ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗನ್ನಡಿಗರಿಗೆ ವಿಶಿಷ್ಟ ಅನುಭವ ನೀಡಿದ ವಚನಾಂಜಲಿ 2017

By ಆರತಿ ನಾಗೇಶ್, ಸಿಂಗಪುರ
|
Google Oneindia Kannada News

ರಾಗಕ್ಕೆ ಅಳವಡಿಸಿ ಹಾಡಿದರೆ ಹಾಡಾಗುವ, ಕಂಠಪಾಠ ಮಾಡಿ ಹೇಳ ಹೊರಟರೆ ಗದ್ಯವಾಗುವ ವಚನ ಸಾಹಿತ್ಯ ಕನ್ನಡ ಸಾರಸ್ವತಲೋಕದ ವಿಶಿಷ್ಟ ಪ್ರಾಕಾರ. ತನ್ನ ಸಾಹಿತ್ಯ, ಸಂಸ್ಕೃತಿ ಕೇಂದ್ರಿತ ಚಟುವಟಿಕೆಗಳಿಂದ ತನ್ನ ವಿಶಿಷ್ಟ ಛಾಪನ್ನು ಮೂಡಿಸಿರುವ ಸಿಂಗಪುರ ಕನ್ನಡ ಸಂಘ ಕಳೆದ ಏಳು ವರ್ಷಗಳಿಂದ ನಿರಂತರವಾಗಿ "ವಚನಾಂಜಲಿ" ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ.

ನಮ್ಮ ಯುವ ಪೀಳಿಗೆಗೆ ವಚನಗಳಲ್ಲಿ ಅಡಕವಾಗಿರುವ ಕಾಲಾತೀತ ಸತ್ಯಗಳನ್ನು ಪರಿಚಯಿಸುವುದರೊಂದಿಗೆ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಸಂಘದ ಮೂಲ ಆಶಯ. ಈ ನಿಟ್ಟಿನಲ್ಲಿ ತನ್ನ 8ನೆಯ ವರ್ಷದ ವಚನಾಂಜಲಿ ಕಾರ್ಯಕ್ರಮವನ್ನು ಕನ್ನಡ ಸಂಘ(ಸಿಂಗಪುರ) NUSನ, LT35 ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿತ್ತು.

ಸಿಂಗಪುರ ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆಳೆದ ವಚನಾಂಜಲಿಸಿಂಗಪುರ ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆಳೆದ ವಚನಾಂಜಲಿ

ಸತತವಾಗಿ 5 ಘಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಎಂದಿನಂತೆ ಉತ್ಸಾಹದಿಂದ ಸಿಂಗನ್ನಡಿಗರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ, ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಕಪ್ಪಣ್ಣ ಅವರು ಆಗಮಿಸಿದ್ದರು.

Singapore Kannada Sangha celebrates Vachananjali 2017

ಸಿಂಗಪುರ ಕನ್ನಡ ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್, ಶ್ರೀನಿವಾಸ ಕಪ್ಪಣ್ಣ, ಪುತ್ತೂರು ನರಸಿಂಹ ನಾಯಕ ಹಾಗೂ ಡಾ. ಭಾಗ್ಯ ಮೂರ್ತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಜಯರಂಗ ಪ್ರಸಾದ್ ಅವರು ವಾಡಿಕೆಯಂತೆ ಕರ್ನಾಟಕದಿಂದ ಆಗಮಿಸಿದ್ದಂತಹ ಕಲಾವಿದರಿಗೆ ಮತ್ತು ಸಭಿಕರಿಗೆ ಸ್ವಾಗತವನ್ನು ಕೋರಿದರು. ಕನ್ನಡ ಸಂಘ ಕರ್ನಾಟಕದ ಹೆಸರಾಂತ ಕಲಾವಿದರಿಗೆ ಮಾತ್ರವೇ ಅವಕಾಶ ಕಲ್ಪಿಸುತ್ತಿಲ್ಲ. ಸ್ಥಳೀಯ ಕಲಾವಿದರಿಗೆ ಕೂಡ ಮುಕ್ತ ಆಹ್ವಾನವನ್ನು ನೀಡಿ, ವೇದಿಕೆ ಕಲ್ಪಿಸಲು ಹಾಗೂ ಅವರ ಕಲೆಯನ್ನು ಉತ್ತೇಜಿಸಲು ಸಂಘ ಸದಾ ಸಿದ್ಧವಿದೆ, ಇದರ ಸದುಪಯೋಗವನ್ನು ಸ್ಥಳೀಯ ಕಲಾವಿದರು ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಹ್ರೇನ್ ನಲ್ಲಿ ಬಿಲ್ಲವ ಸಮಾಜದಿಂದ ರಾಧಾ-ಕೃಷ್ಣ ವೇಷ ಸ್ಪರ್ಧೆಬಹ್ರೇನ್ ನಲ್ಲಿ ಬಿಲ್ಲವ ಸಮಾಜದಿಂದ ರಾಧಾ-ಕೃಷ್ಣ ವೇಷ ಸ್ಪರ್ಧೆ

