ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗನ್ನಡಿಗರೂ ಬಣ್ಣ ಹಚ್ಚುವಂತೆ ಮಾಡಿದ 'ಮುಖ್ಯಮಂತ್ರಿ'

By ವರದಿ - ಆರತಿ ನಾಗೇಶ್
|
Google Oneindia Kannada News

ಬೆಂಗಳೂರಿನ ಕಲಾಗಂಗೋತ್ರಿ ತಂಡದ ಸುಪ್ರಸಿದ್ಧ 'ಮುಖ್ಯಮಂತ್ರಿ' ನಾಟಕದ 609ನೆಯ ಯಶಸ್ವೀ ಪ್ರದರ್ಶನಕ್ಕೆ ಸಿಂಗಪುರದ ಕನ್ನಡಿಗರು ಸಾಕ್ಷಿಯಾದರು. ಈ ನಾಟಕ ಹಲವಾರು ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೂ ಸಾಕ್ಷಿಯಾಯಿತು.

ಆಸ್ಟ್ರೇಲಿಯಾ ಹಾಗು ನ್ಯೂಜಿಲೆಂಡ್ಗಳಲ್ಲಿ ಯಶಸ್ವೀ ಪ್ರದರ್ಶನಗಳನ್ನು ಪೂರೈಸಿದ ಈ ತಂಡ, ಮೇ 20ರಂದು ಈ ಹಾಸ್ಯಮಯ ರಾಜಕೀಯ ನಾಟಕವನ್ನು ಸಿಂಗನ್ನಡಿಗರಿಗೆ ಪ್ರಸ್ತುತ ಪಡಿಸಲು ಸನ್ನದ್ಧವಾಗಿ ಸಿಂಗಪುರಕ್ಕೆ ಆಗಮಿಸಿತ್ತು. ಕನ್ನಡ ಸಂಘ (ಸಿಂಗಪುರ)ದ ವತಿಯಿಂದ ಈ ಕಾರ್ಯಕ್ರಮ ಆಯೋಜಿತಗೊಂಡಿದ್ದು,ಇದನ್ನು ವೀಕ್ಷಿಸಲು ಅತ್ಯಂತ ಕಾತರ ಹಾಗು ಉತ್ಸಾಹದಿಂದ ಸಿಂಗನ್ನಡಿಗರು ಸಜ್ಜಾಗಿದ್ದರು.

ಮೇ 20ರ ಶನಿವಾರ ಸಂಜೆ ಸಿಂಗಪುರದ ಬಾರ್ಕರ್ ರೋಡ್‌ನ "ಆಂಗ್ಲೋ ಚೈನೀಸ್ ಸ್ಕೂಲ್‌ನಲ್ಲಿರುವ ಮಿಸ್. ಲೀ ಚೂನ್ ಗ್ವಾನ್‌ನ ಸಭಾಂಗಣದಲ್ಲಿ ಈ ನಾಟಕ ಪ್ರದರ್ಶನಕ್ಕೆ ಕನ್ನಡ ಸಂಘ (ಸಿಂಗಪುರ)ವು ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಸಭಾಂಗಣವು ಬಹಳಷ್ಟು ಕಿಕ್ಕಿರಿದು ತುಂಬಿತ್ತು. [ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಯಶೋಗಾಥೆ]

Singapore local talents take part in Kannada Play Mukhyamantri

ವೇದಿಕೆಯ ಮೇಲಿನ ಬಿಳಿಯ ಆಸನಗಳು ಹಾಗು ಉಬ್ಬು ದಿಂಬುಗಳು ಮುಖ್ಯಮಂತ್ರಿಗಳ ಕಚೇರಿ ಹಾಗು ಪಕ್ಷದ ಕಚೇರಿಯ ಸಂಕೇತವಾಗಿದ್ದರೆ, ಊಟದ ಮೇಜು ಹಾಗು ಕುರ್ಚಿಗಳು ಮುಖ್ಯಮಂತ್ರಿಗಳ ಮನೆಯ ಸಂಕೇತವಾಗಿತ್ತು. ಅಂತೆಯೇ ಅವರ ಸಹವರ್ತಿಯ ಮನೆಯನ್ನು ಸಾಂಕೇತಿಕವಾಗಿ ಮೇಜು -ಕುರ್ಚಿ ಹಾಗು ಒಂದು ಸ್ಥಿರ ದೂರವಾಣಿಯಿಂದ ಸಜ್ಜುಗೊಳಿಸಲಾಗಿತ್ತು.

