ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷಕ್ಕೆ 'ಪ್ರತಿಭೆ'ಯ ಸಂಗೀತದೊಂದಿಗೆ ಸ್ವಾಗತ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸಂಗೀತದಲ್ಲಿ ಅಭಿರುಚಿಯಿದ್ದವರಿಗೆ ಅದನ್ನು ಎಷ್ಟು ಉಣಬಡಿಸಿದರೂ ಸಾಲದು. ಅಂತಹ ಮೃಷ್ಟಾನ್ನ ಭೋಜನಕ್ಕಾಗಿ ಅವರು ಯಾವಾಗಲೂ ತಯಾರಿರುತ್ತಾರೆ. ಆಸಕ್ತಿಯುಳ್ಳವರಿಗೆ ಹೊಸ ವರುಷದ ಶುಭಾರಂಭದಲ್ಲಿಯೇ ಅಂತಹ ಸುವರ್ಣಾವಕಾಶವೊಂದು ಒದಗಿದರೆ? ಅದೇನೋ ಹಿಂದಿಯಲ್ಲಿ "ಸೋನೇಪೆ ಸುಹಾಗಾ" ಎನ್ನುತ್ತಾರಲ್ಲ ಆ ತರಹ!

ಸಿಂಗಪುರದ ಹಿಂದೂಸ್ತಾನಿ ಸಂಗೀತಾಸಕ್ತರಿಗೆ ಹೊಸ ವರುಷದ ಎರಡನೇ ದಿನದಂದು ಅದೇ ರೀತಿಯ ಅವಕಾಶವೊಂದು ಒದಗಿ ಬಂದಿತು. ಒದಗಿಸಿ ಕೊಟ್ಟವರು "ಲಹರಿ" ಸಂಸ್ಥೆ ಮತ್ತು ಸಂಗೀತಾಸಕ್ತ ಎಮ್.ಜಿ.ರಮೇಶ್. ಜನವರಿ 2, 2015ರಂದು, ಮೌಂಟ್ ಬ್ಯಾಟನ್ ರಸ್ತೆಯಲ್ಲಿರುವ 'ಸಿಂಧು' ಸಭಾಭವನದಲ್ಲಿ ಏರ್ಪಡಿಸಿದ "ಪ್ರತಿಭಾ" ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯ ರಸಪಾಕವನ್ನು ಸಿಂಗನ್ನಡಿಗರಿಗೆ ಉಣಬಡಿಸಿದವರು ಬೆಂಗಳೂರಿನ ವಿದುಷಿ ಭಾರತಿ ಪ್ರತಾಪ್ ಮತ್ತು ನಮ್ಮ ಸಿಂಗಪುರದ ಕಲಾವಿದೆ ವಿದುಷಿ ಪ್ರತಿಮಾ ಗಣೇಶ್.

ಸಂಜೆ ಏಳು ಗಂಟೆಗೆ ಸಭಿಕರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಆರಂಭಿಸಿದವರು ಕಾರ್ಯಕ್ರಮದ ನಿರ್ವಾಹಕಿ ಕುಮಾರಿ ಶರಣ್ಯ ಜಮದಗ್ನಿ. ಕುಮಾರ ಮನು ಮಾಗಳ್, ಕಲಾವಿದರ ಕಿರು ಪರಿಚಯವನ್ನು ತಾನೇ ತಯಾರಿಸಿದ ಸಾಕ್ಷ್ಯ ಚಿತ್ರದ ಮೂಲಕ ಸಾದರ ಪಡಿಸಿದ್ದು ಸಭಿಕರೆಲ್ಲರ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದ ಪ್ರಾಯೋಜಕರಿಗೆ ವಂದಿಸಿ, ಸಭಿಕರ ಅಪ್ಪಣೆ ಪಡೆದು ವಿದುಷಿಯರಿಬ್ಬರು ತಮ್ಮ ಗಾನ ರಸಧಾರೆಯನ್ನು ಆರಂಭಿಸಿದರು. ಮೊತ್ತ ಮೊದಲಿಗೆ ಚಿರಪರಿಚಿತ ಮತ್ತು ಸಂಜೆ ಸಮಯದ ರಾಗ ಯಮನ್‍ನಲ್ಲಿ ಆರಂಭಿಸಿದ ಒಂದು ಲಘು ಆಲಾಪವನ್ನು ಪ್ರಾರಂಬಿಸಿದ ವಿದುಷಿಯರಿಬ್ಬರೂ ಮುಂದುವರೆದು ತೀನ್‍ತಾಲದಲ್ಲಿ "ದರುಶನ ದೇವೋ ಶಂಕರ ಮಹಾದೇವ" ಎಂಬ ಬಂದಿಶ್‍ಅನ್ನು ಮಧ್ಯ ಮತ್ತು ಧೃತ್‍ಲಯದಲ್ಲಿ ಪ್ರಸ್ತುತ ಪಡಿಸಿದರು.