ಕಪ್ಪಣ್ಣ ಅವರ ನೇತೃತ್ವದಲ್ಲಿ ಆಗಮಿಸಿದ್ದ ಜಾನಪದ ತಂಡಗಳು ವೇದಿಕೆಯನ್ನು ರಂಗುಗೊಳಿಸಿ ಜಾನಪದ ನೃತ್ಯ ಪ್ರಾಕಾರಗಳಾದ ಕಂಸಾಳೆ, ವೀರಗಾಸೆ ಹಾಗು ಪೂಜಾ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದವು. ಕೇವಲ ಮಹಿಳೆಯರೇ ಇದ್ದ ತಂಡವೊಂದು ಡೊಳ್ಳು ಕುಣಿತವನ್ನು ಪ್ರದರ್ಶಿಸಿ ನೆರೆದಿದ್ದ ಜನರನ್ನು ಬೆರಗುಗೊಳಿಸಿತು.

Singapore Kannada Sangha celebrates Vachananjali 2017

ಜಾನಪದ ನೃತ್ಯದ ನಂತರ ವೇದಿಕೆಯನ್ನು ಅಲಂಕರಿಸಿದ್ದು ಸಿಂಗಪುರದಲ್ಲಿ ಗಾನ ಕೋಗಿಲೆ ಎಂದೇ ಪ್ರಖ್ಯಾತಿ ಪಡೆದಿರುವ ಡಾ. ಭಾಗ್ಯ ಮೂರ್ತಿ ಮತ್ತು ಅವರ ತಂಡ. ಬಸವಣ್ಣನವರ "ನುಡಿದರೆ ಮುತ್ತಿನ ಹಾರದಂತಿರಬೇಕು" ಎಂಬ ವಚನದೊಂದಿಗೆ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸಿದ ಭಾಗ್ಯ ಮೂರ್ತಿ ಹಾಗು ಸಂಗಡಿಗರು, ಅಲ್ಲಮಪ್ರಭು, ಅಕ್ಕಮಹಾದೇವಿ, ಅಮುಗೆ ರಾಯಮ್ಮ, ರೇಣುಕಾ ಮುಂತಾದವರ ವಚನಗಳನ್ನು ಸುಮಧುರವಾಗಿ ಹಾಡಿದರು.

ಈ ತಂಡದ ಪ್ರಸ್ತುತಿಯಲ್ಲಿ ಇದ್ದಂತಹ ಮತ್ತೊಂದು ವಿಶೇಷವೆಂದರೆ ವಿದೂಷಿಯರಾದ ಅಶ್ವಿನಿ ಸತೀಶ್ ಹಾಗೂ ಶ್ರುತಿ ಆನಂದ್ ಅವರು ಎರಡು ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದರು. "ಜ್ಯೋತಿ ಬೆಳಗುತಿದೆ" ಎಂಬ ನಿಜಗುಣ ಶಿವಯೋಗಿ ಅವರ ವಚನದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದ ಈ ತಂಡದ ಸಾರಥ್ಯವನ್ನು ಡಾ. ಭಾಗ್ಯ ಮೂರ್ತಿಯವರೊಂದಿಗೆ ಸಿಂಗಪುರದಲ್ಲಿಯೇ ನೆಲೆಸಿರುವ ಹೆಸರಾಂತ ಕಲಾವಿದೆಯರಾದ ಅಶ್ವಿನಿ ಸತೀಶ್, ಶ್ರುತಿ ಆನಂದ್, ಪ್ರತಿಮಾ ಬೆಳ್ಳಾವೆ ಹಾಗೂ ಶ್ರುತಿ ರಾಜ್ ಅವರುಗಳು ವಹಿಸಿದ್ದರು.

ಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆ

ಇವರಿಗೆ ಪಕ್ಕ ವಾದ್ಯದಲ್ಲಿ ಸಹಕಾರ ನೀಡಿದವರು ಪ್ರಸಿದ್ಧ ಕಲಾವಿದರಾದ ರಾಜೇಶ್ ಭಾಗವತ್ (ತಬಲಾ) ಹಾಗು ಪವನ್ ಸುಘೋಷ್ (ವಯೊಲಿನ್). ಅತ್ಯಂತ ಜತನದಿಂದ ಆಯ್ಕೆ ಮಾಡಿದ್ದ ವಚನಗಳ ಗಾಯನವನ್ನು ಪ್ರಸ್ತುತ ಪಡಿಸಿದ ಈ ತಂಡ ಮುಂಬರಲಿರುವ ಅತ್ಯದ್ಭುತವಾದ ವಚನಾಲಹರಿಗೆ ಮುನ್ನುಡಿ ಬರೆದಿತ್ತು. ನಂತರ ಪ್ರಮುಖ ಗಾಯಕಿಯರಿಗೆ ಸಂಘದ ಪರವಾಗಿ ಕಿರು ಕಾಣಿಕೆಗಳನ್ನು ನೀಡಲಾಯಿತು.

Singapore Kannada Sangha celebrates Vachananjali 2017

ಕಾರ್ಯಕ್ರಮದ ನಿರ್ವಾಹಕಿಯಾದ ಕವಿತಾ ಬಾದಾಮಿ ಅವರು ಮುಖ್ಯ ಅತಿಥಿಗಳಾಗಿದ್ದ ಕಪ್ಪಣ್ಣ ಅವರ ಕಿರು ಪರಿಚಯ ಮಾಡಿಕೊಟ್ಟು, ಅಧ್ಯಕ್ಷೀಯ ಭಾಷಣಕ್ಕೆ ಅವರನ್ನು ವೇದಿಕೆಗೆ ಆಹ್ವಾನಿಸಿದರು. ತಮ್ಮ ಎಂದಿನ ಧಾಟಿಯಲ್ಲಿ ಸಭಿಕರನ್ನು ಚಿಂತನೆಗೆ ಈಡುಮಾಡುವಂತೆಯೇ ತಮ್ಮ ಭಾಷಣವನ್ನು ಪ್ರಾರಂಭಿಸಿದ ಕಪ್ಪಣ್ಣ ಅವರು, ವಚನಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಬಾರದು. ವಚನಕ್ಕಿಂತ ಸರಳವಾಗಿ ಕನ್ನಡದಲ್ಲಿ ಯಾವ ಸಂದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕೆ ಉದಾಹರಣೆಯಾಗಿ ಬಸವಣ್ಣನವರ 'ಕಳಬೇಡ, ಕೊಲಬೇಡ' ವಚನವನ್ನು ಹೇಳಿ, ಈ ವಚನದಲ್ಲಿ ಇಡೀ ಜೀವನದ ಸೂತ್ರ ಅಡಕವಾಗಿದೆ ಎಂದು ಹೇಳಿದರು. ಅಲ್ಲದೆ ಅಂದಿನ ಸಂಜೆಯ ಪ್ರಮುಖ ಆಕರ್ಷಣೆಯಾಗಿದ್ದ ಹೆಸರಾಂತ ಗಾಯಕರಾದ ಪುತ್ತೂರು ನರಸಿಂಹ ನಾಯಕರು 'ಬಸವ -ಪುರಂದರ ಪ್ರಚಾರಕ' ಎಂದು ಶ್ಲಾಘಿಸಿದರು.