ಸಂಪೂರ್ಣ ಶ್ವೇತಮಯವಾಗಿದ್ದ ಈ ವೇದಿಕೆಯಲ್ಲಿ ಅಪವಾದವೆಂಬಂತೆ ಇದ್ದುದು ಎಂದರೆ, ಕೆಲ ಸ್ಥಿರದೂರವಾಣಿಗಳು ಹಾಗು ಒಂದು ಹಳೆಯ 'ಟೈಪ್ ರೈಟರ್ ', 1980ರ ದಶಕದಲ್ಲಿ ಈ ನಾಟಕದ ಸನ್ನಿವೇಶ ಸೃಷ್ಟಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದವು. ಉಳಿದಂತೆ ನಾಟಕದಲ್ಲಿ ಬರುವ 3 ಹೆಣ್ಣು ಪಾತ್ರಗಳು ವೇದಿಕೆಗೆ ಸ್ವಲ್ಪ ರಂಗಿನ ಸಿಂಚನ ಮಾಡಿದ್ದವು.

ನಾಟಕ ಪ್ರಾರಂಭವವಾಗುವ ಮೊದಲೇ ಪ್ರೇಕ್ಷಕರಿಗೆ ಪಾತ್ರಧಾರಿಗಳ ಹಾವ -ಭಾವ ಹಾಗು ದೇಹಭಾಷೆಯನ್ನು ಗಮನಿಸುವಂತೆ ಸೂಚಿಸಲಾಗಿತ್ತು. ಯಾವುದೇ ಹಾಸ್ಯ ನಾಟಕದ ಅವಿಭಾಜ್ಯ ಅಂಗ ಎಂದರೆ ಅದರಲ್ಲಿ ಬರುವ ಒಂದು ಸಾಲಿನ ಸಂಭಾಷಣೆಗಳು. ಅದರ ಬಗ್ಗೆಯೂ ಗಮನ ನೀಡುವಂತೆ ಸೂಚಿಸಲಾಯಿತು. ಅತ್ಯಂತ ನುರಿತ ಕಲಾವಿದರಿದ್ದ ಈ ನಾಟಕದಲ್ಲಿ ಒಬ್ಬರನ್ನು ಮೀರಿಸುವಂತೆ ಒಬ್ಬರು ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದರು ಎಂದರೆ ಬಹುಷಃ ಅತಿಶಯೋಕ್ತಿಯಲ್ಲ. [ಸಿಂಗಪುರದಲ್ಲಿ ವಾದಿರಾಜ ಪುರಂದರ ಆರಾಧನೆ - 2017]

Singapore local talents take part in Kannada Play Mukhyamantri

ಕಾರ್ಯಕ್ರಮದ ನಿರೂಪಣೆಯನ್ನು ಹೊತ್ತ ಸ್ನೇಹಲತ ನಾಟಕದ ಪ್ರಾರಂಭಕ್ಕೆ ಮುಂಚಿತವಾಗಿ ಸಂಘದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರನ್ನು ವೇದಿಕೆಗೆ ಕರೆತಂದರು. ನಾಟಕದ ಪ್ರಾರಂಭಕ್ಕೆ ಮುಂಚಿತವಾಗಿ ವಿಜಯ ರಂಗ ಪ್ರಸಾದ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಎಲ್ಲಾ ಕಲಾವಿದರನ್ನು, ಸಭಿಕರನ್ನು ಸ್ವಾಗತಿಸಿ ಮಾತನಾಡಿ, ಕಲಾಪ್ರಾಕಾರಗಳಲ್ಲಿ ಪ್ರಮುಖವಾದ ರಂಗಭೂಮಿಯನ್ನು ಸಿಂಗನ್ನಡಿಗರಿಗೆ ಪರಿಚಯಿಸುವ ಸದುದ್ದೇಶದ ಬಗ್ಗೆ ಹೇಳುತ್ತಾ, ಇಂತಹ ಒಂದು ಪ್ರಸಿದ್ಧ ಹಾಗೂ ದೊಡ್ಡ ತಂಡದ ಪ್ರದರ್ಶನವನ್ನು ಏರ್ಪಡಿಸುವಲ್ಲಿನ ಸಂಘದ ಪ್ರಯತ್ನವನ್ನು ತಿಳಿಸಿದರು.

