ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಕೋಗಿಲೆ ಡಾ. ಭಾಗ್ಯ ಮೂರ್ತಿಗೆ ನಮನ

By ಸುರೇಶ ಭಟ್ಟ (ಸಿಂಗಪುರ)
|
Google Oneindia Kannada News

ಒಂದೂರಿನಲ್ಲಿ ಒಂದು ಕೋಗಿಲೆ ಇತ್ತಂತೆ. ಅದು ಕನ್ನಡ ಮಾತನಾಡುವ, ಕನ್ನಡದಲ್ಲಿ ಹಾಡುವ ಕೋಗಿಲೆಯಂತೆ. ಕಾರಣಾಂತರದಿಂದ ಈ ಕೋಗಿಲೆ ತನ್ನ ಗಂಡ, ಗಂಡು ಕೋಗಿಲೆಯೊಂದಿಗೆ ಕಡಲಾಚೆಯ ದ್ವೀಪಕ್ಕೆ ಬಂತಂತೆ. ಅಲ್ಲಿ ಕನ್ನಡ ಮಾತನಾಡುವವರಿಲ್ಲ, ಕೇವಲ ತಮಿಳು, ಚೈನೀಸ್ ಮತ್ತು ಮಲಯಾ ಭಾಷೆ ಮಾತನಾಡುವವರು ಮಾತ್ರವಂತೆ.

ಮೊದಮೊದಲು ಬೇಸರವಾಗಿ ತಾಯ್ನಾಡಿಗೆ ಮರಳಬೇಕೆನಿಸಿದರೂ ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಈ ಕೋಗಿಲೆ ತಮಿಳು, ತೆಲುಗು ಮತ್ತಿರರ ಭಾಷೆಗಳನ್ನು ಕಲಿತು, ಹಾಡಿ, ಅದು ಕೆಲವೇ ವರ್ಷಗಳಲ್ಲಿ "ಸರ್ವಋತು (ಗಳಲ್ಲೂ ಹಾಡುವ) ಕೋಗಿಲೆ" ಎನಿಸಿಕೊಂಡಿತಂತೆ.

ಸಂಗೀತಾಸಕ್ತರನ್ನೆಲ್ಲರನ್ನೂ ಮಕ್ಕಳಂತೆ ನೋಡಿಕೊಳ್ಳುವ ಈ "ಸಂಗೀತ ಸರಸ್ವತಿ", "ಗೀತ ಕಲಾ ನಿಪುಣ", "ನಾದ ನಿಧಿ" ಕೋಗಿಲೆಗೆ ಆ ದ್ವಿಪದಲ್ಲೆಲ್ಲಾ ಮತ್ತು ದ್ವೀಪದಾಚೆಯೂ ಹಲವಾರು (ಸಂಗೀತಾಸಕ್ತ) ಮಕ್ಕಳು. ಸರಿಗಮ ಹೇಳಿಕೊಡುವ ಈ ಕೋಗಿಲೆಗೆ "ಸಿಂಗೈ-ಗಾಮ" ಪ್ರಶಸ್ತಿಯೂ ಸಿಕ್ಕಿದೆಯಂತೆ! ಈ ಕೋಗಿಲೆ ತನ್ನ ಜೀವಮಾನದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿದ ಶ್ರೀಲಂಕಾ ವಿಶ್ವವಿದ್ಯಾನಿಲಯ ಈ ಕೋಗಿಲೆಗೆ "ಗೌರವ ಡಾಕ್ಟರೇಟ್" ಪ್ರಶಸ್ತಿ ನೀಡಿ ಗೌರವಿಸಿತಂತೆ. ಯಾರಪ್ಪಾ ಈ ಕೋಗಿಲೆ ಅಂತ ಹುಬ್ಬೇರಿಸುತ್ತೀರಾ? ಸ್ವಲ್ಪ ತಾಳಿ, ಹೇಳಿಯೇ ಬಿಡುತ್ತೇನೆ!