ತಮ್ಮ ಹುಟ್ಟೂರಿನಿಂದ ಹಾಗು ಸಂಸ್ಕೃತಿಯಿಂದ ದೂರವಿರುವ ಯುವ ಪೀಳಿಗೆಗೆ ಹಾಗು ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸುವ ಹೊಣೆ ಸಂಘಕ್ಕೆ ಇರಲಿ ಎಂಬ ಕಿವಿಮಾತನ್ನು ಹೇಳಿದರು. ಸಿಂಗಪುರ ಕನ್ನಡ ಸಂಘವು ತನ್ನ ಸಾಹಿತ್ಯ ಕೇಂದ್ರಿತ ಚಟುವಟಿಕೆಗಳಿಂದ ಇತರ ಕನ್ನಡ ಸಂಘಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಪ್ರಶಂಸಿಸುವುದನ್ನು ಮರೆಯಲಿಲ್ಲ. ನಂತರ ವಚನಾಂಜಲಿ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆಯ ಕಾರ್ಯ ಜರುಗಿತು.

Singapore Kannada Sangha celebrates Vachananjali 2017

ಸಭಿಕರು ಅತ್ಯಂತ ಕಾತುರದಿಂದ ಎದುರು ನೋಡುತ್ತಿದ್ದ 'ವಚನ ಸುಧೆ' ಪ್ರಾರಂಭವಾಯಿತು. ಪುತ್ತೂರು ನರಸಿಂಹ ನಾಯಕರು ದಾಸ ಸಾಹಿತ್ಯ ಗಾಯನಕ್ಕೆ ಅನ್ವರ್ಥವಾಗಿ ಹೋಗಿ ದಶಕಗಳೇ ಸಂದಿವೆ. ಆದರೆ ಬಹಳಷ್ಟು ಸಿಂಗನ್ನಡಿಗರಿಗೆ ಅವರಿಂದ ಮೊಟ್ಟ ಮೊದಲ ಬಾರಿಗೆ ವಚನ ಗಾಯನವನ್ನು ಕೇಳುವ ಸುವರ್ಣಾವಕಾಶ ದೊರೆತಿತ್ತು.

ತಮ್ಮ ಗಾಯನ ಪ್ರಾರಂಭಿಸುವ ಮೊದಲು ನರಸಿಂಹ ನಾಯಕರು ಮಾತನಾಡಿ, ಇಂದು ತಾವು ಪ್ರಸ್ತುತ ಪಡಿಸುತ್ತಿರುವುದು ಬರೀ ಶಾಸ್ತ್ರೀಯ ಗಾಯನವಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದರು. ವಚನದ ಸಾಹಿತ್ಯ ಯಾವ ಸ್ವರಕ್ಕೆ ಉತ್ತೇಜನ ನೀಡುತ್ತದೆಯೋ ಅದಕ್ಕೆ ಅನುಗುಣವಾಗಿ ರಾಗ ಸಂಯೋಜನೆ ಆಗಿದೆ. ವಚನಕಾರರು ನೀಡಿರುವ ಸಂದೇಶವನ್ನು ತಾವು ಸಾಮಾನ್ಯ ಜನರಿಗೆ ತಲುಪಿಸುತ್ತಿರುವ 'ಪೋಸ್ಟ್ ಮ್ಯಾನ್' ಅಷ್ಟೇ ಎಂದರು.

ಬಸವಣ್ಣನವರ "ಜ್ಞಾನದ ಬಲದಿಂದ..." ವಚನದೊಂದಿಗೆ ಪ್ರಾರಂಭಗೊಂಡ ಇವರ ಗಾಯನ ಅತ್ಯಮೋಘ ಆರಂಭವನ್ನು ಪಡೆದುಕೊಂಡಿತು. ಕಚೇರಿ ಮುಂದುವರೆದಂತೆ ನರಸಿಂಹನಾಯಕರು, ಪ್ರತಿಯೊಂದು ವಚನದಲ್ಲಿ ಹುದುಗಿರುವ ಅರ್ಥವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಸಭಿಕರನ್ನು ಸಂಪೂರ್ಣವಾಗಿ ತಮ್ಮ ಗಾಯನದಲ್ಲಿ ಲೀನವಾಗಿಸಿಕೊಂಡು ಬಿಟ್ಟರು.