ಉದಯಾಂಚಲ ರಾಜ್ಯದ 'ಮುಖ್ಯಮಂತ್ರಿ' ಕೃಷ್ಣ ದ್ವೈಪಾಯನ ಕೌಶಲನ ಸುತ್ತಲೇ ಈ ನಾಟಕ ಕೇಂದ್ರೀಕೃತವಾಗಿದೆ. ಈ ಪಾತ್ರದಲ್ಲಿ 'ಮುಖ್ಯಮಂತ್ರಿ' ಚಂದ್ರು ಅವರ ಅಭಿನಯ ವರ್ಣನಾತೀತ. ಅತ್ಯಂತ ಸಹಜವಾಗಿದ್ದ ಅವರ ಅಭಿನಯ, ಪ್ರೇಕ್ಷಕರಿಗೆ, ತಾವು ಒಂದು ನಾಟಕ ನೋಡುತಿದ್ದೇವೆ ಎಂಬ ಒಂದು ಅಂಶವನ್ನೇ ಮರೆಸಿದಂತಿತ್ತು. ಕೇವಲ ಕೆಲವೇ ನಿಮಿಷಗಳಲ್ಲಿ, ಅವರು ಇಡೀ ಪ್ರೇಕ್ಷಕ ವೃಂದವನ್ನು, ಉದಯಾಂಚಲ ರಾಜ್ಯದ ರಾಜಕೀಯ ಆಗುಹೋಗುಗಳ ಲೋಕಕ್ಕೆ ಕರೆದೊಯ್ದುಬಿಟ್ಟಿದ್ದರು.

ರಾಜಕೀಯ ನಾಯಕರುಗಳ ಬೂಟಾಟಿಕೆಯ ನಡವಳಿಕೆಯನ್ನು ಅವರು ತಮ್ಮ ದೇಹ ಚಲನೆಗಳ ಮೂಲಕ ಎಷ್ಟು ಸಹಜವಾಗಿ ಅಭಿನಯಿಸಿದರು ಎಂದರೆ, ನಾಟಕದ ನಡುವೆಯೇ ಹಲವಾರು ಬಾರಿ, ಪ್ರೇಕ್ಷರಿಂದ ಕಿವಿಗಡಚಿಕ್ಕುವ ಚಪ್ಪಾಳೆ ಅವರಿಗೆ ದೊರೆಯಿತು. ತನ್ನ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಮಾಡುವ ಎಲ್ಲ ಕುತಂತ್ರಗಳನ್ನು ಹಾಸ್ಯಲೇಪಿತವಾಗಿ ಚಂದ್ರು ಅವರು ಪ್ರದರ್ಶಿಸತೊಡಗಿದರು. ಬಹಳಷ್ಟು ಬಾರಿ ಕೃಷ್ಣ ದ್ವೈಪಾಯನ ಕೌಶಲ್ ಅವರ ಹೆಸರನ್ನು "ಕೇಡಿ 'ಕೌಶಲ್" ಎಂದೇ ನಕಾರಾತ್ಮಕ ಪ್ರಯೋಗ ಮಾಡಲಾಗುತಿತ್ತು. [ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ]

Singapore local talents take part in Kannada Play Mukhyamantri

ಇದಲ್ಲದೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಅವರ ಅಭಿನಯ ಬಹಳ ದಿನಗಳ ಕಾಲ ನೆನಪಿನಿಂದ ಮಾಸಲು ಸಾಧ್ಯವಿಲ್ಲ. ತಮ್ಮ ಪತ್ನಿ ಪರಿಸ್ಥಿತಿಯಿಂದ ಬೇಸತ್ತು, ಕಾಶಿಗೆ ತೆರಳಿದ ಸಂಧರ್ಭದಲ್ಲಿ, ಅವರು ಗದ್ಗದಿತರಾದಾಗ, ಪ್ರೇಕ್ಷಕರ ಕಣ್ಣಾಲಿಗಳು ಕೂಡ ಒದ್ದೆಯಾದದ್ದು ನಿಜ.

