ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗನ್ನಡಿಗರ ಮನ ಗೆದ್ದ ಸಿಂಗಾರ ಕ್ರಿಕೆಟ್ ಕಪ್ – 2015

By ಸುರೇಶ ಭಟ್ಟ, ಸಿಂಗಪುರ
|
Google Oneindia Kannada News

ಭಾರತೀಯ ಮೂಲದ ಎಲ್ಲರಿಗೂ ಕ್ರಿಕೆಟ್ ಒಂದು ದೊಡ್ಡ ಹಬ್ಬವೇ ಸರಿ. ಅಕ್ಟೋಬರ್ 17ನೇ ತಾರೀಖು ಶನಿವಾರ ಕನ್ನಡ ಸಂಘ (ಸಿಂಗಪುರ)ವು ಮೊಟ್ಟ ಮೊದಲ ಬಾರಿಗೆ ಏಳು ಓವರುಗಳ, ಎಂಟು ಆಟಗಾರರ, ಒಂಬತ್ತು ತಂಡಗಳ ನಡುವೆ ಫೆರರ್ ಪಾರ್ಕ್ ಮೈದಾನದಲ್ಲಿ ಸಿಂಗಾರ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಅವರು ಆಟಗಾರರನ್ನುದ್ದೇಶಿಸಿ ಮಾತನಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

"ಯುನೈಟೆಡ್ ಕ್ರಿಕೆಟ್ ಕ್ಲಬ್", "ಬಬ್ರುವಾಹನ", "ಮಯೂರ", "ಗಂಧದ ಗುಡಿ", "ಚಾಳುಕ್ಯ", "ಟೀಮ್ ಗೂಗ್ಲಿ", "ರಾಯಲ್ ಚಾಲೆಂಜರ್ಸ್", "ರಾಯಲ್ ಕ್ಲಾಸಿಕ್ಸ್" ಮತ್ತು "ಸಿಂಗನ್ನಡಿಗರು" ಹೀಗೆ ಈ ಮಣ್ಣಿನ, ಕರುನಾಡಿನ ಹಾಗೂ ಐಪಿಎಲ್ ಎಲ್ಲವನ್ನೂ ನೆನಪಿಸುವ ರಸವತ್ತಾದ ಹೆಸರಿನೊಂದಿಗೆ ತಂಡಗಳು ಹಣಾಹಣಿಗಿಳಿದವು. ನಾಕ್-ಔಟ್ ಶೈಲಿಯ ಪಂದ್ಯದಲ್ಲಿ ಗೆದ್ದ ತಂಡದವರ ಮುಖದಲ್ಲಿ ಗೆಲುವಿದ್ದರೆ ಸೋತ ತಂಡದವರಿಗೆ ಕೂಡ ಇನ್ನೊಮ್ಮೆ ಸೋತ ಇತರ ತಂಡದೊಂದಿಗೆ ಆಟವಾಡಿ ಗೆದ್ದು ಮುಂದೆ ಬರುವ ಅವಕಾಶ ಆಟಗಾರರಿಗೆ ಉತ್ತೇಜನಕಾರಿಯಾಗಿತ್ತು.

Singara Cup Cricket 2015 in Singapore

"ಸಿಂಗನ್ನಡಿಗರು", "ಚಾಳುಕ್ಯ", "ರಾಯಲ್ ಚಾಲೆಂಜರ್ಸ್" ಮತ್ತು "ರಾಯಲ್ ಕ್ಲಾಸಿಕ್ಸ್" ತಂಡಗಳು ಅದ್ಭುತ ಆಟ ಮೆರೆದು ಸೆಮಿ-ಫೈನಲ್ ಹಂತಕ್ಕೆ ತಲುಪಿದವು. "ಸಿಂಗನ್ನಡಿಗರು" ಮತ್ತು "ರಾಯಲ್ ಚಾಲೆಂಜರ್ಸ್" ನಡುವೆ ನಡೆದ ಮೊದಲ ಸೆಮಿ-ಫೈನಲ್ಲಿನಲ್ಲಿ "ರಾಯಲ್ ಚಾಲೆಂಜರ್ಸ್" ತಂಡ ಜಯಶಾಲಿಯಾದರೆ "ರಾಯಲ್ ಕ್ಲಾಸಿಕ್ಸ್" ಮತ್ತು "ಚಾಳುಕ್ಯ" ನಡುವೆ ನಡೆದ ಎರಡನೇ ಸೆಮಿ-ಫೈನಲ್ಲಿನಲ್ಲಿ "ರಾಯಲ್ ಕ್ಲಾಸಿಕ್ಸ್" ತಂಡ ಜಯಭೇರಿ ಬಾರಿಸಿತು. "ಚಾಳುಕ್ಯ" ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಫೈನಲ್ ಪಂದ್ಯ ರೋಮಾಂಚಕಾರಿಯಾಗಿತ್ತು. ಕೊನೆಯ ಓವರಿನವರೆಗೂ ಆಸಕ್ತಿ ಉಳಿಸಿಕೊಂಡು ಹೋಯಿತು. ಮೊದಲು ಬ್ಯಾಟ್ ಮಾಡಿದ "ರಾಯಲ್ ಕ್ಲಾಸಿಕ್ಸ್" ತಂಡ ಅರುಣ್ ಲೋಬೋ ಅವರ 31 ರನ್ನುಗಳ ನೆರವಿನೊಂದಿಗೆ ಆಕ್ರಮಣಕಾರೀ ಆಟವಾಡಿ ಹತ್ತು ಓವರುಗಳಲ್ಲಿ ನೂರ ಐದು ರನ್ನುಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ ಉತ್ತಮವಾಗಿಯೇ ಬ್ಯಾಟಿಂಗ್ ಆರಂಭಿಸಿರ ರಾಯಲ್ ಚಾಲೆಂಜರ್ಸ್ ತಂಡ ಎದುರಾಳಿ ತಂಡದ ನಾಯಕ ಸಂತೋಷ್ ರೈ ಅವರ ಒಂದು ಓವರಿನಲ್ಲಿ ಮೂರು ವಿಕೆಟ್ ಕಳೆದುಕೊಂಡ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಇನ್ನುಳಿದ ಬ್ಯಾಟ್ಸ್ ಮನ್‌ಗಳು ಉತ್ತಮವಾಗಿ ಆಡಿ ವಿಜಯದ ಬಾಗಿಲಿಗೆ ಬಂದರೂ ಗೆಲ್ಲಲಾಗಲಿಲ್ಲ. ಏಳು ರನ್ನುಗಳಿಂದ ಸೋತ ರಾಯಲ್ ಚಾಲೆಂಜರ್ಸ್ ತಂಡ ಎರಡನೇ ಸ್ಥಾನ ಪಡೆದರೆ "ರಾಯಲ್ ಕ್ಲಾಸಿಕ್ಸ್ ತಂಡ ಮೊತ್ತ ಮೊದಲ ಸಿಂಗಾರ ಕಪ್ಪನ್ನು ತನ್ನದಾಗಿಸಿಕೊಂಡಿತು.

ಸಿಂಗಪುರದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಸಾದ್ ಖಾನ್ ಜನ್ ಜುವಾ ಅವರು ಈ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಜಯರಂಗ ಪ್ರಸಾದ್ ಅವರು ಈ ಕೆಳಕಂಡ ಪಂದ್ಯದ ಮತ್ತು ಸರಣಿಯ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

Singara Cup Cricket 2015 in Singapore

ನವೀನ್ (ಚಾಳುಕ್ಯ ತಂಡ) - "ಅತ್ಯುತ್ತಮ ಕ್ಷೇತ್ರರಕ್ಷಕ"
ವಿನಾಯಕ್ (ರಾಯಲ್ ಚಾಲೆಂಜರ್ಸ್ ತಂಡ) - "ಅತ್ಯುತ್ತಮ ಬ್ಯಾಟ್ಸ್ ಮನ್"
ನರೇಂದ್ರ (ಗಂಧದ ಗುಡಿ ತಂಡ) - ಅತ್ಯುತ್ತಮ ಬೌಲರ್
ಅರುಣ್ ಲೋಬೋ (ರಾಯಲ್ ಕ್ಲಾಸಿಕ್ಸ್ ತಂಡ) - ಫೈನಲ್ಲಿನ "ಪಂದ್ಯ ಪುರುಷ"
ಕಿರಣ್ (ರಾಯಲ್ ಕ್ಲಾಸಿಕ್ಸ್ ತಂಡ) - ಸರಣಿಯ "ಪಂದ್ಯ ಪುರುಷ".

ಕ್ರೀಡೆ ಹಾಗೂ ಯುವಜನ ಉಪಸಮಿತಿಯವರು ಜಂಟಿಯಾಗಿ ಸಂಘದ ಸದಸ್ಯರಿಗೆ ಮಾತ್ರ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ 60ಕ್ಕೂ ಹೆಚ್ಚು ಜನ ಸಂಘದ ಸದಸ್ಯತ್ವ ಪಡೆದಿದ್ದು ಒಂದು ದಾಖಲೆಯೇ ಸರಿ. ಕ್ರೀಡಾ ಮೈದಾನ, ದಕ್ಷ ತೀರ್ಪುಗಾರರು, ಸ್ಕೋರರುಗಳನ್ನು ನೀಡುವ ಮೂಲಕ ಸಿಂಗಪುರ ಕ್ರಿಕೆಟ್ ಅಸೋಸಿಯೇಶನ್ (SCA) ಅವರ ಬೆಂಬಲ ಈ ಪಂದ್ಯಾವಳಿಯ ಯಶಸ್ಸಿಗೆ ಪ್ರಮುಖ ಕಾರಣ.

ಸ್ನೇಹಪೂರ್ವಕ ವಾತಾವರಣದಲ್ಲಿ ನಡೆದ ಈ ಕ್ರಿಕೆಟ್ ಸರಣಿ ಸಂಘದ ಕಾರ್ಯಕಾರಿ ಸಮಿತಿಗೂ, ಆಟಗಾರರಿಗೂ, ವೀಕ್ಷಕರಿಗೂ, ವೀಕ್ಷಕ ವಿವರಣೆಗಾರರಿಗೂ ಮತ್ತು www.cricHQ.com ಅಂತರ್ಜಾಲ ತಾಣದ ಮೂಲಕ ಸ್ಕೋರನ್ನು ತಿಳಿಯುತ್ತಿದ್ದ ಎಲ್ಲಾ ಕ್ರೀಡಾಭಿಮಾನಿಗಳಿಗೂ ಸಂತೃಪ್ತಿ ತಂದಿತ್ತು.

ಹೆಚ್ಚಿನ ಚಿತ್ರಗಳಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ

ವರದಿ : ಸುರೇಶ ಭಟ್ಟ (ಸಿಂಗಪುರ)
ಛಾಯಾಚಿತ್ರ : ಸಮಂತ್ ಯಾದವ್ ಮತ್ತು ಗಿರೀಶ್ ಜಮದಗ್ನಿ

English summary
Singapore Kannada Sangha successfully conducted Singara Cricket Cup 2015 on October 17 at Ferrer Park in Singapore. Singapore Cricket Association supported the tournament by providing cricket ground, scorers and umpires. A report by Suresha Bhatta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X