ ಮಣೆ, ಚೌಕಾಬಾರ ಮತ್ತಿತರ ಆಟಗಳನ್ನು ಮಕ್ಕಳಿಗೆ ಕಲಿಸಿ ಆಡಿಸಿದ್ದು ನಮ್ಮ ಸಂಸ್ಕೃತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನವೆನ್ನಬಹುದು. ಇದಲ್ಲದೆ ಮಕ್ಕಳಿಗಾಗಿ ಚಲನಚಿತ್ರವೊಂದನ್ನು ಕೂಡ ತೋರಿಸಲಾಯಿತು.

Singara Sammelana in Singapore : Report by Suresha Bhatta

ಅದೃಷ್ಟ ಪರೀಕ್ಷೆಯ ಸದವಕಾಶ

ಸಂಘವು ಪ್ರವೇಶಾಂಗಣದಲ್ಲಿ ಈ ಕಾರ್ಯಕ್ರಮದ ಗೋಲ್ಡ್ ಮತ್ತು ಸಿಲ್ವರ್ ಪ್ರಾಯೋಜಕರು ಮತ್ತು ಸಭಿಕರ ನಡುವೆ ಪ್ರಾಯೋಜಕರ ಸರಕು ಮತ್ತು ಸೇವೆಗಳ ಮಾಹಿತಿ ಮತ್ತು ಪರಿಚಯಾತ್ಮಕ ವಿಚಾರ ವಿನಿಮಯವನ್ನು ಆಯೋಜಿಸಿದ್ದು ಇದು ಎಲ್ಲರ ಮೆಚ್ಚುಗೆ ಪಡೆಯಿತು. ಪ್ರಾಯೋಜಕರ ಮಳಿಗೆಗೆ ಭೇಟಿ ನೀಡಿದ ಸಿಂಗನ್ನಡಿಗರಿಗೆ ಅದೃಷ್ಟ ಪರೀಕ್ಷೆಯ ಸದವಕಾಶ; ಹಲವಾರು ಬಹುಮಾನಗಳನ್ನು, ಪ್ರಾಯೋಜಕರ ಹಲವಾರು ಸೈನ್-ಅಪ್ ಉಚಿತ ಉಡುಗೊರೆಗಳನ್ನು, ಆಕರ್ಷಕ ಬಹುಮಾನಗಳನ್ನು ತಮ್ಮ ಬುಟ್ಟಿಗೆ ಸೇರಿಸಿಕೊಂಡ ಸಂತೃಪ್ತಿ!

"ಜಾಯ್ ಅಲುಕ್ಕಾಸ್", "ಆಲ್ ಇಂಡಿಯಾ ಸೂಪರ್ಮಾರ್ಟ್ಸ್", "ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಪ್ರೈ. ಲಿ." ಮತ್ತು "ಜೆಟ್ ಏರ್ವೇಸ್" ಅವರು ಪ್ರಾಯೋಜಿಸಿದ ಭಾಗ್ಯಶಾಲಿ ಬಹುಮಾನ ವಿತರಣೆ ಸ್ಪರ್ಧೆಯಲ್ಲಿ ವಿಜೇತರಾದವರ ಮೊಗದಲ್ಲಿ ಮುಗುಳ್ನಗೆ! ಸಭಿಕರ ಭಾಗವಹಿಸುವಿಕೆಯಿಂದ ಉತ್ತೇಜಿತರಾದ ಪ್ರಾಯೋಜಕರೊಬ್ಬರು ಸ್ಥಳದಲ್ಲೇ ಒಂದು ಹೆಚ್ಚುವರಿ ಲಕ್ಕಿ ಡ್ರಾ ಬಹುಮಾನವನ್ನು ಘೋಷಿಸಿದ್ದು ಸಂತೋಷದ ವಿಷಯವಾಗಿತ್ತು.

