ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಚ್ಚೆದ್ದು ಕುಣಿಯುವಂತೆ ಮಾಡಿದ ಜಾನಪದ ಕಲಾವೈಭವ

ವೀರಗಾಸೆ, ಡೊಳ್ಳು ಕುಣಿತ, ತಮ್ಮಟೆವಾದ್ಯ, ಪೂಜಾ ಕುಣಿತ ಮುಂತಾದ ಜಾನಪದ ನರ್ತಕರು ವೇದಿಕೆಯ ಮೇಲೆ ಮುಖ್ಯ ಭೂಮಿಕೆ ವಹಿಸಿ ನೀಡಿದ ಪ್ರದರ್ಶನ ಪ್ರೇಕ್ಷಕರಲ್ಲಿ ಶಕ್ತಿ ಸಂಚಾಲನೆಯನ್ನುಂಟು ಮಾಡಿತು.

By ಸಿಂಗಪುರ ಸುದ್ದಿವಾಹಿನಿ
|
Google Oneindia Kannada News

ಸಿಂಗಪುರ, ಅಕ್ಟೋಬರ್ 30 : ಜಾನಪದ ಕಲೆ ನಮ್ಮತನ, ನಮ್ಮ ಸಂಸ್ಕೃತಿ ಮತ್ತು ವೈಶಿಷ್ಟ್ಯದ ಪ್ರತೀಕಗಳು. ಆದುದರಿಂದಲೇ ಕನ್ನಡ ಸಂಘ (ಸಿಂಗಪುರ), ಜಾನಪದ ಕಲೆಗೆ ಪ್ರಾಮುಖ್ಯತೆ ನೀಡಿ ಸಿಂಗಾರ ಸಾಹಿತ್ಯ ಸಮ್ಮೇಳನದ ಎರಡನೆಯ ದಿನದ ಕಾರ್ಯಕ್ರಮವನ್ನು ಭರ್ಜರಿ ಜಾನಪದ ಕಲಾವೈಭವದೊಂದಿಗೆ ಶುಭಾರಂಭವನ್ನು ಮಾಡಿತು.

ಕರ್ನಾಟಕದಿಂದ ಬಂದ ಜಾನಪದ ಕಲಾವಿದರು ಗಣನಾಥನಿಗೆ ನಮಿಸುವ ಪದದೊಂದಿಗೆ ತಮ್ಮ ಶಕ್ತಿ ಭರಿತ ಗಾಯನವನ್ನು ಆರಂಬಿಸಿದರು. ಜಾನಪದ ತಂಡವು ಏಕತಾರಿ, ತಾಳ ವಾದ್ಯಗಳೊಂದಿಗೆ ಉತ್ಸಾಹ ಭರಿತರಾಗಿ ಹಾಡಿದರೆ, ಜಾನಪದ ನೃತ್ಯಕಾರರು ಅಷ್ಟೇ ಶಕ್ತಿಯುತವಾಗಿ ನರ್ತಿಸಿ ಹಾಡುವವರೊಡನೆ ಸಮನಾಗಿ ಕಲಾ ಪ್ರದರ್ಶನ ಮಾಡಿದರು.

ಪ್ರೇಕ್ಷಕರು ಕರತಾಡನ ಮಾಡಿದ್ದಲ್ಲದೇ, ಅನೇಕರು ಅವರೊಂದಿಗೆ ಸ್ವತಃ ತಾವೇ ಹೆಜ್ಜೆ ಹಾಕಿದ್ದು ಮುಂಜಾನೆಯ ಸಡಗರವನ್ನು ದ್ವಿಗುಣಗೊಳಿಸಿತ್ತು. ನಂತರ ವೀರಗಾಸೆ, ಡೊಳ್ಳು ಕುಣಿತ, ತಮ್ಮಟೆವಾದ್ಯ, ಪೂಜಾ ಕುಣಿತ ಮುಂತಾದ ಜಾನಪದ ನರ್ತಕರು ವೇದಿಕೆಯ ಮೇಲೆ ಮುಖ್ಯ ಭೂಮಿಕೆ ವಹಿಸಿ ನೀಡಿದ ಪ್ರದರ್ಶನ ಪ್ರೇಕ್ಷಕರಲ್ಲಿ ಶಕ್ತಿ ಸಂಚಾಲನೆಯನ್ನುಂಟು ಮಾಡಿತು.

Singara Sammelana in Singapore - Day 2 report

ಸಿಂಗನ್ನಡಿಗರೆಲ್ಲರಲ್ಲೂ ವಿದ್ಯುತ್ ಸಂಚಾರವನ್ನುಂಟು ಮಾಡಿದ ಜಾನಪದ ಕಲೆಗಳ ಮೃಷ್ಟಾನ್ನದ ನಂತರ ಭಾವಗೀತೆಗಳ ಪಾಯಸವನ್ನು ಕುಡಿಸಲು ಉಪಾಸನ ಮೋಹನ್ ಶಿಬಿರಾರ್ಥಿಗಳ ತಂಡ ವೇದಿಕೆಯಲ್ಲಿ ಸಜ್ಜಾಯಿತು. ಸಂಗೀತವನ್ನೇ ಬಾಳ ಸಂಗಾತಿಯಾಗಿ ಮಾಡಿಕೊಂಡು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಉಪಾಸನ ಮೋಹನ್‍ರವರ ಸಂಗೀತ ಸಂಯೋಜನೆಯಲ್ಲಿ ಗಾಯಕರು ಪ್ರಸಿದ್ಧ ಕವಿಗಳಾದ ಬಿ. ಆರ್. ಲಕ್ಷ್ಮಣ್‍ರಾವ್, ಟಿ.ಎಲ್.ಎಸ್. ಅಡಿಗ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮೈಮರೆಸಿದರು.

'ಒಷನ್‍ ಕಿಡ್ಸ್' ಕರಾವಳಿಯ ನೃತ್ಯ ವೈಭವ

ನಂತರ 'ಒಷನ್‍ ಕಿಡ್ಸ್' ಕರಾವಳಿಯ ನೃತ್ಯ ತಂಡವು "ನೃತ್ಯ ವಿಸ್ಮಯ" ಶೀರ್ಷಿಕೆಯಲ್ಲಿ ರಾಮಾಯಣ ಕಥಾದಾರಿತ ಶಾಸ್ತ್ರೀಯ ಶೈಲಿಯ ಪೌರಾಣಿಕ ನೃತ್ಯ ಪ್ರದರ್ಶಿಸಿ, ನೆರೆದಿದ್ದ ವೀಕ್ಷಕರನ್ನು ವಿಸ್ಮಯಗೊಳಿಸುವಲ್ಲಿ ಯಶಸ್ವಿಯಾಯಿತು. ಕೇವಲ 10-15 ನಿಮಿಷಗಳ ನೃತ್ಯ ರೂಪಕದಲ್ಲಿ ಇಡೀ ರಾಮಾಯಣದ ಸಾರವನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ 'ಕಡಲ ಮಕ್ಕಳ ' ಸಾಧನೆ ನಿಜಕ್ಕೂ ಶ್ಲಾಘನೀಯ.

ಸಿಂಗಪುರ ಭರತನಾಟ್ಯ ಗುರುಗಳಲ್ಲಿ ಒಬ್ಬರಾದ ವಿದುಷಿ ಎಮ್. ಎಸ್. ಶ್ರೀಲಕ್ಷ್ಮಿಯವರ ನಿರ್ದೇಶನದಲ್ಲಿ "ಕಿಂದರಿ ಜೋಗಿ" ಎಂಬ ಕುವೆಂಪು ವಿರಚಿತ ನಾಟಕವನ್ನಾಧರಿಸಿದ ನೃತ್ಯರೂಪಕವನ್ನು ಹದಿನೈದಕ್ಕೂ ಹೆಚ್ಚಿನ ಚಿಣ್ಣರು ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದರು.

Singara Sammelana in Singapore - Day 2 report

ಸಿಂಗಾರ ಅಜೀವ ಸಾಧನ ಪುರಸ್ಕಾರ

ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಸಾಧನೆಗಾಗಿ ರಾಮನಾಥ್ ಎಚ್.ಎಸ್. ಅವರಿಗೂ ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಸಾಧನೆಗಾಗಿ ಡಾ. ಎಮ್. ಪ್ರಕಾಶ್‍ ಹಂಡೆಯವರಿಗೂ ಸಿಂಗಾರ ಅಜೀವ ಸಾಧನ ಪುರಸ್ಕಾರವನ್ನು ಕೊಟ್ಟು ಗೌರವಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ಧ ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ, ಪ್ರೊ. ಕೃಷ್ಣೇಗೌಡ ಮತ್ತು ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್‍ರವರು ಈ ಮಹನೀಯರಿಗೆ ಶಾಲು ಮತ್ತು ಮೈಸೂರು ಪೇಟಗಳೊಂದಿಗೆ ಸನ್ಮಾನಿಸಿದರು.

ನಂತರ ಮಾತನಾಡಿದ ಸನ್ಮಾನಿತರು ಅವರಿಗೆ ಸಂದಿರುವ ಈ ಗೌರವಕ್ಕೆ ಪ್ರತಿಯಾಗಿ ಕನ್ನಡ ಸಂಘಕ್ಕೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಕನ್ನಡ ಸಂಘ ನಡೆಸುತ್ತಿರುವ 'ಕನ್ನಡ ಕಲಿ' ಕಾರ್ಯಕ್ರಮದ ರೂವಾರಿಯಾದ ಎಚ್.ಎಸ್. ರಾಮನಾಥ್ ರವರ ಸನ್ಮಾನ ನಡೆಯುತ್ತಿರುವಾಗ, ಪ್ರೇಕ್ಷಕ ವೃಂದದಲ್ಲಿ ಉಪಸ್ಥಿತರಿದ್ದ ಅವರ ವಯೋ ವೃದ್ಧರಾದ ತಂದೆ (ಗಮಕ ವಿದ್ವಾನ್ ಶ್ರೀ ಎಚ್ ಎಸ್ ಸತ್ಯನಾರಾಯಣ) ಅವರನ್ನು ವೇದಿಕೆಯ ಮೇಲೆ ಕರೆದಾಗ ಒಂದು ಅಪೂರ್ವ ಸಂದರ್ಭ ಉಂಟಾಯಿತು. ಮಗನ ಸನ್ಮಾನ ಸಂದರ್ಭದಲ್ಲಿ ತಂದೆ ಇದ್ದುದು ತುಂಬಾ ಭಾವಪೂರ್ಣವಾಗಿ ಇಡೀ ಕನ್ನಡ ಸಂಘ ಒಂದು ದೊಡ್ಡ ಪರಿವಾರ, ನಾವೆಲ್ಲ ನಮ್ಮವರ ಏಳಿಗೆಯನ್ನು ನೋಡಿ ಸಂತೋಷಭರಿತರಾಗಿದ್ದೇವೆ ಎಂಬ ಭಾವನೆ ಉಂಟಾಯಿತು.

English summary
20th Anniversary of Kannada Sangha Singapore. Singara Sammelana in Singapore - Day 2 report. Folk songs, dance, music by Karnataka artists was the highlight of the morning session. Lifetime award was bestowed to Dr Harish Hande and Ramnath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X