Singapore Kannada Sangha celebrates Vachananjali 2017

ಒಂದೊಂದು ವಚನವನ್ನು ವಿಭಿನ್ನ ಶೈಲಿಯಲ್ಲಿ ಹಾಡುತ್ತಾ ಹೋದ ಇವರು, ವಚನಗಳನ್ನು ಜಾನಪದ, ಠುಮರಿ, ಘಜಲ್ ಶೈಲಿಗಳಲ್ಲಿ ಹಾಡಿ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದರು. ಅಕ್ಕಮಹಾದೇವಿಯವರ "ಕೋಲ ತುದಿಯ ಕೋಡಗದಂತೆ..." ವಚನವನ್ನು, ಕುವೆಂಪು ಅವರ "ತೇನವಿನಾ ..." ಕವಿತೆಗೆ ಹೋಲಿಸಿ, ಅಂದಿಗೂ ಇಂದಿಗೂ ಶರಣಾಗತಿಯ ಭಾವ ಬದಲಾಗಿಲ್ಲ ಎಂಬುದನ್ನು ಸಭಿಕರಿಗೆ ತಿಳಿಸಿದರು.

ಇವರ ವಚನ ಗಾಯನ ಕೇಳಲು ಬಂದಿದ್ದ ಸಭಿಕರಿಗೆ, ವಚನಗಳ ವಿವರಣೆಯೂ ಸೇರಿದ್ದು ರಸದೌತಣವನ್ನೇ ಸವಿದ ಅನುಭವ ನೀಡಿತ್ತು. "ಕಳಬೇಡ ಕೊಲಬೇಡ" ವಚನದೊಂದಿಗೆ ತಮ್ಮ ವಚನ ಸುಧೆಯನ್ನು ಪೂರ್ಣಗೊಳಿಸುವುದಾಗಿ ಪ್ರಕಟಿಸಿದಾಗ, ಸಭಿಕರ ಮುಖದಲ್ಲಿ ಆಶಾಭರಿತ ಮುಗುಳ್ನಗೆ ಮೂಡಿತು. ಇವರನ್ನು ನಿರಾಶೆಗೊಳಿಸದ ನಾಯಕರು, ತಮ್ಮ ಅತ್ಯಂತ ಪ್ರಸಿದ್ಧ ಗೀತೆಗಳಾದ "ದಾಸನಾಗು, ಶೇಷನಾಗು" ಹಾಗೂ "ಪವಮಾನ ಜಗದ ಪ್ರಾಣ" ಹಾಡಿ ತಮ್ಮ ಕಚೇರಿಗೆ ಮಂಗಳ ಹಾಡಿದರು.

ಎಷ್ಟರ ಮಟ್ಟಿಗೆ ಇವರ ಮೋಡಿಗೆ ಸಿಂಗನ್ನಡಿಗರು ಒಳಗಾಗಿದ್ದರು ಎಂದರೆ, ಎಲ್ಲ ಸಭಿಕರು ಎದ್ದು ನಿಂತು ಕರತಾಡನಗಳ ಮೂಲಕ ಅವರಿಗೆ ಗೌರವ ಸೂಚಿಸದರು. ನರಸಿಂಹ ನಾಯಕರು ಕೂಡ ಸಿಂಗಪುರ ಕನ್ನಡ ಸಂಘದ ಈ ವಚನಾಂಜಲಿ ಕಾರ್ಯಕ್ರಮವನ್ನು ಶ್ಲಾಘಿಸಿ, ಮುಂದಿನ ವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ಸಿಂಗಪುರಕ್ಕೆ ಆಗಮಿಸಿ, ಈ ಕಾರ್ಯಕ್ರಮವನ್ನು ಬೆಂಬಲಿಸುವುದಾಗಿ ಘೋಷಿಸಿದರು.