"ಸಮ್ಮೇಳನಕ್ಕೊಂದು ಸಂದೇಶ" ಎಂಬ ರಚನಾತ್ಮಕ ಚಿತ್ರಸುರುಳಿ ಸಂದೇಶ ಸ್ಪರ್ಧೆ ಅತಿ ಹೆಚ್ಚು ಮೆಚ್ಚುಗೆಗಳಿಸಿದ ಇಬ್ಬರಿಗೆ ಬಹುಮಾನ ನೀಡಲಾಯಿತು. ಇದಲ್ಲದೆ ದೀಪಾವಳಿಯ ಈ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಉಚಿತವಾಗಿ ಹೋಳಿಗೆ, ಮೈಸೂರುಪಾಕ್ ಮತ್ತು ಐಸ್ ಕ್ರೀಮುಗಳನ್ನು ವಿತರಿಸಿದ ಪ್ರಾಯೋಜಕರು ಸಭಿಕರ ಕಣ್ಣು ಕಿವಿಗಳಿಗಷ್ಟೇ ಅಲ್ಲ, ನಾಲಿಗೆಗೂ ಸಂತೃಪ್ತಿ ನೀಡುವ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿಭಾಯಿಸಿದರು. ಎರಡು ದಿನಗಳ ಕಾಲ ಚಹಾ-ಕಾಫಿ-ಚಾಟ್ಸ್ ಮತ್ತು ರಸದೌತಣವನ್ನು ಆಯೋಜಿಸಿದ್ದ ಊಟ ಮತ್ತು ಉಪಹಾರ ಸಮಿತಿಯು ಸಾಂಸ್ಕೃತಿಕ ಹಬ್ಬದ ಜೊತೆಗೆ ಊಟದ ಹಬ್ಬವನ್ನೂ ಯಶಸ್ವಿಯಾಗಿ ಆಯೋಜಿಸಿತ್ತು.

Singara Sammelana in Singapore : Report by Suresha Bhatta

ಸಿಂಗಾರ ಕಲಾ ಶಿಬಿರ

16ನೇ ಅಕ್ಟೋಬರ್ 2016ರಂದು ಕರ್ನಾಟಕದ ಥರ್ಮೋಕೋಲ್ ಕುಶಲಕಲೆಯ ಶ್ರೀನಿವಾಸ ರಾಜ್ ಅರಸ್ ಅವರಿಂದ "ಸಿಂಗಾರ ಕಲಾ ಶಿಬಿರ"ವನ್ನು ಏರ್ಪಡಿಸಿತ್ತು. ಯಶಸ್ವಿಯಾಗಿ ಮೂಡಿಬಂದ ಈ ಶಿಬಿರದ ನಂತರ ಅವರು ಸಮ್ಮೇಳನದವರೆಗೆ ನಿರಂತರ ಕಾರ್ಯಗತರಾಗಿ ಬೇಲೂರು, ಹಳೇಬೀಡಿನ ಶಿಲ್ಪಕಲೆಗಳನ್ನು ಪ್ರತಿಬಿಂಬಿಸುವ ಥರ್ಮೋಕೋಲ್ ವಿಗ್ರಹಗಳನ್ನು ಕೆತ್ತಿ ಅದರಿಂದ ಸಭಾಂಗಣವನ್ನು ಸುಂದರವಾಗಿ ಅಲಂಕರಿಸಿದರು.

ಅವರ ಜೊತೆಗೆ ಸಂಘದ "ಅಲಂಕರಣ" ಸಮಿತಿಯು ರಂಗೋಲಿ, ಅಲಂಕಾರದ ಬ್ಯಾನರುಗಳು, ದೀಪಗಳು, ಕರ್ನಾಟಕದ ನಕಾಶೆಯ ಮೇಲೆ ಕನ್ನಡನಾಡಿನ ಪ್ರಖ್ಯಾತ ಸ್ಥಳಗಳ ಥರ್ಮೋಕೋಲ್ ಆಕೃತಿಗಳು, ಕಂಬಗಳು, ದ್ವಾರಗಳಿಂದ ಸಭಾಂಗಣವನ್ನು ಸುಂದರವಾಗಿ ಸಿಂಗರಿಸಿ ಫೋಟೋ ತೆಗೆಯುವ ಹಾಗೂ ತೆಗೆಸಿಕೊಳ್ಳುವ ಖಯಾಲಿ ಇರುವವರಿಗೆ ಸೂಕ್ತ ಹಿನ್ನೆಲೆಯನ್ನು ಒದಗಿಸಿಕೊಟ್ಟರು.

