• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭೆಗಳ ಸಂಗಮ, ಸಿಂಗಾರ ಉತ್ಸವದ ಸಂಭ್ರಮ

By ವೆಂಕಟ್, ಸಿಂಗಪುರ
|

ಕಲ್ಪನೆಗಳ ಗರಿಗೆದರಿ ಹಾರಿ ದೂರ

ನನಸಾಗಿಸುವೆಡೆಗಿನ ಹಾದಿಯ ಕಾತುರ

ಹೊಸತನದ ಛಲವ ತೊಟ್ಟು ನಿಂತಿದೆ ಕಲೆಗಳ ಸಂಗಮ

ಬೆಳಕಿನಡಿಯಲಿ ರಂಗಿನಾಟದ ಸಿಂಗಾರ

ಸೇರಿ ನಲಿಯುವ ಹಬ್ಬದ ಸಡಗರ

ತಮ್ಮ ತನ್ಮೆಯ ಬಿಂಕ ಬೀರುವ ಸಂಭ್ರಮ

ಮಾರ್ಚ್ ತಿಂಗಳ ಮೊದಲಾರ್ಧದಲ್ಲಿ ಸಿಂಗನ್ನಡಿಗರು ಕನ್ನಡ ಸಂಘ (ಸಿಂಗಪುರ)ದಿಂದ ಪ್ರತಿ ವರ್ಷ ಸ್ಥಳೀಯ ಪ್ರತಿಭೆಗಳನ್ನು ಒಟ್ಟುಗೂಡಿಸಿ ಆಚರಿಸುವ 'ಸಿಂಗಾರ ಉತ್ಸವ'ವನ್ನು ಎದುರು ನೋಡುವುದು ವಾಡಿಕೆಯಾಗಿಬಿಟ್ಟಿದೆ. ವಯೋಭೇದವಿಲ್ಲದೆ ಸಿಂಗನ್ನಡಿಗರಿಂದ, ಸಿಂಗನ್ನಡಗರಿಗೋಸ್ಕರ ಸೇರಿ ಹಾಡಿ, ಕುಣಿದು ನಲಿಯುವ ಸಂಭ್ರಮದಾಚರಣೆಯನ್ನು ಈ ವರ್ಷ ಮೇ 17ರಂದು, ಸ್ಪ್ರಿಂಗ್ ಸಿಂಗಪುರದ ಸಭಾಂಗಣದಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

'ಸಂಗಮ-ಸಂಭ್ರಮ'ವೆಂಬ ಶೀರ್ಷಿಕೆಯಡಿಯಲ್ಲಿ ರೂಪುಗೊಂಡ ಈ ಕಾರ್ಯಕ್ರಮವನ್ನು ಸಿಂಗಪುರದ 50ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಂಗಪುರದಲ್ಲೆಡೆ ನಡೆಯುತ್ತಿರುವ 'SG50' ಆಚರಣೆಗಳಿಗೆ ಮುಡಿಪಾಗಿಡಲಾಗಿತ್ತು. ಇದೇ ನಿಟ್ಟಿನಲ್ಲಿ ಆಧುನಿಕ ಸಿಂಗಪುರದ ಕರ್ತೃ, ಶಿಲ್ಪಿ ಹಾಗೂ ಸಿಂಗಪುರದ ಅಭಿವೃದ್ಧಿಯ ಜನಕ ಎಂದೇ ಕರೆಯಲಾಗುವ ದಿ. Lee Kuan Yew ಅವರ ಶ್ರದ್ಧಾಂಜಲಿಯನ್ನು ಸಲ್ಲಿಸಿದ ನಂತರ ಕಾರ್ಯಕ್ರಮದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಾರಂಭಮಾಡಲಾಯಿತು. [ಸಿಂಗಪುರದ 'ಸಿಂಹ' ಲೀ ಕುಆನ್ ಯೂ, ನುಡಿನಮನ]