Singapore Kannada Sangha celebrates Vachananjali 2017

'ದಕ್ಷಿಣ ಏಷಿಯಾ ಸಿನಿಮಾ ಉತ್ಸವ'ಕ್ಕೆಂದು ಸಿಂಗಪುರಕ್ಕೆ ಆಗಮಿಸಿರುವ ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕರಾದಂತಹ, ಗಿರೀಶ್ ಕಾಸರವಳ್ಳಿ ಹಾಗು ಮಗಳು/ನಿರ್ದೇಶಕಿ ಅನನ್ಯ ಕಾಸರವಳ್ಳಿ ಅವರ ಆಗಮನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ಒದಗಿಸಿತ್ತು. ಕಾಸರವಳ್ಳಿ ಅವರು ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರಗಳನ್ನು ವೀಕ್ಷಿಸಿ, ಉತ್ತೇಜನ ನೀಡುವಂತೆ ಕನ್ನಡಿಗರನ್ನು ಕೋರಿದರು.

ವಚನಾಂಜಲಿ ಕಾರ್ಯಕ್ರಮದಲ್ಲಿ ಅವರು ಆಹ್ವಾನವಿತ್ತ ಪರಿ ಬಹಳ ಸ್ವಾರಸ್ಯಕರವಾಗಿತ್ತು. ಅಲ್ಲಮಪ್ರಭು ಅವರ ವಚನವನ್ನು ಉಲ್ಲೇಖಿಸಿದ ಅವರು "ಪ್ರಣತಿಯಿದೆ... ಭಕ್ತಿಯಿದೆ..." ನೀವು ಕನ್ನಡಿಗರು ಬಂದು ದೀಪವನ್ನು ಬೆಳಗಿಸಿ... ಎಂದು ಆತ್ಮೀಯ ಆಹ್ವಾನ ನೀಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಆಹ್ವಾನಿತರಿಗೆ, ಕನ್ನಡ ಸಂಘ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿತು.

ಕಡೆಯಲ್ಲಿ ವಂದನಾರ್ಪಣೆಯನ್ನು ಅರ್ಪಿಸಿದ ಸಿಂಗಪುರ ಕನ್ನಡ ಸಂಘದ ಉಪಾಧ್ಯಕ್ಷೆ ಹಾಗೂ ವಚನಾಂಜಲಿ ಕಾರ್ಯಕ್ರಮದ ವ್ಯವಸ್ಥಾಪಕಿ ಅರ್ಚನಾ ಪ್ರಕಾಶ್ ಅವರು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ, ಮುಂಬರುವ ದಿನಗಳಲ್ಲಿ ಸಿಂಗನ್ನಡಿಗರು ಮತ್ತಷ್ಟು ಉತ್ಕೃಷ್ಟ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದ್ದಾರೆ ಎಂಬ ಅಭಯವನ್ನಿತ್ತರು.

ವಿಜಯರಂಗ ಪ್ರಸಾದ ಅಧ್ಯಕ್ಷರಾಗಿ ಹಾಗು ಅರ್ಚನಾ ಪ್ರಕಾಶ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿ, ಕನ್ನಡ ಸಂಘ ಸಿಂಗಪುರದ ಸಾರಥ್ಯವನ್ನು ಹೊಸ ಕಾರ್ಯಕಾರಿ ಸಮಿತಿಯ ಯುವ ಸದಸ್ಯರೊಂದಿಗೆ ಹೊತ್ತು ಕೆಲವೇ ತಿಂಗಳುಗಳು ಸಂದಿವೆಯಷ್ಟೇ, ತಮ್ಮ ಮೊದಲನೆಯ ಕಾರ್ಯಕ್ರಮದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡ ಈ ಕಾರ್ಯಕಾರಿ ಸಮಿತಿಯ ಪಯಣ ಹೀಗೆಯೇ ಸಾಗಲಿ ಎಂಬ ಆಶಯ ಪ್ರತಿಯೊಬ್ಬ ಸಿಂಗನ್ನಡಿಗನದ್ದಾಗಿದೆ. [ಚಿತ್ರ ಕೃಪೆ - ಗಿರೀಶ್ ಜಮದಗ್ನಿ, ಸಿಂಗಪುರ]

English summary
Singapore Kannada Sangha celebrated Vachananjali 2017. Srinivas Kappanna and his team performed folk dance. Bhagya Murthy and her team enthralled the audience with variety of songs written by by vachanakararu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X