ಶಿವಮೊಗ್ಗದಿಂದ ಸಿಂಗಪುರಕ್ಕೆ ಹಾರಿದ ಕೋಗಿಲೆ

ಶಿವಮೊಗ್ಗದಿಂದ ಸಿಂಗಪುರಕ್ಕೆ ಹಾರಿದ ಕೋಗಿಲೆ

ಶಿವಮೊಗ್ಗ ಜಿಲ್ಲೆಯ ಅರಗದಲ್ಲಿ ಜನಿಸಿ, ಬಿ.ಎಂ.ಎಸ್. ಕಾಲೇಜ್ ಫಾರ್ ವುಮೆನ್‌ನಲ್ಲಿ BA, specialization in Music ಓದಿದ ಭಾಗ್ಯ ಮೂರ್ತಿ ಅವರು 1978ರಲ್ಲಿ ಕಾರ್ಯನಿಮಿತ್ತವಾಗಿ ಸಿಂಗಪುರಕ್ಕೆ ಬಂದ ಪತಿ ಶ್ರೀನಿವಾಸ ಮೂರ್ತಿ ಅವರ ಜೊತೆ ಅನಿವಾರ್ಯವಾಗಿ ಈ ಪುಟ್ಟ ದ್ವೀಪಕ್ಕೆ ಬಂದು ನೆಲೆಸಿದರು.

ಅಡೆತಡೆಗಳನ್ನು ಒಂದೊಂದಾಗಿ ಜಯಿಸಿದ ಭಾಗ್ಯ

ಅಡೆತಡೆಗಳನ್ನು ಒಂದೊಂದಾಗಿ ಜಯಿಸಿದ ಭಾಗ್ಯ

ತಮ್ಮ ನೆಮ್ಮದಿಯ ವಲಯ (Comfort Zone), ಭಾಷೆ, ಸಂಸ್ಕೃತಿ ಹೀಗೆ ಅಡ್ಡಬಂದ ಎಲ್ಲಾ ಅಡೆ-ತಡೆಗಳನ್ನು ಒಂದೊಂದಾಗಿ ಜಯಿಸಿ, "ಗಾನ ಕೋಗಿಲೆ" ಡಾ. ಭಾಗ್ಯ ಮೂರ್ತಿಯಾಗಿ ಬೆಳೆದದ್ದು ಕರ್ನಾಟಕದ ಮತ್ತು ಸಿಂಗಪುರದ ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ. ಸಂಗೀತ ಕ್ಷೇತ್ರದಲ್ಲಿ ನಿರಂತರ ಸಾಧನೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸಲ್ಲಿಸಿದ ಸೇವೆಗೆ ಶ್ರೀಲಂಕಾ ವಿಶ್ವವಿದ್ಯಾನಿಲಯದಿಂದ ಡಿಸೆಂಬರ್ 2013ರಲ್ಲಿ ಭಾಗ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಶಿಷ್ಯ ವೃಂದದಿಂದ ಸಂಗೀತ ಶಿಕ್ಷಕಿಗೆ ಸನ್ಮಾನ

ಶಿಷ್ಯ ವೃಂದದಿಂದ ಸಂಗೀತ ಶಿಕ್ಷಕಿಗೆ ಸನ್ಮಾನ

ಕಳೆದ ಮೂರು ದಶಕಗಳಿಂದ ಸಿಂಗಪುರದಲ್ಲಿ ಗಾಯಕಿ, ಸಂಗೀತ ಸಂಯೋಜಕಿ ಮತ್ತು ನಿರ್ದೇಶಕಿಯಾಗಿ ಪ್ರಸಿದ್ಧಿಯಾಗಿರುವ ಡಾ. ಭಾಗ್ಯ ಮೂರ್ತಿಯವರು ಸಿಂಗಪುರದಲ್ಲಿ ಹಲವಾರು ಕಡೆ ಕಳೆದ ಕರ್ನಾಟಕ ಸಂಗೀತದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶಿಷ್ಯ ವೃಂದ ಮಾರ್ಚ್ 13ರಂದು ವುಡ್ಲ್ಯಾಂಡ್ಸ್ ಸಮುದಾಯ ಭವನದಲ್ಲಿ "ವಂದೇಹಮ್ ಶಾರದಾಮ್" ಎಂಬ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಮನಸ್ಸನ್ನು ಸೆರೆ ಹಿಡಿದ ಶಾಸ್ತ್ರೀಯ ಸಂಗೀತ