ಡಾ. ಎಸ್.ಎಲ್. ಭೈರಪ್ಪನವರೊಂದಿಗೆ ಸಂವಾದ
ಕರ್ನಾಟಕದಿಂದ ಆಗಮಿಸಿರುವ ಮಹನೀಯ ವ್ಯಕ್ತಿಗಳಾದ ಡಾ. ಎಸ್.ಎಲ್. ಭೈರಪ್ಪನವರನ್ನು ಸಮೀಪದಿಂದ ನೋಡಿ, ಅವರೊಂದಿಗೆ ಕೆಲವು ಕ್ಷಣಗಳನ್ನು ಸಂವಾದದಲ್ಲಿ ಕಳೆಯುವ ಸುವರ್ಣಾವಕಾಶ ಸಿಂಗನ್ನಡಿಗರಿಗೆ. ಸ್ಥಳಾವಕಾಶ ಕಡಿಮೆ ಇದ್ದರೂ ಅನೇಕ ಸಾಹಿತ್ಯಾಸಕ್ತರು ಸಭಾಮಂದಿರದ ಮೊಗಸಾಲೆಯಲ್ಲಿ ಸುಮಾರು ಎರಡು ಘಂಟೆಗಳ ಕಾಲ ನಿಂತುಕೊಂಡೇ ಭೈರಪ್ಪನವರ ಸಾಹಿತ್ಯದ ಬಗ್ಗೆ ಪ್ರಶ್ನೋತ್ತರ ಸಂವಾದದಲ್ಲಿ ಭಾಗವಹಿಸಿದರು. ಈ ಸಂವಾದ ಕಾರ್ಯಕ್ರಮ ನ-ಭೂತೋ ನ-ಭವಿಷ್ಯತಿಯಾಗಿತ್ತು.

Singara Sammelana in Singapore : Report by Suresha Bhatta

ಚಿತ್ರ-ಚಿತ್ತಾರ

ಮೈಸೂರಿನ ಖ್ಯಾತ ವ್ಯಂಗ್ಯ ಚಿತ್ರಕಾರ ಕಲಾವಿದ ಎಂ.ವಿ. ನಾಗೇಂದ್ರಬಾಬು ಅವರು ಪ್ರವೇಶಾಂಗಣದಲ್ಲಿ ಮಕ್ಕಳಿಗಾಗಿ ನಡೆಸಿಕೊಟ್ಟ ವ್ಯಂಗ್ಯಚಿತ್ರ ಶಿಬಿರ ಯಶಸ್ವಿ ಪ್ರಯೋಗವಾಗಿತ್ತು. ಮಕ್ಕಳು ಮಿಕಿ-ಮೌಸಿನ ಮುಖದ ವ್ಯಂಗ್ಯಚಿತ್ರವನ್ನು ಬರೆಯುವುದನ್ನು ಆನಂದಿಸಿದರು. ನಾಗೇಂದ್ರಬಾಬು ಅವರು ಸ್ಥಳದಲ್ಲೇ ಬರೆದುಕೊಟ್ಟ ಕ್ಯಾರಿಕೇಚರುಗಳು ಜನಮನವನ್ನು ಸೂರೆಗೊಂಡವು.

ಈ ಸಮ್ಮೇಳನದಲ್ಲಿ ಭಾಗವಹಿಸಿದ, ಕಿವುಡರಿಗಾಗಿ ಕಲೆ ಮತ್ತು ಸಂಸ್ಕೃತಿ ಸಂಘ (foundation for art and culture for deaf, Bangalore) ತಂಡದ ಸದಸ್ಯರು ಕರಕುಶಲ ಪ್ರದರ್ಶನ, ಗಾಜಿನ ವರ್ಣಚಿತ್ರಗಳು, ಮೆಹಂದಿಯ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದರು. ಇಂಥದೊಂದು ಆದರ್ಶಧ್ಯೇಯಕ್ಕೆ ಸಹಕಾರ ನೀಡಿದ ಸಂಘದ ಪ್ರಯತ್ನ ಪ್ರಶಂಸಾರ್ಹವಾದದ್ದು.