Singapore welcomes New Year with Hindustani Music

ಹಾಗೆಯೇ ಮುಂದುವರೆದು, ತಮ್ಮ ಎರಡನೆಯ ಕೃತಿಯನ್ನು ರಾಗ ಖಮಾಜ್ ಥಾಟ್‍ನ ಝಿಂಜೋಟಿಯಲ್ಲಿ ಪ್ರಾರಂಭಿಸಿ, ಆಗ್ರಾ ಘರಾಣದ ವೈಶಿಷ್ಟ್ಯವಾದ ನೋಮ್‍ತೋಮ್‍ಅನ್ನು ಪ್ರಸ್ತುತಪಡಿಸಿ ಸಭಿಕರನ್ನು ರಂಜಿಸಿ ಅದೇ ರಾಗವನ್ನು ಮಧ್ಯಲಯದಲ್ಲಿ ಮುಂದುವರೆಸಿ "ಅಖಿಯಾನ್ ಉನ್‍ಸೋ ಲಾಗೆ" ಎಂಬ ಬಂದಿಶ್‍ಅನ್ನು ಭಾವಪೂರ್ಣವಾಗಿ ಹಾಡಿದರು. ತದನಂತರ ಲಘು ಶಾಸ್ತ್ರೀಯ ಪ್ರಕಾರವಾದ ದಾದರಾದಲ್ಲಿ "ಪಾನಿ ಭರೆನಿ" ಎಂಬ ಬಂದಿಶ್‍ಅನ್ನು ರಾಗ ಮಿಶ್ರ ಗಾರಾದಲ್ಲಿ ಪ್ರಸ್ತುತಪಡಿಸಿದರು ಪ್ರತಿಮಾ ಗಣೇಶ್. ವಿದುಷಿಯರಿಬ್ಬರೂ ಕೂಡಿ ದುರ್ಗಾ, ಜಯಜಯವಂತಿ, ಭೂಪಾಲಿ, ದೇಶ್, ಸೋಹನಿ, ದರಬಾರಿ, ಬಾಗೇಶ್ವರಿ, ಬಸಂತ್, ಬಹಾರ್, ಲಲಿತ್ ಇತ್ಯಾದಿ ಹನ್ನೆರಡು ರಾಗಗಳನ್ನೊಳಗೊಂಡ ರಾಗಮಾಲೆಯಿಂದ ದುರ್ಗಾದೇವಿಯನ್ನು ಸ್ತುತಿಸಿ ಸಭಿಕರನ್ನು ಭಕ್ತಿರಸದ ಪ್ರವಾಹದಲ್ಲಿ ಮುಳುಸಿದರು.