ಈ ಅದ್ಭುತ ನಾಟಕದ ನಿರ್ದೇಶಕರಾದ ಬಿ.ವಿ. ರಾಜಾರಾಮ್ ಅವರು ಸುದರ್ಶನ ದುಬೆಯ ಪಾತ್ರದಲ್ಲಿ ಜೀವಂತಿಕೆಯನ್ನು ತುಂಬಿದರು. ಅವರ ಹಾವ -ಭಾವ, ಯೋಚನಾಲಹರಿ, ಮಾತುಗಳು ಎಲ್ಲವೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸುತ್ತಿದ್ದವು. ರಾಜಕೀಯ ನಾಯಕರುಗಳು, ತಮ್ಮ ಸ್ಥಾನ ಉಳಿಸಿಕೊಳ್ಳಲು ಮಾಡುವ ಕುತಂತ್ರಗಳು ಕಾಲಾತೀತ ಎಂಬ ಸಂದೇಶವನ್ನು ಇವರು ತಮ್ಮ ಪಾತ್ರದ ಮೂಲಕ ರವಾನಿಸುವುದರಲ್ಲಿ ಯಶಸ್ವಿಯಾದರು.

ಉಳಿದಂತೆ ಎಲ್ಲ ನುರಿತ ಕಲಾವಿದರು, ತಮ್ಮ ತಮ್ಮ ಪಾತ್ರಗಳಿಗೆ ಜೀವಂತಿಕೆ ತುಂಬಿದ್ದರು. ಇವರುಗಳು ನಾಟಕದ ಬಹುತೇಕ ಪ್ರದರ್ಶನಗಳಲ್ಲಿ ಭಾಗಿಯಾಗಿರುವದು, ಇವರ ಲೀಲಾಜಾಲ ಅಭಿನಯದ ಮೂಲಕ ಖಾತ್ರಿಯಾಗುತಿತ್ತು. ಹಣಕಾಸು ಮಂತ್ರಿ ದುರ್ಗಾಭಾಯಿ ದೇಸಾಯಿ ಅವರ ಪಾತ್ರದಲ್ಲಿ ಶ್ರೀನಿವಾಸ ಮೇಷ್ಟ್ರು, ಕಾರ್ಮಿಕ ಮಂತ್ರಿ ಹರಿಶಂಕರ ತ್ರಿಪಾಠಿ ಅವರ ಪಾತ್ರದಲ್ಲಿ ಟಿ.ವಿ ಗುರುಮೂರ್ತಿ, ಉದ್ಯೋಗ ಮಂತ್ರಿ ಮಾಧವ ದೇಶಪಾಂಡೆ ಪಾತ್ರದಲ್ಲಿ ಎಚ್ಎನ್ ಚಂದ್ರಶೇಖರ್, ಜಗಮೋಹನ್ ಅವಸ್ಥಿ ಪಾತ್ರದಲ್ಲಿ ಕೋಡಿ ರಾಜೇಶ್, ಸರೋಜಿನಿ ಸಹಾಯ್ ಅವರ ಪಾತ್ರದಲ್ಲಿ ಡಾ.ಎಂಎಸ್ ವಿದ್ಯಾ, ಸುದ್ದಿ ಸಂಪಾದಕ ಚಟರ್ಜೀ ಪಾತ್ರದಲ್ಲಿ ಎಂಎನ್ ಮುರಳೀಧರ್ ಅವರುಗಳು ಲೀಲಾಜಾಲವಾಗಿ ಅತ್ಯಂತ ಸಹಜವಾಗಿ ನಟಿಸಿದರು.