'ಕನ್ನಡ ಕಲಿ' ಮಕ್ಕಳಿಂದ ಗಣೇಶನ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮವು ಸತತವಾಗಿ ಆರು ಗಂಟೆಗಳ ಕಾಲ ನಿರಾಯಾಸವಾಗಿ ಸಭಿಕರನ್ನು ಭಕ್ತಿಗೀತೆ, ಭಾವಗೀತೆ, ಶಿಶುಗೀತೆ, ಚಿತ್ರಗೀತೆ, ಜಾನಪದ ಗೀತೆ, ಹರಿದಾಸರ ಕೀರ್ತನೆಗಳ ಗಾಯನ, ವಾದನ ಹಾಗೂ ಏಕ, ಯುಗಳ ಹಾಗೂ ಸಮೂಹ ಕಲಾವಿದರ ನೃತ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ವಿವಿಧ ಕಲೆಗಳ ಆಗರವಾಗಿದ್ದ ರಂಗಮಂದಿರ, ಅನೇಕ ನದಿಗಳು ಬಂದು ಸೇರಿದ ಕಲಾಸಾಗರದಂತೆ ತೋರುತಿತ್ತು. ಪೌರಾಣಿಕ ಕಿರು ನಾಟಕ 'ಭಕ್ತ ಪ್ರಹ್ಲಾದ', ಅರ್ಜುನ-ಬಬ್ರುವಾಹನರ ಸಂವಾದದ ಏಕಪಾತ್ರಾಭಿನಯ, ಮೂಕಾಭಿನಯದ ಮೂಲಕ ನೀಡಿದ 'ಮೌನ ಸಂದೇಶ', ಪ್ರಹಸನ, ಹಾಸ್ಯ ಬಾಷಣ, ಖ್ಯಾತ ನಟರ ರಾಜಕಾರಣಿಗಳ ಅಣಕ ಇನ್ನೂ ಅನೇಕ ವೈವಿಧ್ಯಮಯ 50 ಕಾರ್ಯಕ್ರಮಗಳ ಈ ಅಪೂರ್ವ ಸಂಗಮದಲ್ಲಿ 160 ಸ್ಥಳೀಯ ಕಲಾವಿದರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಸಂಘದ ಹೆಮ್ಮೆಯ ದ್ವೈವಾರ್ಷಿಕ ಪತ್ರಿಕೆ 'ಸಿಂಗಾರ ಪತ್ರಿಕೆ -2015'ಯು ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ, ಸಂಪಾದಕರಾದ ಗಿರೀಶ್ ಜಮದಗ್ನಿ, ಸಹಾಯ ಮಾಡಿದ ರೇಖಾ ಹೆಗಡೆ, ವೆಂಕಟ್ ಅವರೊಂದಿಗೆ ಸಂಘದ ಮಾಜಿ ಅಧ್ಯಕ್ಷರಾದ ಪ್ರಭುದೇವ ಮತ್ತು ಮೈತ್ರೇಯಿ ಜಗದೀಶ್ ಅವರ ಸಮ್ಮುಖದಲ್ಲಿ ಅನಾವರಣಗೊಂಡಿತು. [ನಮ್ಮೂರಿನ ಸುದ್ದಿ ಕೊಡಿ ಸ್ವಾಮೀ : ಗಿರೀಶ್ ಜಮದಗ್ನಿ]

ಅಂತಿಮವಾಗಿ, 'ಸಿಂಗಾರ ಉತ್ಸವ'ದಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭೆಗಳು ಒಂದುಗೂಡಿ, ಭಾರತದ ವಿವಿಧ ರಾಜ್ಯಗಳನ್ನು ಬಿಂಬಿಸುವ ಸಂಗೀತಕ್ಕೆ ಆಯಾ ಪ್ರದೇಶದ ನೃತ್ಯ ಪ್ರಕಾರಗೊಳಿಂದ ಕುಣಿದು ನಲಿದು, ಸಿಂಗಪುರದಲ್ಲಿ ಒಗ್ಗೂಡಿದ ಭಾರತೀಯರ 'ಸಂಗಮ'ವೆನ್ನುವ ಸಂದೇಶವನ್ನು ಸಾರಿ, ಜೊತೆಯಾಗಿ ಕೂಡಿ SG50 ಅನ್ನು ಆಚರಿಸುವ 'ಸಂಭ್ರಮ'ವನ್ನು ಮೆರೆದರು.

ಕಾರ್ಯಕ್ರಮವನ್ನು ನಿಭಾಯಿಸಿ, ಯಶಸ್ವಿಯಾಗುವಲ್ಲಿ ಶ್ರಮಿಸಿದ ಎಲ್ಲಾ ಸ್ವಯಂ-ಸೇವಕರಿಗೆ ಕನ್ನಡ ಸಂಘ (ಸಿಂಗಪುರ) ಹಾಗೂ 'ಸಿಂಗಾರ ಉತ್ಸವ' ಉಪ ಸಮಿತಿಯ ಸದಸ್ಯರಾದ ಉಪಾಧಕ್ಷೆ ಕವಿತಾ ರಾಘವೇಂದ್ರ, ವೆಂಕಟ್, ವೆಂಕಟೇಶ್ ಗದ್ದೆಮನೆ, ಗಿರೀಶ್ ಜಮದಗ್ನಿ, ಶ್ರೀವಿದ್ಯಾ ವೆಂಕಟೇಶ್ ಹಾಗೂ ಭಾರ್ಗವಿ ಆನಂದ್ ಅವರ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಆಯೋಜಿಸಲು ನೆರವಾದ ಮುಖ್ಯ ಪ್ರಾಯೋಜಕರು Cube 9 Capital Group, ಸಹ ಪ್ರಾಯೋಜಕರಾದ Organic Yogi ಹಾಗೂ Padaki Tours & Travels (Bangalore) ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಶುಭ ಹಾರೈಕೆಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Singapore is celebrating 50th year of independence this year. To mark the occasion Singapore Kannadigas gathered together to celebrate Singara sambhrama, a cluster of cultural programs. Event organized by Kannada Sangha (Singapore), which is annual talent show by Singapore Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more