ರಾಗ ದೇಶದಲ್ಲಿ "ರಾಮ ಕರೇಲಿ ಕಹ ನೈನ ಉಲಝೆ" ಎಂಬ ಬಂದಿಶ‍ಅನ್ನು ಭಾವ ಪರವಶತೆಯಿಂದ ಗಾಯನ ಮಾಡಿ, ನಂತರ ತರಾನಾವೊಂದನ್ನು ಹಾಡಿ ಭಾರತಿ ಪ್ರತಾಪ್ ತಮ್ಮ ನೈಪುಣ್ಯತೆಯಿಂದ ಸಭಿಕರ ಮನಗೆದ್ದರು. ಅವರು ಸುಪ್ರಸಿದ್ಧ ಗಾಯಕ ಪಂಡಿತ್ ವೆಂಕಟೇಶಕುಮಾರ್ ಅವರು ಸಂಯೋಜಿಸಿದ, ಕನಕದಾಸರ ಕನ್ನಡ ಕೃತಿ "ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ" ಎಂಬ ಭೈರವಿ ರಾಗದ ಕೃತಿಯನ್ನು ಹಾಡಿದರು. ನಂತರ ಸಹೋದರಿಯರಿಬ್ಬರೂ ಒಬ್ಬರಾದ ಮೇಲೆ ಒಬ್ಬರಂತೆ "ಪಾಯೋರಿ ಮೈನೆ ರಾಮರತನ ಧನ", "ದೇವಕಿ ನಂದನ", "ಝೂಲ ತಲಾ ವರಸೆ" ಮುಂತಾದ ಅದ್ಭುತ ಕೃತಿಗಳನ್ನು ಅಷ್ಟೇ ಅದ್ಭುತವಾಗಿ ಹಾಡಿ ಸಭಿಕರನ್ನು ಬೆರಗುಗೊಳಿಸಿದರು. ಕೊನೆಯದಾಗಿ ರಾಗ ಭೈರವಿಯಲ್ಲಿ "ಪಾಯಲಿಯ ಬಾಜೆ" ಎಂಬ ಭಾವಭರಿತ ಬಂದಿಶ್‍ ಮೂಲಕ ಕಾರ್ಯಕ್ರಮವನ್ನು ಮುಗಿಸಿದಾಗ ಗಂಟೆ ಒಂಭತ್ತು ಮೀರಿದ್ದರೂ, ಸಭಿಕರಿಗೆ ಇಷ್ಟು ಬೇಗ ಮುಗಿಯಿತಲ್ಲ ಎಂಬಂತೆ ಭಾಸವಾಯಿತು!

Singapore welcomes New Year with Hindustani Music

ಕಲಾವಿದರಿಗೆ ತಬಲಾದಲ್ಲಿ ಸಾಥ ನೀಡಿದವರು ಜಿತೇಂದರ್ ಸಿಂಗ್ ಮತ್ತ ಹಾರ್ಮೋನಿಯಂ ಸಾಥ್ ನೀಡಿದವರು ಆನಂದ್ ಧಮೇಲಿಯಾ. ಕಾರ್ಯಕ್ರಮದ ರೂವಾರಿಯಾದ ಎಮ್.ಜಿ.ರಮೇಶ್ ವಂದನಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಮತ್ತು ಶ್ರೀ ಸಮಿತ್ ಘೋಷಾಲ್ ಅವರು ಕಲಾವಿದರೆಲ್ಲರಿಗೂ ಕಿರುಕಾಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಮುಖ್ಯ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದವರು ಗಿರೀಶ್ ಜಮದಗ್ನಿ ಮತ್ತು ಸಂಪೂರ್ಣ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿದವನು ಕುಮಾರ ವೇಣುಗೋಪಾಲ್ ಕುಲಕರ್ಣಿ. ಕಾರ್ಯಕ್ರಮವನ್ನು ಪ್ರಾಯೋಜಿಸಿದವರು ಕರಕುಶಲ ಆಭರಣಗಳ ವಿನ್ಯಾಸಕರಾದ ಲವಾಟ್ರೆಜ್‍ರ್ಸ್.