Singapore local talents take part in Kannada Play Mukhyamantri

ಮುಖ್ಯಮಂತ್ರಿಗಳ ಕಚೇರಿಯ ಹೊರಗೆ, ಅವರ ಖಾಸಗಿ ಜೀವನವನ್ನು ಬಿಂಬಿಸುವಲ್ಲಿ ಸಹಾಯ ಮಾಡಿದವರು ಮುಖ್ಯಮಂತ್ರಿಗಳ ಪತ್ನಿ ಪ್ರದ್ಯುಮ್ನದೇವಿ ಅವರ ಪಾತ್ರದಲ್ಲಿ ಸಂಧ್ಯಾವಳೀ ಟಿಎನ್, ಮಕ್ಕಳ ಪಾತ್ರಗಳಲ್ಲಿ : ಕ್ರಾಂತಿಕಾರಿ ಮಗ ಭವಾನಿ ಪ್ರಸಾದ್ ಪಾತ್ರಧಾರಿಯಾಗಿ ಕಲಾಗಂಗೋತ್ರಿ ಕಿಟ್ಟಿ, ಉದ್ಯಮಿ ಮಗ ಶೀತಲ್ ಪ್ರಸಾದ್ ಪಾತ್ರದಲ್ಲಿ ಪವನ್ ಜೋಶಿ, ಉಪನ್ಯಾಸಕ ಮಾತುಲ್ ಪ್ರಸಾದ್ ಪಾತ್ರಧಾರಿಯಾಗಿ ನರಸಿಂಹ ಭಟ್, ಎಂಎಲ್ಎ ಸೂರ್ಯ ಪ್ರಸಾದ್ ಪಾತ್ರದಲ್ಲಿ ವೆಂಕಟ್, ಉಂಡಾಡಿ ಮಗ ಚಂದ್ರ ಪ್ರಸಾದ್ ಪಾತ್ರದಲ್ಲಿ ಶ್ರೀನಿವಾಸ ಕೈವಾರ, ಹಣಕಾಸು ಮಂತ್ರಿ ಮಗಳು ವಸುಮತಿ ಪಾತ್ರದಲ್ಲಿ ನಿಶಿತಾ ಭರತ್ ಮುಖ್ಯಮಂತ್ರಿಗಳ ಖಾಸಗಿ ಜೀವನದ ಇಣುಕು ನೋಟಕ್ಕೆ ಜೀವ ತುಂಬಿದರು.

ಈ ಮೊದಲು ನಡೆದ ಹಲವಾರು ನಾಟಕ ಪ್ರದರ್ಶನಗಳಿಂದ ಸಿಂಗಪುರದ ಈ ಪ್ರದರ್ಶನ ಕೆಲ ವಿಶೇಷತೆಗಳನ್ನು ಹೊಂದಿತ್ತು. ಈ ನಾಟಕದಲ್ಲಿ 8 ಪಾತ್ರಗಳನ್ನು ಸ್ಥಳೀಯ ಕಲಾವಿದರು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಖ್ಯಮಂತ್ರಿ ಪುತ್ರ ಮಾತುಲ್ ಪ್ರಸಾದ್ ಪಾತ್ರಧಾರಿ ನರಸಿಂಹ ಭಟ್, ಶೀತಲ್ ಪ್ರಸಾದ್ ಪಾತ್ರಧಾರಿ ಪವನ್ ಜೋಶಿ ಹಾಗು ಸೂರ್ಯ ಪ್ರಸಾದ್ ಪಾತ್ರಧಾರಿ ವೆಂಕಟ್, ಶಿಕ್ಷಣ ಮಂತ್ರಿ ಪ್ರಜಾಪತಿ ಶಿವಡೆ ಪಾತ್ರಧಾರಿ ಗಿರೀಶ್ ಜಮದಗ್ನಿ, ಗೃಹಮಂತ್ರಿ ಮಹೇಂದ್ರ ವಾಜಪೇಯಿಯಾಗಿ ವಿಜಯರಂಗ ಪ್ರಸಾದ, ಸರಕಾರಿ ಕಾರ್ಯದರ್ಶಿ ಪಾತ್ರಧಾರಿಯಾದ ಕೆ.ಜೆ ಶ್ರೀನಿವಾಸ್ ಹಾಗು ವರದಿಗಾರ್ತಿಯಾಗಿ ನಿರ್ಮಲ ಹಾಗು ರೇಣು ಮಹೇಶ್ ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಸ್ಥಳೀಯ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಈ ನಾಟಕ ಪ್ರದರ್ಶನಕ್ಕೆ ಕಲಶಪ್ರಾಯವಾಗಿ ಪರಿಣಮಿಸಿದ ಮತ್ತೊಂದು ಸಂಗತಿ ಎಂದರೆ, ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದೇವರು ಅವರ ಉಪಸ್ಥಿತಿ. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡದ ಉಳಿವಿಗೆ ಹಾಗು ಬೆಳವಣಿಗೆಗೆ ನಿರಂತರವಾಗಿ ದುಡಿಯುತ್ತಿರುವ ಶ್ರೀ ಡಾ.ಪಟ್ಟದೇವರು ಸಾಗರದಾಚೆಯೂ, ತಮ್ಮ ಕನ್ನಡಾಭಿಮಾನವನ್ನು ಮೆರೆದರು. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಇವರು ನಾಟಕ ಪ್ರದರ್ಶನಕ್ಕೆ ಆಗಮಿಸಿದ್ದು ಕಲಾವಿದರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಈ ನಾಟಕವನ್ನು ಸಿಂಗನ್ನಡಿಗರಿಗೆ ತಲುಪಿಸಲು ಸಹಾಯ ನೀಡಿ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು ಬೆಂಗಳೂರಿನ ಪ್ರತಿಷ್ಠಿತ ಪರಿಸರ ಸ್ನೇಹಿ ನಿರ್ಮಾಣ ಸಂಸ್ಥೆಯಾದ "ಐಕಾನ್ ಹೋಮ್ಸ್" ಇವರ ಪ್ರತಿನಿಧಿಯಾಗಿ ಸ್ಮಿತಾ ಬೊಳ್ಳಮ್ಮ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದಾದ ನಂತರ ಮಾತನಾಡಿದ ಡಾ.ಬಸವಲಿಂಗ ಪಟ್ಟದೇವರು, ಕನ್ನಡ ಸಂಘ (ಸಿಂಗಪುರ)ವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದು ಮಾತ್ರವಲ್ಲ, ಎಲ್ಲ ಸಿಂಗನ್ನಡಿಗರ ಬೆನ್ನು ತಟ್ಟಿ ಮತ್ತಷ್ಟು ಕನ್ನಡದ ಉಳಿವಿಗೆ, ಬೆಳವಣಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ಅಳಿವಿನ ಭಯವನ್ನು ಎದುರಿಸುತ್ತಿರುವ ವಚನ ಸಾಹಿತ್ಯಕ್ಕೆ ಉತ್ತೇಜನ ನೀಡಿ, ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮ ಕೊನೆಗೊಳ್ಳುವ ಮೊದಲು "ಕಲಾಗಂಗೋತ್ರಿ" ತಂಡವು ಸ್ಥಳೀಯ ಕಲಾವಿದರಿಗೆ ಪ್ರಶಂಸಾಪತ್ರ ಹಾಗು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿತು. ಅಂತೆಯೇ ಕಾರ್ಯಕಾರಿ ಮಂಡಳಿಯ ಎಲ್ಲ ಸದಸ್ಯರನ್ನು ವೇದಿಕೆಯ ಮೇಲೆ ಆಹ್ವಾನಿಸಿ ನೆನಪಿನ ಕಾಣಿಕೆಗಳನ್ನು ನೀಡಿ, ಅವರ ಕನ್ನಡ ಸೇವೆಯನ್ನು ಶ್ಲಾಘಿಸಿ ಗೌರವಿಸಿತು. ಕನ್ನಡ ಸಂಘ (ಸಿಂಗಪುರ)ದ ವತಿಯಿಂದ ಎಲ್ಲಾ ಕಲಾವಿದರಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಲಾಯಿತು.