ಮನಸ್ಸನ್ನು ಸೆರೆ ಹಿಡಿದ ಶಾಸ್ತ್ರೀಯ ಸಂಗೀತ

ಕಿಕ್ಕಿರಿದ ಸಭಾಂಗಣ, ಜನಸ್ತೋಮದ ಕರತಾಡನದ ಮಧ್ಯೆ ಶಂಕರಾಭರಣ, ರಾಗಮಾಲಿಕಾ, ಪಂಕಜಮುಖ, ಅಭೇರಿ, ಮೋಹನ, ಮಾಯಾಮಾಳವಗೌಳ, ವಲಚಿ, ಹಿಂದೋಳ, ಸಿಂಧುಭೈರವಿ, ಕದನಕುತೂಹಲ, ನಟ್ಟೈ, ಕಲ್ಯಾಣಿ, ಶುದ್ಧ ಧನ್ಯಾಸಿ, ದೇಶ್ಯ ತೋಡಿ, ಪುನ್ನಗವರಾಲಿ, ಆಹಿರ್ ಭೈರವಿ, ರೇವತಿ, ಬಹುದರಿ ಮತ್ತು ಯಮನ್ ಕಲ್ಯಾಣಿ ರಾಗಗಳಲ್ಲಿ ಪುರಂದರ ದಾಸರು, ಮುತ್ತುಸ್ವಾಮಿ ದೀಕ್ಷಿತರು, ಪಾಪನಾಶನ್ ಶಿವನ್, ಓಥುಕಾಡು ವೆಂಕಟಸುಬ್ಬ ಐಯ್ಯರ್, ತ್ಯಾಗರಾಜರು, ಕಾರೈಕ್ಕುಡಿ ಕೃಷ್ಣಮೂರ್ತಿ, ದಯಾನಂದ ಸರಸ್ವತಿ ಮುಂತಾದವರ ಕೃತಿಗಳ ಶಾಸ್ತ್ರೀಯ, ಭಕ್ತಿ, ಜಾನಪದ ಶೈಲಿಯ ಗಾಯನಗಳು ಅಭೂತಪೂರ್ವವಾಗಿದ್ದು ಕನ್ನಡ ಮತ್ತು ಕನ್ನಡೇತರ ಜನಸ್ತೋಮದ ಮನಸ್ಸನ್ನು ಸೆರೆ ಹಿಡಿಯಿತು.

ಮಕ್ಕಳಿಂದ ರಸವತ್ತಾದ ಹಾಡುಗಳ ಔತಣ

ಮಕ್ಕಳಿಂದ ರಸವತ್ತಾದ ಹಾಡುಗಳ ಔತಣ

ಚಿಕ್ಕಮಕ್ಕಳು ಸೊಗಸಾಗಿ ಹಾಡಿದ ಪ್ರಾರ್ಥನೆ "ಮುದಕರಾಥ ಮೋದಕಮ್", "ವರಲೀಲ ಗಾನ ಲೋಲ", "ಓಂ ಶಕ್ತಿ", "ದುರ್ಗಾ ಲಕ್ಷ್ಮಿ ಸರಸ್ವತಿ", "ಮುರುಗ ಮುರುಗ", "ನಕಲುಗೋಪಿಕ"; ನಂತರ ಹಿರಿಯ ಮಕ್ಕಳು ಮತ್ತು ದೊಡ್ಡವರು ಹಾಡಿದ "ನವರಾಗ ವರ್ಣಂ", "ಸಾಮಗಾನ ಲಾಲನೆ", "ಕಾಂತಮಾಂ", "ಭಜರೆ", "ವಾನ್ಚಸಿ ಕೃತಿ", "ನಾರಾಯಣ"; ಶ್ರೀ ತ್ಯಾಗರಾಜರ ಮೊದಲನೆಯ ಮತ್ತು ಕೊನೆಯ ಕೃತಿ; "ಸ್ವಾಗತಂ ಕೃಷ್ಣ", "ಜನನಿ ಜನನಿ", "ಅಂಬಿಗ ನಾನಿನ್ನ ನಂಬಿದೆ" ಮತ್ತು "ತಿಲ್ಲಾನ" ಹೀಗೆ ಅವರ ಶಿಷ್ಯವೃಂದದವರು ಸಂಗೀತಾಭಿಮಾನಿಗಳಿಗಾಗಿ ಒಂದಾದ ಮೇಲೆ ರಸವತ್ತಾದ ಹಾಡುಗಳ ಔತಣ ಬಡಿಸಿದರು.

ಪತಿ ಶ್ರೀನಿವಾಸ ಮೂರ್ತಿ ಅವರೊಂದಿಗೆ ಭಾಗ್ಯ

ಪತಿ ಶ್ರೀನಿವಾಸ ಮೂರ್ತಿ ಅವರೊಂದಿಗೆ ಭಾಗ್ಯ

ಈ ಎಲ್ಲ ಕಲಾವಿದರಿಗೆ ಸಮರ್ಥವಾಗಿ ಪಕ್ಕವಾದ್ಯ ನೀಡಿದವರು ವಿದ್ವಾನ್ ಗಜನ್ (ತಬಲಾ) ಮತ್ತು ಆದಿತ್ಯ (ಪಿಟೀಲು). ವುಡ್ಲ್ಯಾಂಡ್ಸ್ ಸಿಸಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪಕ್ಕವಾದ್ಯ ಕಲಾವಿದರಿಗೆ ಗೌರವ ಕಾಣಿಕೆಯನ್ನು ಅರ್ಪಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವತಃ ಕರ್ನಾಟಕ ಶಾಸ್ತ್ರೀಯ ಗಾಯಕರಾದ ಮತ್ತು ಮೃದಂಗ ವಾದಕರಾದ ಶಂಕರ ರಾಜನ್ ಅವರು ಭಾಗ್ಯ ಮೂರ್ತಿ ಅವರೊಂದಿಗಿನ ಸಂಗೀತ ಕಾರ್ಯಕ್ಷೇತ್ರದ ಪಯಣದ ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.