ಆಗ್ರಾ ಘರಾಣದ ವೈಶಿಷ್ಟ್ಯ : ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನೆಲೆಸಿದರೂ ವಿದುಷಿಯರಿಬ್ಬರಲ್ಲಿ ಕಂಡು ಬಂದ ತಾಳಮೇಳ ಮತ್ತು ಹೊಂದಾಣಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಇಬ್ಬರೂ ಕರ್ನಾಟಕದ ಮೇರು ಕಲಾವಿದೆ ಮತ್ತು ಆಗ್ರಾ ಘರಾಣದ ಲಲಿತ್ ರಾವ್ ಅವರ ಶಿಷ್ಯೆಯರು. ಆಗ್ರಾ ಘರಾಣ ಹದಿಮೂರನೆಯ ಶತಮಾನದ ನೌಹರ್ ಬಾಣಿ ಎಂಬ ಮೂಲ ಪ್ರಕಾರದಿಂದ ಹೊರಹೊಮ್ಮಿದ್ದು ಅದರ ಆಧುನಿಕ ಪ್ರವರ್ತಕರೆಂದರೆ ಬರೋಡದ ಮಹಾರಾಜರ ಆಸ್ಥಾನ ಗಾಯಕರಾದ ಉಸ್ತಾದ್ ಫಯಾಜ್ ಖಾನ್ ಸಾಹೇಬರು. ಆಗ್ರಾ ಘರಾಣದ ವೈಶಿಷ್ಟ್ಯವೆಂದರೆ ಧ್ರುಪದ್, ಧಮಾರ್ ಶೈಲಿ ಮತ್ತು ಖಯಾಲ್ ಶೈಲಿಗಳ ಮಧುರ ಮಿಶ್ರಣ. ಅದಕ್ಕಾಗಿಯೇ ಆಗ್ರಾ ಘರಾಣದ ಗಾಯಕರ ಆಲಾಪ ನೋಮ್‍ತೋಮ್‍ಗಳಿಂದ ಆರಂಭವಾಗುವುದು.

ವಿದುಷಿ ಭಾರತಿ ಪ್ರತಾಪ್ ಶಾಸ್ತ್ರೀಯ ಗಾಯನದಲ್ಲಿ ಆಕಾಶವಾಣಿಯ ಬಿ ಹೈ ಗ್ರೇಡ್ ಕಲಾವಿದೆ ಮತ್ತು ದೇವರನಾಮ ಮತ್ತು ವಚನಗಳಲ್ಲಿ ಎ ಗ್ರೇಡ್ ಕಲಾವಿದೆ. ಭಾರತದಲ್ಲಿ ಕುಂದಗೋಳದ ಸವಾಯಿ ಗಂಧರ್ವ ಮತ್ತು ಮುಂಬಯಿಯ ದಾದರ್-ಮಾತುಂಗಾದ ಸಾಂಸ್ಕೃತಿಕ ಸಭೆಗಳಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಸಂಗೀತ ವಿಮರ್ಶಕರಿಂದ ಸೈ ಎನಿಸಿಕೊಂಡವರು. ಭಾರತದಲ್ಲಿ ಮಾತ್ರವಲ್ಲದೇ ಅಮೇರಿಕ ಮತ್ತು ಕೆನಡ ದೇಶಗಳಲ್ಲಿ ಸಂಗೀತ ಕಚೇರಿ ನೀಡಿದ್ದಾರೆ ಮತ್ತು ಅನೇಕ ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ವಿದುಷಿ ಪ್ರತಿಮಾ ಗಣೇಶ್ ಕೂಡ ಶಾಸ್ತ್ರೀಯ ಗಾಯನದಲ್ಲಿ ಆಕಾಶವಾಣಿಯ ಬಿ ಹೈ ಗ್ರೇಡ್ ಕಲಾವಿದೆ. ದೇಶ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದವರು. ಸಿಂಗಪುರ, ಜಪಾನ್, ಯುರೋಪುಗಳಲ್ಲಿ ಸಂಗೀತ ಕಚೇರಿ ನೀಡಿದ್ದಾರೆ. ಇಂತಹ ಉದಯೋನ್ಮುಖ ಕಲಾವಿದೆಯರನ್ನು ಕೇಳುವ ಮಹದಾವಕಾಶ ಸಿಂಗಪುರದ ಶ್ರೋತೃಗಳಿಗೆ ಒದಗಿ ಬಂದಿದ್ದು ತುಂಬಾ ಆನಂದದ ಸಂಗತಿ.

English summary
Singapore welcomes New Year with splendid Hindustani Music by Bharati Pratap from Bengaluru and Prathima Ganesh from Singapore. A report by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X