ಇದೆ ಸಂಧರ್ಭದಲ್ಲಿ ಕನ್ನಡ ಸಂಘ (ಸಿಂಗಪುರ) ಮತ್ತೊಂದು ಚರಿತ್ರಾರ್ಹ ಘಟನೆಗೆ ಸಾಕ್ಷಿಯಾಯಿತು. ಈ ಬಾರಿ ಸಿಂಗಪುರದ ಗಡಿಯಾಚೆ ಪಕ್ಕದ ಮಲೇಷ್ಯಾದಲ್ಲೂ ಕೂಡ ಇದೆ ನಾಟಕದ ಮತ್ತೊಂದು ಯಶಸ್ವೀ ಪ್ರದರ್ಶನವನ್ನು ಏರ್ಪಡಿಸಿತ್ತು. ಹೀಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಕನ್ನಡ ಸಂಘ ಮತ್ತೊಂದು ಹಿರಿಮೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಒಟ್ಟಿನಲ್ಲಿ, 'ಮುಖ್ಯಮಂತ್ರಿ 'ನಾಟಕದ ಸುಂದರ ಸಂಜೆ ಕೊನೆಗೊಂಡ ನಂತರ, ಸಿಂಗನ್ನಡಿಗರು, ಮುಂದಿನ ಕೆಲ ದಿನಗಳನ್ನು, 'ಮುಖ್ಯಮಂತ್ರಿಯ' ಗುಂಗಿನಲ್ಲಿ ಕಳೆದದ್ದು ಸುಳ್ಳಲ್ಲ.

English summary
Kala Gangotri drama troupe presented 609th show of Kannada play 'Mukhyamantri' in Singapore organized by Kannada Sangha (Singapore). Many local talents took part in the play along with actors like Mukhyamantri Chandru and director BV Rajaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X