ಭಾಗ್ಯ ಮೂರ್ತಿ ಅವರ ಸಂಗೀತ ಪಯಣ

ಭಾಗ್ಯ ಮೂರ್ತಿ ಅವರ ಸಂಗೀತ ಪಯಣ

ಸ್ವಾಗತಗೀತೆಗೆ ಉತ್ತಮವಾದ ಕರವೋಕೆ ಸಂಗೀತ (ಭಾಗ್ಯ ಮೂರ್ತಿ ಅವರ ಪುತ್ರ ಕಿಶನ್ ಮೂರ್ತಿ), ಸುಂದರವಾದ ಪವರ್ ಪಾಯಿಂಟ್ ಸ್ಲೈಡುಗಳು ಅಶೋಕ್ ಹೆಬ್ಬಾರ್), ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ರಾಗಗಳ ಮಹತ್ವ ಮತ್ತು ಉಪಶಮನ ಶಕ್ತಿಯ ಬಗ್ಗೆ ವಿವರವಾದ ವಿಶ್ಲೇಷಣೆ (ಕುಮಾರಿ ವಿಜಯಲಕ್ಷ್ಮಿ ವೆಂಕಟೇಶ್), ಭಾಗ್ಯ ಮೂರ್ತಿ ಅವರ ಸಂಗೀತ ಪಯಣ ಮತ್ತು ಸಾಧನೆ ಮತ್ತು ಧ್ವನಿ ತುಣುಕುಗಳನ್ನು ಸುಂದರವಾಗಿ ಸೆರೆ ಹಿಡಿದ ಚಿತ್ರಸುರುಳಿ ಸುಮನ ಹೆಬ್ಬಾರ್) ಈ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತ್ತು.

ವಿದ್ಯಾರ್ಥಿನಿಯೊಂದಿಗೆ ಹುಟ್ಟುಹಬ್ಬ ಆಚರಣೆ

ವಿದ್ಯಾರ್ಥಿನಿಯೊಂದಿಗೆ ಹುಟ್ಟುಹಬ್ಬ ಆಚರಣೆ

ತಮ್ಮ ಜನ್ಮದಿನವಾಗಿದ್ದ ಈ ದಿನ ತಮ್ಮ ವಿದ್ಯಾರ್ಥಿಯೊಬ್ಬಳೊಂದಿಗೆ ಹುಟ್ಟುಹಬ್ಬದ ಸಂತೋಷವನ್ನು ಹಂಚಿಕೊಂಡ ಭಾಗ್ಯ ಮೂರ್ತಿ ಅವರು ಸಭಿಕರ ಕೋರಿಕೆಯ ಮೇರೆಗೆ "ದಾಸನ ಮಾಡಿಕೊ ಎನ್ನ" ಹಾಡನ್ನು ಸುಮಧುರವಾಗಿ ಹಾಡಿ ನಮ್ಮನ್ನೆಲ್ಲ ಭಕ್ತಿಲೋಕಕ್ಕೆ ಕೊಂಡೊಯ್ದರು. ಈ ಕಾರ್ಯಕ್ರಮವು ಎಲ್ಲ ವಿದ್ಯಾರ್ಥಿಗಳು ಮತ್ತು ಗುರು ಕೂಡಿ ಒಕ್ಕೊರಲಿನಲ್ಲಿ ಹಾಡಿದ "ವಂದೇಹಮ್ ಶಾರದಮ್" ಹಾಡಿನೊಂದಿಗೆ ಸಮಾಪ್ತವಾಯಿತು. ಛಾಯಾಚಿತ್ರಗಳು: ವೆಂಕಟೇಶ್ ಜಿ. (ಸಿಂಗಪುರ)

English summary
Vandeham Sharadam, musical programme by Woodlands CC, IAEC on 13th April 2014, Sunday - by the students of Dr. Bhagha Murthy, a leading vocalist in Singapore. Bhagya Murthy Was felicitated by her students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X