Singara Sammelana in Singapore : Report by Suresha Bhatta

ಜಾನಪದ ಮೇಳ, ಹಠಾತ್ ನೃತ್ಯಸಮೂಹ

ಸಭಾಮಂದಿರದಿಂದಾಚೆ ಜಾನಪದ ಮೆರವಣಿಗೆಯಷ್ಟೇ ಅಲ್ಲದೆ ಕಲಾವಿದರು ವಿವಿಧ ಜಾನಪದ ಕಲೆಗಳನ್ನು ಎರಡು ದಿನಗಳ ಕಾಲ ಸಮಯಾವಕಾಶ ಸಿಕ್ಕಿದಾಗಲೆಲ್ಲ ಪ್ರದರ್ಶಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಭಾನುವಾರ ಮಧ್ಯಾಹ್ನದ ಊಟದ ಸಮಯದಲ್ಲಿ ಸಾಲಿನಲ್ಲಿ ಕಾಯುತ್ತಿದ್ದ ಹಸಿದ ಜನರಿಗೆ ಅಚ್ಚರಿಯಲ್ಲಿ ಕೆಡವಿದ್ದು ಕರ್ನಾಟಕದಿಂದ ಬಂದ ಜನಪದ ಕಲಾವಿದರ ವಿಶೇಷ ತಂಡ. ಹಸಿವನ್ನು ಮರೆಸುವಂತೆ ಸಮೃದ್ಧ ಪ್ರದರ್ಶನ ಕೊಟ್ಟರು.

ಮನಸೂರೆಗೊಂಡ ಈ ಜಾನಪದ ಕಾರ್ಯಕ್ರಮಕ್ಕೆ ದೊರೆತ ಕರ್ನಾಟಕ ಸರ್ಕಾರದ ವಿಶೇಷ ಬೆಂಬಲ ಅವಿಸ್ಮರಣೀಯ. ಅದರ ಹಿಂದೆಯೇ ಯಾರೂ ಊಹಿಸಿರದ ರೀತಿಯಲ್ಲಿ 'ಫ್ಲ್ಯಾಶ್ ಮಾಬ್' ಎಂಬ ಚಿಕ್ಕ ಹಠಾತ್ ನೃತ್ಯ ಕಾರ್ಯಕ್ರಮವನ್ನು ಸಂಘದ ಸ್ವಯಂಸೇವಕರು ಪ್ರದರ್ಶಿಸಿದರು. ಕನ್ನಡದ ಜನಪ್ರಿಯ ಆಯ್ದ ಗೀತೆಗಳಿಗೆ ಸೇರಿದ ಹಿರಿಕಿರಿಯ ಪ್ರೇಕ್ಷಕರೂ ಜತೆಗೂಡಿ ಹಾಡುತ್ತಾ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ, ಹರ್ಷೋಲ್ಲಾಸವನ್ನು ಹಂಚಿಕೊಂಡರು.

ಸಿಂಗಪುರದ ರಿಪಬ್ಲಿಕ್ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರಿನ ಒಳಾಂಗಣ ಮತ್ತು ಹೊರಾಂಗಣದಲ್ಲಿ ನಡೆದ ಎರಡು ದಿನಗಳ ಈ ಸಮ್ಮೇಳನ ದೀಪಾವಳಿ ಮತ್ತು ರಾಜ್ಯೋತ್ಸವದ ಹಬ್ಬದ ಕಳೆ ತಂದಿತ್ತು. 30ನೇ ಅಕ್ಟೋಬರ್ ಭಾನುವಾರ ರಾತ್ರಿ "ಅಯ್ಯೋ ಮುಗಿದೇ ಹೋಯಿತಲ್ಲ!" ಎನಿಸುವಂತಾಗಿತ್ತು.

ವರದಿ (ಸುದ್ದಿವಾಹಿನಿ ತಂಡದ ಪರವಾಗಿ): ಸುರೇಶ ಭಟ್ಟ
ಛಾಯಾಚಿತ್ರಗಳು: ಕನ್ನಡ ಸಂಘ (ಸಿಂಗಪುರ)

English summary
Suresha Bhatta, vice-president of Kannada Sangha has posted a write up about Singara Kannada Sahitya Sammelana conducted on October 29, 30. Kannada laureate SL Bhyrappa, stand up comedian prof Krishnegowda, singer Rajesh Krishnan, Shamita Malnad, dancer Sanjay Shantaram and other artists entertained the Singapore Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X